ಇಲ್ಲಿ ಉಪಸ್ಥಿತರಿರುವ ಎಲ್ಲಾ ಸ್ವಚ್ಛಾಗ್ರಹಿ ಸೋದರ ಮತ್ತು ಸೋದರಿಯರೆ,
ಇಂದು ಅಕ್ಟೋಬರ್ 2, ಪೂಜ್ಯ ಬಾಪೂಜಿ ಅವರ ಜನ್ಮ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ಜಯಂತಿ. ಮೂರು ವರ್ಷಗಳಲ್ಲಿ ನಾವು ಎಲ್ಲಿಂದ ಎಲ್ಲಿಗೆ ತಲುಪಿದ್ದೇವೆ. ಆಗ ನಾನು ವಿಶ್ವ ಸಂಸ್ಥೆಯ ಸಭೆಯಲ್ಲಿ ಭಾಗವಹಿಸಲು ಅಮೆರಿಕಕ್ಕೆ ಹೋಗಿದ್ದೆ. ಅಕ್ಟೋಬರ್ 1ರಂದು ತಡರಾತ್ರಿ ಹಿಂತಿರುಗಿದೆ. ಅಕ್ಟೋಬರ್ 2ರ ಬೆಳಗ್ಗೆ ಕಸ ಗುಡಿಸಲು ಹೊರಟಿದ್ದೆ. ಆದರೆ ಆ ಸಮಯದಲ್ಲಿ ಎಲ್ಲ ಪತ್ರಿಕೆಗಳು, ಮಾಧ್ಯಮಗಳು, ನನ್ನ ಎಲ್ಲ ವಿರೋಧ ಪಕ್ಷಗಳ ಜೊತೆಗಾರರು ಅಂದರೆ ಎಲ್ಲ ರಾಜಕೀಯ ಪಕ್ಷಗಳು ಅಕ್ಟೋಬರ್ 2 ರಜಾದಿನವಾಗಿದೆ, ನಾವು ಮಕ್ಕಳ ರಜೆ ಹಾಳು ಮಾಡಿದ್ದೇವೆ. ಶಾಲೆಗೆ ಹೋಗುವ ಮಕ್ಕಳನ್ನು ಈ ಕೆಲಸಗಳಿಗೆ ಯಾಕೆ ಬಳಸಿಕೊಳ್ಳುತ್ತಿದ್ದಾರೆ? ಇದು ಅತಿಯಾಯಿತು ಎಂದು ನನ್ನನ್ನು ಕಟುವಾಗಿ ಟೀಕಿಸಿದರು.
ಬಹಳಷ್ಟು ಸಂಗತಿಗಳನ್ನು ಸಹಿಸಿಕೊಳ್ಳುವುದು ಈಗ ನನ್ನ ಸ್ವಭಾವವೇ ಆಗಿದೆ. ಏಕೆಂದರೆ ಜವಾಬ್ದಾರಿಯೂ ಆ ರೀತಿ ಇರುವುದರಿಂದ ಸಹಿಸಿಕೊಳ್ಳಲೇಬೇಕು. ಕಾಲಕ್ರಮೇಣ ಸಹಿಸಿಕೊಳ್ಳುವ ನನ್ನ ಸಾಮರ್ಥ್ಯವೂ ಹೆಚ್ಚುತ್ತಿದೆ. ಯಾವುದೇ ಹಿಂಜರಿಕೆ ಇಲ್ಲದೆ ಈ ಕಾರ್ಯದಲ್ಲಿ ನಾವು ತೊಡಗಿದ್ದೆವು. ಮಹಾತ್ಮ ಗಾಂಧೀಜಿ ಅವರು ಹೇಳಿರುವ ಮಾತು, ತೋರಿಸಿರುವ ದಾರಿ ತಪ್ಪಾಗಿರಲು ಸಾಧ್ಯವೇ ಇಲ್ಲ ಎಂಬ ಕಾರಣಕ್ಕೆ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ಮೂರು ವರ್ಷಗಳ ನಂತರ ಹೇಳುತ್ತಿದ್ದೇವೆ.
ಅದೇ ಒಂದು ಶ್ರದ್ಧೆ. ಇದರರ್ಥ ಸವಾಲುಗಳು ಇಲ್ಲವೆಂದಲ್ಲ, ಸವಾಲುಗಳಿವೆ. ಆದರೆ ಸವಾಲುಗಳಿವೆ ಎಂದು ನಮ್ಮ ದೇಶವನ್ನು ಹೀಗೆಯೇ ಇರಲು ಬಿಡುವುದೆ? ಸವಾಲುಗಳಿವೆ ಎಂದು ಕೇವಲ ಮೆಚ್ಚುಗೆಯ ಮಾತುಗಳು ಮಾತ್ರ ಕೇಳಿ ಬರುವ, ಜೈಕಾರ ಹಾಕಿಸಿಕೊಳ್ಳುವಂತಹ ಕೆಲಸಗಳಿಗೆ ಮಾತ್ರ ಕೈ ಹಾಕಬೇಕೆ? ಉಳಿದ ಕೆಲಸಗಳಿಂದ ದೂರ ಓಡಬೇಕೆ? ಇಂದು ದೇಶಬಾಂಧವರೆಲ್ಲ ಒಂದೇ ಕಂಠದಿಂದ ಸ್ವಚ್ಛತೆಯ ವಿಷಯವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಈ ರೀತಿ ಆಗಿದ್ದಿದ್ದರೆ ಗಲೀಜು ನಮ್ಮ ಕಣ್ಣುಗಳ ಮುಂದೆ ಕಾಣುತ್ತಿರಲಿಲ್ಲ. ಅಸ್ವಚ್ಛತೆಯಲ್ಲಿ ನಮ್ಮ ಪಾತ್ರ ಇಲ್ಲ ಎಂದು ಹೇಳಲಾಗದು, ಹಾಗೆಯೇ ಅಸ್ವಚ್ಛತೆ ಎಂದರೆ ನಮಗಿಷ್ಟ ಎಂದೂ ಹೇಳಲಾಗದು. ಸ್ವಚ್ಛತೆ ಎಂದರೆ ಇಷ್ಟ ಎಂದು ಬಯಸುವ ಯಾವುದೇ ವ್ಯಕ್ತಿ ಇರಲು ಸಾಧ್ಯವಿಲ್ಲ.
ನೀವು ರೈಲು ನಿಲ್ದಾಣಕ್ಕೆ ಹೋದಾಗ ಅಲ್ಲಿ ನಾಲ್ಕು ಬೆಂಚುಗಳಿರುವುದನ್ನು ಕಾಣುತ್ತೀರಿ. ಆದರೆ ಆ ನಾಲ್ಕರಲ್ಲಿ ಎರಡು ಗಲೀಜಾಗಿದ್ದರೆ ನೀವು ಅಲ್ಲಿ ಕುಳಿತುಕೊಳ್ಳುವುದಿಲ್ಲ, ಸ್ವಚ್ಛವಾಗಿರುವ ಜಾಗಕ್ಕೆ ಹೋಗಿ ಕುಳಿತುಕೊಳ್ಳುವಿರೇಕೆ? ಸ್ವಚ್ಛತೆಯನ್ನು ಬಯಸುವುದೇ ನಮ್ಮ ಮೂಲ ಸ್ವಭಾವವಾಗಿದೆ. ಆದರೆ ನಮ್ಮ ದೇಶದಲ್ಲಿ ಒಂದೇ ಗ್ಯಾಪ್ ಉಳಿದುಕೊಂಡಿದೆ, ಆ ಗ್ಯಾಪ್ ಏನೆಂದರೆ ಇದನ್ನು ನಾನು ಮಾಡಬೇಕೆ ಎನ್ನುವುದೇ ಆಗಿದೆ. ಸ್ವಚ್ಛತೆ ಇರಬೇಕು ಎಂಬ ವಿಷಯದಲ್ಲಿ ಈ ದೇಶದಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ ಯಾರು ಮಾಡಬೇಕು ಎನ್ನುವುದೇ ಸಮಸ್ಯೆಯಾಗಿದೆ. ನಾನು ಒಂದು ವಿಷಯವನ್ನು ಹೇಳುತ್ತೇನೆ ಮತ್ತು ಇದನ್ನು ಹೇಳುವುದಕ್ಕೆ ನನಗೆ ಯಾವ ಸಂಕೋಚವೂ ಇಲ್ಲ. ನನ್ನ ಈ ಮಾತಿನ ನಂತರ ನಾಳೆ ನನ್ನನ್ನು ಹೆಚ್ಚು ಟೀಕಿಸಲೂಬಹುದು. ಆದರೆ ದೇಶವಾಸಿಗಳಿಂದ ಮುಚ್ಚಿಡುವಂತಹುದು ಏನಿದೆ? 1000 ಮಹಾತ್ಮಾ ಗಾಂಧೀಜಿ ಬಂದರೂ, ಒಂದು ಲಕ್ಷ ನರೇಂದ್ರ ಮೋದಿ ಬಂದರೂ, ಎಲ್ಲ ಮುಖ್ಯಮಂತ್ರಿಗಳು ತೊಡಗಿಕೊಂಡರೂ, ಎಲ್ಲ ಸರ್ಕಾರಗಳು ಸೇರಿದರೂ ಸ್ವಚ್ಛತೆಯ ಕಾರ್ಯ ಪೂರ್ಣವಾಗುವುದಿಲ್ಲ, ಪೂರ್ಣವಾಗುವುದಿಲ್ಲ. ಆದರೆ 125 ಕೋಟಿ ದೇಶಬಂಧುಗಳು ಬಂದರೆ ನೋಡನೋಡುತ್ತಲೇ ಕನಸು ನನಸಾಗುವುದು.
ಸರ್ಕಾರವು ಮಾಡಿದೆ ಎಂದು ನಾವು ಬಹುತೇಕ ವಿಷಯಗಳಿಗೆ ಹೇಳುತ್ತಿರುವುದು ದೌರ್ಭಾಗ್ಯವಾಗಿದೆ. ಅವು ಜನಸಾಮಾನ್ಯರ ಹೊಣೆಯಾಗಿದ್ದಾಗ ಇಂತಹ ಯಾವುದೇ ಕಷ್ಟ ಬರುತ್ತಿರಲಿಲ್ಲ. ಈಗ ನೋಡಿ, ಕುಂಭ ಮೇಳ ನಡೆಯುತ್ತದೆ. ಕುಂಭ ಮೇಳದಂದು ಪ್ರತಿದಿನ ಗಂಗಾ ನದಿತೀರದಲ್ಲಿ ಯೂರೋಪ್ ನ ಒಂದು ಸಣ್ಣ ದೇಶವೇ ಇಲ್ಲಿದೆ ಎನ್ನುವಷ್ಟು ಜನ ಸೇರುತ್ತಾರೆ. ಆದರೆ ಎಲ್ಲವನ್ನೂ ಅವರೇ ಸಂಭಾಳಿಸುತ್ತಾರೆ, ತಮ್ಮ ಕೆಲಸಗಳನ್ನು ಮಾಡುತ್ತಾರೆ. ಇದು ಶತಮಾನಗಳಿಂದ ನಡೆದುಕೊಂಡು ಬಂದಿದೆ.
ಸಮಾಜದ ಶಕ್ತಿಯನ್ನು ನಾವು ಸ್ವೀಕರಿಸಿ ನಡೆದರೆ, ಜನರ ಸಹಭಾಗಿತ್ವವನ್ನು ಒಪ್ಪಿಕೊಂಡು ನಡೆದರೆ, ಸರ್ಕಾರಗಳು ಕೆಲಸ ಮಾಡುತ್ತಿದ್ದರೆ, ಸಮಾಜವನ್ನು ಮುನ್ನಡೆಸುತ್ತಾ ನಡೆದರೆ ಈ ಆಂದೋಲನವು ಹಲವು ಪ್ರಶ್ನಾರ್ಥಕ ಚಿಹ್ನೆಗಳ ನಂತರವೂ ಯಶಸ್ವಿಯಾಗುತ್ತದೆ ಎಂಬುದರಲ್ಲಿ ನನಗೆ ನಂಬಿಕೆಯಿದೆ. ಕೆಲವರು ಇಂದಿಗೂ ಇದನ್ನು ಅಪಹಾಸ್ಯ ಮಾಡುತ್ತಾರೆ, ಟೀಕಿಸುತ್ತಾರೆ. ಆದರೆ ಅವರು ಎಂದೂ ಸ್ವಚ್ಛತೆಯ ಅಭಿಯಾನದಲ್ಲಿ ಭಾಗವಹಿಸುವುದಿಲ್ಲ. ಈ ಅಭಿಯಾನಕ್ಕೆ 5 ವರ್ಷಗಳಾಗುವಾಗ ಮಾಧ್ಯಮಗಳು ಸ್ವಚ್ಛತೆಯ ಕಾರ್ಯವನ್ನು ಯಾರು ಮಾಡುತ್ತಿದ್ದಾರೆ, ಯಾರು ಭಾಗವಹಿಸುತ್ತಿದ್ದಾರೆ ಎಂಬುದನ್ನು ಹೇಳುವುದಿಲ್ಲ. ಇದರಿಂದ ಯಾರು ಯಾರು ದೂರ ಓಡುತ್ತಿದ್ದರು, ಇದರ ವಿರುದ್ಧ ಯಾರಿದ್ದರು ಎಂದು ಹೇಳುತ್ತಾ ಅವರ ಚಿತ್ರಗಳನ್ನು ಪ್ರಕಟಿಸುತ್ತವೆ ಎಂಬ ನಂಬಿಕೆ ನನ್ನದು. ಏಕೆಂದರೆ ದೇಶವು ಸ್ವೀಕರಿಸಿದಾಗ ನಿಮಗೆ ಇಷ್ಟವಿರಲಿ, ಇಲ್ಲದಿರಲಿ, ನೀವು ಅದರ ಜೊತೆಗೆ ಸೇರಲೇಬೇಕಾಗುತ್ತದೆ.
ಪ್ರಸ್ತುತ ಸ್ವಚ್ಛತೆಯ ಅಭಿಯಾನವು ಮಹಾತ್ಮಾ ಗಾಂಧೀಜಿ ಅವರದ್ದಾಗಿಲ್ಲ, ಭಾರತ ಸರ್ಕಾರದ್ದಾಗಿಲ್ಲ, ರಾಜ್ಯ ಸರ್ಕಾರಗಳದ್ದಾಗಿಲ್ಲ, ಪುರಸಭೆಗಳದ್ದಾಗಿಲ್ಲ. ಇಂದು ಸ್ವಚ್ಛತೆಯ ಅಭಿಯಾನವನ್ನು ದೇಶದ ಸಾಮಾನ್ಯ ಜನರು ತಮ್ಮ ಕನಸಾಗಿ ಮಾಡಿಕೊಂಡಿದ್ದಾರೆ. ಈ ಸ್ವಚ್ಛತೆಯ ಸಂಕಲ್ಪದಲ್ಲಿ ಇದುವರೆಗೆ ಸಿಕ್ಕಿರುವ ಸಿದ್ಧಿಯಲ್ಲಿ ಸರ್ಕಾರಕ್ಕಾಗಲಿ, ನನಗಾಗಲಿ ಗುಲಗಂಜಿಯಷ್ಟೂ ದೊರಕುವುದಿಲ್ಲ. ಇದು ಭಾರತ ಸರ್ಕಾರದ ಸಿದ್ಧಿಯಲ್ಲ, ರಾಜ್ಯ ಸರ್ಕಾರಗಳ ಸಿದ್ಧಿಯಲ್ಲ. ಇದು ಸ್ವಚ್ಛಾಗ್ರಹಿ ದೇಶಬಾಂಧವರು ಗಳಿಸಿದ ಸಿದ್ಧಿಯಾಗಿದೆ.
ನಮಗೆ ಸ್ವಾತಂತ್ರ್ಯ ದೊರಕಿದೆ. ಸ್ವಾತಂತ್ರ್ಯದ ಅಸ್ತ್ರವೇ ಸತ್ಯಾಗ್ರಹ. ಶ್ರೇಷ್ಠ ಭಾರತದ ಅಸ್ತ್ರವೆಂದರೆ ಸ್ವಚ್ಛತೆ, ಸ್ವಚ್ಛಾಗ್ರಹ. ಸ್ವಾತಂತ್ರ್ಯ ಪಡೆಯುವಲ್ಲಿ ಸತ್ಯಾಗ್ರಹವೇ ಕೇಂದ್ರಬಿಂದುವಾಗಿದ್ದರೆ, ಶ್ರೇಷ್ಠ ಭಾರತವಾಗಲು ಸ್ವಚ್ಛಾಗ್ರಹಿಗಳೇ ಕೇಂದ್ರಬಿಂದುಗಳಾಗಿದ್ದಾರೆ. ಪ್ರಪಂಚದ ಯಾವುದೇ ದೇಶಕ್ಕೆ ಹೋದರೂ ಅಲ್ಲಿಯ ಸ್ವಚ್ಛತೆಯನ್ನು ಕಣ್ಣಾರೆ ಕಂಡು ಹಿಂತಿರುಗಿದ ನಂತರ ಆ ದೇಶ ಅದೆಷ್ಟು ಸ್ವಚ್ಛವಾಗಿದೆ, ನಾನು ನೋಡುತ್ತಲೇ ಇದ್ದೆ ಎಂದು ಹೇಳುವುದನ್ನು ನಾವು ಕೇಳಿದ್ದೇನೆ. ನನ್ನ ಬಳಿ ಹೀಗೆ ಹೇಳಿದವರನ್ನು ನಾನು ಅಲ್ಲಿಯ ಸ್ವಚ್ಛತೆ ನೋಡಿ ಸಂತೋಷವಾಯಿತು, ಆದರೆ ಅಲ್ಲಿ ಯಾರಾದರೂ ಕಸಕಡ್ಡಿ ಎಸೆಯುವುದನ್ನು ನೋಡಿದ್ದೀರಾ ಎಂದು ಕೇಳುತ್ತೇನೆ. ಅವರು ಇಲ್ಲ ಎಂದಾಗ ನಾನು ನಮ್ಮ ದೇಶದ ಸಮಸ್ಯೆ ಇದೇ ಎನ್ನುತ್ತೇನೆ.
ತೆರೆದ ಮನಸ್ಸಿನಿಂದ ಇದರ ಬಗ್ಗೆ ಚರ್ಚಿಸಲು ನಾವು ಹೆದರುತ್ತೇವೆ. ನಾವು ಚರ್ಚೆಯೇ ಮಾಡುವುದಿಲ್ಲವೇಕೆ ಎಂಬುದು ಗೊತ್ತಿಲ್ಲ. ರಾಜಕಾರಣಿಗಳು ಇದರ ಚರ್ಚೆ ಮಾಡದಿರಲು, ಸರ್ಕಾರಗಳು ಚರ್ಚೆ ಮಾಡದಿರಲು ಕಾರಣ ಎಲ್ಲಿ ಇದು ತಮ್ಮ ತಲೆಯ ಮೇಲೆ ಬೀಳುತ್ತದೋ ಎನ್ನುವುದೇ ಆಗಿದೆ. ಅರೆ! ಬಿದ್ದರೆ ಬಿತ್ತು. ನಾವು ಜವಾಬ್ದಾರಿಯುತ ವ್ಯಕ್ತಿಗಳಾದರೆ ಅದರ ಜವಾಬ್ದಾರಿ ಹೊರುತ್ತೇವೆ.
ಸ್ವಚ್ಛತೆಯಿಂದಾಗಿ ಈ ಸ್ಥಿತಿ ಉಂಟಾಗಿದೆ. ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕಾಗಿ ranking ನೀಡಲಾಗುತ್ತಿದೆ. ಎಲ್ಲಕ್ಕಿಂತ ಸ್ವಚ್ಛವಾಗಿರುವ ಪಟ್ಟಣ ಯಾವುದು, ಎರಡನೆಯದು ಯಾವುದು, ಮೂರನೆಯದು ಯಾವುದು ಎಂದು ಅದಕ್ಕೆ ನೀಡಿದ ಅಂಕಗಳೆಷ್ಟು ಎಂದು ತಿಳಿಯುತ್ತಲೇ ಆ ಪ್ರತಿಯೊಂದು ಪಟ್ಟಣದಲ್ಲೂ ಚರ್ಚೆ ಆರಂಭವಾಗುತ್ತದೆ. ನೋಡಿ, ಆ ಪಟ್ಟಣಕ್ಕೆ ಸ್ವಚ್ಛತೆಯಲ್ಲಿ ಉನ್ನತ ಅಂಕಗಳು ಸಿಕ್ಕಿವೆ, ನೀವೇನು ಮಾಡುತ್ತಿದ್ದೀರಿ ಎಂದು ರಾಜಕಾರಣಿಗಳ ಮೇಲೆ, ಸರ್ಕಾರಗಳ ಮೇಲೂ ಒತ್ತಡ ಹಾಕತೊಡಗುತ್ತಾರೆ. ಅವರು ನಮಗಿಂತ ಹಿಂದಿದ್ದರು, ಮುಂದೆ ಬಂದರು. ನಾವೂ ಏನಾದರೂ ಮಾಡಲೇಬೇಕು ಎಂದು ಸಿವಿಲ್ ಸೊಸೈಟಿಗಳು ಸಹ ಅಖಾಡಕ್ಕಿಳಿಯುತ್ತವೆ. ಒಂದು ಧನಾತ್ಮಕ ಸ್ಪರ್ಧೆಯ ವಾತಾವರಣ ಉಂಟಾಗುತ್ತದೆ. ಅದರ ಒಳ್ಳೆಯ ಪರಿಣಾಮವೂ ಈ ಎಲ್ಲ ವ್ಯವಸ್ಥೆಯಲ್ಲಿ ಕಂಡು ಬರುತ್ತಿದೆ.
ಶೌಚಾಲಯಗಳನ್ನು ಕಟ್ಟಿಸುತ್ತೇವೆ, ಆದರೆ ಅವುಗಳನ್ನು ಉಪಯೋಗಿಸುವುದಿಲ್ಲ. ಆದರೆ ಇಂತಹ ಸುದ್ದಿಗಳು ಪ್ರಕಟವಾದಾಗ ಅದರಲ್ಲಿ ಕೆಡುಕೇನಿಲ್ಲ. ನಾವು ಇದರಿಂದ ಕೋಪಗೊಳ್ಳಬಾರದು ಎಂದು ಇವು ನಮ್ಮನ್ನು ಎಚ್ಚರಿಸುತ್ತವೆ. ಶೌಚಾಲಯವನ್ನು ಉಪಯೋಗಿಸುವುದು ಸಮಾಜದ ಜವಾಬ್ದಾರಿ, ಕುಟುಂಬದ ಜವಾಬ್ದಾರಿ, ವ್ಯಕ್ತಿಯ ಜವಾಬ್ದಾರಿ ಎಂದು ಅವರಿಗೆ ಅನ್ನಿಸಿದರೆ ಒಳ್ಳೆಯದು.
ನಾನು ಮೊದಲು ಸಾಮಾಜಿಕ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದೆ, ರಾಜಕೀಯಕ್ಕೆ ಬಹಳ ತಡವಾಗಿ ಬಂದೆ. ನಾನು ಗುಜರಾತ್ ನಲ್ಲಿ ಕೆಲಸ ಮಾಡುತ್ತಿದ್ದಾಗ Morvi ಎಂಬಲ್ಲಿ Machu ಜಲಾಶಯ ಒಡೆದುಹೋಗಿತ್ತು. ಸಾವಿರಾರು ಜನರು ಸತ್ತು ಹೋಗಿದ್ದರು. ಇಡೀ ಪಟ್ಟಣ ನೀರಿನಲ್ಲಿ ಮುಳುಗಿತ್ತು. ನಂತರ ಅಲ್ಲಿನ ಸ್ವಚ್ಛತಾ ಕಾರ್ಯಕ್ಕೆ ನನ್ನನ್ನು ಕಳುಹಿಸಲಾಗಿತ್ತು. ನಾನು ಈ ಕೆಲಸ ಮಾಡುತ್ತಿದ್ದೆ. ಸುಮಾರು ಒಂದು ತಿಂಗಳು ಸ್ವಚ್ಛತಾ ಕಾರ್ಯ ನಡೆಯಿತು. ನಂತರ ನಾವು ಕೆಲವು ನಾಗರಿಕ ಸಮಾಜಗಳು, ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮನೆ ಕಳೆದುಕೊಂಡವರಿಗಾಗಿ ಕೆಲವು ಮನೆಗಳನ್ನು ನಿರ್ಮಿಸುವುದು ಎಂದು ಯೋಚಿಸಿ ಒಂದು ಹಳ್ಳಿಯನ್ನು ದತ್ತು ತೆಗೆದುಕೊಂಡೆವು. ಜನರಿಂದ ಹಣ ಸಂಗ್ರಹಿಸಲಾಯಿತು. ಸುಮಾರು 350-400 ಮನೆಗಳಿದ್ದ ಆ ಸಣ್ಣ ಹಳ್ಳಿಯ ಪುನರ್ನಿರ್ಮಾಣ ಮಾಡಬೇಕಿತ್ತು. ಅದಕ್ಕಾಗಿ ವಿನ್ಯಾಸಗಳನ್ನು ತಯಾರಿಸುವಾಗ ಶೌಚಾಲಯ ಇರಲೇಬೇಕು ಎಂಬುದು ನನ್ನ ಒತ್ತಾಯವಾಗಿತ್ತು. ಹಳ್ಳಿಯವರು ಇಲ್ಲಿ ಬಯಲು ಸಾಕಷ್ಟಿದೆ, ಶೌಚಾಲಯದ ಬದಲು ಕೊಠಡಿ ಸ್ವಲ್ಪ ದೊಡ್ಡದಾಗಿರಲಿ ಎಂದು ಹೇಳುತ್ತಿದ್ದರು. ನಾನು ಇದರಲ್ಲಿ ರಾಜಿಯಾಗುವುದಿಲ್ಲ. ನಮ್ಮ ಬಳಿ ಇರುವ ಹಣದಲ್ಲಿ ಸಾಧ್ಯವಾಗುವಷ್ಟು ದೊಡ್ಡ ಕೊಠಡಿ ನಿರ್ಮಿಸುತ್ತೇವೆ, ಆದರೆ ಶೌಚಾಲಯ ಇದ್ದೇ ಇರುತ್ತದೆ ಎಂದು ಹೇಳಿದೆ. ಇದು ಉಚಿತವಾಗಿ ಸಿಗುತ್ತಿದ್ದುದರಿಂದ ಅವರು ಹೆಚ್ಚು ಮಾತಾಡದೆ ಶೌಚಾಲಯ ನಿರ್ಮಾಣಕ್ಕೆ ಒಪ್ಪಿಕೊಂಡರು.
ಸುಮಾರು 10-12 ವರ್ಷಗಳ ನಂತರ ನಾನು ಆ ಕಡೆ ಹೋದಾಗ ಇಲ್ಲಿ ಕೆಲವು ತಿಂಗಳು ಕೆಲಸ ಮಾಡಿದ್ದೇನೆ, ಹಾಗಾಗಿ ಇಲ್ಲಿನ ಹಳೆ ಪರಿಚಯಸ್ಥರನ್ನು ನೋಡಿ ಬರೋಣ ಎಂದು ಆ ಹಳ್ಳಿಗೆ ಹೋದೆ. ಎಷ್ಟು ಶೌಚಾಲಯಗಳು ನಿರ್ಮಾಣವಾಗಿದ್ದವೋ ಅವುಗಳಿಗೆಲ್ಲ ಬೀಗ ಜಡಿದಿರುವುದನ್ನು ನೋಡಿ ನನಗೆ ಹಣೆ ಚಚ್ಚಿಕೊಳ್ಳುವಂತಾಯಿತು. ಇದು ಕಟ್ಟಿಸಿದವರ ದೋಷವಲ್ಲ, ಸರ್ಕಾರದ ದೋಷವಲ್ಲ. ಯಾರೇ ಒತ್ತಾಯ ಮಾಡಿದರೂ ಇದು ಸಮಾಜದ ಸ್ವಭಾವವಾಗಿದೆ. ಸಮಾಜದ ಒಂದು ಸ್ವಭಾವವಾಗಿದೆ. ಇದೆಲ್ಲವನ್ನು ಅರ್ಥ ಮಾಡಿಕೊಂಡ ಬಳಿಕವೂ ನಾವು ಬದಲಾವಣೆ ತರಬೇಕಿದೆ.
ಭಾರತದಲ್ಲಿ ಈಗ ಅವಶ್ಯಕತೆಗೆ ಅನುಗುಣವಾಗಿ ಶಾಲೆಗಳ ನಿರ್ಮಾಣವಾಗಿದೆಯೆ, ಇಲ್ಲವೇ? ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಲಾಗಿದೆಯೆ, ಇಲ್ಲವೇ? ಅವಶ್ಯಕತೆಗೆ ತಕ್ಕಂತೆ ಶಾಲೆಯಲ್ಲಿ ಪುಸ್ತಕಗಳು, ಎಲ್ಲ ಇವೆಯೊ, ಇಲ್ಲವೋ ಎಂದು ನನಗೆ ಯಾರಾದರೂ ತಿಳಿಸಿ. ಸರಿ ಸುಮಾರಾಗಿ ಇದೆ. ಅದಕ್ಕೆ ಹೋಲಿಸಿದರೆ ಶಿಕ್ಷಣದ ಗುಣಮಟ್ಟ ಕಡಿಮೆ ಇದೆ. ಸರ್ಕಾರವು ಇಷ್ಟೆಲ್ಲ ಪ್ರಯತ್ನಗಳನ್ನು ಮಾಡಿದ ನಂತರವೂ, ಇಷ್ಟೆಲ್ಲ ಹಣ ಖರ್ಚು ಮಾಡಿದ ನಂತರವೂ, ಮನೆಗಳನ್ನು ನಿರ್ಮಿಸಿದ ನಂತರವೂ ಶಿಕ್ಷಕರನ್ನು ನೇಮಿಸಿದ ಬಳಿಕವೂ ಸಮಾಜದಿಂದ ಸಹಕಾರ ದೊರೆತರಷ್ಟೇ ಶಿಕ್ಷಣವೂ ನೂರಕ್ಕೆ ನೂರರಷ್ಟು ಯಶಸ್ವಿ ಆಗುವುದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ. ಇಷ್ಟೊಂದು ಶಿಕ್ಷಕರು ಪ್ರಯತ್ನ ಪಟ್ಟರೂ ಸಮಾಜದ ಸಹಭಾಗಿತ್ವವಿಲ್ಲದೆ ಶೇಕಡಾ ನೂರಕ್ಕೆ ನೂರು ತೇರ್ಗಡೆಯಾಗುವುದು ಸಾಧ್ಯವಿಲ್ಲ.
ಈಗ ನೀವೇ ನೋಡಿ, ನಮ್ಮ ಮಕ್ಕಳು, ಸಣ್ಣ ಮಕ್ಕಳು ಇರುವ ಮನೆಗಳಲ್ಲಿ ಅಜ್ಜ, ಅಜ್ಜಿ ಇದ್ದಾರೆ. ಒಂದು ರೀತಿಯಲ್ಲಿ ಮಕ್ಕಳು ನನ್ನ ಸ್ವಚ್ಛತಾ ಅಭಿಯಾನದ ದೊಡ್ಡ ರಾಯಭಾರಿಗಳು. ಮನೆಯಲ್ಲಿ ಅಜ್ಜ ಏನೇ ಕಸ ಬಿಸಾಡಿದರೂ ‘ತಾತ, ಹಾಗೆಲ್ಲ ಎಸೆಯಬೇಡ, ತಾತ ಇದನ್ನು ಎತ್ತಿಕೊ, ತಾತಾ ಇಲ್ಲಿ ಹಾಕಬೇಡ’ ಎಂದು ಆ ಮಕ್ಕಳು ಒಂದು ಸ್ವಚ್ಛತೆಯ ವಾತಾವರಣವನ್ನೇ ನಿರ್ಮಿಸುತ್ತಾರೆ. ಮಕ್ಕಳ ಮನಸ್ಸಿಗೆ ನಾಟಿದ್ದು, ನಮ್ಮ ಮನಸ್ಸಿಗೇಕೆ ನಾಟುವುದಿಲ್ಲ?
ಆಹಾರ ಸೇವನೆಗೆ ಮೊದಲು ಸಾಬೂನಿನಿಂದ ಕೈ ತೊಳೆಯದೆ ಇರುವುದರಿಂದ ಎಷ್ಟು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಆದರೆ ಈ ವಿಷಯವನ್ನು ಹೇಳಿದಾಗ ಜನರು ಸಾಬೂನು ಎಲ್ಲಿಂದ ತರುತ್ತಾರೆ, ನೀರು ಎಲ್ಲಿಂದ ತರುತ್ತಾರೆ? ಪ್ರಧಾನ ಮಂತ್ರಿ ಮೋದಿ ಅವರಿಗಂತೂ ಭಾಷಣ ಮಾಡಬೇಕು. ಜನರು ಎಲ್ಲಿಂದ ಕೈ ತೊಳೆಯುತ್ತಾರೆ? ಅರೆ! ಕೈ ತೊಳೆಯಲು ಇಷ್ಟ ಪಡದವರು ಬೇರೆಯವರು ಕೈ ತೊಳೆಯಲು ಮುಂದಾದರೆ ಅವರಿಗಾದರೂ ಬಿಡಿ.
ಈಗ ಮೋದಿಯನ್ನು ಟೀಕಿಸುವುದಕ್ಕೆ ಸಾವಿರಾರು ವಿಷಯಗಳಿವೆ. ನಿಮಗೆ ಪ್ರತಿದಿನ ಏನಾದರೂ ಕೊಡುತ್ತಿರುತ್ತೇನೆ, ನೀವು ಅದನ್ನು ಬಳಸಿಕೊಳ್ಳಿ.ಆದರೆ ಸಮಾಜದಲ್ಲಿ ಬದಲಾವಣೆ ತರುವ ಅಗತ್ಯವಿದೆ. ಅದನ್ನು ಹೀಗೆ ಅಪಹಾಸ್ಯದ ವಿಷಯವಾಗಿ ಅಥವಾ ರಾಜಕೀಯದ ವಿಷಯವಾಗಿ ಮಾಡಿಕೊಳ್ಳಬೇಡಿ. ಒಂದು ಸಾಮೂಹಿಕ ಹೊಣೆಗಾರಿಕೆಯತ್ತ ನಾವು ಮುನ್ನಡೆದರೆ ಬದಲಾವಣೆ ಬರುವುದನ್ನು ನೀವು ನೋಡುವಿರಿ.
ಈ ಮಕ್ಕಳು ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ನೀವು ನೋಡಿ. ನಾನು ಪ್ರತಿದಿನ ಈ ಮಕ್ಕಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದೆ, ಬಹಳ ಗೌರವದಿಂದ ಪೋಸ್ಟ್ ಮಾಡುತ್ತಿದ್ದೆ. ನನಗೆ ಆ ಮಕ್ಕಳ ಪರಿಚಯವೂ ಇರಲಿಲ್ಲ. ಆದರೆ ಚಿತ್ರಗಳನ್ನು ನೋಡಿ ಮಕ್ಕಳು ಸ್ವಚ್ಛತೆಯ ಕಾರ್ಯದಲ್ಲಿ ಉತ್ಸಾಹ ತೋರಿಸಿದರು. ನಾನು ಆ ಮಕ್ಕಳ ಚಿತ್ರಗಳನ್ನು ಪೋಸ್ಟ್ ಮಾಡಿದಾಗ ಅದು ಕೋಟ್ಯಂತರ ಜನರನ್ನು ತಲುಪುತ್ತಿತ್ತು. ಇವರೇನು ಮಾಡುತ್ತಿದ್ದಾರೆ? ಈ ಪ್ರಬಂಧ ಸ್ಪರ್ಧೆಗಳು, ಈ ಪ್ರಬಂಧ ಸ್ಪರ್ಧೆಗಳಿಂದ ಸ್ವಚ್ಛತೆ ಸಾಧ್ಯವೇ? ಇದೇ ರೀತಿ ಚಿತ್ರ ಬರೆಯುವ ಸ್ಪರ್ಧೆಯಿಂದ ಸ್ವಚ್ಛತೆ ಸಾಧ್ಯವೇ, ಇಲ್ಲವೇ ಎಂದು ಕೇಳುತ್ತಿದ್ದರು.
ಸ್ವಚ್ಛತೆಗಾಗಿ ವೈಜ್ಞಾನಿಕ ಚಳವಳಿಯ ಅಗತ್ಯವೂ ಇದೆ. ವೈಜ್ಣಾನಿಕ ಆಂದೋಲನ ಜನ್ಮ ತಳೆಯುವವರೆಗೆ ವ್ಯವಸ್ಥೆ ಒಂದರಿಂದಲೇ ಪ್ರಗತಿ ಸಾಧ್ಯವಿಲ್ಲ. ಚಿತ್ರಗಳನ್ನು ತಯಾರಿಸಿ, ಸೃಜನಶೀಲತೆ ತನ್ನಿ, ಪ್ರಬಂಧ ಬರೆಯಿರಿ ಎಂಬಿತ್ಯಾದಿ ಸಂಗತಿಗಳು ಇದಕ್ಕೆ ಒಂದು ವೈಚಾರಿಕ ನೆಲೆಗಟ್ಟು ಒದಗಿಸುವ ಪ್ರಯತ್ನಗಳಾಗಿವೆ. ಯಾವುದೇ ವಿಷಯ ನಮ್ಮ ವಿವೇಕದಲ್ಲಿ ಸೇರಿಹೋದರೆ, ಸಿದ್ಧಾಂತಗಳ ರೂಪದಲ್ಲಿ ಸ್ಥಾನ ಪಡೆದರೆ ಅದನ್ನು ಮಾಡುವುದು ಬಹಳ ಸುಲಭವಾಗುತ್ತದೆ. ಸ್ವಚ್ಛತೆಯ ಜೊತೆಗೆ ಇಂತಹ ಚಟುವಟಿಕೆಗಳನ್ನು ಸೇರಿಸಿರುವುದರ ಹಿಂದಿನ ಉದ್ದೇಶವೂ ಇದೇ ಆಗಿದೆ. ಈಗ ನೀವೇ ನೋಡಿ, ಒಂದು ಕಾಲದಲ್ಲಿ ನನಗೆ ಏನೆಲ್ಲ ತೊಂದರೆಗಳಾಗುತ್ತಿದ್ದವು, ನಾನು ಅದನ್ನು ಅವರ ದೋಷವೆಂದು ಹೇಳುವುದಿಲ್ಲ. ಆದರೆ ಇದು ವ್ಯಾಪಾರೀ ಪ್ರಪಂಚ, ಯಾವುದರಿಂದ ಸಂಪಾದನೆ ಆಗುತ್ತದೋ, ಅದನ್ನು ಸ್ವಲ್ಪ ಮುಂದುವರಿಸಬೇಕೆಂದು ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ಸಂಪಾದನೆ ಮಾಡುವ ಆಸೆ ಇದ್ದೇ ಇರುತ್ತದೆ.
ಇಂದಿಗೆ ನಾಲ್ಕೈದು ವರ್ಷ ಮೊದಲು ಯಾವುದಾದರೂ ಶಾಲೆಯಲ್ಲಿ ಮಕ್ಕಳಿಂದ ಸ್ವಚ್ಛತೆಯ ಕೆಲಸ ಮಾಡಿಸಿದರೆ ಕೆಲವು ಟಿವಿ ಚಾನಲ್ ಗಳಲ್ಲಿ ಅದೊಂದು ದೊಡ್ಡ ಸುದ್ದಿಯಾಗುತ್ತಿತ್ತು. ಮಕ್ಕಳಿಂದ ಶಾಲೆಯನ್ನು ಸ್ವಚ್ಛ ಮಾಡಿಸುತ್ತೀರಾ ಎಂದು ಶಿಕ್ಷಕರ ಮೇಲೆ ಯುದ್ಧಕ್ಕೆ ಹೊರಡುತ್ತಿದ್ದರು. ನಂತರ ಪೋಷಕರು ಸಹ ಅವಕಾಶ ಸಿಕ್ಕಿದೆ ಎಂದು ಅಲ್ಲಿಗೆ ಹೋಗುತ್ತಿದ್ದರು. ನಮ್ಮ ಮಕ್ಕಳಿಗೆ ಪಾಠ ಹೇಳಿಕೊಡುತ್ತೀರೊ ಅಥವಾ ಸ್ವಚ್ಛತೆಯ ಕೆಲಸ ಮಾಡಿಸುತ್ತೀರೊ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇಂದು ಅದೆಷ್ಟು ಬದಲಾವಣೆಯಾಗಿದೆ ಎಂದರೆ ಯಾವುದಾದರೂ ಶಾಲೆಯಲ್ಲಿ ಮಕ್ಕಳು ಸ್ವಚ್ಛಗೊಳಿಸುತ್ತಿದ್ದರೆ ಅದು ಟಿವಿಯಲ್ಲಿ ಮುಖ್ಯ ಸುದ್ದಿಯಾಗುತ್ತದೆ. ಇದು ಸಣ್ಣ ವಿಷಯವೇನಲ್ಲ.
ನಮ್ಮ ದೇಶದ ಮಾಧ್ಯಮಗಳು ಈ ಆಂದೋಲನವನ್ನು ತಮ್ಮ ಹೆಗಲ ಮೇಲೆ ಹಾಕಿಕೊಳ್ಳದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಮೂರು ವರ್ಷಗಳಿಂದ ದೇಶದ ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮದವರು ಸಂಪೂರ್ಣವಾಗಿ ಸ್ವಚ್ಛತೆಯ ಆಂದೋಲನವನ್ನು ತಮ್ಮೊಂದಿಗೆ ಸಂಪೂರ್ಣವಾಗಿ ಸೇರಿಸಿಕೊಂಡಿದ್ದಾರೆ, ನಮಗಿಂತ ಎರಡು ಹೆಜ್ಜೆ ಮುಂದೆ ಸಾಗುತ್ತಿದ್ದಾರೆ.
`
ಈ ಮಕ್ಕಳು ತಯಾರಿಸಿದ ಕಿರುಚಿತ್ರಗಳನ್ನು ಕೆಲವು ಟಿವಿ ಚಾನೆಲ್ ಗಳು ಪ್ರತಿದಿನ ಒಂದು ನಿಗದಿತ ಸಮಯದಲ್ಲಿ ನಿರಂತರವಾಗಿ ಪ್ರಸಾರ ಮಾಡಿದವು. ಎಲ್ಲ ಜನರನ್ನು ಒಗ್ಗೂಡಿಸುವುದು ಹೇಗೆ, ಸಾಧ್ಯವಾದಷ್ಟು ಹೆಚ್ಚು ಜನರನ್ನು ಜೊತೆಗೂಡಿಸುವುದು ಹೇಗೆ ಎಂದರೆ ಇದೇ ಆಗಿದೆ. ದೇಶವನ್ನು ಮುಂದಕ್ಕೆ ತರುವ ಅವಕಾಶ ನಮಗಿದೆ, 2022 ರಲ್ಲಿ ನಾವು ದೇಶವನ್ನು ಉನ್ನತ ಸ್ಥಾನಕ್ಕೇರಿಸಬೇಕು, ಹಾಗಿರುವಾಗ ಈ ರೀತಿ ಸುಮ್ಮನೆ ಕುಳಿತುಕೊಳ್ಳಬಾರದು. ಇದನ್ನು ಮಾಡುತ್ತೇವೆ ಎಂದರೆ ಇದು ಒಂದು ದೊಡ್ಡ ವಿಷಯವಾಗಿದೆ.
ನಮ್ಮ ಮನೆ ಸ್ವಚ್ಛವಾಗಿಲ್ಲ ಎಂದಿಟ್ಟುಕೊಳ್ಳಿ. ಯಾರಾದರೂ ಅತಿಥಿಗಳು ಮನೆಗೆ ಬರುತ್ತಾರೆ ಅಥವಾ ತಮ್ಮ ಮಗಳನ್ನು ತೋರಿಸಲು ಹುಡುಗನ ಮನೆಗೆ ಬಂದಾಗ ಅವರು ಎಲ್ಲ ಸರಿಯಾಗಿದೆ, ಹುಡುಗನೂ ತುಂಬಾ ಓದಿದ್ದಾನೆ. ಆದರೆ ಮನೆ ಗಲೀಜು ನೋಡಿದರೆ ಈ ಮನೆಗೆ ಮಗಳನ್ನು ಕೊಟ್ಟು ಏನು ಮಾಡೋದು, ಅವಳು ಇಲ್ಲಿರೋದಕ್ಕೆ ಆಗದೆ ವಾಪಸ್ಸು ಬರುತ್ತಾಳೆ ಅಷ್ಟೇ ಎಂದು ಯೋಚಿಸುತ್ತಾರೆ. ವಿದೇಶದಿಂದ ಯಾರಾದರೂ ಭಾರತ ದೇಶ ನೋಡಲು ಬರುತ್ತಾರೆ. ಆಗ್ರಾ-ತಾಜ್ ಮಹಲ್ ಇಷ್ಟೊಂದು ಸುಂದರವಾಗಿದೆ ಎಂದುಕೊಳ್ಳುತ್ತಾರೆ. ಅದೇ ಯಾರಾದರೂ ಸುತ್ತಮುತ್ತಲಿನ ಜಾಗಗಳಿಗೆ ಹೋಗಿ ನೋಡಿದರೆ ಗಾಬರಿಗೊಳ್ಳುತ್ತಾರೆ.
ತಪ್ಪು ಯಾರದು ಎಂದು ಹೇಳುವುದು ನನ್ನ ಉದ್ದೇಶವಲ್ಲ. ನಾವು ಎಲ್ಲರೂ ಸೇರಿ ಮಾಡಿದರೆ ಸ್ವಚ್ಛತೆ ಸಾಧ್ಯವಾಗುತ್ತದೆ. ಈ ಮೂರು ವರ್ಷಗಳಲ್ಲಿ ನನ್ನ ದೇಶವಾಸಿಗಳು ಮಾಡಿ ತೋರಿಸಿದ್ದಾರೆ, ಸಿವಿಲ್ ಸೊಸೈಟಿಗಳು ಮಾಡಿ ತೋರಿಸಿವೆ, ಮಾಧ್ಯಮಗಳು ಮಾಡಿ ತೋರಿಸಿವೆ. ಇಷ್ಟರ ಮಟ್ಟಿಗೆ ಬೆಂಬಲ ಸಿಕ್ಕ ನಂತರವೂ ನಾವು ಇದರಲ್ಲಿ ಪ್ರಗತಿ ತೋರಿಸದಿದ್ದರೆ ನಾವೆಲ್ಲರೂ ನಮಗೇ ಉತ್ತರ ಕೊಟ್ಟುಕೊಳ್ಳಬೇಕಾಗುತ್ತದೆ.
ಹಳ್ಳಿಯಲ್ಲಿ ದೇವಾಲಯವಿರುತ್ತದೆ. ಆದರೆ ಕೆಲವರು ದೇವಸ್ಥಾನಕ್ಕೆ ಹೋಗುತ್ತಾರೆ. ಕೆಲವು ಜನರು ಹೋಗುವುದಿಲ್ಲ. ದೇವಾಲಯವಿದ್ದರೂ ಹೋಗದಿರುವುದು ಕೆಲವರ ಸ್ವಭಾವವಾಗಿದೆ. ಮಸೀದಿ ಇದ್ದರೂ ಕೆಲವರು ಹೋಗುವುದಿಲ್ಲ, ಗುರುದ್ವಾರ ಇದ್ದರೂ ಕೆಲವರು ಹೋಗುವುದಿಲ್ಲ. ಕೆಲವರು ಉತ್ಸಾಹದಿಂದ ಹೋಗುತ್ತಾರೆ. ಇಡೀ ಪ್ರಪಂಚವೇ ಹೋಗುತ್ತಿದ್ದರೂ ತಮ್ಮ ಪ್ರಪಂಚದಲ್ಲೇ ಇರುವುದು ಸಮಾಜದಲ್ಲಿ ಕೆಲವರ ಸ್ವಭಾವವಾಗಿದೆ. ನಾವು ಅವರನ್ನು ಜೊತೆ ಸೇರಿಸಿಕೊಳ್ಳಬೇಕಾಗುತ್ತದೆ, ಪ್ರಯತ್ನ ಪಡಬೇಕಾಗುತ್ತದೆ. ಪ್ರಯತ್ನ ಪಟ್ಟಾಗ ಗಾಡಿ ಸರಿಯಾಗಿ ಮುಂದೆ ಸಾಗುತ್ತದೆ.
ಅಂಕಿಅಂಶಗಳ ಪ್ರಕಾರ ಸ್ವಚ್ಛತೆಯ ಅಭಿಯಾನದ ವೇಗವೂ ಸರಿಯಾಗಿದೆ, ದಿಕ್ಕು ಸಹ ಸರಿಯಾಗಿದೆ. ಶಾಲೆಗಳಲ್ಲಿ ಶೌಚಾಲಯ ಕಟ್ಟಿಸುವ ಅಭಿಯಾನ ನಡೆಸಲಾಯಿತು. ಈಗ ಶಾಲೆಗಳಿಗೆ ಹೆಣ್ಣು ಮಕ್ಕಳು ಹೋಗುವುದಾದರೆ ಈ ವಿಷಯದಲ್ಲಿ ಬಹಳ ಜಾಗರೂಕರಾಗಿರುತ್ತಾರೆ. ಈ ವಿಷಯವಾಗಿ ಕೇಳುತ್ತಾರೆ, ಅಲ್ಲಿನ ವ್ಯವಸ್ಥೆ ನೋಡುತ್ತಾರೆ. ನಂತರ ಶಾಲೆಗೆ ಸೇರಿಸುತ್ತಾರೆ. ಮೊದಲು ಹೀಗಿರಲಿಲ್ಲ, ಹೇಗಿದ್ದರೂ ಸಹಿಸಿಕೊಳ್ಳುತ್ತಿದ್ದರು. ಯಾಕೆ, ಯಾಕೆ ಸಹಿಸಿಕೊಳ್ಳಬೇಕು? ನಮ್ಮ ಹೆಣ್ಣು ಮಕ್ಕಳು ಯಾಕೆ ಸಹಿಸಿಕೊಳ್ಳಬೇಕು?
ಸ್ವಚ್ಛತೆಯ ವಿಷಯವನ್ನು ಮಹಿಳೆಯರ ದೃಷ್ಟಿಯಿಂದ ನೋಡದಿದ್ದರೆ ಈ ಸ್ವಚ್ಛತೆಯ ಶಕ್ತಿ ಏನೆಂದು ಎಂದಿಗೂ ಅಂದಾಜು ಮಾಡಲು ಆಗುವುದಿಲ್ಲ. ಮನೆಯಲ್ಲಿ ಪ್ರತಿಯೊಬ್ಬರಿಗೂ ಕಸ ಹಾಕುವ, ವಸ್ತುಗಳನ್ನು ಚೆಲ್ಲಾಂಪಿಲ್ಲಿ ಮಾಡುವ ಹಕ್ಕು ಇದೆ ಎಂದುಕೊಳ್ಳುವವರು ಆ ತಾಯಿಯನ್ನು ನೋಡಬೇಕು. ಮನೆಯ ಎಲ್ಲರೂ ಕೆಲಸ, ಶಾಲೆ ಎಂದು ಹೊರಟ ನಂತರ ಒಬ್ಬ ತಾಯಿ ತಾನೊಬ್ಬಳೇ ಸತತ ಎರಡು ಗಂಟೆಗಳವರೆಗೆ ಮನೆ ಸ್ವಚ್ಛಗೊಳಿಸುತ್ತಿರುತ್ತಾಳೆ. ಸೊಂಟ ನೋಯುವವರೆಗೂ ಈ ಕೆಲಸ ಮಾಡುತ್ತಿರುತ್ತಾಳೆ. ನಾವೆಲ್ಲ ಮನೆಯಿಂದ ಹೊರಗೆ ಹೋಗುವುದಕ್ಕೆ ಮೊದಲು ನಮ್ಮ ವಸ್ತುಗಳನ್ನು ಎಲ್ಲೆಲ್ಲಿ ಇಡಬೇಕೊ ಅಲ್ಲಿಟ್ಟರೆ ನಿನಗೆ ಹೇಗನ್ನಿಸುತ್ತದೆ ಎಂದು ಆ ತಾಯಿಯನ್ನು ಕೇಳಿ. ಮಗು, ನನ್ನ ಸೊಂಟ ಮುರಿದುಹೋಗುತ್ತಿತ್ತು, ಇನ್ನು ಮುಂದೆ ನೀನು ಎಲ್ಲ ವಸ್ತುಗಳನ್ನು ಎಲ್ಲಿಡಬೇಕೊ ಅಲ್ಲಿಯೇ ಇಟ್ಟರೆ ನನ್ನ ಕೆಲಸ ಕೇವಲ ಹತ್ತು ನಿಮಿಷಗಳಲ್ಲೇ ಮುಗಿದು ಹೋಗುತ್ತದೆ ಎಂದು ತಾಯಿ ಖಂಡಿತವಾಗಿ ಹೇಳುತ್ತಾರೆ. ಮಧ್ಯಮ ವರ್ಗವಾಗಲಿ, ಮೇಲು ಮಧ್ಯಮ ವರ್ಗವಾಗಲಿ, ಕೆಳ ಮಧ್ಯಮ ವರ್ಗವಾಗಲಿ, ಬಡ ತಾಯಿಯಾಗಲಿ ಮನೆಯನ್ನು ಶುಚಿಗೊಳಿಸುವುದರಲ್ಲೇ ಅರ್ಧ ದಿನ ಕಳೆದು ಹೋಗುತ್ತದೆ. ಕುಟುಂಬದ ಎಲ್ಲರೂ ತಮ್ಮ ವಸ್ತುಗಳನ್ನು ಸ್ವಸ್ಥಾನದಲ್ಲಿಟ್ಟರೆ ತಾಯಿಗೆ ಮನೆ ಸ್ವಚ್ಛಗೊಳಿಸುವುದಕ್ಕೆ ನೆರವಾಗಲಿ, ಬಿಡಲಿ, ಇಷ್ಟರಿಂದಲೇ ಆ ತಾಯಿಗೆ ಅದೆಷ್ಟು ನೆಮ್ಮದಿ ಸಿಗುತ್ತದೆ. ಈ ಕೆಲಸವನ್ನು ನಾವು ಮಾಡಲು ಸಾಧ್ಯವಿಲ್ಲವೆ?
ಆದ್ದರಿಂದ ಸ್ವಚ್ಛತೆಯ ಸಂಪೂರ್ಣ ಪರಿಕಲ್ಪನೆ ನನ್ನ ಮನಸ್ಸಿನಲ್ಲಿದೆ. ನೀವು ಕಲ್ಪನೆ ಮಾಡಿಕೊಳ್ಳಬಹುದು. ಎಲ್ಲಾದರೂ ನಾಲ್ಕು ರಸ್ತೆಗಳು ಸೇರುವ ಚೌಕ ಸಿಕ್ಕರೆ ಸಾಕು ಅಲ್ಲೇ ನಿಂತು ಬಿಡುತ್ತೀರಿ ಎಂದು ನಾನು ಪುರುಷರನ್ನು ಕೇಳಲು ಬಯಸುತ್ತೇನೆ. ನಾನು ಈ ರೀತಿಯ ಭಾಷೆ ಬಳಸಿದ್ದಕ್ಕೆ ಕ್ಷಮೆ ಇರಲಿ. ಆ ತಾಯಿಯ, ಮಗಳ, ಸೋದರಿಯ ಪರಿಸ್ಥಿತಿಯನ್ನು ನೋಡಿ. ಅವರು ಏನಾದರೂ ಖರೀದಿಸಲು ಮಾರುಕಟ್ಟೆಗೆ ಹೋದಾಗ ಅವರಿಗೂ ನೈಸರ್ಗಿಕ ಕರೆಗೆ ಹೋಗಬೇಕಾಗುತ್ತದೆ. ಆದರೆ ಅವರು ತೆರೆದ ಜಾಗದಲ್ಲಿ ಎಂದಿಗೂ ಇಂತಹ ಕ್ರಿಯೆ ಮಾಡುವುದಿಲ್ಲ. ಮನೆ ತಲುಪುವವರೆಗೂ ಕಷ್ಟದಿಂದ ತಡೆ ಹಿಡಿದಿಡುತ್ತಾರೆ, ಸಹಿಸಿಕೊಳ್ಳುತ್ತಾರೆ. ಅದು ಎಂತಹ ಒಳ್ಳೆಯ ಸಂಸ್ಕಾರ? ನಿಮ್ಮ ಮನೆಯಲ್ಲೇ ನಿಮ್ಮ ತಾಯಿ, ನಿಮ್ಮ ಸೋದರಿ, ಮಗಳಲ್ಲಿ ಇಂತಹ ಉತ್ತಮ ಸಂಸ್ಕಾರಗಳಿರುವಾಗ ನಮ್ಮಲ್ಲಿ ಯಾಕಿಲ್ಲ? ಪುರುಷರು ಎನ್ನುವ ಕಾರಣಕ್ಕೆ ನಾವು ಇಷ್ಟ ಬಂದಂತೆ ನಡೆಯವುದು ನಮಗೆ ಒಪ್ಪಿಗೆಯೆ? ಇಂತಹ ಬದಲಾವಣೆ ಬರುವವರೆಗೆ ನಾವು ಸ್ವಚ್ಛತೆಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ.
ಹಳ್ಳಿಯಲ್ಲಿ ವಾಸಿಸುವ ತಾಯಂದಿರು, ಸೋದರಿಯರಷ್ಟೇ ಅಲ್ಲ, ಪಟ್ಟಣಗಳಲ್ಲಿ ಸಹ ಗುಡಿಸಲುಗಳಲ್ಲಿ ವಾಸಿಸುವ ತಾಯಂದಿರು, ಸೋದರಿಯರು ಬೆಳಗ್ಗೆ ಬೇಗನೆ ಎದ್ದೇಳುತ್ತಾರೆ. ಸೂರ್ಯ ಹುಟ್ಟುವುದಕ್ಕೆ ಮೊದಲು ನೈಸರ್ಗಿಕ ಕೆಲಸಗಳನ್ನು ಮುಗಿಸಲು ಹೊರಗೆ ಹೋಗುತ್ತಾರೆ, ಕಾಡಿಗೆ ಹೋಗುತ್ತಾರೆ. ಭಯವಾಗುವುದರಿಂದ ಐದಾರು ಸ್ನೇಹಿತೆಯರನ್ನು ಕರೆದುಕೊಂಡು ಒಟ್ಟಿಗೆ ಹೋಗುತ್ತಾರೆ. ಒಂದೊಮ್ಮೆ ಬೆಳಕು ಮೂಡಿದ ನಂತರ ಅವರಿಗೆ ನೈಸರ್ಗಿಕ ಕರೆ ಇದ್ದರೂ ತಡೆದುಕೊಂಡು ಕತ್ತಲಾಗುವವರೆಗೂ ಕಾಯುತ್ತಾರೆ. ಅವರ ಶರೀರಕ್ಕೆ ಅದೆಷ್ಟು ಒತ್ತಡ ಬೀಳುತ್ತದೆ ಎಂಬುದನ್ನು ನೀವು ಯೋಚನೆ ಮಾಡಿ. ಆ ತಾಯಿಯ ಆರೋಗ್ಯ ಏನಾಗುತ್ತದೆ? ಆಕೆಗೆ ಬೆಳಗ್ಗೆ 9-10 ಗಂಟೆಗೆ ಶೌಚಕ್ಕೆ ಹೋಗಬೇಕು ಎನಿಸಿದರೆ ಬೆಳಕಾಗಿದೆ. ಹಾಗಾಗಿ ಹೋಗಲು ಆಗುತ್ತಿಲ್ಲ, ಎಷ್ಟು ಬೇಗ ಕತ್ತಲಾಗುತ್ತದೊ ಎಂದು ಸಾಯಂಕಾಲ ಏಳು ಗಂಟೆ ಆಗುವವರೆಗೆ ಕಾಯುತ್ತಿರುತ್ತಾರೆ. ಆ ತಾಯಿಯ ಸ್ಥಿತಿ ಏನಾಗಿರಬೇಕು ಹೇಳಿ?. ನಿಮ್ಮಲ್ಲಿ ಇಷ್ಟು ಸಂವೇದನೆ ಇದ್ದರೆ ಸ್ವಚ್ಛತೆಯ ವಿಷಯವಾಗಿ ನೀವು ಟಿವಿ ಚಾನೆಲ್ ನೋಡಬೇಕಾಗಿಲ್ಲ, ಟಿವಿಯವರ ಮಾತುಗಳನ್ನು ಕೇಳಿ ಅರ್ಥ ಮಾಡಿಕೊಳ್ಳಬೇಕಾಗಿಲ್ಲ, ಪ್ರಧಾನ ಮಂತ್ರಿಯ ಅವಶ್ಯಕತೆ ಬೀಳುವುದಿಲ್ಲ, ಯಾವುದೇ ರಾಜ್ಯ ಸರ್ಕಾರದ ಅಗತ್ಯ ಇರುವುದಿಲ್ಲ, ನಿಮ್ಮಲ್ಲೇ ತಂತಾನೇ ಇದೊಂದು ಜವಾಬ್ದಾರಿ ಬರುತ್ತದೆ.
ಆದ್ದರಿಂದ ನಾನು ದೇಶಬಂಧುಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇತ್ತೀಚಿಗೆ ಯೂನಿಸೆಫ್ ವರದಿಯೊಂದನ್ನು ನೀಡಿದೆ. ಅದು ಭಾರತದಲ್ಲಿ ಸುಮಾರು 10 ಸಾವಿರ ಕುಟುಂಬಗಳ ಸಮೀಕ್ಷೆ ನಡೆಸಿದೆ. ಶೌಚಾಲಯ ಕಟ್ಟಿಸಿಕೊಂಡಿರುವವರಿಗೆ ಹೋಲಿಸಿದರೆ ಶೌಚಾಲಯ ಇಲ್ಲದ ಕುಟುಂಬದಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಇಲ್ಲದಿರುವುದರಿಂದ ಪ್ರತಿವರ್ಷ ಕಾಯಿಲೆಗಳಿಗೆಂದು ಸರಾಸರಿ 50 ಸಾವಿರ ರೂಪಾಯಿ ಖರ್ಚಾಗುತ್ತದೆ. ಕುಟುಂಬದ ಒಬ್ಬ ಮುಖ್ಯಸ್ಥ ಅನಾರೋಗ್ಯ ಪೀಡಿತನಾದರೆ ಉಳಿದ ಎಲ್ಲ ಕೆಲಸಗಳು ನಿಂತುಹೋಗುತ್ತವೆ. ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಕುಟುಂಬದ ಇನ್ನಿಬ್ಬರು ವ್ಯಕ್ತಿಗಳು ಅವರ ಸೇವೆಗೆ ನಿಲ್ಲಬೇಕಾಗುತ್ತದೆ. ರೋಗಕ್ಕೆ ಚಿಕಿತ್ಸೆ ಪಡೆಯಲು ಯಾರಿಂದಲಾದರೂ ಅಥವಾ ಸಾಹುಕಾರನಿಂದ ಹೆಚ್ಚು ಬಡ್ಡಿಗೆ ಸಾಲ ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದ 50 ಸಾವಿರ ರೂಪಾಯಿಗಳ ಹೊರೆ ಒಂದು ಬಡ ಕುಟುಂಬದ ಮೇಲೆ ಬೀಳುತ್ತದೆ.
ನಾವು ಸ್ವಚ್ಛತೆಯನ್ನು ಧರ್ಮವೆಂದು ಭಾವಿಸಿದರೆ,ಸ್ವಚ್ಛತೆಯನ್ನು ನಮ್ಮ ಕಾರ್ಯವೆಂದು ಭಾವಿಸಿದರೆ ಒಂದೊಂದು ಬಡ ಕುಟುಂಬವು ರೋಗದಿಂದಾಗಿ 50 ಸಾವಿರ ರೂಪಾಯಿ ಹೊರೆ ಬೀಳುವ ಸಂಕಟದಿಂದ ಪಾರಾಗಬಹುದು. ಅವರ ಜೇಬಿಗೆ ನಾವು ಹಣ ಹಾಕಲಿ, ಬಿಡಲಿ ಈ 50 ಸಾವಿರ ರೂಪಾಯಿ ಆತನ ಬದುಕಿನಲ್ಲಿ ಬಹಳ ಕೆಲಸಕ್ಕೆ ಬರುತ್ತದೆ. ಆದ್ದರಿಂದ ಯಾವುದೇ ಸಮೀಕ್ಷೆಗಳು ಬರಲಿ, ಮಾಹಿತಿ ಬರಲಿ ಅದನ್ನು ನಮ್ಮ ಸಾಮಾಜಿಕ ಜವಾಬ್ದಾರಿಯಾಗಿ ತೆಗೆದುಕೊಂಡು ನಾವೆಲ್ಲರೂ ನಿಭಾಯಿಸಬೇಕು.
ನಾನು ಪ್ರಧಾನ ಮಂತ್ರಿ ಆದಾಗಿನಿಂದ ಬಹಳಷ್ಟು ಜನರು ಭೇಟಿಯಾಗಲು ಬರುತ್ತಿರುತ್ತಾರೆ. ರಾಜಕೀಯ ಕಾರ್ಯಕರ್ತರು, ನಿವೃತ್ತ ಅಧಿಕಾರಿಗಳು ಭೇಟಿಯಾಗುತ್ತಾರೆ, ಸಮಾಜ ಸೇವೆಯಲ್ಲಿ ತೊಡಗಿಕೊಂಡವರೂ ಭೇಟಿಯಾಗುತ್ತಾರೆ. ಅವರೆಲ್ಲ ಬಹಳ ವಿವೇಕದಿಂದ ಮತ್ತು ವಿನಯದಿಂದ ಭೇಟಿಯಾಗುತ್ತಾರೆ, ಬಹಳ ಪ್ರೀತಿಯಿಂದ ಭೇಟಿಯಾಗುತ್ತಾರೆ. ಹೋಗುವಾಗ ತಮ್ಮ ಒಂದು ಬಯೊ ಡೇಟಾವನ್ನು ಕೊಡುತ್ತಾ ನನಗಾಗಿ ಯಾವುದೇ ಸೇವೆ ಇದ್ದರೆ ಹೇಳಿ, ನೀವು ಏನು ಹೇಳಿದರೂ ನಾನು ಹಾಜರಾಗುತ್ತೇನೆ ಎಂದು ನಿಧಾನವಾಗಿ ಹೇಳುತ್ತಾರೆ. ಅವರು ಅಷ್ಟು ಪ್ರೀತಿಯಿಂದ ಹೇಳಿರುತ್ತಾರೆ, ನಾನು ಸ್ವಚ್ಛತೆಯ ಕಾರ್ಯಕ್ಕೆ ಸ್ವಲ್ಪ ಸಮಯ ಮೀಸಲಿಡುವಿರಾ ಎಂದು ನಿಧಾನವಾಗಿ ಕೇಳುತ್ತೇನೆ. ಅವರು ಮತ್ತೊಮ್ಮೆ ಬರುವುದಿಲ್ಲ.
ನನ್ನ ಹತ್ತಿರ ಕೆಲಸ ಕೇಳಲು ಬಂದಿರುತ್ತಾರೆ, ಒಳ್ಳೆಯ ಬಯೋ ಡೇಟಾ ತಂದಿರುತ್ತಾರೆ. ಎಲ್ಲವನ್ನೂ ನೋಡಿ ನಾನು ಈ ಕೆಲಸ ಮಾಡಿ ಎಂದರೆ ಅವರು ಮತ್ತೆ ಬರುವುದೇ ಇಲ್ಲ. ನೋಡಿ,ಯಾವ ಕೆಲಸವೂ ಸಣ್ಣದಲ್ಲ,ಯಾವುದೇ ಕೆಲಸವು ಸಣ್ಣದಾಗಿರುವುದಿಲ್ಲ. ನಾವು ಕೈಗೂಡಿಸಿದರೆ ಕೆಲಸ ದೊಡ್ಡದು ಎನಿಸಿಕೊಳ್ಳುತ್ತದೆ. ಆದ್ದರಿಂದ ನಾವು ದೊಡ್ಡದನ್ನು ಮಾಡಬೇಕಾಗಿದೆ.
15 ದಿನಗಳಿಂದ ಮತ್ತೊಮ್ಮೆ ಈ ಕಾರ್ಯದಲ್ಲಿ ವೇಗ ತರುವಂತಹ ಬಹು ದೊಡ್ಡ ಕೆಲಸ ಮಾಡಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಆದರೆ ಈಗಲೂ ನಾನು ಹೇಳುವುದೇನೆಂದರೆ ಇದು ಇನ್ನೂ ಆರಂಭ,ಮಾಡುವುದು ಬೇಕಾದಷ್ಟಿದೆ. ಉತ್ಸಾಹದಿಂದ ಭಾಗವಹಿಸಿದ ಬಾಲಕರಿಗೆ, ಅವರಿಗೆ ಪ್ರೋತ್ಸಾಹ ನೀಡಿದ ಶಾಲೆಗಳ ಶಿಕ್ಷಕರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇವರಲ್ಲಿ ಕೆಲವರು ಕಿರುಚಿತ್ರಗಳನ್ನು ತಯಾರಿಸಿರಬಹುದು,ಕೆಲವರು ಪ್ರಬಂಧಗಳನ್ನು ಬರೆದಿರಬಹುದು, ಕೆಲವರು ತಾವೇ ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿರಬಹುದು. ಕೆಲವು ಶಾಲೆಗಳಂತೂ ನಿರಂತರವಾಗಿ ಬೆಳಗ್ಗೆ ಸಂಜೆ ಹಳ್ಳಿಗಳಿಗೆ, ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಸ್ವಚ್ಛತೆಯ ವಾತಾವರಣ ನಿರ್ಮಿಸಿದ್ದಾರೆ.
ಮಹಾಪುರುಷರ ಪ್ರತಿಮೆ ಸ್ಥಾಪಿಸಲು ನಾವು ರಾಜಕಾರಣಿಗಳು, ರಾಜಕೀಯ ಪಕ್ಷಗಳು ಎಲ್ಲರೂ ಅದೆಷ್ಟು ಜಗಳವಾಡುತ್ತೇವೆ ಎಂದರೆ ನಾನು ಹೈರಾಣಾಗಿದ್ದೇನೆ. ಆದರೆ ಪ್ರತಿಮೆಯನ್ನು ಸ್ಥಾಪಿಸಿದ ನಂತರ ಯಾರೂ ಅದರ ಸ್ವಚ್ಛತೆಯ ಜವಾಬ್ದಾರಿ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಪ್ರತಿಯೊಬ್ಬರಿಗೂ ನಾನು ಅವರನ್ನು ಆರಾಧಿಸುತ್ತೇನೆ, ಅವರ ಪ್ರತಿಮೆ ಸ್ಥಾಪಿಸುತ್ತೇನೆ, ಅವರ ಪ್ರತಿಮೆ ಸ್ಥಾಪಿಸಬೇಕೆಂದು ಅನಿಸುತ್ತಿರುತ್ತದೆ. ಆದರೆ ಆ ಜನರಿಗೆ ಸ್ವಚ್ಛತೆಯಲ್ಲಿ ಆಸಕ್ತಿ ಇಲ್ಲ. ಎಲ್ಲಿಂದಲೋ ಹಾರಿ ಬಂದು ಕುಳಿತುಕೊಳ್ಳುವ ಪಾರಿವಾಳ ಏನು ಮಾಡಬೇಕೊ ಮಾಡಲಿ, ತೆರೆದ ಜಾಗವಿದೆ ಬಯಲು ತೆರೆದಿದೆ.
ಇವು, ಇವು ಸಮಾಜದ ದೋಷಗಳಾಗಿವೆ. ಆದ್ದರಿಂದ ನಾವೆಲ್ಲರೂ ಇದಕ್ಕೆ ಹೊಣೆಗಾರರಾಗುತ್ತೇವೆ. ಒಳ್ಳೆಯದು, ಕೆಟ್ಟದು ಎಂಬುದು ನನ್ನ ಅಭಿಪ್ರಾಯವಲ್ಲ, ನಾವೆಲ್ಲರೂ ಯೋಚಿಸಬೇಕು. ನಾವೆಲ್ಲರೂ ಯೋಚಿಸಿದರೆ ಖಂಡಿತವಾಗಿ ಒಳ್ಳೆಯ ಪರಿಣಾಮ ಸಿಗುತ್ತದೆ. ಆದ್ದರಿಂದ ನಾನು ಸತ್ಯಾಗ್ರಹಿ, ಸ್ವಚ್ಛಾಗ್ರಹಿಗಳಾದ ನನ್ನ ಎಲ್ಲ ದೇಶಬಂಧುಗಳಿಗೆ ಹೃತ್ಪೂರ್ವಕವಾಗಿ ಬಹಳ ಶುಭ ಕೋರುತ್ತೇನೆ. ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ಜಯಂತಿಯಂದು ಮತ್ತೊಮ್ಮೆ ನಮ್ಮನ್ನು ನಾವು ದೇಶಕ್ಕಾಗಿ ಸಮರ್ಪಿಸಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕು.ಈ ಸ್ವಚ್ಛತೆಯ ಕೆಲಸವೇ ಹೀಗೆ, ಏನೂ ಮಾಡಲಾಗದು. ದೇಶದ ಸೇವೆಗೆ ಏನಾದರು ಮಾಡುವ ಶಕ್ತಿ ಇಲ್ಲದವರು ಇದನ್ನು ಮಾಡಬಹುದು. ಇದು ಅಷ್ಷು ಸುಲಭದ ಕೆಲಸವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಅವರು ‘ಏನೂ ಮಾಡಲು ಆಗದಿದ್ದರೆ ತಕ್ಕಡಿ ಹಿಡಿದುಕೊಂಡು ಕುಳಿತುಕೋ ಸಾಕು’ಎಂದು ಹೇಳಿದಂತೆಯೇ ಇದೆ ಇದು.ಶ್ರೇಷ್ಠ ಭಾರತವನ್ನು ನಿರ್ಮಿಸಲು ಪ್ರತಿಯೊಬ್ಬ ಭಾರತೀಯರು ಈ ಒಂದು ಸಣ್ಣ ಕಾರ್ಯ ಮಾಡಬಹುದು. ಪ್ರತಿದಿನ 5 ನಿಮಿಷ,10 ನಿಮಿಷ,15 ನಿಮಿಷ,ಅರ್ಧ ಗಂಟೆ ನಾನು ಏನಾದರೂ ಮಾಡುತ್ತೇನೆ ಎಂದು ಯೋಚಿಸಿ ಬನ್ನಿ. ದೇಶದಲ್ಲಿ ಸಹಜವಾಗಿಯೇ ಬದಲಾವಣೆ ಕಂಡು ಬರುತ್ತದೆ. ನಾವು ಭಾರತವನ್ನು ವಿಶ್ವದ ಮುಂದೆ ವಿಶ್ವದ ದೃಷ್ಟಿಯಿಂದ ನೋಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅದೇ ರೀತಿ ಮಾಡಬೇಕಾಗಿದೆ, ಮಾಡಿ ತೋರಿಸುತ್ತೇವೆ.
ಬಹಳ ಬಹಳ ಧನ್ಯವಾದಗಳು