ಹರ ಹರ ಮಹಾದೇವ!
ಎಲ್ಲರಿಗೂ ನನ್ನ ಶುಭಾಶಯಗಳು!
ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳು, ರಾಜ್ಯ ಸರಕಾರದ ಸಚಿವರು, ಶಾಸಕರು, ಇತರ ಗಣ್ಯರು ಮತ್ತು ಕಾಶಿಯ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!
ಇದು ಮಂಗಳಕರ ನವರಾತ್ರಿ ಅವಧಿಯಾಗಿದೆ. ಇಂದು ಚಂದ್ರಘಂಟಾ ಮಾತೆಯ ಆರಾಧನಾ ದಿನವಾಗಿದೆ. ಇಂದು ಕಾಶಿಯ ಈ ಶುಭ ಸಂದರ್ಭದಲ್ಲಿ ನಾನು ನಿಮ್ಮ ನಡುವೆ ಇರುವುದು ನನ್ನ ಸೌಭಾಗ್ಯ. ಚಂದ್ರಘಂಟಾ ಮಾತೆಯ ಆಶೀರ್ವಾದದಿಂದ, ಇಂದು ಬನಾರಸ್‌ನ ಸಂತೋಷ ಮತ್ತು ಸಮೃದ್ಧಿಗೆ ಮತ್ತೊಂದು ಅಧ್ಯಾಯ ಸೇರ್ಪಡೆಯಾಗುತ್ತಿದೆ. ಇಂದು ಇಲ್ಲಿ ಸಾರ್ವಜನಿಕ ಸಾರಿಗೆ ʻರೋಪ್ ವೇʼಗೆ ಶಂಕುಸ್ಥಾಪನೆ ಮಾಡಲಾಗಿದೆ. ಬನಾರಸ್‌ನ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದ ಸಾವಿರಾರು ಕೋಟಿ ರೂಪಾಯಿಗಳ ಇತರ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಅಥವಾ ಶಂಕುಸ್ಥಾಪನೆ ಮಾಡಲಾಗಿದೆ. ಇವುಗಳಲ್ಲಿ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಗಂಗಾ ಮಾತೆಯ ಸ್ವಚ್ಛತೆ, ಪ್ರವಾಹ ನಿಯಂತ್ರಣ, ಪೊಲೀಸ್ ಘಟಕ, ಕ್ರೀಡಾ ಘಟಕ ಮುಂತಾದ ಅನೇಕ ಯೋಜನೆಗಳು ಸೇರಿವೆ. ಇಂದು, ʻಐಐಟಿ ಬಿಎಚ್‌ಯುʼನಲ್ಲಿ 'ಮೆಷಿನ್ ಟೂಲ್ಸ್ ಡಿಸೈನ್ ಕುರಿತಾದ ಉತ್ಕೃಷ್ಟತಾ ಕೇಂದ್ರʼಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಬನಾರಸ್ ಮತ್ತೊಂದು ವಿಶ್ವದರ್ಜೆಯ ಸಂಸ್ಥೆಯನ್ನು ಪಡೆಯಲಿದೆ. ಈ ಎಲ್ಲಾ ಯೋಜನೆಗಳಿಗಾಗಿ ಬನಾರಸ್ ಮತ್ತು ಪೂರ್ವಾಂಚಲದ ಜನರಿಗೆ ಅನೇಕ ಅಭಿನಂದನೆಗಳು.
ಸಹೋದರ ಸಹೋದರಿಯರೇ,
ಇಂದು ಕಾಶಿಯ ಅಭಿವೃದ್ಧಿಯನ್ನು ದೇಶ ಮತ್ತು ಪ್ರಪಂಚದಾದ್ಯಂತ ಚರ್ಚಿಸಲಾಗುತ್ತಿದೆ. ಯಾರು ಕಾಶಿಗೆ ಬರುತ್ತಾರೋ ಅವರು ಹೊಸ ಶಕ್ತಿಯೊಂದಿಗೆ ಮರಳುತ್ತಾರೆ. ಸುಮಾರು 8-9 ವರ್ಷಗಳ ಹಿಂದೆ ಕಾಶಿಯ ಜನರು ತಮ್ಮ ನಗರವನ್ನು ಪುನರುಜ್ಜೀವನಗೊಳಿಸುವ ಸಂಕಲ್ಪವನ್ನು ತೊಟ್ಟಾಗ ಅನೇಕ ಜನರು ಆತಂಕಗೊಂಡಿದ್ದರು. ಬನಾರಸ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಮತ್ತು ಕಾಶಿಯ ಜನರು ಯಶಸ್ವಿಯಾಗುವುದಿಲ್ಲ ಎಂದು ಅನೇಕ ಜನರು ಭಾವಿಸಿದ್ದರು. ಆದರೆ ಕಾಶಿಯ ಜನರು ಇಂದು ತಮ್ಮ ಕಠಿಣ ಪರಿಶ್ರಮದಿಂದ ಅಂತಹ ಪ್ರತಿಯೊಂದು ಆತಂಕವನ್ನು ಸುಳ್ಳೆಂದು ಸಾಬೀತುಪಡಿಸಿದ್ದಾರೆ.
ಸ್ನೇಹಿತರೇ,
ಇಂದು ಕಾಶಿಯಲ್ಲಿ ಪ್ರಾಚೀನ ಮತ್ತು ಹೊಸ ರೂಪಗಳು ಏಕಕಾಲದಲ್ಲಿ ಗೋಚರಿಸುತ್ತವೆ. ಭಾರತ ಮತ್ತು ವಿದೇಶಗಳಲ್ಲಿ ನನ್ನನ್ನು ಭೇಟಿ ಮಾಡುವ ಜನರು ವಿಶ್ವನಾಥ ಧಾಮದ ಪುನರ್ನಿರ್ಮಾಣದಿಂದ ಮಂತ್ರಮುಗ್ಧರಾಗಿರುವುದಾಗಿ ಹೇಳುತ್ತಾರೆ. ಗಂಗಾ ಘಾಟ್‌ನಲ್ಲಿನ ವಿವಿಧ ಯೋಜನೆಗಳಿಂದ ಜನರು ಪ್ರಭಾವಿತರಾಗಿದ್ದಾರೆ. ಇತ್ತೀಚೆಗೆ, ಕಾಶಿಯಿಂದ ಪ್ರಾರಂಭಿಸಲಾದ ವಿಶ್ವದ ಅತಿ ಉದ್ದದ ನದಿ ಕ್ರೂಸ್ ಸಾಕಷ್ಟು ಗಮನ ಸೆಳೆಯಿತು. ಗಂಗಾ ನದಿಯಲ್ಲಿ ಅಂತಹ ಕ್ರೂಸ್ ಬಗ್ಗೆ ಯೋಚಿಸಲು ಸಹ ಅಸಾಧ್ಯವಾದ ಸಮಯವಿತ್ತು. ಆದರೆ ಬನಾರಸ್ ಜನರು ಇದನ್ನು ಮಾಡಿದರು. ಜನರ ಪ್ರಯತ್ನದಿಂದಾಗಿಯೇ ಒಂದು ವರ್ಷದಲ್ಲಿ ಏಳು ಕೋಟಿಗೂ ಹೆಚ್ಚು ಪ್ರವಾಸಿಗರು ಕಾಶಿಗೆ ಬರುತ್ತಾರೆ. ಇಲ್ಲಿಗೆ ಬರುವ ಈ ಏಳು ಕೋಟಿ ಜನರು ಬನಾರಸ್‌ನಲ್ಲಿ ಉಳಿದುಕೊಂಡಿರುವುದು ಮಾತ್ರವಲ್ಲದೆ, 'ಪುರಿ ಕಚೋರಿ', 'ಜಿಲೇಬಿ-ಲೌಂಗ್ಲಾಟಾ', 'ಲಸ್ಸಿ' ಮತ್ತು 'ಥಂಡೈ' ಅನ್ನು ಸಹ ಆನಂದಿಸುತ್ತಿದ್ದಾರೆ. ಬನಾರಸ್ ಪಾನ್, ಮರದ ಆಟಿಕೆಗಳು, ಬನಾರಸಿ ಸೀರೆಗಳು, ಕಾರ್ಪೆಟ್‌ಗಳು ಇತ್ಯಾದಿಗಳಿಗಾಗಿ ಪ್ರತಿ ತಿಂಗಳು 50 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳು ಬನಾರಸ್ಗೆ ಬರುತ್ತಿದ್ದಾರೆ. ಮಹಾದೇವನ ಆಶೀರ್ವಾದದಿಂದ, ಇದು ಇಲ್ಲಿ ಒಂದು ದೊಡ್ಡ ಕೆಲಸ ಸಾಧನೆಯಾಗಿದೆ. ಬನಾರಸ್‌ಗೆ ಬರುತ್ತಿರುವ ಈ ಜನರು ಬನಾರಸ್‌ನ ಪ್ರತಿಯೊಂದು ಕುಟುಂಬಕ್ಕೂ ಆದಾಯದ ಮೂಲಗಳನ್ನು ತಮ್ಮೊಂದಿಗೆ ತರುತ್ತಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರು ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ.
ಸ್ನೇಹಿತರೇ,
ಕಳೆದ ಎಂಟು-ಒಂಬತ್ತು ವರ್ಷಗಳಲ್ಲಿ ಬನಾರಸ್ ಅಭಿವೃದ್ಧಿ ಹೊಂದುತ್ತಿರುವ ವೇಗ ಮತ್ತಷ್ಟು ಹೆಚ್ಚಾಗಬೇಕಾದ ಅಗತ್ಯವಿದೆ. ಇಂದು, ಪ್ರವಾಸೋದ್ಯಮ ಮತ್ತು ನಗರದ ಸೌಂದರ್ಯೀಕರಣಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅದು ರಸ್ತೆಯಾಗಿರಬಹುದು, ಸೇತುವೆ, ರೈಲು, ವಿಮಾನ ನಿಲ್ದಾಣ ಮತ್ತು ಎಲ್ಲಾ ಹೊಸ ಸಂಪರ್ಕ ಮಾರ್ಗಗಳಾಗಿರಬಹುದು, ಈಗ ಕಾಶಿಗೆ ಪ್ರಯಾಣಿಸುವುದು ತುಂಬಾ ಸುಲಭ. ಆದರೆ ಈಗ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕಾಗಿದೆ. ಮುಂಬರುವ ಹೊಸ ʻರೋಪ್ ವೇʼಯಿಂದಾಗಿ, ಕಾಶಿಯತ್ತ ಅನುಕೂಲತೆ ಮತ್ತು ಆಕರ್ಷಣೆ ಎರಡೂ ಮತ್ತಷ್ಟು ಹೆಚ್ಚಾಗುತ್ತದೆ. ʻರೋಪ್ ವೇʼ ನಿರ್ಮಾಣವಾದ ನಂತರ, ಬನಾರಸ್ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಮತ್ತು ಕಾಶಿ ವಿಶ್ವನಾಥ ಕಾರಿಡಾರ್ ನಡುವಿನ ಅಂತರವು ಕೆಲವೇ ನಿಮಿಷಗಳಿಗೆ ಕಡಿಮೆಯಾಗಲಿದೆ. ಇದು ಬನಾರಸ್ ಜನರ ಅನುಕೂಲವನ್ನು ಮತ್ತಷ್ಟು ಸುಧಾರಿಸುತ್ತದೆ. ಇದು ಕಂಟೋನ್ಮೆಂಟ್ ನಿಲ್ದಾಣ ಮತ್ತು ಗೊಡೋಲಿಯಾ ನಡುವಿನ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಹರಿಸುತ್ತದೆ.
ಸ್ನೇಹಿತರೇ,
ಹತ್ತಿರದ ನಗರಗಳು ಮತ್ತು ಇತರ ರಾಜ್ಯಗಳ ಜನರು ವಿವಿಧ ಉದ್ದೇಶಗಳಿಗಾಗಿ ವಾರಣಾಸಿಗೆ ಬರುತ್ತಾರೆ. ಹಲವು ವರ್ಷಗಳಿಂದ, ಅವರು ವಾರಣಾಸಿಯ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಬರುತ್ತಾರೆ, ತಮ್ಮ ಕೆಲಸವನ್ನು ಮುಗಿಸಿ ರೈಲ್ವೆ ಅಥವಾ ಬಸ್ ನಿಲ್ದಾಣಕ್ಕೆ ಹೋಗುತ್ತಾರೆ. ಅವರು ಬನಾರಸ್‌ಗೆ ಭೇಟಿ ನೀಡುವ ಬಯಕೆಯನ್ನು ಹೊಂದಿದ್ದರೂ, ಟ್ರಾಫಿಕ್ ಜಾಮ್‌ನಿಂದಾಗಿ ಅವರು ಅತ್ತ ತಲೆ ಹಾಕುವುದಿಲ್ಲ. ಅವರು ತಮ್ಮ ಬಿಡುವಿನ ಸಮಯವನ್ನು ನಿಲ್ದಾಣದಲ್ಲಿಯೇ ಕಳೆಯಲು ಬಯಸುತ್ತಾರೆ. ಅಂತಹ ಜನರು ಸಹ ಈ ʻರೋಪ್ ವೇʼಯಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.
ಸಹೋದರ ಸಹೋದರಿಯರೇ,
ಈ ʻರೋಪ್ ವೇʼ ಯೋಜನೆ ಕೇವಲ ಸಾರಿಗೆ ಯೋಜನೆಯಲ್ಲ. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಮೇಲೆ ʻರೋಪ್ ವೇʼ ನಿಲ್ದಾಣವನ್ನು ನಿರ್ಮಿಸಲಾಗುವುದು, ಇದರಿಂದ ಜನರು ಅದರ ತಕ್ಷಣದ ಲಾಭವನ್ನು ಪಡೆಯಬಹುದು. ಸ್ವಯಂಚಾಲಿತ ಮೆಟ್ಟಿಲುಗಳು, ಲಿಫ್ಟ್, ಗಾಲಿಕುರ್ಚಿ ರ್‍ಯಾಂಪ್, ವಿಶ್ರಾಂತಿ ಕೊಠಡಿ ಮತ್ತು ಪಾರ್ಕಿಂಗ್ ನಂತಹ ಸೌಲಭ್ಯಗಳು ಸಹ ಅಲ್ಲಿ ಲಭ್ಯವಿರುತ್ತವೆ. `ರೋಪ್ ವೇ’ ನಿಲ್ದಾಣಗಳಲ್ಲಿ ಆಹಾರ ಮತ್ತು ಪಾನೀಯ ಸೌಲಭ್ಯಗಳು ಮತ್ತು ಶಾಪಿಂಗ್ ಸೌಲಭ್ಯಗಳು ಸಹ ಇರುತ್ತವೆ. ಇದು ಕಾಶಿಯಲ್ಲಿ ವ್ಯಾಪಾರ ಮತ್ತು ಉದ್ಯೋಗದ ಮತ್ತೊಂದು ಕೇಂದ್ರವಾಗಿ ಅಭಿವೃದ್ಧಿ ಹೊಂದಲಿದೆ.
ಸ್ನೇಹಿತರೇ,
ಬನಾರಸ್‌ನ ವಾಯು ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಳ್ಳಲಾಗಿದೆ. ʻಬಬತ್ಪುರ ವಿಮಾನ ನಿಲ್ದಾಣʼದಲ್ಲಿ ಹೊಸ ʻಎಟಿಸಿ ಟವರ್ʼ ಅನ್ನು ಇಂದು ಉದ್ಘಾಟಿಸಲಾಯಿತು. ಇಲ್ಲಿಯವರೆಗೆ, ಇದು ದೇಶ ಮತ್ತು ವಿದೇಶಗಳ ಸುಮಾರು 50 ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿತ್ತು. ಹೊಸ ʻಎಟಿಸಿ ಟವರ್ʼ ನಿರ್ಮಾಣದೊಂದಿಗೆ ಈ ಸಾಮರ್ಥ್ಯ ಹೆಚ್ಚಾಗುತ್ತದೆ. ಭವಿಷ್ಯದಲ್ಲಿ ವಿಮಾನ ನಿಲ್ದಾಣವನ್ನು ವಿಸ್ತರಿಸುವುದು ಸುಲಭವಾಗಲಿದೆ.
ಸಹೋದರ ಸಹೋದರಿಯರೇ,
ʻಸ್ಮಾರ್ಟ್ ಸಿಟಿ ಮಿಷನ್ʼ ಅಡಿಯಲ್ಲಿ ವಿವಿಧ ಯೋಜನೆಗಳು ನಗರದ ಸೌಲಭ್ಯಗಳನ್ನು ಹೆಚ್ಚಿಸುತ್ತವೆ ಮತ್ತು ಕಾಶಿಯಲ್ಲಿ ಸಾರಿಗೆ ಸಾಧನಗಳನ್ನು ಸುಧಾರಿಸುತ್ತವೆ. ಕಾಶಿಯಲ್ಲಿರುವ ಭಕ್ತರು ಮತ್ತು ಪ್ರವಾಸಿಗರ ಸಣ್ಣ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ʻತೇಲುವ ಜೆಟ್ಟಿʼಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ʻನಮಾಮಿ ಗಂಗೆʼ ಯೋಜನೆ ಅಡಿಯಲ್ಲಿ ಗಂಗಾ ನದಿಯುದ್ದಕ್ಕೂ ಇರುವ ನಗರಗಳಲ್ಲಿ ಒಳಚರಂಡಿ ಸಂಸ್ಕರಣೆಯ ಬೃಹತ್ ಜಾಲವನ್ನು ಅಭಿವೃದ್ಧಿಪಡಿಸಲಾಗಿದೆ. ಕಳೆದ 8-9 ವರ್ಷಗಳಲ್ಲಿ ಗಂಗಾನದಿಯ ಪುನರುಜ್ಜೀವನಗೊಂಡ ಘಟ್ಟಗಳನ್ನು ನೀವು ನೋಡುತ್ತಿದ್ದೀರಿ. ಈಗ ಗಂಗಾನದಿಯ ಎರಡೂ ಬದಿಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ಗಂಗಾನದಿಯ ಎರಡೂ ಬದಿಗಳಲ್ಲಿ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಸರಕಾಋ ಪ್ರಯತ್ನಿಸುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ಈ ಬಗ್ಗೆ ಪ್ರಕಟಣೆಗಳನ್ನು ಸಹ ಮಾಡಲಾಗಿದೆ. ರಸಗೊಬ್ಬರಗಳು ಮತ್ತು ನೈಸರ್ಗಿಕ ಕೃಷಿಗಾಗಿ ಹೊಸ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಸ್ನೇಹಿತರೇ,
ಬನಾರಸ್ ಜೊತೆಗೆ ಇಡೀ ಪೂರ್ವ ಉತ್ತರ ಪ್ರದೇಶವು ಕೃಷಿ ಮತ್ತು ಕೃಷಿ ರಫ್ತಿನ ಪ್ರಮುಖ ಕೇಂದ್ರವಾಗುತ್ತಿರುವ ವಿಷಯವು ನನಗೆ ಸಂತೋಷ ತಂದಿದೆ. ಇಂದು, ಹಣ್ಣುಗಳು ಮತ್ತು ತರಕಾರಿಗಳ ಸಂಸ್ಕರಣೆ, ಸಂಗ್ರಹಣೆ ಮತ್ತು ಸಾಗಣೆಗೆ ಸಂಬಂಧಿಸಿದ ಅನೇಕ ಆಧುನಿಕ ಸೌಲಭ್ಯಗಳು ವಾರಣಾಸಿಯಲ್ಲಿ ಲಭ್ಯವಿವೆ. ಇಂದು, ಬನಾರಸ್‌ನ 'ಲಾಂಗ್ಡಾ' ಮಾವು, ಗಾಜಿಪುರದ ಬೆಂಡೆಕಾಯಿ ಮತ್ತು ಹಸಿರು ಮೆಣಸಿನಕಾಯಿ, ಜೌನ್ಪುರದ ಮೂಲಂಗಿ ಮತ್ತು ಕಲ್ಲಂಗಡಿಗಳು ವಿದೇಶಿ ಮಾರುಕಟ್ಟೆಗಳನ್ನು ತಲುಪಲು ಪ್ರಾರಂಭಿಸಿವೆ. ಈ ಸಣ್ಣ ಪಟ್ಟಣಗಳಲ್ಲಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳು ಈಗ ಲಂಡನ್ ಮತ್ತು ದುಬೈ ಮಾರುಕಟ್ಟೆಗಳಲ್ಲಿ ಲಭ್ಯವಾಗುತ್ತಿವೆ. ರಫ್ತು ಹೆಚ್ಚಿದಷ್ಟೂ ರೈತರ ಕೈಯಲ್ಲಿ ಹಣ ಹೆಚ್ಚುತ್ತದೆ ಎಂದು ನಮಗೆಲ್ಲರಿಗೂ ಗೊತ್ತಿದೆ. ʻಕಾರ್ಖಿಯಾನ್ ಫುಡ್ ಪಾರ್ಕ್ʼನಲ್ಲಿ ನಿರ್ಮಿಸಲಾಗಿರುವ ʻಇಂಟಿಗ್ರೇಟೆಡ್ ಪ್ಯಾಕ್ ಹೌಸ್ʼನಿಂದ ರೈತರಿಗೆ ಮತ್ತು ಹೂವಿನ ವ್ಯಾಪಾರಿಗಳಿಗೆ ಸಾಕಷ್ಟು ಸಹಾಯವಾಗಲಿದೆ. ಇಂದು, ಪೊಲೀಸ್ ಪಡೆಗೆ ಸಂಬಂಧಿಸಿದ ಯೋಜನೆಗಳನ್ನು ಸಹ ಇಲ್ಲಿ ಉದ್ಘಾಟಿಸಲಾಯಿತು. ಇದು ಪೊಲೀಸ್ ಪಡೆಯ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದರ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸುಧಾರಣೆಗೂ ದಾರಿ ಮಾಡಲಿದೆ ಎಂದು ನನಗೆ ಖಾತರಿಯಿದೆ.
ಸ್ನೇಹಿತರೇ,
ನಾವು ಆಯ್ಕೆ ಮಾಡಿಕೊಂಡಿರುವ ಅಭಿವೃದ್ಧಿಯ ಮಾರ್ಗವು ಅನುಕೂಲ ಮತ್ತು ಸಂವೇದನಾಶೀಲತೆ ಎರಡನ್ನೂ ಹೊಂದಿದೆ. ಕುಡಿಯುವ ನೀರು ಈ ಪ್ರದೇಶದ ಸವಾಲುಗಳಲ್ಲಿ ಒಂದಾಗಿದೆ. ಇಂದು ಕುಡಿಯುವ ನೀರಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಹೊಸ ಯೋಜನೆಗಳ ಕೆಲಸವೂ ಪ್ರಾರಂಭವಾಗಿದೆ. ನಮ್ಮ ಸರಕಾರವು ಬಡವರ ಸಮಸ್ಯೆಗಳನ್ನು ನಿವಾರಿಸಲು 'ಹರ್ ಘರ್ ನಲ್' ಎಂಬ ಜಲ ಅಭಿಯಾನವನ್ನು ನಡೆಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಎಂಟು ಕೋಟಿ ಹೊಸ ಮನೆಗಳಿಗೆ ನಲ್ಲಿ ನೀರು ತಲುಪುತ್ತಿದೆ. ಕಾಶಿ ಮತ್ತು ಹತ್ತಿರದ ಹಳ್ಳಿಗಳ ಸಾವಿರಾರು ಜನರು ಪ್ರಯೋಜನ ಪಡೆದಿದ್ದಾರೆ. ʻಉಜ್ವಲʼ ಯೋಜನೆಯಿಂದ ಬನಾರಸ್ ಜನರು ಸಹ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಸೇವಾಪುರಿಯಲ್ಲಿನ ಹೊಸ ಬಾಟ್ಲಿಂಗ್ ಘಟಕವು ಈ ಯೋಜನೆಯ ಫಲಾನುಭವಿಗಳಿಗೆ ಸಹಾಯ ಮಾಡುತ್ತದೆ. ಇದು ಪೂರ್ವ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಿಹಾರದಲ್ಲಿ ಅನಿಲ ಸಿಲಿಂಡರ್‌ಗಳ ಪೂರೈಕೆಗೆ ಅನುಕೂಲವಾಗಲಿದೆ.
ಸ್ನೇಹಿತರೇ,
ಇಂದು ಕೇಂದ್ರ ಮತ್ತು ಉತ್ತರ ಪ್ರದೇಶದ ಸರಕಾರವು ಬಡವರ ಬಗ್ಗೆ ಕಾಳಜಿ ವಹಿಸುವ ಸರ್ಕಾರವಾಗಿದೆ. ನೀವು ನನ್ನನ್ನು ಪ್ರಧಾನಿ ಅಥವಾ ಸರಕಾರ ಎಂದು ಕರೆಯಬಹುದು, ಆದರೆ ಮೋದಿ ಪಾಲಿಗೆ ಆತ ನಿಮ್ಮ ʻಸೇವಕʼ. ಈ ಸೇವಾ ಮನೋಭಾವದಿಂದ ನಾನು ಕಾಶಿ, ಉತ್ತರ ಪ್ರದೇಶ ಮತ್ತು ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ. ಸ್ವಲ್ಪ ಹೊತ್ತಿನ ಹಿಂದೆ, ನಾನು ನನ್ನ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಮಾತನಾಡುತ್ತಿದ್ದೆ. ಕೆಲವರು ದೃಷ್ಟಿಯನ್ನು ಪಡೆದರೆ, ಇನ್ನು ಕೆಲವರು ಸರಕಾರದ ನೆರವಿನೊಂದಿಗೆ 'ಸ್ವಸ್ಥ ದೃಷ್ಟಿ ಸಮೃದ್ಧಿ ಕಾಶಿ' ಅಭಿಯಾನದ ಮೂಲಕ ಜೀವನೋಪಾಯಕ್ಕಾಗಿ ನೆರವು ಪಡೆದರು. ನಾನು ಭೇಟಿಯಾದ ಸಜ್ಜನರೊಬ್ಬರು – “ಸರ್, ʻಸ್ವಸ್ಥ ದೃಷ್ಟಿʼ ಯೋಜನೆಯಡಿ ಸುಮಾರು 1,000 ಜನರಿಗೆ ಉಚಿತವಾಗಿ ಕಣ್ಣಿನ ಪೊರೆ ಚಿಕಿತ್ಸೆ ಮಾಡಲಾಗಿದೆʼʼ ಎಂದು ಹೇಳುತ್ತಿದ್ದರು. ಇಂದು ಬನಾರಸ್‌ನಲ್ಲಿ ಸಾವಿರಾರು ಜನರು ಸರಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂಬುದು ನನಗೆ ತೃಪ್ತಿ ತಂದಿದೆ. 2014ರ ಹಿಂದಿನ ದಿನಗಳನ್ನು ನೀವು ನೆನಪಿಸಿಕೊಳ್ಳಿರಿ. ಆಗ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಸಹ ಕಷ್ಟದ ಕೆಲಸವಾಗಿತ್ತು. ಸಾಮಾನ್ಯ ಕುಟುಂಬವೊಂದು ಬ್ಯಾಂಕುಗಳಿಂದ ಸಾಲ ಪಡೆಯುವುದಿರಲಿ, ಅದರ ಬಗ್ಗೆ ಯೋಚಿಸಲು ಸಹ ಸಾಧ್ಯವಿರಲಿಲ್ಲ. ಇಂದು ಕಡುಬಡವರು ಕೂಡ ʻಜನ್ ಧನ್ʼ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಸರಕಾರದ ನೆರವು ಇಂದು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಬರುತ್ತದೆ. ಇಂದು, ಸಣ್ಣ ರೈತರಾಗಿರಲಿ, ಸಣ್ಣ ಉದ್ಯಮಿಯಾಗಿರಲಿ ಅಥವಾ ನಮ್ಮ ಸಹೋದರಿಯರ ಸ್ವಸಹಾಯ ಗುಂಪುಗಳಾಗಿರಲಿ, ಪ್ರತಿಯೊಬ್ಬರೂ ʻಮುದ್ರಾʼದಂತಹ ಯೋಜನೆಗಳ ಅಡಿಯಲ್ಲಿ ಸುಲಭ ಸಾಲವನ್ನು ಪಡೆಯಬಹುದು. ನಾವು ದನಗಾಹಿಗಳು ಮತ್ತು ಮತ್ಸ್ಯ ಕೃಷಿಯಲ್ಲಿ ತೊಡಗಿರುವವರಿಗೂ ʻಕಿಸಾನ್ ಕ್ರೆಡಿಟ್ ಕಾರ್ಡ್ʼ ನೀಡಿದ್ದೇವೆ. ಮೊದಲ ಬಾರಿಗೆ, ನಮ್ಮ ಬೀದಿ ಬದಿ ವ್ಯಾಪಾರಿ ಸಹೋದ್ಯೋಗಿಗಳು ʻಪಿಎಂ ಸ್ವನಿಧಿʼ ಯೋಜನೆ ಅಡಿಯಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯಲು ಪ್ರಾರಂಭಿಸಿದ್ದಾರೆ. ನಮ್ಮ ವಿಶ್ವಕರ್ಮ ಸಹೋದ್ಯೋಗಿಗಳಿಗೆ ಸಹಾಯ ಮಾಡಲು ನಾವು ಈ ವರ್ಷದ ಬಜೆಟ್‌ನಲ್ಲಿ ʻಪಿಎಂ ವಿಶ್ವಕರ್ಮ ಯೋಜನೆʼಯನ್ನು ತಂದಿದ್ದೇವೆ. ʻಅಮೃತ ಕಾಲʼದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬ ಭಾರತೀಯನೂ ಕೊಡುಗೆ ನೀಡಬೇಕು ಮತ್ತು ಯಾರೂ ಸಹ ಹಿಂದೆ ಬೀಳಬಾರದು ಎಂಬುದು ನಮ್ಮ ಪ್ರಯತ್ನವಾಗಿದೆ.
ಸಹೋದರ ಸಹೋದರಿಯರೇ,
ʻಖೇಲೋ ಬನಾರಸ್ʼ ಸ್ಪರ್ಧೆಯ ವಿಜೇತರೊಂದಿಗೆ ನಾನು ಮಾತನಾಡಿದೆ. ಒಂದು ಲಕ್ಷಕ್ಕೂ ಹೆಚ್ಚು ಯುವಕರು ವಿವಿಧ ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಿದ್ದರು. ನನ್ನ ಬನಾರಸ್ ಸಂಸದೀಯ ಕ್ಷೇತ್ರದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಬನಾರಸ್‌ನ ಯುವಕರಿಗೆ ಆಡಲು ಗರಿಷ್ಠ ಅವಕಾಶಗಳು ಸಿಗುವಂತೆ ಇಲ್ಲಿ ಹೊಸ ಕ್ರೀಡಾ ಸೌಲಭ್ಯಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ʻಸಿಗ್ರಾ ಕ್ರೀಡಾಂಗಣʼದ ಪುನರಾಭಿವೃದ್ಧಿಯ ಹಂತ -1 ಕಳೆದ ವರ್ಷ ಪ್ರಾರಂಭವಾಯಿತು. ಇಂದು ಹಂತ-2 ಮತ್ತು ಹಂತ -3ಕ್ಕೆ ಅಡಿಪಾಯ ಹಾಕಲಾಗಿದೆ. ಈಗ, ವಿವಿಧ ಕ್ರೀಡೆಗಳು ಮತ್ತು ಹಾಸ್ಟೆಲ್‌ಗಳಿಗೆ ಆಧುನಿಕ ಸೌಲಭ್ಯಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುವುದು. ಈಗ ವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಸಹ ನಿರ್ಮಿಸಲಾಗುವುದು. ಈ ಕ್ರೀಡಾಂಗಣ ಸಿದ್ಧವಾದಾಗ, ಕಾಶಿಗೆ ಮತ್ತೊಂದು ಆಕರ್ಷಣೆ ಸೇರ್ಪಡೆಯಾಗಲಿದೆ.
ಸಹೋದರ ಸಹೋದರಿಯರೇ,
ಇಂದು ಉತ್ತರ ಪ್ರದೇಶವು ಅಭಿವೃದ್ಧಿಯ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಆಯಾಮಗಳಿಗೆ ಸಾಕ್ಷಿಯಾಗುತ್ತಿದೆ. ನಾಳೆ ಅಂದರೆ ಮಾರ್ಚ್ 25ರಂದು ಯೋಗಿ ಆದಿತ್ಯನಾಥ್ ಅವರ ಎರಡನೇ ಇನ್ನಿಂಗ್ಸ್‌ಗೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಎರಡು-ಮೂರು ದಿನಗಳ ಹಿಂದೆ ಯೋಗಿ ಅವರು ಉತ್ತರ ಪ್ರದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಹತಾಶೆಯ ಹಳೆಯ ಚಿತ್ರಣದಿಂದ ಹೊರಬಂದ ಉತ್ತರ ಪ್ರದೇಶವು ಭರವಸೆ ಮತ್ತು ಆಕಾಂಕ್ಷೆಯ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಎಲ್ಲಿ ಭದ್ರತೆ ಮತ್ತು ಅನುಕೂಲತೆ ಪ್ರವರ್ಧಮಾನಕ್ಕೆ ಬರುತ್ತದೆಯೋ ಅಲ್ಲಿ ಸಮೃದ್ಧಿ ಇರುತ್ತದೆ. ಇಂದು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು ಇದೇ. ಇಂದು ಉದ್ಘಾಟಿಸಲಾದ ಹೊಸ ಯೋಜನೆಗಳು ಸಮೃದ್ಧಿಯ ಹಾದಿಯನ್ನು ಬಲಪಡಿಸುತ್ತವೆ. ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ
ಅನೇಕ ಮತ್ತೊಮ್ಮೆ ಅಭಿನಂದನೆಗಳು. ನಿಮಗೆ ನನ್ನ ತುಂಬು ಹಾರೈಕೆಗಳು. ಹರ ಹರ ಮಹಾದೇವ!
ಧನ್ಯವಾದಗಳು.