"ಕಳೆದ ವರ್ಷ, ಇದೇ ಮೊದಲ ಬಾರಿಗೆ ಭಾರತದಲ್ಲಿ ಮೊಬೈಲ್ ಮೂಲಕ ಪಾವತಿಯು ಎಟಿಎಂ ನಗದು ಹಿಂಪಡೆಯುವಿಕೆಯನ್ನು ಮೀರಿದೆ"
"ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕೈಗೊಳ್ಳಲಾದ ಕ್ರಾಂತಿಕಾರಿ ಉಪಕ್ರಮಗಳು, ಆಡಳಿತದಲ್ಲಿ ಅಳವಡಿಸಿಕೊಳ್ಳಬಹುದಾದ ನವೀನ ‘ಫಿನ್ ಟೆಕ್’ ಪರಿಹಾರಗಳಿಗೆ ಬಾಗಿಲು ತೆರೆದಿವೆ "
"ಈ ‘ಫಿನ್‌ಟೆಕ್’ ಉಪಕ್ರಮಗಳನ್ನು ‘ಫಿನ್‌ಟೆಕ್’ ಕ್ರಾಂತಿಯಾಗಿ ಪರಿವರ್ತಿಸುವ ಸಮಯ ಇದಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನ ಆರ್ಥಿಕ ಸಬಲೀಕರಣವನ್ನು ಸಾಧಿಸಲು ಸಹಾಯ ಮಾಡುವ ಕ್ರಾಂತಿಗೆ ದಾರಿಯಾಗಬೇಕಿದೆ"
"ವಿಶ್ವಾಸ ಎಂದರೆ ಜನರ ಹಿತಾಸಕ್ತಿಗಳ ಭದ್ರತೆಗೆ ಖಾತರಿ ಒದಗಿಸುವುದು. ‘ಫಿನ್‌ಟೆಕ್’ನಲ್ಲಿ ಭದ್ರತೆ ಕುರಿತ ಸಂಶೋಧನೆಗಳ ಹೊರತಾಗಿ ‘ಫಿನ್‌ಟೆಕ್’ ನಾವಿನ್ಯತೆ ಅಪೂರ್ಣವಾಗುತ್ತದೆ"
"ನಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಪರಿಹಾರಗಳ ಮೂಲಕ ವಿಶ್ವದಾದ್ಯಂತ ನಾಗರಿಕರ ಜೀವನವನ್ನು ಸುಧಾರಿಸಬಹುದು"
"ಗಿಫ್ಟ್‌ ಸಿಟಿ(GIFT City) ಕೇವಲ ಒಂದು ಕಟ್ಟಡಗಳ ಸಂಕೀರ್ಣವಲ್ಲ, ಅದು ಭಾರತವನ್ನು ಪ್ರತಿನಿಧಿಸುತ್ತದೆ. ಇದು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳು, ಬೇಡಿಕೆ, ಜನಸಂಖ್ಯೆ ಮತ್ತು ವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಇದು ಆಲೋಚನೆಗಳು, ನಾವಿನ್ಯತೆ ಮತ್ತು ಹೂಡಿಕೆಗೆ ಭಾರತದ ಮುಕ್ತತೆಯನ್ನು ಪ್ರತಿನಿಧಿಸುತ್ತದೆ"
ಹಣಕಾಸು ಎಂಬುದು ಆರ್ಥಿಕತೆಯ ಜೀವಾಳ ಮತ್ತು ತಂತ್ರಜ್ಞಾನವು ಅದರ ವಾಹಕವಾಗಿದೆ. ಅಂತ್ಯೋದಯದ ಸಾಧನೆಗೆ ಇವೆರಡೂ ಸಮಾನ ಮಹತ್ವ ಹೊಂದಿವೆ

ಗೌರವಾನ್ವಿತರೇ

ಗಣ್ಯ ಸಹೋದ್ಯೋಗಿಗಳೇ,

ತಂತ್ರಜ್ಞಾನ ಮತ್ತು ಹಣಕಾಸು ಜಗತ್ತಿನ ನನ್ನ ಸಹೋದ್ಯೋಗಿ ನಾಗರಿಕರೇ, 70ಕ್ಕೂ ಅಧಿಕ ದೇಶಗಳಿಂದ ಭಾಗಿಯಾಗಿರುವ ಸಾವಿರಾರು ಪ್ರತಿನಿಧಿಗಳೇ, ಭಾಗೀದಾರರೇ,

ನಮಸ್ಕಾರ!

ಸ್ನೇಹಿತರೇ,

ಮೊದಲ “ಇನ್ಫಿನಿಟಿ ವೇದಿಕೆ” ಯನ್ನು ಉದ್ಘಾಟಿಸಲು ಮತ್ತು ನಿಮ್ಮೆಲ್ಲರನ್ನೂ ಸ್ವಾಗತಿಸಲು ನಾನು ಸಂತೋಷಪಡುತ್ತೇನೆ. ಇನ್ಫಿನಿಟಿ ಫಾರಂ (ವೇದಿಕೆ) ಭಾರತದಲ್ಲಿ ಹಣಕಾಸು ತಂತ್ರಜ್ಞಾನ ಫಿನ್ ಟೆಕ್ ಗಿರುವಂತೆಯೇ ಬಹಳಷ್ಟು ಸಾಧ್ಯತೆಗಳನ್ನು ಒಳಗೊಂಡಿದೆ. ಇದು ಭಾರತದ ಫಿನ್ ಟೆಕ್ ಇಡೀ ಜಗತ್ತಿಗೇ ಪ್ರಯೋಜನಗಳನ್ನು ಒದಗಿಸುವ ಭಾರೀ ಸಾಮರ್ಥ್ಯ ಹೊಂದಿರುವುದನ್ನು ತೋರಿಸುತ್ತದೆ.

ಸ್ನೇಹಿತರೇ,

ಕರೆನ್ಸಿಯ ಚರಿತ್ರೆ ವ್ಯಾಪಕವಾದ  ವಿಕಾಸವನ್ನು ತೋರಿಸುತ್ತದೆ. ಮನುಷ್ಯರು ವಿಕಾಸಗೊಂಡಂತೆ,  ಅದೇ ರೀತಿ ನಮ್ಮ ವರ್ಗಾವಣೆಯ ಮಾದರಿಗಳೂ ವಿಕಾಸವಾದವು. ಪರಸ್ಪರ ವಿನಿಮಯ ಪದ್ಧತಿಯಿಂದ ಲೋಹಗಳವರೆಗೆ, ನಾಣ್ಯಗಳಿಂದ ಹಿಡಿದು ನೋಟುಗಳವರೆಗೆ, ಚೆಕ್ ಗಳಿಂದ ಹಿಡಿದು ಕಾರ್ಡ್ ಗಳವರೆಗೆ, ಇಂದು ನಾವಿಲ್ಲಿಗೆ ತಲುಪಿದ್ದೇವೆ. ಹಿಂದೆಲ್ಲಾ ಅಭಿವೃದ್ಧಿಗಳು ಜಗತ್ತಿನಾದ್ಯಂತ ಹರಡಲು ದಶಕಗಳ ಕಾಲವನ್ನು ತೆಗೆದುಕೊಳ್ಳುತ್ತಿದ್ದವು. ಆದರೆ ಜಾಗತೀಕರಣದ ಈ ಕಾಲದಲ್ಲಿ ಆ ಸ್ಥಿತಿ ಬದಲಾಗಿದೆ. ತಂತ್ರಜ್ಞಾನವು ಹಣಕಾಸಿನ ಜಗತ್ತಿನಲ್ಲಿ ಬಹಳ ದೊಡ್ಡ ಬದಲಾವಣೆಗಳನ್ನು ತರುತ್ತಿದೆ. ಕಳೆದ ವರ್ಷ ಭಾರತದಲ್ಲಿ ಮೊಬೈಲ್ ಪಾವತಿಗಳು ಇದೇ ಮೊದಲ ಬಾರಿಗೆ ಎ.ಟಿ.ಎಂ. ನಗದು ಹಿಂಪಡೆಯುವಿಕೆಯ ಪ್ರಮಾಣವನ್ನು ಮೀರಿದವು. ಪೂರ್ಣ ಡಿಜಿಟಲ್ ಬ್ಯಾಂಕುಗಳು, ಯಾವುದೇ ಭೌತಿಕ ಶಾಖಾ ಕಚೇರಿಗಳು ಇಲ್ಲದಂತಹವು ಈಗಾಗಲೇ ಅಸ್ತಿತ್ವದಲ್ಲಿವೆ. ಮತ್ತು ಇನ್ನು ಒಂದು ದಶಕದೊಳಗೇ ಅವು ಸಾಮಾನ್ಯವಾಗಲಿವೆ.

ಸ್ನೇಹಿತರೇ,

ತಂತ್ರಜ್ಞಾನದ ವಿಷಯ ಬಂದಾಗ ಅದನ್ನು ಅಳವಡಿಸಿಕೊಳ್ಳುವುದರಲ್ಲಿ ಅಥವಾ ಅದರ ಸುತ್ತ ಅನ್ವೇಷಣೆಗಳನ್ನು ಕೈಗೊಳ್ಳುವಲ್ಲಿ ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಭಾರತ ವಿಶ್ವಕ್ಕೆ ಸಾಧಿಸಿ ತೋರಿಸಿದೆ. ಡಿಜಿಟಲ್ ಇಂಡಿಯಾ ಅಡಿಯಲ್ಲಿ ಪರಿವರ್ತನಾಶೀಲ ಉಪಕ್ರಮಗಳು ಆಡಳಿತದಲ್ಲಿಯೂ ಅನ್ವಯವಾಗುವಂತಹ ಹಣಕಾಸು ತಂತ್ರಜ್ಞಾನ (ಫಿನ್  ಟೆಕ್ ) ಅನ್ವೇಷಣೆಗಳಿಗೆ ಬಾಗಿಲುಗಳನ್ನು ತೆರೆದಿವೆ. ತಂತ್ರಜ್ಞಾನವು ಹಣಕಾಸು ಸೇರ್ಪಡೆಯನ್ನು ಉತ್ತೇಜಿಸಿದೆ. 2014ರಲ್ಲಿ  ಶೇಖಡಾ 50ಕ್ಕಿಂತ  ಕಡಿಮೆ ಮಂದಿ ಭಾರತೀಯರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರು. ಕಳೆದ ಏಳು ವರ್ಷಗಳಲ್ಲಿ ನಾವು 430 ಮಿಲಿಯನ್ ಜನ ಧನ್ ಖಾತೆಗಳ ಮೂಲಕ ಅದನ್ನು ಸಾರ್ವತ್ರೀಕರಣ ಮಾಡಿದ್ದೇವೆ. ಇದುವರೆಗೆ 690 ಮಿಲಿಯನ್ ರುಪೇ ಕಾರ್ಡ್ ಗಳನ್ನು ನೀಡಲಾಗಿದೆ. ಕಳೆದ ವರ್ಷ ರುಪೇ ಕಾರ್ಡ್ ಗಳು 1.3 ಬಿಲಿಯನ್ ವರ್ಗಾವಣೆಗಳನ್ನು ನಡೆಸಿವೆ. ಯು.ಪಿ.ಐ.ಯು ಕಳೆದ ತಿಂಗಳು 4.2 ಬಿಲಿಯನ್ ವರ್ಗಾವಣೆಗಳನ್ನು  ನಿಭಾಯಿಸಿದೆ.

ಪ್ರತೀ ತಿಂಗಳೂ ಸುಮಾರು 300 ಮಿಲಿಯನ್ ಇನ್ವೊಯಿಸ್ ಗಳನ್ನು ಜಿ.ಎಸ್.ಟಿ. ಫೊರ್ಟಲಿನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಪ್ರತೀ ತಿಂಗಳೂ ಜಿ.ಎಸ್.ಟಿ. ಪೋರ್ಟಲ್ ಒಂದರ ಮೂಲಕವೇ 12 ಬಿಲಿಯನ್ನಿಗೂ ಅಧಿಕ ಅಮೆರಿಕನ್ ಡಾಲರ್ ಮೊತ್ತದ ಪಾವತಿಯನ್ನು ಮಾಡಲಾಗುತ್ತಿದೆ. ಜಾಗತಿಕ ಸಾಂಕ್ರಾಮಿಕದ ನಡುವೆಯೂ ಪ್ರತೀ ದಿನ 1.5 ಮಿಲಿಯನ್ ರೈಲ್ವೇ ಟಿಕೇಟ್ ಗಳನ್ನು ಆನ್ ಲೈನ್ ಮೂಲಕ ಮುಂಗಡ ಕಾಯ್ದಿರಿಸಲಾಗುತ್ತಿದೆ. ಕಳೆದ ವರ್ಷ ಫಾಸ್ಟ್ ಟ್ಯಾಗ್ 1.3 ಬಿಲಿಯನ್ ವರ್ಗಾವಣೆಗಳನ್ನು ಅಡೆ ತಡೆರಹಿತವಾಗಿ ನಿರ್ವಹಿಸಿದೆ. ಪಿ.ಎಂ. ಸ್ವನಿಧಿಯು ದೇಶಾದ್ಯಂತ ಬೀದಿ ಬದಿ ವ್ಯಾಪಾರಿಗಳಿಗೂ ಸಾಲ ಲಭ್ಯವಾಗುವಂತೆ ಮಾಡುತ್ತಿದೆ. ಇ-ರುಪಿಯು ಯಾವುದೇ ಸೋರಿಕೆ ಇಲ್ಲದೆ ನಿರ್ದಿಷ್ಟ ಸೇವೆಗಳು ಗುರಿ ಕೇಂದಿತವಾಗಿ  ಲಭ್ಯವಾಗುವಂತೆ ಮಾಡಿವೆ. ನಾನು ಇನ್ನಷ್ಟು ಹೇಳುತ್ತಲೇ ಹೋಗಬಹುದು, ಆದರೆ ಇವು ಭಾರತದಲ್ಲಿ ಫಿನ್ ಟೆಕ್ ನ ಪ್ರಮಾಣ ಮತ್ತು ವ್ಯಾಪ್ತಿಯನ್ನು ಕುರಿತ ಕೆಲವು ಉದಾಹರಣೆಗಳು

ಸ್ನೇಹಿತರೇ,

ಹಣಕಾಸು ಸೇರ್ಪಡೆ ಎನ್ನುವುದು ಫಿನ್ ಟೆಕ್ ಕ್ರಾಂತಿಯ ಚಾಲಕ ಶಕ್ತಿ. ಫಿನ್ ಟೆಕ್ ಎಂಬುದು ಆದಾಯ, ಹೂಡಿಕೆ, ವಿಮೆ ಮತ್ತು ಸಾಂಸ್ಥಿಕ ಮುಂಗಡ ಅಥವಾ ಸಾಲ ಎಂಬ ನಾಲ್ಕು ಕಂಭಗಳನ್ನು ಆಧರಿಸಿರುತ್ತದೆ. ಅದಾಯ ಹೆಚ್ಚಾದಂತೆ ಹೂಡಿಕೆ ಸಾಧ್ಯವಾಗುತ್ತದೆ. ದೊಡ್ಡ ಸಂಭಾವ್ಯ ಅಪಾಯಗಳನ್ನು ಎದುರಿಸುವುದಕ್ಕೆ ವಿಮಾ ವ್ಯಾಪ್ತಿ ನೆರವಾಗುತ್ತದೆ ಮತ್ತು ಹೂಡಿಕೆಯೂ ಸಾಧ್ಯವಾಗುತ್ತದೆ. ಸಾಂಸ್ಥಿಕ ಸಾಲ ವಿಸ್ತರಣೆಗೆ ರೆಕ್ಕೆಗಳನ್ನು ಒದಗಿಸುತ್ತದೆ. ಮತ್ತು ನಾವು ಈ ಪ್ರತೀ ಕಂಭಗಳ ಮೇಲೂ ಕೆಲಸ ಮಾಡಿದ್ದೇವೆ. ಈ ಎಲ್ಲಾ ಅಂಶಗಳು ಜೊತೆಗೂಡಿದಾಗ, ನೀವು ಇದ್ದಕ್ಕಿದ್ದಂತೆ ಹಲವಾರು ಮಂದಿ ಹಣಕಾಸು ವಲಯದಲ್ಲಿ ಭಾಗವಹಿಸುತ್ತಿರುವುದನ್ನು ಕಾಣುತ್ತೀರಿ. ವಿಸ್ತಾರವಾದ ತಳಹದಿಯು ಹಣಕಾಸು ಅನ್ವೇಷಣೆಗಳಿಗೆ ಸೂಕ್ತವಾದ ಚಿಮ್ಮುಹಲಗೆಯನ್ನು (ಸ್ಪ್ರಿಂಗ್ ಬೋರ್ಡ್) ಒದಗಿಸುತ್ತದೆ. ಭಾರತದಲ್ಲಿರುವ ಫಿನ್ ಟೆಕ್ ಉದ್ಯಮವು ದೇಶದಲ್ಲಿರುವ ಪ್ರತೀ ವ್ಯಕ್ತಿಗೂ ಹಣಕಾಸು ಮತ್ತು ಔಪಚಾರಿಕ ಸಾಲ ವ್ಯವಸ್ಥೆ ಲಭ್ಯತೆಯನ್ನು ಹೆಚ್ಚಿಸುವತ್ತ ಅನ್ವೇಷಣಾನಿರತವಾಗಿದೆ. ಈ ಫಿನ್ ಟೆಕ್ ಉಪಕ್ರಮಗಳನ್ನು ಫಿನ್ ಟೆಕ್ ಕ್ರಾಂತಿಯನ್ನಾಗಿ ಪರಿವರ್ತಿಸುವುದಕ್ಕೆ ಇದು ಸಕಾಲ. ಈ ಕ್ರಾಂತಿಯು ದೇಶದ ಪ್ರತಿಯೊಬ್ಬ ನಾಗರಿಕನೂ ಹಣಕಾಸು ಸಶಕ್ತೀಕರಣವನ್ನು ಸಾಧಿಸುವುದಕ್ಕೆ ನೆರವಾಗುತ್ತದೆ.

ಸ್ನೇಹಿತರೇ,

ಹಣಕಾಸು ತಂತ್ರಜ್ಞಾನದ ಆಳ ಅಗಲಗಳು ವಿಸ್ತಾರಗೊಳ್ಳುತ್ತಿರುವುದನ್ನು ನಾವು ಕಾಣುತ್ತಿರುವಂತೆಯೇ, ಅಲ್ಲಿ ಗಮನಿಸಬೇಕಾದಂತಹ ಅಂಶಗಳಿವೆ. ಫಿನ್ ಟೆಕ್ ಉದ್ಯಮ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಮತ್ತು ಸಾಧನೆಯನ್ನು ಮಾಡಿದೆ, ಅದರ ವ್ಯಾಪ್ತಿ, ಪ್ರಮಾಣ ಹೇಗಿದೆ ಎಂದರೆ ಬದುಕಿನ ಎಲ್ಲಾ ವರ್ಗದ ಜನರೂ ಅದರ ಗ್ರಾಹಕರಾಗಿದ್ದಾರೆ. ಜನಮಾನಸದಲ್ಲಿ ಹಣಕಾಸು ತಂತ್ರಜ್ಞಾನದ ಈ ಮಟ್ಟದ ಅಂಗೀಕಾರಾರ್ಹತೆ ಒಂದು ವಿಶಿಷ್ಟ ಅಂಶವಾಗಿದೆ. ಆ ಅಂಶ ಎಂದರೆ ನಂಬಿಕೆ. ಸಾಮಾನ್ಯ ಭಾರತೀಯರು ಡಿಜಿಟಲ್ ಪಾವತಿಗಳನ್ನು ಮತ್ತು ಇಂತಹ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ನಮ್ಮ ಫಿನ್ ಟೆಕ್ ಪರಿಸರ ವ್ಯವಸ್ಥೆಯಲ್ಲಿ ಭಾರೀ ನಂಬಿಕೆಯನು ತೋರಿಸಿದ್ದಾರೆ. ಈ ನಂಬಿಕೆ ಜವಾಬ್ದಾರಿ ಕೂಡಾ. ನಂಬಿಕೆ ಎಂದರೆ ನೀವು ಜನರ ಹಿತಾಸಕ್ತಿಗಳನ್ನು ರಕ್ಷಿಸುವುದನ್ನು ಖಾತ್ರಿಪಡಿಸುವುದು. ಫಿನ್ ಟೆಕ್ ಅನ್ವೇಷಣೆಗಳು ಫಿನ್ ಟೆಕ್ ಭದ್ರತಾ ಅನ್ವೇಷಣೆಗಳನ್ನು ಒಳಗೊಂಡಿಲ್ಲದಿದ್ದರೆ ಅವು ಪೂರ್ಣವಾಗಲಾರವು.

ಸ್ನೇಹಿತರೇ,

ನಾವು ಜಗತ್ತಿನ ಜೊತೆ ನಮ್ಮ ಅನುಭವ ಮತ್ತು ತಜ್ಞತೆಯನ್ನು ಹಂಚಿಕೊಳ್ಳುವುದರಲ್ಲಿ ಮತ್ತು ಅವರಿಂದ ಕಲಿಯುವುದರಲ್ಲಿ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಪರಿಹಾರಗಳು ಜಗತ್ತಿನಾದ್ಯಂತ ಜನರ ಬದುಕನ್ನು ಸುಧಾರಿಸಬಲ್ಲವು. ಯು.ಪಿ.ಐ. ಮತ್ತು ರುಪೇಯಂತಹ ಸಲಕರಣೆಗಳು ಪ್ರತಿಯೊಂದು ದೇಶಕ್ಕೂ ಅಪರಿಮಿತ ಅವಕಾಶಗಳನ್ನು ಒದಗಿಸಬಲ್ಲವು. ಕಡಿಮೆ ಖರ್ಚಿನ ಮತ್ತು ನಂಬಲರ್ಹ ’ಸಕಾಲಿಕ ಪಾವತಿ ವ್ಯವಸ್ಥೆ” ಹಾಗು ಅದರ ಜೊತೆ “ದೇಶೀಯ ಕಾರ್ಡ್ ಸ್ಕೀಂ’ ಮತ್ತು “ಹಣಕಾಸು ರವಾನೆ ವ್ಯವಸ್ಥೆ” ಒದಗಣೆಗೂ ಇದೊಂದು ಅವಕಾಶ.

ಸ್ನೇಹಿತರೇ,

ಗಿಫ್ಟ್ ನಗರ (ಉಡುಗೊರೆ ನಗರ) ಎಂಬುದು ಒಂದು ಸ್ಥಳವಲ್ಲ. ಅದು ಭಾರತದ ಭರವಸೆ. ಅದು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು, ಬೇಡಿಕೆಗಳನ್ನು, ಜನಸಂಖ್ಯಾ ಶಾಸ್ತ್ರ, ಮತ್ತು ವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಇದು ಚಿಂತನೆಗಳಿಗೆ, ಅನ್ವೇಷಣೆ ಮತ್ತು ಹೂಡಿಕೆಯಲ್ಲಿಯ ಅವಕಾಶಗಳಿಗೆ ಭಾರತದ ಮುಕ್ತತೆಯನ್ನು  ಪ್ರತಿನಿಧಿಸುತ್ತದೆ. ಗಿಫ್ಟ್ ನಗರವು ಜಾಗತಿಕ ಫಿನ್ ಟೆಕ್ ಜಗತ್ತಿಗೆ ಮಹಾದ್ವಾರ. ಗಿಫ್ಟ್ ಸಿಟಿಯ (ಐ.ಎಫ್.ಎಸ್.ಸಿ.) ಜನನ ಹಣಕಾಸು ಮತ್ತು ತಂತ್ರಜ್ಞಾನ ಪರಸ್ಪರ ಸಮ್ಮಿಳಿತಗೊಳ್ಳುವ ಚಿಂತನೆಯನ್ನಾಧರಿಸಿದೆ. ಮತ್ತು ಅದು ಭಾರತದ ಭವಿಷ್ಯತ್ತಿನ ಅಭಿವೃದ್ಧಿಯ ಪ್ರಮುಖ ಭಾಗವೂ ಆಗಲಿದೆ. ನಮ್ಮ  ಉದ್ದೇಶ ಅತ್ಯುತ್ತಮ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳನ್ನು ಬರೇ ಭಾರತಕ್ಕೆ ಒದಗಿಸುವುದು ಮಾತ್ರವಲ್ಲ ಇಡೀ ಜಗತ್ತಿಗೇ ಒದಗಿಸುವುದೂ ಆಗಿದೆ.

ಸ್ನೇಹಿತರೇ,

ಹಣಕಾಸು ಎಂಬುದು ಆರ್ಥಿಕತೆಯ ಜೀವ ಚೈತನ್ಯದ ರಕ್ತದಂತೆ ಮತ್ತು ತಂತ್ರಜ್ಞಾನ ಅದರ ಸಾಗಾಟ ವ್ಯವಸ್ಥೆ ಇದ್ದಂತೆ. “ಅಂತ್ಯೋದಯ ಮತ್ತು ಸರ್ವೋದಯ” ಸಾಧಿಸಲು ಇವೆರಡೂ ಅವಶ್ಯವಾದಂತಹ ಸಮಾನ ಪ್ರಮುಖ ಸಂಗತಿಗಳು. ಜಾಗತಿಕ ಫಿನ್ ಟೆಕ್ ಉದ್ಯಮವನ್ನು ಆ ಉದ್ಯಮದ ಸೀಮಾತೀತ ಭವಿಷ್ಯದ ಸಾಧ್ಯತೆಗಳನ್ನು ಅನ್ವೇಷಿಸಲು ಅನುಕೂಲವಾಗುವಂತೆ ಅದರ ಎಲ್ಲಾ ಮುಖ್ಯ ಭಾಗೀದಾರರನ್ನು ಒಗ್ಗೂಡಿಸುವ ಪ್ರಯತ್ನದ ಒಂದು ಪ್ರಮುಖವಾದ ಭಾಗವೇ  ನಮ್ಮ ಇನ್ಫಿನಿಟಿ ಫಾರಂ. ನನಗೆ ಈ ಹಿಂದೆ ನಾನು ಶ್ರೀ ಮೈಕ್ ಬ್ಲೂಮ್ ಬರ್ಗ್ ಅವರ ಜೊತೆ ಈ ವಿಷಯಕ್ಕೆ ಸಂಬಂಧಿಸಿ ನಡೆಸಿದ ಮಾತುಕತೆ ನೆನಪಿಗೆ ಬರುತ್ತಿದೆ.  ಮತ್ತು ಬ್ಲೂಮ್ ಬರ್ಗ್ ಗುಂಪಿಗೆ ಅವರ ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇನ್ಫಿನಿಟಿ ಫಾರಂ ಎಂಬುದು ನಂಬಿಕೆಯ ವೇದಿಕೆ. ನಂಬಿಕೆ ಎಂದರೆ ಅನ್ವೇಷಣೆಯ ಉತ್ಸಾಹ ಮತ್ತು ಕಲ್ಪನೆಯ ಶಕ್ತಿಯಲ್ಲಿರುವ ನಂಬಿಕೆ. ನಂಬಿಕೆ ಎಂದರೆ ಯುವಜನತೆಯ ಶಕ್ತಿ ಮತ್ತು ಬದಲಾವಣೆಯತ್ತ ಅವರ ತುಡಿತದಲ್ಲಿರುವ ನಂಬಿಕೆ. ಜಗತ್ತನ್ನು ಉತ್ತಮ ಸ್ಥಳವನ್ನಾಗಿಸುವುದರಲ್ಲಿರುವ ನಂಬಿಕೆ. ನಾವೆಲ್ಲರೂ ಒಗ್ಗೂಡಿ ಜಾಗತಿಕವಾಗಿ ಉದ್ಭವಿಸುತ್ತಿರುವ,  ಬಹಳ ತುರ್ತಾಗಿ ಗಮನಹರಿಸಬೇಕಾಗಿರುವ ವಿಷಯಗಳನ್ನು ಪರಿಹರಿಸಲು ಫಿನ್ ಟೆಕ್ ನಲ್ಲಿ ನವೀನ  ಚಿಂತನೆಗಳನ್ನು ಅಳವಡಿಸುವತ್ತ ಮತ್ತು ಅನ್ವೇಷಿಸುವತ್ತ ಕಾರ್ಯಮಗ್ನರಾಗೋಣ.

ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India has the maths talent to lead frontier AI research: Satya Nadell

Media Coverage

India has the maths talent to lead frontier AI research: Satya Nadell
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 9 ಜನವರಿ 2025
January 09, 2025

Appreciation for Modi Governments Support and Engagement to Indians Around the World