ಜೈ ಗುರುದೇವ್! ಮಧ್ಯಪ್ರದೇಶದ ರಾಜ್ಯಪಾಲ ಶ್ರೀ ಮಂಗುಭಾಯಿ ಪಟೇಲ್ ಅವರೇ, ಮುಖ್ಯಮಂತ್ರಿ ಭಾಯಿ ಶಿವರಾಜ್ ಅವರೇ, ಸದ್ಗುರು ಸೇವಾ ಸಂಘ ಟ್ರಸ್ಟ್‌ನ ಎಲ್ಲ ಸದಸ್ಯರೇ, ಮಹಿಳೆಯರೇ ಮತ್ತು ಮಹನೀಯರೇ!
ಇಂದು ನನಗೆ ಚಿತ್ರಕೂಟದ ಈ ಪವಿತ್ರ ಸ್ಥಳಕ್ಕೆ ಮತ್ತೊಮ್ಮೆ ಭೇಟಿ ನೀಡುವ ಸೌಭಾಗ್ಯ ಸಿಕ್ಕಿದೆ. ಇದು ಇಂದಿಗೂ ಅದೇ ಆಧ್ಯಾತ್ಮಿಕ ಸ್ಥಳವಾಗಿದೆ ಉಳಿದಿದೆ. ಚಿತ್ರಕೂಟದ ಬಗ್ಗೆ ನಮ್ಮ ಋಷಿಗಳು ಹೀಗೆ ಹೇಳುತ್ತಿದ್ದರು: चित्रकूट सब दिन बसत, प्रभु सिय लखन समेत!! ಅಂದರೆ, ಭಗವಾನ್ ಶ್ರೀ ರಾಮನು ಸೀತಾಮಾತೆ ಹಾಗೂ ಲಕ್ಷ್ಮಣನೊಂದಿಗೆ ಚಿತ್ರಕೂಟದಲ್ಲಿ ಶಾಶ್ವತವಾಗಿ ವಾಸಿಸುತ್ತಾನೆ. ಇಲ್ಲಿಗೆ ಬರುವ ಮೊದಲು, ಶ್ರೀ ರಘುಬೀರ್ ದೇವಸ್ಥಾನ ಮತ್ತು ಶ್ರೀ ರಾಮ್ ಜಾನಕಿ ದೇವಸ್ಥಾನಕ್ಕೆ ಭೇಟಿ ನೀಡುವ ಸುಯೋಗ ನನಗೆ ಸಿಕ್ಕಿತು. ಹೆಲಿಕಾಪ್ಟರ್‌ನಿಂದ ಕಾಮದ್ ಗಿರಿ ಪರ್ವತಕ್ಕೆ ನನ್ನ ವಂದನೆಗಳನ್ನು ಸಲ್ಲಿಸಿದೆ. ಗೌರವಾನ್ವಿತ ರಾಂಚೋಡ್ ದಾಸ್ ಹಾಗೂ ಅರವಿಂದ್ ಭಾಯ್ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲು ನಾನು ಹೋಗಿದ್ದೆ. ಭಗವಾನ್ ಶ್ರೀ ರಾಮ ಮತ್ತು ಜಾನಕಿಯ ದರ್ಶನ, ಋಷಿಮುನಿಗಳ ಮಾರ್ಗದರ್ಶನ ಮತ್ತು ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳು ವೇದ ಮಂತ್ರಗಳನ್ನು ಅದ್ಭುತವಾಗಿ ಪಠಿಸಿದ ಅನುಭವವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ.
ಇಂದು, ಎಲ್ಲಾ ಬಡವರು, ಶೋಷಿತರು ಮತ್ತು ಬುಡಕಟ್ಟು ಜನಾಂಗದವರ ಪರವಾಗಿ ನನ್ನನ್ನು ಈ ಮಾನವ ಸೇವೆಯ ಮಹಾನ್ ತಪಸ್ಸಿನ ಭಾಗವಾಗಿಸಿದ್ದಕ್ಕಾಗಿ ಶ್ರೀ ಸದ್ಗುರು ಸೇವಾ ಸಂಘಕ್ಕೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಇಂದು ಉದ್ಘಾಟನೆಗೊಂಡ ಜಾನಕಿ ಕುಂಡ್ ಆಸ್ಪತ್ರೆಯ ಹೊಸ ವಿಭಾಗವು ಲಕ್ಷಾಂತರ ರೋಗಿಗಳಿಗೆ ಹೊಸ ಜೀವನವನ್ನು ನೀಡುತ್ತದೆ ಎಂಬ ವಿಶ್ವಾಸ ನನಗಿದೆ. ಮುಂಬರುವ ದಿನಗಳಲ್ಲಿ, ಬಡವರ ಸೇವೆಯ ಈ ಆಚರಣೆಯನ್ನು ಸದ್ಗುರು ಮೆಡಿಸಿಟಿಯಲ್ಲಿ ಮತ್ತಷ್ಟು ವಿಸ್ತರಿಸಲಾಗುವುದು. ಇಂದು, ಈ ಸಂದರ್ಭದಲ್ಲಿ, ಭಾರತ ಸರ್ಕಾರವು ಅರವಿಂದ್ ಭಾಯ್ ಅವರ ಸ್ಮರಣಾರ್ಥ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ. ಈ ಕ್ಷಣವು ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ಕ್ಷಣವಾಗಿದೆ; ಆಳವಾದ ಸಂತೃಪ್ತಿಯ ಕ್ಷಣವಾಗಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.
ಸ್ನೇಹಿತರೇ,
ಯಾವುದೇ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಮಾಡುವ ಒಳ್ಳೆಯ ಕೆಲಸವು ಸದಾ ಪ್ರಶಂಸನೀಯ. ಸಮಕಾಲೀನರು ಸಹ ಇದನ್ನು ಮೆಚ್ಚುತ್ತಾರೆ. ಆದರೆ ಅವರು ಮಾಡಿದ ಕೆಲಸವು ಅಸಾಧಾರಣವಾಗಿದ್ದಾಗ, ಅದು ಅವರ ಜೀವನದ ನಂತರವೂ ವಿಸ್ತರಿಸುತ್ತಲೇ ಇರುತ್ತದೆ. ಅರವಿಂದ್ ಭಾಯ್ ಅವರ ಕುಟುಂಬವು ಅವರ ದತ್ತಿಯನ್ನು ನಿರಂತರವಾಗಿ ಶ್ರೀಮಂತಗೊಳಿಸುತ್ತಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಅರವಿಂದ್ ಭಾಯ್ ಅವರ ಸೇವೆಗಳನ್ನು ಹೊಸ ಶಕ್ತಿಯೊಂದಿಗೆ ಮತ್ತಷ್ಟು ವಿಸ್ತರಿಸಿದ್ದಕ್ಕಾಗಿ ನಾನು ವಿಶೇಷವಾಗಿ ಭಾಯ್ 'ವಿಶಾದ್' ಮತ್ತು ಸಹೋದರಿ 'ರೂಪಲ್' ಹಾಗೂ ಕುಟುಂಬದ ಇತರ ಎಲ್ಲಾ ಸದಸ್ಯರನ್ನು ಅಭಿನಂದಿಸುತ್ತೇನೆ. ಅರವಿಂದ್ ಭಾಯ್ ಒಬ್ಬ ಕೈಗಾರಿಕೋದ್ಯಮಿ. ಅದು ಮುಂಬೈ ಆಗಿರಲಿ ಅಥವಾ ಗುಜರಾತ್ ಆಗಿರಲಿ, ಅವರು ಎಲ್ಲೆಡೆ ಕೈಗಾರಿಕಾ ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮ ಪ್ರಭಾವವನ್ನು ಹೊಂದಿದ್ದರು. ಅವರ ಅಪಾರ ಪ್ರತಿಭೆ ಎಲ್ಲೆಡೆ ಪ್ರಸಿದ್ಧವಾಗಿತ್ತು. ಆದ್ದರಿಂದ ʻವಿಶಾದ್ʼ ಅವರು ಮುಂಬೈನಲ್ಲಿ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಬಹುದಿತ್ತು. ಇದನ್ನು ಬಹಳ ಆಡಂಬರ ಮತ್ತು ಪ್ರದರ್ಶನದೊಂದಿಗೆ ಆಯೋಜಿಸಬಹುದಿತ್ತು, ಆದರೆ ಸದ್ಗುರುಗಳ ಬಗ್ಗೆ ಅವರ ಸಮರ್ಪಣೆಯನ್ನು ನೋಡಿ. ಅರವಿಂದ್ ಭಾಯ್ ಈ ಸ್ಥಳದಲ್ಲಿ ಕೊನೆಯುಸಿರೆಳೆದರು, ಆದ್ದರಿಂದ ಈ ಸ್ಥಳವನ್ನು ಜನ್ಮ sಶತಮಾನೋತ್ಸವಕ್ಕೆ ಆಯ್ಕೆ ಮಾಡಲಾಯಿತು. ಈ ರೀತಿಯ ಕ್ರಿಯೆಗೆ ಮೌಲ್ಯಗಳು, ಆಲೋಚನೆ ಮತ್ತು ಸಮರ್ಪಣೆಯೂ ಬೇಕು. ಆಗ ಮಾತ್ರ ಅಂತಹ ಉದ್ದೇಶಗಳು ಸಾಕಾರಗೊಳ್ಳುತ್ತವೆ. ಪೂಜ್ಯ ಸಾಧುಗಳು ನಮ್ಮನ್ನು ಆಶೀರ್ವದಿಸಲು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದಾರೆ. ಅನೇಕ ಕುಟುಂಬ ಸದಸ್ಯರು ಸಹ ಇಲ್ಲಿ ಉಪಸ್ಥಿತರಿದ್ದಾರೆ. ಚಿತ್ರಕೂಟ್ ಬಗ್ಗೆ ಹೀಗೆ ಹೇಳಲಾಗಿದೆ - कामद भे गिरि राम प्रसादा। अवलोकत अपहरत विषादा॥ ಅಂದರೆ, ಚಿತ್ರಕೂಟದ ಪರ್ವತವಾದ ಕಾಮಗಿರಿಯು ಭಗವಾನ್ ರಾಮನ ಆಶೀರ್ವಾದದಿಂದ ಎಲ್ಲಾ ತೊಂದರೆಗಳು ಮತ್ತು ಸಮಸ್ಯೆಗಳನ್ನು ನಿವಾರಿಸಲಿದೆ. ಚಿತ್ರಕೂಟದ ಈ ವೈಭವವು ಇಲ್ಲಿನ ಸಾಧುಗಳಿಂದ ಮಾತ್ರ ಹಾಗೇ ಉಳಿಯಲು ಸಾಧ್ಯವಾಗಿದೆ. ಪೂಜ್ಯ ಶ್ರೀ ರಾಂಚೋದಾಸ್ ಜೀ ಅವರು ಅಂತಹ ಮಹಾನ್ ಸಂತರಾಗಿದ್ದರು. ಅವರ ನಿಸ್ವಾರ್ಥ ಕರ್ಮಯೋಗ ಸದಾ ನನ್ನಂತಹ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ. ಎಲ್ಲರೂ ಹೇಳುವಂತೆ, ಅವರ ಧ್ಯೇಯವಾಕ್ಯವೆಂದರೆ - ʻಹಸಿದವರಿಗೆ ಆಹಾರ, ಬಟ್ಟೆಯಿಲ್ಲದವರಿಗೆ ಬಟ್ಟೆ, ಕುರುಡರಿಗೆ ದೃಷ್ಟಿʼ. ಈ ಮಂತ್ರದೊಂದಿಗೆ, ಪೂಜ್ಯ ಗುರುದೇವ್ ಅವರು 1945ರಲ್ಲಿ ಮೊದಲ ಬಾರಿಗೆ ಚಿತ್ರಕೂಟಕ್ಕೆ ಬಂದರು ಮತ್ತು 1950ರಲ್ಲಿ ಅವರು ಇಲ್ಲಿ ಮೊದಲ ಕಣ್ಣಿನ ಶಿಬಿರವನ್ನು ಆಯೋಜಿಸಿದ್ದರು. ಆ ಶಿಬಿರದಲ್ಲಿ ನೂರಾರು ರೋಗಿಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿ ತಮ್ಮ ದೃಷ್ಟಿಯನ್ನು ಮರಳಿ ಪಡೆದರು.
ಇಂದು, ಇದು ನಮಗೆ ತುಂಬಾ ಸಾಮಾನ್ಯವೆಂದು ತೋರಬಹುದು. ಆದರೆ, ಏಳು ದಶಕಗಳ ಹಿಂದೆ, ಈ ಸ್ಥಳವು ಸಂಪೂರ್ಣವಾಗಿ ಅರಣ್ಯ ಪ್ರದೇಶವಾಗಿತ್ತು. ಇಲ್ಲಿ ರಸ್ತೆ ಸೌಲಭ್ಯಗಳಿಲ್ಲ, ವಿದ್ಯುತ್ ಇರಲಿಲ್ಲ, ಅಗತ್ಯ ಸಂಪನ್ಮೂಲಗಳಿಲ್ಲ. ಆ ಸಮಯದಲ್ಲಿ, ಈ ಅರಣ್ಯ ಪ್ರದೇಶದಲ್ಲಿ ಅಂತಹ ಪ್ರಮುಖ ನಿರ್ಣಯಗಳನ್ನು ಮಾಡಲು ಭಾರಿ ಧೈರ್ಯ, ಆತ್ಮವಿಶ್ವಾಸ ಮತ್ತು ಉನ್ನತ ಸೇವಾ ಮನೋಭಾವದ ಅಗತ್ಯವಿತ್ತು. ಆಗ ಮಾತ್ರ ಅದು ಸಾಧ್ಯವಾಗುತ್ತಿತ್ತು. ಆದರೆ ಪೂಜ್ಯ ರಾಂಚೋಡ್ ದಾಸ್ ಅವರಂತಹ ಸಾಧುವಿನ ವಿಷಯಕ್ಕೆ ಬಂದಾಗ, ನಿರ್ಣಯಗಳನ್ನು ಕೇವಲ ಸಾಧನೆಗಾಗಿ ತೆಗೆದುಕೊಳ್ಳಲಾಗುತ್ತದೆ. ಇಂದು, ಈ ಪವಿತ್ರ ಭೂಮಿಯಲ್ಲಿ ನಾವು ನೋಡುತ್ತಿರುವ ಜನರ ಸೇವೆಯ ಈ ಎಲ್ಲಾ ಪ್ರಮುಖ ಯೋಜನೆಗಳು ಆ ಸಾಧುವಿನ ಸಂಕಲ್ಪದ ಫಲಿತಾಂಶವಾಗಿದೆ. ಅವರು ಇಲ್ಲಿ ಶ್ರೀರಾಮ ಸಂಸ್ಕೃತ ವಿದ್ಯಾಲಯವನ್ನು ಸ್ಥಾಪಿಸಿದ್ದರು. ಕೆಲವು ವರ್ಷಗಳ ನಂತರ, ʻಶ್ರೀ ಸದ್ಗುರು ಸೇವಾ ಸಂಘ ಟ್ರಸ್ಟ್ʼ ಅನ್ನು ಸ್ಥಾಪಿಸಲಾಯಿತು. ವಿಪತ್ತು ಸಂಭವಿಸಿದಾಗಲೆಲ್ಲಾ, ಪೂಜ್ಯ ಗುರುದೇವ್ ಅದನ್ನು ಗುರಾಣಿಯಂತೆ ಎದುರಿಸುತ್ತಿದ್ದರು. ಭೂಕಂಪ, ಪ್ರವಾಹ ಅಥವಾ ಬರಗಾಲ ಏನೇ ಬರಲಿ, ಅವರ ಪ್ರಯತ್ನಗಳು ಮತ್ತು ಆಶೀರ್ವಾದದಿಂದಾಗಿ ಅನೇಕ ಬಡ ಜನರು ಹೊಸ ಜೀವನವನ್ನು ಪಡೆದರು. ಸ್ವಹಿತಾಸಕ್ತಿಯನ್ನು ಮೀರಿ ಸಮುದಾಯಕ್ಕೆ ಸಮರ್ಪಿಸಿಕೊಳ್ಳುವ ಅಂತಹ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿರುವುದು ನಮ್ಮ ದೇಶದ ವಿಶೇಷತೆ.
ನನ್ನ ಕುಟುಂಬ ಸದಸ್ಯರೇ,
ಸಾಧು-ಸಂತರ ಸ್ವಭಾವ ಹೇಗಿರುತ್ತದೆಂದರೆ, ಅವರ ಸಹವಾಸ ಮತ್ತು ಮಾರ್ಗದರ್ಶನವನ್ನು ಪಡೆಯುವವರು ಸ್ವತಃ ಸಾಧುಗಳಾಗುತ್ತಾರೆ. ಅರವಿಂದ್ ಭಾಯ್ ಅವರ ಇಡೀ ಜೀವನವು ಇದಕ್ಕೆ ದೊಡ್ಡ ಉದಾಹರಣೆಯಾಗಿದೆ. ಅರವಿಂದ್ ಜೀ ಅವರು ವೇಷಭೂಷಣ ಮತ್ತು ಮೇಲ್ನೋಟಕ್ಕೆ ತುಂಬಾ ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಿದ್ದರು, ತುಂಬಾ ಸಾಮಾನ್ಯ ಜೀವನವನ್ನು ನಡೆಸಿದರು. ಆದರೆ ಒಳಗಿನಿಂದ ಅವರು ನಿಷ್ಠಾವಂತ ಋಷಿಯಾಗಿದ್ದರು. ಬಿಹಾರದಲ್ಲಿ ತೀವ್ರ ಬರಗಾಲದ ಸಮಯದಲ್ಲಿ ಪೂಜ್ಯ ರಾಂಚೋದಾಸ್ ಅವರು ಅರವಿಂದ್ ಭಾಯ್ ಅವರನ್ನು ಭೇಟಿ ಮಾಡಿದ್ದರು. ಋಷಿಮುನಿಗಳ ಇಂತಹ ಸಂಕಲ್ಪ ಮತ್ತು ಸೇವೆಯ ಶಕ್ತಿ ಹಾಗೂ ಈ ರೀತಿಯ ಸಹಯೋಗದ ಮೂಲಕ ಮಾಡಲಾದ ಸಾಧನೆಯ ಉತ್ತುಂಗ ಇಂದು ನಮ್ಮ ಮುಂದೆ ಇದೆ.
ಇಂದು, ನಾವು ಅರವಿಂದ್ ಭಾಯ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ನಾವು ಅವರ ಸ್ಫೂರ್ತಿಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಅವರು ತೆಗೆದುಕೊಂಡ ಪ್ರತಿಯೊಂದು ಜವಾಬ್ದಾರಿಯನ್ನು ಅವರು 100 ಪ್ರತಿಶತ ಸಮರ್ಪಣೆಯಿಂದ ಪೂರ್ಣಗೊಳಿಸಿದರು. ಹಾಗಾಗಿಯೇ ಅವರು ಅಂತಹ ಬೃಹತ್ ಕೈಗಾರಿಕಾ ಸಾಮ್ರಾಜ್ಯವನ್ನು ನಿರ್ಮಿಸಲು ಮತ್ತು ಮಫತ್ ಲಾಲ್ ಗ್ರೂಪ್ ಅನ್ನು ಹೊಸ ಎತ್ತರವನ್ನು ಕೊಂಡೊಯ್ಯಲು ಸಾಧ್ಯವಾಯಿತು. ದೇಶದ ಮೊದಲ ʻಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್ʼ ಅನ್ನು ಸ್ಥಾಪಿಸಿದವರು ಅರವಿಂದ್ ಭಾಯ್. ಇಂದು, ದೇಶದ ಆರ್ಥಿಕತೆಯಲ್ಲಿ ಮತ್ತು ಸಾಮಾನ್ಯ ಜನರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವ ಅನೇಕ ಕಂಪನಿಗಳು ಅರವಿಂದ್ ಭಾಯ್ ಅವರ ದೃಷ್ಟಿಕೋನ, ಅವರ ಚಿಂತನೆ ಮತ್ತು ಕಠಿಣ ಪರಿಶ್ರಮವನ್ನು ತಮ್ಮ ಅಡಿಪಾಯವಾಗಿ ಹೊಂದಿವೆ. ಕೃಷಿ ಕ್ಷೇತ್ರದಲ್ಲಿಯೂ ಸಹ, ಅವರ ಕೆಲಸವು ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. ʻಇಂಡಿಯನ್ ಆಗ್ರೋ-ಇಂಡಸ್ಟ್ರೀಸ್ ಫೌಂಡೇಶನ್ʼನ ಅಧ್ಯಕ್ಷರಾಗಿ ಅವರ ಕೆಲಸವನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ. ಜವಳಿಯಂತಹ ಭಾರತದ ಸಾಂಪ್ರದಾಯಿಕ ಉದ್ಯಮದ ವೈಭವವನ್ನು ಮರಳಿ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ದೇಶದ ಪ್ರಮುಖ ಬ್ಯಾಂಕುಗಳು ಮತ್ತು ಸಂಸ್ಥೆಗಳಿಗೆ ನಾಯಕತ್ವವನ್ನು ನೀಡಿದರು. ಅವರ ಕೆಲಸ, ಕಠಿಣ ಪರಿಶ್ರಮ ಮತ್ತು ಪ್ರತಿಭೆ ಕೈಗಾರಿಕಾ ಜಗತ್ತು ಮತ್ತು ಸಮಾಜದ ಮೇಲೆ ಅಳಿಸಲಾಗದ ಗುರುತನ್ನು ಮೂಡಿಸಿದೆ. ಅರವಿಂದ್ ಭಾಯ್ ಅವರು ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಹಲವಾರು ಪ್ರಮುಖ ಪ್ರಶಸ್ತಿಗಳು ಹಾಗೂ ಗೌರವಗಳಿಗೆ ಪಾತ್ರರಾಗಿದ್ದಾರೆ. ʻಲಯನ್ಸ್ ಹ್ಯುಮಾನಿಟೇರಿಯನ್ ಪ್ರಶಸ್ತಿʼ, ʻಸಿಟಿಜನ್ ಆಫ್ ಬಾಂಬೆ ಪ್ರಶಸ್ತಿʼ, ʻಕೈಗಾರಿಕಾ ಶಾಂತಿಗಾಗಿ ಸರ್ ಜಹಾಂಗೀರ್ ಗಾಂಧಿ ಚಿನ್ನದ ಪದಕʼ ಮುಂತಾದ ಅನೇಕ ಗೌರವಗಳು ಅರವಿಂದ್ ಭಾಯ್ ಅವರು ದೇಶಕ್ಕೆ ನೀಡಿದ ಕೊಡುಗೆಯ ಸಂಕೇತಗಳಾಗಿವೆ.
ನನ್ನ ಕುಟುಂಬ ಸದಸ್ಯರೇ,
ಹೀಗೊಂದು ಮಾತಿದೆ- उपार्जितानां वित्तानां त्याग एव हि रक्षणम्॥
ಅಂದರೆ, ನಮ್ಮ ಯಶಸ್ಸು ಮತ್ತು ಗಳಿಸಿದ ಸಂಪತ್ತನ್ನು ತ್ಯಾಗದ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ರಕ್ಷಿಸಬಹುದು. ಅರವಿಂದ್ ಭಾಯ್ ಅವರು ಈ ಮಾತನ್ನು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡರು ಮತ್ತು ಅದನ್ನು ಅನುಸರಿಸಿ ತಮ್ಮ ಜೀವನದುದ್ದಕ್ಕೂ ಕೆಲಸ ಮಾಡಿದರು. ಇಂದು, ʻಶ್ರೀ ಸದ್ಗುರು ಸೇವಾ ಟ್ರಸ್ಟ್ʼ, ʻಮಫತ್ ಲಾಲ್ ಫೌಂಡೇಶನ್ʼ, ʻರಘುಬೀರ್ ಮಂದಿರ ಟ್ರಸ್ಟ್ʼ, ʻಶ್ರೀ ರಾಮದಾಸ್ ಹನುಮಾನ್ ಜೀ ಟ್ರಸ್ಟ್ʼನಂತಹ ಅನೇಕ ಸಂಸ್ಥೆಗಳು ನಿಮ್ಮ ಗುಂಪಿನ ಮೂಲಕ ಕಾರ್ಯನಿರ್ವಹಿಸುತ್ತಿವೆ. ʻಜೆಜೆ ಗ್ರೂಪ್ ಆಫ್ ಹಾಸ್ಪಿಟಲ್ಸ್ʼ, ʻಅಂಧರ ಸಂಘʼ, ʻಚಾರುತರ್ ಆರೋಗ್ಯ ಮಂಡಲ್ʼನಂತಹ ಗುಂಪುಗಳು ಮತ್ತು ಸಂಸ್ಥೆಗಳು ಸೇವಾ ಕೈಂಕರ್ಯವನ್ನು ಮುಂದೆ ಕೊಂಡೊಯ್ಯುತ್ತಿವೆ. ʻರಘುಬೀರ್ ದೇವಾಲಯ ಅನ್ನಕ್ಷೇತ್ರʼದಲ್ಲಿ ಲಕ್ಷಾಂತರ ಜನರಿಗೆ ಆಹಾರವನ್ನು ಒದಗಿಸುವುದು, ಇಲ್ಲಿ ಲಕ್ಷಾಂತರ ಸಾಧುಗಳಿಗೆ ಮಾಸಿಕ ಪಡಿತರ ಕಿಟ್‌ಗಳನ್ನು ವ್ಯವಸ್ಥೆ ಮಾಡುವುದು, ಗುರುಕುಲದಲ್ಲಿ ಸಾವಿರಾರು ಮಕ್ಕಳ ಶಿಕ್ಷಣ, ಜಾನಕಿ ಕುಂಡ್ ಆಸ್ಪತ್ರೆಯಲ್ಲಿ ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ; ಇವು ಸಾಮಾನ್ಯ ಪ್ರಯತ್ನಗಳಲ್ಲ. ಇದು ಸ್ವತಃ ಭಾರತದ ಶಕ್ತಿಯ ಪುರಾವೆಯಾಗಿದೆ, ಅದು ನಮಗೆ ನಿಸ್ವಾರ್ಥ ಕೆಲಸದ ಶಕ್ತಿಯನ್ನು ನೀಡುತ್ತದೆ, ಸೇವೆಯನ್ನು ತಪಸ್ಸು ಎಂದು ಪರಿಗಣಿಸಿ ಸಾಧನೆಗಳು ಮತ್ತು ಯಶಸ್ಸಿಗಾಗಿ ತುಡಿಯುವಂತೆ ಮಾಡುತ್ತದೆ. ನಿಮ್ಮ ಟ್ರಸ್ಟ್ ಗ್ರಾಮೀಣ ಮಹಿಳೆಯರಿಗೆ ಗ್ರಾಮೀಣ ಕೈಗಾರಿಕೆಗಳಲ್ಲಿ ತರಬೇತಿ ನೀಡುತ್ತಿದೆ. ಇದು ಮಹಿಳಾ ನೇತೃತ್ವದ ಅಭಿವೃದ್ಧಿಗಾಗಿ ದೇಶದ ಪ್ರಯತ್ನಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತಿದೆ.
ಸ್ನೇಹಿತರೇ,
ʻಸದ್ಗುರು ಕಣ್ಣಿನ ಆಸ್ಪತ್ರೆʼಯು ಇಂದು ದೇಶ ಮತ್ತು ವಿಶ್ವದ ಅತ್ಯುತ್ತಮ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾಗಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಒಮ್ಮೆ ಈ ಆಸ್ಪತ್ರೆಯನ್ನು ಕೇವಲ 12 ಹಾಸಿಗೆಗಳೊಂದಿಗೆ ಪ್ರಾರಂಭಿಸಲಾಯಿತು. ಇಂದು ಪ್ರತಿವರ್ಷ ಸುಮಾರು 15 ಲಕ್ಷ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಸದ್ಗುರು ಕಣ್ಣಿನ ಆಸ್ಪತ್ರೆಯ ಕೆಲಸದ ಬಗ್ಗೆ ನನಗೆ ವೈಯಕ್ತಿಕವಾಗಿ ತಿಳಿದಿದೆ. ಏಕೆಂದರೆ ನನ್ನ ಕಾಶಿ ಕೂಡ ಅದರಿಂದ ಪ್ರಯೋಜನ ಪಡೆದಿದೆ. ಕಾಶಿಯಲ್ಲಿ ನೀವು ನಡೆಸುತ್ತಿರುವ "ಆರೋಗ್ಯಕರ ದೃಷ್ಟಿ-ಸಮೃದ್ಧ ಕಾಶಿ ಅಭಿಯಾನ" ಅನೇಕ ವೃದ್ಧರಿಗೆ ಸೇವೆ ಸಲ್ಲಿಸುತ್ತಿದೆ. ಸದ್ಗುರು ಕಣ್ಣಿನ ಆಸ್ಪತ್ರೆ ಈವರೆಗೆ ಬನಾರಸ್ ಮತ್ತು ಸುತ್ತಮುತ್ತಲಿನ ಸುಮಾರು 6.5 ಲಕ್ಷ ಜನರನ್ನು ಮನೆ-ಮನೆಗೆ ತೆರಳಿ ತಪಾಸಣೆ ಮಾಡಿದೆ! ಕಣ್ಣಿನ ಪರೀಕ್ಷೆಯ ಬಳಿಕ 90 ಸಾವಿರಕ್ಕೂ ಹೆಚ್ಚು ರೋಗಿಗಳನ್ನು ಶಿಬಿರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ. ಹೆಚ್ಚಿನ ಸಂಖ್ಯೆಯ ರೋಗಿಗಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸ್ವಲ್ಪ ಸಮಯದ ಹಿಂದೆ, ಕಾಶಿಯಲ್ಲಿ ಈ ಅಭಿಯಾನದ ಫಲಾನುಭವಿಗಳನ್ನು ಭೇಟಿ ಮಾಡುವ ಅವಕಾಶವೂ ನನಗೆ ಸಿಕ್ಕಿತ್ತು. ನಾನು ಇಂದು ನಿಮ್ಮ ನಡುವೆ ಇರುವುದರಿಂದ ಕಾಶಿಯ ಎಲ್ಲ ಜನರ ಪರವಾಗಿ ಟ್ರಸ್ಟ್, ಸದ್ಗುರು ಕಣ್ಣಿನ ಆಸ್ಪತ್ರೆ ಮತ್ತು ಎಲ್ಲಾ ವೈದ್ಯರು ಹಾಗೂ ಸಂಬಂಧಪಟ್ಟ ಎಲ್ಲರಿಗೂ ನನ್ನ ವಿಶೇಷ ಕೃತಜ್ಞತೆಯನ್ನು ಅರ್ಪಿಸುತ್ತೇನೆ.
ನನ್ನ ಕುಟುಂಬ ಸದಸ್ಯರೇ,
ಸೇವೆಗೆ ಸಂಪನ್ಮೂಲಗಳು ಅತ್ಯಗತ್ಯ, ಆದರೆ ಸಮರ್ಪಣೆ ಆದ್ಯತೆಯಾಗಿರಬೇಕು. ಅರವಿಂದ್ ಭಾಯ್ ಅವರ ಅತ್ಯಂತ ವಿಶೇಷ ಗುಣವೆಂದರೆ ಅವರು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ತಳಮಟ್ಟದಲ್ಲಿ ಮೇಲೆ ಕೆಲಸ ಮಾಡುತ್ತಿದ್ದರು. ಅದು ರಾಜ್ ಕೋಟ್ ಆಗಿರಲಿ ಅಥವಾ ಅಹಮದಾಬಾದ್ ಆಗಿರಲಿ, ಗುಜರಾತ್‌ನ ಪ್ರತಿಯೊಂದು ಮೂಲೆಯಲ್ಲೂ ಅವರ ಕೆಲಸವನ್ನು ನಾನು ನೋಡಿದ್ದೇನೆ. ನನಗೆ ನೆನಪಿದೆ, ನಾನು ತುಂಬಾ ಚಿಕ್ಕವನಾಗಿದ್ದೆ. ನನಗೆ ಸದ್ಗುರು ಜೀ ಅವರನ್ನು ನೋಡುವ ಸೌಭಾಗ್ಯ ಸಿಗಲಿಲ್ಲ, ಆದರೆ ನನಗೆ ಅರವಿಂದ್ ಭಾಯ್ ಅವರೊಂದಿಗೆ ನಿಕಟ ಸಂಪರ್ಕವಿತ್ತು. ನಾನು ಅರವಿಂದ್ ಭಾಯ್ ಅವರನ್ನು ಮೊದಲ ಬಾರಿಗೆ ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಬುಡಕಟ್ಟು ಪ್ರದೇಶವಾದ ಭಿಲೋಡಾದಲ್ಲಿ ಭೇಟಿಯಾಗಿದ್ದೆ. ಆಗ ತೀವ್ರ ಬರಗಾಲವಿತ್ತು ಮತ್ತು ನಮ್ಮಲ್ಲಿ ಮಣಿಕರ್ ಜಿ ಎಂಬ ವೈದ್ಯರಿದ್ದರು, ಅವರು ಅರವಿಂದ್ ಭಾಯ್‌ಗೆ ತುಂಬಾ ಆತ್ಮೀಯರಾಗಿದ್ದರು. ಬರಗಾಲಕ್ಕೆ ಬಲಿಯಾದ ಬುಡಕಟ್ಟು ಸಹೋದರ ಸಹೋದರಿಯರ ಸೇವೆ ಮಾಡಲು ನಾನು ಅಲ್ಲಿ ಕೆಲಸ ಮಾಡುತ್ತಿದ್ದೆ. ಆ ಪ್ರದೇಶದಲ್ಲಿ ತೀವ್ರ ಉಷ್ಣಾಂಶವಿತ್ತು. ಅರವಿಂದ್ ಭಾಯ್ ಆ ಸ್ಥಳಕ್ಕೆ ಬಂದು, ಇಡೀ ದಿನ ಅಲ್ಲಿಯೇ ಇದ್ದು ಸೇವೆಯಲ್ಲಿ ಭಾಗವಹಿಸಿದರು. ಕೆಲಸವನ್ನು ವಿಸ್ತರಿಸಲು ಅಗತ್ಯವಿರುವ ಎಲ್ಲದರ ಜವಾಬ್ದಾರಿಯನ್ನು ಸಹ ಅವರು ವಹಿಸಿಕೊಂಡರು. ಬಡವರ ಬಗ್ಗೆ ಅವರ ಸಹಾನುಭೂತಿ ಮತ್ತು ಕೆಲಸ ಮಾಡುವ ಅವರ ದೃಢನಿಶ್ಚಯವನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ ಮತ್ತು ಅನುಭವಿಸಿದ್ದೇನೆ. ಗುಜರಾತ್‌ನ ನಮ್ಮ ಬುಡಕಟ್ಟು ಪ್ರದೇಶವಾದ ದಾಹೋಡ್‌ನಲ್ಲಿ ಬುಡಕಟ್ಟು ಸಮಾಜದ ಕಲ್ಯಾಣಕ್ಕಾಗಿ ಅವರು ಮಾಡಿದ ಕೆಲಸವನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ನಿಮಗೆ ಆಶ್ಚರ್ಯವಾಗಬಹುದು, ಏಕೆಂದರೆ ಸಾಮಾನ್ಯವಾಗಿ ಗುಜರಾತ್ ಮತ್ತು ಇತರ ಸ್ಥಳಗಳಲ್ಲಿ, ಕೃಷಿ ಮಾಡುವ ಸ್ಥಳವನ್ನು 'ಖೇತ್' ಎಂದು ಕರೆಯಲಾಗುತ್ತದೆ. ಆದರೆ ದಾಹೋಡ್‌ನ ಜನರು ಇದನ್ನು 'ಫೂಲ್ವಾಡಿ' ಎಂದು ಕರೆಯುತ್ತಾರೆ. ಏಕೆಂದರೆ ಅಲ್ಲಿನ ರೈತರಿಗೆ ಸದ್ಗುರು ಟ್ರಸ್ಟ್ ಹೊಸ ರೀತಿಯ ಕೃಷಿಯನ್ನು ಕಲಿಸಿತು. ಅವರು ಹೂವುಗಳನ್ನು ಬೆಳೆಯಲು ಪ್ರಾರಂಭಿಸಿದರು, ಹಾಗಾಗಿ ಹೊಲಗಳನ್ನು ʻಫೂಲ್ವಾಡಿʼ ಎಂದು ಕರೆಯಲಾಗುತ್ತದೆ. ಇಂದು ಅವರು ಉತ್ಪಾದಿಸಿದ ಹೂವು ಮುಂಬೈಗೆ ಹೋಗುತ್ತದೆ. ಈ ಎಲ್ಲದರಲ್ಲೂ ಅರವಿಂದ್ ಭಾಯ್ ಅವರ ಪ್ರಯತ್ನಗಳು ಪ್ರಮುಖ ಪಾತ್ರ ವಹಿಸುತ್ತವೆ. ಇತರರಿಗೆ ಸೇವೆ ಸಲ್ಲಿಸುವ ಬಗ್ಗೆ ಅವರಲ್ಲಿ ವಿಭಿನ್ನ ರೀತಿಯ ಉತ್ಸಾಹವಿದ್ದುದನ್ನು ನಾನು ನೋಡಿದ್ದೆ. ತನ್ನನ್ನು ದಾನಿ ಎಂದು ಕರೆಯುವುದನ್ನು ಅವನು ಎಂದಿಗೂ ಇಷ್ಟಪಡುತ್ತಿರಲಿಲ್ಲ, ಅಥವಾ ತಾನು ಯಾರಿಗಾಗಿಯೂ ಏನಾದರೂ ಸಹಾಯ ಮಾಡಿದರೆ ಅದನ್ನು ಇತರರಿಗೆ ತಿಳಿಯಲು ಅವರು ಬಿಡುತ್ತಿರಲಿಲ್ಲ. ಬೇರೆ ಯಾರಾದರೂ ಅವರನು ಬೆಂಬಲಿಸುವ ಇಚ್ಛೆ ವ್ಯಕ್ತಪಡಿಸಿದರೂ, ಮೊದಲು ಕೆಲಸವನ್ನು ನೋಡಲು ಖುದ್ದಾಗಿ ಅಲ್ಲಿಗೆ ಹೋಗುವಂತೆ ಅವರು ಸೂಚಿಸುತ್ತಿದ್ದರು. ಅವರು ಮೊದಲು ಯೋಜನೆಯನ್ನು ನೋಡಬೇಕೆಂದು ಒತ್ತಾಯಿಸುತ್ತಿದ್ದರು. ಆ ಬಳಿಕವಷ್ಟೇ ಅವರು ತಮ್ಮನ್ನು ಬೆಂಬಲಿಸಬೇಕೆಂದು ಬಯಸುತ್ತಿದ್ದರು. ಅವರ ಕೆಲಸ ಮತ್ತು ಅವರ ವ್ಯಕ್ತಿತ್ವದ ಬಗ್ಗೆ ನಾನು ಏನೆಲ್ಲಾ ಕಲಿತಿದ್ದೇನೆಯೋ, ನಾನು ಅವರ ಧ್ಯೇಯದೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಬೆಳೆಸಿಕೊಂಡಿದ್ದೇನೆ. ಆದ್ದರಿಂದ, ಸೇವೆ ಮಾಡುವ ಈ ಅಭಿಯಾನದ ಬೆಂಬಲಿಗನಾಗಿ ಮತ್ತು ಒಂದು ರೀತಿಯಲ್ಲಿ ನಿಮ್ಮ ಸಂಗಾತಿಯಾಗಿ ನಾನು ನನ್ನನ್ನು ನೋಡಲು ಇಷ್ಟಪಡುತ್ತೇನೆ.
ನನ್ನ ಕುಟುಂಬ ಸದಸ್ಯರೇ,
ಚಿತ್ರಕೂಟದ ಭೂಮಿ ನಮ್ಮ ನಾನಾಜಿ ದೇಶಮುಖ್ ಅವರ ಕರ್ಮಸ್ಥಳವೂ ಹೌದು. ಅರವಿಂದ್ ಭಾಯ್ ಅವರಂತೆ, ಬುಡಕಟ್ಟು ಸಮಾಜಕ್ಕೆ ಸೇವೆ ಸಲ್ಲಿಸುವಲ್ಲಿ ಅವರ ಪ್ರಯತ್ನಗಳು ನಮ್ಮೆಲ್ಲರಿಗೂ ದೊಡ್ಡ ಸ್ಫೂರ್ತಿಯಾಗಿವೆ. ಇಂದು, ಆ ಆದರ್ಶಗಳನ್ನು ಅನುಸರಿಸಿ, ಮೊದಲ ಬಾರಿಗೆ ದೇಶವು ಬುಡಕಟ್ಟು ಸಮಾಜದ ಕಲ್ಯಾಣಕ್ಕಾಗಿ ಇಷ್ಟು ದೊಡ್ಡ ಪ್ರಯತ್ನಗಳನ್ನು ಮಾಡುತ್ತಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯಂದು ದೇಶವು ʻಬುಡಕಟ್ಟು ಹೆಮ್ಮೆಯ ದಿನʼದ ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದೆ. ಬುಡಕಟ್ಟು ಸಮಾಜದ ಕೊಡುಗೆ ಮತ್ತು ಪರಂಪರೆಯನ್ನು ವೈಭವೀಕರಿಸಲು ದೇಶಾದ್ಯಂತ ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ. ಬುಡಕಟ್ಟು ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುವಂತೆ ʻಏಕಲವ್ಯ ವಸತಿ ಶಾಲೆʼಗಳನ್ನು ತೆರೆಯಲಾಗುತ್ತಿದೆ. ʻಅರಣ್ಯ ಸಂಪತ್ತು ಕಾಯ್ದೆʼಯಂತಹ ನೀತಿ ನಿರ್ಧಾರಗಳು ಬುಡಕಟ್ಟು ಸಮಾಜದ ಹಕ್ಕುಗಳನ್ನು ರಕ್ಷಿಸುವ ಮಾಧ್ಯಮವಾಗಿ ಮಾರ್ಪಟ್ಟಿವೆ. ಈ ಪ್ರಯತ್ನಗಳಿಂದ ಮತ್ತು ಬುಡಕಟ್ಟು ಜನರನ್ನು ಪ್ರೀತಿಯಿಂದ ಸ್ವೀಕರಿಸಿದ ಭಗವಾನ್ ಶ್ರೀ ರಾಮನ ಆಶೀರ್ವಾದದೊಂದಿಗೆ, ನಾವು ಬುಡಕಟ್ಟು ಸಮುದಾಯವನ್ನು ಬೆಂಬಲಿಸುತ್ತಿದ್ದೇವೆ. ಈ ಆಶೀರ್ವಾದವು ಸಾಮರಸ್ಯ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ನಮ್ಮನ್ನು ಕರೆದೊಯ್ಯುತ್ತದೆ. ಮತ್ತೊಮ್ಮೆ, ಅರವಿಂದ್ ಭಾಯ್ ಅವರ ಜನ್ಮ ಶತಮಾನೋತ್ಸವದ ಶುಭ ಸಂದರ್ಭದಲ್ಲಿ, ನಾನು ಅವರ ಮಹಾನ್ ಪ್ರಯತ್ನಗಳಿಗೆ ನನ್ನ ಗೌರವವನ್ನು ಸಲ್ಲಿಸುತ್ತೇನೆ. ಅವರ ಕೆಲಸ, ಅವರ ಜೀವನ ನಮ್ಮೆಲ್ಲರಿಗೂ ಸ್ಫೂರ್ತಿ ನೀಡಲಿ; ಸದ್ಗುರುಗಳ ಆಶೀರ್ವಾದ ನಮ್ಮ ಮೇಲಿರಲಿ! ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು!
ಜೈ ಸಿಯಾ ರಾಮ್.