ಗೌರವಾನ್ವಿತ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜೀ, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಜೀ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಡಿ.ವಿ. ಸದಾನಂದ ಗೌಡ ಜೀ, ಶ್ರೀ ಪ್ರಲ್ಹಾದ್ ಜೋಷಿ ಜೀ, ಕರ್ನಾಟಕ ಸರ್ಕಾರದ ಮಂತ್ರಿಗಳು, ಗೌರವಾನ್ವಿತ ಸಂತ ಸಮಾಜ, ಭಕ್ತರು, ಮಹಿಳೆಯರು ಮತ್ತು ಮಹನೀಯರು ಹಾಗೂ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ಶುಭಾಶಯಗಳು! ತುಮಕೂರಿನ ಡಾ. ಶಿವಕುಮಾರ ಸ್ವಾಮೀಜೀಯವರ ಶ್ರೀ ಸಿದ್ಧಗಂಗಾ ಮಠದ ಸನ್ನಿಧಾನದಲ್ಲಿರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ಮೊದಲನೆಯದಾಗಿ, ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು!
ನಿಮಗೆಲ್ಲರಿಗೂ 2020 ರ ವರ್ಷದ ಶುಭಾಶಯವನ್ನು ಕೋರುತ್ತೇನೆ!
ನಾನು ನಿಮ್ಮೆಲ್ಲರ ಸಮ್ಮುಖದಲ್ಲಿ ಈ ಪವಿತ್ರ ತುಮಕೂರಿನ ಮಣ್ಣಿನೊಂದಿಗೆ 2020 ರ ವರ್ಷವನ್ನು ಪ್ರಾರಂಭಿಸುತ್ತಿರುವುದಕ್ಕೆ ನಾನು ಅದೃಷ್ಟಶಾಲಿಯಾಗಿದ್ದೇನೆ. ಶ್ರೀ ಸಿದ್ಧಗಂಗಾ ಮಠದ ಈ ಪವಿತ್ರ ಶಕ್ತಿಯು ಎಲ್ಲಾ ನಾಗರಿಕರಲ್ಲೂ ಸದಾ ಸುಖ ಸಂತೋಷ ತುಂಬಲಿ ಎಂದು ನಾನು ಬಯಸುತ್ತೇನೆ.
ಸ್ನೇಹಿತರೇ,
ಇಷ್ಟು ವರ್ಷಗಳ ನಂತರವಾದರೂ, ಇಂದು ಇಲ್ಲಿಗೆ ಬಂದಿರುವುದು ನನ್ನ ಅದೃಷ್ಟವಾಗಿದೆ. ಆದರೆ ಅದೇ ಸಮಯದಲ್ಲಿ ನಿರ್ಜನತೆಯ ಭಾವವೂ ನನ್ನನ್ನು ಕಾಡುತ್ತಿದೆ. ಪೂಜ್ಯ ಸ್ವಾಮಿ ಶ್ರೀ ಶ್ರೀ ಶಿವಕುಮಾರ ಜೀ ಅವರ ಅನುಪಸ್ಥಿತಿಯನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ನನ್ನ ಅನುಭವದ ಪ್ರಕಾರ, ಸಾಮಾನ್ಯ ವ್ಯಕ್ತಿಯ ಜೀವನವು ಶ್ರೀಗಳನ್ನು ಭೇಟಿ ಮಾಡುವುದರ ಮೂಲಕ ಶಕ್ತಿಯಿಂದ ತುಂಬಿಕೊಳ್ಳುತ್ತಿತ್ತು. ಅವರ ಸ್ಪೂರ್ತಿದಾಯಕ ವ್ಯಕ್ತಿತ್ವದಿಂದ, ಈ ಪವಿತ್ರ ಸ್ಥಳವು ಹಲವು ದಶಕಗಳಿಂದ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದೆ. ವಿಶೇಷವಾಗಿ, ವಿದ್ಯಾವಂತ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸುವ ನಿರಂತರ ಹರಿವು ಇಲ್ಲಿಂದ ಹುಟ್ಟುತ್ತದೆ. ಅಪಾರ ಸಂಖ್ಯೆಯ ಜನರ ಜೀವನದಲ್ಲಿ ಸ್ವಾಮಿ ಜೀ ಅವರ ಪ್ರಭಾವ ಬೀರಿದೆ, ಅದು ನೋಡಲು ಅಪರೂಪ.
ಶ್ರೀ ಶ್ರೀ ಶಿವಕುಮಾರ ಜೀ ಅವರ ಸ್ಮರಣಾರ್ಥವಾಗಿ ನಿರ್ಮಿಸಲಿರುವ ವಸ್ತುಸಂಗ್ರಹಾಲಯದ ಅಡಿಪಾಯವನ್ನು ಹಾಕುವ ಅವಕಾಶ ನನಗೆ ದೊರೆತಿರುವುದು ನನ್ನ ಅದೃಷ್ಟವಾಗಿದೆ. ಈ ವಸ್ತುಸಂಗ್ರಹಾಲಯವು ಜನರಿಗೆ ಸ್ಫೂರ್ತಿ ನೀಡುವುದಲ್ಲದೆ, ಸಾಮಾಜಿಕವಾಗಿ ಮತ್ತು ರಾಷ್ಟ್ರಮಟ್ಟದಲ್ಲಿ ನಮಗೆಲ್ಲಾ ಮಾರ್ದರ್ಶನ ನೀಡಲಿದೆ. ನಾನು ಮತ್ತೊಮ್ಮೆ, ಪೂಜ್ಯ ಸ್ವಾಮೀಜೀಯವರ ಪಾದಕ್ಕೆ ಗೌರವ ಸಲ್ಲಿಸುತ್ತೇನೆ.
ಸ್ನೇಹಿತರೇ, ಮತ್ತೊಬ್ಬ ಮಹಾನ್ ಸಂತ ಕರ್ನಾಟಕದ ಮಣ್ಣನ್ನು ತೊರೆದಿರುವ ಈ ಸಮಯದಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ. ಪೇಜಾವರ ಮಠದ ಮುಖ್ಯಸ್ಥರಾದ ಶ್ರೀ ವಿಶ್ವೇಶ ತೀರ್ಥ ಸ್ವಾಮಿಯವರ ನಿಧನವು ಭಾರತೀಯ ಸಮಾಜಕ್ಕೆ ಬಲು ದೊಡ್ಡ ನಷ್ಟವಾಗಿದೆ. ನಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನದ ಅಂತಹ ಆಧಾರ ಸ್ತಂಭಗಳ ನಿಧನವು ಒಂದು ದೊಡ್ಡ ಶೂನ್ಯತಾ (ಅನೂರ್ಜಿತತೆಯ) ಭಾವನೆಯನ್ನು ತುಂಬುತ್ತದೆ. ಈ ಕಾಲಚಕ್ರವನ್ನು ತಡೆಯಲು ನಮಗೆ ಸಾಧ್ಯವಿಲ್ಲ, ಆದರೆ ನಾವು ಖಂಡಿತವಾಗಿಯೂ ಈ ಮಹಾನ್ ಸಂತರು ತೋರಿಸಿದ ಮಾರ್ಗವನ್ನು ಇನ್ನೂ ಬಲ(ಸದೃಢ)ಪಡಿಸಬಹುದು ಮತ್ತು ಮಾನವೀಯತೆಯ ಸೇವೆಗಾಗಿ ಹಾಗೂ ಭಾರತ ಮಾತೆಯ ಸೇವೆಗಾಗಿ ನಮ್ಮನ್ನು ಅರ್ಪಿಸಿಕೊಳ್ಳಬಹುದು.
ಸ್ನೇಹಿತರೇ, ಇದು ಸಹ ಮುಖ್ಯವಾಗಿದೆ, ಏಕೆಂದರೆ ಭಾರತವು 21 ನೇ ಶತಮಾನದ ಮೂರನೇ ದಶಕವನ್ನು ಹೊಸ ಶಕ್ತಿ ಮತ್ತು ಉತ್ಸಾಹದಿಂದ ಪ್ರವೇಶಿಸಿದೆ. ಹಿಂದಿನ ಎರಡು ದಶಕ ಹೇಗೆ ಪ್ರಾರಂಭವಾಯಿತು ಎಂದು ನಿಮಗೆ ನೆನಪಿರಬಹುದು. ಆದರೆ 21 ನೇ ಶತಮಾನದ ಈ ಮೂರನೇ ದಶಕವು ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳ ಬಲವಾದ ಅಡಿಪಾಯದೊಂದಿಗೆ ಪ್ರಾರಂಭವಾಗಿದೆ.
ಈ ಆಕಾಂಕ್ಷೆಯು ಹೊಸ ಭಾರತಕ್ಕಾಗಿದೆ. ಈ ಆಕಾಂಕ್ಷೆ ಯುವ ಕನಸುಗಳದ್ದಾಗಿದೆ. ಇದು ದೇಶದ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆಕಾಂಕ್ಷೆಯಾಗಿದೆ. ಈ ಆಕಾಂಕ್ಷೆ ದೇಶದ ಬಡವರು, ದೀನ ದಲಿತರು, ವಂಚಿತರು, ಪೀಡಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರಿಗಾಗಿದೆ. ಈ ಆಕಾಂಕ್ಷೆ ಏನು? ಈ ಆಕಾಂಕ್ಷೆಯು ಭಾರತವು ಸಮೃದ್ಧ, ಸಮರ್ಥ ಮತ್ತು ಪರೋಪಕಾರಿ – ವಿಶ್ವಶಕ್ತಿ ಆಗಿರುವುದರ ಪ್ರತೀಕವಾಗಿದೆ. ಈ ಆಕಾಂಕ್ಷೆಯು, ವಿಶ್ವ ಭೂಪಟದಲ್ಲಿ ಭಾರತ ತನ್ನ ನೈಸರ್ಗಿಕ ಸ್ಥಾನವನ್ನು ಸ್ಥಾಪಿಸುವುದನ್ನು ನೋಡುವುದಾಗಿದೆ.
ಸ್ನೇಹಿತರೇ,
ಈ ಆಕಾಂಕ್ಷೆಯನ್ನು ಈಡೇರಿಸಲು ದೇಶದ ಜನರು ಸದೃಢ ರಾಷ್ಟ್ರವಾಗಿ ಪ್ರಮುಖ ಬದಲಾವಣೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಈಗ ನಾವು ಆನುವಂಶಿಕವಾಗಿ ಪಡೆದ ಸಮಸ್ಯೆಗಳನ್ನು ಪರಿಹರಿಸಬೇಕಾಗಿರುವುದು ಈಗ ಪ್ರತಿಯೊಬ್ಬ ಭಾರತೀಯರ ಮನಸ್ಸಿಲ್ಲಿ ಪ್ರಾಮುಖ್ಯವಾಗಿದೆ. ಸಮಾಜದಿಂದ ಹೊರಹೊಮ್ಮುವ ಅದೇ ಸಂದೇಶವು ನಮ್ಮ ಸರ್ಕಾರವನ್ನು ಸದಾ ಪ್ರೇರೇಪಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ. 2014 ರಿಂದ, ಸಾಮಾನ್ಯ ಭಾರತೀಯರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆಗಳನ್ನು ತರಲು ದೇಶದಾದ್ಯಂತ ಅಭೂತಪೂರ್ವ ಕಾರ್ಯಯೋಜನೆಗಳ ಪ್ರಯತ್ನಗಳನ್ನು ಮಾಡಲು ಇದು ನಮಗೆ ಕಾರಣವಾಗಿದೆ.
ಒಂದು ಸಮಾಜವಾಗಿ, ರಾಷ್ಟ್ರವಾಗಿ ನಮ್ಮ ಪ್ರಯತ್ನಗಳನ್ನು ಕಳೆದ ವರ್ಷ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದಿದೆ. ಇಂದು, ದೇಶವು ಬಯಲು ಶೌಚ ಮುಕ್ತವಾಗಬೇಕು. ದೇಶದ ನಮ್ಮ ಬಡ ಕುಟುಂಬದ ಸಹೋದರಿಯರು ಹೊಗೆ ರಹಿತರಾಗಬೇಕೆಂಬ ಪ್ರತಿಜ್ಞೆಯನ್ನು ಈಡೇರಿಸಲಾಗುತ್ತಿದೆ. ದೇಶದ ಪ್ರತಿ ರೈತ ಕುಟುಂಬದ ಪ್ರತಿಫಲವನ್ನು ನೇರ ಖಾತೆಗೆ ವರ್ಗಾವಣೆಯೊಂದಿಗೆ ಸಂಪರ್ಕಿಸುವ ಮತ್ತು ಕೃಷಿಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳನ್ನು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಸಂಕಲ್ಪವನ್ನು ದೇಶದಾದ್ಯಂತ ಎಲ್ಲಡೆ ಈಡೇರಿಸಲಾಗುತ್ತಿದೆ.
ಭಯೋತ್ಪಾದನೆ ವಿರುದ್ಧ ಭಾರತದ ಕಾರ್ಯ ನೀತಿ ಮತ್ತು ಕಾರ್ಯಾಭ್ಯಾಸವನ್ನು ಬದಲಾಯಿಸುವ ಸಂಕಲ್ಪವೂ ಇತ್ತೀಚೆಗೆ ಈಡೇರುತ್ತಿದೆ. ಭಯೋತ್ಪಾದನೆಯನ್ನು ಕೊನೆಗೊಳಿಸಲು ಮತ್ತು ಜನರ ಜೀವನದಲ್ಲಿ ಅನಿಶ್ಚಿತತೆಯನ್ನು ತೆಗೆದುಹಾಕಲು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಜನರ ನೇತೃತ್ವದ ಅಭಿವೃದ್ಧಿಯ ಹೊಸ ಯುಗ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗಳಲ್ಲಿ ಆರಂಭವಾಗಿದೆ ಎಂದು ಹೇಳಬಹುದು. ವಿಭಿನ್ನ ಧಾರ್ಮಿಕ ನಂಬಿಕೆಯಿಂದಾಗಿ ನೆರೆಯ ದೇಶಗಳಿಂದ ಹೊರಹಾಕಲ್ಪಟ್ಟ ಆ ದೇಶಗಳ ಅಲ್ಪಸಂಖ್ಯಾತರ ಗೌರವವನ್ನು ಪುನಃಸ್ಥಾಪಿಸಲು ನಮ್ಮ ದೇಶವು ಸರಿಯಾದ ಕ್ರಮ ಕೈಗೊಂಡಿದೆ. ಈ ಎಲ್ಲದರ ಮಧ್ಯೆ, ಭಗವಾನ್ ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆದಲ್ಲಿ ಭವ್ಯವಾದ ದೇವಾಲಯ ನಿರ್ಮಾಣದ ಹಾದಿಯನ್ನೂ ಸಹ ಸಂಪೂರ್ಣ ಶಾಂತಿ ಮತ್ತು ಸಹಕಾರದಿಂದ ಸುಗಮಗೊಳಿಸಲಾಗಿದೆ.
ಸ್ನೇಹಿತರೇ,
ಕೆಲವು ವಾರಗಳ ಹಿಂದೆ, ನಮ್ಮ ಪ್ರಜಾಪ್ರಭುತ್ವದ ಅತಿದೊಡ್ಡ ಸಂಸ್ಥೆಯಾದ ನಮ್ಮ ಸಂಸತ್, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರೂಪಿಸುವ ಐತಿಹಾಸಿಕ ನಿರ್ಧಾರವನ್ನು ಯಶಸ್ವಿಯಾಗಿ ಮಾಡಿದೆ. ಆದರೆ ಕಾಂಗ್ರೆಸ್ ಪಕ್ಷದ ಜನರು, ಅವರ ಮಿತ್ರಪಕ್ಷಗಳು ಮತ್ತು ಅವರೆಲ್ಲಾ ಸೇರಿ ರೂಪಿಸಿದ ಸಾಮಾಜಿಕ ಪರಿಸರ ವ್ಯವಸ್ಥೆಯು ಭಾರತದ ಸಂಸತ್ತಿನ ವಿರುದ್ಧ ನಿಂತಿದೆ ಎನ್ನಬಹುದು. ನಮ್ಮ ಮೇಲಿನ ಅವರ ದ್ವೇಷವನ್ನು ಈಗ ದೇಶದ ಸಂಸತ್ತಿಗೆ ವಿರುದ್ದವಾಗಿ ವರ್ತಿಸುವ ಮೂಲಕ ತೋರಿಸಲಾಗುತ್ತಿದೆ. ಈ ಜನರು ಭಾರತದ ಸಂಸತ್ತಿನ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದ್ದಾರೆ. ಈ ಜನರು ದಲಿತರು, ಅನ್ಯಾಯ, ತುಳಿತಕ್ಕೊಳಗಾದವರು ಮತ್ತು ಪಾಕಿಸ್ತಾನದಿಂದ ಹೊರಹಾಕಲ್ಪಟ್ಟ ಶೋಷಿತ ನಮ್ಮ ಜನರ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ.
ಸ್ನೇಹಿತರೇ,
ಪಾಕಿಸ್ತಾನ ಹುಟ್ಟಿದ್ದು ಧರ್ಮದ ಆಧಾರದ ಮೇಲೆ. ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲಾಯಿತು. ಮತ್ತು ಆ ವಿಭಜನೆಯ ಸಮಯದಲ್ಲಿ, ಪಾಕಿಸ್ತಾನದ ಇತರ ಧರ್ಮಗಳ ಜನರ ಮೇಲೆ ಬಹಳಷ್ಟು ದೌರ್ಜನ್ಯ ನಡೆದಿತ್ತು. ಕಾಲಾನಂತರದಲ್ಲಿ, ಪಾಕಿಸ್ತಾನದಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ, ಅದರಲ್ಲೂ ಅವರು ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು ಅಥವಾ ಜೈನರು ಆಗಿದ್ದರೆ ಹಿಂಸೆಗಳು ಹೆಚ್ಚಾಗಿದ್ದವು. ಅಂತಹ ಸಾವಿರಾರು ಜನರು ತಮ್ಮ ಮನೆ ಆಸ್ತಿ ಸಂಪತ್ತುಗಳನ್ನು ತೊರೆದು ನಿರಾಶ್ರಿತರಾಗಿ ಭಾರತಕ್ಕೆ ಬರಬೇಕಾಯಿತು.
ಪಾಕಿಸ್ತಾನ ಹಿಂದು, ಸಿಖ್ಖರು, ಜೈನರು ಮತ್ತು ಕ್ರಿಶ್ಚಿಯನ್ನರನ್ನು ತುಳಿತಕ್ಕೊಳಗಾಗಿಸಿ ಹಿಂಸಿಸಿತು; ಆದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳು ಈ ಹೀನ ಕೃತ್ಯ ಎಸಗಿದ ಪಾಕಿಸ್ತಾನದ ವಿರುದ್ಧ ಮಾತನಾಡಲಿಲ್ಲ. ತಮ್ಮ ಪ್ರಾಣ ಉಳಿಸಲು ಮತ್ತು ತಮ್ಮ ಹೆಣ್ಣುಮಕ್ಕಳನ್ನು ಅತ್ಯಾಚಾರಿಗಳಿಂದ ರಕ್ಷಿಸಲು ಪಾಕಿಸ್ತಾನದಿಂದ ಇಲ್ಲಿಗೆ ಬಂದವರ ವಿರುದ್ಧ ಈ ಪಕ್ಷಗಳು ಬೀದಿಗಳಲ್ಲಿ ಮೆರವಣಿಗೆಗಳನ್ನು ಏಕೆ ಮಾಡುತ್ತಿವೆ? ಅಲ್ಲದೆ, ತನ್ನ ಅಸಹಾಯಕ ಪ್ರಜೆಗಳ ವಿರುದ್ಧ ಇಂತಹ ದೌರ್ಜನ್ಯ ಎಸಗಿರುವ ಪಾಕಿಸ್ತಾನದ ಬಗ್ಗೆ ಈ ಪಕ್ಷಗಳು ಮೌನವಾಗಿರುವುದು ಏಕೆ? ಎಂಬ ಪ್ರಶ್ನೆ ಇಂದು ಭಾರತದ ಪ್ರತಿಯೊಬ್ಬ ದೇಶವಾಸಿಗೂ ಕಾಡುತ್ತಿದೆ.
ಪಾಕಿಸ್ತಾನದ ನಿರಾಶ್ರಿತರಿಗೆ ಸಹಾಯ ಮಾಡುವುದು ಮತ್ತು ಅವರೊಂದಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಹಿಂದೂಗಳು, ಅದರಲ್ಲೂ ದಲಿತರು ಮತ್ತು ತುಳಿತಕ್ಕೊಳಗಾದವರನ್ನು ಪಾಕಿಸ್ತಾನದಿಂದ ಆಗುವ ದೌರ್ಜನ್ಯಕ್ಕೆ ಅವರ ಕುಟುಂಬದ ಜೀವ ಬಲಿಯಾಗಲು ಬಿಡದಿರುವುದು ಮತ್ತು ಅವರಿಗೆ ಸರಿಯಾದ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ಪಾಕಿಸ್ತಾನದಿಂದ ಸಿಖ್ಖರನ್ನು ದೌರ್ಜನ್ಯಕ್ಕೆ ಅವರ ಕುಟುಂಬದ ಜೀವ ಬಲಿಯಾಗಲು ಬಿಡದಿರುವುದು ಮತ್ತು ಸಹಾಯ ಮಾಡದಿರುವುದು ನಮ್ಮ ಕರ್ತವ್ಯವಾಗಿದೆ. ಪಾಕಿಸ್ತಾನದಿಂದ ಜೈನರು ಮತ್ತು ಕ್ರಿಶ್ಚಿಯನ್ನರನ್ನು ದೌರ್ಜನ್ಯಕ್ಕೆ ಅವರ ಕುಟುಂಬದ ಜೀವ ಬಲಿಯಾಗಲು ಬಿಡದಿರುವುದು ಮತ್ತು ಅವರಿಗೆ ಸಹಾಯ ಮಾಡದಿರುವುದು ನಮ್ಮ ಕರ್ತವ್ಯವಾಗಿದೆ.
ಸ್ನೇಹಿತರೇ,
ಇಂದು ಭಾರತದ ಸಂಸತ್ತಿನ ವಿರುದ್ಧ ಆಂದೋಲನ ನಡೆಸುತ್ತಿರುವವರಿಗೆ, ಪಾಕಿಸ್ತಾನದ ಈ ಕೃತ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಿರಂಗಪಡಿಸುವ ಅವಶ್ಯಕತೆಯಿದೆ ಎಂದು ನಾನು ಹೇಳಲು ಬಯಸುತ್ತೇನೆ. ನೀವು ಆಂದೋಲನ ಮಾಡಬೇಕಾದರೆ, ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನ ಮಾಡಿದ ದೌರ್ಜನ್ಯದ ವಿರುದ್ಧ ಮೊದಲು ನಿಮ್ಮ ಧ್ವನಿ ಎತ್ತಿ.
ನೀವು ಘೋಷಣೆಗಳನ್ನು ಎತ್ತಲು ಬಯಸಿದರೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ಹಿಂಸಿಸಲಾಗುತ್ತಿರುವ ಕ್ರೂರ ವಿಧಾನಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಎತ್ತಿಕೊಳ್ಳಿ. ನೀವು ಮೆರವಣಿಗೆಯನ್ನು ತೆಗೆದುಕೊಳ್ಳಲು ಬಯಸಿದರೆ, ಅದು ಇಲ್ಲಿ ಆಶ್ರಯ ಪಡೆದ ಪಾಕಿಸ್ತಾನದಿಂದ ಓಡಿ ಬಂದ ಹಿಂದೂ, ಅದರಲ್ಲೂ ದಲಿತ, ತುಳಿತಕ್ಕೊಳಗಾದ ಮತ್ತು ಶೋಷಿತರಿಗೆ ಬೆಂಬಲವಾಗಿರಲಿ. ನೀವು ಪ್ರತಿಭಟನೆಗಳನ್ನು ನಡೆಸಲು ಬಯಸಿದರೆ, ಅದು ಪಾಕಿಸ್ತಾನದ ವಿರುದ್ಧವಾಗಿರಲಿ.
ಸ್ನೇಹಿತರೇ,
ದೇಶ ಎದುರಿಸುತ್ತಿರುವ ದಶಕಗಳಷ್ಟು ಹಳೆಯ ಹಲವು ಸವಾಲುಗಳನ್ನು ಪರಿಹರಿಸಲು ನಮ್ಮ ಸರ್ಕಾರ ಹಗಲು ರಾತ್ರಿ ಶ್ರಮಿಸುತ್ತಿದೆ. ದೇಶದ ಜನರ ಜೀವನವನ್ನು ಸುಲಭಗೊಳಿಸುವುದು ನಮ್ಮ ಆದ್ಯತೆಯಾಗಿದೆ. ದೇಶದ ಪ್ರತಿಯೊಬ್ಬ ಬಡವರಿಗೆ ಸೂರು, ಪ್ರತಿ ಮನೆಗೆ ಅನಿಲ ಸಂಪರ್ಕ, ಶುದ್ಧ ಕುಡಿಯುವ ನೀರು ಸರಬರಾಜು, ಆರೋಗ್ಯ ಸೌಲಭ್ಯ, ವಿಮಾ ರಕ್ಷಣೆ, ಪ್ರತಿ ಹಳ್ಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ – ಅಂತಹ ಪ್ರತಿಯೊಂದು ಆದ್ಯತೆಯ ಗುರಿಯಲ್ಲೂ ಪರಿಪೂರ್ಣತೆಗಾಗಿ ನಾವು ಹಗಲೂ ರಾತ್ರಿ ಕೆಲಸ ಮಾಡುತ್ತಿದ್ದೇವೆ.
2014 ರಲ್ಲಿ, ಸ್ವಚ್ಛ ಭಾರತ್ ಅಭಿಯಾನದಲ್ಲಿ ಭಾಗವಹಿಸಲು ನಾನು ನಿಮ್ಮನ್ನು ವಿನಂತಿಸಿದಾಗ, ನೀವು ಬೆಂಬಲವಾಗಿ ನಿಂತು ತುಂಬು ಹೃದಯದಿಂದ ಕೈ ಚಾಚಿದ್ದೀರಿ. ನಿಮ್ಮಂತಹ ಕೋಟಿ ಸಹಚರರ ಸಹಕಾರದಿಂದಾಗಿ, ಗಾಂಧೀಜೀಯ 150 ನೇ ಜನ್ಮ ದಿನಾಚರಣೆಯಂದು, ಭಾರತವು ತೆರೆದ (ಬಾಹ್ಯ) ಮಲವಿಸರ್ಜನೆಯಿಂದ ಮುಕ್ತವಾಯಿತು.
ಈ ಪುಣ್ಯ ಭೂಮಿಗೆ ಬಂದಿದ್ದೇನೆ ಹಾಗೂ ನಾನು 3 ನಿರ್ಣಯಗಳಿಗೆ ಸಂತ ಸಮಾಜದಿಂದ ಸಕ್ರಿಯ ಬೆಂಬಲವನ್ನು ಪಡೆಯಲಿಚ್ಛಿಸಿದ್ದೇನೆ. ಮೊದಲಿಗೆ, ನಮ್ಮ ಕರ್ತವ್ಯಗಳು ಮತ್ತು ಕಟ್ಟುಪಾಡುಗಳಿಗೆ ಪ್ರಾಮುಖ್ಯತೆ ನೀಡುವ ನಮ್ಮ ಪುರಾತನ ಸಂಸ್ಕೃತಿಯನ್ನು ನಾವು ಬಲಪಡಿಸಬೇಕು, ಅದರ ಬಗ್ಗೆ ಜನರಲ್ಲಿ ನಿರಂತರವಾಗಿ ಜಾಗೃತಗೊಳಿಸಬೇಕು. ಎರಡನೆಯದು: ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸುವುದು. ಮತ್ತು ಮೂರನೆಯದು, ಜಲ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ಸಹಕಾರ ನೀಡುವುದು.
ಸ್ನೇಹಿತರೇ,
ಭಾರತ ಯಾವಾಗಲೂ ನಮ್ಮ ಸರಿಯಾದ ಹಾದಿಗೆ ಮಾರ್ಗದರ್ಶನಕ್ಕಾಗಿ ಸಂತರು, ಋಷಿಮುನಿಗಳು, ಗುರುಗಳನ್ನು ಸದಾ ನೋಡಿದೆ. ಹೊಸ ಭಾರತದಲ್ಲೂ , ಆಧ್ಯಾತ್ಮಿಕತೆ ಮತ್ತು ನಂಬಿಕೆಗೆ ಸಂಬಂಧಿಸಿದಂತೆ ದೇಶದ ಪ್ರತಿಯೊಂದು ನಾಯಕತ್ವದಲ್ಲೂ ಶ್ರೀ ಸಿದ್ಧಗಂಗಾ ಮಠದ ಪಾತ್ರ ಬಹುಮುಖ್ಯವಾಗಿದೆ.
ನಿಮ್ಮೆಲ್ಲರ ಹಾಗೂ ಸಂತರೆಲ್ಲರ ಆಶೀರ್ವಾದಗಳು ನಮ್ಮೊಂದಿಗೆ ಸದಾ ಇರಲಿ! ನಿಮ್ಮೆಲ್ಲರ ಆಶೀರ್ವಾದದಿಂದ ನಾವು ನಮ್ಮ ನಿರ್ಧಾರಗಳನ್ನು ಪೂರೈಸುತ್ತೇವೆ ಎಂಬ ಭರವಸೆ ಹೊಂದಿದ್ದೇನೆ. ಈ ಸದಾಶಯದ ನಿರೀಕ್ಷೆಯೊಂದಿಗೆ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.
ನಿಮ್ಮೆಲ್ಲರಿಗೂ ಅನೇಕಾನೇಕ ಧನ್ಯವಾದಗಳು!
ಭಾರತ್ ಮಾತಾ ಕಿ ಜೈ!