ತ್ರಿಪುರಾದ ಅಗರ್ತಲಾದಲ್ಲಿ ಎರಡು ಪ್ರಮುಖ ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ
"ಹಿರಾ ಮಾದರಿಯ ಆಧಾರದ ಮೇಲೆ ತ್ರಿಪುರಾ ತನ್ನ ಸಂಪರ್ಕವನ್ನು ಬಲಪಡಿಸುತ್ತಿದೆ ಮತ್ತು ವಿಸ್ತರಿಸುತ್ತಿದೆ"
"ರಸ್ತೆ, ರೈಲು, ವಾಯು ಮತ್ತು ಜಲ ಸಂಪರ್ಕ ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆ ತ್ರಿಪುರಾವನ್ನು ವ್ಯಾಪಾರ ಮತ್ತು ಉದ್ಯಮದ ಹೊಸ ಕೇಂದ್ರವಾಗಿ ಹಾಗೂ ವಾಣಿಜ್ಯ ಕಾರಿಡಾರ್ ಆಗಿ ಪರಿವರ್ತಿಸುತ್ತಿದೆ"
"ಡಬಲ್ ಎಂಜಿನ್ ಸರ್ಕಾರ ಎಂದರೆ ಸಂಪನ್ಮೂಲಗಳ ಸರಿಯಾದ ಬಳಕೆ, ಇದರರ್ಥ ಸೂಕ್ಷ್ಮತೆ ಮತ್ತು ಜನರ ಶಕ್ತಿಯನ್ನು ಹೆಚ್ಚಿಸುವುದು, ಇದರರ್ಥ ಸೇವೆ ಮತ್ತು ನಿರ್ಣಯಗಳ ಸಾಧನೆ ಮತ್ತು ಸಮೃದ್ಧಿಯ ಕಡೆಗೆ ಒಗ್ಗಟ್ಟಿನ ಪ್ರಯತ್ನ"

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ತ್ರಿಪುರಾ ರಾಜ್ಯಪಾಲರಾದ ಶ್ರೀ ಸತ್ಯದೇವ್ ಆರ್ಯಾ ಜೀ, ತ್ರಿಪುರಾದ ಯುವ ಮತ್ತು ಉತ್ಸಾಹಿ ಮುಖ್ಯಮಂತ್ರಿ ಶ್ರೀ ಬಿಪ್ಲಾಬ್ ದೇವ್ ಜೀ, ತ್ರಿಪುರಾದ ಉಪ ಮುಖ್ಯಮಂತ್ರಿ ಶ್ರೀ ಜಿಷ್ಣು ದೇವ್ ವರ್ಮಾ ಜೀ, ನನ್ನ ಸಂಪುಟ ಸಹೋದ್ಯೋಗಿಗಳಾದ ಸಹೋದರಿ ಪ್ರತಿಮಾ ಭೌಮಿಕ್ ಜೀ ಮತ್ತು ಶ್ರೀ ಜ್ಯೋತಿರಾದಿತ್ಯ ಸಿಂಧ್ಯಾ ಜೀ, ರಾಜ್ಯ ಸರಕಾರದಲ್ಲಿ ಸಚಿವರಾಗಿರುವ ಶ್ರೀ ಎನ್.ಸಿ. ದೆಬ್ಬಾರಾಂ ಜೀ, ಶ್ರೀ ರತನ್ ಲಾಲ್ ನಾಥ್ ಜೀ, ಶ್ರೀ ಪ್ರಾಂಜಿತ್ ಸಿಂಘ ರಾಯ್ ಜೀ, ಮತ್ತು ಶ್ರೀ ಮನೋಜ್ ಕಾಂತಿ ದೇಬ್ ಜೀ, ಇತರ ಜನ ಪ್ರತಿನಿಧಿಗಳೇ ಮತ್ತು ಬಹಳ ದೊಡ್ಡ ಸಂಖ್ಯೆಯಲ್ಲಿ ಬಂದಿರುವ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ!

ನಿಮಗೆಲ್ಲರಿಗೂ ನಮಸ್ಕಾರಗಳು. ನಿಮಗೆಲ್ಲರಿಗೂ ಹೊಸ ವರ್ಷ 2022ರ ಶುಭಾಶಯಗಳು!.

ವರ್ಷದ ಆರಂಭದಲ್ಲಿಯೇ, ತ್ರಿಪುರಾ ಇಂದು ಮಾ ತ್ರಿಪುರ ಸುಂದರಿ ಅವರ ಆಶೀರ್ವಾದದೊಂದಿಗೆ ಮೂರು ಉಡುಗೊರೆಗಳನ್ನು ಪಡೆಯುತ್ತಿದೆ. ಮೊದಲ ಕೊಡುಗೆ ಸಂಪರ್ಕದ್ದು, ಎರಡನೇ ಉಡುಗೊರೆ “ಮಿಷನ್ 100”, ಇಲ್ಲಿ ನೂರಾರು ಕೋ.ರೂ. ಮೌಲ್ಯದ ಯೋಜನೆಗಳು ಉದ್ಘಾಟನೆಯಾಗಿವೆ ಮತ್ತು ಶಿಲಾನ್ಯಾಸ ಮಾಡಲ್ಪಟ್ಟಿವೆ. ಈ ಮೂರು ಉಡುಗೊರೆಗಳಿಗಾಗಿ ನಿಮ್ಮೆಲ್ಲರಿಗೂ ಹೃದಯಪೂರ್ವಕ ಶುಭಾಶಯಗಳು!.

ಸ್ನೇಹಿತರೇ,

21 ನೇ ಶತಮಾನದ ಭಾರತವು ಪ್ರತಿಯೊಬ್ಬರನ್ನೂ ಜೊತೆಗೂಡಿಸಿಕೊಂಡು, ಪ್ರತಿಯೊಬ್ಬರ ಅಭಿವೃದ್ಧಿಯ ಜೊತೆ ಮತ್ತು ಪ್ರತಿಯೊಬ್ಬರ ಪ್ರಯತ್ನಗಳ ಜೊತೆ ಮುನ್ನಡೆ ಸಾಧಿಸಲಿದೆ. ಒಂದು ವೇಳೆ ಕೆಲವು ರಾಜ್ಯಗಳು ಹಿಂದುಳಿದಿದ್ದರೆ, ಕೆಲವು ರಾಜ್ಯಗಳ ಜನರು ಮೂಲಸೌಕರ್ಯಗಳಿಗಾಗಿ ಪರದಾಡುತ್ತಿದ್ದರೆ, ಆಗ ಇಂತಹ ಅಸಮಾನ ಅಭಿವೃದ್ಧಿ ದೇಶದ ಅಭಿವೃದ್ಧಿಗೆ ಪೂರಕವಾದಂತಹದಲ್ಲ.  ಮತ್ತು ಅದು ಸರಿಯೂ ಅಲ್ಲ. ಇದನ್ನು ತ್ರಿಪುರಾದ ಜನತೆ ನೋಡಿದ್ದಾರೆ ಮತ್ತು ಅದನ್ನು ಇಲ್ಲಿ ದಶಕಗಳಿಂದ ಅನುಭವಿಸಿದ್ದಾರೆ. ಈ ಮೊದಲು ಇಲ್ಲಿ ಅಭಿವೃದ್ಧಿಯ ವಾಹನಕ್ಕೆ ಬ್ರೇಕ್ ಹಾಕಿರುತ್ತಿದ್ದುದರಿಂದ ಭ್ರಷ್ಟಾಚಾರದ ಚಕ್ರ ಇಲ್ಲಿ ಚಲನೆಯಲ್ಲಿತ್ತು. ಈ ಮೊದಲು ಇಲ್ಲಿದ್ದ ಸರಕಾರಕ್ಕೆ ಮುನ್ನೋಟವೂ ಇರಲಿಲ್ಲ ತ್ರಿಪುರಾವನ್ನು ಅಭಿವೃದ್ಧಿ ಮಾಡುವ ಇರಾದೆಯೂ ಇರಲಿಲ್ಲ.ತ್ರಿಪುರಾವನ್ನು ಬಡತನದಲ್ಲಿ ಇರುವಂತೆ ಮತ್ತು ಹಿಂದುಳಿಯುವಂತೆ ಮಾಡಲಾಯಿತು. ಈ ಸ್ಥಿತಿಯನ್ನು ಬದಲಾಯಿಸಲು, ನಾನು ತ್ರಿಪುರಾದ ಜನತೆಗೆ ’ಹಿರಾ ” ಭರವಸೆ ನೀಡಿದೆ. ಇದರಲ್ಲಿ ಎಚ್ ಎಂದರೆ ಹೆದ್ದಾರಿ, ಐ ಎಂದರೆ ಅಂತರ್ಜಾಲ ಹಾದಿ, ಆರ್ ಎಂದರೆ ರೈಲ್ವೇ ಮತ್ತು ಎ ಅಂದರೆ ವಾಯು ಮಾರ್ಗಗಳು. ಇಂದು ಈ ಹಿರಾ (ಎಚ್.ಐ.ಆರ್.ಎ.) ಮಾದರಿಯ ಆಧಾರದಲ್ಲಿ ತ್ರಿಪುರಾ ಸುಧಾರಣೆಗೊಳ್ಳುತ್ತಿದೆ ಮತ್ತು ತನ್ನ ಸಂಪರ್ಕವನ್ನು ವಿಸ್ತರಿಸುತ್ತಿದೆ. ಇಲ್ಲಿಗೆ ಬರುವುದಕ್ಕೆ ಮೊದಲು , ಹೊಸದಾಗಿ ನಿರ್ಮಾಣವಾದ ಮಹಾರಾಜ ವೀರ ವಿಕ್ರಮ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ ಮತ್ತು  ಇತರ ಸೌಲಭ್ಯಗಳನ್ನು ನೋಡಲು ಹೋಗಿದ್ದೆ. ತ್ರಿಪುರಾದ ಸಂಸ್ಕೃತಿ, ಅದರ ಪರಂಪರೆ, ಅದರ ವಾಸ್ತುಶಿಲ್ಪವನ್ನು ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರು ಮೊದಲು ಕಾಣುತ್ತಾರೆ. ತ್ರಿಪುರಾದ ಪ್ರಾಕೃತಿಕ ಸೌಂದರ್ಯವಾಗಿರಲಿ, ಉನಕೋಟಿ ಗಿರಿ ಪ್ರದೇಶದ ಬುಡಕಟ್ಟು ಕಲೆಯಾಗಿರಲಿ, ಅಥವಾ ಕಲ್ಲಿನ ವಿಗ್ರಹಗಳಾಗಿರಲಿ, ವಿಮಾನ ನಿಲ್ದಾಣವು ಇಡೀ ತ್ರಿಪುರಾದ ಸಾರವನ್ನು ಒಳಗೊಂಡಿದೆ. ಹೊಸ ಸೌಲಭ್ಯಗಳೊಂದಿಗೆ ಮಹಾರಾಜ ವೀರ ವಿಕ್ರಮ ವಿಮಾನ ನಿಲ್ದಾಣದ ಸಾಮರ್ಥ್ಯ ಮೂರು ಪಟ್ಟು ಅಧಿಕವಾಗಿದೆ. ಈಗ ಡಜನ್ನಿನಷ್ಟು ವಿಮಾನಗಳನ್ನು ಇಲ್ಲಿ ಪಾರ್ಕ್  ಮಾಡಬಹುದಾಗಿದೆ. ಇದರಿಂದ ತ್ರಿಪುರಾದ ಮಾತ್ರವಲ್ಲ ಇಡೀ ಈಶಾನ್ಯದ ವಾಯು ಸಂಪರ್ಕ ಹೆಚ್ಚಳಕ್ಕೆ ಬಹಳ ದೊಡ್ಡ ಅವಕಾಶ ತೆರೆದಂತಾಗಿದೆ. ದೇಶೀಯ ಸರಕು ಟರ್ಮಿನಲ್ ಕಾಮಗಾರಿ ಮತ್ತು ಶೀತಲ ದಾಸ್ತಾನುಗಾರದ ಕಾಮಗಾರಿ ಪೂರ್ಣಗೊಂಡರೆ ವ್ಯಾಪಾರಕ್ಕೆ ಮತ್ತು ಇಡೀಯ ಈಶಾನ್ಯದ ಅಭಿವೃದ್ಧಿಗೆ ಹೊಸ ಶಕ್ತಿ ಬರಲಿದೆ. ನಮ್ಮ ಮಹಾರಾಜ ವೀರ ವಿಕ್ರಮ ಜೀ ಅವರು ಶಿಕ್ಷಣದಲ್ಲಿ ಮತ್ತು ವಾಸ್ತುಶಿಲ್ಪದಲ್ಲಿ ತ್ರಿಪುರಾಕ್ಕೆ ಹೊಸ ಎತ್ತರವನ್ನು, ಔನ್ನತ್ಯವನ್ನು ಒದಗಿಸಿದವರು. ಇಂದು ಅವರು ತ್ರಿಪುರಾದ ಅಭಿವೃದ್ಧಿಯನ್ನು ನೋಡುತ್ತಿದ್ದರೆ ಮತ್ತು ಇಲ್ಲಿಯ ಜನತೆಯ ಪ್ರಯತ್ನಗಳನ್ನು ನೋಡಿದರೆ ಬಹಳ ಸಂತೋಷಪಡುತ್ತಿದ್ದರು.

ಸ್ನೇಹಿತರೇ,

ಇಂದು ತ್ರಿಪುರಾದ ಸಂಪರ್ಕ ವಿಸ್ತರಣೆಯ ಜೊತೆಗೇ ಅದನ್ನು ಈಶಾನ್ಯದ ಮಹಾದ್ವಾರವಾಗಿ ಅಭಿವೃದ್ಧಿ ಮಾಡುವ ಕೆಲಸವೂ ತ್ವರಿತಗತಿಯಿಂದ ನಡೆಯುತ್ತಿದೆ. ಅದು ರಸ್ತೆಗಳಿರಲಿ, ರೈಲು, ವಾಯು ಅಥವಾ ಜಲ ಮಾರ್ಗಗಳ ಸಂಪರ್ಕ ಇರಲಿ, ಈ ಹಿಂದೆಂದೂ ಮಾಡಿರದಷ್ಟು ಬೃಹತ್ ಪ್ರಮಾಣದ ಹೂಡಿಕೆಯನ್ನು ನಮ್ಮ ಸರಕಾರ ಆಧುನಿಕ ಮೂಲಸೌಕರ್ಯಗಳಿಗಾಗಿ ಮಾಡುತ್ತಿದೆ. ಈಗ ತ್ರಿಪುರಾವು ಈ ವಲಯದಲ್ಲಿ  ವ್ಯಾಪಾರೋದ್ಯಮದ ಹೊಸ ತಾಣವಾಗಿ  ಮೂಡಿ ಬರುತ್ತಿದೆ; ವ್ಯಾಪಾರೋದ್ಯಮ ಕಾರಿಡಾರನ್ನು ಕೂಡಾ ಇಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಡಜನ್ನುಗಟ್ಟಲೆ ರಸ್ತೆಗಳು ಮತ್ತು ರೈಲ್ವೇ ಯೋಜನೆಗಳು ಮತ್ತು ಬಾಂಗ್ಲಾ ದೇಶದ ಜೊತೆ ಅಂತಾರಾಷ್ಟ್ರೀಯ ಜಲ ಮಾರ್ಗಗಳ ಸಂಪರ್ಕ ಈ ಪ್ರದೇಶವನ್ನು ಸುಧಾರಿಸಲು ಆರಂಭ ಮಾಡಿದೆ. ನಮ್ಮ ಸರಕಾರ ಅಗರ್ತಾಲಾ-ಅಖೌರಾ ರೈಲು ಲಿಂಕ್ ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಭಿವೃದ್ಧಿಯನ್ನು ಆದ್ಯತೆಯಾಗಿ ಪರಿಗಣಿಸಿದಾಗ ಕಾಮಗಾರಿಗಳು ದುಪ್ಪಟ್ಟು ವೇಗದಿಂದ ನಡೆಯುತ್ತವೆ. ಹಾಗಾಗಿ ಎರಡು ಇಂಜಿನ್ ಗಳ ಸರಕಾರಕ್ಕೆ ಸಮನಾದುದು ಬೇರೆ ಯಾವುದೂ ಇಲ್ಲ. ಎರಡು ಇಂಜಿನ್ ಗಳ ಸರಕಾರ ಎಂದರೆ ಸಂಪನ್ಮೂಲಗಳ ಸಮರ್ಪಕವಾದ ಬಳಕೆ, ಎರಡು ಇಂಜಿನ್ ಗಳ ಸರಕಾರ ಎಂದರೆ ಪೂರ್ಣ ಸಂವೇದನೆ, ಸೂಕ್ಷ್ಮತ್ವ, ಎರಡು ಇಂಜಿನ್ ಗಳ ಸರಕಾರ ಎಂದರೆ ಜನತೆಯ ಕೌಶಲ್ಯಗಳ ಅಭಿವೃದ್ಧಿ, ಎರಡು ಇಂಜಿನ್ ಗಳ ಸರಕಾರ ಎಂದರೆ ಸೇವೆ ಮತ್ತು ಅರ್ಪಣಾಭಾವ. ಎರಡು ಇಂಜಿನ್ ಗಳ ಸರಕಾರ ಎಂದರೆ ನಿರ್ಧಾರಗಳ ಸಾಧನೆ, ಅನುಷ್ಟಾನ. ಮತ್ತು ಎರಡು ಇಂಜಿನ್ ಗಳ ಸರಕಾರ ಎಂದರೆ ಸಮೃದ್ಧಿಯತ್ತ ದೃಢ ಪ್ರಯತ್ನಗಳು.ಇಂದಿಲ್ಲಿ ಆರಂಭಿಸಲಾದ ಮುಖ್ಯಮಂತ್ರಿ ತ್ರಿಪುರ ಗ್ರಾಮ ಸಮೃದ್ಧಿ ಯೋಜನಾ ಇದಕ್ಕೊಂದು ಉದಾಹರಣೆ. ಈ ಯೋಜನೆ ಅಡಿಯಲ್ಲಿ ಪ್ರತೀ ಮನೆಯೂ ಕೊಳವೆ ಮೂಲಕ ನೀರಿನ ಸಂಪರ್ಕವನ್ನು ಹೊಂದಲಿದೆ, ಪ್ರತೀ ಬಡವ ಪಕ್ಕಾ ಮನೆಯ ಛಾವಣಿಯನ್ನು ಹೊಂದಿರುತ್ತಾನೆ. ಕೆಲ ಸಮಯದ ಹಿಂದೆ ನಾನು ಕೆಲವು ಫಲಾನುಭವಿಗಳನ್ನು ಭೇಟಿಯಾಗಿದ್ದೆ. ಯೋಜನೆಗಳಿಗೆ ಸಂಬಂಧಿಸಿ ಅವರ ವೈಯಕ್ತಿಕ ಅನುಭವವನ್ನು ಅರ್ಥ ಮಾಡಿಕೊಳ್ಳಲು ನಾನು ಪ್ರಯತ್ನಿಸಿದ್ದೆ. ಮನೆ ಮಂಜೂರಾದ ಹೆಣ್ಣು ಮಗಳೊಬ್ಬಳನ್ನು ನಾನು ಭೇಟಿಯಾಗಿದ್ದೆ. ಆದರೆ ಇದುವರೆಗೆ ನೆಲದ ಕಾಮಗಾರಿ ಮಾತ್ರ ಆಗಿತ್ತು, ಗೋಡೆಗಳನ್ನು ಇನ್ನಷ್ಟೇ ನಿರ್ಮಾಣ ಮಾಡಬೇಕಾಗಿತ್ತು. ಆದಾಗ್ಯೂ ಆಕೆ ಸಂತೋಷದಿಂದಿದ್ದರು, ಆಕೆಯ ಕಣ್ಣುಗಳಿಂದ ನೀರಿಳಿಯುತ್ತಿತ್ತು. ಈ ಸರಕಾರ ಜನ ಸಾಮಾನ್ಯರ ಸಂತೋಷಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡಿದೆ. 

ಮತ್ತು   ಪ್ರತಿಯೊಂದು ಅರ್ಹ ಕುಟುಂಬವೂ ಆಯುಷ್ಮಾನ್ ಯೋಜನಾ ಕಾರ್ಡನ್ನು ಹೊಂದಿರಬೇಕು. ಒಂದು ಕುಟುಂಬದ ತಾಯಿ ಮತ್ತು ಆಕೆಯ ಯುವ ಪುತ್ರ ಕ್ಯಾನ್ಸರ್ ಪೀಡಿತರಾಗಿರುವುದು ರೋಗ ಪತ್ತೆಯಲ್ಲಿ ತಿಳಿದು ಬಂದ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಆಯುಷ್ಮಾನ್ ಯೋಜನೆ ಇದ್ದುದರಿಂದ ಆ ತಾಯಿಯ ಮತ್ತು ಮಗನ ಜೀವ ಸೂಕ್ತ ನಿಧಿಯ ಬೆಂಬಲದಿಂದಾಗಿ ಉಳಿಸಲು ಸಾಧ್ಯವಾಯಿತು. ಪ್ರತಿಯೊಬ್ಬ ಬಡವರೂ ವಿಮಾ ಸೌಲಭ್ಯವನ್ನು ಹೊಂದಿದಾಗ, ಪ್ರತೀ ಮಗುವಿಗೂ ಕಲಿಕೆಯ ಅವಕಾಶ ದೊರೆತಾಗ, ಪ್ರತಿಯೊಬ್ಬ ರೈತರೂ  ಕೆ.ಸಿ.ಸಿ. ಕಾರ್ಡ್ ಹೊಂದಿದಾಗ, ಪ್ರತೀ ಗ್ರಾಮವೂ ಉತ್ತಮ ರಸ್ತೆಯನ್ನು ಹೊಂದಿದಾಗ ಬಡವರ ಆತ್ಮವಿಶ್ವಾಸ ವೃದ್ಧಿಸುತ್ತದೆ, ಬಡವರ ಬದುಕು ಸುಲಭವಾಗುತ್ತದೆ, ನನ್ನ ದೇಶದ ಪ್ರತಿಯೊಬ್ಬ ನಾಗರಿಕನೂ ಸಶಕ್ತಗೊಳ್ಳುತ್ತಾನೆ. ನನ್ನ ಬಡ ನಾಗರಿಕರೂ ಸಶಕ್ತೀಕರಣಗೊಳ್ಳುತ್ತಾರೆ. ಈ ವಿಶ್ವಾಸ, ನಂಬಿಕೆಯು ಸಮೃದ್ಧಿಯ ಮೂಲ. ಆದುದರಿಂದಾಗಿಯೇ ನಾನು ಕೆಂಪುಕೋಟೆಯಿಂದ ಹೇಳಿದ್ದೆ, ಈಗ ನಾವು ಯೋಜನೆಗಳ ಫಲಾನುಭವಿಗಳನ್ನು ತಲುಪಬೇಕು, ಯೋಜನೆಗಳ ಪೂರ್ಣ ಪ್ರಯೋಜನಗಳು ಎಲ್ಲರಿಗೂ ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ಸಾಗಬೇಕು. ಇಂದು ತ್ರಿಪುರಾ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯನ್ನಿಟ್ಟಿರುವುದು ನನಗೆ ಬಹಳ ಸಂತೋಷದ ಸಂಗತಿಯಾಗಿದೆ.ಈ ವರ್ಷ ತ್ರಿಪುರಾವು ರಾಜ್ಯದ ಸ್ಥಾನ ಮಾನ ಪಡೆದು 50 ವರ್ಷ ಪೂರ್ಣಗೊಳ್ಳುತ್ತಿದೆ, ಈ ನಿರ್ಧಾರ ಬಹಳ ದೊಡ್ಡ ಸಾಧನೆ. ಹಳ್ಳಿಗಳ ಮತ್ತು ಬಡವರ ಕಲ್ಯಾಣಕ್ಕಾಗಿರುವ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಈಗಾಗಲೇ ತ್ರಿಪುರಾವು ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ಗ್ರಾಮ ಸಮೃದ್ಧಿ ಯೋಜನಾವು ತ್ರಿಪುರಾದ ಈ ದಾಖಲೆಯನ್ನು ಇನ್ನಷ್ಟು ಸುಧಾರಿಸಲಿದೆ. ಪ್ರತೀ ಹಳ್ಳಿಯೂ ಮತ್ತು ಪ್ರತೀ ಬಡ ಕುಟುಂಬವೂ 20 ಕ್ಕೂ ಅಧಿಕ ಮೂಲ ಸೌಕರ್ಯಗಳನ್ನು ಪಡೆಯುವುದನ್ನು ಇದು ಖಾತ್ರಿಗೊಳಿಸುತ್ತದೆ. ನಿಗದಿತ ಸಮಯಕ್ಕೆ ಮೊದಲು ಹಳ್ಳಿಗಳು, ಗ್ರಾಮಗಳು 100% ಗುರಿಯನ್ನು ಸಾಧಿಸುವ ಚಿಂತನೆಯನ್ನು ಮತ್ತು ಅವುಗಳಿಗೆ ಲಕ್ಷಾಂತರ ರೂಪಾಯಿ ಪ್ರೋತ್ಸಾಹ ಧನವನ್ನು ನೀಡುವ ಚಿಂತನೆಯನ್ನು ನಾನೂ ಮೆಚ್ಚಿಕೊಂಡಿದ್ದೇನೆ. ಇದೂ ಕೂಡಾ ಅಭಿವೃದ್ಧಿಗಾಗಿ ಆರೋಗ್ಯಪೂರ್ಣ ಸ್ಪರ್ಧೆಯನ್ನು ಉಂಟು ಮಾಡುತ್ತದೆ. 

ಸ್ನೇಹಿತರೇ,

ತ್ರಿಪುರಾ ಸರಕಾರ ಇಂದು ಬಡವರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡಿದೆ ಮತ್ತು ಬಡವರ ಬಗ್ಗೆ ಸೂಕ್ಷ್ಮತ್ವವನ್ನು ಹೊಂದಿದೆ. ನಮ್ಮ ಮಾಧ್ಯಮ ಸ್ನೇಹಿತರು ಇದರ ಬಗ್ಗೆ ಸಾಕಷ್ಟು ಮಾತನಾಡುವುದಿಲ್ಲ. ಆದುದರಿಂದ ನಾನು ಇಂದು ಒಂದು ಉದಾಹರಣೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ಪಿ.ಎಂ.ಆವಾಸ್ ಯೋಜನಾದ (ಗ್ರಾಮೀಣ)  ಕೆಲಸ ತ್ರಿಪುರಾದಲ್ಲಿ ಆರಂಭಗೊಂಡಾಗ ಕಚ್ಚಾ ಮನೆಗೆ ಸಂಬಂಧಿಸಿದ ಅಧಿಕೃತ ವ್ಯಾಖ್ಯಾನದ ಸಮಸ್ಯೆ ತಲೆದೋರಿತು. ಹಿಂದಿನ ಸರಕಾರ ಮನೆಯ ಮೇಲ್ಚಾವಣಿ ಕಬ್ಬಿಣದ ತಗಡಿನಿಂದ ಮಾಡಿದ್ದರೆ ಅದನ್ನು ಕಚ್ಚಾ ಮನೆ ಎಂದು ಪರಿಗಣಿಸಲಾಗದು ಎಂಬ ವ್ಯವಸ್ಥೆಯನ್ನು ರೂಪಿಸಿತ್ತು. ಇದರಿಂದಾಗಿ ಮನೆಯೊಳಗಿನ ಸೌಲಭ್ಯಗಳು ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದರೂ, ಮನೆಯ ಗೋಡೆಗಳು ಮಣ್ಣಿನಿಂದ ಮಾಡಲ್ಪಟ್ಟವಾಗಿದ್ದರೂ, ಆ ಮನೆಯನ್ನು ಮೇಲ್ಚಾವಣಿಯಲ್ಲಿ ಕಬ್ಬಿಣದ ತಗಡು ಇರುವ ಕಾರಣಕ್ಕೆ ಕಚ್ಚಾ ಮನೆ ಎಂದು ಪರಿಗಣಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ತ್ರಿಪುರಾದ ಸಾವಿರಾರು ಗ್ರಾಮೀಣ ಕುಟುಂಬಗಳು ಪಿ.ಎಂ.ಆವಾಸ್ ಯೋಜನೆಯ ಪ್ರಯೋಜನಗಳಿಂದ ವಂಚಿತವಾಗಿದ್ದವು. ನಾನು ನನ್ನ ಸಹೋದ್ಯೋಗಿ ಬಿಪ್ಲಾಬ್ ದೇಬ್ ಜೀ ಅವರನ್ನು ಶ್ಲಾಘಿಸುತ್ತೇನೆ, ಯಾಕೆಂದರೆ ಅವರು ಈ ವಿಷಯದೊಂದಿಗೆ  ನನ್ನಲ್ಲಿಗೆ ಬಂದರು. ಅವರು ಎಲ್ಲ ವಿವರಗಳನ್ನೂ ಸಾಕ್ಷ್ಯಾಧಾರ  ಸಹಿತ ಕೇಂದ್ರ ಸರಕಾರದೆದುರು ಇಟ್ಟರು. ಆ ಬಳಿಕ ಭಾರತ ಸರಕಾರ ತನ್ನ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿತು. ವ್ಯಾಖ್ಯಾನವನ್ನೂ ಬದಲಾಯಿಸಿತು. ಮತ್ತು ಅದರಿಂದಾಗಿ ತ್ರಿಪುರಾದ ಒಂದು ಲಕ್ಷದ ಎಂಬತ್ತು ಸಾವಿರಕ್ಕೂ ಅಧಿಕ ಬಡ ಕುಟುಂಬಗಳು ಪಕ್ಕಾ ಮನೆ ಪಡೆಯುವಂತಾಯಿತು. ಇದುವರೆಗೆ ತ್ರಿಪುರಾದ 50 ಸಾವಿರ ಸ್ನೇಹಿತರು ಪಕ್ಕಾ ಮನೆಗಳನ್ನು ಪಡೆದಿದ್ದಾರೆ. ಇತ್ತೀಚೆಗೆ ಒಂದೂವರೆ ಲಕ್ಷಕ್ಕೂ ಅಧಿಕ  ಕುಟುಂಬಗಳಿಗೆ ಅವರ ಮನೆಗಳನ್ನು ಕಟ್ಟಲು ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದಿನ ಸರಕಾರಗಳು ಹೇಗೆ ಕೆಲಸ ಮಾಡುತ್ತಿದ್ದವು  ಮತ್ತು ನಮ್ಮ ಎರಡು ಇಂಜಿನ್ ಗಳ ಸರಕಾರ ಹೇಗೆ  ಕೆಲಸ ಮಾಡುತ್ತಿದೆ ಎಂಬುದನ್ನು ನೀವು ಊಹಿಸಿಕೊಳ್ಳಬಹುದು.

ಸಹೋದರರೇ ಮತ್ತು ಸಹೋದರಿಯರೇ,

ಯಾವುದೇ ವಲಯದ ಅಭಿವೃದ್ಧಿಗೆ, ಸಂಪನ್ಮೂಲಗಳ ಜೊತೆಗೆ ನಾಗರಿಕರ ಕೌಶಲ್ಯಗಳು ಮತ್ತು ಸಾಮರ್ಥ್ಯ ಅಷ್ಟೇ ಮುಖ್ಯ. ಈ ಕ್ಷಣದ ಆವಶ್ಯಕತೆ ಎಂದರೆ ನಮ್ಮ ಈಗಿನ ಮತ್ತು ಮುಂದಿನ ತಲೆಮಾರುಗಳು ನಮಗಿಂತ ಹೆಚ್ಚು ಸಾಮರ್ಥ್ಯಶೀಲರಾಗುವಂತೆ ಖಾತ್ರಿಪಡಿಸುವುದು. ಅದು ಅನಿವಾರ್ಯ ಕೂಡಾ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ, ಇದರಿಂದ 21 ನೇ ಶತಮಾನದ ನವ ಭಾರತವನ್ನು ನಿರ್ಮಾಣ  ಮಾಡುವ ದೂರದೃಷ್ಟಿಯ ಯುವಜನತೆ ರೂಪುಗೊಳ್ಳಲಿದ್ದಾರೆ. ಸ್ಥಳೀಯ ಭಾಷೆಯಲ್ಲಿ ಕಲಿಕೆಗೂ ಅಷ್ಟೇ ಮಹತ್ವ ಇದರಲ್ಲಿ ನೀಡಲಾಗಿದೆ. ಈಗ ತ್ರಿಪುರಾದ ವಿದ್ಯಾರ್ಥಿಗಳು “ಮಿಷನ್ -100, ವಿದ್ಯಾ ಜ್ಯೋತಿ” ಆಂದೋಲನದ ನೆರವು ಪಡೆಯಲಿದ್ದಾರೆ. ಶಾಲೆಗಳಲ್ಲಿ ಆಧುನಿಕ ಸೌಲಭ್ಯಗಳನ್ನು ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಶಿಕ್ಷಣ ಸುಲಭ ಲಭ್ಯವಾಗುತ್ತದೆ. ಅಟಲ್ ಟಿಂಕರಿಂಗ್ ಪ್ರಯೋಗಾಲಯ, ಐ.ಸಿ.ಟಿ. ಪ್ರಯೋಗಾಲಯಗಳು  ಮತ್ತು ವೃತ್ತಿ ಶಿಕ್ಷಣ ಪ್ರಯೋಗಾಲಯಗಳನ್ನು ಹೊಂದಿರುವ ಶಾಲೆಗಳು ತ್ರಿಪುರಾದ ಯುವ ಜನತೆಯನ್ನು ಅನ್ವೇಷಣೆಗಳೊಂದಿಗೆ, ನವೋದ್ಯಮ ಮತ್ತು ಯೂನಿಕಾರ್ನ್ ಗಳೊಂದಿಗೆ  ಸ್ವಾವಲಂಬಿ ಭಾರತಕ್ಕಾಗಿ ತಯಾರು ಮಾಡಲಿವೆ.

ಸ್ನೇಹಿತರೇ,

ಕೊರೊನಾದ ಸಂಕಷ್ಟಮಯ ಪರಿಸ್ಥಿತಿಯಲ್ಲಿಯೂ ನಮ್ಮ ಯುವ ಜನತೆ ಶಿಕ್ಷಣಕ್ಕೆ ಸಂಬಂಧಿಸಿ ಯಾವುದೇ ತೊಂದರೆ ಎದುರಿಸದಂತೆ ಖಾತ್ರಿಪಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಳೆಯಿಂದ, 15 ರಿಂದ 18 ವರ್ಷದೊಳಗಿನ ಗುಂಪಿನ ಮಕ್ಕಳಿಗೆ ಉಚಿತ ಲಸಿಕಾ ಕಾರ್ಯಕ್ರಮ ದೇಶಾದ್ಯಂತ ಆರಂಭಗೊಳ್ಳುತ್ತಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ನಿಶ್ಚಿಂತೆಯಿಂದ ಮುದುವರೆಸಿಕೊಂಡು ಹೋಗುವುದು ಬಹಳ ಮುಖ್ಯ. ಯಾವುದೇ ಚಿಂತೆಗಳಿಲ್ಲದೆ ಅವರು ಪರೀಕ್ಷೆ ಬರೆಯುವಂತಾಗಬೇಕು. ತ್ರಿಪುರಾದಲ್ಲಿ ಲಸಿಕಾಕರಣ ಆಂದೋಲನ ಬಹಳ ತ್ವರಿತಗತಿಯಿಂದ ಸಾಗುತ್ತಿದೆ. 80 ಪ್ರತಿಶತಕ್ಕಿಂತ ಅಧಿಕ ಮಂದಿ ಮೊದಲ ಡೋಸಿನ ಲಸಿಕೆ ಪಡೆದಿದ್ದಾರೆ ಮತ್ತು 65 ಪ್ರತಿಶತಕ್ಕಿಂತ ಹೆಚ್ಚು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15 ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಗುರಿಯನ್ನು ತ್ರಿಪುರಾ ಪೂರ್ಣವಾಗಿ ಈಡೇರಿಸುತ್ತದೆ ಎಂಬ ಬಗ್ಗೆ ನನಗೆ ಭರವಸೆ ಇದೆ.

ಸ್ನೇಹಿತರೇ,

ಇಂದು ಎರಡು ಇಂಜಿನ್ ಗಳ ಸರಕಾರವು ಹಳ್ಳಿಗಳಲ್ಲಿ ಮತ್ತು ನಗರಗಳಲ್ಲಿ ಸಂಪೂರ್ಣ ಮತ್ತು ಸಹ್ಯ ಅಭಿವೃದ್ಧಿಗೆ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. ಕೃಷಿಯಿಂದ ಹಿಡಿದು ಅರಣ್ಯೋತ್ಪನ್ನಗಳು ಮತ್ತು ಸ್ವ ಸಹಾಯ ಗುಂಪುಗಳು ಸಹಿತ ಮಾಡಲಾಗಿರುವ ಸರ್ವಾಂಗೀಣ ಕೆಲಸಗಳು  ನಮ್ಮ ಬದ್ಧತೆಗೆ ಉದಾಹರಣೆಯಾಗಿವೆ. ಅದು ಸಣ್ಣ ರೈತರಿರಲಿ, ಮಹಿಳೆಯರು ಅಥವಾ ಅರಣ್ಯೋತ್ಪನ್ನಗಳನ್ನು ಅವಲಂಬಿಸಿರುವ ನಮ್ಮ ಬುಡಕಟ್ಟು ಸಂಗಾತಿಗಳಿರಲಿ ಇಂದು ಅವರೆಲ್ಲರೂ ಸಂಘಟಿತರಾಗುತ್ತಿದ್ದಾರೆ ಮತ್ತು ಬಲಿಷ್ಟ ಶಕ್ತಿಯಾಗಿ ರೂಪುಗೊಳ್ಳುತ್ತಿದ್ದಾರೆ. ತ್ರಿಪುರಾವು “ಮುಲಿ ಬ್ಯಾಂಬೊ ಕುಕೀಸ್” ಪ್ಯಾಕೇಜ್ಡ್ ಉತ್ಪನ್ನವನ್ನು ಇದೇ ಮೊದಲ ಬಾರಿಗೆ ಆರಂಭಿಸಿದೆ. ಮತ್ತು ಇದರ ಕೀರ್ತಿ ಇದರಲ್ಲಿ ಪ್ರಮುಖ ಪಾತ್ರವಹಿಸಿದ ನಮ್ಮ ಮಾತೆಯರಿಗೆ ಮತ್ತು ಸಹೋದರಿಯರಿಗೆ ಸೇರಬೇಕು. ತ್ರಿಪುರಾವು ದೇಶಕ್ಕೆ ಏಕ ಬಳಕೆ ಪ್ಲಾಸ್ಟಿಕ್ಕಿಗೆ ಪರ್ಯಾಯವಾದುದನ್ನು ಕೊಡುವ ನಿಟ್ಟಿನಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಬಹುದಾಗಿದೆ. ಇಲ್ಲಿ ತಯಾರಾಗುವ ಸೆಣಬಿನ ಕಸಬರಿಕೆಗಳು, ಸೆಣಬಿನ ಬಾಟಲಿಗಳು,ಇತ್ಯಾದಿಗಳಿಗೆ ದೇಶದಲ್ಲಿ ಭಾರೀ ದೊಡ್ಡ ಮಾರುಕಟ್ಟೆ ರೂಪುಗೊಳ್ಳುತ್ತಿದೆ. ಇದರಿಂದಾಗಿ ಸಾವಿರಾರು ಮಂದಿಗೆ ಉದ್ಯೋಗ ಲಭಿಸುತ್ತಿದೆ. ಸೆಣಬಿನ ಉತ್ಪನ್ನಗಳ ತಯಾರಿಕಾ ವಲಯದಲ್ಲಿ ಸ್ವ ಉದ್ಯೋಗಗಳು ಸೃಜಿಸಲ್ಪಡುತ್ತಿವೆ. ಸೆಣಬಿಗೆ ಸಂಬಂಧಪಟ್ಟ ಕಾನೂನಿನ ಸುಧಾರಣೆಯಿಂದಾಗಿ ತ್ರಿಪುರಾಕ್ಕೆ ಬಹಳಷ್ಟು ಪ್ರಯೋಜನಗಳು ಲಭಿಸಿವೆ.

ಸ್ನೇಹಿತರೇ,

ಇಲ್ಲಿ ತ್ರಿಪುರಾದಲ್ಲಿ ಸಾವಯವ ಕೃಷಿಗೆ ಸಂಬಂಧಿಸಿ ಶ್ಲಾಘನೀಯ ಕೆಲಸ ಆಗುತ್ತಿದೆ. ಅನಾನಾಸು ಇರಲಿ, ಸುವಾಸನೆಯ ಅಕ್ಕಿ, ಶುಂಠಿ, ಅರಸಿನ,  ಮೆಣಸು ಇರಲಿ, ಇವಕ್ಕೆಲ್ಲ ಇಂದು ದೇಶದಲ್ಲಿ  ಮತ್ತು ವಿಶ್ವದಲ್ಲಿ  ಭಾರೀ ಮಾರುಕಟ್ಟೆ ಇದೆ. ಇಂದು ತ್ರಿಪುರಾದ ಸಣ್ಣ ರೈತರು ಈ ಉತ್ಪನ್ನಗಳನ್ನು ಅಗರ್ತಾಲಾದಿಂದ ದಿಲ್ಲಿ ಸಹಿತ ದೇಶದ ವಿವಿಧ ನಗರಗಳಿಗೆ ಕಿಸಾನ್ ರೈಲಿನ ಮೂಲಕ ಸಾಗಾಟ ಮಾಡುತ್ತಿದ್ದಾರೆ. ಇದರಲ್ಲಿ ಸಾಗಾಟ ವೆಚ್ಚವೂ ಕಡಿಮೆ ಮತ್ತು ತಗಲುವ ಸಮಯವೂ ಕಡಿಮೆ. ಮಹಾರಾಜಾ ವೀರ ವಿಕ್ರಮ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಸರಕು ಕೇಂದ್ರ ಸಾವಯವ ಕೃಷಿ ಉತ್ಪನ್ನಗಳು ವಿದೇಶೀ ಮಾರುಕಟ್ಟೆ ತಲುಪುವುದನ್ನು ಸುಲಭ ಸಾಧ್ಯ ಮಾಡಲಿವೆ.

ಸ್ನೇಹಿತರೇ,

ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಲ್ಲಿಯೂ ತ್ರಿಪುರಾ ನಾಯಕನಾಗಿರುವಂತೆ ನೋಡಿಕೊಳ್ಳುವ ಅಭ್ಯಾಸವನ್ನು ನಾವು ರೂಢಿಸಿಕೊಳ್ಳಬೇಕು. ದೇಶದ ಜನಸಾಮಾನ್ಯರು, ದೂರದ ದುರ್ಗಮ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪಾಲುದಾರರಾಗಿರಬೇಕು ಮತ್ತು ಸಶಕ್ತೀಕರಣಗೊಳ್ಳಬೇಕು ಹಾಗು ಸ್ವಾವಲಂಬಿಯಾಗಬೇಕು ಎಂಬ ನಮ್ಮ ದೃಢ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಈ ನಿರ್ಧಾರಗಳಿಂದ ಪ್ರೇರಣೆ ಪಡೆದುಕೊಂಡು ನಾವು ದುಪ್ಪಟ್ಟು ಆತ್ಮ ವಿಶ್ವಾಸದಿಂದ ಕೆಲಸದಲ್ಲಿ ನಿರತರಾಗಿರುತ್ತೇವೆ. ನಿಮ್ಮ ಪ್ರೀತಿ, ನಿಮ್ಮ ಒಲುಮೆ, ಮತ್ತು ನಿಮ್ಮ ನಂಬಿಕೆ ನಮ್ಮ ಬಹಳ ದೊಡ್ಡ ಆಸ್ತಿಗಳು. ಮತ್ತು ಇಂದು ನಾನು ವಿಮಾನ ನಿಲ್ದಾಣದಿಂದ ಬರುವಾಗ ದಾರಿಯಲ್ಲಿ ಪ್ರತಿಯೊಬ್ಬರನ್ನೂ ನೋಡಿದೆ ಮತ್ತು ಅವರ ಉತ್ಸಾಹದಾಯಕ ಧ್ವನಿಗಳನ್ನು ಕೇಳಿದೆ. ಎರಡು ಇಂಜಿನ್ ಗಳ ಶಕ್ತಿಯಿಂದ ಅಭಿವೃದ್ಧಿಯನ್ನು ದುಪ್ಪಟ್ಟು ಮಾಡುವ ಮೂಲಕ ನಾನು ನಿಮ್ಮ ಪ್ರೀತಿಯನ್ನು ಹಿಂತಿರುಗಿಸುತ್ತೇನೆ. ಮತ್ತು ತ್ರಿಪುರಾದ ಜನತೆಯು  ನಮ್ಮ ಮೇಲೆ ತೋರಿದ ಪ್ರೀತಿ ಮತ್ತು ಒಲುಮೆ  ಭವಿಷ್ಯದಲ್ಲಿಯೂ ನಮ್ಮ ಮೇಲಿರುತ್ತದೆ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, ನಾನು ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮಗೆಲ್ಲ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಾತೆ ತ್ರಿಪುರ ಸುಂದರಿಯಲ್ಲಿ ನಿಮ್ಮ ಕುಟುಂಬದ ಸಮೃದ್ಧಿಗಾಗಿ ಮತ್ತು ನಿಮ್ಮ ರಾಜ್ಯದ ಸರ್ವಾಂಗೀಣ ಆಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಧನ್ಯವಾದಗಳು! ಜೊಟೌನೋ ಹಾಂಬೈ

ಭಾರತ್ ಮಾತಾ ಕೀ ಜೈ!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Double engine govt becoming symbol of good governance, says PM Modi

Media Coverage

Double engine govt becoming symbol of good governance, says PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government