ನಮಸ್ತೇ, ಓಂ ಶಾಂತಿ!
ಕಾರ್ಯಕ್ರಮದಲ್ಲಿ ಹಾಜರಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಜೀ, ರಾಜಸ್ಥಾನ ರಾಜ್ಯಪಾಲ ಶ್ರೀ ಕಲ್ರಾಜ್ ಮಿಶ್ರಾ ಜೀ, ರಾಜಸ್ಥಾನ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಜೀ, ಗುಜರಾತ್ ಮುಖ್ಯಮಂತ್ರಿ ಶ್ರೀ ಭುಪೇಂದ್ರ ಭಾಯಿ ಪಟೇಲ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಕಿಶನ್ ರೆಡ್ಡಿ ಜೀ, ಭುಪೇಂದರ್ ಯಾದವ್ ಜೀ, ಅರ್ಜುನ್ ರಾಂ ಮೇಘವಾಲ್ ಜೀ, ಪರಶೋತ್ತಮ ರೂಪಾಲ ಜೀ, ಶ್ರೀ ಕೈಲಾಶ್ ಚೌಧುರಿ ಜೀ, ರಾಜಸ್ಥಾನ ವಿಧಾನ ಸಭೆ ವಿಪಕ್ಷ ನಾಯಕರಾದ ಶ್ರೀ ಗುಲಾಬ್ ಚಂದ್ ಕಟಾರಿಯಾ ಜೀ, ಬ್ರಹ್ಮ ಕುಮಾರಿಸ್ ಕಾರ್ಯನಿರ್ವಹಣಾ ಕಾರ್ಯದರ್ಶಿ ರಾಜಯೋಗಿ ಮೃತ್ಯುಂಜಯ ಜೀ, ರಾಜಯೋಗಿನಿ ಸಹೋದರಿ ಮೋಹಿನಿ ಜೀ, ಸಹೋದರಿ ಚಂದ್ರಿಕಾ ಜೀ, ಬ್ರಹ್ಮ ಕುಮಾರೀಸ್ ನ ಇತರ ಎಲ್ಲಾ ಸಹೋದರಿಯರೇ, ಮಹಿಳೆಯರೇ ಮತ್ತು ಮಹನೀಯರೇ ಮತ್ತು ಎಲ್ಲಾ ಯೋಗಿಗಳೇ!.
ತಮ್ಮದೇ ಆದಂತಹ ಪ್ರತ್ಯೇಕ ಜಾಗೃತಿಯನ್ನು ಹೊಂದಿರುವಂತಹ ಕೆಲವು ಸ್ಥಳಗಳಿವೆ, ಅಲ್ಲಿ ಅವುಗಳದೇ ಆದ ಪ್ರತ್ಯೇಕ ಶಕ್ತಿ ಪ್ರವಹಿಸುತ್ತಿರುತ್ತದೆ!. ಈ ಶಕ್ತಿ ಶ್ರೇಷ್ಠ ವ್ಯಕ್ತಿಗಳಿಗೆ ಸೇರಿದುದಾಗಿರುತ್ತದೆ ಮತ್ತು ಅವರ ತಪಸ್ಸಿನ ಮೂಲಕ ಅರಣ್ಯಗಳು, ಪರ್ವತಗಳು, ಮತ್ತು ಗಿರಿಗಳಲ್ಲಿ ಪ್ರವಹಿಸುತ್ತಿರುತ್ತದೆ, ಆ ಜಾಗೃತಿಯಿಂದಾಗಿ ಅವುಗಳು ಮಾನವ ಪ್ರೇರಣೆಯ ಕೇಂದ್ರಗಳಾಗುತ್ತವೆ. ಮೌಂಟ್ ಅಬುವಿನ ಸೆಳೆತ, ಆಕರ್ಷಣೆ ದಾದಾ ಲೇಖರಾಜ್ ಮತ್ತು ಅವರಂತಹ ಇತರ ಹಲವು ವ್ಯಕ್ತಿತ್ವಗಳಿಂದ ಒಡಗೂಡಿ ನಿರಂತರವಾಗಿ ಬೆಳೆಯುತ್ತಿದೆ.
ಇಂದು ಬ್ರಹ್ಮ ಕುಮಾರೀಸ್ ಸಂಸ್ಥೆ ಈ ಪವಿತ್ರ ಸ್ಥಳದಿಂದ ಸುವರ್ಣ ಭಾರತದತ್ತ ಸಾಗುವ ಬೃಹತ್ ಪ್ರಚಾರಾಂದೋಲನವನ್ನು ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ಆರಂಭ ಮಾಡುತ್ತಿದೆ. ಅದು ಸುವರ್ಣ ಭಾರತದ ಸ್ಫೂರ್ತಿಯನ್ನು ಮತ್ತು ಆಧ್ಯಾತ್ಮಿಕತೆಯನ್ನು ಒಳಗೊಂಡಿದೆ. ಅದರಲ್ಲಿ ದೇಶಕ್ಕೆ ಪ್ರೇರಣೆ ಇದೆ ಹಾಗು ಬ್ರಹ್ಮ ಕುಮಾರಿಯರ ಪ್ರಯತ್ನಗಳಿವೆ.
ದೇಶದ ಕನಸುಗಳು ಮತ್ತು ದೃಢ ನಿರ್ಧಾರಗಳ ವಿಷಯದಲ್ಲಿ ನಿರಂತರ ಸಂಬಂಧ ಹೊಂದಿರುವುದಕ್ಕಾಗಿ ನಾನು ಬ್ರಹ್ಮ ಕುಮಾರೀಸ್ ಕುಟುಂಬವನ್ನು ಬಹಳ ಬಹಳ ಅಭಿನಂದಿಸುತ್ತೇನೆ. ದಾದಿ ಜಾನಕಿ ಮತ್ತು ರಾಜಯೋಗಿನಿ ದಾದಿ ಹೃದಯ್ ಮೋಹಿನಿ ಜೀ ಅವರು ನಮ್ಮೊಂದಿಗಿಲ್ಲ. ಅವರು ನನ್ನ ಮೇಲೆ ಬಹಳ ಪ್ರೀತಿಯನ್ನು ಹೊಂದಿದ್ದರು.ಇಂದಿನ ಕಾರ್ಯಕ್ರಮದಲ್ಲಿ ಅವರ ಶುಭಾಶೀರ್ವಾದಗಳ ಅನುಭವ ನನಗೆ ಆಗುತ್ತಿದೆ.
ಸ್ನೇಹಿತರೆ,
“ಸಾಧನೆ” ಮತ್ತು ದೃಢ ನಿರ್ಧಾರಗಳಲ್ಲಿ ಆತ್ಮವಿಶ್ವಾಸ ಇದ್ದಾಗ ಮಾತೃತ್ವದ ಭಾವನೆ ಮಾನವ ಕುಲದ ಜೊತೆಗೆ ಜೋಡಿಸಲ್ಪಡುತ್ತದೆ.ನಮ್ಮ ವೈಯಕ್ತಿಕ ಸಾಧನೆಗಳಲ್ಲಿ 'इदं न मम्' ಅಂದರೆ ಯಾವುದೂ ನನ್ನದಲ್ಲ ಎಂಬ ಭಾವನೆ ಬಂದಾಗ, ಅಲ್ಲಿ ಹೊಸ ಶಕೆ ಆರಂಭವಾಗುತ್ತದೆ. ನಮ್ಮ ನಿರ್ಧಾರಗಳಿಂದಾಗಿ ಹೊಸ ಸೂರ್ಯೋದಯವಾಗುತ್ತದೆ. ಸೇವೆಯ ಪುಣ್ಯಕರ ಉತ್ಸಾಹ, ಸ್ಫೂರ್ತಿ, ಮತ್ತು ತ್ಯಾಗದ ಮನೋಭಾವ ಇಂದು ಅಮೃತ ಮಹೋತ್ಸವ ಸಂದರ್ಭದಲ್ಲಿ ನವಭಾರತದಲ್ಲಿ ಉದಯಿಸುತ್ತಿದೆ. ಈ ತ್ಯಾಗದ ಮನೋಭಾವ ಮತ್ತು ಕರ್ತವ್ಯದ ಮನೋಭಾವದೊಂದಿಗೆ ಕೋಟ್ಯಂತರ ದೇಶವಾಸಿಗಳು ಇಂದು ಸುವರ್ಣ ಭಾರತಕ್ಕೆ ಶಿಲಾನ್ಯಾಸ ಮಾಡುತ್ತಿದ್ದಾರೆ.
ನಮ್ಮ ಕನಸುಗಳಿಗೂ ಮತ್ತು ರಾಷ್ಟ್ರದ ಕನಸುಗಳಿಗೂ ವ್ಯತ್ಯಾಸವಿಲ್ಲ. ನಮ್ಮ ವೈಯಕ್ತಿಕ ಮತ್ತು ರಾಷ್ಟ್ರೀಯ ಯಶಸ್ಸುಗಳು ಭಿನ್ನ ಭಿನ್ನವಲ್ಲ. ನಮ್ಮ ಪ್ರಗತಿ ದೇಶದ ಪ್ರಗತಿಯಲ್ಲಿ ಅಡಕವಾಗಿದೆ. ರಾಷ್ಟ್ರವು ನಮ್ಮಿಂದಾಗಿ ಅಸ್ತಿತ್ವದಲ್ಲಿರುತ್ತದೆ ಮತ್ತು ರಾಷ್ಟ್ರದಿಂದಾಗಿ ನಮಗೆ ಅಸ್ತಿತ್ವ ಇರುತ್ತದೆ. ಈ ವಾಸ್ತವವನ್ನು ಅರಿತುಕೊಳ್ಳುವುದು ನವ ಭಾರತವನ್ನು ನಿರ್ಮಾಣ ಮಾಡುವಲ್ಲಿ ಭಾರತೀಯರ ಬಹಳ ದೊಡ್ಡ ಶಕ್ತಿಯಾಗುತ್ತಿದೆ.
ಇಂದು ದೇಶವು ಏನು ಮಾಡುತ್ತಿದೆಯೋ ಅದರಲ್ಲಿ “ಸಬ್ ಕಾ ಪ್ರಯಾಸ್” (ಪ್ರತಿಯೊಬ್ಬರ ಪ್ರಯತ್ನ) ಇದೆ. “ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ದೇಶದ ಮೂಲ ಮಂತ್ರವಾಗುತ್ತಿದೆ. ಇಂದು ನಾವು ತಾರತಮ್ಯ ಇಲ್ಲದಂತಹ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡುತ್ತಿದ್ದೇವೆ, ಸಮಾನತೆಯನ್ನು ಆಧರಿಸಿದ ಮತ್ತು ಸಾಮಾಜಿಕ ನ್ಯಾಯ ಇರುವ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ತೊಡಗಿದ್ದೇವೆ. ಮತ್ತು ನಾವು ಹೊಸ ಚಿಂತನಾಕ್ರಮ ಹಾಗು ಧೋರಣೆಯನ್ನು ಒಳಗೊಂಡ ಹಾಗು ಪ್ರಗತಿಪರ ನಿರ್ಧಾರಗಳನ್ನು ಕೈಗೊಳ್ಳುವ ಭಾರತವು ಉದಯಿಸುತ್ತಿರುವುದನ್ನು ನೋಡುತ್ತಿದ್ದೇವೆ.
ಸ್ನೇಹಿತರೇ,
ಭಾರತದ ಅತ್ಯಂತ ದೊಡ್ಡ ಶಕ್ತಿ ಇರುವುದು ಅದರ ಮೂಲ ಗುಣವನ್ನು ಕಾಯ್ದುಕೊಳ್ಳುವಲ್ಲಿ. ಎಂತಹ ಸಂದರ್ಭವೇ ಬರಲಿ ಅದು ಈ ಗುಣವನ್ನು ಕೈಬಿಡುವುದಿಲ್ಲ. ನಮ್ಮ ಪ್ರಾಚೀನ ಚರಿತ್ರೆ ಕೂಡಾ ಇದಕ್ಕೆ ಸಾಕ್ಷಿಯಾಗಿದೆ. ಜಗತ್ತು ಕತ್ತಲೆಯ ಕೂಪದಲ್ಲಿದ್ದಾಗ ಮಹಿಳೆಯರ ಬಗ್ಗೆ ಹಳೆಯ ಚಿಂತನಾಕ್ರಮದಲ್ಲಿ ತೊಡಗಿಕೊಂಡಿದ್ದಾಗ ಭಾರತವು ಮಹಿಳೆಯರನ್ನು ಮಾತೃಶಕ್ತಿ ಮತ್ತು ದೇವತೆಯನ್ನಾಗಿ ಪೂಜಿಸತೊಡಗಿತ್ತು. ಗಾರ್ಗಿ, ಮೈತ್ರೇಯಿ, ಅನುಸೂಯಾ, ಅರುಂಧತಿ ಮತ್ತು ಮದಲಸಾ ರಂತಹ ಸಮಾಜಕ್ಕೆ ಜ್ಞಾನ ನೀಡಿದಂತಹ ಮಹಿಳಾ ವಿದ್ವಾಂಸರು ನಮ್ಮಲ್ಲಿದ್ದರು. ಸಂಕಷ್ಟಮಯ ಮಧ್ಯಕಾಲೀನ ಕಾಲಘಟ್ಟದಲ್ಲಿಯೂ ಪನ್ನಾ ದೈ ಮತ್ತು ಮೀರಾಬಾಯಿ ಅವರಂತಹ ಶ್ರೇಷ್ಠ ಮಹಿಳೆಯರು ಈ ದೇಶದಲ್ಲಿದ್ದರು. ಮತ್ತು ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ದೇಶವು ಸ್ಮರಿಸುವಾಗ ಅಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡ ಹಲವಾರು ಮಹಿಳೆಯರು ಗೋಚರಿಸುತ್ತಾರೆ. ಕಿತ್ತೂರು ರಾಣಿ ಚೆನ್ನಮ್ಮ, ಮಾತಂಗಿನಿ ಹಜ್ರಾ, ರಾಣಿ ಲಕ್ಶ್ಮೀಬಾಯಿ, ವೀರಾಂಗನಾ ಝಲ್ಕರಿ ಬಾಯಿ ಅವರಿಂದ ಹಿಡಿದು ಅಹಿಲ್ಯಾಬಾಯಿ ಹೋಳ್ಕರ್ ಮತ್ತು ಸಾವಿತ್ರಿ ಬಾಯಿ ಫುಲೆ ಅವರವರೆಗೆ ಶಾಶ್ವತ ಹೆಸರನ್ನು ಹೊತ್ತ ಅನೇಕ ಮಹಿಳೆಯರು ಸಾಮಾಜಿಕ ಕ್ಷೇತ್ರದಲ್ಲಿ ಭಾರತದ ಗುರುತಿಸುವಿಕೆಯನ್ನು ನಿರ್ವಹಿಸಿಕೊಂಡು ಬಂದಿದ್ದಾರೆ.
ಇಂದು ದೇಶವು ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಮಹಿಳಾ ಶಕ್ತಿಯ ಕೊಡುಗೆಯನ್ನೂ ಸ್ಮರಿಸುತ್ತಿದೆ. ಮತ್ತು ಅವರ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನಿಸುತ್ತಿದೆ. ಆದುದರಿಂದ ಹೆಣ್ಣು ಮಕ್ಕಳು ಸೈನಿಕ ಶಾಲೆಗಳಲ್ಲಿ ಕಲಿಯುವ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಮತ್ತು ಈಗ ದೇಶದ ಯಾವುದೇ ಹೆಣ್ಣು ಮಗು ದೇಶದ ರಕ್ಷಣೆಗಾಗಿ ಸೇನೆಗೆ ಹೋಗಬಹುದು ಮತ್ತು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಬಹುದು. ಹೆರಿಗೆ ರಜೆಯನ್ನು ಹೆಚ್ಚಿಸುವಂತಹ ನಿರ್ಧಾರಗಳು ಮಹಿಳೆಯರ ಜೀವನ ಮತ್ತು ಉದ್ಯೋಗವನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡಂತಹವಾಗಿವೆ.
ದೇಶದ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚುತ್ತಿದೆ. 2019ರ ಚುನಾವಣೆಯಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದನ್ನು ನಾವು ನೋಡಿದ್ದೇವೆ. ಇಂದು ದೇಶದ ಸರಕಾರದಲ್ಲಿ ಮಹಿಳಾ ಸಚಿವರು ಗುರುತರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಮತ್ತು ಪ್ರಮುಖವಾಗಿ ಸಮಾಜವೇ ಇಂತಹ ಬದಲಾವಣೆಗೆ ದಾರಿ ಒದಗಿಸುತ್ತಿದೆ. ಇತ್ತೀಚಿನ ದತ್ತಾಂಶಗಳ ಪ್ರಕಾರ ದೇಶದಲ್ಲಿ “ಬೇಟಿ ಬಚಾವೋ, ಬೇಟಿ ಪಡಾವೋ” ಆಂದೋಲನದ ಯಶಸ್ಸಿನಿಂದಾಗಿ ಹಲವು ವರ್ಷಗಳ ಬಳಿಕ ಮಹಿಳೆಯರ ಸಂಖ್ಯಾನುಪಾತ ಹೆಚ್ಚಾಗುತ್ತಿದೆ. ಈ ಬದಲಾವಣೆಗಳು ನವ ಭಾರತ ಎಂದರೇನು ಮತ್ತು ಅದು ಹೇಗಿರುತ್ತದೆ ಹಾಗು ಎಷ್ಟೊಂದು ಶಕ್ತಿಶಾಲಿಯಾಗಿರುತ್ತದೆ ಎಂಬುದನ್ನು ಸೂಚಿಸುತ್ತವೆ.
ಸ್ನೇಹಿತರೇ,
ನಮ್ಮ ಸಾಧು ಸಂತರು ಹೇಳುತ್ತಿದ್ದುದು ನಿಮಗೆಲ್ಲ ಗೊತ್ತಿದೆ. 'तमसो मा ज्योतिर्गमय, मृत्योर्मामृतं गमय' ಎಂಬುದು ಉಪನಿಷದ್ ಗಳಲ್ಲಿದೆ. ಅಂದರೆ ನಾವು ಕತ್ತಲೆಯಿಂದ ಬೆಳಕಿನೆಡೆಗೆ ಚಲಿಸುತ್ತೇವೆ, ಸಾವಿನಿಂದ, ಸಮಸ್ಯೆಗಳಿಂದ ಅಮೃತದತ್ತ ಸಾಗುತ್ತೇವೆ. ಅಮೃತ ಮತ್ತು ಶಾಶ್ವತದತ್ತ ಸಾಗುವ ಹಾದಿ ಜ್ಞಾನವಿಲ್ಲದೆ ಬೆಳಗಲಾರದು. ಅದುದರಿಂದ ಈ ಪುಣ್ಯಕರ ಕಾಲವು ನಮ್ಮ ಜ್ಞಾನ, ಸಂಶೋಧನೆ ಮತ್ತು ಅನ್ವೇಷಣೆಗಾಗಿರುವ ಕಾಲ. ಪ್ರಾಚೀನ ಸಂಪ್ರದಾಯಗಳು ಮತ್ತು ಪರಂಪರೆಯ ತಳಹದಿಯ ಮೇಲೆ ನಾವು ಭಾರತವನ್ನು ನಿರ್ಮಾಣ ಮಾಡಬೇಕು ಮತ್ತು ಅದನ್ನು ಆಧುನಿಕತೆಯಲ್ಲಿ ಅನಂತವಾಗಿ ವಿಸ್ತರಿಸಬೇಕು. ನಾವು ನಮ್ಮ ಸಂಸ್ಕೃತಿಯನ್ನು, ನಾಗರಿಕತೆಯನ್ನು, ಮೌಲ್ಯಗಳನ್ನು ಜೀವಂತವಾಗಿಡಬೇಕು, ನಮ್ಮ ಆಧ್ಯಾತ್ಮಿಕತೆಯನ್ನು ಮತ್ತು ವೈವಿಧ್ಯವನ್ನು ಕಾಪಿಟ್ಟು ಅದನ್ನು ಉತ್ತೇಜಿಸಬೇಕು. ಹಾಗು ಇದೇ ವೇಳೆಗೆ ತಂತ್ರಜ್ಞಾನ, ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯದ ವ್ಯವಸ್ಥೆಗಳನ್ನು ನಿರಂತರವಾಗಿ ಆಧುನೀಕರಿಸುತ್ತ ಸಾಗಬೇಕು.
ದೇಶದ ಇಂತಹ ಪ್ರಯತ್ನಗಳಲ್ಲಿ ಬ್ರಹ್ಮ ಕುಮಾರೀಸ್ ನಂತಹ ಆದ್ಯಾತ್ಮಿಕ ಸಂಸ್ಥೆಗಳು ಬಹಳ ದೊಡ್ಡ ಪಾತ್ರವನ್ನು ನಿಭಾಯಿಸುವುದಕ್ಕಿದೆ. ಆಧ್ಯಾತ್ಮಿಕವಲ್ಲದೆ ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರ ಸಹಿತ ಹಲವು ಕ್ಷೇತ್ರಗಳಲ್ಲಿ ನೀವು ಬಹಳ ದೊಡ್ಡ ಕೆಲಸ ಮಾಡುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಮತ್ತು ನೀವು ಇಂದು ಆರಂಭ ಮಾಡಿರುವ ಆಂದೋಲನ ಅದನ್ನು ಇನ್ನಷ್ಟು ಮುಂದೆ ಕೊಂಡೊಯ್ಯಬಲ್ಲುದು. ನೀವು ಅಮೃತ ಮಹೋತ್ಸವಕ್ಕಾಗಿ ಹಲವು ಗುರಿಗಳನ್ನು ನಿಗದಿ ಮಾಡಿರುವಿರಿ. ನಿಮ್ಮ ಪ್ರಯತ್ನಗಳು ಖಂಡಿತವಾಗಿಯೂ ದೇಶಕ್ಕೆ ಹೊಸ ಶಕ್ತಿ ಮತ್ತು ಬಲವನ್ನು ಒದಗಿಸಲಿವೆ.
ಇಂದು ದೇಶವು ಸಾವಯವ ಕೃಷಿಯತ್ತ ಪ್ರಯತ್ನಗಳನ್ನು ಮಾಡುತ್ತಿದೆ. ಮತ್ತು ಈ ಸಹಜ ಕೃಷಿ ರೈತರನ್ನು ಸ್ವಾವಲಂಬಿಯನ್ನಾಗಿಸುತ್ತಿದೆ ಮತ್ತು ಸಮೃದ್ಧಿಯನ್ನು ತರುತ್ತಿದೆ. ನಮ್ಮ ಬ್ರಹ್ಮ ಕುಮಾರಿ ಸಹೋದರಿಯರು ಶುದ್ಧ ಆಹಾರ ಮತ್ತು ಶುದ್ಧ ನೀರಿನ ಬಗ್ಗೆ ಸಮಾಜದಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಗುಣಮಟ್ಟದ ಆಹಾರಕ್ಕೆ ಗುಣಮಟ್ಟದ ಉತ್ಪಾದನೆ ಕೂಡಾ ಅಷ್ಟೇ ಅವಶ್ಯ. ಆದುದರಿಂದ ಸಾವಯವ ಕೃಷಿಯನ್ನು ಉತ್ತೇಜಿಸುವಲ್ಲಿ ಬ್ರಹ್ಮ ಕುಮಾರಿಯರು ಬಹಳ ದೊಡ್ಡ ಪ್ರೇರಣೆ ಒದಗಿಸುವುದು ಸಾಧ್ಯವಿದೆ. ಇಂತಹ ಮಾದರಿಗಳನ್ನು ಕೆಲವು ಗ್ರಾಮಗಳನ್ನು ಉತ್ತೇಜಿಸುವ ಮೂಲಕ ರೂಪಿಸಬಹುದು.
ಅದೇ ರೀತಿ, ಸ್ವಚ್ಛ ಇಂಧನ ಮತ್ತು ಪರಿಸರಕ್ಕೆ ಸಂಬಂಧಿಸಿ ಭಾರತದಿಂದ ಜಗತ್ತು ಬಹಳಷ್ಟನ್ನು ನಿರೀಕ್ಷೆ ಮಾಡುತ್ತಿದೆ. ಸ್ವಚ್ಛ ಇಂಧನಕ್ಕೆ ಅನೇಕ ಪರ್ಯಾಯಗಳನ್ನು ಇಂದು ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕುರಿತಂತೆ ವ್ಯಾಪಕವಾದ ಜನಾಂದೋಲನ ನಡೆಯುವುದು ಅವಶ್ಯವಿದೆ. ಸೌರ ವಿದ್ಯುತ್ ಕ್ಷೇತ್ರದಲ್ಲಿ ಬ್ರಹ್ಮ ಕುಮಾರೀಸ್ ಈಗಾಗಲೇ ಸಾಧನೆಯ ಉದಾಹರಣೆಯನ್ನು ನಿರ್ಮಾಣ ಮಾಡಿದೆ. ನಿಮ್ಮ ಆಶ್ರಮದ ಅಡುಗೆ ಕೋಣೆಗಳಲ್ಲಿ ಬಹಳ ಹಿಂದಿನಿಂದಲೂ ಆಹಾರವನ್ನು ಸೌರ ಶಕ್ತಿ ಬಳಸಿ ತಯಾರಿಸಲಾಗುತ್ತಿದೆ. ಹೆಚ್ಚು ಜನರು ಸೌರ ಶಕ್ತಿಯನ್ನು ಬಳಸುವಂತೆ ಮಾಡುವಲ್ಲಿ ನೀವು ಬಹಳಷ್ಟು ಕಾಣಿಕೆ ಕೊಡಬಲ್ಲಿರಿ. ಅದೇ ರೀತಿ ನೀವು ಕೂಡಾ “ಆತ್ಮ ನಿರ್ಭರ ಭಾರತ” ಆಂದೋಲನಕ್ಕೆ ವೇಗವನ್ನು ಕೊಡಬಲ್ಲಿರಿ. ಸ್ಥಳೀಯ ಉತ್ಪಾದನೆಗಳಿಗೆ ಆದ್ಯತೆ ನೀಡುವ ಮೂಲಕ “ವೋಕಲ್ ಫಾರ್ ಲೋಕಲ್” ಆಂದೋಲನಕ್ಕೆ ಸಹಾಯ ಮಾಡಬಹುದು.
ಸ್ನೇಹಿತರೇ,
“ಅಮೃತ ಕಾಲ” (ಪುಣ್ಯಕರವಾದ ಕಾಲ)ದ ಈ ಸಮಯದಲ್ಲಿ ನಿದ್ರೆ ಮಾಡುತ್ತ ಕನಸು ಕಾಣುವುದಲ್ಲ, ಬದಲು ಎಚ್ಚರವಾಗಿದ್ದುಕೊಂಡು ದೃಢ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರಬೇಕಾದ ಕಾಲ ಇದು. ಮುಂದಿನ 25 ವರ್ಷಗಳ ಅವಧಿ ಕಠಿಣ ಪರಿಶ್ರಮ, ತ್ಯಾಗ, ಸಂಯಮ ಮತ್ತು ತಪಸ್ಸಿನ ಕಾಲಾವಧಿ. ಈ 25 ವರ್ಷಗಳ ಕಾಲಾವಧಿಯು ನಮ್ಮ ಸಮಾಜ ಗುಲಾಮಗಿರಿಯ ನೂರಾರು ವರ್ಷಗಳ ಅವಧಿಯಲ್ಲಿ ಕಳೆದುಕೊಂಡುದನ್ನು ಮರಳಿ ಪಡೆಯುವ ಕಾಲಾವಧಿ. ಆದುದರಿಂದ ಈ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾಲಘಟ್ಟದಲ್ಲಿ ನಮ್ಮ ಆದ್ಯ ಗಮನ ಭವಿಷ್ಯದ ಮೇಲಿರಬೇಕು.
ಸ್ನೇಹಿತರೇ,
ನಮ್ಮ ಸಮಾಜದಲ್ಲಿ ಅಸಾಧಾರಣವಾದಂತಹ ಸಾಮರ್ಥ್ಯವಿದೆ. ಹಳೆಯ ಮತ್ತು ಸತತವಾಗಿ ಹೊಸ ವ್ಯವಸ್ಥೆಗಳನ್ನು ಬೆಸೆಯುವಂತಹ ಸಮಾಜ ನಮ್ಮದಾಗಿದೆ. ಆದರೆ ಕಾಲಾನುಕ್ರಮದಲ್ಲಿ ಕೆಲವು ಕೆಡುಕುಗಳು ವ್ಯಕ್ತಿಗಳಲ್ಲಿ ಮತ್ತು ಸಮಾಜದಲ್ಲಿ ಮತ್ತು ದೇಶದಲ್ಲಿ ಬೆಳೆದಿರುವುದನ್ನು ಅಲ್ಲಗಳೆಯಲಾಗದು. ಚುರುಕಾಗಿರುವಂತಹ ಜನರು ಈ ಕೆಡುಕುಗಳನ್ನು ಗುರುತಿಸಿ ಅವುಗಳನ್ನು ನಿವಾರಿಸುವಲ್ಲಿ ತೊಡಗುತ್ತಾರೆ ಮತ್ತು ಯಶಸ್ವಿಯೂ ಆಗುತ್ತಾರೆ. ಅಂತಹವರು ತಮ್ಮ ಜೀವನದಲ್ಲಿ ಎಲ್ಲಾ ಗುರಿಗಳನ್ನೂ ಸಾಧಿಸುತ್ತಾರೆ. ಇದು ನಮ್ಮ ಸಮಾಜದ ಶಕ್ತಿ ಮತ್ತು ವೈವಿಧ್ಯ ಹಾಗು ವಿಸ್ತಾರ. ಮತ್ತು ಸಾವಿರಾರು ವರ್ಷಗಳ ಪ್ರಯಾಣದ ಅನುಭವ. ಆದುದರಿಂದ ಅಲ್ಲಿ ಶಕ್ತಿ ಅಲ್ಲದೆ ಆಂತರಿಕ ಶಕ್ತಿಯೊಂದು ನಮ್ಮ ಸಮಾಜದಲ್ಲಿ ಬದಲಾದ ಕಾಲಘಟ್ಟದಲ್ಲಿ ನಮ್ಮನ್ನು ರೂಪಿಸುತ್ತಿರುತ್ತದೆ.
ಕಾಲ ಕಾಲಕ್ಕೆ ನಮ್ಮ ಸಮಾಜದಲ್ಲಿ ಸುಧಾರಕರು ಜನಿಸಿದ್ದಾರೆ ಮತ್ತು ಸಮಾಜದಲ್ಲಿದ್ದ ಅನಿಷ್ಟಗಳ ವಿರುದ್ಧ ಹೋರಾಡಿದ್ದಾರೆ. ಇದು ನಮ್ಮ ಸಮಾಜದ ಗಮನೀಯವಾದಂತಹ ಶಕ್ತಿ. ಇಂತಹ ವ್ಯಕ್ತಿಗಳು ಸಮಾಜ ಸುಧಾರಣೆಯ ಆರಂಭಿಕ ಕಾಲಘಟ್ಟದಲ್ಲಿ ವಿರೋಧವನ್ನೂ ಎದುರಿಸಿದ್ದಾರೆ. ಆದರೆ ಆ ವ್ಯಕ್ತಿಗಳು ಎಂದೂ ಸಮಾಜ ಸುಧಾರಣೆಯಿಂದ ದೂರ ಸರಿದಿಲ್ಲ. ಬದಲು ದೃಢ ನಿರ್ಧಾರಕ್ಕೆ ಬದ್ದರಾಗಿ ಕೆಲಸ ಮಾಡಿದ್ದಾರೆ. ಕಾಲದೊಂದಿಗೆ ಮತ್ತು ಸಮಾಜ ಕೂಡಾ ಅವರನ್ನು ಪರಿಗಣನೆಗೆ ತೆಗೆದುಕೊಂಡಿದೆ, ಗೌರವಿಸಿದೆ ಮತ್ತು ಅವರ ಬೋಧನೆಗಳನ್ನು ಅಳವಡಿಸಿಕೊಂಡಿದೆ.
ಆದುದರಿಂದ ಸ್ನೇಹಿತರೇ,
ಪ್ರತೀ ಕಾಲಘಟ್ಟದ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ಕಳಂಕರಹಿತವಾಗಿ ಮತ್ತು ಚಾಣಾಕ್ಷತನದಿಂದ ಕಾಪಿಡುವುದು ನಿರಂತರ ಪ್ರಕ್ರಿಯೆ ಮತ್ತು ಅದು ಅನಿವಾರ್ಯ ಕೂಡಾ. ಆ ಅವಧಿಯ ತಲೆಮಾರು ಈ ಜವಾಬ್ದಾರಿಯನ್ನು ಈಡೇರಿಸಬೇಕಾಗುತ್ತದೆ. ವೈಯಕ್ತಿಕವಾಗಿ ಮತ್ತು ಬ್ರಹ್ಮ ಕುಮಾರೀಸ್ ನಂತಹ ಲಕ್ಷಾಂತರ ಸಂಘಟನೆಗಳು ಈ ಕಾರ್ಯವನ್ನು ಮಾಡುತ್ತಿವೆ. ಇದೇ ವೇಳೆ ನಾವು, ಸ್ವಾತಂತ್ರ್ಯದ 75 ವರ್ಷಗಳಲ್ಲಿ ನಮ್ಮ ಸಮಾಜವನ್ನು, ನಮ್ಮ ದೇಶವನ್ನು ಮತ್ತು ನಮ್ಮೆಲ್ಲರನ್ನೂ ಅಸ್ವಾಸ್ಥ್ಯ ಬಾಧಿಸಿದೆ. ಅದೆಂದರೆ ನಾವು ನಮ್ಮ ಕರ್ತವ್ಯಗಳಿಂದ ವಿಮುಖರಾಗಿದ್ದೇವೆ ಮತ್ತು ಅವುಗಳಿಗೆ ಆದ್ಯತೆಯನ್ನು ನೀಡಿಲ್ಲ. ಕಳೆದ 75 ವರ್ಷಗಳಲ್ಲಿ ನಾವು ಹಕ್ಕುಗಳ ಬಗ್ಗೆ ಮಾತನಾಡುತ್ತ, ಹಕ್ಕುಗಳಿಗಾಗಿ ಹೋರಾಡುತ್ತ ಕಳೆದೆವು ಮತ್ತು ನಮ್ಮ ಸಮಯವನ್ನು ವ್ಯರ್ಥ ಮಾಡಿದೆವು. ಹಕ್ಕುಗಳ ವಿಷಯ ಕೆಲವು ಸಂದರ್ಭಗಳಲ್ಲಿ ಒಂದು ಹಂತದವರೆಗೆ ಸರಿಯಾದ ಸಂಗತಿಯಾಗಿರಬಹುದು, ಆದರೆ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಭಾರತವನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸುವುದರಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಿದೆ.
ಕರ್ತವ್ಯಗಳಿಗೆ ಪ್ರಾಮುಖ್ಯ ನೀಡದೇ ಇದ್ದುದರಿಂದ ಭಾರತವು ಸಾಕಷ್ಟು ಸಮಯವನ್ನು ಕಳೆದುಕೊಂಡಿದೆ. ಈ 75 ವರ್ಷಗಳಲ್ಲಿ ಕರ್ತವ್ಯವನ್ನು ದೂರದಲ್ಲಿಟ್ಟು ಹಕ್ಕುಗಳಿಗೆ ಮಾತ್ರವೇ ಆದ್ಯತೆ ನೀಡಿದುದರಿಂದ ಉಂಟಾಗಿರುವ ಅಂತರವನ್ನು ಮುಂದಿನ 25 ವರ್ಷಗಳ ಕಾಲ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ನಿವಾರಿಸಬಹುದು.
ಬ್ರಹ್ಮ ಕುಮಾರೀಸ್ ನಂತಹ ಸಂಘಟನೆಗಳು ಭಾರತದ ಜನರಲ್ಲಿ ಕರ್ತವ್ಯದ ಬಗ್ಗೆ ಅರಿವು ಮೂಡಿಸುವುದರಿಂದ, ಅವುಗಳನ್ನು ಮಂತ್ರವಾಗಿಸುವುದರಿಂದ ಮುಂದಿನ 25 ವರ್ಷಗಳಲ್ಲಿ ಭಾರೀ ಬದಲಾವಣೆಯನ್ನು ತರಬಹುದು. ಈ ಒಂದು ಮಂತ್ರವನ್ನು ಅನುಸರಿಸಿ ಕಾರ್ಯನಿರ್ವಹಿಸುವಂತೆ ಮತ್ತು ಆ ಮೂಲಕ ದೇಶದ ನಾಗರಿಕರಲ್ಲಿ ಕರ್ತವ್ಯದ ಭಾವನೆ ಮೂಡುವಂತೆ ಮಾಡಲು ಕೈಜೋಡಿಸುವಂತೆ ನಾನು ಬ್ರಹ್ಮ ಕುಮಾರೀಸ್ ನಂತಹ ಸಂಘಟನೆಗಳಿಗೆ ಮನವಿ ಮಾಡುತ್ತೇನೆ. ನೀವೆಲ್ಲರೂ ನಿಮ್ಮ ಶಕ್ತಿಯನ್ನು ಮತ್ತು ಸಮಯವನ್ನು ಜನರಲ್ಲಿ ಕರ್ತವ್ಯದ ಪ್ರಜ್ಞೆ ಮೂಡಿಸುವುದಕ್ಕೆ ವಿನಿಯೋಗಿಸಬೇಕು. ಮತ್ತು ದಶಕಗಳಿಂದ ಕರ್ತವ್ಯದ ಹಾದಿಯನ್ನು ಅನುಸರಿಸುತ್ತಿರುವ ಬ್ರಹ್ಮ ಕುಮಾರೀಸ್ ನಂತಹ ಸಂಘಟನೆಗಳು ಇದನ್ನು ಮಾಡಬಲ್ಲವು. ನೀವು ಕರ್ತವ್ಯಗಳಿಗೆ ಬದ್ಧರಾದಂತಹವರು ಮತ್ತು ಮತ್ತು ಕರ್ತವ್ಯಗಳನ್ನು ಶಿರಸಾವಹಿಸಿ ಕೈಗೊಳ್ಳುವವರು. ಆದುದರಿಂದ ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದಲ್ಲಿ ನೀವು ನಿಮ್ಮ ಸಂಘಟನೆಯಲ್ಲಿ ಕೆಲಸ ಮಾಡುವಾಗ, ಜನರೊಂದಿಗೆ ಕೆಲಸ ಮಾಡುವಾಗ, ಸಮಾಜದಲ್ಲಿ ಮತ್ತು ದೇಶದಲ್ಲಿ ಕೆಲಸ ಮಾಡುವಾಗ ಹೊಂದುವ ಉತ್ಸಾಹ, ಸ್ಫೂರ್ತಿಯನ್ನು ಅನುಸರಿಸಿ ಕರ್ತವ್ಯದ ಭಾವನೆಯನ್ನು ಪ್ರಚುರಪಡಿಸಿದರೆ, ಆಗ ಅದು ನೀವು ದೇಶಕ್ಕೆ ನೀಡುವ ಅತ್ಯುತ್ತಮ ಉಡುಗೊರೆಯಾಗುತ್ತದೆ.
ನೀವು ಒಂದು ಕತೆಯನ್ನು ಕೇಳಿರಬಹುದು. ಆ ಒಂದು ಕೋಣೆಯಲ್ಲಿ ಕತ್ತಲಿತ್ತು ಮತ್ತು ಕತ್ತಲೆಯನ್ನು ನಿವಾರಿಸಲು ಜನರು ತಮ್ಮದೇ ಆದ ರೀತಿಯಲ್ಲಿ ಬೇರೆ ಬೇರೆ ಕೆಲಸಗಳನ್ನು, ಪ್ರಯತ್ನಗಳನ್ನು ಮಾಡುತ್ತಿದ್ದರು. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಇದರಲ್ಲಿ ತೊಡಗಿಕೊಂಡಿದ್ದರು. ಆದರೆ ಓರ್ವ ವ್ಯಕ್ತಿ ಸಣ್ಣ ದೀಪವನ್ನು ಉರಿಸಿದಾಗ ಕತ್ತಲು ತಕ್ಷಣವೇ ಮಾಯವಾಯಿತು. ಕರ್ತವ್ಯಕ್ಕೆ ಇಂತಹ ಶಕ್ತಿ ಇದೆ. ಸಣ್ಣ ಪ್ರಯತ್ನಕ್ಕೂ ಇಂತಹ ಶಕ್ತಿ ಇದೆ. ನಾವೆಲ್ಲರೂ ದೇಶದ ಪ್ರತಿಯೊಬ್ಬ ನಾಗರಿಕರ ಹೃದಯದಲ್ಲಿ ದೀಪವನ್ನು ಹಚ್ಚಬೇಕು-ಕರ್ತವ್ಯದ ದೀಪವನ್ನು.
ನಾವು ಎಲ್ಲರೂ ಸೇರಿ ದೇಶವನ್ನು ಕರ್ತವ್ಯದ ಪಥದಲ್ಲಿ ಕೊಂಡೊಯ್ದರೆ ಆಗ ಸಮಾಜದಲ್ಲಿರುವ ಕೆಡುಕುಗಳು ನಿವಾರಣೆಯಾಗುತ್ತವೆ ಮತ್ತು ದೇಶವು ಹೊಸ ಎತ್ತರಗಳನ್ನು ತಲುಪುತ್ತದೆ. ಭಾರತದ ನೆಲವನ್ನು ಪ್ರೀತಿಸುವ ಮತ್ತು ಇದನ್ನು ತಾಯ್ನಾಡು ಎಂದು ಪರಿಗಣಿಸುವವರಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದನ್ನು ಇಚ್ಛಿಸದ ಯಾರೊಬ್ಬರೂ ಇರಲಾರರು. ಅನೇಕ ಜನರ ಬದುಕಿನಲ್ಲಿ ಸಂತಸವನ್ನು ತರಲು ಇಚ್ಛಿಸದ ಜನರು ಇಲ್ಲಿ ಯಾರೂ ಇರಲಾರರು. ಆದುದರಿಂದ ನಾವು ಕರ್ತವ್ಯದ ಬಗ್ಗೆ ಹೆಚ್ಚು ಒತ್ತನ್ನು ನೀಡಬೇಕು.
ಸ್ನೇಹಿತರೇ,
ಈ ಕಾರ್ಯಕ್ರಮದಲ್ಲಿ ನಾನು ಇನ್ನೊಂದು ವಿಷಯವನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಭಾರತದ ಪ್ರತಿಷ್ಠೆಗೆ ಮಸಿ ಬಳಿಯಲು ನಡೆಯುತ್ತಿರುವ ಪ್ರಯತ್ನಗಳನ್ನು ನೀವು ಎಲ್ಲರೂ ನೋಡುತ್ತಿರುವಿರಿ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಇಂತಹ ಸಂಗತಿಗಳು ನಡೆಯುತ್ತಿರುತ್ತವೆ. ಇದು ಬರೇ ರಾಜಕೀಯ ಎಂದು ಹೇಳುವ ಮೂಲಕ ನಾವು ನಮ್ಮ ಕೈಗಳನ್ನು ತೊಳೆದುಕೊಳ್ಳಲಾಗದು. ಇದು ರಾಜಕೀಯ ಅಲ್ಲ; ಇದು ನಮ್ಮ ದೇಶದ ಪ್ರಶ್ನೆ. ಮತ್ತು ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವಾಗ ಜಗತ್ತು ಭಾರತವನ್ನು ಅದರ ನೈಜ ರೀತಿಯಲ್ಲಿ ನೋಡುವಂತೆ ಮಾಡುವುದು ನಮ್ಮ ಜವಾಬ್ದಾರಿ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ತಮ್ಮ ಹಾಜರಾತಿಯನ್ನು ಹೊಂದಿರುವ ಇಂತಹ ಸಂಘಟನೆಗಳು ಇತರ ರಾಷ್ಟ್ರಗಳ ಜನರಿಗೆ ಭಾರತದ ಬಗ್ಗೆ ಸರಿಯಾದ ಚಿತ್ರಣವನ್ನು ನೀಡಬೇಕು, ಭಾರತದ ಬಗ್ಗೆ ಹರಡಲಾಗುತ್ತಿರುವ ವದಂತಿಗಳ ಹಿಂದಿನ ನೈಜ ಸತ್ಯವನ್ನು ಹೇಳಬೇಕು ಮತ್ತು ಅವರಿಗೆ ಆ ಬಗ್ಗೆ ಜಾಗೃತಿ ಮೂಡಿಸಬೇಕು. ಇದು ಕೂಡಾ ನಮ್ಮೆಲ್ಲರ ಜವಾಬ್ದಾರಿ. ಬ್ರಹ್ಮ ಕುಮಾರೀಸ್ ನಂತಹ ಸಂಘಟನೆಗಳು ಇದನ್ನು ಇನ್ನಷ್ಟು ಮುಂದೆ ಕೊಂಡೊಯ್ಯಲು ಇನ್ನೊಂದು ಪ್ರಯತ್ನವನ್ನೂ ಮಾಡಬಹುದು. ನೀವು ಶಾಖೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಪ್ರತೀ ವರ್ಷ ಪ್ರತೀ ಶಾಖೆಯಿಂದ ಕನಿಷ್ಠ 500 ಮಂದಿ ಭಾರತಕ್ಕೆ ಭೇಟಿ ನೀಡಿ, ಭಾರತವನ್ನು ಅರಿಯುವಂತೆ ಮಾಡಲು ನೀವು ಪ್ರಯತ್ನಿಸಬೇಕು. ಮತ್ತು ಈ 500 ಮಂದಿ ಆ ದೇಶದ ನಾಗರಿಕರಾಗಿರಬೇಕು. ಮತ್ತು ಅವರು ಅಲ್ಲಿ ನೆಲೆಸಿರುವ ಭಾರತೀಯರಾಗಿರಬಾರದು. ನಾನು ನಿವಾಸಿ ಭಾರತೀಯರ ಬಗ್ಗೆ ಮಾತನಾಡುತ್ತಿಲ್ಲ. ಜನರು ಇಲ್ಲಿಗೆ ಬರಲು ಆರಂಭ ಮಾಡಿದ ಬಳಿಕ ಮತ್ತು ದೇಶವನ್ನು ನೋಡಿದ ಬಳಿಕ ಮತ್ತು ಪ್ರತಿಯೊಂದನ್ನೂ ಅರ್ಥ ಮಾಡಿಕೊಂಡಾಗ ಭಾರತದ ಮೌಲ್ಯಗಳು ತನ್ನಿಂದ ತಾನೇ ವಿಶ್ವದಾದ್ಯಂತ ಹರಡುತ್ತವೆ. ನಿಮ್ಮ ಪ್ರಯತ್ನಗಳು ಬಹಳ ದೊಡ್ಡ ಬದಲಾವಣೆಯನ್ನು ತರಬಲ್ಲವು.
ಸ್ನೇಹಿತರೇ,
ಪ್ರತಿಯೊಬ್ಬರಿಗೂ ದಾನ ಧರ್ಮದ ಆಶಯ ಇರುತ್ತದೆ. ದಾನ ಧರ್ಮವು ಸದಾಶಯದಿಂದ ಕೂಡಿದಾಗ ಯಶಸ್ವೀ ಜೀವನ, ಯಶಸ್ವೀ ಸಮಾಜ ಮತ್ತು ಯಶಸ್ವೀ ರಾಷ್ಟ್ರ ತನ್ನಿಂದ ತಾನಾಗಿಯೇ ನಿರ್ಮಾಣವಾಗುತ್ತದೆ ಎಂಬುದನ್ನು ನಾವು ಮರೆಯಬಾರದು. ದಾನ ಧರ್ಮದ ಈ ಸೌಹಾರ್ದದ ಹೊಣೆಗಾರಿಕೆ ಮತ್ತು ಸದಾಶಯ ಭಾರತದ ಆಧ್ಯಾತ್ಮಿಕ ಅಧಿಕಾರದಲ್ಲಿ ಸದಾ ಇರುತ್ತದೆ. ನೀವೆಲ್ಲ ಸಹೋದರಿಯರು, ಭಾರತದ ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡವರು, ಈ ಜವಾಬ್ದಾರಿಯನ್ನು ಪಕ್ವತೆಯೊಂದಿಗೆ ಈಡೇರಿಸುತ್ತೀರಿ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ನಿಮ್ಮ ಪ್ರಯತ್ನಗಳು ಸ್ವಾತಂತ್ರ್ಯದ ಈ ಅಮೃತ ಮಹೋತ್ಸವ ಕಾಲಘಟ್ಟದಲ್ಲಿ ಹೊಸ ಗುರಿಗಳನ್ನು ನಿಗದಿ ಮಾಡಲು ದೇಶದ ಇತರ ಸಂಸ್ಥೆಗಳಿಗೆ ಮತ್ತು ಸಂಘಟನೆಗಳಿಗೆ ಪ್ರೇರಣೆ ನೀಡಬಹುದು. ಅಮೃತ ಮಹೋತ್ಸವದ ಶಕ್ತಿ ಇರುವುದು ಜನರ ಆತ್ಮ ಮತ್ತು ಅರ್ಪಣಾಭಾವದಲ್ಲಿ. ನಿಮ್ಮ ಪ್ರಯತ್ನಗಳಿಂದಾಗಿ ಭಾರತವು ಭವಿಷ್ಯದಲ್ಲಿ ಬಹಳ ತ್ವರಿತವಾಗಿ ಸುವರ್ಣ ಭಾರತವಾಗುವತ್ತ ಸಾಗಲಿದೆ.
ಈ ನಂಬಿಕೆಯೊಂದಿಗೆ, ನಿಮಗೆಲ್ಲ ಬಹಳ ಬಹಳ ಧನ್ಯವಾದಗಳು!.
ಓಂ ಶಾಂತಿ!