ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ರಾಜನಾಥ್ ಸಿಂಗ್ ಜೀ, ಹಿಮಾಚಲ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿ ಭಾಯಿ ಜೈರಾಮ್ ಠಾಕೂರ್ ಜೀ , ನನ್ನ ಸಂಪುಟದ ಸಚಿವರು ಮತ್ತು ಹಿಮಾಚಲ ಪ್ರದೇಶದ ಯುವ ಪುತ್ರ ಭಾಯಿ ಅನುರಾಗ್ ಠಾಕೂರ್, ಹಿಮಾಚಲ ಪ್ರದೇಶ ಸರಕಾರದ ಸಚಿವರೇ, ಸ್ಥಳೀಯ ಜನಪ್ರತಿನಿಧಿಗಳೇ ಮತ್ತು ಲಾಹೌಲ್ ಸ್ಪಿಟಿಯ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ,
ಬಹಳ ಧೀರ್ಘಾವಧಿಯ ಬಳಿಕ ನಿಮ್ಮೊಂದಿಗೆ ಇರುವುದು ಅತ್ಯಂತ ಹರ್ಷ ತರುವ ಅನುಭವ. ಅಟಲ್ ಸುರಂಗಕ್ಕಾಗಿ ನಿಮ್ಮೆಲ್ಲರಿಗೆ ಬಹಳ ಬಹಳ ಅಭಿನಂದನೆಗಳು ಮತ್ತು ಶುಭಾಶಯಗಳು.
ಇದು ಅಟಲ್ ಜಿ ಅವರ ಕೊಡುಗೆ.
ಸ್ನೇಹಿತರೇ,
ಹಲವು ವರ್ಷಗಳ ಹಿಂದೆ , ನಾನು ನಿಮ್ಮನ್ನು ಕಾರ್ಯಕರ್ತನಂತೆ ಭೇಟಿಯಾಗುತ್ತಿದ್ದೆ. ನಾನು ಇಲ್ಲಿಗೆ ರೋಹ್ಟಂಗ್ ನಿಂದ ಬಹಳ ದೂರದ ಪ್ರಯಾಣ ಮಾಡಿ ಬರುತ್ತಿದ್ದೆ. ಔಷಧಿಗಳು, ವಿದ್ಯಾಭ್ಯಾಸ ಮತ್ತು ಆದಾಯದ ವಲಯಗಳು ಚಳಿಗಾಲದಲ್ಲಿ ರೋಹ್ಟಂಗ್ ಪಾಸ್ ಮುಚ್ಚಲ್ಪಡುವುದರಿಂದ ಹೇಗೆ ತೊಂದರೆಗೆ ಈಡಾಗುತ್ತವೆ ಎಂಬುದರ ಬಗ್ಗೆ ನನಗೆ ಸ್ವತಹ ಅನುಭವವಿದೆ. ಆ ದಿನಗಳ ನನ್ನ ಹಲವಾರು ಮಿತ್ರರು ಈಗಲೂ ಕಾರ್ಯಚಟುವಟಿಕೆಯಿಂದಿದ್ದಾರೆ. ಕೆಲವು ಸ್ನೇಹಿತರು ನಮ್ಮನ್ನು ಅಗಲಿದ್ದಾರೆ.
ನಾನು ನೆನಪಿನಲ್ಲಿಟ್ಟಿದ್ದೇನೆ , ನಾನು ಕಿನ್ನೌರ್ ನ ಠಾಕೂರ್ ಸೇನ್ ನೇಗಿ ಜೀ ಅವರ ಜೊತೆ ಚರ್ಚಿಸುತ್ತಿದ್ದೆ ಮತ್ತು ಅವರಿಂದ ಬಹಳ ಕಲಿತುಕೊಂಡಿದ್ದೇನೆ. ನೇಗೀ ಜೀ ಅವರು ಹಿಮಾಚಲಕ್ಕೆ ಅಧಿಕಾರಿಯಾಗಿ ಮತ್ತು ಜನ ಪ್ರತಿನಿಧಿಯಾಗಿ ಬಹಳ ಸೇವೆ ಮಾಡಿದ್ದಾರೆ. ಬಹುಷಃ ಅವರು ನೂರು ವರ್ಷದವರೆಗೆ ಬದುಕಿರಬೇಕು ? . ಆದರೆ ಅವರು ಕೊನೆಯ ದಿನಗಳವರೆಗೂ ಕ್ರಿಯಾಶೀಲರಾಗಿದ್ದರು. ಅವರ ವ್ಯಕ್ತಿತ್ವ ಬಹಳ ಪ್ರೇರೇಪಣಾದಾಯಕವಾಗಿತ್ತು. ನಾನು ಅವರಲ್ಲಿ ಬಹಳಷ್ಟು ವಿಷಯಗಳನ್ನು ಕೇಳುತ್ತಿದ್ದೆ. ಅವರೂ ನನಗೆ ಬಹಳಷ್ಟು ವಿಷಯಗಳನ್ನು ಹೇಳುತ್ತಿದ್ದರು.ಅವರು ಧೀರ್ಘ ಇತಿಹಾಸಕ್ಕೆ ಸಾಕ್ಷಿಯಾಗಿದ್ದರು. ಮತ್ತು ಈ ಇಡೀ ವಲಯವನ್ನು ಅರಿತುಕೊಳ್ಳಲು ನನಗೆ ಬಹಳ ಸಹಾಯ ಮಾಡಿದ್ದರು.
ಸೇಹಿತರೇ,
ಈ ವಲಯದ ಎಲ್ಲ ಸಮಸ್ಯೆಗಳ ಬಗ್ಗೆ ಅಟಲ್ ಜೀ ಅವರಿಗೆ ಅರಿವಿತ್ತು. ಈ ಪರ್ವತ ಪ್ರದೇಶಗಳು ಅಟಲ್ ಜೀ ಅವರಿಗೆ ಅತ್ಯಂತ ಪ್ರಿಯವಾಗಿದ್ದವು. ನಿಮ್ಮ ಕಷ್ಟ ಪರಂಪರೆಗಳನ್ನು ಕಡಿಮೆ ಮಾಡಲು ಅಟಲ್ ಜೀ ಅವರು ಈ ಸುರಂಗ ಮಾರ್ಗದ ನಿರ್ಮಾಣವನ್ನು , ಅವರು 2000ದಲ್ಲಿ ಕೇಲಾಂಗ್ ಗೆ ಬಂದಾಗ ಘೋಷಿಸಿದ್ದರು. ಆಗ ಈ ವಲಯದಲ್ಲಿ ನೆಲೆಗೊಂಡಿದ್ದ ಹಬ್ಬದ ವಾತಾವರಣವನ್ನು ನಾನು ಈಗಲೂ ನೆನಪಿಟ್ಟುಕೊಂಡಿದ್ದೇನೆ. ಶ್ರೇಷ್ಟ ಜನಸೇವಕ ತಾಶಿ ದಾವಾ ಅವರ ನಿರ್ಧಾರ ಕೂಡಾ ಸಾಕಾರಗೊಂಡಿದೆ. ಇದೆಲ್ಲ ಸಾಧ್ಯವಾಗಿರುವುದು ಅವರ ಆಶೀರ್ವಾದದಿಂದ ಮತ್ತು ಅವರ ಇತರ ಹಲವಾರು ಸ್ನೇಹಿತರ ಆಶೀರ್ವಾದದಿಂದಾಗಿ.
ಸ್ನೇಹಿತರೇ
ಅಟಲ್ ಸುರಂಗ ಲಾಹೌಲಿಯ ಜನತೆಗೆ ಹೊಸ ಅರುಣೋದಯ ಮಾತ್ರವಲ್ಲ. ಅದು ಪಾಂಗಿಯ ಜನತೆಯ ಬದುಕನ್ನೂ ಪರಿವರ್ತಿಸುತ್ತದೆ. ಈ 9 ಕಿಲೋ ಮೀಟರ್ ಉದ್ದದ ಸುರಂಗ ದೂರವನ್ನು 45-46 ಕಿಲೋ ಮೀಟರ್ ನಷ್ಟು ಕಡಿಮೆ ಮಾಡಿದೆ. ಈ ವಲಯದ ಹಲವಾರು ಸ್ನೇಹಿತರು ತಮ್ಮ ಜೀವಿತಾವಧಿಯಲ್ಲಿ ಈ ಅವಕಾಶ ಲಭಿಸುತ್ತದೆ ಎಂಬುದನ್ನೂ ಕಲ್ಪಿಸಿಕೊಂಡಿರಲಿಲ್ಲ. ಈ ಜನರು ಚಳಿಗಾಲದಲ್ಲಿ ರೋಗಿಗಳಾಗಿ ನೋವು ಅನುಭವಿಸುತ್ತಾ ಇರುತ್ತಿದ್ದರು ಮತ್ತು ನೋವು ಅನುಭವಿಸುವವರನ್ನು ನೋಡುತ್ತಾ ಇರುತ್ತಿದ್ದರು. ಇಂದು ಅವರು ತಮ್ಮ ಮಕ್ಕಳು –ಪುತ್ರರು ಮತ್ತು ಪುತ್ರಿಯರು ಅಂತಹ ನೋವಿನ ಸಂಕಷ್ಟಗಳನ್ನು ಅನುಭವಿಸಬೇಕಾದ ಸ್ಥಿತಿ ಹೋಗಿರುವುದಕ್ಕೆ ತೃಪ್ತಿ ಅನುಭವಿಸುತ್ತಿದ್ದಾರೆ.
ಸ್ನೇಹಿತರೇ,
ಅಟಲ್ ಸುರಂಗದಿಂದ ಪ್ರತಿಯೊಬ್ಬರೂ ಲಾಭ ಪಡೆಯಲಿದ್ದಾರೆ. ಅವರು ಲಾಹೌಲ್ -ಸ್ಪಿಟಿಯ ರೈತರಿರಲಿ, ಅಥವಾ ಪಾಂಗಿಯವರಿರಲಿ, ಕೃಷಿಕರು, ಜಾನುವಾರು ಸಾಕಾಣಿಕೆದಾರರು, ವಿದ್ಯಾರ್ಥಿಗಳು, ಸೇವಾ ವರ್ಗ, ವ್ಯಾಪಾರಿಗಳು, ಮತ್ತು ಉದ್ಯಮಿಗಳು ಇದರಿಂದ ಪ್ರಯೋಜನಗಳನ್ನು ಪಡೆಯುತ್ತಾರೆ. ಈಗ ಲಾಹೌಲಿಯ ರೈತರ ಕಾಲಿ ಫ್ಲವರ್ ಬೆಳೆ, ಬಟಾಟೆ ಮತ್ತು ಬಟಾಣಿಗಳು ಕೊಳೆಯುವುದಿಲ್ಲ ಮತ್ತು ಅವು ತ್ವರಿತವಾಗಿ ಮಾರುಕಟ್ಟೆ ತಲುಪುತ್ತವೆ.
ಲಾಹೌಲ್ ನ ಗುರುತಾಗಿರುವ ಚಂದ್ರಮುಖಿ ಬಟಾಟೆಗೆ ಮತ್ತು; ಅದರ ರುಚಿಯನ್ನು ನಾನು ಕೂಡಾ ಸವಿದಿದ್ದೇನೆ, ಹೊಸ ಮಾರುಕಟ್ಟೆ ಮತ್ತು ಖರೀದಿದಾರರು ಲಭಿಸಲಿದ್ದಾರೆ. ಹೊಸ ತರಕಾರಿಗಳಿಗೆ ಮತ್ತು ಹೊಸ ಬೆಳೆಗಳಿಗೆ ಬೇಡಿಕೆ, ಅವಕಾಶ ಹೆಚ್ಚಲಿದೆ.
ಲಾಹೌಲ್ –ಸ್ಪಿಟಿ ವೈದ್ಯಕೀಯ ಗಿಡಗಳ ಪ್ರಮುಖ ಉತ್ಪಾದಕ ಪ್ರದೇಶವಾಗಿದೆ ಮತ್ತು ಇಂತಹ ನೂರಾರು ಗಿಡ ಮೂಲಿಕೆಗಳು ಇಂಗು, ಕಪ್ಪು ಜೀರಿಗೆ, ಕೇಸರಿ ಇತ್ಯಾದಿಗಳು ಇಲ್ಲಿ ಲಭಿಸುತ್ತವೆ. ಈ ಉತ್ಪಾದನೆಗಳು ಹಿಮಾಚಲದ ಮತ್ತು ಭಾರತದ ಲಾಹೌಲ್ –ಸ್ಪಿಟಿಯ ಗುರುತುಗಳಾಗಬಲ್ಲವು.
ಅಟಲ್ ಸುರಂಗದಿಂದಾಗುವ ಇನ್ನೊಂದು ಲಾಭವೆಂದರೆ ಈಗ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ವಲಸೆ ಹೋಗಬೇಕಾಗಿಲ್ಲ. ಈ ಸುರಂಗ ದೂರವನ್ನು ಕಡಿಮೆ ಮಾಡಿರುವುದು ಮಾತ್ರವಲ್ಲದೆ ಜೀವನವನ್ನೂ ಸುಲಭಗೊಳಿಸಿದೆ.
ಸ್ನೇಹಿತರೇ,
ಈ ವಲಯದಾದ್ಯಂತ ಪ್ರವಾಸೋದ್ಯಮಕ್ಕೆ ಅದ್ಭುತ ಅವಕಾಶಗಳಿವೆ. ಪ್ರಕೃತಿ ಕೂಡಾ ಈ ವಲಯಕ್ಕೆ ಆಶೀರ್ವಾದ ನೀಡಿದೆ. ಮತ್ತು ಇಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಅದ್ಭುತ ಅವಕಾಶಗಳಿವೆ. ಚಂದ್ರತಾಲ್ ಈಗ ಪ್ರವಾಸಿಗರಿಗೆ ದೂರದ ಪ್ರಶ್ನೆಯಾಗಿ ಉಳಿದಿಲ್ಲ. ಮತ್ತು ಸ್ಪಿಟಿ ಕಣಿವೆ ಕೂಡಾ. ಟುಪ್ ಚಿಲಿಂಗ್ ಗೊಂಪಾ ಅಥವಾ ತ್ರಿಲೋಕನಾಥ , ಲಾಹೌಲ್ –ಸ್ಪಿಟಿ ದೇವದರ್ಶನ ಮತ್ತು ಬುದ್ಧ ತತ್ವಜ್ಞಾನದ ಸಂಗಮವಾಗಿ ಹೊಸ ಆಕರ್ಷಣೆಯನ್ನು ಪಡೆಯಲಿದೆ. ಜೊತೆಗೆ ಬುದ್ಧ ತತ್ವಜ್ಞಾನ ಹರಡಲ್ಪಟ್ಟ ಮತ್ತು ಟಿಬೇಟಿಗೆ ಹಾಗು ಇತರ ದೇಶಗಳಿಗೆ ವಿಸ್ತರಣೆಯಾದ ಮಾರ್ಗ ಇದು.
ಟ್ಯಾಬೂ ಮೊನಾಸ್ಟ್ರಿ ಇನ್ನು ವಿಶ್ವಕ್ಕೆ ಹೆಚ್ಚು ಹತ್ತಿರವಾಗಲಿದೆ. ಸ್ಪಿಟಿ ಕಣಿವೆಯಲ್ಲಿರುವ ಮತ್ತು ದೇಶದ ಪ್ರಮುಖ ಬುದ್ದ ಶಿಕ್ಷಣ ಕೇಂದ್ರವಾಗಿರುವ ಇದಕ್ಕೆ ಸಂಪರ್ಕ ಸುಲಭ ಸಾಧ್ಯವಾಗಲಿದೆ. ಈ ರೀತಿಯಲ್ಲಿ ಇಡೀ ವಲಯವು ಪೂರ್ವ ಏಶ್ಯಾ ಸಹಿತ ವಿಶ್ವದ ಬುದ್ಧಾನುಯಾಯಿಗಳಿಗೆ ಪ್ರಮುಖ ಕೇಂದ್ರವಾಗಲಿದೆ.
ಈ ಸುರಂಗವು ಹಲವಾರು ಉದ್ಯೋಗಾವಕಾಶಗಳೊಂದಿಗೆ ಇಡೀ ವಲಯದ ಯುವಜನತೆಯನ್ನು ಜೋಡಿಸಲಿದೆ. ಯಾರಾದರೊಬ್ಬರು ಇಲ್ಲಿ ಹೋಂ ಸ್ಟೇ ಆರಂಭಿಸಬಹುದು, ಅತಿಥಿ ಗೃಹ, ಧಾಬಾ, ಅಂಗಡಿ, ಆರಂಭಿಸಬಹುದು. ಹಲವರಿಗೆ ಇಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಲು ಅವಕಾಶ ಲಭಿಸಲಿದೆ. ಕರಕುಶಲ ವಸ್ತುಗಳು, ಹಣ್ಣುಗಳು, ಔಷಧಿಗಳು ಎಲ್ಲದಕ್ಕೂ ಇಲ್ಲಿ ಅವಕಾಶಗಳುಂಟಾಗಲಿವೆ.
ಸ್ನೇಹಿತರೇ,
ಅಭಿವೃದ್ಧಿಯ ಪ್ರಯೋಜನಗಳು ದೇಶದ ಮೂಲೆ ಮೂಲೆಗೂ ತಲುಪಬೇಕು ಮತ್ತು ಪ್ರತಿಯೊಬ್ಬರಿಗೂ ಲಭಿಸಬೇಕು ಎಂಬ ಕೇಂದ್ರ ಸರಕಾರದ ದೃಢ ನಿರ್ಧಾರದ ಭಾಗವಾಗಿ ಅಟಲ್ ಸುರಂಗವು ನಿರ್ಮಾಣವಾಗಿದೆ. ನೀವೊಮ್ಮೆ ಈ ಮೊದಲಿನ ಸ್ಥಿತಿಯನ್ನು ಸ್ಮರಿಸಿಕೊಳ್ಳಿ.?.
ಲಾಹೌಲ್ –ಸ್ಪಿಟಿಯಂತಹ ಅನೇಕ ಭಾಗಗಳು ದೇಶದಲ್ಲಿವೆ, ಅವುಗಳು ಸಮಸ್ಯೆಗಳನ್ನು ಎದುರಿಸುತ್ತಿವೆ. ಇದಕ್ಕಿರುವ ಸರಳ ಕಾರಣವೆಂದರೆ ಅವು ಕೆಲವರ ರಾಜಕೀಯ ಹಿತಾಸಕ್ತಿಗಳಿಗೆ ಅನುಗುಣವಾಗಿಲ್ಲದಿರುವುದು.
ಸ್ನೇಹಿತರೇ,
ಕಳೆದ ಕೆಲವು ವರ್ಷಗಳಲ್ಲಿ , ದೇಶವು ಹೊಸ ಧೋರಣೆಯೊಂದಿಗೆ ಮುಂದುವರೆಯುತ್ತಿದೆ. ಪ್ರತಿಯೊಬ್ಬರೂ ಎಲ್ಲರೊಂದಿಗೆ ಮತ್ತು ಪ್ರತಿಯೊಬ್ಬರ ನಂಬಿಕೆಯೊಂದಿಗೆ ಪ್ರಗತಿ ಹೊಂದುತ್ತಿದ್ದಾರೆ. ಸರಕಾರದ ಕಾರ್ಯ ವೈಖರಿಯಲ್ಲಿ ಪ್ರಮುಖ ಬದಲಾವಣೆಯನ್ನು ತರಲಾಗಿದೆ. ಈಗ ಯೋಜನೆಗಳು ಆ ವಲಯದ ಮತಗಳ ಸಂಖ್ಯೆಯನ್ನು ಆಧರಿಸಿರುವುದಿಲ್ಲ. ಈಗ ಯಾವ ಭಾರತೀಯರೂ ಹಿಂದುಳಿಯಬಾರದು, ಅಭಿವೃದ್ಧಿಯ ಅವಕಾಶಗಳಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ಲಾಹೌಲ್ –ಸ್ಪಿಟಿ ಈ ಬದಲಾವಣೆಗೆ ಒಂದು ದೊಡ್ಡ ಉದಾಹರಣೆ. ಪ್ರತಿಯೊಂದು ಮನೆಗೂ ಕೊಳವೆ ಮೂಲಕ ನೀರು ಪೂರೈಕೆಯಾಗುವ ದೇಶದ ಮೊದಲ ಜಿಲ್ಲೆ ಇದು. ಜಲ ಜೀವನ್ ಆಂದೋಲನ ಜನತೆಯ ಬದುಕನ್ನು ಸುಲಭ ಸಾಧ್ಯ ಮಾಡಿದೆ ಎಂಬುದಕ್ಕೆ ಈ ಜಿಲ್ಲೆ ಒಂದು ಸಂಕೇತವಾಗಿದೆ.
ಸ್ನೇಹಿತರೇ,
ಬುಡಕಟ್ಟು ಜನರಿಗೆ , ಸವಲತ್ತುಗಳಿಂದ ವಂಚಿತರಾದವರಿಗೆ , ಶೋಷಿತರಿಗೆ, ಅವಕಾಶ ವಂಚಿತರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ನಮ್ಮ ಸರಕಾರ ಕಟಿಬದ್ದವಾಗಿದೆ. ಇಂದು ದೇಶದಲ್ಲಿ 15 ಕೋಟಿ ಮನೆಗಳಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಪ್ರಮುಖ ಆಂದೋಲನ ಜಾರಿಯಲ್ಲಿದೆ.
ಸ್ವಾತಂತ್ರ್ಯ ಬಂದ ಹಲವಾರು ವರ್ಷಗಳ ಬಳಿಕವೂ , ದೇಶದಲ್ಲಿಯ 18,000 ಕ್ಕೂ ಅಧಿಕ ಗ್ರಾಮಗಳಿಗೆ ವಿದ್ಯುತ್ ಲಭ್ಯವಿಲ್ಲದೆ ಅವರು ಕತ್ತಲಿನಲ್ಲಿ ಬದುಕುವಂತಾಗಿತ್ತು. ಇಂದು ಈ ಗ್ರಾಮಗಳಿಗೆ ವಿದ್ಯುತ್ ತಲುಪಿದೆ.
ಸ್ವಾತಂತ್ರ್ಯ ಬಂದ ದಶಕಗಳ ಬಳಿಕ ಈ ಪ್ರದೇಶಗಳಲ್ಲಿ ಶೌಚಾಲಯ ಸೌಲಭ್ಯವನ್ನು ಒದಗಿಸಲಾಗಿದೆ. ಇದು ಮಾತ್ರವಲ್ಲ. ಎಲ್.ಪಿ.ಜಿ. ಅನಿಲ ಸಂಪರ್ಕವನ್ನು ಒದಗಿಸಲಾಗಿದೆ.
ಈಗ , ದೇಶದ ದೂರ ಪ್ರದೇಶದ ವಲಯಗಳಿಗೆ ಉತ್ತಮ ಚಿಕಿತ್ಸೆ ಲಭಿಸುವಂತೆ ಖಾತ್ರಿಪಡಿಸುವ ಪ್ರಯತ್ನಗಳನ್ನು ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ , ಬಡವರಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ.
ಹಿಮಾಚಲ ಪ್ರದೇಶದ 22 ಲಕ್ಷ ಬಡವರಿಗೆ ಈ ಪ್ರಯೋಜನಗಳನ್ನು ಖಾತ್ರಿಪಡಿಸಲಾಗಿದೆ. ಈ ಎಲ್ಲಾ ಆಂದೋಲನಗಳು ದೇಶದ ದೂರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡಿವೆ. ಯುವಕರಿಗೆ ಪ್ರಯೋಜನಗಳನ್ನು ಒದಗಿಸಿವೆ.
ಸ್ನೇಹಿತರೇ,
ಮತ್ತೊಮ್ಮೆ ನಾನು ಲಾಹೌಲ್ –ಸ್ಪಿಟಿ ಮತ್ತು ಪಾಂಗಿ ಕಣಿವೆಯ ಸಹೋದರ ಮತ್ತು ಸಹೋದರಿಯರನ್ನು ಅಭಿವೃದ್ಧಿಯ ಹೊಸ ಬಾಗಿಲುಗಳನ್ನು ತೆರೆಯಲಿರುವ ಅಟಲ್ ಸುರಂಗಕ್ಕಾಗಿ ಅಭಿನಂದಿಸುತ್ತೇನೆ. ಕೊರೋನಾದ ಈ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬ ನಾಗರಿಕರೂ ತಮ್ಮ ಮತ್ತು ತಮ್ಮ ಕುಟುಂಬದ ಬಗ್ಗೆ ಕಾಳಜಿ ವಹಿಸಬೇಕು ಎಂಬುದು ನನ್ನ ಕೋರಿಕೆಯಾಗಿದೆ. ಮುಖಗವಸುಗಳನ್ನು ಧರಿಸಿ ಮತ್ತು ನಿಮ್ಮ ಕೈಗಳ ಸ್ವಚ್ಚತೆ ಬಗ್ಗೆ ವಿಶೇಷ ಗಮನ ಕೊಡಿ.
ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಈ ಚಾರಿತ್ರಿಕ ಕಾರ್ಯಕ್ರಮದಲ್ಲಿ ನನ್ನನ್ನು ಪಾಲುದಾರನನ್ನಾಗಿಸಿದುದಕ್ಕಾಗಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಧನ್ಯವಾದಗಳು.