ನಮಸ್ಕಾರ್!
ಮಹಾರಾಷ್ಟ್ರ ಘನತೆವೆತ್ತ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕೋಶ್ಯಾರಿ ಜಿ, ಶ್ರೀ ದೇವೇಂದ್ರ ಫಡ್ನವಿಸ್ ಜಿ, ಶ್ರೀ ಸುಭಾಷ್ ದೇಸಾಯಿ, ಸಿಂಬಿಯೊಸಿಸ್ ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಪ್ರೊಫೆಸರ್ ಎಸ್ ಬಿ ಮಜುಂದಾರ್ ಜಿ, ಪ್ರಧಾನ ನಿರ್ದೇಶಕಿ ಡಾ ವಿದ್ಯಾ ಯೆರವಡೇಕರ್ ಜಿ, ಇಲ್ಲಿ ನೆರೆದಿರುವ ಎಲ್ಲಾ ಅಧ್ಯಾಪಕರು, ಗಣ್ಯ ಅತಿಥಿಗಳು ಮತ್ತು ನನ್ನ ಯುವ ಸಹೋದ್ಯೋಗಿಗಳೇ!
ಸಾಕ್ಷಾತ್ ಸರಸ್ವತಿಯ ಮೂಲನೆಲೆಯಾಗಿ, ಸೆಲೆಯಾಗಿ ಸುವರ್ಣ ಮೌಲ್ಯಗಳು ಮತ್ತು ಸುವರ್ಣ ಇತಿಹಾಸವನ್ನು ಹೊಂದಿರುವ ಸಿಂಬಯಾಸಿಸ್ ವಿಶ್ವವಿದ್ಯಾಲಯವು ಒಂದು ಬೃಹತ್ ಶೈಕ್ಷಣಿಕ ಸಂಸ್ಥೆಯಾಗಿ ಇದೀಗ ಸುವರ್ಣ ಮಹೋತ್ಸವದ ಮೈಲಿಗಲ್ಲನ್ನು ತಲುಪಿದೆ. ಸಂಸ್ಥೆಯ ಈ ಸುದೀರ್ಘ ಪಯಣದಲ್ಲಿ ಅನೇಕ ಮಹನೀಯರ ಕೊಡುಗೆ ಮತ್ತು ಸಾಮೂಹಿಕ ಮತ್ತು ಸಂಘಟಿತ ಸಹಭಾಗಿತ್ವವಿದೆ.
ಸಹಜೀವನ(ಸಿಂಬಯಾಸಿಸ್)ದ ದೃಷ್ಟಿಕೋನ ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡ ವಿದ್ಯಾರ್ಥಿಗಳು ಮತ್ತು ತಮ್ಮ ಯಶಸ್ಸಿನೊಂದಿಗೆ ಸಿಂಬಯಾಸಿಸ್ ಗೆ ಹೆಗ್ಗುರುತು ನೀಡಿದ ಅಪಾರ ವಿದ್ಯಾರ್ಥಿಗಳು ಈ ಸುದೀರ್ಘ ಪಯಣದಲ್ಲಿ ಸಮಾನವಾಗಿ ಕೊಡುಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳನ್ನು ನಾನು ಅಭಿನಂದಿಸುತ್ತೇನೆ ಮಹೋತ್ಸವ ಸಂದರ್ಭದಲ್ಲಿ ‘ಆರೋಗ್ಯಧಾಮ’ ಕಟ್ಟಡ ಸಂಕೀರ್ಣವನ್ನು ಉದ್ಘಾಟಿಸುವ ಅವಕಾಶವೂ ನನಗೆ ದೊರೆತಿದೆ. ಈ ಹೊಸ ಉಪಕ್ರಮಕ್ಕಾಗಿ ನಾನು ಇಡೀ ಸಿಂಬಯಾಸಿಸ್ ಕುಟುಂಬಕ್ಕೆ ಶುಭ ಹಾರೈಸುತ್ತೇನೆ.
ನನ್ನ ಯುವ ಸಹೋದ್ಯೋಗಿಗಳೆ,
ನೀವು 'ವಸುಧೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ಎಂಬ ಭಾರತದ ಪ್ರಮುಖ ಪರಿಕಲ್ಪನೆಯ ಆಧಾರದಲ್ಲಿ ನಿರ್ಮಿಸಲಾದ ಸಂಸ್ಥೆಯ ಭಾಗವಾಗಿದ್ದೀರಿ. ಸಿಂಬಿಯಾಸಿಸ್ ವಿವಿಯು 'ವಸುಧೈವ ಕುಟುಂಬಕಂ' ಎಂಬ ಪ್ರತ್ಯೇಕ ಕೋರ್ಸ್ ಅನ್ನು ಸಹ ನೀಡುತ್ತಿದೆ ಎಂಬುದು ನನಗೆ ತಿಳಿದುಬಂದಿದೆ. ಜ್ಞಾನದ ವ್ಯಾಪಕತೆ ಮತ್ತು ಜ್ಞಾನವು ಇಡೀ ಜಗತ್ತನ್ನು ಒಂದೇ ಕುಟುಂಬವಾಗಿ ಸಂಪರ್ಕಿಸುವ ಮಾಧ್ಯಮವಾಗಬೇಕು ಎಂಬ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ನಾವು ಹೊಂದಿದ್ದೇವೆ. ನಮ್ಮ ದೇಶದಲ್ಲಿ ಈ ಸಂಪ್ರದಾಯ ಇನ್ನೂ ಜೀವಂತವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ವಿಶ್ವದ 85 ದೇಶಗಳಿಂದ 44,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಂಬಯಾಸಿಸ್ ನಲ್ಲಿ ತಮ್ಮ ಸಂಸ್ಕೃತಿ ಪರಂಪರೆಗಳನ್ನು ಅಧ್ಯಯನ ಮಾಡುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂದು ನನಗೆ ತಿಳಿದುಬಂದಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದ ಪ್ರಾಚೀನ ಪರಂಪರೆಯು ಇನ್ನೂ ತನ್ನ ಆಧುನಿಕ ಅವತಾರದಲ್ಲಿ ಮುಂದುವರಿಯುತ್ತಿದೆ.
ಸ್ನೇಹಿತರೆ,
ಇಂದು ಈ ಜ್ಞಾನ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಮುಂದೆ ಅನಂತ ಅವಕಾಶಗಳನ್ನು ಹೊಂದಿರುವ ಪೀಳಿಗೆಯನ್ನು ಪ್ರತಿನಿಧಿಸುತ್ತಾರೆ. ಇಂದು ನಮ್ಮ ದೇಶವು ವಿಶ್ವದ ಬೃಹತ್ ಆರ್ಥಿಕತೆಗಳಲ್ಲಿ ಒಂದಾಗಿದೆ. ನಮ್ಮ ದೇಶವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮಗಳ ಕೇಂದ್ರವಾಗಿದೆ. ಸ್ಟಾರ್ಟ್‌ಅಪ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತದಂತಹ ಕಾರ್ಯಕ್ರಮಗಳು ನಿಮ್ಮ ಅಪಾರ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತಿವೆ. ಇಂದಿನ ಭಾರತವು ನಾವೀನ್ಯತೆಯನ್ನು ಹೊಂದುತ್ತಿದೆ, ಸುಧಾರಿಸುತ್ತಿದೆ ಮತ್ತು ಇಡೀ ವಿಶ್ವದ ಮೇಲೆ ಗಾಢ ಪ್ರಭಾವ ಬೀರುತ್ತಿದೆ.
ಕೊರೊನಾ ಲಸಿಕೆ ವಿಷಯದಲ್ಲಿ ಭಾರತವು ತನ್ನ ನೈಜ ಸಾಮರ್ಥ್ಯವನ್ನು ಜಗತ್ತಿಗೆ ಹೇಗೆ ಪ್ರದರ್ಶಿಸಿದೆ ಎಂದು ಪುಣೆಯ ಜನರಿಗೆ ಚೆನ್ನಾಗಿ ತಿಳಿದಿದೆ. ಗಂಗಾ ಕಾರ್ಯಾಚರಣೆ ನಡೆಸುವ ಮೂಲಕ ಉಕ್ರೇನ್ ಯುದ್ಧ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ತನ್ನ ನಾಗರಿಕರನ್ನು ಯುದ್ಧ ವಲಯದಿಂದ ಹೇಗೆ ಸುರಕ್ಷಿತವಾಗಿ ಸ್ಥಳಾಂತರಿಸುತ್ತಿದೆ ಎಂಬುದನ್ನು ಸಹ ನೀವು ನೋಡುತ್ತಿದ್ದೀರಿ. ವಿಶ್ವದ ಹಲವು ಪ್ರಮುಖ ದೇಶಗಳು ಈ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ ಬೆಳೆಯುತ್ತಿರುವ ಭಾರತದ ಪ್ರಭಾವದಿಂದಲೇ ನಾವು ಸಾವಿರಾರು ವಿದ್ಯಾರ್ಥಿಗಳನ್ನು ನಮ್ಮ ತಾಯ್ನಾಡಿಗೆ ಮರಳಿ ತಂದಿದ್ದೇವೆ.
ಸ್ನೇಹಿತರೆ,
ನಿಮ್ಮ ಪೀಳಿಗೆಯು ಹಿಂದಿನ ರಕ್ಷಣಾತ್ಮಕ ಮತ್ತು ಅವಲಂಬಿತ ಮನೋವಿಜ್ಞಾನದಿಂದ ಬಳಲುತ್ತಿಲ್ಲ ಎಂಬುದು ನಿಮ್ಮೆಲ್ಲರ ಅದೃಷ್ಟವಾಗಿದೆ. ಆದರೆ, ದೇಶದಲ್ಲಿ ಈ ಬದಲಾವಣೆ ಸಾಧ್ಯವಾದರೆ, ಅದರ ಮೊದಲ ಶ್ರೇಯಸ್ಸು ನಿಮ್ಮೆಲ್ಲರಿಗೂ, ನಮ್ಮ ಯುವಕರಿಗೂ ಸಲ್ಲುತ್ತದೆ. ಈಗ ನೀವು ನೋಡಿ, ಭಾರತವು ತನ್ನ ಕಾಲ ಮೇಲೆ ನಿಲ್ಲಲು ಯೋಚಿಸಲೂ ಸಾಧ್ಯವಾಗದ ಕ್ಷೇತ್ರಗಳಲ್ಲಿ ಜಾಗತಿಕ ಸರದಾರನಾಗುವ ಹಾದಿಯಲ್ಲಿದೆ.
ಮೊಬೈಲ್ ತಯಾರಿಕೆಯ ಉದಾಹರಣೆ ನಮ್ಮ ಮುಂದಿದೆ. ಕೆಲವು ವರ್ಷಗಳ ಹಿಂದಿನವರೆಗೂ ಮೊಬೈಲ್ ತಯಾರಿಕೆ ಮತ್ತು ವಿದ್ಯುನ್ಮಾನ ವಸ್ತುಗಳ(ಎಲೆಕ್ಟ್ರಾನಿಕ್) ಬಿಡಿಭಾಗಗಳ ವಿಷಯದಲ್ಲಿ ನಮಗೆ ಆಮದು ಮಾತ್ರ ಆಸರೆಯಾಗಿತ್ತು. ಪ್ರಪಂಚದ ಎಲ್ಲಿಂದಲಾದರೂ ಅದನ್ನು ಪಡೆಯುವುದು ಸಾಮಾನ್ಯ ಸಂಗತಿಯಾಗಿತ್ತು! ರಕ್ಷಣಾ ವಲಯದಲ್ಲೂ ನಾವು ದಶಕಗಳಿಂದ ಸಂಪೂರ್ಣವಾಗಿ ಇತರ ದೇಶಗಳ ಮೇಲೆ ಅವಲಂಬಿತರಾಗಿದ್ದೆವು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತವು ವಿಶ್ವದ 2ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.
7 ವರ್ಷಗಳ ಹಿಂದೆ ಭಾರತದಲ್ಲಿ ಕೇವಲ 2 ಮೊಬೈಲ್ ತಯಾರಿಕಾ ಕಂಪನಿಗಳಿದ್ದವು. ಇಂದು 200ಕ್ಕೂ ಹೆಚ್ಚು ಉತ್ಪಾದನಾ ಘಟಕಗಳು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿವೆ. ರಕ್ಷಣಾ ರಂಗದಲ್ಲಿ, ವಿಶ್ವದ ಅತಿದೊಡ್ಡ ಆಮದುದಾರ ಎಂದು ಕರೆಯಲ್ಪಡುವ ಭಾರತವು ಈಗ ರಕ್ಷಣಾ ರಫ್ತುದಾರನಾಗುತ್ತಿದೆ. ಇಂದು, ದೇಶದಲ್ಲಿ 2 ಪ್ರಮುಖ ರಕ್ಷಣಾ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಅಲ್ಲಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು, ದೇಶದ ರಕ್ಷಣಾ ಅಗತ್ಯಗಳನ್ನು ಪೂರೈಸಲಿದೆ.
ಸ್ನೇಹಿತರೆ,
ಸ್ವಾತಂತ್ರ್ಯ ಗಳಿಸಿದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ, ನವ ಭಾರತ ಕಟ್ಟುವ ಹೊಸ ಗುರಿಗಳೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ನಮ್ಮ ಯುವ ಪೀಳಿಗೆ ಈ ಪುಣ್ಯ ಅಭಿಯಾನವನ್ನು ಮುನ್ನಡೆಸಬೇಕಿದೆ. ಇಂದು, ಸಾಫ್ಟ್‌ವೇರ್ ಉದ್ಯಮದಿಂದ ಆರೋಗ್ಯ ಕ್ಷೇತ್ರದವರೆಗೆ, ಕೃತಕ ಬುದ್ಧಿಮತ್ತ ಮತ್ತು ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನದಿಂದ ಹಿಡಿದು ಆಟೋಮೊಬೈಲ್‌ಗಳು ಮತ್ತು ವಿದ್ಯುಚ್ಛಾಲಿತ ವಾಹನಗಳವರೆಗೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಿಂದ ಯಂತ್ರ ಕಲಿಕೆಯವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಅವಕಾಶಗಳು ಹೊರಹೊಮ್ಮುತ್ತಿವೆ. ಭೌಗೋಳಿಕ ವ್ಯವಸ್ಥೆಗಳು, ಡ್ರೋನ್‌ಗಳು, ಸೆಮಿಕಂಡಕ್ಟರ್‌ಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಪಟ್ಟುಬಿಡದ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ.
ಈ ಸುಧಾರಣೆಗಳು ಸರ್ಕಾರದ ಯಾವುದೇ ದಾಖಲೆಗಳಲ್ಲ; ಬದಲಿಗೆ, ಈ ಸುಧಾರಣೆಗಳು ನಿಮಗೆ ಅಗಾಧ ಅವಕಾಶಗಳನ್ನು ತಂದಿವೆ. ಸುಧಾರಣೆಗಳು ನಿಮಗಾಗಿ, ಯುವಕರಿಗಾಗಿ ರೂಪಿಸಲಾಗಿದೆ ಎಂದು ನಾನು ಹೇಳಬಲ್ಲೆ. ನೀವು ತಾಂತ್ರಿಕ, ನಿರ್ವಹಣೆ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿರಲಿ, ಈ ಎಲ್ಲಾ ಅವಕಾಶಗಳು ನಿಮಗೆ ಮಾತ್ರ ಎಂದು ನಾನು ಭಾವಿಸುತ್ತೇನೆ.
ಪ್ರಸ್ತುತ ಸರ್ಕಾರವು ದೇಶದ ಯುವಕರ ಸಾಮರ್ಥ್ಯವನ್ನು ನಂಬುತ್ತಿದೆ. ಆದ್ದರಿಂದ, ನಾವು ನಿಮಗಾಗಿ ಹಲವು ವಲಯಗಳನ್ನು ತೆರೆಯುತ್ತಿದ್ದೇವೆ. ಈ ಎಲ್ಲಾ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳಿ. ನೀವು ನವೋದ್ಯಮಗಳನ್ನು ಪ್ರಾರಂಭಿಸುತ್ತೀರಿ. ದೇಶದ ಸವಾಲುಗಳು ಮತ್ತು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರಗಳು ವಿಶ್ವವಿದ್ಯಾಲಯಗಳಿಂದ, ಯುವಜನರ ಮನಸ್ಸಿನಿಂದ ಹೊರಹೊಮ್ಮಬೇಕು.
ನೀವು ಯಾವುದೇ ಕ್ಷೇತ್ರದಲ್ಲಿ ನಿಮ್ಮ ವೃತ್ತಿಜೀವನಕ್ಕೆ ಗುರಿಗಳನ್ನು ಹೊಂದಿಸುವ ರೀತಿಯಲ್ಲಿ, ದೇಶಕ್ಕಾಗಿ ಕೆಲವು ಗುರಿಗಳನ್ನು ಹೊಂದಿರಬೇಕು ಎಂಬುದನ್ನು ನೀವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ತಾಂತ್ರಿಕ ಕ್ಷೇತ್ರದವರಾಗಿದ್ದರೆ, ನಿಮ್ಮ ಆವಿಷ್ಕಾರಗಳು ದೇಶಕ್ಕೆ ಹೇಗೆ ಉಪಯುಕ್ತವಾಗುತ್ತವೆ ಎಂಬುದನ್ನು ನೀವು ಮನಗಾಣಬೇಕು. ಹಳ್ಳಿಗಳಲ್ಲಿನ ರೈತರಿಗೆ ಅಥವಾ ದೂರದ ಪ್ರದೇಶದ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಉತ್ಪನ್ನಗಳನ್ನು ನೀವು ಅಭಿವೃದ್ಧಿಪಡಿಸಬಹುದು.
ಅದೇ ರೀತಿ, ನೀವು ವೈದ್ಯಕೀಯ ಕ್ಷೇತ್ರದಲ್ಲಿದ್ದರೆ, ನಮ್ಮ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ತಾಂತ್ರಿಕ ಸ್ನೇಹಿತರೊಂದಿಗೆ ನೀವು ಹೊಸ ನವೋದ್ಯಮಗಳ ಸ್ಥಾಪನೆಗೆ ಯೋಜಿಸಬಹುದು. ಇದರಿಂದ ಹಳ್ಳಿಗಳಲ್ಲಿಯೂ ಗುಣಮಟ್ಟದ ಆರೋಗ್ಯ ಸೇವೆಗಳು ಲಭ್ಯವಾಗಲಿವೆ. ಸಿಂಬಯಾಸಿಸ್ ನಿಂದ ಆರಂಭವಾದ ‘ಆರೋಗ್ಯಧಾಮ’ದ ದೃಷ್ಟಿಕೋನ ಇಡೀ ದೇಶಕ್ಕೆ ಮಾದರಿಯಾಗಬಲ್ಲದು. ನಾನು ಆರೋಗ್ಯದ ಬಗ್ಗೆ ಮಾತನಾಡುವಾಗ, ನಿಮ್ಮ ಫಿಟ್ನೆಸ್ ನೋಡಿಕೊಳ್ಳಿ ಎಂದು ನಾನು ಹೇಳುತ್ತೇನೆ. ಮನತುಂಬಿ ನಕ್ಕು ಬಿಡಿ, ಹಾಸ್ಯ ಚಟಾಕಿ ಹಾರಿಸಿ, ದೈಹಿಕವಾಗಿ ಸುದೃಢರಾಗಿರಿ, ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಿರಿ. ನಮ್ಮ ಗುರಿಗಳು ನಮ್ಮ ವೈಯಕ್ತಿಕ ಬೆಳವಣಿಗೆಯನ್ನು ರಾಷ್ಟ್ರೀಯ ಬೆಳವಣಿಗೆಗೆ ಬದಲಾಯಿಸಿದಾಗ, ಒಬ್ಬ ವ್ಯಕ್ತಿಯು ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವ ಭಾವನೆಯನ್ನು ಪಡೆಯುತ್ತಾನೆ.
ಸ್ನೇಹಿತರೆ,
ಇಂದು, ನಿಮ್ಮ ವಿಶ್ವವಿದ್ಯಾನಿಲಯದ 50ನೇ ವಾರ್ಷಿಕೋತ್ಸವ ಸುವರ್ಣ ಮಹೋತ್ಸವವನ್ನು ನೀವು ಆಚರಿಸುತ್ತಿರುವಾಗ ನಾನು ಸಿಂಬಯಾಸಿಸ್ ಕುಟುಂಬಕ್ಕೆ ಮತ್ತು ಇಲ್ಲಿ ಕುಳಿತಿರುವ ಎಲ್ಲರಿಗೂ ಏನನ್ನಾದರೂ ಒತ್ತಾಯಿಸಲು ಬಯಸುತ್ತೇನೆ. ನಾವು ಸಿಂಬಯಾಸಿಸ್ ನಲ್ಲಿ ಒಂದು ಹೊಸ ಸಂಪ್ರದಾಯ ಅಭಿವೃದ್ಧಿಪಡಿಸಬಹುದೇ? ಅಲ್ಲಿ ಪ್ರತಿ ವರ್ಷವೂ ಒಂದು ವಿಷಯವನ್ನು ಆಯ್ಕೆ ಮಾಡಬೇಕು ಮತ್ತು ವಿವಿಧ ಕ್ಷೇತ್ರಗಳಿಂದ ಬಂದಿರುವ ಎಲ್ಲಾ ಜನರು ತಮ್ಮ ವೃತ್ತಿಯ ಮೇಲೆ ಮತ್ತು ಮೇಲಾಗಿ ಆ ವಿಷಯಕ್ಕೆ ಸ್ವಲ್ಪ ಕೊಡುಗೆ ನೀಡಬಹುದೇ? ನಾವು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವಾಗ ವಾರ್ಷಿಕ ಆಧಾರದ ಮೇಲೆ ಮುಂದಿನ 5 ವರ್ಷಗಳ ಪ್ರಮುಖ ವಿಷಯ(ಥೀಮ್) ಅನ್ನು ನಿರ್ಧರಿಸಬಹುದೇ?
ಉದಾಹರಣೆಗೆ, ನಾನು ನಿಮಗೆ ಒಂದು ಥೀಮ್ ಸೂಚಿಸುತ್ತೇನೆ. ಈ ಥೀಮ್ ಅನುಸರಿಸುವುದು ಅನಿವಾರ್ಯವಲ್ಲ; ನೀವು ನಿಮ್ಮ ಸ್ವಂತ ಯೋಜನೆಯನ್ನು ಸಹ ಮಾಡಬಹುದು. ನಾವು 2022ರ ಜಾಗತಿಕ ತಾಪಮಾನದ ಸಮಸ್ಯೆಯನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ಇಟ್ಟುಕೊಳ್ಳೋಣ. ಇಡೀ ಸಿಂಬಯಾಸಿಸ್ ಕುಟುಂಬವು ಜಾಗತಿಕ ತಾಪಮಾನದ ಪ್ರತಿಯೊಂದು ಅಂಶವನ್ನು ಅಧ್ಯಯನ ಮಾಡಬೇಕು, ಸಂಶೋಧನೆ ಮಾಡಬೇಕು, ವಿಚಾರಸಂಕಿರಣಗಳನ್ನು ನಡೆಸಬೇಕು, ಕಾರ್ಟೂನ್‌ಗಳನ್ನು ಮಾಡಬೇಕು, ಕಥೆಗಳು ಮತ್ತು ಕವಿತೆಗಳನ್ನು ಬರೆಯಬೇಕು ಮತ್ತು ಈ ನಿಟ್ಟಿನಲ್ಲಿ ಕೆಲವು ಸಾಧನಗಳನ್ನು ಅಭಿವೃದ್ಧಿಪಡಿಸಬೇಕು. ನಾವು ಏನು ಮಾಡುತ್ತಿದ್ದೇವೆ ಎಂಬುದರ ಮೇಲೆ ಈ ಥೀಮ್ ತೆಗೆದುಕೊಳ್ಳೋಣ ಮತ್ತು ಅದರ ಬಗ್ಗೆ ಜನರಿಗೆ ಅರಿವು ಮೂಡಿಸೋಣ.
ಅದೇ ರೀತಿ, ನಮ್ಮ ಕರಾವಳಿ ಪ್ರದೇಶಗಳು ಅಥವಾ ಸಾಗರದ ಮೇಲೆ ಆಗುವ ಹವಾಮಾನ ಬದಲಾವಣೆಯ ಪ್ರಭಾವದ ಮೇಲೆ ನಾವು ಕೆಲಸ ಮಾಡಬಹುದು. ಅಂತಹ ಇನ್ನೊಂದು ವಿಷಯವೆಂದರೆ, ನಮ್ಮ ಗಡಿ ಪ್ರದೇಶಗಳ ಅಭಿವೃದ್ಧಿಗೆ, ಅದರಲ್ಲೂ ವಿಶೇಷವಾಗಿ ನಮ್ಮ ಗಡಿಯನ್ನು ರಕ್ಷಿಸುವಲ್ಲಿ ಸೇನೆಯೊಂದಿಗೆ ಸದಾ ತೊಡಗಿಸಿಕೊಂಡಿರುವ ಕೊನೆಯ ಗಡಿ ಭಾಗದ ಹಳ್ಳಿಗಳ ಅಭಿವೃದ್ಧಿಗೆ ಸಂಬಂಧಿಸಿದ್ದಾಗಬಹುದು. ಒಂದು ರೀತಿಯಲ್ಲಿ ಅವರು ನಮ್ಮ ದೇಶದ ಹಲವು ತಲೆಮಾರುಗಳ ಕಾವಲುಗಾರರು. ಗಡಿ ಅಭಿವೃದ್ಧಿಯ ಯೋಜನೆ ಏನಿರಬಹುದು? ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಆ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳಬಹುದು, ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಹುದು, ತಮ್ಮ ನಡುವೆ ಚರ್ಚಿಸಿ, ಪರಿಹಾರಗಳನ್ನು ಕಂಡುಕೊಳ್ಳಬಹುದು.
ನಿಮ್ಮ ವಿಶ್ವವಿದ್ಯಾಲಯವು ‘ಏಕ್ ಭಾರತ್, ಶ್ರೇಷ್ಠ ಭಾರತ’ದ ಮನೋಭಾವವನ್ನು ಬಲಪಡಿಸುತ್ತದೆ. ‘ಏಕ್ ಭಾರತ್, ಶ್ರೇಷ್ಠ ಭಾರತ್’ ಕನಸು ನನಸಾಗುವಾಗ ‘ವಸುಧೈವ ಕುಟುಂಬಕಂ’ ಕನಸು ಸಹ ನನಸಾಗುತ್ತದೆ. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಇತರ ಪ್ರದೇಶಗಳ ಭಾಷೆಗಳಿಂದ ಕೆಲವು ಪದಗಳನ್ನು ಕಲಿತರೆ ಅದು ಉತ್ತಮವಾಗಿರುತ್ತದೆ. ಸಿಂಬಯಾಸಿಸ್ ನ ಪ್ರತಿಯೊಬ್ಬ ವಿದ್ಯಾರ್ಥಿಯು ಮರಾಠಿ ಸೇರಿದಂತೆ ಇತರ 5 ಭಾಷೆಗಳ ಕನಿಷ್ಠ 100 ಪದಗಳನ್ನು ನೆನಪಿಟ್ಟುಕೊಳ್ಳುವ ಗುರಿ ಹೊಂದಬೇಕು ಮತ್ತು ನಂತರ ಜೀವನದಲ್ಲಿ ಅದರ ಉಪಯುಕ್ತತೆಯನ್ನು ಅವನು ಅರಿತುಕೊಳ್ಳುತ್ತಾನೆ.
ನಮ್ಮ ಸ್ವಾತಂತ್ರ್ಯ ಚಳವಳಿಯ ಇತಿಹಾಸವು ತುಂಬಾ ಶ್ರೀಮಂತವಾಗಿದೆ. ಇದಕ್ಕೆ ಸಂಬಂಧಿಸಿದ ಯಾವುದೇ ವಿಚಾರ ಅಥವಾ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲು ನೀವು ಯೋಜಿಸಬಹುದು. ಈ ಇಡೀ ಕುಟುಂಬವು ಎನ್ನೆಸ್ಸೆಸ್ ಮತ್ತು ಎನ್ ಸಿ ಸಿಯಂತಹ ಸೇವಾ ಸಂಸ್ಥೆಗಳ ದೇಶದ ಯುವಕರಲ್ಲಿ ಹೊಸ ಚಟುವಟಿಕೆಗಳನ್ನು ಹೇಗೆ ಉತ್ತೇಜಿಸುವುದು ಎಂಬುದರ ಕುರಿತು ಒಟ್ಟಾಗಿ ಕೆಲಸ ಮಾಡಬಹುದು. ಸಂಶೋಧನೆಯಿಂದ ಹಿಡಿದು ನೀರಿನ ಸುರಕ್ಷತೆ, ಕೃಷಿಗೆ ತಂತ್ರಜ್ಞಾನ ಸಂಪರ್ಕಿಸುವುದು, ಮಣ್ಣಿನ ಆರೋಗ್ಯ ಪರೀಕ್ಷೆಯಿಂದ ಆಹಾರ ಉತ್ಪನ್ನಗಳ ಸಂಗ್ರಹಣೆ ಮತ್ತು ನೈಸರ್ಗಿಕ ಕೃಷಿ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸುವವರೆಗೆ ನಿಮಗೆ ಹಲವಾರು ವಿಷಯಗಳಿವೆ.
ವಿಷಯಗಳನ್ನು ನಿರ್ಧರಿಸಲು ನಾನು ನಿಮಗೆ ಬಿಡುತ್ತೇನೆ. ಆದರೆ ಯುವ ಮನಸ್ಸುಗಳು ದೇಶದ ಅಗತ್ಯತೆಗಳು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುವ ಇಂತಹ ವಿಷಯಗಳನ್ನು ಆಯ್ಕೆ ಮಾಡಬೇಕು ಎಂದು ನಾನು ಹೇಳುತ್ತೇನೆ. ಬೃಹತ್ ಮೂಲಸೌಕರ್ಯ ಮತ್ತು ವ್ಯವಸ್ಥೆಗಳನ್ನು ನೀಡಲಾಗಿದೆ. ನಿಮ್ಮ ಸಲಹೆಗಳು ಮತ್ತು ಅನುಭವಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ಈ ವಿಷಯಗಳ ಕುರಿತು ನಿಮ್ಮ ಸಂಶೋಧನೆ, ಫಲಿತಾಂಶಗಳು, ಆಲೋಚನೆಗಳು ಮತ್ತು ಸಲಹೆಗಳನ್ನು ನೀವು ಪ್ರಧಾನ ಮಂತ್ರಿಗಳ ಕಚೇರಿಗೆ ಕಳುಹಿಸಬಹುದು.
ಪ್ರಾಧ್ಯಾಪಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಈ ಅಭಿಯಾನದ ಭಾಗವಾದಾಗ ಅದ್ಭುತ ಫಲಿತಾಂಶಗಳ ಬಗ್ಗೆ ನನಗೆ ಖಾತ್ರಿಯಿದೆ. ನೀವು ಈಗ ನಿಮ್ಮ ವಿಶ್ವವಿದ್ಯಾಲಯದ 50 ವರ್ಷಗಳನ್ನು ಆಚರಿಸುತ್ತಿದ್ದೀರಿ. ಮುಂದಿನ 25 ವರ್ಷಗಳಲ್ಲಿ 50,000 ಮನಸ್ಸುಗಳು 25 ವಿಭಿನ್ನ ವಿಷಯಗಳಲ್ಲಿ ಕೆಲಸ ಮಾಡಿದರೆ ನಿಮ್ಮ ವಿಶ್ವವಿದ್ಯಾಲಯದ 75 ವರ್ಷಗಳನ್ನು ನೀವು ಆಚರಿಸುವಾಗ, ದೇಶಕ್ಕೆ ನಿಮ್ಮ ಕೊಡುಗೆಯ ದೊಡ್ಡ ಮೊತ್ತವನ್ನು ನೀವು ಊಹಿಸಬಹುದು. ಇದು ಸಿಂಬಯಾಸಿಸ್ ವಿದ್ಯಾರ್ಥಿಗಳಿಗೆ ಮಾತ್ರ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.
ಕೊನೆಯದಾಗಿ, ಸಿಂಬಯಾಸಿಸ್ ವಿದ್ಯಾರ್ಥಿಗಳಿಗೆ ನಾನು ಇನ್ನೊಂದು ವಿಷಯವನ್ನು ಹೇಳಲು ಬಯಸುತ್ತೇನೆ. ನೀವು ಈ ಸಂಸ್ಥೆಯಲ್ಲಿದ್ದಾಗ ನಿಮ್ಮ ಪ್ರಾಧ್ಯಾಪಕರು, ಶಿಕ್ಷಕರು ಮತ್ತು ನಿಮ್ಮ ಗೆಳೆಯರಿಂದ ನೀವು ಬಹಳಷ್ಟು ಕಲಿತಿದ್ದೀರಿ. ನೀವು ಯಾವಾಗಲೂ ಸ್ವಯಂ-ಅರಿವು, ನಾವೀನ್ಯತೆ ಮತ್ತು ಅಪಾಯಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಬಲವಾಗಿ ಹೊಂದುವಂತೆ ನಾನು ಸಲಹೆ ನೀಡುತ್ತೇನೆ. ನೀವೆಲ್ಲರೂ ಈ ಮನೋಭಾವದಿಂದ ನಿಮ್ಮ ಜೀವನದಲ್ಲಿ ಮುನ್ನಡೆಯುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮಗೆ 50 ವರ್ಷಗಳ ಅನುಭವದ ಬಂಡವಾಳವಿದೆ. ಹಲವು ಪ್ರಯೋಗಗಳನ್ನು ಮಾಡಿ ಇಲ್ಲಿಗೆ ತಲುಪಿದ್ದೀರಿ. ನಿಮ್ಮ ಬಳಿ ಅಪಾರ ನಿಧಿ ಇದೆ. ಈ ಸಂಪತ್ತು ದೇಶಕ್ಕೂ ಉಪಯುಕ್ತವಾಗಲಿದೆ. ನೀವು ಪ್ರವರ್ಧಮಾನಕ್ಕೆ ಬರಬೇಕು ಮತ್ತು ಪ್ರತಿ ಮಗು ತನ್ನ ಭವಿಷ್ಯವನ್ನು ಉಜ್ವಲವಾಗಿಸಲು ಆತ್ಮವಿಶ್ವಾಸದಿಂದ ಹೊರಡಲಿ! ಇದು ನಿಮಗೆ ನನ್ನ ಶುಭ ಹಾರೈಕೆ.
ನಾನು ನಿಮಗೆ ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ. ಏಕೆಂದರೆ ನಿಮ್ಮನ್ನು ಭೇಟಿ ಮಾಡಲು ಸಾಕಷ್ಟು ಅವಕಾಶಗಳು ಬಂದರೂ ನನಗೆ ಬರಲು ಸಾಧ್ಯವಾಗಿರಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ನಿಮ್ಮನ್ನು ಭೇಟಿ ಮಾಡಿದ್ದೆ. ಮತ್ತೊಮ್ಮೆ ಈ ಪುಣ್ಯಭೂಮಿಗೆ ಬರುವ ಅವಕಾಶ ಸಿಕ್ಕಿದೆ. ಹೊಸ ಪೀಳಿಗೆಯೊಂದಿಗೆ ಸಂವಹನ ನಡೆಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ.
ತುಂಬು ಧನ್ಯವಾದಗಳು ಮತ್ತು ಶುಭಾಶಯಗಳು!