ನಮಸ್ಕಾರ!
'ಎನರ್ಜಿ ಫಾರ್ ಸಸ್ಟೈನಬಲ್ ಗ್ರೋತ್' - 'ಸುಸ್ಥಿರ ಅಭಿವೃದ್ಧಿಗಾಗಿ ಇಂಧನ' ನಮ್ಮ ಪ್ರಾಚೀನ ಸಂಪ್ರದಾಯಗಳಿಂದ ಪ್ರೇರಿತವಾಗಿದೆ ಮತ್ತು ಭವಿಷ್ಯದ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸುವ ಸಾಧನವಾಗಿದೆ. ಸುಸ್ಥಿರ ಇಂಧನ ಮೂಲಗಳಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ ಎನ್ನುವ ಸ್ಪಷ್ಟ ದೃಷ್ಟಿಯನ್ನು ಭಾರತ ಹೊಂದಿದೆ. ಗ್ಲ್ಯಾಸ್ಗೋದಲ್ಲಿ, ನಾವು 2070ರ ವೇಳೆಗೆ ನಿವ್ವಳ ಶೂನ್ಯವನ್ನು (ಉತ್ಸರ್ಜನೆ) ತಲುಪುತ್ತೇವೆ ಎಂದು ಭರವಸೆ ನೀಡಿದ್ದೇವೆ.
ಸಿಒಪಿ26 ರಲ್ಲಿ ಸಹ, ಪರಿಸರಕ್ಕಾಗಿ ಜೀವನಶೈಲಿಯ ದೃಷ್ಟಿಕೋನವನ್ನು ಮುಂದಿಡುವ ಮೂಲಕ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸಲು ನಾನು ಲೈಫ್ (LIFE) ಮಿಷನ್ ಕುರಿತು ಮಾತನಾಡಿದ್ದೇನೆ. ನಾವು ಅಂತರರಾಷ್ಟ್ರೀಯ ಸೌರ ಒಕ್ಕೂಟದಂತಹ ಜಾಗತಿಕ ಸಹಯೋಗಗಳನ್ನು ಸಹ ಮುನ್ನಡೆಸುತ್ತಿದ್ದೇವೆ. ಪಳೆಯುಳಿಕೆ ಅಲ್ಲದ ಶಕ್ತಿ ಸಾಮರ್ಥ್ಯಕ್ಕಾಗಿ ನಮ್ಮ ಗುರಿ 500 GW ಆಗಿದೆ. 2030 ರ ವೇಳೆಗೆ, ಪಳೆಯುಳಿಕೆಯಲ್ಲದ ಶಕ್ತಿಯಿಂದ ನಮ್ಮ ಸ್ಥಾಪಿತ ಶಕ್ತಿಯ ಸಾಮರ್ಥ್ಯದ 50 ಪ್ರತಿಶತವನ್ನು ನಾವು ಸಾಧಿಸಬೇಕಾಗಿದೆ. ನಾನು ಭಾರತದ ಗುರಿಗಳನ್ನು ಸವಾಲಾಗಿ ನೋಡುವುದಿಲ್ಲ ಆದರೆ ಅವಕಾಶವನ್ನಾಗಿ ನೋಡುತ್ತೇನೆ. ಭಾರತವು ಕಳೆದ ಹಲವಾರು ವರ್ಷಗಳಿಂದ ಈ ದೃಷ್ಟಿಕೋನದಲ್ಲಿ ಮುನ್ನಡೆಯುತ್ತಿದೆ ಮತ್ತು ಈ ವರ್ಷದ ಬಜೆಟ್ನಲ್ಲಿ ನೀತಿ ಮಟ್ಟದಲ್ಲಿ ಇದನ್ನು ಮುಂದಕ್ಕೆ ಕೊಂಡೊಯ್ಯಲಾಗಿದೆ.
ಸ್ನೇಹಿತರೇ,
ಈ ವರ್ಷದ ಬಜೆಟ್ನಲ್ಲಿ ಸೌರಶಕ್ತಿಯ ದಿಕ್ಕಿನಲ್ಲಿ ಹೆಚ್ಚಿನ ದಕ್ಷತೆಯ ಸೌರ ಮಾಡ್ಯೂಲ್ ತಯಾರಿಕೆಗೆ 19,500 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ. ಸೋಲಾರ್ ಮಾಡ್ಯೂಲ್ಗಳು ಮತ್ತು ಸಂಬಂಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಸಂಶೋಧನೆಯ ಅಭಿವೃದ್ಧಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡಲು ಇದು ಸಹಾಯ ಮಾಡುತ್ತದೆ.
ಸ್ನೇಹಿತರೇ,
ನಾವು ರಾಷ್ಟ್ರೀಯ ಜಲಜನಕ ಮಿಷನ್ ಅನ್ನು ಸಹ ಘೋಷಿಸಿದ್ದೇವೆ. ಹೇರಳವಾದ ನವೀಕರಿಸಬಹುದಾದ ಇಂಧನ ಶಕ್ತಿಯ ರೂಪದಲ್ಲಿ ಭಾರತವು ಅಂತರ್ಗತ ಪ್ರಯೋಜನವನ್ನು ಹೊಂದಿದೆ. ಭಾರತವು ವಿಶ್ವದ ಹಸಿರು ಜಲಜನಕದ ಕೇಂದ್ರವಾಗಬಹುದು. ಜಲಜನಕ ಪರಿಸರ ವ್ಯವಸ್ಥೆಯು ರಸಗೊಬ್ಬರ, ಸಂಸ್ಕರಣಾಗಾರ ಮತ್ತು ಸಾರಿಗೆ ಕ್ಷೇತ್ರಗಳೊಂದಿಗೆ ಪರಸ್ಪರ ಸಂಬಂಧ ಹೊಂದಿದೆ. ಇದು ಭಾರತದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಖಾಸಗಿ ವಲಯವು ನಾವೀನ್ಯತೆಗಳನ್ನು ಉತ್ತೇಜಿಸುವ ಕ್ಷೇತ್ರವಾಗಿದೆ.
ಸ್ನೇಹಿತರೇ,
ನವೀಕರಿಸಬಹುದಾದ ಶಕ್ತಿಯ ವಿಷಯದಲ್ಲಿ ಶಕ್ತಿಯ ಸಂಗ್ರಹವು ಒಂದು ದೊಡ್ಡ ಸವಾಲಾಗಿದೆ. ಪರಿಹಾರಗಳನ್ನು ಕಂಡುಕೊಳ್ಳುವ ಸಲುವಾಗಿ, ಶೇಖರಣಾ ಸಾಮರ್ಥ್ಯದ ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಈ ವರ್ಷದ ಬಜೆಟ್ಗೆ ಆದ್ಯತೆ ನೀಡಲಾಗಿದೆ. ಈ ವರ್ಷದ ಬಜೆಟ್ನಲ್ಲಿ ಬ್ಯಾಟರಿ ವಿನಿಮಯ ನೀತಿ ಮತ್ತು ಇಂಟರ್ಆಪರೇಬಿಲಿಟಿ ಮಾನದಂಡಗಳ ಬಗ್ಗೆಯೂ ನಿಬಂಧನೆಗಳನ್ನು ಮಾಡಲಾಗಿದೆ. ಇದು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಪ್ಲಗ್-ಇನ್ ಚಾರ್ಜಿಂಗ್ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ದುಬಾರಿಯಾಗಿದೆ. ಬ್ಯಾಟರಿಯು ಎಲೆಕ್ಟ್ರಿಕ್ ವಾಹನದ ಒಟ್ಟು ಮೌಲ್ಯದ 40-50% ವೆಚ್ಚವಾಗುವುದರಿಂದ, ವಿನಿಮಯವು ಎಲೆಕ್ಟ್ರಿಕ್ ವಾಹನದ ಮುಂಗಡ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅದೇ ರೀತಿ, ಈ ಕ್ಷೇತ್ರದಲ್ಲಿ ಮೊಬೈಲ್ ಬ್ಯಾಟರಿ ಅಥವಾ ಸೌರ ವಿದ್ಯುತ್ ಸಂಗ್ರಹಣೆಯ ಹಲವು ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬಹುದು ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೇ,
ಶಕ್ತಿಯ ಉತ್ಪಾದನೆಯ ಜೊತೆಗೆ, ಸುಸ್ಥಿರತೆಗೆ ಶಕ್ತಿಯ ಸಂರಕ್ಷಣೆಯು ಅಷ್ಟೇ ಮುಖ್ಯವಾಗಿದೆ. ಹೆಚ್ಚು ವಿದ್ಯು ಚ್ಛಕ್ತಿ ಸದ್ಬಳಕೆಯ ಎಸಿಗಳು, ಹೀಟರ್ಗಳು, ಗೀಸರ್ಗಳು, ಓವನ್ಗಳು ಇತ್ಯಾದಿಗಳನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದರ ಕುರಿತು ಬಹಳಷ್ಟು ಮಾಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ. ವಿದ್ಯುತ್ ಬಳಕೆ ಹೆಚ್ಚಿರುವಲ್ಲೆಲ್ಲಾ ವಿದ್ಯುಚ್ಛಕ್ತಿ ಸದ್ಬಳಕೆಯ ಉತ್ಪನ್ನಗಳ ತಯಾರಿಕೆಯು ನಮ್ಮ ಆದ್ಯತೆಯಾಗಿರಬೇಕು.
ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. 2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಎಲ್ಇಡಿ ಬಲ್ಬ್ಗಳ ಬೆಲೆ 300-400 ರೂ.ಗಳಷ್ಟಿತ್ತು, ನಮ್ಮ ಸರ್ಕಾರವು ಎಲ್ಇಡಿ ಬಲ್ಬ್ಗಳ ಉತ್ಪಾದನೆಯನ್ನು ಹೆಚ್ಚಿಸಿತು ಇದರಿಂದಾಗಿ ತಂತಾನೆ ಅದರ ಬೆಲೆ 70-80 ರೂ.ಗೆ ಇಳಿದಿದೆ. ಉಜಾಲಾ ಯೋಜನೆಯಡಿ ದೇಶದಲ್ಲಿ ಸುಮಾರು 37 ಕೋಟಿ ಎಲ್ಇಡಿ ಬಲ್ಬ್ಗಳನ್ನು ವಿತರಿಸಿದ್ದೇವೆ. ಪರಿಣಾಮವಾಗಿ, ಸುಮಾರು ನಲವತ್ತೆಂಟು ಸಾವಿರ ಮಿಲಿಯನ್ ಕಿಲೋವ್ಯಾಟ್ ಗಂಟೆಗಳ ವಿದ್ಯುತ್ ಉಳಿತಾಯವಾಗಿದೆ. ನಮ್ಮ ಬಡ ಮತ್ತು ಮಧ್ಯಮ ವರ್ಗದ ಜನರು ವಾರ್ಷಿಕವಾಗಿ 20,000 ಕೋಟಿ ರೂಪಾಯಿಗಳನ್ನು ವಿದ್ಯುತ್ ಬಿಲ್ ಗಳಲ್ಲಿ ಉಳಿಸುತ್ತಿದ್ದಾರೆ. ಅಲ್ಲದೆ, ವಾರ್ಷಿಕವಾಗಿ ಸುಮಾರು 40 ಮಿಲಿಯನ್ ಟನ್ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲಾಗಿದೆ. ನಾವು ಸಾಂಪ್ರದಾಯಿಕ ಬೀದಿ ದೀಪಗಳನ್ನು 125 ಕೋಟಿ ಸ್ಮಾರ್ಟ್ ಎಲ್ಇಡಿ ಬಲ್ಬ್ ಗಳೊಂದಿಗೆ ಬದಲಾಯಿಸಿದ್ದೇವೆ. ನಮ್ಮ ಸ್ಥಳೀಯ ಸಂಸ್ಥೆಗಳು, ನಗರಸಭೆಗಳು, ಪುರಸಭೆಗಳು ಮತ್ತು ಪಂಚಾಯತಿಗಳು ಬೀದಿ ದೀಪಗಳನ್ನು ಎಲ್ಇಡಿ ಬಲ್ಬ್ ಗಳೊಂದಿಗೆ ಬದಲಾಯಿಸುವ ಮೂಲಕ ವಾರ್ಷಿಕ 6,000 ಕೋಟಿ ರೂಪಾಯಿ ವಿದ್ಯುತ್ ಬಿಲ್ಗಳನ್ನು ಉಳಿಸಿವೆ. ಇದರಿಂದ ವಿದ್ಯುತ್ ಉಳಿತಾಯವಾಗಿದೆ ಮತ್ತು ಸುಮಾರು ಐದು ಮಿಲಿಯನ್ ಟನ್ ಇಂಗಾಲದ ಹೊರಸೂಸುವಿಕೆ ಕೂಡ ಕಡಿಮೆಯಾಗಿದೆ. ಅಂತಹ ಒಂದು ಯೋಜನೆಯು ಪರಿಸರವನ್ನು ಹೇಗೆ ರಕ್ಷಿಸಿದೆ ಎನ್ನುವುದನ್ನು ನೀವು ಊಹಿಸಬಹುದು.
ಸ್ನೇಹಿತರೇ,
ಕಲ್ಲಿದ್ದಲು ಅನಿಲೀಕರಣವನ್ನು ಕಲ್ಲಿದ್ದಲಿಗೆ ಪರ್ಯಾಯವಾಗಿ ನಾವು ಪರಿಗಣಿಸಬಹುದು. ಈ ವರ್ಷದ ಬಜೆಟ್ನಲ್ಲಿ ಕಲ್ಲಿದ್ದಲು ಅನಿಲೀಕರಣಕ್ಕಾಗಿ ನಾಲ್ಕು ಪ್ರಾಯೋಗಿಕ ಯೋಜನೆಗಳನ್ನು ಪರಿಚಯಿಸಲಾಗಿದ್ದು, ಇದು ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯನ್ನು ಬಲಪಡಿಸುತ್ತದೆ. ಅದಕ್ಕೆ ನಾವೀನ್ಯತೆ ಬೇಕು. ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಭಾರತದ ಅಗತ್ಯಗಳಿಗೆ ಅನುಗುಣವಾಗಿ ಕಲ್ಲಿದ್ದಲು ಅನಿಲೀಕರಣದಲ್ಲಿ ನಾವೀನ್ಯತೆಯೊಂದಿಗೆ ತೊಡಗಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ.
ಹಾಗೆಯೇ, ಸರ್ಕಾರವು ಮಿಷನ್ ಮೋಡ್ನಲ್ಲಿ ಎಥೆನಾಲ್ ಮಿಶ್ರಣವನ್ನು ಉತ್ತೇಜಿಸುತ್ತಿದೆ. ಈ ವರ್ಷದ ಬಜೆಟ್ನಲ್ಲಿ ಮಿಶ್ರಿತ ಇಂಧನದ ಮೇಲೆ ಹೆಚ್ಚುವರಿ ಡಿಫರೆನ್ಷಿಯಲ್ ಎಕ್ಸೈಸ್ ಸುಂಕವನ್ನು ಒದಗಿಸಲಾಗಿದೆ. ನಾವು ನಮ್ಮ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳನ್ನು ಆಧುನೀಕರಿಸಬೇಕಾಗಿದೆ ಮತ್ತು ಅವರು ತಂತ್ರಜ್ಞಾನವನ್ನು ಆಧುನೀಕರಿಸಬೇಕಾಗಿದೆ. ನಾವು ಪೊಟ್ಯಾಶ್ ಮತ್ತು ಸಂಕುಚಿತ ಜೈವಿಕ ಅನಿಲದಂತಹ ಹೆಚ್ಚುವರಿ ಉಪ-ಉತ್ಪನ್ನಗಳನ್ನು ಪಡೆಯುವಂತಹ ಪ್ರಕ್ರಿಯೆಗಳಲ್ಲಿ ನಾವು ಕೆಲಸ ಮಾಡಬೇಕು.
ಕೆಲವು ವಾರಗಳ ಹಿಂದೆ ನಾನು ವಾರಾಣಸಿ ಮತ್ತು ಇಂದೋರ್ನಲ್ಲಿ ಗೋಬರ್-ಧನ್ ಘಟಕಗಳನ್ನು ಉದ್ಘಾಟಿಸಿದೆನು. ಮುಂದಿನ ಎರಡು ವರ್ಷಗಳಲ್ಲಿ ಖಾಸಗಿ ವಲಯವು ಅಂತಹ 500 ಅಥವಾ 1,000 ಗೋಬರ್-ಧನ್ ಘಟಕಗಳನ್ನು ಸ್ಥಾಪಿಸಬಹುದೇ? ಈ ಸಾಧ್ಯತೆಗಳನ್ನು ಬಳಸಿಕೊಳ್ಳಲು ಉದ್ಯಮವು ನವೀನ ಹೂಡಿಕೆಗಳನ್ನು ಮಾಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೇ,
ನಮ್ಮ ಇಂಧನದ ಬೇಡಿಕೆಯು ಹೆಚ್ಚಾಗಲಿದೆ. ಆದ್ದರಿಂದ, ನವೀಕರಿಸಬಹುದಾ ಇಂಧನದ ಕಡೆಗೆ ಪರಿವರ್ತನೆಯಾಗುವುದು ಭಾರತಕ್ಕೆ ಹೆಚ್ಚು ಮುಖ್ಯವಾಗಿದೆ. ಭಾರತದಲ್ಲಿ 24-25 ಕೋಟಿ ಮನೆಗಳಿವೆ ಎಂದು ಅಂದಾಜಿಸಲಾಗಿದೆ. ಸ್ವಚ್ಛವಾದ ಅಡುಗೆ ಮಾಡುವುದನ್ನು ನಾವು ಹೇಗೆ ಆಧುನೀಕರಿಸಬಹುದು? ನಮ್ಮ ಸ್ಟಾರ್ಟ್ಅಪ್ಗಳು ಇದನ್ನು ಬಹಳ ಸುಲಭವಾಗಿ ಮುಂದಕ್ಕೆ ಸಾಗಿಸಬಹುದು ಎಂದು ನಾನು ಭಾವಿಸುತ್ತೇನೆ. ಸೌರ ಒಲೆಗಳಿಗೆ ದೊಡ್ಡ ಮಾರುಕಟ್ಟೆಯೂ ಇದೆ, ಇದು ಸ್ವಚ್ಛವಾದ-ಅಡುಗೆ (Clean-Cooking Movement)ಗೆ ಅವಶ್ಯಕವಾಗಿದೆ. ಗುಜರಾತ್ನಲ್ಲಿ ನಾವು ಕಾಲುವೆಯ ಮೇಲ್ಭಾಗದ ಸೌರ ಫಲಕಗಳನ್ನು ಸ್ಥಾಪಿಸಿದ ಯಶಸ್ವಿ ಪ್ರಯೋಗವನ್ನು ಮಾಡಲಾಯಿತು. ಭೂಮಿಯ ಬೆಲೆ ಕಡಿಮೆಯಾಯಿತು, ನೀರು ಉಳಿತಾಯವಾಯಿತು ಮತ್ತು ವಿದ್ಯುತ್ ಉತ್ಪಾದನೆಯೂ ಆಯಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಲವಾರು ಪ್ರಯೋಜನಗಳಿವೆ. ಇದೇ ರೀತಿಯ ಪ್ರಯೋಗಗಳನ್ನು ಈಗ ದೇಶದ ಇತರೆಡೆ ನದಿಗಳು ಮತ್ತು ಸರೋವರಗಳಲ್ಲಿ ನಡೆಸಲಾಗುತ್ತಿದೆ. ನಾವು ಇದನ್ನು ಮತ್ತಷ್ಟು ಹೆಚ್ಚಿಸಬೇಕು.
ಇನ್ನೊಂದು ಕೆಲಸವನ್ನು ಮನೆಯಲ್ಲಿಯೇ ಮಾಡಬಹುದು. ಕುಟುಂಬಗಳು ತಮ್ಮ ತೋಟಗಳು ಮತ್ತು ಬಾಲ್ಕನಿಗಳಲ್ಲಿ 10-20 ಪ್ರತಿಶತದಷ್ಟು ವಿದ್ಯುತ್ ಉತ್ಪಾದಿಸುವ ಸೌರ ಮರವನ್ನು ಹೊಂದಲು ನಾವು ತೋಟಗಾರಿಕೆ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಬಹುದೇ? ಆ ಮನೆಯು ಸೌರ ಮರದ ಮನೆಯಾಗಿ ತನ್ನದೇ ಆದ ಗುರುತನ್ನು ಸೃಷ್ಟಿಸುತ್ತದೆ ಮತ್ತು ಪರಿಸರ ಪ್ರಜ್ಞೆಯ ನಾಗರಿಕರ ಮನೆ ಎಂದು ಕರೆಯಲ್ಪಡುತ್ತದೆ. ಈ ರೀತಿಯಾಗಿ, ನಾವು ವಿಶೇಷ ವಿಶ್ವಾಸಾರ್ಹ ಸಮಾಜವನ್ನು ಅಭಿವೃದ್ಧಿಪಡಿಸಬಹುದು. ಮತ್ತು ಇದನ್ನು ತುಂಬಾ ಸುಲಭವಾಗಿ ಮತ್ತು ಸುಂದರವಾಗಿ ಕೂಡ ಮಾಡಬಹುದು. ಆದ್ದರಿಂದ, ಮನೆಗಳ ನಿರ್ಮಾಣದಲ್ಲಿ ಸೌರ ಮರದ (ಸೋಲಾರ್ ಟ್ರೀ) ಪರಿಕಲ್ಪನೆಯ ಬಗ್ಗೆ ಯೋಚಿಸಲು ಮನೆ ಕಟ್ಟುವವರು , ಬಿಲ್ಡರ್ಗಳು ಮತ್ತು ವಾಸ್ತುಶಿಲ್ಪಿಗಳಿಗೆ ನಾನು ಒತ್ತಾಯಿಸುತ್ತೇನೆ.
ಮೈಕ್ರೊ-ಹೈಡಲ್ ಗ್ಯಾಜೆಟ್ಗಳು ನಮ್ಮ ದೇಶದಲ್ಲಿ ಹೇರಳವಾಗಿ ಕಂಡುಬರುತ್ತವೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ‘ಘರತ್’ ಎಂದು ಕರೆಯಲ್ಪಡುವ ಸಾಕಷ್ಟು ಜಲಚಕ್ರಗಳನ್ನು ನಾವು ಕಾಣುತ್ತೇವೆ. ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಮೈಕ್ರೋ-ಹೈಡಲ್ ಗ್ಯಾಜೆಟ್ಗಳ ಕುರಿತು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಪ್ರಪಂಚವು ನೈಸರ್ಗಿಕ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ವೃತ್ತಾಕಾರದ ಆರ್ಥಿಕತೆಯು ಈಗಿನ ನವೀಕರಿಸಬಹುದಾದ ಮತ್ತು ಅದನ್ನು ಜೀವನದ ಅತ್ಯಗತ್ಯ ಭಾಗವಾಗಿ ಮಾಡಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ನಾವೀನ್ಯತೆ ನಮಗೆ ಬಹಳ ಮುಖ್ಯ ಮತ್ತು ಹೊಸ ಉತ್ಪನ್ನಗಳು ಅಗತ್ಯ. ನಿಮ್ಮ ಪ್ರಯತ್ನಗಳಲ್ಲಿ ಸರ್ಕಾರವು ನಿಮ್ಮೊಂದಿಗೆ ನಿಂತಿದೆ ಎಂದು ನಾನು ದೇಶದ ಖಾಸಗಿ ವಲಯಕ್ಕೆ ಭರವಸೆ ನೀಡುತ್ತೇನೆ.
ಒಗ್ಗಟ್ಟಿನ ಪ್ರಯತ್ನದಿಂದ, ನಾವು ಈ ದಿಕ್ಕಿನಲ್ಲಿ ನಮ್ಮ ಗುರಿಗಳನ್ನು ಸಾಧಿಸುವುದು ಮಾತ್ರವಲ್ಲ, ಇಡೀ ಮಾನವಕುಲಕ್ಕೆ ಮಾರ್ಗದರ್ಶನ ನೀಡುತ್ತೇವೆ.
ಸ್ನೇಹಿತರೇ,
ಸಾಮಾನ್ಯವಾಗಿ ಬಜೆಟ್ ಮಂಡನೆಗೂ ಮುನ್ನ ಸಾಕಷ್ಟು ಚರ್ಚೆಗಳು ನಡೆಯುತ್ತವೆ. ನಮ್ಮ ಟಿವಿ ಚಾನೆಲ್ಗಳು ಮತ್ತು ಇತರ ಮಾಧ್ಯಮಗಳು ಅದರಲ್ಲಿ ಬಹಳ ತೊಡಗಿಸಿಕೊಂಡಿವೆ ಮತ್ತು ಬಜೆಟ್ ತಯಾರಿಕೆಯಲ್ಲೂ ಪ್ರಯೋಜನಕಾರಿ ಚರ್ಚೆ ನಡೆಯುತ್ತಿದೆ. ಬಜೆಟ್ ಸಿದ್ಧಪಡಿಸುವಾಗ ಹಲವು ಒಳ್ಳೆಯ ವಿಚಾರಗಳು ಬರುತ್ತವೆ. ಆದರೆ ಈಗ ನಾವು ಗಮನಹರಿಸಿದ್ದೇವೆ (ಬಜೆಟ್ ಅನುಷ್ಠಾನದ ಮೇಲೆ). ಬಜೆಟ್ ಮಂಡಿಸಲಾಗಿದೆ ಮತ್ತು ಯಾವುದೇ ಬದಲಾವಣೆಗಳಿರುವುದಿಲ್ಲ. ಇದು ಈಗ ಸಂಸತ್ತಿನ ಆಸ್ತಿ ಮತ್ತು ಅದು ನಿರ್ಧರಿಸುತ್ತದೆ. ಏಪ್ರಿಲ್ 1 ರಿಂದ ಬಜೆಟ್ ಅನ್ನು ಜಾರಿಗೆ ತರಲು ನಮಗೆ ಎರಡು ತಿಂಗಳುಗಳಿವೆ. ಅನುಷ್ಠಾನಕ್ಕಾಗಿ ಮಾರ್ಗಸೂಚಿಯನ್ನು ಕೇಂದ್ರೀಕರಿಸಲು ನಾವು ಈ ಎರಡು ತಿಂಗಳುಗಳನ್ನು ಹೇಗೆ ಬಳಸುತ್ತೇವೆ ಮತ್ತು ಯೋಜನೆಯನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಹೇಗೆ ಕಾರ್ಯಗತಗೊಳಿಸಬೇಕು. ಬಜೆಟ್ ಅನ್ನು ಬುದ್ಧಿವಂತಿಕೆಯಿಂದ ಹೇಗೆ ಬಳಸುವುದು.
ಸರ್ಕಾರದ ಆಲೋಚನಾ ವಿಧಾನಕ್ಕೂ ವ್ಯಾಪಾರ ಜಗತ್ತು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವಿಧಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ಸೆಮಿನಾರ್ ನಲ್ಲಿ ಆ ಅಂತರವನ್ನು ನಿವಾರಿಸಲು ಪ್ರಯತ್ನಿಸಬೇಕು. ಸರ್ಕಾರದಲ್ಲಿ ಸಂಬಂಧಪಟ್ಟವರು ಮತ್ತು ನಿರ್ಧಾರ ತೆಗೆದುಕೊಳ್ಳುವವರ ನಡುವಿನ ಚಿಂತನೆಯ ಪ್ರಕ್ರಿಯೆಯಲ್ಲಿ ಯಾವುದೇ ವಿರೋಧಾಭಾಸ ಇರಬಾರದು. ಅದರಲ್ಲಿ ಯಾವುದೇ ಅಂತರ ಇರಬಾರದು. ನಾವು ಇದನ್ನು ಖಚಿತಪಡಿಸಿಕೊಂಡರೆ, ಅನೇಕ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಬಹುದು. ಆದರೆ ಕೆಲವೊಮ್ಮೆ, ಕಡತದ ಟಿಪ್ಪಣಿಗಳಲ್ಲಿನ ಕೆಲವು ವೈಪರೀತ್ಯಗಳನ್ನು ಸರಿಪಡಿಸಲು ಆರರಿಂದ ಎಂಟು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಆ ಹೊತ್ತಿಗೆ ಬಜೆಟ್ ಅವಧಿ ಮುಗಿದಿರುತ್ತದೆ.
ಈ ತಪ್ಪುಗಳನ್ನು ತಪ್ಪಿಸಲು ನಾವು ಬಯಸುತ್ತೇವೆ. ಈ ಸೆಮಿನಾರುಗಳ ಹಿಂದೆ ಸರ್ಕಾರದ ಉದ್ದೇಶವು ನಿಮಗೆ ಬೋಧನೆ ಮಾಡುವುದು ಅಥವಾ ಬಜೆಟ್ನ ಬಗ್ಗೆ ನಿಮಗೆ ಅರಿವು ಮೂಡಿಸುವುದು ಅಲ್ಲ. ಅದು ನಮಗಿಂತ ಚೆನ್ನಾಗಿ ನಿಮಗೆ ಗೊತ್ತು. ನಿಮ್ಮ ಮಾತನ್ನು ಕೇಳಲು ನಾವು ವೆಬಿನಾರ್ ಗಳನ್ನು ನಡೆಸುತ್ತೇವೆ. ಈಗಾಗಲೇ ಸಿದ್ಧಪಡಿಸಿರುವ ಬಜೆಟಿನ ಬಗ್ಗೆ ನಾವು ಸಲಹೆಗಳನ್ನು ಬಯಸುವುದಿಲ್ಲ. ಉತ್ತಮ ಫಲಿತಾಂಶಗಳಿಗಾಗಿ ನಾವು ಅದನ್ನು ತ್ವರಿತವಾಗಿ ಮತ್ತು ಉತ್ತಮ ರೀತಿಯಲ್ಲಿ ಹೇಗೆ ಕಾರ್ಯಗತಗೊಳಿಸಬಹುದು? ಅನಗತ್ಯ ವಿಳಂಬ ಮಾಡಬಾರದು. ಆದ್ದರಿಂದ, ವಾಸ್ತವದ ಪ್ರಾಯೋಗಿಕ ಉದಾಹರಣೆಗಳನ್ನು ಸೂಚಿಸುವ ಮೂಲಕ ನೀವು ಈ ವೆಬಿನಾರನ್ನು ಯಶಸ್ವಿಗೊಳಿಸಬೇಕೆಂದು ನಾನು ಬಯಸುತ್ತೇನೆ.
ನಾನು ನಿಮಗೆ ಶುಭ ಹಾರೈಸುತ್ತೇನೆ. ಬಹಳ ಧನ್ಯವಾದಗಳು.