ನಮಸ್ಕಾರ!
ನಿಮ್ಮೆಲ್ಲರಿಗೂ ಗಂಗಾ-ಪುಷ್ಕರಾಳು ಹಬ್ಬದ ಶುಭಾಶಯಗಳು! ನೀವೆಲ್ಲರೂ ಕಾಶಿಗೆ ಬಂದಿರುವುದರಿಂದ ಈ ಭೇಟಿಯಲ್ಲಿ ನೀವೆಲ್ಲರೂ ವೈಯಕ್ತಿಕವಾಗಿ ನನ್ನ ಅತಿಥಿಗಳು. ಅತಿಥಿಗಳು ದೇವರಿಗೆ ಸಮಾನ ಎಂದು ನಾವು ನಂಬುತ್ತೇವೆ. ಕೆಲವು ಕಾರ್ಯ ನಿಮಿತ್ತ ನಿಮ್ಮನ್ನು ಸ್ವಾಗತಿಸಲು ನಾನು ಅಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ, ಆದರೆ ನಾನು ನಿಮ್ಮೆಲ್ಲರ ನಡುವೆ ಇರಬಹುದೆಂದು ಬಯಸುತ್ತೇನೆ. ಈ ಕಾರ್ಯಕ್ರಮಕ್ಕಾಗಿ ನಾನು ಕಾಶಿ-ತೆಲುಗು ಸಮಿತಿ ಮತ್ತು ನನ್ನ ಸಂಸದೀಯ ಸಹೋದ್ಯೋಗಿ ಜಿ.ವಿ.ಎಲ್. ನರಸಿಂಹರಾವ್ ಜಿ ಅವರನ್ನು ಅಭಿನಂದಿಸುತ್ತೇನೆ. ಕಾಶಿಯ ಘಟ್ಟಗಳಲ್ಲಿ ನಡೆಯುವ ಈ ಗಂಗಾ-ಪುಷ್ಕರಾಳು ಉತ್ಸವವು ಗಂಗಾ ಮತ್ತು ಗೋದಾವರಿ ಸಂಗಮದಂತೆ. ಇದು ಭಾರತದ ಪ್ರಾಚೀನ ನಾಗರಿಕತೆಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಸಂಗಮದ ಆಚರಣೆಯಾಗಿದೆ. ಕೆಲವು ತಿಂಗಳ ಹಿಂದೆ ಕಾಶಿ-ತಮಿಳು ಸಂಗಮವನ್ನು ಇದೇ ಕಾಶಿ ಭೂಮಿಯಲ್ಲಿ ಆಯೋಜಿಸಿದ್ದು ನಿಮಗೆ ನೆನಪಿರಬಹುದು. ಕೆಲವೇ ದಿನಗಳ ಹಿಂದೆ ಸೌರಾಷ್ಟ್ರ-ತಮಿಳು ಸಂಗಮದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು. ಈ ‘ಆಜಾದಿ ಕಾ ಅಮೃತ ಕಾಲ್’ ದೇಶದ ವೈವಿಧ್ಯತೆ ಮತ್ತು ವಿವಿಧ ವಿಚಾರಧಾರೆಗಳ ಸಂಗಮ ಎಂದು ಆಗ ಹೇಳಿದ್ದೆ. ಈ ವೈವಿಧ್ಯಗಳ ಸಂಗಮದಿಂದ ರಾಷ್ಟ್ರೀಯತೆಯ ಅಮೃತವು ಹೊರಹೊಮ್ಮುತ್ತಿದೆ, ಇದು ಭಾರತವನ್ನು ಅನಂತ ಭವಿಷ್ಯದವರೆಗೆ ಜೀವಂತವಾಗಿರಿಸುತ್ತದೆ.
ಸ್ನೇಹಿತರೆ,
ಕಾಶಿ ಮತ್ತು ಅಲ್ಲಿನ ಜನರು ತೆಲುಗು ಜನರೊಂದಿಗೆ ಆಳವಾದ ಸಂಪರ್ಕ ಹೊಂದಿದ್ದಾರೆಂದು ಕಾಶಿಯೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ತಿಳಿದಿದೆ. ತೆಲುಗಿನ ವ್ಯಕ್ತಿಯೊಬ್ಬರು ಕಾಶಿಗೆ ಆಗಮಿಸಿದ ಕೂಡಲೇ ಕಾಶಿಯವರಿಗೆ ತಮ್ಮ ಕುಟುಂಬದ ಸದಸ್ಯರೊಬ್ಬರು ಬಂದಿದ್ದಾರೆಂಬ ಭಾವನೆ ಮೂಡುತ್ತದೆ. ಕಾಶಿಯ ಜನರು ನಿಮ್ಮೆಲ್ಲರನ್ನು ತಲೆಮಾರುಗಳಿಂದ ಸ್ವಾಗತಿಸುತ್ತಿದ್ದಾರೆ. ಈ ಸಂಬಂಧ ಕಾಶಿಯಷ್ಟೇ ಪ್ರಾಚೀನ. ತೆಲುಗರ ಕಾಶಿಯ ಮೇಲಿನ ಭಕ್ತಿ ಕಾಶಿಯಷ್ಟೇ ಪವಿತ್ರ. ಇಂದಿಗೂ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಜನರು ಕಾಶಿಗೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿದ್ದಾರೆ. ತೆಲುಗು ಪ್ರದೇಶವು ಕಾಶಿಗೆ ಅನೇಕ ಮಹಾನ್ ಸಾಧು ಸಂತರನ್ನು, ಅನೇಕ ಆಚಾರ್ಯರನ್ನು ಮತ್ತು ಋಷಿ ಮುನಿಗಳನ್ನು ನೀಡಿದೆ. ಕಾಶಿಯ ಜನರು ಮತ್ತು ಯಾತ್ರಾರ್ಥಿಗಳು ಬಾಬಾ ವಿಶ್ವನಾಥನ ದರ್ಶನಕ್ಕೆ ಹೋದಾಗ ಅವರ ಆಶೀರ್ವಾದ ಪಡೆಯಲು ತೈಲಾಂಗ್ ಸ್ವಾಮಿಯ ಆಶ್ರಮಕ್ಕೂ ಭೇಟಿ ನೀಡುತ್ತಾರೆ. ಸ್ವಾಮಿ ರಾಮಕೃಷ್ಣ ಪರಮಹಂಸರು ತೈಲಂಗ್ ಸ್ವಾಮಿಯನ್ನು ಕಾಶಿಯ ಜೀವಂತ ಶಿವ ಎಂದು ಕರೆಯುತ್ತಿದ್ದರು. ತೈಲಂಗ ಸ್ವಾಮಿ ವಿಜಯನಗರದಲ್ಲಿ ಜನಿಸಿದರು ಎಂಬುದು ನಿಮಗೆ ಈಗಾಗಲೇ ತಿಳಿದಿದೆ. ಜಿಡ್ಡು ಕೃಷ್ಣಮೂರ್ತಿ ಅವರಂತಹ ಹಲವಾರು ಮಹಾನ್ ಚೇತನಗಳು ಕಾಶಿಯಲ್ಲಿ ಇಂದಿಗೂ ಸ್ಮರಣೀಯರಾಗಿದ್ದಾರೆ.
ಸಹೋದರ ಸಹೋದರಿಯರೇ,
ಕಾಶಿ ತೆಲುಗು ಜನರನ್ನು ಹೇಗೆ ದತ್ತು ಸ್ವೀಕರಿಸಿ ಅಪ್ಪಿಕೊಂಡಿತೊ, ಅದೇ ರೀತಿ ತೆಲುಗು ಜನರು ಕಾಶಿಯನ್ನು ತಮ್ಮ ಹೃದಯಕ್ಕೆ ಹತ್ತಿರವಾಗಿ ಇಟ್ಟುಕೊಂಡಿದ್ದಾರೆ. ಪವಿತ್ರ ಕ್ಷೇತ್ರ ವೇಮುಲವಾಡವನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ. ಆಂಧ್ರ ಮತ್ತು ತೆಲಂಗಾಣದ ದೇವಾಲಯಗಳಲ್ಲಿ ಕೈಗೆ ಕಟ್ಟಿರುವ ಕಪ್ಪು ದಾರವನ್ನು ಇಂದಿಗೂ ಕಾಶಿ ದಾರಂ ಎಂದು ಕರೆಯಲಾಗುತ್ತದೆ. ಅದೇ ರೀತಿ, ಶ್ರೀನಾಥ ಮಹಾಕವಿಯ ಕಾಶಿಖಂಡಮು ಗ್ರಂಥವಾಗಲಿ, ಎಂಗುಲ್ ವೀರಸ್ವಾಮಯ್ಯನ ಕಾಶಿ ಯಾತ್ರೆಯ ಪಾತ್ರವಾಗಲಿ ಅಥವಾ ಜನಪ್ರಿಯ ಕಾಶಿ ಮಜಿಲಿ ಕಥಲು, ಕಾಶಿ ಮತ್ತು ಕಾಶಿಯ ವೈಭವವು ತೆಲುಗು ಭಾಷೆ ಮತ್ತು ತೆಲುಗು ಸಾಹಿತ್ಯದಲ್ಲಿ ಸಮಾನವಾಗಿ ಮತ್ತು ಆಳವಾಗಿ ಹುದುಗಿವೆ. ಹೊರಗಿನವರು ಇದನ್ನೆಲ್ಲ ನೋಡಿದರೆ ಇಷ್ಟು ದೂರದ ಊರು ಹೃದಯಕ್ಕೆ ಹತ್ತಿರವಾಗುವುದು ಹೇಗೆ ಎಂದು ನಂಬುವುದು ಕಷ್ಟ! ಆದರೆ ಇದು ಶತಮಾನಗಳಿಂದಲೂ 'ಏಕ್ ಭಾರತ್, ಶ್ರೇಷ್ಠ ಭಾರತ' ಎಂಬ ನಂಬಿಕೆಯನ್ನು ಜೀವಂತವಾಗಿಟ್ಟಿರುವ ಭಾರತದ ಪರಂಪರೆ ಮತ್ತು ಸಂಪ್ರದಾಯವಾಗಿದೆ.
ಸ್ನೇಹಿತರೆ,
ಕಾಶಿಯು ಮುಕ್ತಿ ಮತ್ತು ಮೋಕ್ಷದ ನಗರವೂ ಆಗಿದೆ. ಒಂದು ಕಾಲದಲ್ಲಿ ತೆಲುಗು ಜನರು ಕಾಶಿಗೆ ಬರಲು ಸಾವಿರಾರು ಕಿಲೋ ಮೀಟರ್ ನಡೆದುಕೊಂಡು ಹೋಗುತ್ತಿದ್ದರು. ಅವರು ತಮ್ಮ ಪ್ರಯಾಣದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸುತ್ತಿದ್ದರು. ಆಧುನಿಕ ಕಾಲದಲ್ಲಿ, ಆ ಸಂದರ್ಭಗಳು ವೇಗವಾಗಿ ಬದಲಾಗುತ್ತಿವೆ. ಇಂದು ಒಂದೆಡೆ ವಿಶ್ವನಾಥ ಧಾಮದ ದಿವ್ಯ ವೈಭವ, ಇನ್ನೊಂದೆಡೆ ಗಂಗೆಯ ಘಟ್ಟಗಳ ವೈಭವ. ಇಂದು ಒಂದೆಡೆ ಕಾಶಿಯ ಬೀದಿಗಳು, ಮತ್ತೊಂದೆಡೆ ಹೊಸ ರಸ್ತೆಗಳು ಮತ್ತು ಹೆದ್ದಾರಿಗಳ ಜಾಲವಿದೆ. ಮೊನ್ನೆ ಕಾಶಿಗೆ ಬಂದಿರುವ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜನರು ಕಾಶಿಯಲ್ಲಿ ಆಗುತ್ತಿರುವ ಬದಲಾವಣೆಯನ್ನು ಅನುಭವಿಸುತ್ತಿರಬೇಕು. ಒಂದು ಕಾಲದಲ್ಲಿ ವಿಮಾನ ನಿಲ್ದಾಣದಿಂದ ದಶಾಶ್ವಮೇಧ ಘಾಟ್ ತಲುಪಲು ಗಂಟೆಗಟ್ಟಲೆ ಸಮಯ ಹಿಡಿಯುತ್ತಿತ್ತು. ಇಂದು ಹೊಸ ಹೆದ್ದಾರಿ ನಿರ್ಮಾಣದಿಂದ ಜನರ ಸಮಯ ಉಳಿತಾಯವಾಗುತ್ತಿದೆ. ಒಂದು ಕಾಲದಲ್ಲಿ ಕಾಶಿಯ ಬೀದಿಗಳಲ್ಲಿ ತೂಗಾಡುವ ವಿದ್ಯುತ್ ತಂತಿಗಳು ತುಂಬಿದ್ದವು. ಈಗ ಕಾಶಿಯ ಬಹುತೇಕ ಕಡೆ ವಿದ್ಯುತ್ ತಂತಿಗಳನ್ನು ನೆಲದಡಿ ಹಾಸಲಾಗಿದೆ. ಇಂದು ಕಾಶಿಯ ಹಲವು ಕುಂಡಗಳಾಗಲಿ, ದೇವಸ್ಥಾನಗಳಿಗೆ ಹೋಗುವ ಮಾರ್ಗಗಳಾಗಲಿ, ಕಾಶಿಯ ಸಾಂಸ್ಕೃತಿಕ ಸ್ಥಳಗಳಾಗಲಿ ಎಲ್ಲವೂ ಪುನರುಜ್ಜೀವನಗೊಳ್ಳುತ್ತಿದೆ. ಈಗ ಸಿಎನ್‌ಜಿ ಇರುವ ಬೋಟ್‌ಗಳು ಕೂಡ ಗಂಗಾ ನದಿಯಲ್ಲಿ ಸಂಚಾರ ಆರಂಭಿಸಿವೆ. ಬನಾರಸ್‌ಗೆ ಭೇಟಿ ನೀಡುವ ಜನರು ರೋಪ್‌ವೇ ಸೌಲಭ್ಯವನ್ನು ಪಡೆಯುವ ದಿನ ತುಂಬಾ ದೂರವಿಲ್ಲ. ಅದು ಸ್ವಚ್ಛತಾ ಅಭಿಯಾನವಾಗಲಿ ಅಥವಾ ಕಾಶಿಯ ಘಟ್ಟಗಳ ಸ್ವಚ್ಛತೆಯಾಗಲಿ, ಬನಾರಸ್‌ನ ಜನರು ಮತ್ತು ಯುವಕರು ಇದನ್ನು ಸಾಮೂಹಿಕ ಆಂದೋಲನವಾಗಿ ಮಾಡಿದ್ದಾರೆ. ಕಾಶಿಯ ಜನರು ತಮ್ಮ ಶ್ರಮದಿಂದ ಇದನ್ನು ಮಾಡಿದ್ದಾರೆ. ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಹಾಗಾಗಿ ಈ ಕಾರ್ಯಕ್ರಮದ ಮೂಲಕ ಕಾಶಿಯ ಜನತೆಯನ್ನು ಹೊಗಳಿ ಅಭಿನಂದಿಸಲು ಸಾದ್ಯವಿಲ್ಲ!
ಮತ್ತು ಸ್ನೇಹಿತರೆ,
ನನ್ನ ಕಾಶಿಯ ಜನರು ನಿಮಗೆ ಸೇವೆ ಸಲ್ಲಿಸಲು ಮತ್ತು ನಿಮ್ಮನ್ನು ಅಭಿನಂದಿಸಲು ಹಿಂದೆ ಬೀಳುವುದಿಲ್ಲ ಎಂದು ನಾನು ಪೂರ್ಣ ವಿಶ್ವಾಸದಿಂದ ಹೇಳುತ್ತೇನೆ. ಬಾಬಾ ಅವರ ಆಶೀರ್ವಾದ, ಕಾಲಭೈರವ ಮತ್ತು ಅನ್ನಪೂರ್ಣ ಮಾತೆಯ ದರ್ಶನವು ಭವ್ಯವಾಗಿದೆ. ಗಂಗಾ ಜೀಯಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ಆತ್ಮವು ಆನಂದಮಯವಾಗುತ್ತದೆ. ಇದಲ್ಲದೆ, ಈ ಬೇಸಿಗೆಯಲ್ಲಿ ನೀವು ಸವಿಯಲು 'ಕಾಶಿ ಕಿ ಲಸ್ಸಿ' ಮತ್ತು 'ತಂಡೈ' ಕೂಡ ಇದೆ. ಬನಾರಸ್ ಕಿ ಚಾತ್, ಲಿಟ್ಟಿ-ಚೋಖಾ ಮತ್ತು ಬನಾರಸಿ ಪಾನ್‌ನ ರುಚಿ ನಿಮ್ಮ ಪ್ರವಾಸವನ್ನು ಇನ್ನಷ್ಟು ಸ್ಮರಣೀಯವಾಗಿಸುತ್ತದೆ. ನಾನು ನಿಮಗೆ ಇನ್ನೂ ಒಂದು ವಿನಂತಿ ಮಾಡುತ್ತೇನೆ. ನಿಮ್ಮ ಜಾಗದಲ್ಲಿ ಮರದ ಏಟಿಕೊಪ್ಪಕ ಆಟಿಕೆಗಳು ಹೇಗೆ ಪ್ರಸಿದ್ಧವೋ, ಅದೇ ರೀತಿ ಬನಾರಸ್ ಕೂಡ ಮರದ ಆಟಿಕೆಗಳಿಗೆ ಪ್ರಸಿದ್ಧವಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ನಮ್ಮ ಸ್ನೇಹಿತರು ಮರದ ಬನಾರಸಿ ಆಟಿಕೆಗಳು, ಬನಾರಸಿ ಸೀರೆಗಳು, ಬನಾರಸಿ ಸಿಹಿತಿಂಡಿಗಳು ಮತ್ತು ಅಂತಹ ಅನೇಕ ವಸ್ತುಗಳನ್ನು ತಮ್ಮೊಂದಿಗೆ ಕೊಂಡೊಯ್ಯಬಹುದು. ಈ ವಿಷಯಗಳು ನಿಮ್ಮ ಸಂತೋಷವನ್ನು ಬಹುಮಟ್ಟಿಗೆ ಹೆಚ್ಚಿಸುತ್ತವೆ.
ಸ್ನೇಹಿತರೆ,
ನಮ್ಮ ಪೂರ್ವಜರು ಭಾರತ ಮಾತೆಯ ರೂಪವನ್ನು ಪೂರ್ಣಗೊಳಿಸಿದ ವಿವಿಧ ಕೇಂದ್ರಗಳಲ್ಲಿ ಭಾರತದ ಧಾರ್ಮಿಕ ಸಾರವನ್ನು ಹೆಚ್ಚಿಸಿದರು. ಕಾಶಿಯಲ್ಲಿ ಬಾಬಾ ವಿಶ್ವನಾಥ್ ಇದ್ದರೆ, ಆಂಧ್ರದಲ್ಲಿ ಮಲ್ಲಿಕಾರ್ಜುನ ಮತ್ತು ತೆಲಂಗಾಣದಲ್ಲಿ ರಾಜ್-ರಾಜೇಶ್ವರ ದೇವರಿದ್ದಾರೆ. ಕಾಶಿಯು ವಿಶಾಲಾಕ್ಷಿ ಶಕ್ತಿಪೀಠ ಹೊಂದಿದ್ದರೆ, ಆಂಧ್ರದಲ್ಲಿ ಮಾತೆ ಭ್ರಮರಾಂಬ ಮತ್ತು ತೆಲಂಗಾಣದಲ್ಲಿ ರಾಜರಾಜೇಶ್ವರಿ ಇದೆ. ಅಂತಹ ಎಲ್ಲಾ ಪವಿತ್ರ ಸ್ಥಳಗಳು ಭಾರತದ ಪ್ರಮುಖ ಕೇಂದ್ರಗಳಾಗಿವೆ ಮತ್ತು ಅದರ ಸಾಂಸ್ಕೃತಿಕ ಗುರುತು ಹೊಂದಿವೆ. ದೇಶದ ಈ ವೈವಿಧ್ಯತೆಯನ್ನು ನಾವು ಒಟ್ಟಾರೆಯಾಗಿ ನೋಡಬೇಕು. ಆಗ ಮಾತ್ರ ನಾವು ನಮ್ಮ ಪರಿಪೂರ್ಣತೆಯನ್ನು ತಿಳಿಯಲು ಸಾಧ್ಯವಾಗುತ್ತದೆ. ಆಗ ಮಾತ್ರ ನಾವು ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಜಾಗೃತಗೊಳಿಸಲು ಸಾಧ್ಯವಾಗುತ್ತದೆ. ಗಂಗಾ ಪುಷ್ಕರಾಳು ಮುಂತಾದ ಹಬ್ಬಗಳು ಈ ದೇಶ ಸೇವೆಯ ಸಂಕಲ್ಪವನ್ನು ಮುಂದುವರೆಸಿಕೊಂಡು ಹೋಗುತ್ತವೆ ಎಂದು ನನಗೆ ಖಾತ್ರಿಯಿದೆ.
ಈ ಎಲ್ಲಾ ನಿರೀಕ್ಷೆಯೊಂದಿಗೆ ನಾನು ಮತ್ತೊಮ್ಮೆ ನಿಮಗೆ ಶುಭ ಹಾರೈಸುತ್ತೇನೆ. ನಿಮ್ಮ ಈ ಪಯಣ ಫಲಪ್ರದವಾಗಲಿ, ಸುಖಕರವಾಗಲಿ ಮತ್ತು ಕಾಶಿಯಿಂದ ಹೊಸ ನೆನಪುಗಳನ್ನು ಮೆಲುಕು ಹಾಕುತ್ತಾ ನಿಮ್ಮ ಮನದಲ್ಲಿ ದಿವ್ಯತೆ ತುಂಬಲಿ. ಇದನ್ನೇ ನಾನು ಬಾಬಾ ಅವರ ಪಾದಗಳಿಗೆ ನಮಿಸುತ್ತೇನೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.