CAs have a great role in making laws like bankruptcy code and insolvency, successful: PM Modi
Like the lawyers did during the freedom struggle, I urge the CAs to take the lead in the journey towards India’s economic growth: PM
On one hand, there is Swachh Bharat Abhiyaan & on the side other there is a movement to clean the menace of corruption: PM
Government would take tougher action against those helping hide black money: PM Modi

ನಮಸ್ತೆ,

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಅಧ್ಯಕ್ಷರಾದ ಶ್ರೀಮಾನ್ ನಿಲೇಶ್ ವಿಕ್ರಮ್‍ಸೇ ಅವರೇ, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳೆ, ಹಣಕಾಸು ಸಚಿವರಾದ ಶ್ರೀ ಅರುಣ್ ಜೇಟ್ಲಿ ಅವರೇ, ಕೇಂದ್ರ ಮಂತ್ರಿಮಂಡಲದ ನನ್ನೆಲ್ಲ ಮಿತ್ರರೆ, ಇಲ್ಲಿ ಹಾಗೂ ದೇಶಾದ್ಯಂತ ಸರಿಸುಮಾರು 200 ಸ್ಥಾನಗಳಲ್ಲಿ ಉಪಸ್ಥಿತರಿರುವ ಲೆಕ್ಕ ಪರಿಶೋಧನಾ ವಲಯದ ಎಲ್ಲ ಮಹನೀಯರೇ, ದೇಶದ ಎಲ್ಲ ರಾಜ್ಯಗಳಲ್ಲಿ ಉಪಸ್ಥಿತರಿರುವ ಮಾನ್ಯ ಮುಖ್ಯಮಂತ್ರಿಗಳೇ, ಮಳೆಯ ನಡುವೆಯೂ ಭಾರೀ ಉಲ್ಲಾಸ ಹಾಗೂ ಉತ್ಸಾಹದಿಂದ ಇಲ್ಲಿ ಭಾಗವಹಿಸಿರುವ ತಮಗೆಲ್ಲರಿಗೂ ನನ್ನ ನಮಸ್ಕಾರಗಳು.

ಇಂದಿನ ಶುಭಸಂದರ್ಭದಲ್ಲಿ ಇಲ್ಲಿ ಸನ್ಮಾನ ಸ್ವೀಕರಿಸಿರುವ ಮಹನೀಯರೇ, ಇಂದು ಇಲ್ಲಿನ ಸಭಾಗೃಹ ಹಾಗೂ ದೇಶದ ವಿವಿಧ ಸ್ಥಾನಗಳಲ್ಲಿ ಉಪಸ್ಥಿತರಿರುವ ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಉದ್ಯಮಿಗಳೆ, ಟಿವಿ ಹಾಗೂ ರೇಡಿಯೋದಲ್ಲಿ ಕಾರ್ಯಕ್ರಮವನ್ನು ನೋಡುತ್ತಿರುವ ಹಾಗೂ ಕೇಳುತ್ತಿರುವ ಎಲ್ಲ ದೇಶವಾಸಿಗಳೇ, ಯುವ ಮಿತ್ರರೇ, ಸಹೋದರ, ಸಹೋದರಿಯರೇ,

ಇಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಸಂಸ್ಥಾಪನಾ ದಿನ. ತಮಗೆಲ್ಲರಿಗೂ ಹಾರ್ದಿಕ ಶುಭಾಶಯಗಳು. ಇಂದು ಸಂಸ್ಥೆಯ ಸಂಸ್ಥಾಪನಾ ದಿನವೂ ಹೌದು ಹಾಗೂ ಇಂದೇ ಭಾರತ, ತನ್ನ ಅರ್ಥವ್ಯವಸ್ಥೆಯಲ್ಲಿ ಒಂದು ಮಹತ್ವದ ಹೆಜ್ಜೆಯನಿರಿಸಿದ ಸುದಿನ. ಇಂದಿನಿಂದಲೇ ದೇಶದಲ್ಲಿ ಜಿಎಸ್ ಟಿ ಅಂದರೆ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದೆ.

ಇಂತಹ ಮಹತ್ವಪೂರ್ಣ ದಿನ ನಾನು ತಮ್ಮ ಮಧ್ಯೆ ಇರುವುದು ನನಗೆ ಸಂತೋಷ ತಂದಿದೆ. ಇದು ನನ್ನ ಸೌಭಾಗ್ಯವೆಂದು ನಾನು ಭಾವಿಸುತ್ತೇನೆ. ಲೆಕ್ಕ ಪರಿಶೋಧನಾ ಕಾರ್ಯದಲ್ಲಿ ಕಳೆದ ಹಲವು ವರ್ಷಗಳಿಂದ ತೊಡಗಿಕೊಂಡಿರುವ ಮಹನೀಯರೇ, ತಮಗೆ ದೇಶದ ಸಂಸತ್ತು ಒಂದು ಪವಿತ್ರ ಅಧಿಕಾರವನ್ನು ನೀಡಿದೆ. ಲೆಕ್ಕ ಪುಸ್ತಕಗಳಲ್ಲಿ ಸರಿಯನ್ನು ಸರಿಯೆಂದು ಮತ್ತು ತಪ್ಪನ್ನು ತಪ್ಪೆಂದು ಪ್ರಮಾಣೀಕರಿಸುವ ಮತ್ತು ಪರಿಶೋಧನೆ ಮಾಡುವ ಅಧಿಕಾರ ಕೇವಲ ತಮಗೆ ಮಾತ್ರ ಇದೆ.
ವೈದ್ಯರು ಹೇಗೆ ಸಮಾಜ ಮತ್ತು ವ್ಯಕ್ತಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೋ ಹಾಗೆ ತಮಗೆ ಸಮಾಜದ ಹಣಕಾಸು ಸ್ಥಿತಿಗತಿಯ ಬಗ್ಗೆ ಕಾಳಜಿ ವಹಿಸುವ ಜವಾಬ್ಧಾರಿ ಇದೆ. ಯಾವುದೇ ವೈದ್ಯ ಕೂಡಾ ಜನರಿಗೆ ನೀನು ಅದನ್ನು ತಿನ್ನು, ಇದನ್ನು ತಿನ್ನು, ಹಾಗೆ ಮಾಡು, ಹೀಗೆ ಮಾಡು ನೀನು ಅನಾರೋಗ್ಯಪೀಡಿತನಾಗುತ್ತೀಯ, ಇದರಿಂದ ನನ್ನ ಹಣಕಾಸು ಸ್ಥಿತಿಗತಿ ಸುಧಾರಿಸುತ್ತದೆ ಎಂದು ಹೇಳುವುದಿಲ್ಲ. ಯಾವುದೇ ವ್ಯಕ್ತಿಯ ಆರೋಗ್ಯ ಹದಗೆಟ್ಟರೆ ಮಾತ್ರ ತನ್ನ ಗಳಿಕೆ ವೃದ್ಧಿಸುತ್ತದೆ ಎಂಬುದು ವೈದ್ಯರಿಗೆ ತಿಳಿದಿದ್ದರೂ ಕೂಡಾ ಅವರು ತನ್ನ ಬಳಿ ಬರುವ ಜನರಿಗೆ ನೀನು ಏನು ಮಾಡಿದರೆ ನಿನ್ನ ಆರೋಗ್ಯ ವೃದ್ಧಿಸುತ್ತದೆ ಎಂದು ತಿಳಿಹೇಳುತ್ತಾರೆ.
ಮಿತ್ರರೇ, ಸಮಾಜದ ಆರ್ಥಿಕ ವ್ಯವಸ್ಥೆ ಸುಸ್ಥಿರವಾಗಿರಲಿ, ಅದರಲ್ಲಿ ಯಾವುದೇ ಏರುಪೇರುಗಳಾಗದಿರಲಿ ಎಂಬುದನ್ನು ತಾವು ನೋಡಿಕೊಳ್ಳುತ್ತೀರಿ. ತಾವುಗಳು ದೇಶದ ಅರ್ಥವ್ಯವಸ್ಥೆಯ ಒಂದು ದೊಡ್ಡ ಆಧಾರಸ್ಥಂಬವಾಗಿದ್ದೀರಿ. ತಮ್ಮ ನಡುವೆ ಇರುವುದರಿಂದ ನನಗೆ ಹೆಚ್ಚು ವಿಷಯ ತಿಳಿದುಕೊಳ್ಳುವ ಅವಕಾಶ ಲಭಿಸುತ್ತದೆ. ಪ್ರಪಂಚದಾದ್ಯಂತ ಭಾರತದ ಲೆಕ್ಕ ಪರಿಶೋಧಕರು ತಮ್ಮ ಬುದ್ಧಿವಂತಿಕೆ ಹಾಗೂ ಹಣಕಾಸು ಕೌಶಲ್ಯಗಳಿಗಾಗಿ ಹೆಚ್ಚು ಚಿರಪರಿಚಿತರಾಗಿದ್ದಾರೆ. ಇಂದು ನನಗೆ ನೂತನ ಲೆಕ್ಕ ಪರಿಶೋಧನಾ ಪಠ್ಯಕ್ರಮವನ್ನು ಪ್ರಾರಂಭ ಮಾಡುವ ಅವಕಾಶ ಲಭಿಸಿದೆ. ಇದು ತಮ್ಮ ಕ್ರಿಯಾತ್ಮಕ ಪಠ್ಯಕ್ರಮ ಮತ್ತು ಪರೀಕ್ಷೆಯ ವಿಶ್ವಾಸಾರ್ಹತೆಯ ಹೆಗ್ಗುರುತಾಗಿದೆ. ಈ ಹೊಸ ಪಠ್ಯಕ್ರಮ ಮುಂಬರುವ ದಿನಗಳಲ್ಲಿ ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಜನರಿಗೆ ವಿತ್ತೀಯ ಕೌಶಲ್ಯಗಳ ಬಗ್ಗೆ ಹೆಚ್ಚು ತಿಳುವಳಿಕೆ ಮೂಡಿಸುತ್ತದೆ ಎಂಬ ವಿಶ್ವಾಸ ನನಗಿದೆ. ಈ ಸಂಸ್ಥೆಗಳು, ಸಂಪನ್ಮೂಲ ಅಭಿವೃದ್ದಿ, ಜಾಗತಿಕ ಮಾನದಂಡ, ಜಾಗತಿಕ ಆವಶ್ಯಕತೆಗೆ ಅನುಗುಣವಾಗಿ ನಮ್ಮ ಮಾನವ ಸಂಪನ್ಮೂಲವನ್ನು ಹೆಚ್ಚು ಮಾಡುವ ದಿಶೆಯಲ್ಲಿ ಕ್ರಿಯಾತ್ಮಕ ವ್ಯವಸ್ಥೆಗಳನ್ನು ಅಭಿವೃದ್ದಿ ಮಾಡಬೇಕಿದೆ. ನಮ್ಮ ಲೆಕ್ಕ ಪರಿಶೋಧನಾ ಕ್ಷೇತ್ರದ ಪಠ್ಯಕ್ರಮದಲ್ಲಿ ಯಾವ ನೂತನ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು, ಏನು ಆವಿಷ್ಕಾರಗಳನ್ನು ಮಾಡಬೇಕು ಎಂಬ ಬಗ್ಗೆ ಗಮನ ಹರಿಸಬೇಕಿದೆ. ಲೆಕ್ಕ ಪರಿಶೋಧನಾ ಕಾರ್ಯವನ್ನು ಸುಗಮಗೊಳಿಸಲು ನೂತನ ಸಾಫ್ಟ್ ವೇರ್‍ಗಳು ಮಾರುಕಟ್ಟೆಯಲ್ಲಿ ತಮ್ಮ ದಾರಿಯನ್ನು ಕಾಯುತ್ತಿವೆ.

ಸ್ನೇಹಿತರೇ, ನಮ್ಮ ಶಾಸ್ತ್ರಗಳಲ್ಲಿ ನಾಲ್ಕು ಪುರುಷಾರ್ಥಗಳ ಬಗ್ಗೆ ಹೇಳಲಾಗಿದೆ. ನಮ್ಮ ಶಾಸ್ತ್ರಗಳಲ್ಲಿ ನಾಲ್ಕು ಪುರುಷಾರ್ಥಗಳ ಬಗ್ಗೆ ತಿಳಿಸಿಲಾಗಿದೆ. ಧರ್ಮ, ಅರ್ಥ, ಕಾಮ, ಮೋಕ್ಷ. ಯಾವ ರೀತಿ ಧರ್ಮ ಮತ್ತು ಮೋಕ್ಷಗಳ ಬಗ್ಗೆ ವಿಚಾರ ಮಾಡಿದರೆ ನಮಗೆ ಋಷಿ ಮುನಿಗಳ ಕಾಣಬಹುದು ಎಂಬುದನ್ನು ಯಾವತ್ತಾದರೂ ಚಿಂತನೆ ಮಾಡಿದ್ದೀರಾ. ಹಾಗೆಯೇ ಅರ್ಥವ್ಯವಸ್ಥೆಯ ಎಲ್ಲ ಆಗು ಹೋಗುಗಳು ತಮ್ಮ ಕೈಯಲ್ಲಿದೆ. ಆದ್ದರಿಂದ ನಾನು ತಮ್ಮನ್ನು ಹಣಕಾಸು ಜಗತ್ತಿನ ಋಷಿಮುನಿಗಳನ್ನು ಎಂದರೆ ತಪ್ಪಾಗಲಾರದು. ಮೋಕ್ಷದ ಮಾರ್ಗವನ್ನು ತೋರಿಸುವ ಋಷಿಮುನಿಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೆ ಮಹತ್ವ ಅರ್ಥವ್ಯವಸ್ಥೆಯಲ್ಲಿ ತಮ್ಮ ಮಾರ್ಗದರ್ಶನಕ್ಕಿದೆ. ಯಾವ ಹಾದಿಯಲ್ಲಿ ಮುನ್ನಡೆದರೆ ಯಶಸ್ಸನ್ನು ಸಾಧಿಸಬಹುದು ಇಂದು ತಿಳಿಹೇಳುವ, ಮಾರ್ಗದರ್ಶನ ಮಾಡುವ ಜವಾಬ್ಧಾರಿ ಲೆಕ್ಕ ಪರಿಶೋಧನೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ತಮ್ಮೆಲ್ಲರ ಮೇಲಿದೆ.

ನನ್ನ ಪ್ರೀತಿಯ ಸ್ನೇಹಿತರೆ, ತಾವು ಏನು ನನ್ನ ಮೇಲೆ ಪ್ರೀತಿಯನ್ನು ತೋರಿಸುತ್ತಿದ್ದೀರೋ, ಯಾವ ರೀತಿಯಲ್ಲಿ ನೀವು ನನ್ನ ವಿಶ್ವಾಸವನ್ನು ಹೆಚ್ಚು ಮಾಡುತ್ತಿದ್ದೀರೋ, ಇದೇ ವಿಶ್ವಾಸ, ಪ್ರೀತಿ ಇಂದು ನನ್ನನ್ನು ಇಲ್ಲಿ ಮನಬಿಚ್ಚಿ ಕೆಲವು ಮಾತುಗಳನ್ನು ಆಡುವಂತೆ ಪ್ರೇರೇಪಿಸುತ್ತಿದೆ. ನನ್ನ ಮತ್ತು ನಿಮ್ಮ ನಡುವಿನ ದೇಶಭಕ್ತಿಯಲ್ಲಿ ಯಾವುದೇ ಕೊರತೆ ಇಲ್ಲ. ಹೇಗೆ ನಾನು, ನನ್ನ ದೇಶ ಅಭಿವೃದ್ಧಿಪಥದತ್ತ ಸಾಗಬೇಕೆಂದು ಬಯಸುತ್ತೇನೋ ಅದೇ ರೀತಿ ನೀವು ಕೂಡ ದೇಶ ಮುಂಚೂಣಿಯಲ್ಲಿರಬೇಕೆಂದು ಬಯಸುತ್ತೀರಿ. ಆದರೆ ಕೆಲವೊಂದು ವಿಷಯಗಳು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ. ತಮ್ಮಲ್ಲಿ ಹೆಚ್ಚು ಅನುಭವಿಗಳಿದ್ದೀರಿ, ತಾವು ಕೇಳಿರಬಹುದು, ಯಾವುದಾದರೂ ಮನೆಗೆ ಬೆಂಕಿ ಹೊತ್ತಿಕೊಂಡು, ಅವರ ಸಂಪೂರ್ಣ ಆಸ್ತಿ ಪಾಸ್ತಿ ನಷ್ಟವಾದಾಗ ಆ ಕುಟುಂಬದವರು ತಮ್ಮ ಸ್ವಂತ ಬಲದಿಂದ ಆದಷ್ಟು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ಕೆಲವರು ಮಾತನಾಡುವುದನ್ನು ಕೇಳಿದ್ದೇವೆ. ಕೆಲವೊಮ್ಮೆ ಕಷ್ಟವಾದರೂ ಕೂಡಾ ಅವರುಗಳು ಚೇತರಿಸಿಕೊಂಡು ಮತ್ತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಸಮಯ ಕಳೆದಂತೆ ಅವರು ಚಿಂತೆಯಿಂದ ಹೊರಬರುತ್ತಾರೆ. ಹಿರಿಯರು ಹೇಳುತ್ತಾರೆ, ಮನೆಗೆ ಬೆಂಕಿ ತಗುಲಿ ನಷ್ಟವಾದ ಮನೆಯನ್ನು ಮತ್ತೆ ಕಟ್ಟಿಕೊಳ್ಳಬಹುದು, ಆದರೆ ಮನೆಯ ಯಾವುದಾದರೂ ಸದಸ್ಯ ಕಳ್ಳತನದ ಅಭ್ಯಾಸ ಮಾಡಿಕೊಂಡರೆ ಅಂತಹ ಮನೆ ಚೇತರಿಸಿಕೊಳ್ಳುವುದು ಅಸಾಧ್ಯ. ಸಹೋದರ, ಸಹೋದರಿಯರೆ, ಸಂಪೂರ್ಣ ಪರಿವಾರ ಕಳ್ಳತನದಲ್ಲಿ ತೊಡಗಿಕೊಂಡಿರುವುದಿಲ್ಲ. ಆದರೆ ಮನೆಯ ಒಬ್ಬ ಸದಸ್ಯ ಮಾಡುವ ಇಂತಹ ಕುಕೃತ್ಯಗಳಿಂದ ಅಂತಹ ಮನೆ ಸರ್ವನಾಶವಾಗುತ್ತದೆ.
ಲೆಕ್ಕ ಪತ್ರಗಳಲ್ಲಿನ ತಪ್ಪುಗಳನ್ನು ಸರಿಪಡಿಸುವ ನನ್ನ ಪ್ರಿಯ ಬಂಧುಗಳೇ, ಯಾವುದೇ ದೇಶ ಇಂತಹ ಆರ್ಥಿಕ ಸಂಕಷ್ಟಗಳಿಗೆ ಕೆಲವೊಮ್ಮೆ ಸಿಲುಕುತ್ತದೆ. ಪ್ರವಾಹವಾಗಲಿ, ಭೂಕಂಪವಾಗಲಿ ಸಾರ್ವಜನಿಕರು, ಸರ್ಕಾರ ಒಟ್ಟಿಗೆ ಸಾರಿ ದೇಶವನ್ನು ಇಂತಹ ಸಂಕಷ್ಟ ಸಮಯದಿಂದ ಪಾರು ಮಾಡುತ್ತಾರೆ. ಆದರೆ, ಇಂತಹ ದೇಶದ ಕೆಲವು ಜನರಲ್ಲಿನ ಕಳ್ಳತನ ಮಾಡುವ ಪ್ರವೃತ್ತಿಯಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುವುದು ಕಠಿಣವಾಗುತ್ತದೆ. ಕನಸುಗಳು ನುಚ್ಚು ನೂರಾಗುತ್ತದೆ, ಅಭಿವೃದ್ಧಿ ಕುಂಠಿತವಾಗುತ್ತದೆ. ಕೆಲವೇ ಜನರು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅನೇಕ ಹೊಸ ಕಾನೂನುಗಳ ರಚನೆಯಾಗಿದೆ, ಹಳೆಯ ಅನೇಕ ಕಾನೂನುಗಳನ್ನು ಮತ್ತಷ್ಟು ಕಠಿಣ ಮಾಡಲಾಗಿದೆ. ಅನೇಕ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಳೆಯ ಒಪ್ಪಂದಗಳಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಲಾಗಿದೆ. ವಿದೇಶಗಳಲ್ಲಿ ಕಪ್ಪು ಹಣದ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳು ಮತ್ತದರ ಪರಿಣಾಮಗಳನ್ನು ಸ್ವಿಸ್ ಬ್ಯಾಂಕ್‍ನ ಹೊಸ ಅಂಕಿ ಅಂಶಗಳು ತಿಳಿಸುತ್ತವೆ.

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‍ನಲ್ಲಿ ಠೇವಣಿ ಇರಿಸುವ ಭಾರತೀಯರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸ್ವಿಸ್ ಬ್ಯಾಂಕ್ ತಿಳಿಸಿದೆ. 30 ವರ್ಷಗಳ ಹಿಂದೆ1987ರಲ್ಲಿ ತನ್ನ ಬ್ಯಾಂಕ್‍ನಲ್ಲಿ ಹಣ ಠೇವಣಿ ಇಡುವ ವಿದೇಶಿಯರು ಮತ್ತು ಎಷ್ಟು ಹಣ ಠೇವಣಿ ಇಟ್ಟಿದ್ದಾರೆ ಎಂಬುದರ ಬಗ್ಗೆ ಸ್ವಿಸ್ ಬ್ಯಾಂಕ್ ತಿಳಿಸಲು ಪ್ರಾರಂಭಿಸಿತು. ಇತ್ತೀಚೆಗೆ ದೊರಕಿದ ಕಳೆದ ವರ್ಷದ ದಾಖಲೆಗಳ ಪ್ರಕಾರ ಅಲ್ಲಿ ಠೇವಣಿ ಇಡುತ್ತಿರುವ ಭಾರತೀಯರ ಸಂಖ್ಯೆ ಶೇಕಡಾ 45ರಷ್ಟು ಕುಸಿತ ಕಂಡಿದೆ. ನಾನು ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ 2014ರ ಪ್ರಥಮ ದಿನದಿಂದ ಈ ಕುಸಿತ ಕಂಡುಬಂದಿದೆ. ತಮಗೆ ಆಶ್ಚರ್ಯವಾಗಬಹುದು 2013ರ ಸ್ವಿಸ್ ಬ್ಯಾಂಕ್ ದಾಖಲೆಗಳ ಪ್ರಕಾರ ಠೇವಣಿ ಇಡುವವರ ಸಂಖ್ಯೆ ಶೇಕಡಾ 42ರಷ್ಟು ವೃದ್ಧಿಯಾಗಿತ್ತು. ಸಹೋದರ ಸಹೋದರಿಯರೇ, ಎರಡು ವರ್ಷಗಳ ನಂತರ ಸ್ವಿಟ್ಜರ್‍ಲೆಂಡಿನ ಸರಿಯಾದ ಸಮಯಕ್ಕೆ ಡಾಟಾ ದೊರಕಲು ಪ್ರಾರಂಭವಾಗುತ್ತದೆ. ಆಗ ವಿದೇಶಗಳಲ್ಲಿ ಹಣ ಠೇವಣಿ ಇಡುವವರಿಗೆ ತೊಂದರೆಯಾಗುತ್ತದೆ. ಅವರ ಹಣ ಇಂತಹುದಕ್ಕೆ ಉಪಯೋಗವಾಗುವುದಿಲ್ಲ ಎಂಬುದನ್ನು ನಾನು ತಮಗೆ ತಿಳಿಯಬಯಸುತ್ತೇನೆ.

ಸಹೋದರ ಸಹೋದರಿಯರೇ, ಎರಡು ವರ್ಷಗಳ ನಂತರ ಸ್ವಿಟ್ಜರ್‍ಲೆಂಡಿನ ಸರಿಯಾದ ಸಮಯಕ್ಕೆ ಡಾಟಾ ದೊರಕಲು ಪ್ರಾರಂಭವಾಗುತ್ತದೆ. ಆಗ ವಿದೇಶಗಳಲ್ಲಿ ಹಣ ಠೇವಣಿ ಇಡುವವರಿಗೆ ತೊಂದರೆಯಾಗುತ್ತದೆ. ಅವರ ಹಣ ಇಂತಹುದಕ್ಕೆ ಉಪಯೋಗವಾಗುವುದಿಲ್ಲ ಎಂಬುದನ್ನು ನಾನು ತಮಗೆ ತಿಳಿಯಬಯಸುತ್ತೇನೆ. ಮಿತ್ರರೇ, ನಾನು ದೇಶದಲ್ಲಿ ಸ್ವಚ್ಚತಾ ಅಭಿಯಾನವನ್ನು ಪ್ರಾರಂಭಿಸಿದ್ದೇನೆ, ಹಾಗೆಯೇ ಅರ್ಥವ್ಯವಸ್ಥೆಯಲ್ಲಿ ಕೂಡಾ ಸ್ವಚ್ಚತಾ ಅಭಿಯಾನವನ್ನು ಪ್ರಾರಂಭಿಸುತ್ತಿದ್ದೇನೆ. ನಮ್ಮ ದೇಶದಲ್ಲಿ 8ನೇ ನವಂಬರ್ ಎಲ್ಲರಿಗೂ ಹೆಚ್ಚು ನೆನಪಿರುತ್ತದೆ. ದೊಡ್ಡ ನೋಟುಗಳ ಅಮಾನ್ಯೀಕರಣದ ನಿರ್ಧಾರ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧದ ದೊಡ್ಡ ಹೆಜ್ಜೆಯಾಗಿತ್ತು. ಸತ್ಯವೋ ಸುಳ್ಳೋ ನನಗೆ ಗೊತ್ತಿಲ್ಲ, ತಾವೇ ಹೇಳಬೇಕು, ನವಂಬರ್ 8ನೇ ತಾರೀಖಿನ ನಂತರ ತಮ್ಮ ಕೆಲಸ ಜಾಸ್ತಿಯಾಯಿತೆಂದು ನಾನು ಕೇಳಿದ್ದೇನೆ. ತಮ್ಮ ಇದುವರೆಗೆ ಮಾಡಲಾಗದಷ್ಟು ಕೆಲಸವನ್ನು ಈ ದಿನಗಳಲ್ಲಿ ಮಾಡಿದ್ದೀರಿ. ಕೆಲವಷ್ಟು ಜನ ಲೆಕ್ಕ ಪರಿಶೋಧಕರು ದೀಪಾವಳಿ ರಜೆ ಆಚರಿಸಿಕೊಳ್ಳಲು ಹೋಗಿದ್ದವರು, ಹೋಟಲ್ ಬುಕ್ ಮಾಡಿಯಾಗಿತ್ತು.

ಆದರೆ ಎಲ್ಲವನ್ನು ರದ್ದುಗೊಳಿಸಿ ವಾಪಾಸ್ ಆಗಿದ್ದಿರೆಂದು ನಾನು ಕೇಳಿದ್ದೇನೆ. ಕೆಲವೊಂದು ಲೆಕ್ಕ ಪರಿಶೋಧಕರ ಕಛೇರಿಗಳು ಹಗಲು ರಾತ್ರಿ ಕಾರ್ಯ ನಿರ್ವಹಿಸಿದವೆಂದೂ ಕೂಡಾ ಕೇಳಿದ್ದೇನೆ. ತಾವು ತಮ್ಮ ದೀಪಾವಳಿ ರಜೆ ರದ್ದುಗೊಳಿಸಿ ಏನು ಮಾಡಿದಿರಿ ಎಂದು ನನಗೆ ತಿಳಿದಿಲ್ಲ. ಸರಿ ಮಾಡಿದಿರೋ, ತಪ್ಪು ಮಾಡಿದಿರೋ ನನಗೆ ತಿಳಿಯದು. ದೇಶಕ್ಕಾಗಿ ಮಾಡಿದಿರೋ ಅಥವ ತಮ್ಮ ಗ್ರಾಹಕರಿಗಾಗಿಯೋ, ಆದರೆ ಕೆಲಸವನ್ನಂತೂ ಮಾಡಿದ್ದೀರಿ.

ಸ್ನೇಹಿತರೆ ಕಪ್ಪುಹಣದ ವಿರುದ್ಧದ ಈ ಸ್ವಚ್ಛತಾ ಅಭಿಯಾನದ ನಂತರ ನಾನು ಮೊದಲ ಬಾರಿ ಕೆಲವೊಂದು ವಿಷಯಗಳನ್ನು ತಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ. ಯಾಕೆಂದರೆ ನೀವು ಈ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬಲ್ಲಿರಿ. ಬ್ಯಾಂಕುಗಳಲ್ಲಿ ಠೇವಣಿಯಾದ ಹಣದ ಲೆಕ್ಕಾಚಾರ ಮಾಡುವುದಕ್ಕಾಗಿ ಒಂದು ದೊಡ್ಡ ಯೋಜನೆಯನ್ನು ಸರ್ಕಾರ ರೂಪಿಸಿತು. ಹಣ ಎಲ್ಲಿಂದ ಬಂತು, ಎಲ್ಲಿ ಜಮೆಯಾಯಿತು, ಎಲ್ಲಿ ಹೋಯಿತು, ಹೇಗೆ ಹೋಯಿತು, 9ನೇ ನವಂಬರ್‍ನ ನಂತರ ಏನೇನಾಯಿತು. ಈ ವಿಷಯವಾಗಿ ತನಿಖೆಗಾಗಿ ನಾವು ಇದುವರೆಗೂ ಯಾರನ್ನು ವಶಕ್ಕೆ ತೆಗೆದುಕೊಂಡಿಲ್ಲ. ಕೇವಲ ಅಂಕಿಅಂಶಗಳನ್ನಷ್ಟೆ ಕಲೆಹಾಕಿದ್ದೇವೆ. ನನ್ನ ಪ್ರಿಯ ಸ್ನೇಹಿತರೆ, ತಮ್ಮ ಮತ್ತು ನನ್ನ ದೇಶಭಕ್ತಿಯಲ್ಲಿ ಯಾವುದೇ ಅಂತರವಿಲ್ಲ. ಈ ವಿಷಯವನ್ನು ಕೇಳಿ ತಾವು ಆಶ್ಚರ್ಯಚಕಿತರಾಗುತ್ತೀರಿ,

3 ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಂಪನಿಗಳ ವಹಿವಾಟು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಈಗ ಆಗಿರುವ ತನಿಖೆಗಿಂತ ಹೆಚ್ಚು ತನಿಖೆಯಾಗುವುದು ಬಾಕಿ ಇದೆ. ಮೂರು ಲಕ್ಷದ ಸಂಖ್ಯೆ ಯಾವಾಗ ಹೆಚ್ಚುತ್ತದೆ ಹೇಳಲಾಗದು. ಇವುಗಳ ತನಿಖೆ ಮುಂದುವರೆದಾಗ ಮತ್ತಷ್ಟು ಗಂಭೀರ ವಿಷಯಗಳು ಬೆಳಕಿಗೆ ಬರಲು ಪ್ರಾರಂಭವಾಯಿತು. ಒಂದು ಅಂಕಿಅಂಶವನ್ನು ನಾನು ತಮ್ಮ ಮುಂದಿಡಲು ಬಯಸುತ್ತೇನೆ, ಇದರಿಂದ ಈ ಸರ್ಕಾರದ ಯೋಜನೆಗಳ ಬಗ್ಗೆ, ರಾಜಕೀಯ ನಾಯಕರ ಶಕ್ತಿಯ ಬಗ್ಗೆ ತಮಗೆ ಮನವರಿಕೆಯಾಗುತ್ತದೆ. ಒಂದು ಕಡೆ ಸಂಪೂರ್ಣ ಸರ್ಕಾರ, ಸಂಪೂರ್ಣ ಮಾಧ್ಯಮಗಳು, ವ್ಯಾಪಾರ ಜಗತ್ತು ಎಲ್ಲರ ಗಮನ 30ನೇ ದಿನಾಂಕದಂದು, ರಾತ್ರಿ 12 ಗಂಟೆಗೆ ಏನಾಗಬಹುದು ಎಂಬ ಕಡೆಗೆ ಕೇಂದ್ರಿತವಾಗಿತ್ತು. ಜುಲೈ ಮೊದಲ ದಿನಾಂಕದಂದು ಏನಾಗಬಹುದು ಎಂದು ಯೋಚಿಸುತ್ತಿದ್ದರು. 48 ಗಂಟೆಗಳ ಮೊದಲೇ ಒಂದು ಲಕ್ಷ ಕಂಪನಿಗ¼ನ್ನು ಕೇವಲ ಒಂದು ಸಹಿಯ ಮೂಲಕ ಮುಚ್ಚಲಾಯಿತು. ಕಂಪನಿಗಳ ರಜಿಸ್ಟ್ರಾರ್ ಅವರಿಂದ ಈ ಕಂಪನಿಗಳ ಹೆಸರನ್ನು ತೆಗೆಯಲಾಯಿತು. ಇದು ಸಾಮಾನ್ಯ ನಿರ್ಣಯವಲ್ಲ. ರಾಜಕೀಯ ಲಾಭ ನಷ್ಟದ ಬಗ್ಗೆ ಚಿಂತಿಸುವವರು ಇಂತಹ ನಿರ್ಣಯಗಳನ್ನು ಕೈಗೊಳ್ಳಲಾರರು. ರಾಷ್ಟ್ರಹಿತವನ್ನು ಬಯಸುವವರು ಮಾತ್ರ ಇಂತಹ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಕೇವಲ ಒಂದು ಸಹಿಯಿಂದ ಒಂದು ಲಕ್ಷ ಕಂಪನಿಗಳನ್ನು ಮುಚ್ಚುವ ಶಕ್ತಿ ಕೇವಲ ದೇಶ ಭಕ್ತಿಯ ಪ್ರೇರಣೆಯಿಂದ ದೊರಕುತ್ತದೆ. ಯಾರು ಬಡವರನ್ನು ದೋಚಿದ್ದಾರೋ ಅವರು ಅದನ್ನು ಬಡವರಿಗೆ ಹಿಂದಿರುಗಿಸಲೇ ಬೇಕು..

ಇದರ ಹೊರತಾಗಿ ಸರ್ಕಾರವು ಈಗಾಗಲೇ 37000ಕ್ಕೂ ಹೆಚ್ಚು ನಕಲಿ ಕಂಪನಿಗಳನ್ನು ಗುರುತಿಸಿದೆ. ಇವುಗಳು ಕಪ್ಪುಹಣ ಶೇಖರಣೆ, ಹವಾಲ ವ್ಯವಹಾರ ಮುಂತಾದ ಅವ್ಯವಹಾರಗಳನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಇನ್ನೂ ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಪ್ಪುಹಣದ ವಿರುದ್ಧದ ಕ್ರಮಗಳು ಹಾಗೂ ನಕಲಿ ಕಂಪನಿಗಳ ವಿರುದ್ಧ ಕಾರ್ಯಾಚರಣೆಯಿಂದಾಗಿ ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ನಷ್ಟವಾಗುತ್ತದೆಂಬುದನ್ನು ನಾನು ಬಲ್ಲೆ. ಆದರೆ ದೇಶಹಿತಕ್ಕಾಗಿ ಇಂತಹ ನಿರ್ಣಯ ಅತ್ಯಗತ್ಯ.
ಲೆಕ್ಕ ಪರಿಶೋಧಕ ಕಾರ್ಯದಲ್ಲಿ ನಿರತರಾಗಿರುವ ನನ್ನ ಸ್ನೇಹಿತರೆ, ನಾನು ತಮ್ಮ ಸಂಸ್ಥೆಯ ಸಂಸ್ಥಾಪನಾ ದಿನದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದೇನೆ. ಲೆಕ್ಕ ಪತ್ರಗಳನ್ನು ಸರಿಮಾಡುವ ಶಕ್ತಿ ನಿಮ್ಮ ಕೈಯಲ್ಲಿದೆ. ನೋಟು ನಿಷೇಧದ ನಂತರ ಇಂತಹ ನಕಲಿ ಕಂಪನಿಗಳಿಗೆ ಸಹಾಯ ಮಾಡಿದವರು ಯಾರು ಎಂಬುದು ನನಗೆ ತಿಳಿಯದು. ಇಂತಹ ಕಳ್ಳ, ಮೋಸಗಾರ ಕಂಪನಿಯವರು ಯಾರಾದರೂ ಅರ್ಥ ಚಿಕಿತ್ಸಕರ ಬಳಿ ಖಂಡಿತವಾಗಿಯೂ ಹೋಗಿರುತ್ತಾರೆ. ಅವರುಗಳು ನಿಮ್ಮ ಬಳಿ ಬಂದಿರಲಾರರು,

ಆದರೆ ಎಲ್ಲಿಯಾದರೂ ಖಂಡಿತವಾಗಿಯೂ ಹೋಗಿರುತ್ತಾರೆ. ಯಾರ ಬಳಿ ಹೋಗಿದ್ದಾರೆ ಎಂಬುದನ್ನು ತಿಳಿಯಬೇಕಿದೆ. ಯಾರು ಇಂತಹ ಕಪ್ಪುಧನಿಕರ ಕೈ ಹಿಡಿದಿದ್ದಾರೋ, ಯಾರು ಇಂತಹವರಿಗೆ ಸಹಾಯ ಮಾಡಿದ್ದಾರೋ, ಯಾರು ಇಂತಹ ಭ್ರಷ್ಟಾಚಾರಿಗಳಿಗೆ ದಾರಿ ತೋರಿಸಿದ್ದಾರೋ, ತಮ್ಮ ಮಧ್ಯೆ ಕುಳಿತಿರುವ ಅಂತಹವರನ್ನು ಗುರುತಿಸಬೇಕೋ ಬೇಡವೋ ನಿರ್ಧರಿಸಿ. ಅವರನ್ನು ಕಡೆಗಣಿಸಬೇಕೋ ಬೇಡವೋ. ನನಗೆ ತಿಳಿದಿರುವಂತೆ ನಮ್ಮ ದೇಶದಲಿ 72 ಸಾವಿರಕ್ಕೂ ಅಧಿಕ ಲೆಕ್ಕ ಪರಿಶೋಧಕರಿದ್ದಾರೆ. ತಮ್ಮ ಜತೆಗಿನ ಸಹಾಯಕರನ್ನು ಒಟ್ಟುಗೂಡಿಸಿದರೆ ಈ ಸಂಖ್ಯೆ ಹೆಚ್ಚು ಕಡಿಮೆ 2 ಲಕ್ಷದಷ್ಟಾಗುತ್ತದೆ. ಎಲ್ಲ ಲೆಕ್ಕ ಪರಿಶೋಧಕರು, ಸಹಾಯಕರು, ಕೆಲಸಗಾರರು ಎಲ್ಲರನ್ನು ಲೆಕ್ಕ ಹಾಕಿದರೆ ಈ ಸಂಖ್ಯೆ 8 ಲಕ್ಷದಷ್ಟಾಗುತ್ತದೆ. ತಮ್ಮ ವೃತ್ತಿಪರತೆ ಕುರಿತಂತೆ ನಾನು ತಮ್ಮಲ್ಲಿ ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳಬಯಸುತ್ತೇನೆ. ಏಕೆಂದರೆ ತಾವುಗಳು ಅಂಕಿಸಂಖ್ಯೆಗಿಂತ ಮಾತುಗಳನ್ನು ಹೆಚ್ಚು ಅರ್ಥಮಾಡಿಕೊಳ್ಳುತ್ತೀರಿ ಹಾಗೂ ಅರ್ಥ ಮಾಡಿಸುತ್ತೀರಿ.
ನಮ್ಮ ದೇಶದಲ್ಲಿ ಸುಮಾರು ಎರಡು ಕೋಟಿಗೂ ಅಧಿಕ ಇಂಜಿನಿಯರುಗಳು ಮತ್ತು ನಿರ್ವಹಣಾ ಪದವೀಧರರಿದ್ದಾರೆ.

8 ಲಕ್ಷಕ್ಕೂ ಹೆಚ್ಚು ವೈದ್ಯರಿದ್ದಾರೆ. ಇವರುಗಳನ್ನು ಹೆಚ್ಚು ಗೌರವಯುತವಾಗಿ ಕಾಣುತ್ತೇವೆ. ನಮ್ಮ ದೇಶದಲ್ಲಿ ಇಂತಹವರ ಸಂಖ್ಯೆ ಅನೇಕ ಕೋಟಿಗಳಿವೆ. ದೇಶದ ಅನೇಕ ನಗರಗಳಲ್ಲಿ ನಿರ್ಮಾಣಗೊಂಡಿರುವ ದೊಡ್ಡ ದೊಡ್ಡ ಬಂಗಲೆಗಳ ಮಾಲೀಕರನ್ನು ಜೋಡಿಸಿದರೆ ಇವರುಗಳ ಸಂಖ್ಯೆ ಕೂಡಾ ಅನೇಕ ಕೋಟಿಗಳಾಗಲಿದೆ. ಕೇವಲ ಇಷ್ಟೆ ಅಲ್ಲ, ಅಂಕಿ ಅಂಶಗಳ ಪ್ರಕಾರ ಭಾರತದಿಂದ 2 ಕೋಟಿ 18 ಲಕ್ಷ ಜನ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ನಮ್ಮ ದೇಶದಲ್ಲಿ ಕೇವಲ 32 ಲಕ್ಷದಷ್ಟು ಜನ ಮಾತ್ರ ತಮ್ಮ ಆದಾಯ 10 ಲಕ್ಷಕ್ಕಿಂತ ಹೆಚ್ಚು ಎಂದು ಆದಾಯ ತೆರಿಗೆ ಘೋಷಣೆ ಮಾಡಿಕೊಂಡಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ. ತಮ್ಮಲ್ಲಿ ಯಾರಾದರೂ ಇಂತಹವರ ಬಗ್ಗೆ ವಿಶ್ವಾಸ ಹೊಂದಿದ್ದೀರಾ ? ಲೆಕ್ಕ ಪತ್ರಗಳನ್ನು ಸರಿಮಾಡುವ ತಮ್ಮಲ್ಲಿ ನಾನು ಕೇಳುತ್ತಿದ್ದೇನೆ. ನಮ್ಮ ದೇಶದಲ್ಲಿ ಕೇವಲ 32 ಲಕ್ಷದಷ್ಟು ಮಾತ್ರ ಜನ 10 ಲಕ್ಷಕ್ಕಿಂತಾ ಹೆಚ್ಚು ಆದಾಯವಂತರಾ??
ನನ್ನ ಪ್ರೀತಿಯ ಸ್ನೇಹಿತರೇ, ದೇಶದ ಕಹಿಸತ್ಯ ಇದೆ. ದೇಶದ ಕೇವಲ 32 ಲಕ್ಷದಷ್ಟು ಜನ ಮಾತ್ರ ತಮ್ಮ ಆದಾಯ 10 ಲಕ್ಷಕ್ಕಿಂತ ಹೆಚ್ಚು ಎಂದು ಘೋಷಿಸಿಕೊಂಡಿದ್ದಾರೆ. ಇವರುಗಳಲ್ಲಿ ಹೆಚ್ಚು ಜನ ನಿಶ್ಚಿತ ಮಾಸಿಕ ವೇತನದಾರರು. ಅವರಿಗೆ ಸರಕಾರದಿಂದ ವೇತನ ಪಾವತಿಯಾಗುತ್ತದೆ. ಇದರ ಹೊರತಾಗಿ ದೇಶದ ಸ್ಥಿತಿ ಏನು? ಆದುದರಿಂದ ಸಹೋದರ ಸಹೋದರಿಯರೆ ನಾನು ಅಂಕಿ ಅಂಶಗಳ ಕಡೆ ಹೋಗಲು ಬಯಸುವುದಿಲ್ಲ. ದೇಶದಲ್ಲಿ ಪ್ರತಿ ವರ್ಷ ಅನೇಕ ಕೋಟಿ ವಾಹನಗಳ ಖರೀದಿಯಾಗುತ್ತಿದೆ. ಆದರೂ ದೇಶದ ಖಜಾನೆಗೆ ತಮ್ಮ ಜವಾಬ್ಧಾರಿಯನ್ನು ತುಂಬುತ್ತಿಲ್ಲ ಇದು ಅತಿ ದೊಡ್ದ ಚಿಂತೆಯ ವಿಷಯವಾಗಿದೆ.

ಈಗ ನಾನು ಅಂಕಿ ಅಂಶಗಳನ್ನು ಹೊರತುಪಡಿಸಿ ನನ್ನ ಮಾತುಗಳನ್ನು ಹೇಳಲು ಬಯಸುತ್ತೇನೆ. ನಮ್ಮ ಲೆಕ್ಕ ಪರಿಶೋಧಕ ಸಹೋದರರೇ, ಯಾವುದೇ ವ್ಯಕ್ತಿ ಅಥವಾ ಗ್ರಾಹಕ ತನ್ನ ಸುತ್ತ ಮುತ್ತಲ ವಾತಾವರಣ ಸಕಾರಾತ್ಮಕವಾಗಿದ್ದಾಗ ಮಾತ್ರ ತೆರಿಗೆಯನ್ನು ಕಟ್ಟುತ್ತಾರೆ. ಅವರಿಗೆ ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವಂತೆ ಪ್ರೇರೇಪಿಸಿ. ತಮಗೆ ಸಲಹೆ ನೀಡುವ ವ್ಯಕ್ತಿ ಸತ್ಯವನ್ನು ಮುಚ್ಚಿಡುವಂತೆ ಪ್ರೇರೇಪಿಸಿದರೆ , ಅವರು ತಪ್ಪು ಹಾದಿ ತುಳಿಯಲು ಎಂದೂ ಹೆದರುವುದಿಲ್ಲ. ಆದುದರಿಂದ ಇಂತಹ ತಪ್ಪು ಸಲಹೆ ನೀಡುವವರನ್ನು ಗುರುತಿಸುವುದು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಇದಕ್ಕೆ ತಾವುಗಳೂ ಕೂಡ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಲೆಕ್ಕ ಪರಿಶೋಧನೆ ಎಂಬುದು ಒಂದು ಮಹತ್ವಪೂರ್ಣವ್ಯವಸ್ಥೆಯಾಗಿದ್ದು, ಮಾನವ ಸಂಪನ್ಮೂಲ ಅಭಿವೃದ್ದಿಯ ಕೆಲಸವನ್ನೂ ತಾವೇ ಮಾಡುತ್ತೀರಿ ಹಾಗು ಪಠ್ಯಕ್ರಮವನ್ನು ಕೂಡ ತಾವೇ ಸಿದ್ದಪಡಿಸುತ್ತೀರಿ. ಪರೀಕ್ಷೆಯನ್ನೂ ಕೂಡಾ ತಾವೇ ನಡೆಸುತ್ತೀರಿ, ನಿಯಮ ಮತ್ತು ನಿಬಂಧನೆಗಳನ್ನು ಕೂಡಾ ತಾವೇ ಸಿದ್ಧಪಡಿಸುತ್ತೀರಿ ಹಾಗೂ ತಪ್ಪು ಮಾಡಿದವರಿಗೆ ಶಿಕ್ಷೆಯನ್ನೂ ಕೂಡ ತಮ್ಮದೇ ಸಂಸ್ಥೆ ನೀಡುತ್ತದೆ. ದೇಶದ ಪ್ರಜಾಪ್ರಭುತ್ವ ಮಂದಿರದ 125 ಕೋಟಿ ಜನಸಂಖ್ಯೆಯ ಸಂಸತ್ತು ತಮಗೆ ಇಷ್ಟು ಅಧಿಕಾರವನ್ನು ನೀಡಿದ್ದಾಗ್ಯೂ ಕಳೆದ 11 ವರ್ಷಗಳಲ್ಲಿ ಕೇವಲ 25 ಲೆಕ್ಕ ಪರಿಶೋಧಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗಿದೆ. ಇದು ಹೇಗೆ? ಕೇವಲ 25 ಜನರಷ್ಟೆ ತಪ್ಪು ಮಾಡಿದ್ದಾರೆಯೆ? ತಮ್ಮಲ್ಲಿ 1400 ಕ್ಕೂ ಹೆಚ್ಚು ಕೇಸ್‍ಗಳು ಕಳೆದ ಅನೇಕ ವರ್ಷಗಳಿಂದ ತೂಗುಯ್ಯಾಲೆಯಲ್ಲಿದೆ ಎಂದು ಕೇಳಿದ್ದೇನೆ. ಒಂದೊಂದು ಕೇಸ್‍ನ ತೀರ್ಪು ಹೊರಬೀಳಲು ವರ್ಷಗಳು ತಗಲುತ್ತಿವೆ. ಇಷ್ಟು ಉನ್ನತ ಮಟ್ಟದ ವೃತ್ತಿಪರರಿರುವ ತಾವೇ ನಿರ್ಧರಿಸಿ ಇದು ಚಿಂತಿಸುವ ವಿಷಯವೋ ಅಲ್ಲವೋ? ಸಹೋದರ ಸಹೋದರಿಯರೆ , ದೇಶದ ಸ್ವಾತಂತ್ರ್ಯಕ್ಕಾಗಿ ಆಂದೋಲನ ನಡೆಯುತ್ತಿದ್ದ ಕಾಲದಲ್ಲಿ ಅನೇಕ ಯುವಕರು ಸ್ವಾತಂತ್ರ್ಯ ಕ್ಕಾಗಿ ಆಗ್ರಹಿಸಿ ನೇಣಿಗೆ ತಲೆಯೊಡ್ಡಿದ್ದರು. ದೇಶದ ಅನೇಕ ಮಹಾಪುರುಷರು ಸ್ವಾತಂತ್ರ್ಯ ಪಡೆದುಕೊಳ್ಳಲು ತಮ್ಮ ಯೌವನವನ್ನು ಜೈಲಿನಲ್ಲಿ ಕಳೆದಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಆ ಸಮಯದಲ್ಲಿ ಅನೇಕ ವೃತ್ತಿಪರರು ಮುಂದೆ ಬಂದರು. ಅವರುಗಳಲ್ಲಿ ಅನೇಕರು ವಕೀಲರು. ವಕೀಲೀ ವೃತ್ತಿ ಮಾಡುತ್ತಿದ್ದರು, ಬ್ಯಾರಿಷ್ಟರ್ ಆಗಿದ್ದರು, ಅವರುಗಳು ಸ್ವಾತಂತ್ರ್ಯ ಸಮರದ ನೇತೃತ್ವ ವಹಿಸಿದ್ದರು. ಅವರುಗಳಿಗೆ ಕಾನೂನಿನ ಅರಿವಿತ್ತು. ಕಾನೂನಿನಡಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಕಾನೂನಿನ ವಿರುದ್ಧವಾಗಿ ಕಾರ್ಯ ನಿರ್ವಹಿಸುವುದರ ಪರಿಣಾಮವನ್ನು ಅವರು ಅರಿತಿದ್ದರು. ಇದೆಲ್ಲದರ ಹೊರತಾಗಿಯೂ ಅಂದಿನ ವಕೀಲರು ತಮ್ಮ ವಕೀಲಿ ವೃತ್ತಿ ಉತ್ತಮವಾಗಿ ನಡೆಯುತ್ತಿದ್ದರೂ ಅದೆಲ್ಲವನ್ನೂ ತೊರೆದು ದೇಶಕ್ಕಾಗಿ ಮುಂದೆ ಬಂದರು. ಕೇವಲ ಮಹಾತ್ಮಾ ಗಾಂಧಿ, ಸರದಾರ್ ಪಟೇಲ್, ಡಾ. ಅಂಬೇಡ್ಕರ್, ಜವಾಹರಲ್‍ಲಾಲ್ ನೆಹರುಅವರು ಮಾತ್ರವಲ್ಲದೆಡಾ. ರಾಜೇಂದ್ರ ಪ್ರಸಾದ್, ಪಂಡಿತ್ ಮದನ್ ಮೋಹನ್ ಮಾಲವೀಯ, ಬಾಲಗಂಗಾಧರ್ ತಿಲಕ್, ಮೋತಿಲಾಲ್ ನೆಹರೂ, ಸಿ.ರಾಜಗೋಪಾಲಾಚಾರಿ, ಮಹೇಶಚಂದ್ರ ಚೌಧರಿ, ದೇಶಬಂಧು ಚಿತ್ತರಂಜನ್ ದಾಸ್, ಸೈಫುದ್ದೀನ್ ಕಿಚ್ಲೂ, ಭೂಲಾಭಾಯಿ ದೇಸಾಯಿ, ಲಾಲಾಲಜಪತ್ ರಾಯ್, ತೇಜ್ ಬಹಾದ್ದೂರ್ ಸಪ್ರು, ಅಸಫ್ ಆಲಿ, ಗೋವಿಂದ ವಲ್ಲಭ್ ಪಂತ್, ಕೈಲಾಶ್‍ನಾಥ್ ಕಾಟ್ಜೂ, ಇನ್ನೂ ಅನೇಕರು ವಕೀಲಿ ವೃತ್ತಿಯಲ್ಲಿದ್ದವರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದರು. ದೇಶಭಕ್ತಿಯಿಂದ ಪ್ರೇರಿತರಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಅರ್ಪಿಸಿದರು . ಇವರುಗಳಲ್ಲಿ ಅನೇಕ ನಾಯಕರುಗಳು ದೇಶದ ಸಂವಿಧಾನ ನಿರ್ಮಾಣದಲ್ಲಿ ಕೂಡಾ ಒಂದು ದೊಡ್ಡ ಪಾತ್ರವನ್ನು ವಹಿಸಿದ್ದರು. ಸಹೋದರ ಸಹೋದರಿಯರೆ, ದೇಶದ ನಿರ್ಮಾಣದಲ್ಲಿ ಇಂತಹ ಮಹಾಪುರುಷರನ್ನು ಮರೆಯುವುದು ಸಾಧ್ಯವಿಲ್ಲ.

ಸ್ನೇಹಿತರೆ, ಇಂದು ನಮ್ಮ ದೇಶ ಒಂದು ಮಹತ್ವಪೂರ್ಣ ಘಟ್ಟದಲ್ಲಿದೆ. 1947ರ ಸ್ವಾತಂತ್ರ್ಯಾನಂತರ ದೇಶದ ರಾಜಕೀಯ ಏಕೀಕರಣದ ಬಳಿಕ ನಮ್ಮ ದೇಶದಲ್ಲಿ ಇಂದು ಆರ್ಥಿಕ ಏಕೀಕರಣದ ಹಾದಿಯಲ್ಲಿ ಒಂದು ಮಹತ್ವಪೂರ್ಣ ಯಾತ್ರೆ ಪ್ರಾರಂಭವಾಗಿದೆ. 2017ರ ಈ ವರ್ಷ ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆಯ ಕನಸು ನನಸಾಗಿದೆ. ಇಂತಹ ಐತಿಹಾಸಿಕ ಸಂದರ್ಭಕ್ಕೆ ಲೆಕ್ಕ ಪರಿಶೋಧಕರ ಪಾತ್ರ ಮಹತ್ವಪೂರ್ಣ. ನೀವು ನನ್ನ ಭಾವನೆಯನ್ನು ಅರ್ಥಮಾಡಿಕೊಳ್ಳಿ. ಸ್ನೇಹಿತರೆ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಕೀಲ ವೃಂದ ತಮ್ಮ ಜೀವದ ಆಸೆ ತೊರೆದು ಸ್ವಾತಂತ್ರ್ಯದ ಅಧಿಕಾರಕ್ಕಾಗಿ ಹೋರಾಟ ನಡೆಸಿದ್ದರು. ಆದರೆ ಇಂದು ನಾನು ಅಂದಿನ ರೀತಿ ತಮ್ಮ ಜೀವವನ್ನು ಮುಡುಪಾಗಿಟ್ಟು ಹೋರಾಡುವಂತೆ ಹೇಳುತ್ತಿಲ್ಲ. ತಮಗೆ ಜೈಲಿನ ಸಲಾಕೆಯ ಹಿಂದೆ ಹೋಗುವ ಅವಶ್ಯಕತೆ ಇಲ್ಲ. ಇದು ನಿಮ್ಮ ದೇಶ, ಈ ದೇಶದ ಭವಿಷ್ಯ ಮುಂಬರುವ ತಮ್ಮ ಸಂತತಿಗಾಗಿಯೂ ಕೂಡಾ ಮುಡುಪಾಗಿರುತ್ತದೆ. ಇಂದು ಆರ್ಥಿಕ ಅಭಿವೃದ್ದಿಯ ನೇತೃತ್ವವನ್ನು ನನ್ನ ಲೆಕ್ಕ ಪರಿಶೋಧಕ ಸೈನ್ಯ ವಹಿಸಿಕೊಳ್ಳಬೇಕಾಗಿದೆ. ಆರ್ಥಿಕ ಕ್ಷೇತ್ರದ ಪ್ರಗತಿಯು ಉತ್ತುಂಗಕ್ಕೇರುವ ಹಾದಿಯನ್ನು ತಮಗಿಂತ ಹೆಚ್ಚಾಗಿ ಬೇರಾರಿಂದಲೂ ಬಲಪಡಿಸಲು ಸಾಧ್ಯವಿಲ್ಲ. ಕಪ್ಪುಹಣವನ್ನು ಮಟ್ಟ ಹಾಕಲು, ಭ್ರಷ್ಟಾಚಾರವನ್ನು ಕೊನೆಗಾಣಿಸಲು ತಮ್ಮ ಗ್ರಾಹಕರಿಗೆ ನಾನು ಮತ್ತೊಮ್ಮೆ ಹೇಳಬಯಸುತ್ತೇನೆ, ಗ್ರಾಹಕರನ್ನು ಪ್ರಾಮಾಣಿಕತೆಯ ಹಾದಿಯಲ್ಲಿ ಕೊಂಡೊಯ್ಯಲು ತಾವು ಮುಂದಾಳತ್ವ ವಹಿಸಿಕೊಳ್ಳಬೇಕಿದೆ.

ಸ್ನೇಹಿತರೆ, ಲೆಕ್ಕ ಪರಿಶೋಧಕರು ದೇಶದ ಆರ್ಥಿಕ ವ್ಯವಸ್ಥೆಯ ಪ್ರಾಮಾಣಿಕ ರಾಯಭಾರಿಗಳಾಗಿದ್ದಾರೆ. ನೀವುಗಳು ಸರ್ಕಾರ ಮತ್ತು ತೆರಿಗೆ ಪಾವತಿಸುವ ಸಾರ್ವಜನಿಕರ ಮತ್ತು ಕಂಪನಿಗಳ ನಡುವಿನ ಸಂಪರ್ಕ ಸಾಧನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಸಹಿಗಿರುವ ಶಕ್ತಿ ದೇಶದ ಪ್ರಧಾನ ಮಂತ್ರಿಗಳ ಸಹಿಗೂ ಕೂಡಾ ಇರುವುದಿಲ್ಲ. ಸತ್ಯದ ಭರವಸೆಗೆ ತಮ್ಮ ಸಹಿ ಸಾಕ್ಷಿಯಾಗಿದೆ. ಕಂಪನಿ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ತಾವು ಯಾವ ಲೆಕ್ಕ ಪತ್ರಕ್ಕೆ ಸಹಿ ಹಾಕಿರುತ್ತೀರೋ ಅದು ವಿಶ್ವಾಸಾರ್ಹವಾಗಿದ್ದು, ಸರ್ಕಾರ ನಂಬುತ್ತದೆ ಹಾಗೂ ದೇಶದ ಜನತೆ ಕೂಡಾ ಅದನ್ನು ನಂಬುತ್ತಾರೆ. ಯಾವ ಕಂಪನಿಯ ಬ್ಯಾಲೆನ್ಸ್ ಶೀಟ್‍ನಲ್ಲಿ ತಮ್ಮ ಸಹಿ ಇರುತ್ತದೋ ಆ ಕಂಪನಿ ಯ ವಹಿವಾಟು ಆ ಬ್ಯಾಲೆನ್ಸ್ ಶೀಟ್ ಮೇಲೆ ಅವಲಂಬಿಸಿರುತ್ತದೆ. ಸ್ನೇಹಿತರೆ, ಆ ಸಹಿಯ ನಂತರ ಒಂದು ಹೊಸ ಜೀವನ ಪ್ರಾರಂಭವಾಗುತ್ತದೆ. ಆ ಹೊಸ ಜೀವನದ ದರ್ಶನ ಮಾಡಿಸಲು ನಾನಿಲ್ಲಿ ಬಂದಿದ್ದೇನೆ. ತಾವು ಆ ಕಂಪನಿಯ ಲೆಕ್ಕ ಪತ್ರದ ಮೇಲೆ ಸಹಿ ಮಾಡಿದ್ದೀರಿ, ಬ್ಯಾಲೆನ್ಸ್ ಶೀಟ್ ಮೇಲೆ ಕೂಡಾ ಸಹಿ ಮಾಡಿದ್ದೀರಿ, ಸರಕಾರಿ ಅಧಿಕಾರಿಗಳು ಅದನ್ನು ಅನುಮೋದಿಸುತ್ತಾರೆ. ಕಂಪನಿ ಏಳಿಗೆಯತ್ತ ಮುಂದುವರಿಯುತ್ತದೆ, ತಾವು ಕೂಡಾ ಏಳಿಗೆ ಹೊಂದುತ್ತೀರಿ. ಮಾತು ಇಲ್ಲಿಗೆ ಮುಗಿಯುವುದಿಲ್ಲ ಸ್ನೇಹಿತರೆ. ತಾವು ಆ ಕಂಪನಿಯ ಲೆಕ್ಕ ಪತ್ರದಲ್ಲಿ ಸಹಿ ಮಾಡುತ್ತೀರಿ ಹಾಗೂ ಆ ಕಂಪನಿಯ ವಿವರ ಸಾರ್ವಜನಿಕರ ಮುಂದೆ ಬರುತ್ತದೆ. ಆಗ ಒಬ್ಬರು ಹಿರಿಯರು ಮ್ಯೂಚ್ಯುಯಲ್ ಫಂಡ್‍ನಲ್ಲಿ ಹಣ ಹೂಡುತ್ತಾರೆ. ಒಬ್ಬಳು ಬಡ ವಿಧವೆ ತನ್ನ ತಿಂಗಳ ಉಳಿತಾಯವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತಾಳೆ. ಎಂದು ಯಾವುದೇ ಕಂಪನಿ ಸರಿಯಾದ ವರದಿ ನೀಡುವುದಿಲ್ಲವೋ, ಸತ್ಯವನ್ನು ಮರೆಮಾಚಲಾಗುತ್ತದೆಯೋ, ನಂತರದಲ್ಲಿ ರಹಸ್ಯ ತೆರೆಯುತ್ತದೆ, ವಾಸ್ತವದಲ್ಲಿ ಕಂಪನಿ ಮುಳುಗುವುದಿಲ್ಲ ಮಿತ್ರರೇ, ಬಡ ವಿಧವೆಯ ಜೀವನ ಮುಳುಗುತ್ತದೆ, ಆ ಹಿರಿಯರ ಜೀವನ ಹಾಳಾಗುತ್ತದೆ. ಆತ ತನ್ನ ಸಂಪೂರ್ಣ ಜೀವನದ ಸಂಪಾದನೆಯನ್ನು ಕೇವಲ ನಿಮ್ಮ ಒಂದು ಸಹಿಯನ್ನು ನಂಬಿ ಬಂಡವಾಳ ಹೂಡಿರುತ್ತಾನೆ. ತಮ್ಮ ಸಹಿಯ ಮೇಲೆ ದೇಶದ 125 ಕೋಟಿ ಜನತೆ ಭರವಸೆ ಇಟ್ಟಿದ್ದಾರೆ. ಆ ಭರವಸೆಯನ್ನು ದಯಮಾಡಿ ಹುಸಿಮಾಡದಿರಿ ಎಂದು ನಾನು ತಮ್ಮಲ್ಲಿ ಮನವಿ ಮಾಡುತ್ತೇನೆ. ತಾವು ತಮ್ಮ ಮನಸ್ಸಿನಲ್ಲಿ ಈ ಭರವಸೆಯನ್ನು ಹುಸಿ ಮಾಡಿದ್ದೀರೆಂದು ಅನಿಸಿದ್ದರೆ, ಮತ್ತೊಮ್ಮೆ ಈ ಭರವಸೆಯನ್ನು ಮೂಡಿಸುವ ಅವಕಾಶ ಲಭಿಸಿದೆ. 2017 ರ ಜುಲೈ ತಿಂಗಳ ಮೊದಲ ದಿನದಂದು ತಮ್ಮ ಸಂಸ್ಥಾಪನಾ ದಿನ ತಮಗೊಂದು ಹೊಸ ಅವಕಾಶವನ್ನು ಹೊತ್ತು ತಂದಿದೆ. ಪ್ರಾಮಾಣಿಕತೆಯೆ ಈ ಉತ್ಸವದಲ್ಲಿ ಭಾಗವಹಿಸುವಂತೆ ನಾನು ತಮಗೆ ಆಹ್ವಾನಿಸುತ್ತೇನೆ. ತಮ್ಮ ಕಾರ್ಯದ ಮಹತ್ವವನ್ನು ಅರಿಯಿರಿ. ಅದೇ ಆಧಾರದ ಮೇಲೆ ತಮ್ಮ ಹಾದಿಯನ್ನು ನಿರ್ಧರಿಸಿ ನೋಡಿ. ಸಮಾಜ ಹೇಗೆ ತಮ್ಮನ್ನು ಗೌರವದಿಂದ ಕಾಣುತ್ತದೆ ಎಂಬುದರ ಅರಿವು ತಮಗಾಗುತ್ತದೆ.

ಸ್ನೇಹಿತರೆ, ತೆರಿಗೆ “ರಿಟರ್ನ್” ಶಬ್ಧಕ್ಕೆ ಬೇರೆ ಬೇರೆ ವ್ಯಾಖ್ಯಾನಗಳಿವೆ. ಆದರೆ ದೇಶಕ್ಕೆ ಯಾವ ತೆರಿಗೆ ಲಭಿಸುತ್ತದೆಯೋ ಅದು ದೇಶದ ಅಭಿವೃದ್ದಿಗೆ ನೆರವಾಗುತ್ತದೆಯೋ ಇಲ್ಲವೋ? ಇದು ತೆರಿಗೆ ರಿಟರ್ನ್ ಎಂಬುದು ನನ್ನ ಅನಿಸಿಕೆ. ಇದು ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಇದರಿಂದ ಜೀವನ ಪೂರ್ತಿ ಕಟ್ಟಿಗೆಯಲ್ಲಿ ಆಡುಗೆ ಮಾಡುತ್ತಾ ಜೀವನ ಸವೆಸಿರುವ ಒಬ್ಬ ಮಹಿಳೆ ಅನಿಲ ಸಂಪರ್ಕ ಪಡೆದುಕೊಳ್ಳಲು ನೆರವಾಗುತ್ತದೆ. ಈ ತೆರಿಗೆ ಹಣದಲ್ಲಿ ಮಕ್ಕಳು ಯಾವ ಹಿರಿಯರ ವೆಚ್ಚಕ್ಕೆ ಹಣ ನೀಡಲು ನಿರಾಕರಿಸುತ್ತಾರೋ ಅಂತಹ ಒಬ್ಬ ಹಿರಿಯರಿಗೆ ಮಾಸಾಶನ ಲಭಿಸುತ್ತದೆ. ಇದೇ ಹಣ ದಿನಪೂರ್ತಿ ದುಡಿಯುವ ಒಬ್ಬ ಯುವಕ ಸ್ವಉದ್ಯೋಗ ಪ್ರಾರಂಭಿಸಲು ನೆರವಾಗುತ್ತದೆ. ಇದರಿಂದ ಅವನು ತನ್ನ ವಿದ್ಯಾಭ್ಯಾಸವನ್ನು ಪೂರ್ಣ ಮಾಡಬಹುದಾಗಿದೆ. ಇದೇ ಹಣದಲ್ಲಿ ಒಬ್ಬ ಚಿಕಿತ್ಸೆಗಾಗಿ ಹಣವಿಲ್ಲದ ಅನಾರೋಗ್ಯವಿದ್ದಾಗ್ಯೂ ವಿಶ್ರಾಂತಿ ಪಡೆಯಲಾರದೆ ದಿನರಾತ್ರಿ ದುಡಿಯುವ ಬಡ ರೋಗಿಗೆ ಕಡಿಮೆ ದರದಲ್ಲಿ ಔಷಧ ದೊರೆಯುತ್ತದೆ.

ತೆರಿಗೆಯಿಂದ ಬಂದ ಹಣ ದೇಶದ ಗಡಿ ಭಾಗದಲ್ಲಿ ತನ್ನ ಪ್ರಾಣವನ್ನು ಪಣವಾಗಿಟ್ಟು ನಮ್ಮ ರಕ್ಷಣೆ ಮಾಡುವ ವೀರ ಸೈನಿಕರ ಕಲ್ಯಾಣ ಕಾರ್ಯಗಳಿಗೆ ವಿನಿಯೋಗವಾಗುತ್ತದೆ. ಈ ಹಣ ಸ್ವಾತಂತ್ರ್ಯಬಂದು 70 ವರ್ಷಗಳು ಕಳೆದರೂ ವಿದ್ಯುತ್ ಸಂಪರ್ಕವಿಲ್ಲದೆ ಇಂದೂ ಕತ್ತಲಲ್ಲಿ ಕಾಲ ಕಳೆಯುತ್ತಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಉಪಯೋಗವಾಗುತ್ತದೆ. ದೇಶದ ಬಡವರಿಗೆ ಅವರ ಅಧಿಕಾರವನ್ನು ಕಲ್ಪಿಸುವಲ್ಲಿ ಉಪಯೋಗವಾಗುವುದಕ್ಕಿಂತ ಹೆಚ್ಚೇನು ಮಾಡಲು ಸಾಧ್ಯ. ತಮ್ಮ ಒಂದು ಸಹಿ ದೇಶದ ಬಡವರಿಗೆ ಎಷ್ಟು ಉಪಯೋಗವಾಗುತ್ತದೆ. ಇದನ್ನು ತಾವುಗಳೂ ಕೂಡಾ ಎಂದೂ ಊಹಿಸಿರಲಾರಿರಿ. ದೇಶದ ಸಾಮಾನ್ಯ ನಾಗರೀಕನ ಕನಸು ನನಸು ಮಾಡುವಲ್ಲಿ ತಮ್ಮದು ದೊಡ್ಡ ಜವಾಬ್ಧಾರಿಯಾಗಿದೆ. ಇದರಲ್ಲಿ ತಾವು ಒಂದು ಮಹತ್ವಪೂರ್ಣ ಪಾತ್ರ ವಹಿಸಬಲ್ಲಿರಿ. ಜುಲೈ 2017 ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ಜೀವನ ಯಾತ್ರೆಯಲ್ಲಿ ಒಂದು ತಿರುವಾಗಲಿದೆ ಎಂಬ ವಿಶ್ವಾಸ ನನಗಿದೆ. ಇದು ನನ್ನ ಆತ್ಮದ ಧ್ವನಿಯಾಗಿದೆ.

ನನ್ನ ಪ್ರಿಯ ಸ್ನೇಹಿತರೆ, ಒಂದು ಬಾರಿ ನಿರ್ಣಯಿಸಿದರೆ, ಯಾರೂ ಕೂಡಾ ತೆರಿಗೆ ತಪ್ಪಿಸುವ ದುಸ್ಸಾಹಸಕ್ಕೆ ಕೈ ಹಾಕಲಾರರು ಎಂಬ ವಿಶ್ವಾಸ ನನಗಿದೆ. ತನ್ನನ್ನು ಯಾರಾದರೂ ರಕ್ಷಿಸುತ್ತಾರೆ ಎಂಬ ನಂಬಿಕೆ ಬಂದೊಡನೆ ಮನುಷ್ಯ ಅಪರಾಧ ಕಾರ್ಯದಲ್ಲಿ ತೊಡಗುತ್ತಾನೆ. ಸ್ನೇಹಿತರೆ, ಜಿಎಸ್‍ಟಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಹಕರಿಸುವ ಮಾಧ್ಯಮವಾಗಿ ತಮ್ಮ ಸಮ್ಮುಖದಲ್ಲಿ ಬಂದಿದೆ. ಜನರ ಬಳಿ ಹೋಗಿ, ಅವರೊಡನೆ ಮಾತುಕತೆ ನಡೆಸಿ. ಇದರಿಂದ ವ್ಯಾಪಾರಿಗಳಿಗೆ ಸಹಾಯವಾಗುತ್ತದೆ. ನಾನು ಇಲ್ಲಿಗೆ ಆಗಮಿಸುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಜಿಎಸ್‍ಟಿ ಬಗ್ಗೆ ತಿಳಿಹೇಳುವ ಬಗ್ಗೆ ಸಹಾಯ ಮಾಡುವುದಾಗಿ ನಿಲೇಶ್ ನನಗೆ ತಿಳಿಸಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ. ತಾವು ಜನಸಾಮಾನ್ಯರ ಬಳಿ ತೆರಳಿ ಅವರನ್ನು ಜಾಗರೂಕರನ್ನಾಗಿ ಮಾಡಿ. ಪ್ರಾಮಾಣಿಕತೆಯಿಂದ ದೇಶದ ಮುಖ್ಯ ವಾಹಿನಿಯಲ್ಲಿ ಅವರು ತೊಡಗಿಕೊಳ್ಳುವಂತೆ ಅವರನ್ನು ಪ್ರೇರೇಪಿಸಿ. ಇದೇ ರೀತಿ ಲೆಕ್ಕ ಪರಿಶೋಧನಾ ಕ್ಷೇತ್ರದಲ್ಲಿ ತೊಡಗಿಕೊಳ್ಳುವವರಿಗೆ ಸರ್ಕಾರ ಒಂದು ಹೊಸ ಅವಕಾಶವನ್ನು ಕಲ್ಪಿಸಿದೆ. ಈಗಿನಿಂದಲೇ ಇದಕ್ಕಾಗಿ ತೊಡಗಿಸಿಕೊಳ್ಳಿ. ವಿಶೇಷವಾಗಿ ನಾನು ಈ ಕ್ಷೇತ್ರದಲ್ಲಿರುವ ಯುವ ಜನತೆಯನ್ನು ಈ ಬಗ್ಗೆ ಆಹ್ವಾನಿಸುತ್ತೇನೆ.

ಬನ್ನಿ, ಸರ್ಕಾರ ಕೆಲವು ದಿನಗಳ ಹಿಂದೆ ಜಾರಿ ಮಾಡಿರುವ ದಿವಾಳಿತನಸಂಹಿತೆ ಮುಂತಾದ ಕಾನೂನುಗಳನ್ನು ಯಶಸ್ವಿಯಾಗಿಸುವ ವಿಧಾನಗಳನ್ನು ಸರಿಯಾದ ರೀತಿಯಲ್ಲಿ ಅನ್ವಯ ಮಾಡುವ ಬಗ್ಗೆ ಲೆಕ್ಕ ಪರಿಶೋಧನಾ ಕ್ಷೇತ್ರದ ಜನಗಳ ಪಾತ್ರ ಮಹತ್ವಪೂರ್ಣ. ಈ ಕೋಡ್‍ನ ಅನ್ವಯ ಯಾವುದೇ ಕಂಪನಿ ದಿವಾಳಿಯಾದರೆ, ಅದರ ನಿಯಂತ್ರಣ insolvency practitioner ಬಳಿ ಬರುತ್ತದೆ. ಲೆಕ್ಕ ಪರಿಶೋಧಕ ನಿಯಂತ್ರಣ insolvency practitioner ಆಗಿ ಒಂದು ಹೊಸ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭ ಮಾಡಬಹುದು. ಇದು ಒಂದು ಒಳ್ಳೆಯ ಹಾದಿಯಾಗಿದ್ದು ಸರಕಾರ ತಮಗಾಗಿ ತನ್ನ ದ್ವಾರವನ್ನು ತೆರೆದಿದೆ. ಆದರೆ ಇಂದಿನಿಂದ ತಾವು ಯಾವುದೇ ಹಾದಿಯನ್ನು ಆಯ್ದುಕೊಳ್ಳಿ ಅದರಲ್ಲಿ CA ಅಂದರೆ ಅದರ ಅರ್ಥ ಸನ್ನದು ಮತ್ತು ನಿಖರತೆ , ಅನುವರ್ತನೆ ಮತ್ತು ದೃಢೀಕೃತ.

ಮಿತ್ರರೇ, 2022 ರಲ್ಲಿ ನಮ್ಮ ದೇಶ ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಲಿದೆ. ಈ ವರ್ಷಕ್ಕಾಗಿ ದೇಶ ಅನೇಕ ಸಂಕಲ್ಪಗಳನ್ನು ಮಾಡಬೇಕಿದೆ. ನವ ಭಾರತ ನಮ್ಮೆಲ್ಲರ ಪರಿಶ್ರಮದ ಪ್ರತೀಕ್ಷೆ ಮಾಡುತ್ತಿದೆ. ತಾವು ಕೂಡ ಒಂದು ಸಂಸ್ಥೆಯಾಗಿ ಹಾಗೂ ಒಬ್ಬ ಲೆಕ್ಕ ಪರಿಶೋಧಕರಾಗಿ ಹಾಗು ದೇಶದ ಒಬ್ಬ ನಾಗರೀಕನಾಗಿ ಭಾರತ ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ತಾವು ದೇಶವನ್ನು ಹೇಗೆ ನೋಡಬೇಕೆಂದು ಬಯಸುತ್ತೀರಾ ಅದಕ್ಕಾಗಿ ನೀವು ನಿಮ್ಮ ಕೊಡುಗೆಯನ್ನು ನೀಡಿ. ತಮ್ಮ ಪಾತ್ರವನ್ನು ನಿಭಾಯಿಸಿ ಮತ್ತು 2022ಕ್ಕೆ ಭಾರತ ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನ ಪೂರೈಸುತ್ತದೆ. ಅದರ ಸರಿಯಾಗಿ ಎರಡು ವರ್ಷಗಳ ನಂತರ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯೂ ಕೂಡಾ 75 ವರ್ಷಗಳಿಗೆ ಕಾಲಿಡಲಿದೆ. ತಾವು ಈಗಿನಿಂದಲೇ 75ನೇ ವರ್ಷದ ಕಾರ್ಯಕ್ರಮವನ್ನು ರೂಪಿಸಿಕೊಳ್ಳಿ. ಹಾಗೂ ಈ ಸಂಸ್ಥೆಯ ಗುಣಮಟ್ಟವನ್ನು ಹೇಗೆ ಎತ್ತರಕ್ಕೆ ಕೊಂಡೊಯ್ಯಬಹುದು, ಇಂತಹ ಐತಿಹಾಸಿಕ ಸಂದರ್ಭದ ನಿರೀಕ್ಷೆಯನ್ನಿಟ್ಟುಕೊಂಡು ಈಗಿನಿಂದಲೇ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಿ. ದೇಶಕ್ಕೆ ಏನನ್ನು ಕೊಡುಗೆಯಾಗಿ ನೀಡಬಲ್ಲಿರಿ ಎಂಬುದನ್ನು ಈಗಲೇ ನಿರ್ಧರಿಸಿಕೊಳ್ಳಿ. ದೇಶದಲ್ಲಿ ಆಸೆ ಆಕಾಂಕ್ಷೆಗಳೊಂದಿಗೆ ನಿರೀಕ್ಷೆಯಲ್ಲಿರುವ ಕೋಟಿ ಕೋಟಿ ಯುವಜನರ ಭವಿಷ್ಯಕ್ಕಾಗಿ ತಾವೇನು ಮಾಡಬಲ್ಲಿರಿ ಎಂಬ ಯೋಜನೆಯನ್ನು ರೂಪಿಸಿಕೊಳ್ಳಿ. ದೇಶವನ್ನು ಪಾರದರ್ಶಕ ಹಾಗು ಭ್ರಷ್ಟಾಚಾರ ರಹಿತವನ್ನಾಗಿ ಮಾಡುವಲ್ಲಿ ಸಹಾಯ ಮಾಡುವುದಕ್ಕೆ ಸಾಧ್ಯವಿಲ್ಲವೇ? ಎಷ್ಟು ಜನರನ್ನು ತೆರಿಗೆ ನೀಡುವುದರಿಂದ ತಪ್ಪಿಸಿದ್ದೀರಿ, ಇದರ ಲೆಕ್ಕ ಇಡುವುದು ಸಾಧ್ಯವೇ? ಅಥವಾ ಎಷ್ಟು ಜನರನ್ನು ತೆರಿಗೆ ನೀಡಿ, ಪ್ರಾಮಾಣಿಕವಾಗಿ ಜೀವನ ಸಾಗಿಸುವಂತೆ ಪ್ರೇರೆಪಿಸಿದ್ದೀರಿ, ನಿರ್ಣಯ ನೀವೆ ಮಾಡಬೇಕು. ತಮಗಾಗಿ ಒಂದು ಗುರಿಯನ್ನು ರೂಪಿಸಿಕೊಳ್ಳಿ ಎಷ್ಟು ಜನರನ್ನು ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವಂತೆ ಪ್ರೇರೇಪಿಸಿ ರಾಷ್ಟ್ರಪ್ರ್ರಗತಿಯ ಮುಖ್ಯವಾಹಿನಿಯಲ್ಲಿ ಕೊಂಡೊಯ್ಯಬಹುದೆಂದು ನಿರ್ಧರಿಸಿ. ಈ ಗುರಿಯ ಲೆಕ್ಕಾಚಾರ ಏನಾಗಬಹುದೆಂದು ನಿಮಗಿಂತ ಬೇರೆ ಯಾರು ಹೇಳಬಲ್ಲರು. ತಾವು ತಮ್ಮ ವೃತ್ತಿಯಲ್ಲಿ ಹೇಗೆ ತಾಂತ್ರಿಕತೆಯ ಉಪಯೋಗ ಪಡೆದುಕೊಳ್ಳಬಹುದೆಂಬ ಬಗ್ಗೆ ಯೋಚಿಸಿ. ಲೆಕ್ಕ ಪರಿಶೋಧನಾ ಸಂಸ್ಥೆಯ ಕಾರ್ಯಕ್ಷೇತ್ರದಲ್ಲಿಫೊರೆನ್ಸಿಕ್ ಸೈನ್ಸ್ ನ ಕೊಡುಗೆ ಎಷ್ಟಿರಬಹುದೆಂಬ ಬಗ್ಗೆ ಚಿಂತಿಸಿ, ಇದನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬ ಬಗ್ಗೆಯೂ ನಿರ್ಣಯ ಮಾಡಬೇಕಾಗಿದೆ.

ಸ್ನೇಹಿತರೆ, ನನ್ನ ಮನದಲ್ಲಿ ಮತ್ತೊಂದು ನಿರೀಕ್ಷೆ ಇದೆ, ತಮ್ಮ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸ ವಿದೆ. ತಮ್ಮಲ್ಲಿ ಆ ಸಾಮರ್ಥ್ಯವಿದೆ. ತಾವು ಏಕೆ ಹಿಂದುಳಿದಿದ್ದೀರಿ ನನಗೆ ತಿಳಿಯುತ್ತಿಲ್ಲ.

ಸ್ನೇಹಿತರೆ, ಜಗತ್ತಿನಲ್ಲಿ ನಾಲ್ಕು ಅತ್ಯಂತ ಗೌರವಯುತವಾದ ಲೆಕ್ಕಪರಿಶೋಧನಾ ಸಂಸ್ಥೆಗಳಿವೆ. ದೊಡ್ಡ ದೊಡ್ಡ ಕಂಪನಿಯವರು ಅವುಗಳಿಗೆ ತಮ್ಮ ತಮ್ಮ ಲೆಕ್ಕ ಪರಿಶೋಧನಾ ಕಾರ್ಯವನ್ನು ನೀಡುತ್ತಾರೆ. ಈ ಕಂಪನಿಗಳನ್ನು ಬಿಗ್ ಫೋರ್ ಎಂದು ಕರೆಯುತ್ತಾರೆ. ಈ ಬಿಗ್ ಫೋರ್ ನಲ್ಲಿ ನಾವು ಎಲ್ಲಿಯೂ ಇಲ್ಲ. ನಿಮ್ಮಲ್ಲಿ ಕ್ಷಮತೆಯಿದೆ ಹಾಗೂ ಪ್ರತಿಭೆಯಲ್ಲಿ ಕೂಡಾ ಯಾರಿಗೂ ಕಡಿಮೆಯಿಲ್ಲ. ಭಾರತ 2022ರಲ್ಲಿ ತನ್ನ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮಾಡುವ ವೇಳೆಗೆ ಈ ಕ್ಷೇತ್ರದಲ್ಲಿ ಜಗತ್ತಿನಲ್ಲೆ ಗೌರವದ ಸ್ಥಾನ ಹೊಂದಬೇಕಾದರೆ ನೀವು ಗುರಿಯೊಂದನ್ನು ಹಾಕಿಕೊಳ್ಳಬೇಕು; ಇದರಿಂದ ಈ ಬಿಗ್ ಫೋರ್ ಕಂಪೆನಿಗಳನ್ನು ಬಿಗ್ ಏಯ್ಟ್ ಕಂಪೆನಿಗಳಾಗಿ ಪರಿವರ್ತಿಸುವುದು ಸಾದ್ಯವಾದೀತು. ನನ್ನ ಮಿತ್ರರೇ , ಕೊನೆಯಲ್ಲಿ ನಾನು ತಮಗೆ ನಿಮ್ಮದೇ ಕ್ಷೇತ್ರದಲ್ಲಿ ಅತ್ಯಂತ ಹಳೆಯ ಹಾಗೂ ಗೌರವಾನ್ವಿತ ಅರ್ಥಶಾಸ್ತ್ರಜ್ಞ ಚಾಣಕ್ಯನ ಒಂದು ಸಲಹೆಯನ್ನು ನೀಡಲು ಬಯಸುತ್ತೇನೆ. ಚಾಣಕ್ಯ ಹೇಳುವಂತೆ, ” ಕಾಲಾತಿ ಕ್ರಮಾತ್ ಕಾಲ್ ಏವಂ ಫಲಂ ಪಿಬತಿ ” .. ಅಂದರೆ, ಕರ್ತವ್ಯದ ಸಮಯ ಮೀರಿದ ನಂತರ ಅದರ ಯಶಸ್ಸನ್ನು ಸಮಯವೇ ಮುಗಿಸಿಬಿಡುತ್ತದೆ. ಆದುದರಿಂದ ಸಮಯವನ್ನು ಕೈಯಿಂದ ಜಾರಲು ಬಿಡಬೇಡಿ. ಈಗ ಸ್ವಲ್ಪ ಸಮಯಕ್ಕೆ ಮೊದಲು ಅರುಣ್ ಜೀ ಅವರು ತಮ್ಮ ಬಳಿ ಮಾತನಾಡುತ್ತಿದ್ದರು. ಅವರು ತಮಗೆ ಏನೋ ಹೇಳುತ್ತಿದ್ದರು. ವಿಶ್ವಾದ್ಯಂತ ಹಿಂದೂಸ್ತಾನದ ಚರಿತ್ರೆಯಲ್ಲಿ ಇಂತಹ ಸಂದರ್ಭ ಎಂದೂ ಒದಗಿ ಬಂದಿರಲಿಲ್ಲ. ಈ ಸಮಯವನ್ನು ಕೈಯಿಂದ ಜಾರಿಹೋಗಲು ಬಿಡಬೇಡಿ. ಮಿತ್ರರೇ, ನಾನು ನಿಮ್ಮನ್ನು ರಾಷ್ಟ್ರನಿರ್ಮಾಣದ ಮುಖ್ಯವಾಹಿನಿಯ ಜತೆಗೆ ಸೇರಲು ಆಮಂತ್ರಿಸುವ ಸಲುವಾಗಿ ಇಲ್ಲಿ ಬಂದಿದ್ದೇನೆ. ಇಂದು ಒಂದು ಮುಖ್ಯ ವೃತ್ತಿಯಾಗಿದ್ದು ಸಮಾಜದ ಸಂಪೂರ್ಣ ಅರ್ಥ ವ್ಯವಸ್ಥೆಯನ್ನು ಉಳಿಸುವ ಸಾಮರ್ಥ್ಯವಿದೆ ಎಂಬುದನ್ನು ಮರೆಯದಿರಿ. ನಾನು ಮತ್ತೊಮ್ಮೆ ಸಂಸ್ಥೆಗೂ, ಅದರ ವಿವಿಧ ವಿಭಾಗಗಳಿಗೂ ಮತ್ತು ಇಲ್ಲಿ ಉಪಸ್ಥಿತರಿರುವ ಲೆಕ್ಕ ಪರಿಶೋಧಕರಿಗೂ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆಯ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರುತ್ತೇನೆ. ಹಾಗೂ ದೇಶಾದ್ಯಂತ ಈ ಕಾರ್ಯಕ್ರಮವನ್ನು ವೀಡಿಯೋ ಮೂಲಕ ದೇಶದ ಮೂಲೆ ಮೂಲೆಗೂ ಹಾಗು ವಿಶ್ವದ ಅನೇಕ ದೇಶಗಳಲ್ಲಿ ನಮ್ಮ ಲೆಕ್ಕ ಪರಿಶೋಧಕರು ನೋಡುತ್ತಿದ್ದಾರೆ , ಅವರಿಗೂ ಕೂಡಾ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತಮಗೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾನಾವು ನೂತನ ದಿಕ್ಕು, ನೂತನ ವೇಗ, ಹೊಸ ಉತ್ಸಾಹದೊಂದಿಗೆ ಹೆಜ್ಜೆ ಹಾಕುತ್ತ ದೇಶದ ಸಾಮಾನ್ಯ ನಾಗರಿಕನನ್ನು ಪ್ರಾಮಾಣಿಕತೆಯ ಉತ್ಸವದಲ್ಲಿ ಜತೆಗೂಡಿಸೋಣ. ಈ ಆಶಯದೊಂದಿಗೆ ನಾನು ತಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸ್ನೇಹಿತರೆ, ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian economy ends 2024 with strong growth as PMI hits 60.7 in December

Media Coverage

Indian economy ends 2024 with strong growth as PMI hits 60.7 in December
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government