ಕಾರ್ಯಕ್ರಮದಲ್ಲಿ ಹಾಜರಿರುವ ಮಣಿಪುರ ರಾಜ್ಯಪಾಲ ಗಣೇಶನ್ ಜೀ, ಮುಖ್ಯಮಂತ್ರಿ ಶ್ರೀ ಎನ್. ಬಿರೇನ್ ಸಿಂಗ್ ಜೀ, ಉಪ ಮುಖ್ಯಮಂತ್ರಿ ವೈ. ಜೋಯ್ ಕುಮಾರ್ ಸಿಂಗ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಭುಪೇಂದ್ರ ಯಾದವ್ ಜೀ, ಮತ್ತು ರಾಜಕುಮಾರ್ ರಂಜನ್ ಸಿಂಗ್ ಜೀ, ಮಣಿಪುರ ಸರಕಾರದಲ್ಲಿ ಸಚಿವರಾಗಿರುವ ಬಿಶ್ವಜಿತ್ ಸಿಂಗ್ ಜೀ, ಲೋಸೀ ದಿಕೋ ಜೀ, ಲೆಟ್ಪಾವೋ ಹಾವೋಕಿಪ್ ಜೀ, ಅವಾಂಗ್ಬೋ ನೆವ್ಮಾಯಿ ಜೀ, ಎಸ್. ರಾಜೆನ್ ಸಿಂಗ್ ಜೀ, ವುಂಗ್ಜಗೀನ್ ವಾಲ್ಟೇ ಜೀ, ಸತ್ಯಬ್ರತ್ ಸಿಂಗ್ ಜೀ, ಮತ್ತು ಒ.ಲುಕಿಯೋ ಸಿಂಗ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಗಳೇ, ಶಾಸಕರೇ, ಜನ ಪ್ರತಿನಿಧಿಗಳೇ, ಮತ್ತು ಮಣಿಪುರದ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ! ಖುರುಂಜರಿ
ನಾನು ಮಣಿಪುರದ ಶ್ರೇಷ್ಠ ಭೂಮಿಗೆ, ಇಲ್ಲಿಯ ಜನರಿಗೆ ಮತ್ತು ಇಲ್ಲಿಯ ಉಜ್ವಲ, ವೈಭವದ ಸಂಸ್ಕೃತಿಗೆ ಶಿರ ಬಾಗಿ ನಮಿಸುತ್ತೇನೆ. ವರ್ಷದಾರಂಭದಲ್ಲಿ ಮಣಿಪುರಕ್ಕೆ ಬಂದು, ನಿಮ್ಮನ್ನು ಭೇಟಿಯಾಗುವುದಕ್ಕಿಂತ ಮತ್ತು ನಿಮ್ಮಿಂದ ಆಶೀರ್ವಾದ ಹಾಗು ಪ್ರೀತಿ ಪಡೆಯುವುದಕ್ಕಿಂತ ದೊಡ್ಡ ಸಂತೋಷ ಜೀವನದಲ್ಲಿ ಬೇರೆ ಯಾವುದಿದ್ದೀತು?. ನಾನು ವಿಮಾನ ನಿಲ್ದಾಣದಲ್ಲಿ ಇಳಿದಾಗ ಜನರು ರಸ್ತೆಯ ಪ್ರಯಾಣದಲ್ಲಿ 8-10 ಕಿಲೋ ಮೀಟರ್ ಉದ್ದಕ್ಕೆ ಉತ್ಸಾಹ ಮತ್ತು ಬಣ್ಣಗಳೊಂದಿಗೆ ಸಾಲುಗಟ್ಟಿ ನಿಂತಿದ್ದರು. ಇದು ಒಂದು ರೀತಿಯಲ್ಲಿ ಮಾನವ ಗೋಡೆಯಂತಿತ್ತು. ನಿಮ್ಮ ಆತಿಥ್ಯವನ್ನು, ಒಲುಮೆಯನ್ನು ಮತ್ತು ಆಶೀರ್ವಾದಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನಿಮಗೆಲ್ಲರಿಗೂ 2022 ರ ಶುಭಾಶಯಗಳು!
ಸ್ನೇಹಿತರೇ,
ಈಗಿನಿಂದ ಇನ್ನು ಕೆಲವು ದಿನಗಳಲ್ಲಿ ಜನವರಿ 21 ರಂದು ಮಣಿಪುರಕ್ಕೆ ರಾಜ್ಯದ ಸ್ಥಾನ ಮಾನ ಲಬಿಸಿದ್ದರ ಸುವರ್ಣ ಮಹೋತ್ಸವ. ದೇಶವು ಕೂಡಾ ತನ್ನ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಅವಧಿಯು ತನ್ನೊಳಗೇ ಬಹಳ ದೊಡ್ಡ ಪ್ರೇರಣೆಯನ್ನು ಹೊಂದಿದೆ. ರಾಜಾ ಭಾಗ್ಯ ಚಂದ್ರ ಮತ್ತು ಖೋಟಿಂಥಾಂಗ್ ಸಿತ್ಲೊವ್ ರಂತಹ ಹೀರೋಗಳು ಜನಿಸಿದ ಸ್ಥಳ ಮಣಿಪುರ. ಸ್ವಾತಂತ್ರ್ಯದಲ್ಲಿ ದೇಶದ ಜನತೆಗೆ ನಂಬಿಕೆ ಮೂಡಿಸಿದ್ದು ಮೊಯಿರಂಗ್ ನೆಲ, ಅದು ತನ್ನೊಳಗೇ ಉದಾಹರಣೆಯನ್ನು ಅಡಕಗೊಳಿಸಿಕೊಂಡಿದೆ, ಇಲ್ಲಿ ನೇತಾಜಿ ಸುಭಾಷ್ ಅವರ ಸೇನೆ ಮೊದಲ ಬಾರಿಗೆ ರಾಷ್ಟ್ರ ಧ್ವಜವನ್ನು ಅರಳಿಸಿತು. ಈಶಾನ್ಯವನ್ನು ನೇತಾಜಿ ಅವರು ಭಾರತದ ಸ್ವಾತಂತ್ರ್ಯಕ್ಕೆ ಮಹಾದ್ವಾರ ಎಂದು ಕರೆದಿದ್ದರು. ಅದು ಈಗ ನವ ಭಾರತದ ಕನಸುಗಳನ್ನು ಈಡೇರಿಸುವ ಮಹಾದ್ವಾರವಾಗುತ್ತಿದೆ.
ನಾನು ಈ ಮೊದಲು ಹೇಳಿದ್ದೆ, ದೇಶದ ಪೂರ್ವ ಭಾಗ, ಈಶಾನ್ಯವು ಭಾರತದ ಅಭಿವೃದ್ಧಿಯ ಪ್ರಮುಖ ಮೂಲವಾಗಲಿದೆ ಎಂದು. ಇಂದು ಮಣಿಪುರ ಮತ್ತು ಈಶಾನ್ಯ ಹೇಗೆ ಭಾರತದ ಭವಿಷ್ಯಕ್ಕೆ ವರ್ಣಗಳನ್ನು ಸೇರಿಸುತ್ತಿದೆ ಎಂಬುದನ್ನು ನಾವು ನೋಡಬಹುದು.
ಸ್ನೇಹಿತರೇ,
ಇಂದು ಇಲ್ಲಿ ಏಕ ಕಾಲಕ್ಕೆ ಹಲವಾರು ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನೆಗಳು ನೆರವೇರುತ್ತಿವೆ. ಅಭಿವೃದ್ಧಿಯ ಈ ವಿವಿಧ ರತ್ನಗಳು ಮತ್ತು ಅವುಗಳಿಂದೊಡಗೂಡಿದ ಹಾರವು ಮಣಿಪುರದ ಜನತೆಯ ಬದುಕನ್ನು ಸುಲಭ ಸಾಧ್ಯಗೊಳಿಸಲಿದೆ ಮತ್ತು ಮಣಿಪುರದ ಸನಾ ಲೀಬಕ್ ನ ವೈಭವವನ್ನು ಹೆಚ್ಚಿಸಲಿದೆ. ಇಂಫಾಲಾದಲ್ಲಿಯ ಸಮಗ್ರ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರ ನಗರದ ಭದ್ರತೆಯನ್ನು ಹೆಚ್ಚಿಸಲಿದೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲಿದೆ. ಮಣಿಪುರದ ಜೀವನ ರೇಖೆ ಹೊಸತಾಗುತ್ತಿದೆ. ಅದು ಹೊಸ ಸರ್ವ ಋತು ಸಂಪರ್ಕವನ್ನು ಬರಾಕ್ ನದಿ ಸೇತುವೆಯ ಮೂಲಕ ಪಡೆಯುತ್ತಿದೆ. ಥೌಬಾಲ್ ಬಹುಉದ್ದೇಶಿತ ಯೋಜನೆ ಮತ್ತು ಟಮೆಂಗ್ಲಾಂಗ್ ನ ನೀರು ಪೂರೈಕೆ ಯೋಜನೆ ಈ ದುರ್ಗಮ ಮತ್ತು ದೂರ ಪ್ರದೇಶದ ಜಿಲ್ಲೆಯ ಎಲ್ಲಾ ಜನರಿಗೆ ಸ್ವಚ್ಛ ಮತ್ತು ಶುದ್ಧ ನೀರನ್ನು ಖಾತ್ರಿಪಡಿಸಲಿದೆ.
ಸ್ನೇಹಿತರೇ,
ನೀವು ನೆನಪು ಮಾಡಿಕೊಳ್ಳಿ, ಕೆಲವು ವರ್ಷಗಳ ಹಿಂದೆ ಮಣಿಪುರದಲ್ಲಿ ಯಾವುದೇ ಕೊಳವೆ ಮೂಲಕ ನೀರು ಪೂರೈಕೆ ಯೋಜನೆ ಅಷ್ಟೊಂದು ಪ್ರಮಾಣದಲ್ಲಿ ಇರಲಿಲ್ಲ. ಬರೇ 6 ಪ್ರತಿಶತ ಜನರಿಗಷ್ಟೇ ಕೊಳವೆ ಮೂಲಕ ನೀರು ಲಭ್ಯವಾಗುತ್ತಿತ್ತು. ಆದರೆ, ಇಂದು ಬಿರೇನ್ ಸಿಂಗ್ ಜೀ ಅವರ ಸರಕಾರ “ಜಲ್ ಜೀವನ್ ಮಿಷನ್” ಅಡಿಯಲ್ಲಿ ಮಣಿಪುರದ ಜನತೆಗೆ ಕೊಳವೆ ಮೂಲಕ ನೀರು ಒದಗಿಸಲು ನಿರಂತರ ಕೆಲಸ ಮಾಡಿತು. ಇಂದು ಮಣಿಪುರದ 60 ಪ್ರತಿಶತ ಮನೆಗಳು ಕೊಳವೆ ಮೂಲಕ ನೀರು ಪಡೆಯುತ್ತಿವೆ. ಬಹಳ ಬೇಗ ಮಣಿಪುರವು “ಹರ್ ಘರ್ ಜಲ್” ಗುರಿಯಾದ 100 ಪ್ರತಿಶತ ಮನೆಗಳಿಗೆ ನೀರೊದಗಿಸುವ ಗುರಿಯನ್ನು ತಲುಪಲಿದೆ. ಎರಡು ಇಂಜಿನ್ ಗಳ ಸರಕಾರದ ತಾಕತ್ತು ಮತ್ತು ಪ್ರಯೋಜನ ಎಂದರೆ ಇದುವೇ.
ಸ್ನೇಹಿತರೇ,
ಇಂದು ಉದ್ಘಾಟಿಸಲಾದ ಮತ್ತು ಶಿಲಾನ್ಯಾಸ ಮಾಡಲಾದ ಯೋಜನೆಗಳಿಗಾಗಿ ನಾನು ಮಣಿಪುರದ ಜನತೆಗೆ ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆ. ನೀವು ಪೂರ್ಣ ಬಹುಮತದಿಂದ ಕಾರ್ಯನಿರ್ವಹಿಸುವಂತಹ ಸ್ಥಿರ ಸರಕಾರವನ್ನು ರಚಿಸಿದ್ದೀರಿ. ಇದು ಹೇಗೆ ಸಾಧ್ಯವಾಗಿದೆ?.ಇದು ಸಾಧ್ಯವಾಗಿರುವುದು ನಿಮ್ಮ ಒಂದು ಓಟಿನಿಂದ. ನಿಮ್ಮ ಒಂದು ಓಟಿನ ಶಕ್ತಿ ಮಣಿಪುರದಲ್ಲಿ ಈ ಹಿಂದೆ ಯಾರೂ ಕಲ್ಪಿಸಲಾರದಂತಹದನ್ನು ಮಾಡಿದೆ. ನಿಮ್ಮ ಒಂದು ಓಟಿನ ಶಕ್ತಿಯು ಮಣಿಪುರದ ಆರು ಲಕ್ಷ ರೈತರು ಪಿ.ಎಂ. ಕಿಸಾನ್ ಸಮ್ಮಾನ್ ನಿಧಿಯ ಮೂಲಕ ನೂರಾರು ಕೋಟಿ ರೂಪಾಯಿಗಳನ್ನು ಪಡೆಯುವಂತೆ ಮಾಡಿದೆ. ನನಗೆ ಈಗಷ್ಟೇ ಇಂತಹ ಕೆಲವು ಫಲಾನುಭವಿಗಳ ಜೊತೆ ಮಾತನಾಡುವ ಅವಕಾಶ ದೊರಕಿತ್ತು. ಅವರ ಉತ್ಸಾಹ , ಆತ್ಮವಿಶ್ವಾಸ ಬಹಳ ಅಮೂಲ್ಯವಾದುದು. ನಿಮ್ಮ ಒಂದು ಓಟಿನಿಂದ ಮಣಿಪುರದ ಆರು ಲಕ್ಷ ಕುಟುಂಬಗಳು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ ಅಡಿಯಲ್ಲಿ ಉಚಿತ ಪಡಿತರದ ಪ್ರಯೋಜನಗಳನ್ನು ಪಡೆಯುತ್ತಿವೆ.
ಇದು ನಿಮ್ಮ ಒಂದು ಮತದ, ಓಟಿನ ಶಕ್ತಿಯಿಂದಾದ ಪವಾಡ. ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಸುಮಾರು 80,000 ಮನೆಗಳನ್ನು ಮಂಜೂರು ಮಾಡಲಾಗಿದೆ. ಆಯುಷ್ಮಾನ್ ಯೋಜನಾ ಅಡಿಯಲ್ಲಿ 4.25 ಲಕ್ಷಕ್ಕೂ ಅಧಿಕ ಜನರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಾಧ್ಯ ಮಾಡಿರುವುದು ನಿಮ್ಮ ಒಂದು ಓಟು. ನಿಮ್ಮ ಒಂದು ಓಟು 1.5 ಲಕ್ಷ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕವನ್ನು ಖಾತ್ರಿಪಡಿಸಿದೆ ಮತ್ತು 1.30 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಖಾತ್ರಿಪಡಿಸಿದೆ.
ನಿಮ್ಮ ಒಂದು ಮತ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ 30,000 ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಕಾರಣವಾಯಿತು. ನಿಮ್ಮ ಒಂದು ಮತದ ತಾಕತ್ತಿನಿಂದ ಇಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ 30 ಲಕ್ಷ ಡೋಸ್ ಗೂ ಅಧಿಕ ಉಚಿತ ಲಸಿಕೆ ನೀಡುವುದಕ್ಕೆ ಸಾಧ್ಯವಾಯಿತು. ಇಂದು ಮಣಿಪುರದ ಪ್ರತೀ ಜಿಲ್ಲೆಗಳಲ್ಲೂ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಇದೆಲ್ಲ ಸಾಧ್ಯ ವಾಗಿರುವುದು ನಿಮ್ಮ ಒಂದು ಮತದಿಂದಾಗಿ.
ನಾನು ಮಣಿಪುರದ ಜನತೆಯನ್ನು ಅವರ ಹಲವು ಸಾಧನೆಗಳಿಗಾಗಿ ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ. ಮಣಿಪುರದ ಅಭಿವೃದ್ಧಿಗಾಗಿ ಅಹರ್ನಿಶಿ ಕಠಿಣ ಪರಿಶ್ರಮ ಹಾಕುತ್ತಿರುವ ಮುಖ್ಯ ಮಂತ್ರಿ ಬಿರೇನ್ ಸಿಂಗ್ ಜೀ ಮತ್ತು ಅವರ ಸರಕಾರವನ್ನು ಕೂಡಾ ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಹಿಂದಿನ ಸರಕಾರಗಳು ಮಣಿಪುರವನ್ನು ದೂರ ಮಾಡಿದ ಕಾಲವೊಂದಿತ್ತು. ದಿಲ್ಲಿಯಲ್ಲಿದ್ದವರು ಇಷ್ಟೊಂದು ದೂರಕ್ಕೆ ಕಷ್ಟಪಟ್ಟು ಯಾರು ಹೋಗುತ್ತಾರೆ ಎಂದು ಭಾವಿಸುತ್ತಿದ್ದರು. ಇಂತಹ ತಾರತಮ್ಯವನ್ನು ಅವರು ನಮ್ಮವರ ಬಗ್ಗೆಯೇ ತೋರಿಸುತ್ತಿರುವಾಗ ಸಹಜವಾಗಿಯೇ ಪ್ರತ್ಯೇಕತಾವಾದ ಬೆಳೆಯುತ್ತದೆ. ನಾನು ಪ್ರಧಾನ ಮಂತ್ರಿಯಾಗುವುದಕ್ಕೆ ಮೊದಲು ಹಲವು ಬಾರಿ ಮಣಿಪುರಕ್ಕೆ ಭೇಟಿ ನೀಡಿದ್ದೇನೆ. ನಿಮ್ಮ ಹೃದಯದಲ್ಲಿರುವ ನೋವಿನ ಬಗ್ಗೆ ನಾನು ಅರ್ಥ ಮಾಡಿಕೊಂಡಿದ್ದೇನೆ. ಆದುದರಿಂದ 2014 ರ ಬಳಿಕ ನಾನು ಇಡೀ ದಿಲ್ಲಿಯನ್ನು, ಭಾರತ ಸರಕಾರವನ್ನು ನಿಮ್ಮ ಮನೆ ಬಾಗಿಲಿಗೆ ಕರೆತಂದಿದ್ದೇನೆ. ನಾಯಕನಾಗಿರಲಿ, ಸಚಿವರಾಗಿರಲಿ ಅಥವಾ ಅಧಿಕಾರಿಯಾಗಿರಲಿ, ನಾನು ಪ್ರತಿಯೊಬ್ಬರಿಗೂ ಇಲ್ಲಿಗೆ ಹೋಗುವಂತೆ ಹೇಳಿದ್ದೇನೆ. ಇಲ್ಲಿ ಕೆಲ ಕಾಲ ಕಳೆದು ಅಲ್ಲಿಯ ಆವಶ್ಯಕತೆಗಳಿಗೆ ತಕ್ಕಂತೆ ಯೋಜನೆಗಳನ್ನು ತಯಾರಿಸಿ ಎಂದಿದ್ದೇನೆ. ನಾನು ನಿಮಗೆ ಏನನ್ನಾದರೂ ಕೊಡಬೇಕು ಎಂಬ ಚಿಂತನೆಯಲ್ಲ ಇದು. ಇದರ ಹಿಂದಿರುವ ಚಿಂತನೆ ಎಂದರೆ ಸಂಪೂರ್ಣ ಗಮನ ಕೇಂದ್ರೀಕರಿಸಿ ಸಾಧ್ಯ ಇರುವ ಎಲ್ಲವನ್ನೂ ಮಾಡುವುದು ಮತ್ತು ಅದು ನಿಮಗಾಗಿ, ಮಣಿಪುರಕ್ಕಾಗಿ ಮತ್ತು ಈಶಾನ್ಯಕ್ಕಾಗಿ ಸೇವೆ ಮಾಡುವ ಉತ್ಸಾಹ. ಇಂದು ಈಶಾನ್ಯದ ಐದು ಪ್ರಮುಖ ಮುಖಗಳು ಕೇಂದ್ರ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿವೆ.
ಸ್ನೇಹಿತರೇ,
ಇಂದು, ನಿಮ್ಮ ಏಳು ವರ್ಷಗಳ ಸರಕಾರದ ಕಠಿಣ ಪ್ರಶ್ರಮ ಇಡೀ ಈಶಾನ್ಯದಾದ್ಯಂತ ಮತ್ತು ಮಣಿಪುರದಲ್ಲಿ ಕಂಡು ಬರುತ್ತಿದೆ. ಇಂದು ಮಣಿಪುರವು ಬದಲಾವಣೆಯ ಸಂಕೇತವಾಗುತ್ತಿದೆ, ಹೊಸ ಕೆಲಸದ ಸಂಸ್ಕೃತಿಯ ಚಿಹ್ನೆಯಾಗುತ್ತಿದೆ. ಇವು ಮಣಿಪುರದ ಸಂಸ್ಕೃತಿ ಮತ್ತು ಮಣಿಪುರದ ಕಾಳಜಿಯಿಂದಾದ ಬದಲಾವಣೆಗಳು. ಅಲ್ಲಿ ಸಂಪರ್ಕಕ್ಕೆ ಆದ್ಯತೆ ಇದೆ ಹಾಗು ರಚನಾತ್ಮಕತೆಗೆ ಪ್ರಾಮುಖ್ಯತೆ ಇದೆ. ರಸ್ತೆ ಮತ್ತು ಮೂಲಸೌಕರ್ಯ ಸಂಬಂಧಿ ಯೋಜನೆಗಳು ಮತ್ತು ಉತ್ತಮ ಮೊಬೈಲ್ ಜಾಲಗಳು ಮಣಿಪುರದ ಸಂಪರ್ಕವನ್ನು ಸುಧಾರಿಸಲಿವೆ. ಸಿ.ಐ.ಐ.ಐ.ಟಿ. ಯು ಇಲ್ಲಿಯ ಯುವ ಜನತೆಯ ರಚನಾತ್ಮಕತೆ ಮತ್ತು ಅನ್ವೇಷಣೆಯ ಉತ್ಸಾಹವನ್ನು, ಸ್ಪೂರ್ತಿಯನ್ನು ಇನ್ನಷ್ಟು ಬಲಪಡಿಸಲಿದೆ. ಆಧುನಿಕ ಕ್ಯಾನ್ಸರ್ ಆಸ್ಪತ್ರೆ ಮಣಿಪುರದ ಜನತೆಗೆ ಗಂಭೀರ ಖಾಯಿಲೆಗಳ ತಡೆ ಮತ್ತು ಚಿಕಿತ್ಸೆಗೆ ಸಹಾಯ ಮಾಡಲಿದೆ. ಮಣಿಪಾಲ ಪ್ರದರ್ಶನ ಕಲೆಗಳ ಸಂಸ್ಥೆಯ ಸ್ಥಾಪನೆ ಮತ್ತು ಗೋವಿಂದಜೀ ದೇವಾಲಯದ ನವೀಕರಣ ಮಣಿಪುರದ ಸಂಸ್ಕೃತಿಯನ್ನು ಕಾಪಿಡಲಿದೆ.
ಸ್ನೇಹಿತರೇ,
ಈಶಾನ್ಯದ ಈ ಭೂಮಿಯಲ್ಲಿ ರಾಣಿ ಗೈದಿನ್ಲಿಯು ವಿದೇಶೀಯರಿಗೆ ಮಹಿಳಾ ಶಕ್ತಿಯ ಮೇಲುಗೈಯನ್ನು ತೋರಿಸಿದ್ದರು ಮತ್ತು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ರಾಣಿ ಗೈದಿನ್ಲಿಯು ವಸ್ತು ಸಂಗ್ರಹಾಲಯ ನಮ್ಮ ಯುವ ಜನತೆಯನ್ನು ಇತಿಹಾಸದ ಜೊತೆ ಬೆಸೆಯಲಿದೆ ಮತ್ತು ಅವರಿಗೆ ಪ್ರೇರಣೆ ನೀಡಲಿದೆ. ಅಂಡಮಾನ್ ನಿಕೋಬಾರಿನಲ್ಲಿ ಮೌಂಟ್ ಹ್ಯಾರಿಯೆಟ್ ಎಂಬ ದ್ವೀಪವಿದೆ. ಸ್ವಾತಂತ್ರ್ಯದ 75 ವರ್ಷಗಳ ಬಳಿಕವೂ ಜನರು ಅದನ್ನು ಮೌಂಟ್ ಹ್ಯಾರಿಯೆಟ್ ಎಂದು ಕರೆಯುತ್ತಿದ್ದರು. ಆದರೆ ನಾವು ಮೌಂಟ್ ಹ್ಯಾರಿಯೆಟ್ ಹೆಸರನ್ನು ಬದಲಾಯಿಸಿ ಮೌಂಟ್ ಮಣಿಪುರ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಿದೆವು. ಈಗ ಯಾವುದೇ ವಿದೇಶೀ ಪ್ರವಾಸಿಗರು ಅಂಡಮಾನ್ ಮತ್ತು ನಿಕೋಬಾರ್ ಗೆ ಭೇಟಿ ನೀಡುವಾಗ ಮೌಂಟ್ ಮಣಿಪುರದ ಇತಿಹಾಸವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ.
ಈಶಾನ್ಯದ ಬಗ್ಗೆ ಈ ಹಿಂದಿನ ಸರಕಾರಗಳು ನಿರಂತರವಾಗಿ ನಿರ್ಲಕ್ಶ್ಯದ ನೀತಿಯನ್ನು ಹೊಂದಿದ್ದವು, ಅದೆಂದರೆ “ಪೂರ್ವದ ಕಡೆ ನೋಡ ಬೇಡ”. ಚುನಾವಣೆಗಳು ನಡೆಯುವಾಗಷ್ಟೇ ದಿಲ್ಲಿಯು ಈಶಾನ್ಯದ ಬಗ್ಗೆ ಗಮನ ಹರಿಸುತ್ತಿತ್ತು. ಆದರೆ ನಾವು ಈಶಾನ್ಯಕ್ಕಾಗಿ “ಪೂರ್ವದಲ್ಲಿ ಕಾರ್ಯಾಚರಿಸು” ನೀತಿಯನ್ನು ಅನುಷ್ಟಾನಿಸಿದೆವು. ದೇವರು ಈ ವಲಯದಲ್ಲಿ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು, ಬಹಳಷ್ಟು ಸಾಮರ್ಥ್ಯವನ್ನು ಒದಗಿಸಿದ್ದಾರೆ ಮತ್ತು ಅಲ್ಲಿ ಅಭಿವೃದ್ಧಿ ಹಾಗು ಪ್ರವಾಸೋದ್ಯಮಕ್ಕೆ ಬಹಳಷ್ಟು ಸಾಧ್ಯತೆಗಳಿವೆ. ಈಶಾನ್ಯದ ಈ ಸಾಧ್ಯತೆಗಳ ಬಗ್ಗೆ ಈಗ ಕಾಳಜಿ ವಹಿಸಲಾಗುತ್ತಿದೆ. ಈಶಾನ್ಯ ಈಗ ಭಾರತದ ಅಭಿವೃದ್ಧಿಗೆ ಮಹಾದ್ವಾರವಾಗಿ ಬದಲಾಗುತ್ತಿದೆ.
ಈಶಾನ್ಯದಲ್ಲಿ ಈಗ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮತ್ತು ಇಲ್ಲಿಗೆ ರೈಲು ಸೇವೆಗಳೂ ತಲುಪುತ್ತಿವೆ. ಜಿರಿಬಾಮ್-ಟುಪುಲ್-ಇಂಫಾಲ ರೈಲ್ವೇ ಮಾರ್ಗದ ಮೂಲಕ ಮಣಿಪುರವು ದೇಶದ ರೈಲ್ವೇ ಜಾಲಕ್ಕೆ ಜೋಡಣೆಯಾಗಲಿದೆ. ಇಂಫಾಲಾ-ಮೋರೇ ಹೆದ್ದಾರಿ ಅಂದರೆ ಏಶ್ಯನ್ ಹೈವೇ ಒನ್ ತ್ವರಿತ ಪ್ರಗತಿಯಲ್ಲಿದೆ. ಈ ಹೆದ್ದಾರಿಯು ಆಗ್ನೇಯ ಏಶ್ಯಾ ಜೊತೆಗೆ ಭಾರತದ ಸಂಪರ್ಕವನ್ನು ಬಲಪಡಿಸಲಿದೆ. ಈ ಮೊದಲು ರಫ್ತಿನ ವಿಷಯ ಬಂದಾಗ ದೇಶದ ಕೆಲವು ನಗರಗಳ ಹೆಸರುಗಳು ಮಾತ್ರ ಮುಂಚೂಣಿಗೆ ಬರುತ್ತಿದ್ದವು. ಒಮ್ಮೆ ಸಮಗ್ರ ಸರಕು ಟರ್ಮಿನಲ್ ಸಿದ್ಧಗೊಂಡರೆ, ಆಗ ಮಣಿಪುರ ಕೂಡಾ ವ್ಯಾಪಾರ ವಹಿವಾಟಿನ, ರಫ್ತಿನ ಪ್ರಮುಖ ಕೇಂದ್ರವಾಗಲಿದೆ, ಸ್ವಾವಲಂಬಿ ಭಾರತಕ್ಕೆ ವೇಗವನ್ನು ಕೊಡಲಿದೆ. ಮತ್ತು ನಿನ್ನೆ, ದೇಶವಾಸಿಗಳು ದೇಶವು ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ 300 ಬಿಲಿಯನ್ ಡಾಲರುಗಳ ಮೌಲ್ಯದ ಸರಕುಗಳನ್ನು ರಫ್ತು ಮಾಡಿ ರಫ್ತಿನಲ್ಲಿ ಹೊಸ ದಾಖಲೆಯನ್ನು ಬರೆದಿರುವ ಸುದ್ದಿಯನ್ನು ಕೇಳಿದ್ದಾರೆ. ಸಣ್ಣ ರಾಜ್ಯಗಳು ಕೂಡಾ ಈ ನಿಟ್ಟಿನಲ್ಲಿ ಮುಂದೆ ಬರುತ್ತಿವೆ.
ಸ್ನೇಹಿತರೇ,
ಮೊದಲು ಜನರು ಈಶಾನ್ಯಕ್ಕೆ ಭೇಟಿ ನೀಡಲು ಇಚ್ಛಿಸುತ್ತಿದ್ದರು, ಆದರೆ ಇಲ್ಲಿಗೆ ಹೇಗೆ ಹೋಗುವುದು ಎಂಬ ಚಿಂತೆಯಲ್ಲಿ ಪ್ರವಾಸವನ್ನು ತಡೆ ಹಿಡಿಯುತ್ತಿದ್ದರು. ಇದರಿಂದ ಇಲ್ಲಿಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಹಳ ಹಾನಿಯಾಗಿದೆ. ಈಗ ಈಶಾನ್ಯದ ನಗರಗಳು ಮಾತ್ರವಲ್ಲ ಹಳ್ಳಿಗಳಿಗೂ ತಲುಪುವುದು ಸುಲಭವಾಗುತ್ತಿದೆ. ಇಂದು ಹಲವು ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಇಲ್ಲಿ ನಡೆಯುತ್ತಿದೆ, ಮತ್ತು ಹಳ್ಳಿಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ಅಡಿಯಲ್ಲಿ ನೂರಾರು ಕಿಲೋ ಮೀಟರ್ ಹೊಸ ರಸ್ತೆಗಳನ್ನು ಕೂಡಾ ನಿರ್ಮಾಣ ಮಾಡಲಾಗುತ್ತಿದೆ. ನೈಸರ್ಗಿಕ ಅನಿಲ ಪ್ರತಿಷ್ಟಿತ ಕೆಲವರಿಗಷ್ಟೇ ಎಂದು ಪರಿಗಣಿತವಾಗಿತ್ತು, ಅದೀಗ ಈಶಾನ್ಯಕ್ಕೆ ತಲುಪುತ್ತಿದೆ. ಈ ಹೊಸ ಸೌಲಭ್ಯಗಳು ಮತ್ತು ಸಂಪರ್ಕದಲ್ಲಿ ಆಗುತ್ತಿರುವ ಹೆಚ್ಚಳದಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ ಮತ್ತು ಇಲ್ಲಿಯ ಯುವ ಜನತೆಗೆ ಹೊಸ ಉದ್ಯೋಗಾವಕಾಶಗಳು ರೂಪುಗೊಳ್ಳಲಿವೆ.
ಸ್ನೇಹಿತರೇ,
ಮಣಿಪುರವು ದೇಶದ ಅಪರೂಪದ ಅಮೂಲ್ಯ ರತ್ನ ರಾಜ್ಯಗಳಲ್ಲಿ ಒಂದು. ಯುವಜನತೆ, ಅದರಲ್ಲೂ ಮಣಿಪುರದ ಹೆಣ್ಣು ಮಕ್ಕಳು ಜಗತ್ತಿನಲ್ಲಿ ದೇಶಕ್ಕೆ ಹೆಮ್ಮೆಯುಂಟು ಮಾಡಿದ್ದಾರೆ. ಇಂದು, ದೇಶದ ಯುವಜನತೆ ಮಣಿಪುರದ ಆಟಗಾರರಿಂದ ಪ್ರೇರಣೆಯನ್ನು ಪಡೆಯುತ್ತಿದ್ದಾರೆ. ಕಾಮನ್ ವೆಲೆ ಗೇಮ್ಸ್ ನಿಂದ ಹಿಡಿದು ಒಲಿಂಪಿಕ್ಸ್ ವರೆಗೆ ಮಣಿಪುರವು ಎಂ.ಸಿ. ಮೇರಿ ಕೋಂ, ಮೀರಾಬಾಯಿ ಚಾನು, ಬೊಂಬಾಯ್ಲ ದೇವಿ, ಲೈಶ್ರಾಂ ಸರಿತಾ ದೇವಿ, ಅವರನ್ನು ಕುಸ್ತಿ, ಬಿಲ್ಲುಗಾರಿಕೆ, ಬಾಕ್ಸಿಂಗ್ ಮತ್ತು ಭಾರ ಎತ್ತುಗೆಯ ವಿಭಾಗಗಳಲ್ಲಿ ಚಾಂಪಿಯನ್ ಗಳನ್ನಾಗಿ ನೀಡಿದೆ. ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಮತ್ತು ಅವಶ್ಯ ಸಂಪನ್ಮೂಲಗಳು ದೊರೆತರೆ ಅದ್ಭುತಗಳನ್ನು ಮಾಡಬಲ್ಲ ಭರವಸೆದಾಯಕ ಅನೇಕ ಮಂದಿ ನಿಮ್ಮಲ್ಲಿದ್ದಾರೆ. ಇಲ್ಲಿರುವ ನಮ್ಮ ಯುವಕರು ಮತ್ತು ಹೆಣ್ಣು ಮಕ್ಕಳು ಇಂತಹ ಪ್ರತಿಭೆ ಇರುವಂತಹವರು. ಆದುದರಿಂದ ನಾವು ಮಣಿಪುರದಲ್ಲಿ ಆಧುನಿಕ ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದೇವೆ. ಈ ವಿಶ್ವವಿದ್ಯಾನಿಲಯವು ಈ ಯುವಜನತೆಯ ಕನಸುಗಳ ಜೊತೆ ಸಂಪರ್ಕಿಸಲ್ಪಡಲಿದೆ ಮಾತ್ರವಲ್ಲ ಅದು ಭಾರತಕ್ಕೆ ಕ್ರೀಡಾ ಜಗತ್ತಿನಲ್ಲಿ ಹೊಸ ಗುರುತಿಸುವಿಕೆಯನ್ನು ನೀಡಲಿದೆ. ಇದು ದೇಶದ ಹೊಸ ಉತ್ಸಾಹ, ಸ್ಪೂರ್ತಿ ಮತ್ತು ಹೊಸ ಚೇತನ, ಹವ್ಯಾಸ, ಅದರ ಮುಂಚೂಣಿಯಲ್ಲಿ ಯುವಕರು ಮತ್ತು ಹೆಣ್ಣುಮಕ್ಕಳು ಇದ್ದಾರೆ.
ಸ್ನೇಹಿತರೇ,
ಈಶಾನ್ಯವು ಕೇಂದ್ರ ಸರಕಾರ ಆರಂಭಿಸಿದ ತಾಳೆ ಎಣ್ಣೆ ಮಿಷನ್ನಿನಿಂದ ಪ್ರಯೋಜನಗಳನ್ನು ಪಡೆಯಲಿದೆ. ಇಂದು, ಭಾರತವು ತನ್ನ ಬೇಡಿಕೆಯನ್ನು ಈಡೇರಿಸಲು ಬೃಹತ್ ಪ್ರಮಾಣದಲ್ಲಿ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನು ವ್ಯಯಿಸಲಾಗುತ್ತಿದೆ. ಈ ಹಣವು ಭಾರತದ ರೈತರಿಗೆ ಸಲ್ಲುವಂತೆ ಮಾಡುವ ನಿಟ್ಟಿನಲ್ಲಿ ನಾವು ಪ್ರಯತ್ನಗಳನ್ನು ಮುಂದುವರೆಸಿದ್ದೇವೆ ಮತ್ತು ಭಾರತವು ಖಾದ್ಯ ತೈಲ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲಿದೆ. 11,000 ಕೋ.ರೂ.ಗಳ ತಾಳೆ ಎಣ್ಣೆ ಮಿಷನ್ ರೈತರ ಆದಾಯ ಹೆಚ್ಚಳದಲ್ಲಿ ಬಹಳ ನೆರವಾಗಲಿದೆ. ಮತ್ತು ಇದು ಬಹುತೇಕ ಈಶಾನ್ಯದಲ್ಲಿ ನಡೆಯಲಿದೆ. ಇಲ್ಲಿ ಮಣಿಪುರದಲ್ಲಿ ಕೂಡಾ ಕೆಲಸ ಬಹಳ ವೇಗದಿಂದ ನಡೆಯುತ್ತಿದೆ. ತಾಳೆ ಎಣ್ಣೆಯ ಹೊಸ ಗಿರಣಿಗಳನ್ನು ಸ್ಥಾಪಿಸಲು ಸರಕಾರ ಕೂಡಾ ಹಣಕಾಸು ನೆರವು ನೀಡುತ್ತಿದೆ.
ಸ್ನೇಹಿತರೇ,
ಮಣಿಪುರದ ಸಾಧನೆಗಳ ಬಗ್ಗೆ ಹೆಮ್ಮೆ ಹೊಂದಿರುವಂತೆಯೇ, ನಾವು ನಾವು ಬಹಳ ದೂರ ಸಾಗಲಿಕ್ಕಿದೆ ಎಂಬ ಸಂಗತಿಯನ್ನು ಮರೆಯಬಾರದು. ನಾವು ಈ ಪ್ರಯಾಣವನ್ನು ಹೇಗೆ ಆರಂಭ ಮಾಡಿದೆವು ಎಂಬುದನ್ನೂ ನೆನಪಿನಲ್ಲಿಡಬೇಕು. ನಮ್ಮ ಮಣಿಪುರವನ್ನು ಹಿಂದಿನ ಸರಕಾರಗಳು ಹೇಗೆ “ಬ್ಲಾಕೇಡ್ ರಾಜ್ಯ” ವನ್ನಾಗಿ ಮಾಡಿದವು ಮತ್ತು ಅವುಗಳು ಹೇಗೆ ಗಿರಿ ಪ್ರದೇಶಗಳು ಮತ್ತು ಕಣಿವೆಯ ನಡುವೆ ಅಂತರವನ್ನು ರಾಜಕೀಯ ಲಾಭಕ್ಕಾಗಿ ನಿರ್ಮಾಣ ಮಾಡಿದವು ಎಂಬುದನ್ನು ನೆನಪಿನಲ್ಲಿಡಬೇಕು. ಜನರ ನಡುವೆ ಭಿನ್ನಮತವನ್ನು ಹುಟ್ಟು ಹಾಕಲು ಒಳಸಂಚುಗಳನ್ನು ಹೇಗೆ ರೂಪಿಸಲಾಯಿತು ಎಂಬುದನ್ನೂ ನಾವು ನೆನಪಿನಲ್ಲಿಡಬೇಕು.
ಸ್ನೇಹಿತರೇ,
ಇಂದು, ತೀವ್ರಗಾಮಿತ್ವದ ಕಿಡಿಯಾಗಲೀ ಮತ್ತು ಅಭದ್ರತೆಯ ಭಾವವಾಗಲೀ ಅಲ್ಲಿಲ್ಲ, ಆದರೆ ಶಾಂತಿಯ ಬೆಳಕಿದೆ ಮತ್ತು ಎರಡು ಇಂಜಿನ್ ಗಳ ಸರಕಾರದ ಸತತ ಪ್ರಯತ್ನದಿಂದಾಗಿ ಈ ವಲಯದಲ್ಲಿ ಅಭಿವೃದ್ಧಿಯಾಗುತ್ತಿದೆ. ಈಶಾನ್ಯದಾದ್ಯಂತ ನೂರಾರು ಯುವಜನರು ಶಸ್ತ್ರಾಸ್ತ್ರಗಳನ್ನು ತೊರೆದು ಅಭಿವೃದ್ಧಿಯ ಮುಖವಾಹಿನಿಗೆ ಬಂದಿದ್ದಾರೆ. ನಮ್ಮ ಸರಕಾರ ಕೂಡಾ ದಶಕಗಳಿಂದ ಕಾಯುತ್ತಿದ್ದ ಚಾರಿತ್ರಿಕ ಒಪ್ಪಂದಗಳಿಗೆ ಒಪ್ಪಿಗೆ ನೀಡಿದೆ. “ಬ್ಲಾಕೇಡ್ ರಾಜ್ಯ” ಎಂದಿದ್ದ ಮಣಿಪುರ ಈಗ ಅಂತಾರಾಷ್ಟ್ರೀಯ ವ್ಯಾಪಾರೋದ್ಯಮಕ್ಕೆ ಹಾದಿ ಒದಗಿಸುತ್ತಿದೆ. ನಮ್ಮ ಸರಕಾರ “ಗಿರಿಗಳಿಗೆ ತೆರಳಿ” ಮತ್ತು “ಹಳ್ಳಿಗಳಿಗೆ ತೆರಳಿ” ಆಂದೋಲನವನ್ನು ಗಿರಿ ಮತ್ತು ಕಣಿವೆಗಳ ನಡುವಣ ಅಂತರವನ್ನು ಬೆಸೆಯುವುದಕ್ಕಾಗಿ ಆರಂಭಿಸಿದೆ.
ಈ ಎಲ್ಲಾ ಪ್ರಯತ್ನಗಳ ನಡುವೆ, ಕೆಲವು ಜನರು ಅಧಿಕಾರ ಪಡೆಯುವುದಕ್ಕಾಗಿ ಮಣಿಪುರವನ್ನು ಮತ್ತೆ ಅಸ್ಥಿರಗೊಳಿಸಲು ಇಚ್ಛಿಸುತ್ತಿರುವುದನ್ನು ನೀವು ನೆನಪಿನಲ್ಲಿಟ್ಟಿರಬೇಕು. ಅವರು ತಮಗೆ ಅವಕಾಶ ಸಿಕ್ಕ ಕೂಡಲೇ ಅಶಾಂತಿಯ ಆಟ ಆಡುವ ಭರವಸೆಯಿಂದ ಕಾಯುತ್ತಿದ್ದಾರೆ. ಮಣಿಪುರದ ಜನತೆ ಅವರನ್ನು ಗುರುತಿಸಿದ್ದಾರೆ ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ. ಈಗ ಮಣಿಪುರದ ಜನತೆ ಅಭಿವೃದ್ಧಿಯನ್ನು ಇಲ್ಲಿಗೆ ಸ್ಥಗಿತಗೊಳ್ಳಲು ಅವಕಾಶ ನೀಡಲಾರರು. ಮಣಿಪುರ ಮತ್ತೆ ಕತ್ತಲೆಯ ಹಾದಿಗೆ ಜಾರಿ ಹೋಗಲು ಬಿಡಬಾರದು.
ಸ್ನೇಹಿತರೇ,
ಇಂದು ದೇಶವು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ “ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ದೇಶವು “ಸಬ್ ಕಾ ಪ್ರಯಾಸ್” ಎಂಬ ಉತ್ಸಾಹದೊಂದಿಗೆ, ಸ್ಪೂರ್ತಿಯೊಂದಿಗೆ ಕೆಲಸ ಮಾಡುತ್ತಿದೆ. ಅದು ಎಲ್ಲರಿಗಾಗಿ ಮತ್ತು ದೂರವ್ಯಾಪ್ತಿಯಲ್ಲಿ ಹಾಗು ವಿಸ್ತಾರವಾಗಿ ಕೆಲಸ ಮಾಡುತ್ತಿದೆ. 21 ನೇ ಶತಮಾನದ ಈ ದಶಕ ಮಣಿಪುರಕ್ಕೆ ಬಹಳ ಮುಖ್ಯ. ಈ ಮೊದಲಿನ ಸರಕಾರಗಳು ಬಹಳ ಸಮಯವನ್ನು ವ್ಯರ್ಥ ಮಾಡಿವೆ. ನಾವು ಈಗ ಸಣ್ಣ ಸಮಯ ಸಂದರ್ಭವನ್ನು ವ್ಯರ್ಥ ಮಾಡಲು ಇಚ್ಛಿಸುವುದಿಲ್ಲ. ನಾವು ಮಣಿಪುರದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಮತ್ತು ಮಣಿಪುರವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ಮತ್ತು ಇದು ಎರಡು ಇಂಜಿನ್ ಗಳ ಸರಕಾರದಿಂದ ಮಾತ್ರ ಸಾಧಿಸಬಹುದಾಗಿದೆ.
ಮಣಿಪುರವು ಎರಡು ಇಂಜಿನ್ ಗಳ ಸರಕಾರದ ಮೇಲಿನ ಆಶೀರ್ವಾದವನ್ನು ಮುದುವರೆಸುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ. ಮತ್ತೊಮ್ಮೆ, ಮಣಿಪುರದ ಜನತೆಗೆ, ಮಣಿಪುರದ ನನ್ನ ಪ್ರೀತಿಯ ಸಹೋದರರು ಮತ್ತು ಸಹೋದರಿಯರಿಗೆ, ಇಂದಿನ ಹಲವು ಯೋಜನೆಗಳಿಗಾಗಿ ಶುಭ ಹಾರೈಕೆಗಳು.
ಥಗಟ್ಚಾರಿ!!
ಭಾರತ್ ಮಾತಾ ಕೀ –ಜೈ
ಭಾರತ್ ಮಾತಾ ಕೀ -ಜೈ
ಭಾರತ್ ಮಾತಾ ಕೀ -ಜೈ
ಬಹಳ ಧನ್ಯವಾದಗಳು!