"ಸ್ವಾತಂತ್ರ್ಯದ 100ನೇ ವರ್ಷದವರೆಗಿನ ನಮ್ಮ ಈಗಿನ ಪ್ರಯಾಣದಲ್ಲಿ ಹೊಸ ಅಗತ್ಯಗಳು ಮತ್ತು ಹೊಸ ಸವಾಲುಗಳಿಗೆ ಅನುಗುಣವಾಗಿ ನಮ್ಮ ಕೃಷಿಯನ್ನು ಹೊಂದಿಸಿಕೊಳ್ಳಬೇಕು"
"ನಾವು ನಮ್ಮ ಕೃಷಿಯನ್ನು ರಸಾಯನಶಾಸ್ತ್ರದ ಪ್ರಯೋಗಾಲಯದಿಂದ ಹೊರತಂದು, ಪ್ರಕೃತಿಯ ಪ್ರಯೋಗಾಲಯಕ್ಕೆ ಒಡ್ಡಬೇಕಿದೆ. ನಾನು ಮಾತನಾಡುತ್ತಿರುವ ಪ್ರಕೃತಿಯ ಪ್ರಯೋಗಾಲಯವು ಸಂಪೂರ್ಣವಾಗಿ ವಿಜ್ಞಾನ ಆಧಾರಿತವಾಗಿದೆ"
"ನಾವು ಕೃಷಿಯ ಪ್ರಾಚೀನ ಜ್ಞಾನವನ್ನು ಮತ್ತೆ ಕಲಿಯುವುದಷ್ಟೇ ಅಲ್ಲ, ಆಧುನಿಕ ಕಾಲಕ್ಕೆ ತಕ್ಕಂತೆ ಅದನ್ನು ತೀಕ್ಷ್ಣಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ, ನಾವು ಪ್ರಾಚೀನ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಚೌಕಟ್ಟಿನಲ್ಲಿ ಹೊಸದಾಗಿ ಸಂಶೋಧನೆ ಮಾಡಬೇಕು"
"ನೈಸರ್ಗಿಕ ಕೃಷಿಯಿಂದ ಹೆಚ್ಚು ಪ್ರಯೋಜನ ಪಡೆಯಲಿರುವವರಲ್ಲಿ ದೇಶದ ಶೇ 80% ರೈತರು ಸೇರಿದ್ದಾರೆ”
"21ನೇ ಶತಮಾನದ `ಪರಿಸರಕ್ಕಾಗಿ ಜೀವನಶೈಲಿ'ಯ (Lifestyle for Environment’- LIFE) ಜಾಗತಿಕ ಧ್ಯೇಯವನ್ನು ಭಾರತ ಮತ್ತು ದೇಶದ ರೈತರು ಮುನ್ನಡೆಸಲಿದ್ದಾರೆ"
"ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಪ್ರತಿ ಪಂಚಾಯಿತಿಯ ಕನಿಷ್ಠ ಒಂದು ಹಳ್ಳಿಯನ್ನು ಸಂಪೂರ್ಣ ನೈಸರ್ಗಿಕ ಕೃಷಿ ಗ್ರಾಮವಾಗಿಸಲು ಪ್ರಯತ್ನಗಳು ನಡೆಯಬೇಕು "
ಭಾರತ ಮಾತೆಯ ಭೂಮಿಯನ್ನು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳಿಂದ ಮುಕ್ತಗೊಳಿಸುವ ಪ್ರತಿಜ್ಞೆಯನ್ನು ಕೈಗೊಳ್ಳೋಣ

ನಮಸ್ಕಾರ,

ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ಜಿ, ಗೃಹ ಮತ್ತು ಸಹಕಾರ ಸಚಿವರಾದ  ಶ್ರೀ ಅಮಿತ್ ಭಾಯಿ ಶಾ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ  ನರೇಂದ್ರ ಸಿಂಗ್ ತೋಮರ್ ಜಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಭಾಯಿ ಪಟೇಲ್ ಜಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಇತರ ಎಲ್ಲ ಗಣ್ಯರು, ಮತ್ತು ಈ ಕಾರ್ಯಕ್ರಮದ ಭಾಗವಾಗಿರುವ ದೇಶಾದ್ಯಂತದ ನನ್ನ ಸಾವಿರಾರು ರೈತ ಸಹೋದರ ಸಹೋದರಿಯರೇ.  ಇಂದು ದೇಶದ ಕೃಷಿ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ದಿನ. ನೈಸರ್ಗಿಕ ಕೃಷಿಯ ರಾಷ್ಟ್ರೀಯ ಸಮಾವೇಶಕ್ಕೆ ದೇಶಾದ್ಯಂತದ ರೈತರನ್ನು ಸೇರುವಂತೆ ನಾನು ಕೇಳಿಕೊಂಡಿದೆ. ಕೃಷಿ ಸಚಿವ ತೋಮರ್ ಜಿ ಮಾಹಿತಿ ನೀಡಿರುವಂತೆ, ಸುಮಾರು ಎಂಟು ಕೋಟಿ ರೈತರು ತಂತ್ರಜ್ಞಾನದ ಮೂಲಕ ದೇಶದ ಮೂಲೆ ಮೂಲೆಯಿಂದ ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ನಾನು ನನ್ನ ಎಲ್ಲಾ ರೈತ ಸಹೋದರ ಸಹೋದರಿಯರನ್ನು ಸ್ವಾಗತಿಸುತ್ತೇನೆ. ನಾನು ಆಚಾರ್ಯ ದೇವವ್ರತ್ ಜಿ ಅವರನ್ನು   ಹೃದಯದಾಳದಿಂದ  ಅಭಿನಂದಿಸುತ್ತೇನೆ. ವಿದ್ಯಾರ್ಥಿಯಂತೆ ಅವರ ಮಾತನ್ನು ಬಹಳ ಗಮನವಿಟ್ಟು ಕೇಳುತ್ತಿದ್ದೆ. ನಾನೇನು ರೈತನಲ್ಲ, ಆದರೆ ನೈಸರ್ಗಿಕ ಕೃಷಿಗೆ ಏನು ಬೇಕು ಮತ್ತು ಏನು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಅವರು ಅದನ್ನು ತುಂಬಾ ಸರಳವಾದ ಪದಗಳಲ್ಲಿ ವಿವರಿಸಿದರು. ಅವರ ಸಾಧನೆಗಳು ಮತ್ತು ಅವರ ಯಶಸ್ವಿ ಪ್ರಯೋಗಗಳ ಬಗ್ಗೆ ನನಗೆ ತಿಳಿದಿರುವ ಕಾರಣ ನಾನು ಅವರ ಮಾತುಗಳನ್ನು ಕೇಳಲು ಕುಳಿತುಕೊಂಡೆ. ನಮ್ಮ ದೇಶದ ರೈತರು ಅದರ  ಪ್ರಯೋಜನಗಳ ಬಗ್ಗೆ ಅವರು ಹೇಳಿದ್ದನ್ನು ಎಂದಿಗೂ ಕಡಿಮೆ ಅಂದಾಜು ಮಾಡುವುದಿಲ್ಲ ಮತ್ತು ನಿರ್ಲಕ್ಷಿಸುವುದಿಲ್ಲ.

ಸ್ನೇಹಿತರೇ,

ಈ ಸಮಾವೇಶವು ಗುಜರಾತ್‌ನಲ್ಲಿ ನಡೆಯುತ್ತಿದೆ ಆದರೆ ಇದರ ವ್ಯಾಪ್ತಿ ಮತ್ತು ಪರಿಣಾಮವು ಭಾರತದ ಪ್ರತಿಯೊಬ್ಬ ರೈತರ ಮೇಲೂ ಇದೆ. ಕೃಷಿಯ ವಿವಿಧ ಆಯಾಮಗಳು, ಆಹಾರ ಸಂಸ್ಕರಣೆ ಮತ್ತು ನೈಸರ್ಗಿಕ ಕೃಷಿಯಂತಹ ಸಮಸ್ಯೆಗಳು 21 ನೇ ಶತಮಾನದಲ್ಲಿ ಭಾರತೀಯ ಕೃಷಿಯನ್ನು ಪರಿವರ್ತಿಸುವಲ್ಲಿ ಬಹಳ ದೂರ ಸಾಗುತ್ತವೆ.  ಈ ಸಮಾವೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಒಪ್ಪಂದಗಳ ಕುರಿತು ಚರ್ಚಿಸಲಾಗಿದ್ದು, ಪ್ರಗತಿಯೂ ಆಗಿದೆ. ಎಥೆನಾಲ್, ಸಾವಯವ ಕೃಷಿ ಮತ್ತು ಆಹಾರ ಸಂಸ್ಕರಣೆಯತ್ತ ತೋರುತ್ತಿರುವ ಉತ್ಸಾಹವು ಹೊಸ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಗುಜರಾತ್‌ನಲ್ಲಿ ತಂತ್ರಜ್ಞಾನ ಮತ್ತು ನೈಸರ್ಗಿಕ ಕೃಷಿಯ ನಡುವಿನ ಒಟ್ಟಾದ ಪ್ರಯೋಗಗಳು ಇಡೀ ದೇಶಕ್ಕೆ ದಿಕ್ಕನ್ನು ತೋರಿಸುತ್ತಿವೆ ಎನ್ನುವ ತೃಪ್ತಿ ನನಗಿದೆ.  ತಮ್ಮ ಅನುಭವಗಳನ್ನು ಹಂಚಿಕೊಂಡು ದೇಶದ ರೈತರಿಗೆ ನೈಸರ್ಗಿಕ ಕೃಷಿಯ ಬಗ್ಗೆ ಬಹಳ ಸವಿವರವಾಗಿ ವಿವರಿಸಿದ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಜಿ ಅವರಿಗೆ ನಾನು ಮತ್ತೊಮ್ಮೆ ವಿಶೇಷ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.

ಸ್ನೇಹಿತರೇ,

ಇಂದು ನಡೆಯುತ್ತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ ಹಿಂದಿನದನ್ನು ನೋಡಲು ಮತ್ತು ಅನುಭವಗಳಿಂದ ಕಲಿಯಲು ಮತ್ತು ಹೊಸ ಮಾರ್ಗಗಳನ್ನು ಸೆಳೆಯುವ ಸಮಯವಾಗಿದೆ. ಸ್ವಾತಂತ್ರ್ಯಾನಂತರ ಹಲವಾರು ದಶಕಗಳ ಕಾಲ ಕೃಷಿಯ ಬೆಳವಣಿಗೆ ಮತ್ತು ದಿಕ್ಕು ಹೇಗೆ ನಡೆಯಿತು ಎಂಬುದನ್ನು ನಾವು ಬಹಳ ಹತ್ತಿರದಿಂದ ನೋಡಿದ್ದೇವೆ. ಈಗ ನಮ್ಮ ಪ್ರಯಾಣವು ಸ್ವಾತಂತ್ರ್ಯದ 100 ನೇ ವರ್ಷದವರೆಗೆ, ಮುಂದಿನ 25 ವರ್ಷಗಳವರೆಗೆ, ಹೊಸ ಅವಶ್ಯಕತೆಗಳು ಮತ್ತು ಹೊಸ ಸವಾಲುಗಳಿಗೆ ಅನುಗುಣವಾಗಿ ನಮ್ಮ ಕೃಷಿಯನ್ನು ಅಳವಡಿಸಿಕೊಳ್ಳುವುದಾಗಿದೆ. ಕಳೆದ 6-7 ವರ್ಷಗಳಲ್ಲಿ, ರೈತರ ಆದಾಯವನ್ನು ಹೆಚ್ಚಿಸಲು ಬೀಜಗಳಿಂದ ಹಿಡಿದು ಮಾರುಕಟ್ಟೆವರೆಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.  ಮಣ್ಣಿನ ಪರೀಕ್ಷೆಯಿಂದ ಹಿಡಿದು ನೂರಾರು ಹೊಸ ಬೀಜಗಳನ್ನು ಸಿದ್ಧಪಡಿಸುವವರೆಗೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ  ಹಿಡಿದು ಎಂಎಸ್‌ಪಿಯನ್ನು ಉತ್ಪಾದನಾ ವೆಚ್ಚದ 1.5 ಪಟ್ಟು ಹೆಚ್ಚಿಸುವವರೆಗೆ, ಬಲವಾದ ನೀರಾವರಿ ಜಾಲದಿಂದ ಹಿಡಿದು ಕಿಸಾನ್ ರೈಲ್ಸ್‌ವರೆಗೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮತ್ತು ತೋಮರ್ ಜಿ ಅವರು ತಮ್ಮ ಭಾಷಣದಲ್ಲಿ ಈ ಕೆಲವು ಕ್ರಮಗಳನ್ನು ಸಹ  ಉಲ್ಲೇಖಿಸಿದ್ದಾರೆ.  ಕೃಷಿಯೊಂದಿಗೆ, ರೈತರು ಪಶುಸಂಗೋಪನೆ, ಜೇನುಸಾಕಣೆ, ಮೀನುಗಾರಿಕೆ, ಸೌರಶಕ್ತಿ ಮತ್ತು ಜೈವಿಕ ಇಂಧನಗಳಂತಹ ಅನೇಕ ಪರ್ಯಾಯ ಆದಾಯದ ಮೂಲಗಳೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುತ್ತಿದ್ದಾರೆ. ಗ್ರಾಮಗಳಲ್ಲಿ ಸಂಗ್ರಹಣೆ, ಶೈತ್ಯಾಗಾರದ ಸರಪಳಿ ಮತ್ತು ಆಹಾರ ಸಂಸ್ಕರಣೆಯನ್ನು ಬಲಪಡಿಸಲು ಲಕ್ಷ ಕೋಟಿಗಳನ್ನು ಒದಗಿಸಲಾಗಿದೆ. ಈ ಎಲ್ಲಾ ಪ್ರಯತ್ನಗಳು ರೈತರಿಗೆ ಸಂಪನ್ಮೂಲಗಳನ್ನು ನೀಡುತ್ತಿವೆ, ಅವರಿಗೆ ಬೇಕಾದ ಆಯ್ಕೆಯನ್ನು ನೀಡುತ್ತಿವೆ. ಆದರೆ ಒಂದು ಪ್ರಮುಖ ಪ್ರಶ್ನೆ ನಮ್ಮ ಮುಂದಿದೆ. ಮಣ್ಣು ಸ್ವತಃ  ಕೈ ಕೊಟ್ಟಾಗ ಏನಾಗುತ್ತದೆ? ಹವಾಮಾನವು ಬೆಂಬಲಿಸದಿದ್ದಾಗ ಮತ್ತು ಭೂಗರ್ಭದಲ್ಲಿರುವ ನೀರನ್ನು ನಿರ್ಬಂಧಿಸಿದಾಗ ಏನಾಗುತ್ತದೆ? ಇಂದು ಪ್ರಪಂಚದಾದ್ಯಂತ ಕೃಷಿಯು ಈ ಸವಾಲುಗಳನ್ನು ಎದುರಿಸುತ್ತಿದೆ. ಹಸಿರು ಕ್ರಾಂತಿಯಲ್ಲಿ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ಪ್ರಮುಖ ಪಾತ್ರವಹಿಸಿದವು ನಿಜ. ಆದರೆ ನಾವು ಅದೇ ಸಮಯದಲ್ಲಿ ಅದರ ಪರ್ಯಾಯಗಳ ಮೇಲೆ ಕೆಲಸ ಮಾಡುತ್ತಲೇ ಇರುತ್ತೇವೆ ಮತ್ತು ಅದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬುದು ಅಷ್ಟೇ ಸತ್ಯ. ಕೃಷಿಯಲ್ಲಿ ಬಳಸುವ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು. ಇದರ ಆಮದಿನ ಮೇಲೆ ಕೋಟ್ಯಂತರ ರೂಪಾಯಿಗಳ ಪರಿಣಾಮವಾಗಿ, ಕೃಷಿ ವೆಚ್ಚವೂ ಹೆಚ್ಚಾಗುತ್ತದೆ; ರೈತನ ಖರ್ಚು ಹೆಚ್ಚುತ್ತದೆ ಮತ್ತು ಬಡವರ ದಿನನಿತ್ಯದ ಖರ್ಚು ಹೆಚ್ಚಾಗುತ್ತದೆ. ಈ ಸಮಸ್ಯೆಯು ರೈತರ ಮತ್ತು ಎಲ್ಲಾ ದೇಶವಾಸಿಗಳ ಆರೋಗ್ಯಕ್ಕೂ ಸಂಬಂಧಿಸಿದೆ. ಆದ್ದರಿಂದ, ನಾವು ಅದರ ಬಗ್ಗೆ ಜಾಗೃತರಾಗಿರಬೇಕು.

 

ಸ್ನೇಹಿತರೇ,

ಗುಜರಾತಿ ಭಾಷೆಯಲ್ಲಿ ಒಂದು ಗಾದೆ ಇದೆ, ಇದನ್ನು ಪ್ರತಿ ಮನೆಯಲ್ಲೂ ಹೇಳಲಾಗುತ್ತದೆ, ''ಪಾನಿ ಆವೇ ತೇ ಪಹೇಲಾ ಪಾಲ್ ಬಂಧೇ'' ಅಂದರೆ, ಚಿಕಿತ್ಸೆಗಿಂತ  ನಿಗ್ರಹವು ಉತ್ತಮವಾಗಿದೆ. ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಇನ್ನಷ್ಟು ಉಲ್ಬಣಗೊಳ್ಳುವ ಮೊದಲು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ. ನಾವು ನಮ್ಮಕೃಷಿಯನ್ನು ರಸಾಯನಶಾಸ್ತ್ರದ ಪ್ರಯೋಗಾಲಯದಿಂದ ಹೊರತೆಗೆಯಬೇಕು ಮತ್ತು ಅದನ್ನು ಪ್ರಕೃತಿಯ ಪ್ರಯೋಗಾಲಯದೊಂದಿಗೆ ಸಂಪರ್ಕಿಸಬೇಕು. ನಾನು ಪ್ರಕೃತಿಯ ಪ್ರಯೋಗಾಲಯದ ಬಗ್ಗೆ ಮಾತನಾಡುವಾಗ, ಅದು ಸಂಪೂರ್ಣವಾಗಿ ವಿಜ್ಞಾನ ಆಧಾರಿತವಾಗಿರುತ್ತದೆ. ಆಚಾರ್ಯ ದೇವವ್ರತರೂ ಇದನ್ನು  ವಿವರಿಸಿದ್ದಾರೆ. ಇದನ್ನು ನಾವು ಚಿಕ್ಕ ಸಾಕ್ಷ್ಯಚಿತ್ರದಲ್ಲಿಯೂ ನೋಡಿದ್ದೇವೆ. ಅವರು ಹೇಳಿದಂತೆ, ನೀವು ಅವರ ಭಾಷಣಗಳನ್ನು ಅವರ ಪುಸ್ತಕದಲ್ಲಿ ಅಥವಾ ಯೂಟ್ಯೂಬ್‌ ನಲ್ಲಿ ಕಾಣಬಹುದು. ಗೊಬ್ಬರದಲ್ಲಿರುವ  ಸತ್ವ, ಆ ಅಂಶ ಪ್ರಕೃತಿಯಲ್ಲೂ ಇದೆ. ನಾವು ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾದ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆ, ಇದು ಅದರ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ದೇಶಿ ಹಸುಗಳೂ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುತ್ತಾರೆ ಹಲವು ತಜ್ಞರು. ಹಸುವಿನ ಸಗಣಿ ಮತ್ತು ಗೋಮೂತ್ರದಿಂದ ಪರಿಹಾರವನ್ನು  ಸಿದ್ಧಪಡಿಸಬಹುದು, ಇದು ಬೆಳೆಯನ್ನು ರಕ್ಷಿಸುತ್ತದೆ ಮತ್ತು ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಬೀಜದಿಂದ ಮಣ್ಣಿನವರೆಗೆ ಎಲ್ಲವನ್ನೂ ನೈಸರ್ಗಿಕ ರೀತಿಯಲ್ಲಿ ಸಂಸ್ಕರಿಸಬಹುದು. ಈ ಕೃಷಿಗೆ ರಸಗೊಬ್ಬರವಾಗಲಿ, ಕೀಟನಾಶಕವಾಗಲಿ ವೆಚ್ಚವಾಗುವುದಿಲ್ಲ. ಇದಕ್ಕೆ ಕಡಿಮೆ ನೀರಾವರಿ ಅಗತ್ಯವಿರುತ್ತದೆ ಮತ್ತು ಪ್ರವಾಹ ಮತ್ತು ಅನಾವೃಷ್ಟಿಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಕಡಿಮೆ ನೀರಾವರಿ ಭೂಮಿಯಾಗಿರಲಿ ಅಥವಾ ಹೆಚ್ಚುವರಿ ನೀರು ಇರುವ ಭೂಮಿಯಾಗಿರಲಿ, ನೈಸರ್ಗಿಕ ಕೃಷಿಯು ರೈತರಿಗೆ ವರ್ಷದಲ್ಲಿ ಅನೇಕ ಬೆಳೆಗಳನ್ನು ಬಿತ್ತಲು ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಗೋಧಿ, ಭತ್ತ, ದ್ವಿದಳ ಧಾನ್ಯಗಳು ಇತ್ಯಾದಿಗಳಿಂದ ಬರುವ ಕಡ್ಡಿಗಳನ್ನೂ ಈ ತಂತ್ರದಲ್ಲಿ ಸರಿಯಾಗಿ ಬಳಸುತ್ತಾರೆ.  ಅಂದರೆ, ಕಡಿಮೆ ವೆಚ್ಚ, ಗರಿಷ್ಠ ಲಾಭ. ನೈಸರ್ಗಿಕ ಕೃಷಿ ಎಂದರೆ ಇದೇ.

ಸ್ನೇಹಿತರೇ,

ಜಗತ್ತು ಹೆಚ್ಚು ಆಧುನಿಕವಾಗುತ್ತಾ ಹೋದಂತೆ, ಅದು 'ಬ್ಯಾಕ್ ಟು ಬೇಸಿಕ್' ಕಡೆಗೆ ಹೆಚ್ಚು ಸಾಗುತ್ತಿದೆ. ಈ ‘ಬ್ಯಾಕ್ ಟು ಬೇಸಿಕ್’ ನ ಅರ್ಥವೇನು?  ಇದರರ್ಥ ನಿಮ್ಮ ಮೂಲದೊಂದಿಗೆ ಸಂಪರ್ಕ ಸಾಧಿಸುವುದು! ಇದನ್ನು ರೈತ ಮಿತ್ರರಿಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳುವವರು ಯಾರಿದ್ದಾರೆ? ನಾವು ಬೇರುಗಳಿಗೆ ಹೆಚ್ಚು ನೀರು ಹಾಕುತ್ತೇವೆ, ಸಸ್ಯವು ಹೆಚ್ಚು ಬೆಳೆಯುತ್ತದೆ. ಭಾರತವು ಕೃಷಿ ಪ್ರಧಾನವಾದ ದೇಶ. ನಮ್ಮ ಸಮಾಜವು ಅಭಿವೃದ್ಧಿಗೊಂಡಿರುವುದು, ಸಂಪ್ರದಾಯಗಳನ್ನು ಆಚರಿಸುವುದು ಮತ್ತು ಹಬ್ಬಗಳನ್ನು ಕೃಷಿಯ ಸುತ್ತ ರೂಪಿಸಲಾಗಿದೆ.  ಇಂದು ದೇಶದ ಮೂಲೆ ಮೂಲೆಯಿಂದ ರೈತ ಮಿತ್ರರು ಸಂಪರ್ಕ ಹೊಂದಿದ್ದಾರೆ. ನೀವು ಹೇಳಿ, ನಿಮ್ಮ ಪ್ರದೇಶದ ಆಹಾರ, ಜೀವನಶೈಲಿ, ಹಬ್ಬಗಳು ಮತ್ತು ಸಂಪ್ರದಾಯಗಳು ನಮ್ಮ ಕೃಷಿ ಅಥವಾ ಬೆಳೆಗಳಿಂದ ಪ್ರಭಾವಿತವಾಗಿಲ್ಲವೇ? ನಮ್ಮ ನಾಗರೀಕತೆಯು ಕೃಷಿಯೊಂದಿಗೆ ತುಂಬಾ ಪ್ರವರ್ಧಮಾನಕ್ಕೆ ಬಂದಿರುವಾಗ, ನಮ್ಮ ಜ್ಞಾನ ಮತ್ತು ವಿಜ್ಞಾನವು ಕೃಷಿಯ ಬಗ್ಗೆ ಎಷ್ಟು ಶ್ರೀಮಂತ ಮತ್ತು ವೈಜ್ಞಾನಿಕವಾಗಿರಬೇಕು?  ಆದ್ದರಿಂದ, ಸಹೋದರ ಸಹೋದರಿಯರೇ, ಜಗತ್ತು ಸಾವಯವದ ಬಗ್ಗೆ ಮಾತನಾಡುವಾಗ, ಅದು ಪ್ರಕೃತಿಯ ಬಗ್ಗೆ ಮಾತನಾಡುತ್ತದೆ. ಮತ್ತು ಬ್ಯಾಕ್ ಟು ಬೇಸಿಕ್ಸ್ ಬಗ್ಗೆ ಪ್ರಸ್ತಾಪಿಸಿದಾಗ, ಅದರ  ಮೂಲಗಳು  ಭಾರತಕ್ಕೆ ಸಂಬಂಧಿಸಿರುವುದನ್ನು ಕಾಣುತ್ತೇವೆ.

ಸ್ನೇಹಿತರೇ,

ಕೃಷಿಗೆ ಸಂಬಂಧಿಸಿದ ಅನೇಕ ವಿದ್ವಾಂಸರು ಇಲ್ಲಿ ಇದ್ದಾರೆ, ಅವರು ಈ ವಿಷಯದ ಬಗ್ಗೆ ವ್ಯಾಪಕ ಸಂಶೋಧನೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಕೃಷಿಯ ಬಗ್ಗೆ ವ್ಯಾಪಕವಾದ ಸಂಶೋಧನೆಗಳನ್ನು ನಡೆಸಲಾಗಿದೆ ಮತ್ತು ಋಗ್ವೇದ ಮತ್ತು ಅಥರ್ವವೇದದಲ್ಲಿ ನಮ್ಮ ಪುರಾಣಗಳು, ಕೃಷಿ-ಪರಾಶರ ಮತ್ತು ಕಶ್ಯಪಿ ಕೃಷಿ ಸೂಕ್ತದಂತಹ ಪ್ರಾಚೀನ ಗ್ರಂಥಗಳವರೆಗೆ ಮತ್ತು ದಕ್ಷಿಣದಲ್ಲಿ ತಮಿಳುನಾಡಿನ ಸಂತ ತಿರುವಳ್ಳುವರ್ ಜಿಯವರಿಂದ ಉಲ್ಲೇಖವಿದೆ ಎಂದು ನಿಮಗೆ ತಿಳಿದಿದೆ. ಉತ್ತರದಲ್ಲಿ ಕೃಷಿಕ ಕವಿ ಘಾಘ್ ರವರ. ಒಂದು ಪದ್ಯವಿದೆ -

ಗೋಹಿತಃ ಕ್ಷೇತ್ರಗಾಮಿ ಚ,

ಕಾಲಜ್ಞೋ ಬೀಜ-ತತ್ಪರಃ.

ವಿತನ್ದ್ರಃ ಸರ್ವ ಶಸ್ಯಾಢ್ಯಃ,

ಕೃಷಕೋ ನ ಅವಸೀದತಿ॥

ಅದೇನೆಂದರೆ, ದನ, ಜಾನುವಾರುಗಳ ಕ್ಷೇಮವನ್ನು ಕಾಳಜಿ ವಹಿಸುವ, ಋತು ಮತ್ತು ಸಮಯದ ಬಗ್ಗೆ ತಿಳಿದಿರುವ, ಬೀಜದ ಬಗ್ಗೆ ತಿಳಿದಿರುವವ  ಮತ್ತು ಸೋಮಾರಿಯಾಗಿರದ ರೈತ ಎಂದಿಗೂ  ಚಿಂತೆಗೀಡಾಗುವುದಿಲ್ಲ ಮತ್ತು ಬಡವನಾಗುವುದಿಲ್ಲ. ಈ ಒಂದು ಪದ್ಯವು ಸಹಜ ಕೃಷಿಯ ಸೂತ್ರವೂ ಹೌದು, ನೈಸರ್ಗಿಕ ಕೃಷಿಯ ಸಾಮರ್ಥ್ಯವನ್ನು ಕೂಡ ಹೇಳುತ್ತದೆ. ಇದರಲ್ಲಿ ಉಲ್ಲೇಖಿಸಿರುವ ಎಲ್ಲಾ ಸಂಪನ್ಮೂಲಗಳು ನೈಸರ್ಗಿಕವಾಗಿ ಲಭ್ಯವಿವೆ. ಅದೇ ರೀತಿ ಮಣ್ಣನ್ನು ಫಲವತ್ತಾಗಿಸುವುದು ಹೇಗೆ, ಯಾವ ಬೆಳೆಗೆ ಯಾವಾಗ ನೀರು ಹಾಕಬೇಕು, ನೀರು ಉಳಿಸುವುದು ಹೇಗೆ ಎಂಬ ಹಲವು ಸೂತ್ರಗಳನ್ನು ನೀಡಲಾಗಿದೆ. ಇನ್ನೊಂದು ಅತ್ಯಂತ ಜನಪ್ರಿಯ ಪದ್ಯ-

ನೈರುತ್ಯರ್ಥಂ ಹಿ ಧಾನ್ಯಾನಾಂ ಜಲಂ ಭದ್ರೇ ವಿಮೋಚಯೇತ್ ।

ಮೂಲ ಮಾತ್ರುಂತು ಸಂಸ್ಥಾಪ್ಯ ಕಾರಯೇಜ್ಜಜ-ಮೋಕ್ಷಣಮ್॥

ಅಂದರೆ, ಬೆಳೆಯನ್ನು ಬಲಪಡಿಸಲು ಮತ್ತು ರೋಗದಿಂದ ರಕ್ಷಿಸಲು ಭಾದ್ರ ಮಾಸದಲ್ಲಿ (ಆಗಸ್ಟ್-ಸೆಪ್ಟೆಂಬರ್) ನೀರನ್ನು ತೆಗೆಯಬೇಕು. ಬೇರುಗಳ ತನಕ ಮಾತ್ರ ನೀರು ಹೊಲದಲ್ಲಿ ಉಳಿಯಬೇಕು ಎಂದು ಅರ್ಥ. ಇದೇ ರೀತಿ ಕವಿ ಘಾಘ್ ಕೂಡ ಬರೆದಿದ್ದಾರೆ-

ಗೇಹೂಂ ಬಾಹೆಂ, ಚನಾ ದಲಾಯೆ.

ಧಾನ ಗಾಹೆಂ, ಮಕ್ಕಾ ನಿರಯೇ.

ಊಖ್ ಕಸಾಯೇ.

ಅದೇನೆಂದರೆ, ಗೋಧಿಯ ಬೆಳೆಯನ್ನು ಉಳುಮೆ ಮಾಡುವುದರಿಂದ, ಹುರುಳಿಯನ್ನು ಸುತ್ತುವುದರಿಂದ, ಭತ್ತವನ್ನು ಹೆಚ್ಚು ನೀರಿನಿಂದ, ಜೋಳವನ್ನು ಕಳೆ ಕೀಳುವುದರಿಂದ ಮತ್ತು ಕಬ್ಬನ್ನು ನೀರಿನಲ್ಲಿ ಬಿಟ್ಟ ನಂತರ ಬಿತ್ತನೆಯಿಂದ ಸುಧಾರಿಸುತ್ತದೆ.  ಸುಮಾರು 2000 ವರ್ಷಗಳ ಹಿಂದೆ ತಮಿಳುನಾಡಿನ ಸಂತ ತಿರುವಳ್ಳುವರ್ ಜೀ ಅವರು ಕೃಷಿಗೆ ಸಂಬಂಧಿಸಿದ ಹಲವು ಸೂತ್ರಗಳನ್ನು ನೀಡಿದ್ದಾರೆ ಎನ್ನುವುದನ್ನು  ನೀವು ಊಹಿಸಬಹುದು. ಅವರು ಹೇಳಿದರು -

ತೊಡಿ ಪುಳುದಿ ಕಚ್ಚಾ ಉಣಕ್ಕಿನ್,

ಪಿಡತ್ತೆರುವುಂ ವೆಂಡಾದು ಸಾಲ  ಪಡುಮ್

ಅಂದರೆ, ಒಂದು ಔನ್ಸ್ ಭೂಮಿಯನ್ನು ಕಾಲು ಭಾಗಕ್ಕೆ ಇಳಿಸಿ ಒಣಗಿಸಿದರೆ, ಅದು ಒಂದು ಹಿಡಿ ಗೊಬ್ಬರವಿಲ್ಲದೆಯೂ ಸಮೃದ್ಧವಾಗಿ ಬೆಳೆಯುತ್ತದೆ.

 

ಸ್ನೇಹಿತರೇ,

ಕೃಷಿಯ ಈ ಪುರಾತನ ಜ್ಞಾನವನ್ನು ನಾವು ಮತ್ತೆ ಕಲಿಯುವುದು ಮಾತ್ರವಲ್ಲ, ಅದನ್ನು ಆಧುನಿಕ ಕಾಲಕ್ಕೆ ಚುರುಕುಗೊಳಿಸಬೇಕಾಗಿದೆ. ಈ ದಿಸೆಯಲ್ಲಿ ನಾವು ಹೊಸ ಸಂಶೋಧನೆಗಳನ್ನು ಮಾಡಬೇಕಾಗಿದೆ, ಪ್ರಾಚೀನ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಚೌಕಟ್ಟಿನಲ್ಲಿ ರೂಪಿಸಬೇಕು. ಈ ದಿಸೆಯಲ್ಲಿ ನಮ್ಮ ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳಂತಹ ಸಂಸ್ಥೆಗಳು ದೊಡ್ಡ ಪಾತ್ರವನ್ನು ವಹಿಸಬಹುದು. ನಾವು ಮಾಹಿತಿಯನ್ನು ಸಂಶೋಧನಾ ಪ್ರಬಂಧಗಳು ಮತ್ತು ಸಿದ್ಧಾಂತಗಳಿಗೆ ಮಾತ್ರ ಸೀಮಿತಗೊಳಿಸಬೇಕಾಗಿಲ್ಲ, ಆದರೆ ನಾವು ಅದನ್ನು ಪ್ರಾಯೋಗಿಕ ಯಶಸ್ಸನ್ನಾಗಿ ಪರಿವರ್ತಿಸಬೇಕು.  ಲ್ಯಾಬ್ ಟು ಲ್ಯಾಂಡ್ ನಮ್ಮ ಪ್ರಯಾಣವಾಗಿರುತ್ತದೆ. ಈ ಸಂಸ್ಥೆಗಳು ಸಹ ಈ ಉಪಕ್ರಮವನ್ನು ಪ್ರಾರಂಭಿಸಬಹುದು. ನೈಸರ್ಗಿಕ ಕೃಷಿಯನ್ನು ಹೆಚ್ಚು ಹೆಚ್ಚು ರೈತರಿಗೆ ಕೊಂಡೊಯ್ಯುವ ಪ್ರತಿಜ್ಞೆಯನ್ನು ನೀವು ತೆಗೆದುಕೊಳ್ಳಬಹುದು. ನೀವು ಇದು ಸಾಧ್ಯ ಎಂದು ಯಶಸ್ಸಿನಿಂದ ತೋರಿಸಿದಾಗ, ಸಾಮಾನ್ಯ ಮನುಷ್ಯರು ಸಹ ಅದರೊಂದಿಗೆ ಸಾಧ್ಯವಾದಷ್ಟು ಬೇಗ ಸಂಪರ್ಕ ಹೊಂದುತ್ತಾರೆ.

ಸ್ನೇಹಿತರೇ,

ಹೊಸದನ್ನು ಕಲಿಯುವುದರೊಂದಿಗೆ ನಮ್ಮ ಕೃಷಿಯಲ್ಲಿ ನುಸುಳಿರುವ ತಪ್ಪು ಪದ್ಧತಿಗಳನ್ನು ಕಲಿಯಬೇಕು. ಗದ್ದೆಗೆ ಬೆಂಕಿ ಹಚ್ಚುವುದರಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ಜೇಡಿಮಣ್ಣನ್ನು ಬಿಸಿ ಮಾಡಿದಾಗ, ಅದು ಇಟ್ಟಿಗೆಯ ರೂಪವನ್ನು ತೆಗೆದುಕೊಳ್ಳುತ್ತದೆ ಎಂದು ಒಬ್ಬರು ಅರ್ಥಮಾಡಿಕೊಳ್ಳಬೇಕು. ಮತ್ತು ಕಟ್ಟಡವನ್ನು ನಿರ್ಮಿಸುವಷ್ಟು ಇಟ್ಟಿಗೆ ಬಲವಾಗಿರುತ್ತದೆ. ಆದರೆ ಬೆಳೆಗಳ ಅವಶೇಷಗಳನ್ನು ಸುಡುವ ಸಂಪ್ರದಾಯವಿದೆ.  ಜೇಡಿಮಣ್ಣನ್ನು ಒಮ್ಮೆ ಬಿಸಿ ಮಾಡಿದರೆ ಇಟ್ಟಿಗೆಯಾಗುತ್ತದೆ ಎಂದು ತಿಳಿದಿದ್ದರೂ ನಾವು ಮಣ್ಣನ್ನು ಸುಡುವುದನ್ನು ಮುಂದುವರಿಸುತ್ತೇವೆ. ಅದೇ ರೀತಿ ರಾಸಾಯನಿಕ ಇಲ್ಲದೆ ಬೆಳೆ ಇಳುವರಿ ಬರುವುದಿಲ್ಲ ಎಂಬ ಭ್ರಮೆಯೂ ಇದೆ ಆದರೆ ವಾಸ್ತವವು  ಇದಕ್ಕೆ ತದ್ವಿರುದ್ಧವಾಗಿದೆ.  ಮೊದಲು ಯಾವುದೇ ರಾಸಾಯನಿಕಗಳಿರಲಿಲ್ಲ, ಆದರೆ ಫಸಲು ಚೆನ್ನಾಗಿತ್ತು. ಮಾನವನ  ಬೆಳವಣಿಗೆಯ ಇತಿಹಾಸವು ಇದಕ್ಕೆ ಸಾಕ್ಷಿಯಾಗಿದೆ. ಎಲ್ಲಾ ಸವಾಲುಗಳ ಹೊರತಾಗಿಯೂ, ಮಾನವನ ಅಭಿವೃದ್ಧಿ ಆಯಿತು   ಮತ್ತು ಕೃಷಿ ಯುಗದಲ್ಲಿ ವೇಗವಾಗಿ ಪ್ರಗತಿ ಸಾಧಿಸಿತು, ಏಕೆಂದರೆ ನೈಸರ್ಗಿಕ ಕೃಷಿಯನ್ನು ಮಾಡಲಾಯಿತು ಮತ್ತು ಜನರು ನಿರಂತರವಾಗಿ ಕಲಿಯುತ್ತಾರೆ. ಇಂದು ಕೈಗಾರಿಕಾ ಯುಗದಲ್ಲಿ ನಮಗೆ ತಂತ್ರಜ್ಞಾನದ ಶಕ್ತಿಯಿದೆ, ಸಂಪನ್ಮೂಲಗಳಿವೆ ಮತ್ತು ಹವಾಮಾನದ ಬಗ್ಗೆಯೂ ನಮ್ಮ ಬಳಿ ಮಾಹಿತಿ ಇದೆ. ಈಗ ರೈತರು ಹೊಸ ಇತಿಹಾಸ ಸೃಷ್ಟಿಸಬಹುದು. ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಜಗತ್ತು ಚಿಂತಿಸುತ್ತಿರುವ ಈ ಸಮಯದಲ್ಲಿ, ಭಾರತೀಯ ರೈತರು ತಮ್ಮ ಸಾಂಪ್ರದಾಯಿಕ ಜ್ಞಾನದ ಮೂಲಕ ಪರಿಹಾರವನ್ನು ಒದಗಿಸಬಹುದು. ನಾವು ಒಟ್ಟಾಗಿದ್ದು  ಏನಾದರೂ ಮಾಡಬಹುದು.

ಸಹೋದರ ಸಹೋದರಿಯರೇ,

ನೈಸರ್ಗಿಕ ಕೃಷಿಯಿಂದ ಹೆಚ್ಚು ಪ್ರಯೋಜನ ಪಡೆಯುವವರು 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ ದೇಶದ 80% ರೈತರು, ಸಣ್ಣ ರೈತರು. ಈ ಪೈಕಿ ಬಹುತೇಕ ರೈತರು ರಾಸಾಯನಿಕ ಗೊಬ್ಬರಕ್ಕೆ ಹೆಚ್ಚು ಖರ್ಚು ಮಾಡುತ್ತಾರೆ. ನೈಸರ್ಗಿಕ ಕೃಷಿಯತ್ತ ಮುಖ ಮಾಡಿದರೆ ಅವರ ಸ್ಥಿತಿ ಉತ್ತಮವಾಗಿರುತ್ತದೆ.

ಸಹೋದರ ಸಹೋದರಿಯರೇ,

ಎಲ್ಲಿ ಶೋಷಣೆ ಇರುತ್ತದೆಯೋ ಅಲ್ಲಿ ಪೋಷಣೆ ಇರುವುದಿಲ್ಲ ಎಂಬ ಗಾಂಧೀಜಿಯವರ ನೈಸರ್ಗಿಕ ಕೃಷಿಯ ಹೇಳಿಕೆಯು ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ.  ಗಾಂಧೀಜಿಯವರು ಮಣ್ಣನ್ನು ಮರೆತರೆ, ಹೊಲ ಉಳುವುದನ್ನು ಮರೆತರೆ ಒಂದು ರೀತಿಯಲ್ಲಿ ತನ್ನನ್ನು ತಾನು ಮರೆತಂತೆ ಎಂದು ಹೇಳುತ್ತಿದ್ದರು. ಕಳೆದ ಕೆಲವು ವರ್ಷಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಸುಧಾರಣೆಯಾಗುತ್ತಿರುವ ಬಗ್ಗೆ ನನಗೆ ತೃಪ್ತಿ ಇದೆ. ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಯುವಜನರಿಂದ ಪ್ರಾರಂಭವಾದವುಗಳಾಗಿವೆ. ಕೇಂದ್ರ ಸರ್ಕಾರ ಆರಂಭಿಸಿರುವ ಪರಂಪರಾಗತ್ ಕೃಷಿ ವಿಕಾಸ ಯೋಜನೆಯ ಲಾಭವನ್ನೂ ಪಡೆದಿದ್ದಾರೆ. ಈ ಯೋಜನೆಯಡಿ, ರೈತರಿಗೆ ತರಬೇತಿಯನ್ನು ಸಹ ನೀಡಲಾಗುತ್ತಿದೆ ಮತ್ತು ಈ ಕೃಷಿಯತ್ತ ಸಾಗಲು ಸಹಾಯವನ್ನು ಸಹ ನೀಡಲಾಗುತ್ತಿದೆ.

ಸಹೋದರ ಸಹೋದರಿಯರೇ,

ಲಕ್ಷಾಂತರ ರೈತರು ನೈಸರ್ಗಿಕ ಕೃಷಿಯನ್ನು ಮಾಡಿಕೊಂಡಿರುವ ರಾಜ್ಯಗಳ ಅನುಭವಗಳು ಉತ್ತೇಜನಕಾರಿಯಾಗಿದೆ.. ನಾವು ಗುಜರಾತ್‌ನಲ್ಲಿ ಬಹಳ ಹಿಂದೆಯೇ ನೈಸರ್ಗಿಕ ಕೃಷಿಯ ಪ್ರಯತ್ನಗಳನ್ನು ಆರಂಭಿಸಿದ್ದೆವು. ಇಂದು ಗುಜರಾತಿನ ಹಲವು ಭಾಗಗಳಲ್ಲಿ ಅದರ ಸಕಾರಾತ್ಮಕ ಪರಿಣಾಮಗಳು ಕಂಡುಬರುತ್ತಿವೆ. ಅದೇ ರೀತಿ ಹಿಮಾಚಲ ಪ್ರದೇಶದಲ್ಲಿಯೂ ಈ ಕೃಷಿಯತ್ತ ಆಕರ್ಷಣೆ ವೇಗವಾಗಿ ಹೆಚ್ಚುತ್ತಿದೆ. ನೈಸರ್ಗಿಕ ಕೃಷಿಯನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಲು ಪ್ರತಿ ರಾಜ್ಯ, ಪ್ರತಿ ರಾಜ್ಯ ಸರ್ಕಾರಗಳು ಮುಂದೆ ಬರುವಂತೆ ಇಂದು ನಾನು ಒತ್ತಾಯಿಸುತ್ತೇನೆ. ಈ ಅಮೃತ ಮಹೋತ್ಸವದಲ್ಲಿ, ಪ್ರತಿ ಪಂಚಾಯತ್‌ನ ಕನಿಷ್ಠ ಒಂದು ಹಳ್ಳಿಯನ್ನು ನೈಸರ್ಗಿಕ ಕೃಷಿಯೊಂದಿಗೆ ಸಂಯೋಜಿಸಲು ನಾವು ಪ್ರಯತ್ನಿಸಬಹುದು. ಇಡೀ ಭೂಮಿಯಲ್ಲಿ ಪ್ರಯೋಗ ಮಾಡಬೇಡಿ ಎಂದು ನನ್ನ ರೈತ ಸಹೋದರರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಜಮೀನಿನ ಒಂದು ಭಾಗವನ್ನು ತೆಗೆದುಕೊಂಡು ಪ್ರಯೋಗ ಮಾಡಿ. ನೀವು ಪ್ರಯೋಜನವನ್ನು ಕಂಡುಕೊಂಡರೆ, ಅದನ್ನು ಮತ್ತಷ್ಟು ವಿಸ್ತರಿಸಿ. ಒಂದೆರಡು ವರ್ಷಗಳಲ್ಲಿ, ನೀವು ನಿಧಾನವಾಗಿ ಇಡೀ ಕ್ಷೇತ್ರವನ್ನು ಆವರಿಸುತ್ತೀರಿ. ಸಾವಯವ ಮತ್ತು ನೈಸರ್ಗಿಕ ಕೃಷಿಯಲ್ಲಿ ಮತ್ತು ತಮ್ಮ ಉತ್ಪನ್ನಗಳ ಸಂಸ್ಕರಣೆಯಲ್ಲಿ ಹೆಚ್ಚು ಹೂಡಿಕೆ ಮಾಡಲು ಇದು ಸಮಯ ಎಂದು ನಾನು ಹೂಡಿಕೆದಾರರನ್ನು ಒತ್ತಾಯಿಸುತ್ತೇನೆ. ದೇಶವಷ್ಟೇ ಅಲ್ಲ, ಜಾಗತಿಕ ಮಾರುಕಟ್ಟೆ ನಮಗಾಗಿ ಕಾಯುತ್ತಿದೆ. ಭವಿಷ್ಯದ ಸಾಧ್ಯತೆಗಳಿಗಾಗಿ ನಾವು ಇಂದು ಕೆಲಸ ಮಾಡಬೇಕು.

ಸ್ನೇಹಿತರೇ,

ಈ ಪುಣ್ಯದ ಅವಧಿಯಲ್ಲಿ, ಆಹಾರ ಭದ್ರತೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದ ಬಗ್ಗೆ ಭಾರತವು ಜಗತ್ತಿಗೆ ಉತ್ತಮ ಪರಿಹಾರವನ್ನು ನೀಡಬೇಕಾಗಿದೆ. ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ, ಪರಿಸರಕ್ಕಾಗಿ ಜೀವನಶೈಲಿಯನ್ನು ಅಂದರೆ ಎಲ್‌ ಐ ಎಫ್‌ ಇ ಅನ್ನು ಜಾಗತಿಕ ಧ್ಯೇಯವನ್ನಾಗಿ ಮಾಡಲು ನಾನು ಜಗತ್ತಿಗೆ ಕರೆ ನೀಡಿದ್ದೇನೆ. ಭಾರತ ಮತ್ತು ಅದರ ರೈತರು ಇದನ್ನು 21 ನೇ ಶತಮಾನದಲ್ಲಿ ಮುನ್ನಡೆಸಲಿದ್ದಾರೆ. ಆದ್ದರಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ಭಾರತ ಮಾತೆಯ ನಾಡನ್ನು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ಮುಕ್ತಗೊಳಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ ಮತ್ತು ಜಗತ್ತಿಗೆ ಆರೋಗ್ಯಕರ ಭೂಮಿ ಮತ್ತು ಆರೋಗ್ಯಕರ ಜೀವನಕ್ಕೆ ದಾರಿ ತೋರಿಸೋಣ. ಇಂದು ದೇಶವು ಸ್ವಾವಲಂಬಿ ಭಾರತದ ಕನಸನ್ನು ನನಸು ಮಾಡಿದೆ. ತನ್ನ ಕೃಷಿಯಲ್ಲಿ ಸ್ವಾವಲಂಬಿಯಾದಾಗ ಮಾತ್ರ ಭಾರತವು ಸ್ವಾವಲಂಬಿಯಾಗಲು ಸಾಧ್ಯ, ಪ್ರತಿಯೊಬ್ಬ ರೈತರು ಸ್ವಾವಲಂಬಿಯಾದಾಗ ಮಾತ್ರ. ಮತ್ತು ಅಸ್ವಾಭಾವಿಕ ರಸಗೊಬ್ಬರಗಳು ಮತ್ತು ಔಷಧಿಗಳ ಬದಲಿಗೆ ನೈಸರ್ಗಿಕ ಅಂಶಗಳೊಂದಿಗೆ ನಾವು ಮಾ ಭಾರತಿಯ ಮಣ್ಣನ್ನು ಹಸುವಿನ ಸಗಣಿಯಿಂದ ಸಮೃದ್ಧಗೊಳಿಸಿದಾಗ ಮಾತ್ರ ಇದು ಸಂಭವಿಸುತ್ತದೆ. ಪ್ರತಿಯೊಬ್ಬ ದೇಶವಾಸಿಗಳ ಹಿತದೃಷ್ಟಿಯಿಂದ ಮತ್ತು ಪ್ರತಿ ಜೀವಿಯ ಹಿತಾಸಕ್ತಿಯಿಂದ ನೈಸರ್ಗಿಕ ಕೃಷಿಯನ್ನು ಸಾಮೂಹಿಕ ಆಂದೋಲನವಾಗಿ ಮಾಡುತ್ತೇವೆ. ಈ ನಂಬಿಕೆಯೊಂದಿಗೆ, ನಾನು ಗುಜರಾತ್ ಮುಖ್ಯಮಂತ್ರಿ ಮತ್ತು ಅವರ ಇಡೀ ತಂಡಕ್ಕೆ ಈ ಉಪಕ್ರಮಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಇದನ್ನು ಗುಜರಾತ್‌ನಲ್ಲಿ ಸಾಮೂಹಿಕ ಆಂದೋಲನವನ್ನಾಗಿ ಮಾಡಲು. ಇಡೀ ದೇಶದ ರೈತರನ್ನು ಸಂಪರ್ಕಿಸಲು ಸಂಬಂಧಪಟ್ಟ ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಂಬಾ ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bumper Apple crop! India’s iPhone exports pass Rs 1 lk cr

Media Coverage

Bumper Apple crop! India’s iPhone exports pass Rs 1 lk cr
NM on the go

Nm on the go

Always be the first to hear from the PM. Get the App Now!
...
Prime Minister participates in Lohri celebrations in Naraina, Delhi
January 13, 2025
Lohri symbolises renewal and hope: PM

The Prime Minister, Shri Narendra Modi attended Lohri celebrations at Naraina in Delhi, today. Prime Minister Shri Modi remarked that Lohri has a special significance for several people, particularly those from Northern India. "It symbolises renewal and hope. It is also linked with agriculture and our hardworking farmers", Shri Modi stated.

The Prime Minister posted on X:

"Lohri has a special significance for several people, particularly those from Northern India. It symbolises renewal and hope. It is also linked with agriculture and our hardworking farmers.

This evening, I had the opportunity to mark Lohri at a programme in Naraina in Delhi. People from different walks of life, particularly youngsters and women, took part in the celebrations.

Wishing everyone a happy Lohri!"

"Some more glimpses from the Lohri programme in Delhi."