ಡಿಜಿಟಲ್ ಇಂಡಿಯಾ ಸಪ್ತಾಹ 2022 ರ ಧ್ಯೇಯ ವಾಕ್ಯ: ನವ ಭಾರತದ ತಂತ್ರಜ್ಞಾನ ದಶಕಕ್ಕೆ ವೇಗವರ್ಧನೆ (ಕ್ಯಾಟಲೈಸಿಂಗ್ ನ್ಯೂ ಇಂಡಿಯಾಸ್ ಟೆಕ್ಕೇಡ್)
ಪ್ರಧಾನಮಂತ್ರಿಯವರಿಂದ ‘ಡಿಜಿಟಲ್ ಇಂಡಿಯಾ ಭಾಷಿಣಿ’, ‘ಡಿಜಿಟಲ್ ಇಂಡಿಯಾ ಜೆನೆಸಿಸ್’ ಮತ್ತು ‘Indiastack.global’ ಗೆ ಚಾಲನೆ; 'ಮೈ ಸ್ಕೀಮ್‌ ' ಮತ್ತು ಮೇರಿ ಪೆಹಚಾನ್' ರಾಷ್ಟ್ರಕ್ಕೆ ಸಮರ್ಪಣೆ
ಚಿಪ್ಸ್ ಟು ಸ್ಟಾರ್ಟ್ಅಪ್ ಕಾರ್ಯಕ್ರಮದ ಅಡಿಯಲ್ಲಿ ಬೆಂಬಲಿತವಾಗಿರುವ 30 ಸಂಸ್ಥೆಗಳ ಮೊದಲ ಸಮೂಹವನ್ನು ಘೋಷಿಸಿದ ಪ್ರಧಾನಿ
"ಭಾರತವು ಉದ್ಯಮ 4.0, ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದೆ"
"ಭಾರತವು ಆನ್‌ಲೈನ್‌ನಿಂದಾಗಿ ಸರತಿ ಸಾಲುಗಳಿಗೆ ಅಂತ್ಯ ಹಾಡಿದೆ"
"ಡಿಜಿಟಲ್ ಇಂಡಿಯಾವು ಸರ್ಕಾರವನ್ನು ನಾಗರಿಕರ ಮನೆ ಬಾಗಿಲಿಗೆ ಮತ್ತು ಫೋನ್‌ಗಳಿಗೆ ತಲುಪಿಸಿದೆ"
"ಭಾರತದ ಫಿನ್‌ಟೆಕ್ ಪ್ರಯತ್ನವು ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ನೈಜ ಪರಿಹಾರವಾಗಿದೆ"
"ನಮ್ಮ ಡಿಜಿಟಲ್ ಪರಿಹಾರಗಳಲ್ಲಿ ಪ್ರಮಾಣ, ಭದ್ರತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿವೆ"
“ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು 300 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯಲ್ಲಿ ಭಾರತ ಕಾರ್ಯನಿರ್ವಹಿಸುತ್ತಿದೆ.”
"ಭಾರತವು ಚಿಪ್ ಪಡೆದುಕೊಳ್ಳುವ ರಾಷ್ಟ್ರದ ಬದಲು ಚಿಪ್ ತಯಾರಕನಾಗಲು ಬಯಸುತ್ತದೆ."

ನಮಸ್ತೆ!

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಶ್ರೀ ರಾಜೀವ್ ಚಂದ್ರಶೇಖರ್ ಅವರೇ, ವಿವಿಧ ರಾಜ್ಯಗಳ ಎಲ್ಲಾ ಪ್ರತಿನಿಧಿಗಳೇ, ಡಿಜಿಟಲ್ ಇಂಡಿಯಾದ ಎಲ್ಲಾ ಫಲಾನುಭವಿಗಳೇ, ನವೋದ್ಯಮಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರೇ, ತಜ್ಞರೇ, ಶಿಕ್ಷಣ ತಜ್ಞರೇ, ಸಂಶೋಧಕರೇ, ಮಹಿಳೆಯರೇ ಮತ್ತು ಮಹನೀಯರೇ!

ಇಂದಿನ ಕಾರ್ಯಕ್ರಮವು ಈ 21ನೇ ಶತಮಾನದಲ್ಲಿ ಹೆಚ್ಚೆಚ್ಚು ಆಧುನಿಕವಾಗುತ್ತಿರುವ ಭಾರತದ ಒಂದು ಇಣುಕುನೋಟವಾಗಿದೆ. ʻಡಿಜಿಟಲ್ ಇಂಡಿಯಾʼ ಅಭಿಯಾನದ ರೂಪದಲ್ಲಿ ತಂತ್ರಜ್ಞಾನದ ಬಳಕೆಯು ಇಡೀ ಮನುಕುಲಕ್ಕೆ ಎಷ್ಟು ಕ್ರಾಂತಿಕಾರಕವಾಗಬಲ್ಲದು ಎಂಬುದನ್ನು ಭಾರತವು ವಿಶ್ವದ ಮುಂದೆ ಪ್ರದರ್ಶಿಸಿದೆ.

ಎಂಟು ವರ್ಷಗಳ ಹಿಂದೆ ಪ್ರಾರಂಭವಾದ ಈ ಅಭಿಯಾನವು ಬದಲಾಗುತ್ತಿರುವ ಕಾಲದೊಂದಿಗೆ ವಿಸ್ತರಿಸುತ್ತಿದೆ ಎಂಬುದು ಸಂತೋಷದ ವಿಚಾರ. ಪ್ರತಿ ವರ್ಷ ʻಡಿಜಿಟಲ್ ಇಂಡಿಯಾʼ ಅಭಿಯಾನಕ್ಕೆ ಹೊಸ ಆಯಾಮಗಳನ್ನು ಸೇರಿಸಲಾಗುತ್ತದೆ ಮತ್ತು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಪ್ರಾರಂಭಿಸಲಾದ ಹೊಸ ವೇದಿಕೆಗಳು ಮತ್ತು ಕಾರ್ಯಕ್ರಮಗಳು ಈ ಸರಪಳಿಯನ್ನು ಮುಂದಕ್ಕೆ ಕೊಂಡೊಯ್ಯುತ್ತವೆ. ನೀವು ಸಣ್ಣ ವೀಡಿಯೊಗಳಲ್ಲಿ ನೋಡಿದಂತೆ, ಅದು ʻಮೈಸ್ಕೀಮ್ʼ(myScheme) ಆಗಿರಲಿ, ʻಭಾಶಿನಿ-ಭಾಶದಾನ್ʼ(Bhashini-Bhashadaan) ಆಗಿರಲಿ, ʻಡಿಜಿಟಲ್ ಇಂಡಿಯಾʼ - ʻಜೆನೆಸಿಸ್ʼ ಇರಲಿ, ನವೋದ್ಯಮಗಳಿಗೆ ಚಿಪ್ಸ್ ಅಥವಾ ಇತರ ಎಲ್ಲಾ ಉತ್ಪನ್ನಗಳ ಪೂರೈಕೆ ಇರಲಿ, ಇವೆಲ್ಲವೂ ʻಸುಲಭ ಜೀವನ ನಿರ್ವಹಣೆʼ ಮತ್ತು ʻಸುಲಭ ವ್ಯವಹಾರ ನಿರ್ವಹಣೆʼಯನ್ನು ಬಲಪಡಿಸಲಿವೆ. ವಿಶೇಷವಾಗಿ, ಇದು ಭಾರತದ ನವೋದ್ಯಮ ಪರಿಸರ ವ್ಯವಸ್ಥೆಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಸ್ನೇಹಿತರೇ,

ಕಾಲವು ತನ್ನ ಹಾದಿಯಲ್ಲಿ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೆ ಉಳಿದ ದೇಶವನ್ನು ಬಿಟ್ಟು ಮುಂದೆ ಸಾಗುತ್ತಿರುತ್ತದೆ. ಮೂರನೇ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಭಾರತವು ಇದಕ್ಕೆ ಬಲಿಪಶುವಾಗಿತ್ತು. ಆದರೆ ಇಂದು ʻಉದ್ಯಮ-4.0ʼ ಎಂದು ಕರೆಯಲಾಗುವ ʻನಾಲ್ಕನೇ ಕೈಗಾರಿಕಾ ಕ್ರಾಂತಿಯʼ ಸಮಯದಲ್ಲಿ ಇಡೀ ವಿಶ್ವಕ್ಕೆ ಭಾರತವು ಮಾರ್ಗದರ್ಶನ ನೀಡುತ್ತಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಈ ನಿಟ್ಟಿನಲ್ಲಿಯೂ ಗುಜರಾತ್ ಪ್ರಮುಖ ಪಾತ್ರ ವಹಿಸಿರುವುದು ನನಗೆ ತುಂಬಾ ಸಂತೋಷ ತಂದಿದೆ.

ಸ್ವಲ್ಪ ಸಮಯದ ಹಿಂದಷ್ಟೇ, ಡಿಜಿಟಲ್ ಆಡಳಿತಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಶಕಗಳ ಗುಜರಾತ್‌ ಅನುಭವಗಳನ್ನು ಪ್ರದರ್ಶಿಸಲಾಯಿತು. ʻಗುಜರಾತ್ ರಾಜ್ಯ ದತ್ತಾಂಶ ಕೇಂದ್ರʼ (ಜಿಎಸ್‌ಡಿಸಿ), ʻಗುಜರಾತ್ ಸ್ಟೇಟ್‌ ವೈಡ್ ಏರಿಯಾ ನೆಟ್ವರ್ಕ್ (ಜಿಎಸ್‌ಡಬ್ಲ್ಯೂಎಎನ್), ʻಇ-ಗ್ರಾಮ್ʼ ಕೇಂದ್ರಗಳು ಮತ್ತು ʻಎಟಿವಿಟಿʼ/ʻಜನ ಸೇವಾ ಕೇಂದ್ರʼಗಳಂತಹ ಸ್ತಂಭಗಳನ್ನು ನಿರ್ಮಿಸಿದ ದೇಶದ ಮೊದಲ ರಾಜ್ಯ ಗುಜರಾತ್ ಆಗಿದೆ.

ಸುಭಾಸ್ ಬಾಬು ಅವರು ಕಾಂಗ್ರೆಸ್ ಅಧ್ಯಕ್ಷರಾದ ಸಂದರ್ಭದ ಸ್ಮರಣಾರ್ಥ ಸೂರತ್‌ನ ಬಾರ್ಡೋಲಿ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ʻಇ-ಗ್ರಾಮ ವಿಶ್ವಗ್ರಾಮʼ ಯೋಜನೆಗೆ ಚಾಲನೆ ನೀಡಲಾಯಿತು.

2014ರ ನಂತರ ರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನವನ್ನು ಆಡಳಿತದ ವಿಶಾಲ ಭಾಗವಾಗಿ ಮಾಡಲು ಗುಜರಾತ್‌ನ ಅನುಭವಗಳು ಸಾಕಷ್ಟು ಸಹಾಯ ಮಾಡಿವೆ. ಇದಕ್ಕಾಗಿ ಗುಜರಾತ್‌ಗೆ ಧನ್ಯವಾದಗಳು. ಈ ಅನುಭವಗಳು ʻಡಿಜಿಟಲ್ ಇಂಡಿಯಾ ಅಭಿಯಾನʼಕ್ಕೆ ಆಧಾರವಾದವು. ಇಂದು ನಾವು ಹಿಂತಿರುಗಿ ನೋಡಿದರೆ, ಈ 7-8 ವರ್ಷಗಳಲ್ಲಿ ʻಡಿಜಿಟಲ್ ಇಂಡಿಯಾ ಯೋಜನೆʼ ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸಿದೆ ಎಂದು ನಮ್ಮ ಅರಿವಾಗುತ್ತದೆ. 21ನೇ ಶತಮಾನದಲ್ಲಿ ಜನಿಸಿದವರು, ಅಂದರೆ ನಮ್ಮ ಯುವ ಪೀಳಿಗೆಯವರು, ಡಿಜಿಟಲ್ ಜೀವನವನ್ನು ತುಂಬಾ ಸೊಗಸಾಗಿ ನೋಡುತ್ತಾರೆ, ಅವರ ಪಾಲಿಗೆ ಅದೊಂದು ರೀತಿಯಲ್ಲಿ ʻಫ್ಯಾಷನ್ ಸ್ಟೇಟ್‌ಮೆಂಟ್‌ʼ ಆಗಿದೆ.

8-10 ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಿ. ಜನನ ಪ್ರಮಾಣ ಪತ್ರ, ಬಿಲ್ಲುಗಳು, ಪಡಿತರ, ಪ್ರವೇಶಾತಿಗಳು, ಫಲಿತಾಂಶಗಳು ಮತ್ತು ಪ್ರಮಾಣಪತ್ರಗಳು ಮತ್ತು ಬ್ಯಾಂಕುಗಳ ಸೇವೆಗಳಿಗಾಗಿ ಸರತಿ ಸಾಲುಗಳು ಇರುತ್ತಿದ್ದವು. ಹಲವು ವರ್ಷಗಳಲ್ಲಿ, ಭಾರತವು ಆನ್‌ಲೈನ್ ಮಾರ್ಗದ ಮೂಲಕ ಸರದಿ ಸಾಲುಗಳ ಸಮಸ್ಯೆಯನ್ನು ಪರಿಹರಿಸಿದೆ. ಇಂದು, ಹಿರಿಯ ನಾಗರಿಕರಿಗೆ ಜನನ ಪ್ರಮಾಣಪತ್ರಗಳಿಂದ ಹಿಡಿದು, ಜೀವನ ಪ್ರಮಾಣಪತ್ರಗಳವರೆಗೆ ಹೆಚ್ಚಿನ ಸರಕಾರಿ ಸೇವೆಗಳು ಡಿಜಿಟಲ್ ಆಗಿವೆ. ಇಲ್ಲದಿದ್ದರೆ, ಹಿರಿಯ ನಾಗರಿಕರು, ವಿಶೇಷವಾಗಿ ಪಿಂಚಣಿದಾರರು, ತಾವು ಜೀವಂತವಾಗಿದ್ದೇವೆ ಎಂದು ಸಾಬೀತುಪಡಿಸಲು ಪ್ರತಿ ಬಾರಿಯೂ ಇಲಾಖೆಗಳಿಗೆ ಹೋಗಬೇಕಾಗಿತ್ತು. ಒಂದು ಕಾಲದಲ್ಲಿ ಇಡೀ ದಿನ ಹಿಡಿಯುತ್ತಿದ್ದ ಕೆಲಸಗಳನ್ನು ಈಗ ಕೆಲವೇ ಸೆಕೆಂಡುಗಳಲ್ಲಿ ಮಾಡಲಾಗುತ್ತಿದೆ.

ಸ್ನೇಹಿತರೇ,

ಇಂದು ಭಾರತವು ಡಿಜಿಟಲ್ ಆಡಳಿತಕ್ಕೆ ಅತ್ಯುತ್ತಮ ಮೂಲಸೌಕರ್ಯಗಳಲ್ಲಿ ಒಂದಾಗಿದೆ. ʻಜನ್‌ಧನ್-ಆಧಾರ್-ಮೊಬೈಲ್ʼ(ಜೆಎಎಂ) ಈ ಮೂರರ ತ್ರಿವಳಿಯು ದೇಶದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಪಾರದರ್ಶಕತೆಯೊಂದಿಗೆ ಇದು ಒದಗಿಸುವ ಸೌಲಭ್ಯವು ದೇಶದ ಕೋಟ್ಯಂತರ ಕುಟುಂಬಗಳ ಹಣವನ್ನು ಉಳಿಸುತ್ತಿದೆ. ಎಂಟು ವರ್ಷಗಳ ಹಿಂದೆ ಇಂಟರ್ನೆಟ್ ಡೇಟಾಕ್ಕಾಗಿ ಖರ್ಚು ಮಾಡಬೇಕಾದ ಹಣವು ಇಂದು ಅನೇಕ ಪಟ್ಟು ಕಡಿಮೆಯಾಗಿದೆ. ಇದು ಇಂದು ಬಹುತೇಕ ನಗಣ್ಯವೇ ಎಂದು ಹೇಳಬಹುದು. ಉತ್ತಮ ಡೇಟಾ ಸೌಲಭ್ಯವು ತೀರಾ ಸಾಮಾನ್ಯ ದರದಲ್ಲಿ ಲಭ್ಯವಿದೆ. ಈ ಹಿಂದೆ ಬಿಲ್ ಪಾವತಿ, ಅರ್ಜಿಗಳ ಸಲ್ಲಿಕೆ, ಬ್ಯಾಂಕ್ ಸಂಬಂಧಿತ ಕೆಲಸಗಳು, ಮುಂಗಡಾ ಕಾಯ್ದಿರಿಸುವಿಕೆ ಮುಂತಾದ ಪ್ರತಿಯೊಂದು ಸೇವೆಗಾಗಿ ಜನರು ಕಚೇರಿಗಳನ್ನು ಸುತ್ತಬೇಕಾಗಿತ್ತು. ರೈಲ್ವೆ ಟಿಕೆಟ್‌ ಮುಂಗಡ ಕಾಯ್ದಿರಿಸುವಿಕೆಗಾಗಿ, ಹಳ್ಳಿಯೊಂದರಲ್ಲಿ ವಾಸಿಸುವ ಬಡ ವ್ಯಕ್ತಿಯೊಬ್ಬರು ಬಸ್ ಪ್ರಯಾಣಕ್ಕಾಗಿ 100-150 ರೂಪಾಯಿಗಳನ್ನು ಖರ್ಚು ಮಾಡಿ ಹತ್ತಿರದ ನಗರಕ್ಕೆ ಹೋಗಬೇಕಾಗಿತ್ತು ಮತ್ತು ಇಡೀ ದಿನವನ್ನು ಸರದಿ ಸಾಲಿನಲ್ಲಿ ಕಾಯುತ್ತಾ ಕಳೆಯಬೇಕಾಗಿತ್ತು. ಇಂದು ಅವರು ತಮ್ಮ ಹಳ್ಳಿಯ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹದು ಮತ್ತು ಅವರ ಕೆಲಸವನ್ನು ಅಲ್ಲಿಂದಲೇ ಮಾಡಲಾಗುತ್ತದೆ. ಮತ್ತು ಹಳ್ಳಿಗರು ತಮ್ಮ ಹಳ್ಳಿಯಲ್ಲಿ ಅಂತಹ ವ್ಯವಸ್ಥೆಯ ಲಭ್ಯತೆ ಬಗ್ಗೆ ತಿಳಿದಿದ್ದಾರೆ. ಇದು ಬಸ್ ಟಿಕೆಟ್‌ನಂತಹ ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಿದೆ ಮತ್ತು ಪ್ರಯಾಣದ ಸಮಯವನ್ನು ಉಳಿಸಿದೆ. ಕಷ್ಟಪಟ್ಟು ದುಡಿಯುವ ಬಡ ಜನರಿಗೆ ಈ ಉಳಿತಾಯವು ಇನ್ನೂ ಹೆಚ್ಚಿನದ್ದೆಂದೇ ಹೇಳಬಹುದು, ಏಕೆಂದರೆ ಇದರಿಂದ ಅವರ ಇಡೀ ದಿನವು ಉಳಿತಾಯವಾಗುತ್ತದೆ.

'ಸಮಯವೇ ಹಣ' ಎಂದು ಹೇಳುವುದನ್ನು ನಾವು ಆಗಾಗ್ಗೆ ಕೇಳುತ್ತೇವೆ. ಇದು ಕೇಳಲು ಚೆನ್ನಾಗಿರುತ್ತದೆ, ಆದರೆ ಅದರ ಮೊದಲ ಅನುಭವವನ್ನು ನೀವು ಕೇಳಿದಾಗ ಅದು ಹೃದಯಸ್ಪರ್ಶಿಯಾಗಿರುತ್ತದೆ. ಇತ್ತೀಚೆಗೆ ನಾನು ಕಾಶಿಗೆ ಹೋಗಿದ್ದೆ. ನನ್ನ ಭೇಟಿಯು ಸಂಚಾರ ದಟ್ಟಣೆಯನ್ನು ಉಂಟುಮಾಡುವುದರಿಂದ ಮತ್ತು ಹಗಲಿನ ಸಮಯದಲ್ಲಿ ಜನರಿಗೆ ಅನಾನುಕೂಲವಾಗುವುದರಿಂದ, ಕಾಮಗಾರಿ ವೀಕ್ಷಣೆಗಾಗಿ ನಾನು ತಡರಾತ್ರಿ ರೈಲ್ವೆ ನಿಲ್ದಾಣಕ್ಕೆ ಹೋದೆ. ನಾನು ಕಾಶಿಯ ಸಂಸದನಾಗಿರುವುದರಿಂದ, ವಿವಿಧ ವಿಚಾರಗಳಿಗಾಗಿ ನಾನು ಅಲ್ಲಿಗೆ ಹೋಗಬೇಕಾಗುತ್ತದೆ. ನಾನು ಪ್ರಯಾಣಿಕರು ಮತ್ತು ಸ್ಟೇಷನ್ ಮಾಸ್ಟರ್ ಅವರೊಂದಿಗೆ ಮಾತನಾಡುತ್ತಿದ್ದೆ. ಇದು ದಿಢೀರ್‌ ಭೇಟಿಯಾಗಿದ್ದರಿಂದ ಅವರಾರಿಗೂ ಅದರ ಬಗ್ಗೆ ತಿಳಿದಿರಲಿಲ್ಲ. ನಾನು ಜನರನ್ನು ಮಾತನಾಡಿಸಿ, ಅವರ ಅನುಭವಗಳು ಮತ್ತು ʻವಂದೇ ಭಾರತ್ʼ ರೈಲುಗಳಲ್ಲಿ ಸೀಟು ಭರ್ತಿ ಬಗ್ಗೆ ವಿಚಾರಿಸಿದೆ. ಆ ರೈಲಿನ ಟಿಕೆಟ್ ಸ್ವಲ್ಪ ದುಬಾರಿಯಾಗಿರುವ ಕಾರಣದಿಂದಾಗಿ ನಾನು ಕೇಳಿದೆ. ಆ ರೈಲಿಗೆ ಭಾರಿ ಬೇಡಿಕೆ ಇದೆ ಎಂದು ಅವರು ಹೇಳಿದರು. ಕಾರ್ಮಿಕರು ಮತ್ತು ಬಡವರು ಈ ರೈಲಿನಲ್ಲಿ ಹೆಚ್ಚು ಪ್ರಯಾಣಿಸುತ್ತಾರೆ ಎಂದು ಹೇಳಿದ್ದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಈ ರೈಲಿಗೆ ತಮ್ಮ ಆದ್ಯತೆಯ ಹಿಂದೆ ಎರಡು ಕಾರಣಗಳನ್ನು ಅವರು ಉಲ್ಲೇಖಿಸಿದರು. ಮೊದಲನೆಯದಾಗಿ, ʻವಂದೇ ಭಾರತ್ʼ ರೈಲು ತಮ್ಮ ಸಾಮಾನು ಸರಂಜಾಮುಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ ಮತ್ತು ಎರಡನೆಯದಾಗಿ, ಇದು ಅವರ ಸಮಯವನ್ನು ಕನಿಷ್ಠ ನಾಲ್ಕು ಗಂಟೆಗಳಷ್ಟು ಉಳಿಸುತ್ತದೆ. ಅವರು ತಮ್ಮ ಗಮ್ಯಸ್ಥಾನವನ್ನು ಬೇಗನೆ ತಲುಪುವುದರಿಂದ, ಅವರು ತಕ್ಷಣವೇ ಕೆಲಸವನ್ನು ಮುಗಿಸಿಕೊಳ್ಳುತ್ತಾರೆ. ಟಿಕೆಟ್‌ನ ವೆಚ್ಚವನ್ನು ಅವರು ಆರರಿಂದ ಎಂಟು ಗಂಟೆಗಳಲ್ಲಿ ಗಳಿಸುವ ಹಣದಿಂದ ಸರಿದೂಗಿಸಿಕೊಳ್ಳುತ್ತಾರೆ. ವಿದ್ಯಾವಂತರಿಗೆ ಹೋಲಿಸಿದರೆ 'ಸಮಯವೇ ಹಣ'ದ ಮೌಲ್ಯವನ್ನು ಬಡವರು ಉತ್ತಮವಾಗಿ ಗುರುತಿಸಬಲ್ಲರು.

ಸ್ನೇಹಿತರೇ,

ʻಇ-ಸಂಜೀವಿನಿʼಯಂತಹ ʻಟೆಲಿ-ಕನ್ಸಲ್ಟೇಷನ್ʼ ಸೇವೆಗಳನ್ನು ಪ್ರಾರಂಭಿಸುವುದರೊಂದಿಗೆ, ದೊಡ್ಡ ಆಸ್ಪತ್ರೆಗಳು ಮತ್ತು ಹಿರಿಯ ವೈದ್ಯರ ಭೇಟಿ ಅವಕಾಶದಂತಹ ಅನೇಕ ಮೂಲಭೂತ ಅವಶ್ಯಕತೆಗಳನ್ನು ಮೊಬೈಲ್ ಫೋನ್‌ಗಳ ಮೂಲಕವೇ ಈಡೇರಿಸಲಾಗುತ್ತಿದೆ. ಇಲ್ಲಿಯವರೆಗೆ ಮೂರು ಕೋಟಿಗೂ ಹೆಚ್ಚು ಜನರು ಈ ಸೇವೆಯನ್ನು ಪಡೆದುಕೊಂಡಿದ್ದಾರೆ ಮತ್ತು ದೊಡ್ಡ ಆಸ್ಪತ್ರೆಗಳ ಹಿರಿಯ ವೈದ್ಯರನ್ನು ಅವರ ಮನೆಗಳಿಂದಲೇ ಸಂಪರ್ಕಿಸಿದ್ದಾರೆ. ನಗರಗಳಲ್ಲಿ ವೈದ್ಯರನ್ನು ಭೇಟಿ ಮಾಡಬೇಕಾದರೆ ಅದು ಎಷ್ಟು ಕಷ್ಟಕರವಾಗಿರುತ್ತದೆ ಮತ್ತು ಇದಕ್ಕಾಗಿ ಎಷ್ಟು ಹಣವನ್ನು ಖರ್ಚು ಮಾಡಬೇಕಾಗಬಹುದು ಎಂದು ನೀವು ಊಹಿಸಬಹುದು. ʻಡಿಜಿಟಲ್ ಇಂಡಿಯಾʼ ಸೇವೆಯಿಂದಾಗಿ ಈ ಎಲ್ಲಾ ಸಮಸ್ಯೆಗಳು ಈಗ ಬಗೆಹರಿದಿವೆ.

ಸ್ನೇಹಿತರೇ,

ಎಲ್ಲಕ್ಕಿಂತ ಮುಖ್ಯವಾಗಿ, ಡಿಲಿಟಲ್‌ ಕ್ರಾಂತಿಯ ಪರಿಣಾಮವಾಗಿ ಬಂದ ಪಾರದರ್ಶಕತೆಯು ಬಡ ಮತ್ತು ಮಧ್ಯಮ ವರ್ಗದ ಜನರನ್ನು ವಿವಿಧ ಹಂತಗಳಲ್ಲಿನ ಭ್ರಷ್ಟಾಚಾರದಿಂದ ಮುಕ್ತಗೊಳಿಸಿದೆ. ಲಂಚವನ್ನು ಪಾವತಿಸದೆ ಯಾವುದೇ ಸೌಲಭ್ಯವನ್ನು ಪಡೆಯುವುದು ಕಷ್ಟಕರವಾಗಿದ್ದ ಸಮಯವನ್ನು ನಾವು ನೋಡಿದ್ದೇವೆ. ʻಡಿಜಿಟಲ್ ಇಂಡಿಯಾʼವು ಸಾಮಾನ್ಯ ಕುಟುಂಬದ ಈ ʻಹೊರೆʼಯನ್ನು ತಪ್ಪಿಸಿದೆ. ʻಡಿಜಿಟಲ್ ಇಂಡಿಯಾʼವು ಮಧ್ಯವರ್ತಿಗಳ ಜಾಲವನ್ನು ಸಹ ತೊಡೆದುಹಾಗಿದೆ.

ಶಾಸನಸಭೆಯಲ್ಲಿ ನಡೆದ ಒಂದು ಚರ್ಚೆಯು ನನಗೆ ಇನ್ನೂ ಚೆನ್ನಾಗಿ ನೆನಪಿದೆ, ಪತ್ರಕರ್ತರಿಗೂ ಅದು ನೆನಪಿರಬಹುದು. ಅದು ವಿಧವೆಯರಿಗೆ ಪಿಂಚಣಿಗೆ ಸಂಬಂಧಿಸಿದ ವಿಷಯವಾಗಿತ್ತು. ಆ ಸಮಯದಲ್ಲಿ, ನಾನು ಅಂಚೆ ಕಚೇರಿಗಳಲ್ಲಿ ವಿಧವಾ ಸಹೋದರಿಯರ ಖಾತೆಗಳನ್ನು ತೆರೆಯಲು ಪ್ರಸ್ತಾಪಿಸಿದ್ದೆ, ಅಲ್ಲಿ ಅವರ ಭಾವಚಿತ್ರ ಮತ್ತು ಇತರ ಅಗತ್ಯ ವಿವರಗಳಿರುತ್ತವೆ, ಇದರಿಂದ ಅವರು ತಮ್ಮ ಪಿಂಚಣಿಯನ್ನು ಸಕಾಲದಲ್ಲಿ ಪಡೆಯಬಹುದು ಎಂದು ಹೇಳಿದೆ. ಆದರೆ ಇದು ಕೋಲಾಹಲಕ್ಕೆ ಕಾರಣವಾಯಿತು. ವಿಧವೆ ಸಹೋದರಿ ತನ್ನ ಮನೆಯಿಂದ ಹೊರಬರುವುದಾದರೂ ಹೇಗೆ? ಪಿಂಚಣಿ ಪಡೆಯಲು ಅವರು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೇಗೆ ಹೋಗುತ್ತಾರೆ? ಎಂದು ಜನರು ನನ್ನನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಆ ಸಮಯದಲ್ಲಿ ನೀವು ಅವರ ಭಾಷಣಗಳನ್ನು ಗಮನಿಸಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ. ನಾನು ನನ್ನ ಉದ್ದೇಶದ ಬಗ್ಗೆ ಅವರಿಗೆ ಹೇಳಿದೆ ಜೊತೆಗೆ ಅವರ ಸಹಾಯವನ್ನೂ ಕೋರಿದೆ. ಆದರೆ ಅವರು ಹಾಗೆ ಮಾಡಲಿಲ್ಲ. ಜನರು ನಮ್ಮನ್ನು ಬೆಂಬಲಿಸಿದ್ದರಿಂದ ನಾವು ಈ ವಿಚಾರದಲ್ಲಿ ಮುಂದೆ ಸಾಗಿದೆವು. ಆದರೆ ಅವರು ಏಕೆ ಗಲಾಟೆ ಮಾಡುತ್ತಿದ್ದರು? ಅವರು ವಿಧವೆಯರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಾನು ಅಂಚೆ ಕಚೇರಿಗಳಲ್ಲಿ ಛಾಯಾಚಿತ್ರಗಳು ಮತ್ತು ಗುರುತಿನ ಚೀಟಿಗಳ ವ್ಯವಸ್ಥೆ ಮಾಡಿದಾಗ, ಆ ಸಮಯದಲ್ಲಿ ಡಿಜಿಟಲ್ ಜಗತ್ತು ಅಷ್ಟೊಂದು ಮುಂದುವರಿದಿರಲಿಲ್ಲ. ತಮ್ಮ ಮಗಳ ಜನನ ಮತ್ತು ಪಿಂಚಣಿ ಹಣ ಬಿಡುಗಡೆಗೆ ಮುನ್ನವೇ ವಿಧವೆಯರಾದ ಅನೇಕ ಮಹಿಳೆಯರು ಇದ್ದರು ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಅಂಥವರ ಪಿಂಚಣಿ ಹಣ ಯಾರ ಖಾತೆಗೆ ಹೋಗುತ್ತಿದೆ ಎಂದು ನಿಮಗೆ ಅರ್ಥವಾಗಿರಬಹುದು. ಈ ಕಾರಣದಿಂದಾಗಿಯೇ ಇಷ್ಟೊಂದು ಕೋಲಾಹಲ ಎಬ್ಬಿಸಲಾಯಿತು. ಅಂತಹ ಎಲ್ಲಾ ರಂಧ್ರಗಳನ್ನು ಮುಚ್ಚಿದರೆ ಕೆಲವು ಜನರು ಸ್ವಾಭಾವಿಕವಾಗಿಯೇ ವಿಚಲಿತರಾಗುತ್ತಾರೆ. ತಂತ್ರಜ್ಞಾನವನ್ನು ಬಳಸಿಕೊಂಡು, ಕಳೆದ ಎಂಟು ವರ್ಷಗಳಲ್ಲಿ ನೇರ ಲಾಭ ವರ್ಗಾವಣೆಯ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 23 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ನೇರವಾಗಿ ಕಳುಹಿಸಲಾಗಿದೆ. ಈ ತಂತ್ರಜ್ಞಾನದಿಂದಾಗಿ, ದೇಶದ 2.23 ಲಕ್ಷ ಕೋಟಿ ರೂಪಾಯಿಗಳನ್ನು ಅಂದರೆ ಸುಮಾರು 2.25 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಲಾಗಿದೆ, ಇಲ್ಲದಿದ್ದರೆ ಅದು ಮಧ್ಯವರ್ತಿಗಳ ಕೈ ಸೇರುತ್ತಿತ್ತು.

ಸ್ನೇಹಿತರೇ,

ʻಡಿಜಿಟಲ್ ಇಂಡಿಯಾʼ ಅಭಿಯಾನದ ಒಂದು ದೊಡ್ಡ ಸಾಧನೆಯೆಂದರೆ ಇದು ನಗರಗಳು ಮತ್ತು ಹಳ್ಳಿಗಳ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ನಗರಗಳಲ್ಲಿ ಕೆಲವು ಸೌಲಭ್ಯಗಳು ಲಭ್ಯವಿದ್ದವು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಹಳ್ಳಿಗಳ ಜನರಿಗೆ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಹಳ್ಳಿಗಳು ಮತ್ತು ನಗರಗಳ ನಡುವಿನ ಅಂತರವು ಮುಂದೊಂದು ದಿನ ಕಡಿಮೆಯಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿರಲಿಲ್ಲ. ಒಂದು ಸಣ್ಣ ವಿಷಯಕ್ಕಾಗಿಯೂ ಜನರು ಹೋಬಳಿ, ತಾಲೂಕು ಅಥವಾ ಜಿಲ್ಲಾ ಕೇಂದ್ರಗಳ ಕಚೇರಿಗಳಿಗೆ ಅಲೆದಾಡುವ ಅನಿವಾರ್ಯತೆಯಿತ್ತು. ʻಡಿಜಿಟಲ್ ಇಂಡಿಯಾʼ ಅಭಿಯಾನವು ಅಂತಹ ಎಲ್ಲಾ ತೊಂದರೆಗಳನ್ನು ನಿವಾರಿಸಿದೆ ಮತ್ತು ಫೋನ್ ಮೂಲಕ ತನ್ನ ಹಳ್ಳಿಯ ಪ್ರತಿಯೊಬ್ಬ ನಾಗರಿಕನ ಮನೆ ಬಾಗಿಲಿಗೆ ಸರಕಾರವನ್ನು ಕೊಂಡೊಯ್ದಿದೆ.

ಕಳೆದ ಎಂಟು ವರ್ಷಗಳಲ್ಲಿ ನೂರಾರು ಸರಕಾರಿ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸಲು ಹಳ್ಳಿಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಹೊಸ ʻಸಾಮಾನ್ಯ ಸೇವಾ ಕೇಂದ್ರʼಗಳನ್ನು ತೆರೆಯಲಾಗಿದೆ. ಇಂದು, ಹಳ್ಳಿಗಳ ಜನರು ಈ ಕೇಂದ್ರಗಳಿಂದ ʻಡಿಜಿಟಲ್ ಇಂಡಿಯಾʼದ ಲಾಭವನ್ನು ಪಡೆಯುತ್ತಿದ್ದಾರೆ.

ನಾನು ಇತ್ತೀಚೆಗೆ ದಾಹೋಡ್‌ಗೆ ಹೋದಾಗ ನನ್ನ ಬುಡಕಟ್ಟು ಸಹೋದರ ಮತ್ತು ಸಹೋದರಿಯರನ್ನು ಭೇಟಿಯಾಗಿದ್ದೆ. 30-32 ವರ್ಷ ವಯಸ್ಸಿನ ದಿವ್ಯಾಂಗ ದಂಪತಿಯೂ ಅವರಲ್ಲಿದ್ದರು. ಅವರು ʻಮುದ್ರಾʼ ಯೋಜನೆ ಅಡಿಯಲ್ಲಿ ಸಾಲ ಪಡೆದು, ಕಂಪ್ಯೂಟರ್‌ ಮೂಲಾಂಶಗಳನ್ನು ಕಲಿತ ಬಳಿಕ ದಾಹೋದ್‌ನ ಬುಡಕಟ್ಟು ಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ʻಸಾಮಾನ್ಯ ಸೇವಾ ಕೇಂದ್ರʼವನ್ನು ಪ್ರಾರಂಭಿಸಿದ್ದರು. ಆ ದಂಪತಿ ನನ್ನನ್ನು ಭೇಟಿಯಾದರು. ಪ್ರಸ್ತುತ ತಮ್ಮ ಸರಾಸರಿ ಮಾಸಿಕ ಆದಾಯವು 28,000 ರೂ. ಮತ್ತು ತಮ್ಮ ಹಳ್ಳಿಯ ಎಲ್ಲಾ ಜನರು ಈ ಸೇವೆಗಳನ್ನು ಬಳಸುತ್ತಿದ್ದಾರೆ ಎಂದು ಅವರು ಹೇಳಿದರು. ಸಹೋದರರೇ, ʻಡಿಜಿಟಲ್ ಇಂಡಿಯಾʼದ ಶಕ್ತಿಯನ್ನು ನೋಡಿ. 1.25 ಲಕ್ಷಕ್ಕೂ ಹೆಚ್ಚು ʻಸಾಮಾನ್ಯ ಸೇವಾ ಕೇಂದ್ರʼಗಳು ಇ-ಕಾಮರ್ಸ್ ಅನ್ನು ಗ್ರಾಮೀಣ ಭಾರತಕ್ಕೆ ಹತ್ತಿರವಾಗಿಸುತ್ತಿವೆ.

ವ್ಯವಸ್ಥೆಗಳು ಹೇಗೆ ಅನುಕೂಲಕರವಾಗಬಲ್ಲವೆಂದು ಸಾಬೀತುಪಡಿಸಬಹುದು ಎಂದು ನಾನು ನಿಮ್ಮೊಂದಿಗೆ ಮತ್ತೊಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ನಾನು ಗುಜರಾತ್ನಲ್ಲಿದ್ದಾಗ, ರೈತರು ತಮ್ಮ ವಿದ್ಯುತ್ ಬಿಲ್‌ಗಳನ್ನು ಪಾವತಿಸುವಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದದ್ದು ನನಗೆ ಇನ್ನೂ ನೆನಪಿದೆ. 800-900 ಬಿಲ್‌ ಸಂಗ್ರಹಣಾ ಕೇಂದ್ರಗಳಿದ್ದವು. ಒಂದು ವೇಳೆ ಪಾವತಿ ವಿಳಂಬವಾದರೆ, ನಿಯಮಗಳ ಪ್ರಕಾರ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿತ್ತು. ಹೊಸ ಸಂಪರ್ಕಗಳಿಗಾಗಿ ಜನರು ಮತ್ತೆ ಹಣ ಪಾವತಿಸಬೇಕಾಗಿತ್ತು. ವಿದ್ಯುತ್ ಬಿಲ್ ಪಾವತಿಯನ್ನು ಸಂಗ್ರಹಿಸಲು ಅಂಚೆ ಕಚೇರಿಗಳಿಗೆ ಅನುಮತಿ ನೀಡಬೇಕೆಂದು ನಾವು ಆಗಿನ ಅಟಲ್ (ಬಿಹಾರಿ ವಾಜಪೇಯಿ) ಅವರ ನೇತೃತ್ವದ ಭಾರತ ಸರಕಾರವನ್ನು ಕೋರಿದೆವು. ಅಟಲ್ ಜೀ ಅವರು ನನ್ನ ಮಾತನ್ನು ಒಪ್ಪಿಕೊಂಡರು ಮತ್ತು ಗುಜರಾತ್‌ನ ರೈತರು ಈ ಸಮಸ್ಯೆಯಿಂದ ಮುಕ್ತಿ ಪಡೆದರು. ವ್ಯವಸ್ಥೆಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸಲು ನಾನು ದೆಹಲಿಗೆ ಹೋದಾಗ ಅಂತಹ ಮತ್ತೊಂದು ಪ್ರಯೋಗವನ್ನು ಮಾಡಿದೆ. ಅಹ್ಮದಾಬಾದ್‌ನ ನಾವು ʻಒಂದೇ ಬದಿಗೆ ಹಣ, ಎರಡು ಬದಿ ಪ್ರಯಾಣʼಕ್ಕೆ ಒಗ್ಗಿಕೊಂಡಿರುವ ಕಾರಣ ಈ ಅಭ್ಯಾಸದಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಇದು 2019ರ ಚುನಾವಣೆಗೆ ಮುನ್ನಾ ನಡೆದ ಘಟನೆ. ರೈಲ್ವೆಯು ಬಲವಾದ ವೈ-ಫೈ ಜಾಲವನ್ನು ಹೊಂದಿದೆ. ಹತ್ತಿರದ ಹಳ್ಳಿಗಳ ಮಕ್ಕಳು ಅಲ್ಲಿಗೆ ಬಂದು ಅಧ್ಯಯನ ಮಾಡಲು ಸಾಧ್ಯವಾಗುವಂತೆ, ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಅವರಿಗೆ ʻವೈ-ಫೈʼ ಲಾಗಿನ್‌ ಸೌಲಭ್ಯ ಒದಗಿಸುವಂತೆ ರೈಲ್ವೆಯಲ್ಲಿರುವ ನನ್ನ ಸ್ನೇಹಿತರಿಗೆ ಹೇಳಿದೆ. ಒಮ್ಮೆ ನಾನು ಕೆಲವು ವಿದ್ಯಾರ್ಥಿಗಳೊಂದಿಗೆ ವರ್ಚುವಲ್ ಆಗಿ ಮಾತನಾಡುತ್ತಿದ್ದಾಗ ಉಚಿತ ವೈ-ಫೈ ಸೌಲಭ್ಯಗಳಿಂದಾಗಿ ಅನೇಕ ವಿದ್ಯಾರ್ಥಿಗಳು ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿದ್ದ ವಿಚಾರ ತಿಳಿಯಿತು. ಇದನ್ನು ಬಳಸಿಕೊಂಡೆಯೇ ಅವರು ಪರೀಕ್ಷೆಗಳನ್ನು ಪಾಸುಮಾಡಿದ್ದರೆಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಅವರ ತಾಯಂದಿರು ಮನೆಯಲ್ಲಿ ತಯಾರಿಸಿದ ಆಹಾರವನ್ನು ಬಿಟ್ಟು, ಕೋಚಿಂಗ್ ತರಗತಿಗಳಿಗೆ ಹೋಗುವ ಅಗತ್ಯವಿಲ್ಲ, ಯಾವುದೇ ಖರ್ಚೂ ಇಲ್ಲ! ಅಧ್ಯಯನಕ್ಕಾಗಿ ರೈಲ್ವೆ ಪ್ಲಾಟ್ ಫಾರ್ಮ್ ಗಳ ಅತ್ಯುತ್ತಮ ಬಳಕೆ! ಸ್ನೇಹಿತರೇ, ʻಡಿಜಿಟಲ್ ಇಂಡಿಯಾʼದ ಶಕ್ತಿಯನ್ನು ನೋಡಿ.

ನಗರಗಳ ಹೆಚ್ಚಿನ ಜನರು ʻಪಿಎಂ ಸ್ವಾಮಿತ್ವʼ ಯೋಜನೆಯ ಬಗ್ಗೆ ಗಮನ ಹರಿಸಿಲ್ಲ. ಮೊದಲ ಬಾರಿಗೆ, ಹಳ್ಳಿಯ ಮನೆಗಳ ಮ್ಯಾಪಿಂಗ್ ನಡೆಯುತ್ತಿದೆ ಮತ್ತು ನಗರಗಳಲ್ಲಿರುವಂತೆ ಗ್ರಾಮಸ್ಥರಿಗೆ ಡಿಜಿಟಲ್ ಕಾನೂನು ದಾಖಲೆಗಳನ್ನು ನೀಡಲಾಗುತ್ತಿದೆ. ʻಡ್ರೋನ್‌ʼ ಹಳ್ಳಿಯ ಪ್ರತಿಯೊಂದು ಮನೆಯನ್ನು ಮೇಲಿನಿಂದ ಮ್ಯಾಪಿಂಗ್ ಮಾಡುತ್ತಿದೆ. ಜನರು ತಮಗೆ ಸಮ್ಮತಿಯಾದ ಬಳಿಕವೇ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದಾರೆ. ನ್ಯಾಯಾಲಯಗಳಿಗೆ ಭೇಟಿ ನೀಡುವ ಎಲ್ಲಾ ತೊಡಕುಗಳು ಕೊನೆಯಾಗಿವೆ. ಇದಕ್ಕೆ ಕಾರಣ ʻಡಿಜಿಟಲ್ ಇಂಡಿಯಾʼ. ʻಡಿಜಿಟಲ್ ಇಂಡಿಯಾʼ ಅಭಿಯಾನವು ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗ ಮತ್ತು ಸ್ವಯಂ-ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

ಸ್ನೇಹಿತರೇ,

ಡಿಜಿಟಲ್ ಇಂಡಿಯಾದ ಅತ್ಯಂತ ಸೂಕ್ಷ್ಮ ಅಂಶವೂ ಇದೆ, ಅದು ಹೆಚ್ಚು ಚರ್ಚೆಯಾಗಿಲ್ಲ. ʻಡಿಜಿಟಲ್ ಇಂಡಿಯಾʼವು ಕಾಣೆಯಾದ ಅನೇಕ ಮಕ್ಕಳನ್ನು ಅವರ ಕುಟುಂಬಗಳಿಗೆ ಹೇಗೆ ಮರಳಿ ಒಂದುಗೂಡಿಸಿದೆ ಎಂದು ತಿಳಿದರೆ, ಅದು ನಿಜಕ್ಕೂ ಹೃದಯಸ್ಪರ್ಶಿ ಅನುಭವವೇ ಸರಿ. ಇಲ್ಲಿರುವ ಡಿಜಿಟಲ್ ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ನೀವು ನಿಮ್ಮ ಮಕ್ಕಳನ್ನು ಸಹ ಈ ಪ್ರದರ್ಶನಕ್ಕೆ ಕರೆತರಬೇಕು. ಆ ವಸ್ತುಪ್ರದರ್ಶನಕ್ಕೆ ಭೇಟಿ ನೀಡುವ ಮೂಲಕ ಜಗತ್ತು ಹೇಗೆ ಬದಲಾಗುತ್ತಿದೆ ಎಂಬುದನ್ನು ನೀವು ಅರಿತುಕೊಳ್ಳುವಿರಿ. ನಾನು ಈಗಷ್ಟೇ ಅಲ್ಲಿ ಒಬ್ಬ ಮಗಳನ್ನು ಭೇಟಿಯಾದೆ. ಅವಳು ತನ್ನ ಕುಟುಂಬದಿಂದ ಬೇರ್ಪಟ್ಟಾಗ ಅವಳು ಆರು ವರ್ಷದವಳಾಗಿದ್ದಳು. ಅವಳು ರೈಲ್ವೆ ಪ್ಲಾಟ್‌ಫಾರಂನಲ್ಲಿ ತನ್ನ ತಾಯಿಯೊಂದಿಗೆ ಇದ್ದಾಗ ತಪ್ಪಿಹೋಗಿದ್ದಳು ಮತ್ತು ಯಾವುದೋ ರೈಲು ಹತ್ತಿದಳು. ಅವಳು ತನ್ನ ಹೆತ್ತವರ ಬಗ್ಗೆ ಹೆಚ್ಚು ಹೇಳಲು ಸಾಧ್ಯವಾಗಿರಲಿಲ್ಲ. ಅವಳ ಕುಟುಂಬವನ್ನು ಹುಡುಕಲು ಅನೇಕ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ʻಆಧಾರ್ʼ ದತ್ತಾಂಶದ ಸಹಾಯದಿಂದ ಅವಳ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಿಸಲಾಯಿತು. ಮಗುವಿನ ʻಆಧಾರ್ʼ ಬಯೋಮೆಟ್ರಿಕ್ ತೆಗೆದುಕೊಂಡಾಗ, ಅದು ತಿರಸ್ಕೃತವಾಯಿತು. ಹೆಣ್ಣು ಮಗುವಿನ ಆಧಾರ್ ಕಾರ್ಡ್ ಅನ್ನು ಈಗಾಗಲೇ ಜನರೇಟ್ ಮಾಡಲಾಗಿದೆ ಎಂದು ತಿಳಿದುಬಂದಿತು. ʻಆಧಾರ್ʼ ವಿವರಗಳ ಆಧಾರದ ಮೇಲೆ, ಆ ಹುಡುಗಿಯ ಕುಟುಂಬವನ್ನು ಪತ್ತೆಹಚ್ಚಲಾಯಿತು.

ಇಂದು ಆ ಹುಡುಗಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾಳೆ ಮತ್ತು ತನ್ನ ಹಳ್ಳಿಯಲ್ಲಿ ತನ್ನ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಿದ್ದಾಳೆ ಎಂದು ತಿಳಿದರೆ ನಿಮಗೆ ಸಂತೋಷವಾಗಬಹುದು. ನನ್ನ ಮಾಹಿತಿಯ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಈ ತಂತ್ರಜ್ಞಾನದ ಸಹಾಯದಿಂದ 500ಕ್ಕೂ ಹೆಚ್ಚು ಮಕ್ಕಳು ತಮ್ಮ ಕುಟುಂಬಗಳೊಂದಿಗೆ ಮತ್ತೆ ಒಂದಾಗಿದ್ದಾರೆ.

ಸ್ನೇಹಿತರೇ,

ಕಳೆದ ಎಂಟು ವರ್ಷಗಳಲ್ಲಿ ʻಡಿಜಿಟಲ್ ಇಂಡಿಯಾʼವು ದೇಶದಲ್ಲಿ ಸೃಷ್ಟಿಸಿದ ಸಾಮರ್ಥ್ಯವು ಕರೋನಾ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ಸಾಕಷ್ಟು ಸಹಾಯ ಮಾಡಿದೆ. ʻಡಿಜಿಟಲ್ ಇಂಡಿಯಾʼ ಅಭಿಯಾನ ಇಲ್ಲದಿದ್ದರೆ 100 ವರ್ಷಗಳ ಅತಿದೊಡ್ಡ ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ನಾವು ದೇಶದಲ್ಲಿ ಏನು ಮಾಡಬೇಕಾಗಿತ್ತು ಎಂದು ನೀವು ಊಹಿಸಬಲ್ಲಿರಾ? ನಾವು ಒಂದೇ ಕ್ಲಿಕ್ ಮೂಲಕ ದೇಶದ ಮಹಿಳೆಯರು, ರೈತರು ಮತ್ತು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ವರ್ಗಾಯಿಸಿದ್ದೇವೆ. ʻಒಂದು ದೇಶ-ಒಂದು ಪಡಿತರ ಚೀಟಿʼಯ ಸಹಾಯದಿಂದ, ನಾವು 80 ಕೋಟಿಗೂ ಹೆಚ್ಚು ದೇಶವಾಸಿಗಳಿಗೆ ಉಚಿತ ಪಡಿತರವನ್ನು ಖಚಿತಪಡಿಸಿದ್ದೇವೆ. ಇದು ತಂತ್ರಜ್ಞಾನದ ಅದ್ಭುತವೇ ಸರಿ.

ನಾವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ದಕ್ಷ ಕೋವಿಡ್ ಲಸಿಕೆ ಮತ್ತು ಪರಿಹಾರ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದೇವೆ. ʻಆರೋಗ್ಯ ಸೇತುʼ ಮತ್ತು ʻಕೋವಿನ್ʼ ಎಂತಹ ದಕ್ಷ ವೇದಿಕೆಗಳೆಂದರೆ, ಇವುಗಳ ಮೂಲಕ ನಾವು ಸುಮಾರು 200 ಕೋಟಿ ಲಸಿಕೆ ಡೋಸ್‌ಗಳ ದಾಖಲೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಯಾರನ್ನು ಹೊರಗಿಡಲಾಗಿದೆ ಎಂಬ ಬಗ್ಗೆ ನಾವು ಎಲ್ಲಾ ಮಾಹಿತಿಯನ್ನು ಪಡೆಯುತ್ತೇವೆ ಮತ್ತು ಎಲ್ಲಾ ಉದ್ದೇಶಿತ ಜನರಿಗೆ ಲಸಿಕೆ ನೀಡಲು ಸಮರ್ಥರಾಗಿದ್ದೇವೆ. ಇಂದಿಗೂ ವಿಶ್ವವು ಲಸಿಕೆ ಪ್ರಮಾಣಪತ್ರವನ್ನು ಹೇಗೆ ಪಡೆಯುವುದು ಎಂದು ಚರ್ಚಿಸುತ್ತದೆ ಮತ್ತು ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆ ಹಲವಾರು ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ, ಭಾರತದಲ್ಲಿ ಒಬ್ಬ ವ್ಯಕ್ತಿಯು ಲಸಿಕೆ ಪಡೆದ ಕ್ಷಣ, ಅವರ ಮೊಬೈಲ್ ಫೋನ್‌ನಲ್ಲಿ ಪ್ರಮಾಣಪತ್ರವು ಲಭ್ಯವಿರುತ್ತದೆ. ಇಡೀ ಜಗತ್ತು ʻಕೋವಿನ್ʼ ಮೂಲಕ ಲಸಿಕೆ ಪ್ರಮಾಣಪತ್ರದ ಬಗ್ಗೆ ಚರ್ಚಿಸುತ್ತಿದೆ, ಆದರೆ ಪ್ರಮಾಣಪತ್ರದಲ್ಲಿ ಮೋದಿ ಅವರ ಫೋಟೋ ಇರುವುದು ಭಾರತದಲ್ಲಿ ಕೆಲವರಿಗೆ ಸಮಸ್ಯೆಯಾಗಿ ಕಂಡಿದೆ. ಲಸಿಕೀರಣವು ಅಗಾಧ ಕೆಲಸವಾಗಿತ್ತು, ಆದರೆ ಕೆಲವರು ಬರೀ ಫೋಟೊ ವಿಚಾರಕ್ಕೇ ಸೀಮಿತವಾದರು.

ಸ್ನೇಹಿತರೇ,

ಭಾರತದ ಡಿಜಿಟಲ್ ʻಫಿನ್‌ಟೆಕ್‌ʼ ಪರಿಹಾರವನ್ನು ಸಹ ಉಲ್ಲೇಖಿಸಲು ನಾನು ಬಯಸುತ್ತೇನೆ. ಒಮ್ಮೆ ಸಂಸತ್ತಿನಲ್ಲಿ ಅದರ ಬಗ್ಗೆ ಚರ್ಚೆ ನಡೆಯಿತು ಮತ್ತು ನೀವು ಅದನ್ನು ಪರಿಶೀಲಿಸಬಹುದು. ಮಾಜಿ ಹಣಕಾಸು ಸಚಿವರೊಬ್ಬರು ತಮ್ಮ ಭಾಷಣದಲ್ಲಿ ಜನರ ಬಳೀ ಮೊಬೈಲ್ ಫೋನ್‌ಗಳೇ ಇಲ್ಲದಾಗ ಅವರು ʻಡಿಜಿಟಲ್ʼ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಅವನು ಎನೆಲ್ಲಾ ಹೇಳಿದರು, ಅವರ ಮಾತುಗಳನ್ನೆಲ್ಲಾ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇದು ಬಹಳ ವಿದ್ಯಾವಂತ ಜನರ ಸ್ಥಿತಿ. ಇಂದು ಇಡೀ ಜಗತ್ತು ʻಫಿನ್‌ಟೆಕ್‌ʼ ಯುಪಿಐ ಅಂದರೆ ʻಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್‌ʼನತ್ತ ಆಕರ್ಷಿತವಾಗಿದೆ. ವಿಶ್ವಬ್ಯಾಂಕ್ ಸೇರಿದಂತೆ ಎಲ್ಲರೂ ಇದನ್ನು ಅತ್ಯುತ್ತಮ ವೇದಿಕೆ ಎಂದು ಶ್ಲಾಘಿಸಿದ್ದಾರೆ. ಇಲ್ಲಿನ ವಸ್ತು ಪ್ರದರ್ಶನದಲ್ಲಿ ಒಂದು ಇಡೀ ವಿಭಾಗವನ್ನು ʻಫಿನ್‌ಟೆಕ್‌ʼಗೆ ಮೀಸಲಿಡಲಾಗಿದೆ. ಈ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಮೊಬೈಲ್‌ಫೋನ್‌ಗಳ ಮೂಲಕ ಪಾವತಿಗಳನ್ನು ಹೇಗೆ ಮಾಡಲಾಗುತ್ತದೆ ಮತ್ತು ಸ್ವೀಕರಿಸಲಾಗುತ್ತದೆ ಎಂಬುದನ್ನು ನೀವು ಅಲ್ಲಿ ನೋಡಬಹುದು. ನಾನು ಹೇಳಬಯಸುವುದೇನೆಂದರೆ, ʻಜನರ, ಜನರಿಂದ, ಜನರಿಗೋಸ್ಕರʼ ಎಂಬಂತಿರುವ ಈ ʻಫಿನ್‌ಟೆಕ್‌ʼ ಉಪಕ್ರಮವು ಅತ್ಯುತ್ತಮ ಪರಿಹಾರವಾಗಿದೆ. ಇದರಲ್ಲಿ ದೇಶೀಯ ತಂತ್ರಜ್ಞಾನವಿದೆ. ಅಂದರೆ ದೇಶವಾಸಿಗಳಿಂದ ಅಭಿವೃದ್ಧಿಪಡಿಸಿದ್ದು. ಜನರು ಇದನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ ಅಂದರೆ, ಅದು ಜನರದ್ದು. ಇದು ದೇಶವಾಸಿಗಳ ವಹಿವಾಟುಗಳನ್ನು ಸುಲಭಗೊಳಿಸಿದೆ, ಅಂದರೆ, ಜನರಿಗೋಸ್ಕರವಾಗಿದೆ.

ಸ್ನೇಹಿತರೇ,

ಭಾರತದಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಪ್ರತಿ ನಿಮಿಷದಲ್ಲಿ 1.30 ಲಕ್ಷಕ್ಕೂ ಹೆಚ್ಚು ʻಯುಪಿಐʼ ವಹಿವಾಟುಗಳು ನಡೆದಿರುವುದು ಹೆಮ್ಮೆಯ ವಿಚಾರ. ಪ್ರತಿ ಸೆಕೆಂಡಿಗೆ ಸರಾಸರಿ 2,200 ವಹಿವಾಟುಗಳು ಪೂರ್ಣಗೊಂಡಿವೆ. ಅಂದರೆ, ನಾನು ನಿಮ್ಮೊಂದಿಗೆ ಮಾತನಾಡುವಾಗ 'ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್' ಎಂಬ ಪದಗಳನ್ನು ಬಳಸಿದಾಗ, ಆ ಸಮಯದಲ್ಲಿ ಯುಪಿಐ ಮೂಲಕ 7,000 ವಹಿವಾಟುಗಳು ಪೂರ್ಣಗೊಂಡಿರುತ್ತವೆ. ಇದೆಲ್ಲವೂ ʻಡಿಜಿಟಲ್ ಇಂಡಿಯಾʼದ ಮೂಲಕ ನಡೆಯುತ್ತಿದೆ.

ಸ್ನೇಹಿತರೇ,

ದೇಶ ಮತ್ತು ಅದರ ಜನರ ಸಾಮರ್ಥ್ಯವನ್ನು ನೋಡಿ. ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶ, ಆದರೆ ವಿಶ್ವದ ಒಟ್ಟು ಡಿಜಿಟಲ್ ವಹಿವಾಟುಗಳಲ್ಲಿ ಶೇಕಡಾ 40ರಷ್ಟು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲೇ ನಡೆಯುತ್ತದೆ ಎಂಬುದು ಹೆಮ್ಮೆ ಪಡಬಹುದಾದ ವಿಚಾರ.

ʻಭೀಮ್-ಯುಪಿಐʼ ಕೂಡ ಇಂದು ಡಿಜಿಟಲ್ ವಹಿವಾಟಿಗೆ ಪ್ರಬಲ ಮಾಧ್ಯಮವಾಗಿ ಹೊರಹೊಮ್ಮಿದೆ. ಪ್ರಮುಖವಾಗಿ, ಯಾವುದೇ ಶಾಪಿಂಗ್ ಮಾಲ್‌ನಲ್ಲಿ ದೊಡ್ಡ ಬ್ರಾಂಡ್‌ಗಳ ಮಾರಾಟಗಾರರು ಮತ್ತು ಶ್ರೀಮಂತ ಜನರಿಗೆ ಲಭ್ಯವಿರುವ ವಹಿವಾಟು ತಂತ್ರಜ್ಞಾನವು ಪ್ರತಿದಿನ ಕೇವಲ 700-800 ರೂಪಾಯಿಗಳನ್ನು ಗಳಿಸುವಂತಹ ಬೀದಿ ಬದಿ ವ್ಯಾಪಾರಿಗಳಿಗೂ ಲಭ್ಯವಿದೆ. ಹಿಂದೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಪಾವತಿಗಳು ದೊಡ್ಡ ಅಂಗಡಿಗಳಲ್ಲಿ ಮಾತ್ರ ಲಭ್ಯವಿದ್ದ ದಿನಗಳನ್ನು ಸಹ ನಾವು ನೋಡಿದ್ದೇವೆ ಮತ್ತು ಬೀದಿ ಬದಿ ವ್ಯಾಪಾರಿ ಸ್ನೇಹಿತರು ತಮ್ಮ ಗ್ರಾಹಕರಿಗೆ ಚಿಲ್ಲರೆ ನೀಡಲು ಸಣ್ಣ ಮೌಲ್ಯದ ನಾಣ್ಯಗಳಿಗೆ ಹುಡುಕಾಡುತ್ತಿದ್ದರು. ಒಮ್ಮೆ, ಬಿಹಾರದಲ್ಲಿ ಒಬ್ಬ ಭಿಕ್ಷುಕ ವೇದಿಕೆಯ ಮೇಲೆ ಭಿಕ್ಷೆ ಬೇಡುತ್ತಿರುವುದನ್ನು ನಾನು ನೋಡಿದೆ, ಮತ್ತು ಆತ ಡಿಜಿಟಲ್ ರೂಪದಲ್ಲಿ ಹಣವನ್ನು ಪಡೆಯುತ್ತಿದ್ದ! ನೋಡಿ, ಅವರಿಬ್ಬರೂ ಒಂದೇ ರೀತಿಯ ಸಾಮರ್ಥ್ಯ ಹೊಂದಿದ್ದಾರೆ. ಇದು ʻಡಿಜಿಟಲ್ ಇಂಡಿಯಾʼದ ಶಕ್ತಿಯಾಗಿದೆ.

ಆದ್ದರಿಂದ, ಇಂದು ʻಯುಪಿಐʼನಂತಹ ಡಿಜಿಟಲ್ ಉತ್ಪನ್ನಗಳು ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳಿಗೆ ಅಥವಾ ಈ ರೀತಿಯ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದ ದೇಶಗಳಿಗೆ ಆಕರ್ಷಣೆಯ ವಿಚಾರಗಳಾಗಿವೆ. ನಮ್ಮ ಡಿಜಿಟಲ್ ಪರಿಹಾರಗಳು ವಿಶಾಲ ವ್ಯಾಪ್ತಿಯನ್ನು ಹೊಂದಿವೆ, ಸುರಕ್ಷಿತವಾಗಿವೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಂದಿವೆ. ನಮ್ಮ ʻಗಿಫ್ಟ್ ಸಿಟಿʼ ಯೋಜನೆಗೆ ಸಂಬಂಧಿಸಿದವರು, 2005 ಅಥವಾ 2006ರಲ್ಲಿ ನಾನು ಮಾಡಿದ ಭಾಷಣ ಅಥವಾ ನಾನು ಹೇಳಿದ ಮಾತುಗಳನ್ನು ಆಲಿಸಬೇಕು. ಆ ಸಮಯದಲ್ಲಿ ʻಗಿಫ್ಟ್‌ ಸಿಟಿʼ ಬಗ್ಗೆ ನಾನು ಹೇಳಿದ್ದು ಸಂಭವಿಸಲಿದೆ. ʻಫಿನ್‌ಟೆಕ್‌ʼ ಮತ್ತು ಫೈನಾನ್ಸ್ ಜಗತ್ತಿನಲ್ಲಿ ಡೇಟಾ ಸುರಕ್ಷತೆಗೆ ಸಂಬಂಧಿಸಿದಂತೆ ʻಗಿಫ್ಟ್‌ ಸಿಟಿʼಯು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ. ಇದು ಕೇವಲ ಗುಜರಾತ್ ಮಾತ್ರವಲ್ಲ, ಇಡೀ ಭಾರತದ ಹೆಮ್ಮೆಯಾಗಲಿದೆ.

ಸ್ನೇಹಿತರೇ,

ಡಿಜಿಟಲ್ ಇಂಡಿಯಾವನ್ನು ಭವಿಷ್ಯದಲ್ಲಿ ಭಾರತದ ಹೊಸ ಆರ್ಥಿಕತೆಯ ಭದ್ರ ಬುನಾದಿಯನ್ನಾಗಿ ಮಾಡಲು ಮತ್ತು ಭಾರತವನ್ನು ʻಉದ್ಯಮ 4.0ʼರಲ್ಲಿ ಮುಂಚೂಣಿಯಲ್ಲಿಡಲು ಇಂದು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಂದು ಕೃತಕ ಬುದ್ಧಿಮತ್ತೆ (ಎಐ), ʻಬ್ಲಾಕ್-ಚೈನ್ʼ, ʻಎಆರ್-ವಿಆರ್ʼ, ʻ3ಡಿ ಪ್ರಿಂಟಿಂಗ್ʼ, ಡ್ರೋನ್‌ಗಳು, ರೋಬೋಟಿಕ್ಸ್, ʻಗ್ರೀನ್ ಎನರ್ಜಿʼ ಮುಂತಾದ ಅನೇಕ ಹೊಸ ಯುಗದ ಉದ್ಯಮಗಳಿಗಾಗಿ ದೇಶಾದ್ಯಂತ 100ಕ್ಕೂ ಹೆಚ್ಚು ಕೌಶಲ್ಯ ಅಭಿವೃದ್ಧಿ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಮುಂದಿನ 4-5 ವರ್ಷಗಳಲ್ಲಿ ಭವಿಷ್ಯದ ಕೌಶಲ್ಯಗಳಿಗಾಗಿ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ 14-15 ಲಕ್ಷ ಯುವಕರನ್ನು ಮರು-ಕೌಶಲ್ಯ ಮತ್ತು ಅಪ್-ಸ್ಕಿಲ್ ಮಾಡುವುದು ನಮ್ಮ ಪ್ರಯತ್ನವಾಗಿದೆ.

ಇಂದು ʻಉದ್ಯಮ 4.0ʼಗೆ ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಲು ಶಾಲಾ ಮಟ್ಟದಲ್ಲಿಯೂ ಗಮನ ಹರಿಸಲಾಗಿದೆ. ಇಂದು, 75ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಮಾರು 10,000 ʻಅಟಲ್ ಟಿಂಕರಿಂಗ್ ಲ್ಯಾಬ್ʼಗಳಲ್ಲಿ ನವೀನ ಆಲೋಚನೆಗಳ ಮೇಲೆ ಕೆಲಸ ಮಾಡುತ್ತಿದ್ದಾರೆ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ. ನಾನು ಇಲ್ಲಿ ವಸ್ತುಪ್ರದರ್ಶನದಲ್ಲಿ ಗಮನಿಸಿದೆ. ದೂರದ ಒಡಿಶಾ, ತ್ರಿಪುರಾ ಅಥವಾ ಉತ್ತರ ಪ್ರದೇಶದ ಹಳ್ಳಿಯಿಂದ ಬಂದ ಒಬ್ಬ ಬಾಲಕಿಯಿದ್ದಳು. ಅವಳು ತಮ್ಮ ಉತ್ಪನ್ನಗಳೊಂದಿಗೆ ಇಲ್ಲಿಯವರೆಗೂ ಬಂದಿರುವುದು ಕಂಡು ನನಗೆ ತುಂಬಾ ಸಂತೋಷವಾಯಿತು. 15-16-18 ವರ್ಷದ ಹುಡುಗಿಯರು ಪ್ರಪಂಚದ ಸಮಸ್ಯೆಗಳಿಗೆ ಪರಿಹಾರಗಳೊಂದಿಗೆ ಇಲ್ಲಿಗೆ ಬಂದಿದ್ದಾರೆ. ನೀವು ಆ ಹುಡುಗಿಯರೊಂದಿಗೆ ಮಾತನಾಡಿದಾಗ, ʻಇದು ನನ್ನ ದೇಶದ ಶಕ್ತಿʼ ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ.

ಸ್ನೇಹಿತರೇ,

ʻಅಟಲ್ ಟಿಂಕರಿಂಗ್ ಲ್ಯಾಬ್ಸ್ʼನಿಂದಾಗಿ ಶಾಲೆಗಳಲ್ಲಿ ಸೃಷ್ಟಿಯಾದ ಪರಿಸರವು, ಮಕ್ಕಳು ದೊಡ್ಡ ಸಮಸ್ಯೆಗಳಿಗೆ ಪರಿಹಾರಗಳೊಂದಿಗೆ ಮುಂದೆ ಬರಲು ದಾರಿಮಾಡಿದೆ. ನಾನು 17 ವರ್ಷದ ಹುಡುಗನನ್ನು ಮಾತನಾಡಿಸಿ, ಅವನ ಪರಿಚಯ ಕೇಳೀದೆ. ಅವನು ತನ್ನನ್ನು ಪ್ರಚಾರ ರಾಯಭಾರಿ ಎಂದು ಪರಿಚಯಿಸಿಕೊಂಡನು. 'ಡಿಜಿಟಲ್ ಇಂಡಿಯಾ ಕ್ಷೇತ್ರದಲ್ಲಿ ನಾವು ಕೆಲಸ ಮಾಡುತ್ತಿರುವ ಉಪಕರಣಗಳ ಬ್ರಾಂಡ್ ಅಂಬಾಸಿಡರ್ ನಾನು' ಎಂದು ಆತ ಹೇಳಿದ. ಆತನ ಮಾತುಗಳಲ್ಲಿ ಅದ್ಭುತವಾದ ಆತ್ಮವಿಶ್ವಾಸವಿತ್ತು. ನೀವು ಈ ರೀತಿಯ ಸಾಮರ್ಥ್ಯವನ್ನು ನೋಡಿದಾಗ, ನಂಬಿಕೆಯು ಬಲಗೊಳ್ಳುತ್ತದೆ. ಈ ದೇಶವು ಖಂಡಿತ ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುತ್ತದೆ ಮತ್ತು ತನ್ನ ಸಂಕಲ್ಪಗಳನ್ನು ಈಡೇರಿಸಿಕೊಳ್ಳುತ್ತದೆ.

ಸ್ನೇಹಿತರೇ,

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ತಂತ್ರಜ್ಞಾನಕ್ಕೆ ಅಗತ್ಯವಾದ ಮನಸ್ಥಿತಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ದೇಶದಲ್ಲಿ ʻಅಟಲ್ ಇನ್‌ಕ್ಯುಬೇಶನ್ ಸೆಂಟರ್ʼಗಳ ಬೃಹತ್ ಜಾಲವನ್ನು ಸೃಷ್ಟಿಸಲಾಗುತ್ತಿದೆ. ಅಂತೆಯೇ, ʻಪಿಎಂ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನʼ ಅಂದರೆ ʻಪಿಎಂ ದಿಶಾʼ(PMGDISHA) ಸಹ ದೇಶದಲ್ಲಿ ಡಿಜಿಟಲ್ ಸಬಲೀಕರಣವನ್ನು ಉತ್ತೇಜಿಸಲು ಅಭಿಯಾನವನ್ನು ನಡೆಸುತ್ತಿದೆ. ಇಲ್ಲಿಯವರೆಗೆ, ದೇಶಾದ್ಯಂತ 40,000ಕ್ಕೂ ಹೆಚ್ಚು ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಐದು ಕೋಟಿಗೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ.

ಸ್ನೇಹಿತರೇ,

ಡಿಜಿಟಲ್ ಕೌಶಲ್ಯಗಳು, ಡಿಜಿಟಲ್ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಕರಿಗೆ ಗರಿಷ್ಠ ಅವಕಾಶಗಳನ್ನು ಒದಗಿಸಲು ನಾನಾ ನಿಟ್ಟಿನಲ್ಲಿ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಅದು ಬಾಹ್ಯಾಕಾಶ ಆಗಿರಲಿ, ಮ್ಯಾಪಿಂಗ್, ಡ್ರೋನ್‌ಗಳು, ಗೇಮಿಂಗ್ ಮತ್ತು ಅನಿಮೇಷನ್ ಆಗಿರಲಿ, ಡಿಜಿಟಲ್ ತಂತ್ರಜ್ಞಾನದ ಭವಿಷ್ಯವನ್ನು ವಿಸ್ತರಿಸಲಿರುವ ಅಂತಹ ಅನೇಕ ವಲಯಗಳನ್ನು ನಾವೀನ್ಯತೆಗಾಗಿ ಮುಕ್ತಗೊಳಿಸಲಾಗಿದೆ. ಈಗ ಅಹ್ಮದಾಬಾದ್‌ನಲ್ಲಿ ʻಇನ್ ಸ್ಪೇಸ್ʼ ಪ್ರಧಾನ ಕಚೇರಿಯನ್ನು ತೆರೆಯಲಾಗಿದೆ. ʻಇನ್ ಸ್ಪೇಸ್ʼ ಮತ್ತು ಹೊಸ ಡ್ರೋನ್ ನೀತಿಯಂತಹ ಅವಕಾಶಗಳು ಈ ದಶಕದ ಮುಂಬರುವ ವರ್ಷಗಳಲ್ಲಿ ಭಾರತದ ತಂತ್ರಜ್ಞಾನ ಸಾಮರ್ಥ್ಯಕ್ಕೆ ಹೊಸ ಶಕ್ತಿಯನ್ನು ನೀಡುತ್ತವೆ. ಕಳೆದ ತಿಂಗಳು ನಾನು ʻಇನ್ ಸ್ಪೇಸ್ʼ ಪ್ರಧಾನ ಕಚೇರಿಯ ಉದ್ಘಾಟನೆಗಾಗಿ ಇಲ್ಲಿಗೆ ಬಂದಾಗ, ನಾನು ಕೆಲವು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದೆ. ಅವರು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಉಡಾಯಿಸಲು ಯೋಜಿಸುತ್ತಿದ್ದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಶಾಲಾ ಮಕ್ಕಳು ತಯಾರಿಸಿದ 75ಉಪಗ್ರಹಗಳನ್ನು ಅವರು ಉಡಾಯಿಸಲಿದ್ದಾರೆ ಎಂದು ಅಲ್ಲಿ ನನಗೆ ತಿಳಿಸಲಾಯಿತು. ಸ್ನೇಹಿತರೇ, ಇದೆಲ್ಲಾ ನಡೆಯುತ್ತಿರುವುದು ನಮ್ಮ ದೇಶದ ಶಾಲಾ ಶಿಕ್ಷಣದಲ್ಲೇ.

ಸ್ನೇಹಿತರೇ,

ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು 300 ಶತಕೋಟಿ ಡಾಲರ್‌ಗಿಂತ ಹೆಚ್ಚು ಮಾಡುವ ಗುರಿಯನ್ನು ಇಂದು ಭಾರತವು ಹೊಂದಿದೆ. ಚಿಪ್ ಆಮದು ಹಂತದಿಂದ ಚಿಪ್ ತಯಾರಕನ ಹಂತದವರೆಗೆ ಬೆಳೆಯಲು ಭಾರತ ಬಯಸುತ್ತದೆ. ಸೆಮಿ ಕಂಡಕ್ಟರ್‌ಗಳ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದಲ್ಲಿ ಹೂಡಿಕೆಗೆ ವೇಗ ನೀಡಲಾಗಿದೆ. ಈ ನಿಟ್ಟಿನಲ್ಲಿ ʻಪಿಎಲ್ಐʼ (ಉತ್ಪಾದನೆ ಆಧರಿತ ಪ್ರೋತ್ಸಾಹಧನ) ಯೋಜನೆ ಕೂಡ ಸಹಾಯ ಮಾಡುತ್ತಿದೆ. ಅಂದರೆ, ʻಮೇಕ್ ಇನ್ ಇಂಡಿಯಾʼ ಮತ್ತು ʻಡಿಜಿಟಲ್ ಇಂಡಿಯಾʼ ಶಕ್ತಿಯ ಡಬಲ್ ಡೋಸ್ ಭಾರತದಲ್ಲಿ ʻಉದ್ಯಮ 4.0ʼ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ.

ದಾಖಲೆಗಳು ಮತ್ತು ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ನಾಗರಿಕರು ಭೌತಿಕವಾಗಿ ಸರಕಾರದ ಬಳಿಗೆ ಬರುವ ಅಗತ್ಯವಿಲ್ಲದ ಪರಿಸ್ಥಿತಿಯತ್ತ ಇಂದಿನ ಭಾರತವು ಸಾಗುತ್ತಿದೆ. ಪ್ರತಿಯೊಂದು ಮನೆಗೂ ಇಂಟರ್ನೆಟ್ ತಲುಪುತ್ತಿದೆ ಮತ್ತು ಭಾರತದ ಪ್ರಾದೇಶಿಕ ಭಾಷೆಗಳ ವೈವಿಧ್ಯತೆ ಭಾರತದ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಹೊಸ ಪ್ರಚೋದನೆಯನ್ನು ನೀಡುತ್ತಿದೆ. ʻಡಿಜಿಟಲ್ ಇಂಡಿಯಾʼ ಅಭಿಯಾನಕ್ಕೆ ಇದೇ ರೀತಿಯಲ್ಲಿ ಹೊಸ ಆಯಾಮಗಳ ಸೇಪರ್ಡೆ ಮುಂದುವರೆಯಲಿದ್ದು, ಇದು ಡಿಜಿಟಲ್ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವಕ್ಕೆ ಮಾರ್ಗದರ್ಶನ ತೋರಲಿದೆ.

ಇಂದು ಸಮಯದ ಅಭಾವದಿಂದಾಗಿ ನಾನು ಎಲ್ಲವನ್ನೂ ನೋಡಲು ಸಾಧ್ಯವಾಗಲಿಲ್ಲ. ಇಲ್ಲಿ ನೋಡಲು ಎಷ್ಟು ವಿಷಯಗಳಿಗೆ ಎಂದರೆ, ಬಹುಶಃ ಎರಡು ದಿನಗಳ ಸಮಯ ಸಿಕ್ಕರೂ ಕಡಿಮೆಯೇ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ನಾನು ಗುಜರಾತಿನ ಜನರನ್ನು ಕೋರುತ್ತೇನೆ. ನೀವು ನಿಮ್ಮ ಶಾಲಾ-ಕಾಲೇಜುಗಳ ಮಕ್ಕಳನ್ನು ಅಲ್ಲಿಗೆ ಕರೆತರಬೇಕು. ಸ್ವಲ್ಪ ಸಮಯ ಮಾಡಿಕೊಂಡು ಈ ವಸ್ತುಪ್ರದರ್ಶನಕ್ಕೆ ಭೇಟಿ ನೀಡಬೇಕು. ಇಲ್ಲಿ ನೀವು ಹೊಸ ಭಾರತವನ್ನು ನೋಡುತ್ತೀರಿ. ಭಾರತವು ಶ್ರೀಸಾಮಾನ್ಯನ ಅಗತ್ಯಗಳಿಗೆ ಹೊಂದಿಕೆಯಾಗಿರುವುದನ್ನು ನೀವು ನೋಡುತ್ತೀರಿ. ಒಂದು ಹೊಸ ವಿಶ್ವಾಸ ನಿಮ್ಮಲ್ಲಿ ಉದಯಿಸುತ್ತದೆ ಮತ್ತು ಹೊಸ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ʻಡಿಜಿಟಲ್ ಇಂಡಿಯಾʼದ ಮೂಲಕ ಆಕಾಂಕ್ಷೆಗಳನ್ನು ಈಡೇರಿಸುವ ವಿಶ್ವಾಸದೊಂದಿಗೆ, ದೇಶವು ʻಭವಿಷ್ಯದ ಭಾರತʼ, ʻಆಧುನಿಕ ಭಾರತʼ, ʻಸಮೃದ್ಧ ಮತ್ತು ಶಕ್ತಿಯುತ ಭಾರತʼದ ಕಡೆಗೆ ವೇಗವಾಗಿ ಪ್ರಗತಿ ಹೊಂದುತ್ತಿದೆ. ಇದೆಲ್ಲವನ್ನೂ ಇಷ್ಟು ಕಡಿಮೆ ಅವಧಿಯಲ್ಲಿ ಸಾಧಿಸಲು ಸಾಧ್ಯವಾಗಿದೆಯೆಂದರೆ, ಭಾರತವು ಪ್ರತಿಭೆಯನ್ನು ಹೊಂದಿದೆ ಮತ್ತು ಭಾರತವು ಯುವಶಕ್ತಿಯನ್ನು ಹೊಂದಿದೆ, ಅವರಿಗೆ ಬೇಕಾಗಿರುವುದು ಅವಕಾಶಗಳು. ಇಂದು ದೇಶದಲ್ಲಿರುವ ಸರಕಾರವು ದೇಶದ ಜನರನ್ನು ನಂಬುತ್ತದೆ, ದೇಶದ ಯುವಕರನ್ನು ನಂಬುತ್ತದೆ ಮತ್ತು ಅವರಿಗೆ ಪ್ರಯೋಗ ಮಾಡಲು ಅವಕಾಶಗಳನ್ನು ನೀಡುತ್ತಿದೆ. ಇದರ ಪರಿಣಾಮವಾಗಿ, ದೇಶವು ಅನೇಕ ದಿಕ್ಕುಗಳಲ್ಲಿ ಅಭೂತಪೂರ್ವ ಶಕ್ತಿಯೊಂದಿಗೆ ಮುಂದುವರಿಯುತ್ತಿದೆ.

ಈ ʻಡಿಜಿಟಲ್ ಇಂಡಿಯಾ ಸಪ್ತಾಹʼಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ. ಈ ಪ್ರದರ್ಶನವು ಬಹುಶಃ ಮುಂದಿನ ಎರಡು-ಮೂರು ದಿನಗಳವರೆಗೆ ಮುಂದುವರಿಯುತ್ತದೆ ಮತ್ತು ನೀವು ಅದರ ಲಾಭವನ್ನು ಪಡೆಯುತ್ತೀರಿ ಎಂದು ಭಾವಿಸಿದ್ದೇನೆ. ಇಂತಹ ಅದ್ಭುತ ಕಾರ್ಯಕ್ರಮವನ್ನು ರೂಪಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ಭಾರತ ಸರಕಾರದ ವಿವಿಧ ಇಲಾಖೆಗಳನ್ನು ಅಭಿನಂದಿಸುತ್ತೇನೆ. ನಾನು ಬೆಳಗ್ಗೆ ತೆಲಂಗಾಣದಲ್ಲಿದ್ದೆ, ಆಂಧ್ರಪ್ರದೇಶಕ್ಕೆ ಹೋದೆ ಮತ್ತು ನಂತರ ಇಲ್ಲಿಗೆ ಬಂದು ನಿಮ್ಮ ನಡುವೆ ಇರುವ ಅವಕಾಶ ನನಗೆ ಸಿಕ್ಕಿತು. ನಿಮ್ಮೆಲ್ಲರ ಉತ್ಸಾಹವನ್ನು ನೋಡಿ ನನಗೆ ಸಂತೋಷವಾಗಿದೆ. ಗುಜರಾತ್‌ನಲ್ಲಿ ಈ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಇಲಾಖೆಗಳನ್ನು ಅಭಿನಂದಿಸುತ್ತೇನೆ. ಇದು ದೇಶದ ಯುವಕರಿಗೆ ಸ್ಫೂರ್ತಿಯಾಗಲಿದೆ ಎಂಬ ನಂಬಿಕೆಯೊಂದಿಗೆ, ನಿಮ್ಮೆಲ್ಲರಿಗೂ ಅನೇಕಾನೇಕ ಶುಭ ಹಾರೈಕೆಗಳು.

ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”