ಸಾರ್ವಭೌಮ ಕಾನೂನು ನಮ್ಮ ನಾಗರಿಕತೆ ಮತ್ತು ಸಾಮಾಜಿಕತೆಯ ಮೂಲ
ನ್ಯಾಯಾಂಗ ಆಧುನೀಕರಣದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ದೊಡ್ಡ ಪಾತ್ರ ವಹಿಸುತ್ತದೆ
ವಿದೇಶಿ ಹೂಡಿಕೆದಾರರು ತಮ್ಮ ನ್ಯಾಯಾಂಗ ಹಕ್ಕುಗಳ ಸುರಕ್ಷತೆಯ ಬಗ್ಗೆ ಹೆಚ್ಚು ವಿಶ್ವಾಸ ಹೊಂದುತ್ತಿರುವುದರಿಂದ ಸುಗಮ ನ್ಯಾಯವು ಸುಲಲಿತ ವ್ಯಾಪಾರವನ್ನು ಹೆಚ್ಚಿಸುತ್ತದೆ: ಪ್ರಧಾನ ಮಂತ್ರಿ

ನಮಸ್ಕಾರ,

ದೇಶದ ಕಾನೂನು ಸಚಿವರಾದ ಶ್ರೀ ರವಿ ಶಂಕರ ಪ್ರಸಾದ್ ಜೀ, ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ ರೂಪಾನಿ ಜೀ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಶ್ರೀ ಎನ್.ಆರ್. ಶಾಹ ಜೀ, ಗುಜರಾತ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ವಿಕ್ರಂ ನಾಥ್ ಜೀ, ಗುಜರಾತ್ ಸರಕಾರದ ಸಚಿವರೆ, ಗುಜರಾತ್ ಹೈಕೋರ್ಟಿನ ಎಲ್ಲಾ ಗೌರವಾನ್ವಿತ ನ್ಯಾಯಮೂರ್ತಿಗಳೇ, ಭಾರತದ ಸಾಲಿಸಿಟರ್ ಜನರಲ್ ಶ್ರೀ ತುಷಾರ್ ಮೆಹ್ತಾ ಜೀ, ಗುಜರಾತಿನ ಅಡ್ವೊಕೇಟ್ ಜನರಲ್ ಶ್ರೀ ಕಮಲ್ ತ್ರಿವೇದಿ ಜೀ, ಬಾರ್‍ ನ ಎಲ್ಲಾ ಗೌರವಾನ್ವಿತ ಸದಸ್ಯರೇ, ಮಹಿಳೆಯರೇ ಮತ್ತು ಮಹನೀಯರೇ !

ಗುಜರಾತ್ ಹೈಕೋರ್ಟಿನ ವಜ್ರ ಮಹೋತ್ಸವ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಅಭಿನಂದನೆಗಳು. ಕಳೆದ 60 ವರ್ಷಗಳಲ್ಲಿ ಗುಜರಾತ್ ಹೈಕೋರ್ಟ್ ಮತ್ತು ಬಾರ್ ತಮ್ಮ ಕಾನೂನು ತಿಳುವಳಿಕೆ, ಪಾಂಡಿತ್ಯ ಮತ್ತು ಬುದ್ಧಿಮತ್ತೆಯಿಂದಾಗಿ ವಿಶಿಷ್ಟ ಗುರುತಿಸುವಿಕೆಯನ್ನು ಗಳಿಸಿಕೊಂಡಿವೆ. ಸತ್ಯ ಮತ್ತು ನ್ಯಾಯಕ್ಕಾಗಿ ಗುಜರಾತ್ ಹೈಕೋರ್ಟ್ ಆತ್ಮಸಾಕ್ಷಿ ಮನೋಭಾವದಲ್ಲಿ ಕಾರ್ಯನಿರ್ವಹಿಸಿರುವ ರೀತಿ, ತನ್ನ ಸಾಂವಿಧಾನಿಕ ಕರ್ತವ್ಯಗಳ ಬಗ್ಗೆ ಅದು ತೋರಿದ ಸಿದ್ಧತಾ ಸ್ಥಿತಿ ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಿದೆ. ಗುಜರಾತ್ ಹೈಕೋರ್ಟಿನ ಸ್ಮರಣೀಯ ಪ್ರಯಾಣವನ್ನು ನೆನಪಿಸಿಕೊಳ್ಳಲು ಇಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿದೆ. ನಾನು ಈ ಸಂದರ್ಭದಲ್ಲಿ ನೀವೆಲ್ಲಾ ಗೌರವಾನ್ವಿತರಿಗೆ ಮತ್ತು ಗುಜರಾತಿನ ಜನತೆಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸಲು ಬಯಸುತ್ತೇನೆ.

ಗೌರವಾನ್ವಿತರೇ, ಶಾಸಕಾಂಗಕ್ಕೆ, ಮತ್ತು ನ್ಯಾಯಾಂಗಕ್ಕೆ ನಮ್ಮ ಸಂವಿಧಾನದಲ್ಲಿ ನೀಡಲಾಗಿರುವ ಜವಾಬ್ದಾರಿಗಳು ನಮ್ಮ ಸಂವಿಧಾನಕ್ಕೆ ಆಮ್ಲಜನಕ ಇದ್ದಂತೆ. ಇಂದು ಪ್ರತಿಯೊಬ್ಬ ದೇಶವಾಸಿಯೂ ನಮ್ಮ ನ್ಯಾಯಾಂಗವು ಸಂವಿಧಾನದ ಆಮ್ಲಜನಕವನ್ನು ರಕ್ಷಿಸುವ ಜವಾಬ್ದಾರಿಯನ್ನು ಈಡೇರಿಸಿದೆ ಎಂದು ತೃಪ್ತಿಯಿಂದ ಹೇಳಬಹುದಾಗಿದೆ. ನಮ್ಮ ನ್ಯಾಯಾಂಗವು ಸದಾ ಸಂವಿಧಾನದ ರಚನಾತ್ಮಕ ಮತ್ತು ಧನಾತ್ಮಕ ವಿಶ್ಲೇಷಣೆಗಳನ್ನು ಮಾಡುವ ಮೂಲಕ ಸಂವಿಧಾನವನ್ನು ಬಲಪಡಿಸಿದೆ. ದೇಶವಾಸಿಗಳ ಹಕ್ಕುಗಳ ರಕ್ಷಣೆ ಇರಲಿ, ಅಥವಾ ಖಾಸಗಿ ಸ್ವಾತಂತ್ರ್ಯ ಇರಲಿ, ಅಥವಾ ದೇಶದ ಹಿತಾಸಕ್ತಿಗೆ ಗರಿಷ್ಟ ಆದ್ಯತೆ ನೀಡಬೇಕಾದ ಸಂದರ್ಭ ಇರಲಿ, ನ್ಯಾಯಾಂಗವು ಅವುಗಳನ್ನು ಪರಿಗಣಿಸಿ ಈ ಬಾಧ್ಯತೆಗಳನ್ನು ಈಡೇರಿಸಿದೆ.

ನಿಮಗೆಲ್ಲಾ ಗೊತ್ತಿದೆ, ಭಾರತದ ಸಮಾಜದಲ್ಲಿ ಕಾನೂನಿನ ಆಡಳಿತ ಶತಮಾನಗಳಿಂದ ನಮ್ಮ ಸಂಸ್ಕೃತಿಯ ಮೂಲವಾಗಿದೆ. ಅದು ಸಾಮಾಜಿಕ ಸಂರಚನೆಯಲ್ಲಿ, ನಾಗರಿಕತೆಯಲ್ಲಿ ಮಿಳಿತವಾಗಿದೆ.ನಮ್ಮ ಪ್ರಾಚೀನ ಧರ್ಮಗ್ರಂಥಗಳಲ್ಲಿ 'न्यायमूलं सुराज्यं स्यात्' ಎಂದು ಬರೆದಿದೆ. ಅಂದರೆ ಉತ್ತಮ ಆಡಳಿತದ ಬೇರು ಇರುವುದು ನ್ಯಾಯದಲ್ಲಿ, ಕಾನೂನಿನ ಆಡಳಿತದಲ್ಲಿ. ಈ ಚಿಂತನೆ ಅನಾದಿ ಕಾಲದಿಂದ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಈ ಮಂತ್ರವೇ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ನೈತಿಕ ಬಲ ಒದಗಿಸಿತು ಮತ್ತು ಅದೇ ಚಿಂತನೆಗೆ ನಮ್ಮ ಹಿರಿಯರು ಸಂವಿಧಾನದಲ್ಲಿ ಬಹಳ ಪ್ರಾಮುಖ್ಯತೆ ನೀಡಿದರು. ನಮ್ಮ ಸಂವಿಧಾನದ ಪ್ರಸ್ತಾವನೆಯು ಕಾನೂನು ಆಡಳಿತದ ಅದೇ ನಿರ್ಧಾರದ ಅಭಿವ್ಯಕ್ತಿ. ಇಂದು, ನಮ್ಮ ನ್ಯಾಯಾಂಗ ಸದಾ ಶಕ್ತಿ ನೀಡುತ್ತಿರುವುದಕ್ಕೆ ಮತ್ತು ನಮ್ಮ ಸಂವಿಧಾನವು ಈ ಸ್ಪೂರ್ತಿಗೆ, ಶಕ್ತಿಗೆ ದಿಕ್ಕುದಿಶೆ ಒದಗಿಸಿರುವುದಕ್ಕೆ ಮತ್ತು ನಿರಂತರವಾದ ಈ ಮೌಲ್ಯಗಳಿಗಾಗಿ ಪ್ರತೀ ದೇಶವಾಸಿಯೂ ಹೆಮ್ಮೆ ಪಡುತ್ತಾರೆ.

ನ್ಯಾಯಾಂಗದಲ್ಲಿಯ ನಂಬಿಕೆಯು ನಮ್ಮ ಸಾಮಾನ್ಯ ಮನುಷ್ಯನ ಮನಸ್ಸಿನಲ್ಲಿ ಭರವಸೆ, ವಿಶ್ವಾಸವನ್ನು ತುಂಬಿದೆ. ಮತ್ತು ಆತನಿಗೆ ಸತ್ಯಕ್ಕಾಗಿ ಎದ್ದು ನಿಲ್ಲುವ ಶಕ್ತಿಯನ್ನು ನೀಡಿದೆ. ಮತ್ತು ನಾವು ನ್ಯಾಯಾಂಗದ ಕೊಡುಗೆಯನ್ನು ಸ್ವಾತಂತ್ರ್ಯಾನಂತರದ ದೇಶದ ಪ್ರಗತಿಯ ಪಥದ ಪ್ರಯಾಣದ ಜೊತೆ ಚರ್ಚಿಸುವಾಗ ಬಾರ್ ನ ಕೊಡುಗೆಯ ಕುರಿತು ಚರ್ಚಿಸುವುದೂ ಅಗತ್ಯ. ನಮ್ಮ ನ್ಯಾಯಾಂಗ ವ್ಯವಸ್ಥೆಯ ಈ ಖ್ಯಾತ ಪರಂಪರೆ ಬಾರ್ ನ ಕಂಭಗಳ ಮೇಲೆ ನಿಂತಿದೆ. ದಶಕಗಳಿಂದ ಬಾರ್ ಮತ್ತು ನ್ಯಾಯಾಂಗ ನಮ್ಮ ದೇಶದ ನ್ಯಾಯ ವ್ಯವಸ್ಥೆಯ ಮೂಲಭೂತ ಉದ್ದೇಶಗಳನ್ನು ಈಡೇರಿಸುತ್ತಾ ಬಂದಿದೆ. ನಮ್ಮ ಸಂವಿಧಾನ ಮುಂದಿಟ್ಟ ನ್ಯಾಯದ ಇಂಗಿತ, ನ್ಯಾಯದ ಆದರ್ಶಗಳು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿವೆ, ಮತ್ತು ನ್ಯಾಯವು ಪ್ರತೀ ಭಾರತೀಯರ ಹಕ್ಕು ಆಗಿದೆ. ಆದುದರಿಂದ, ನ್ಯಾಯಾಂಗ ಮತ್ತು ಸರಕಾರಗಳು ಜೊತೆಗೂಡಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದಲ್ಲಿ ವಿಶ್ವ ದರ್ಜೆಯ ನ್ಯಾಯ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ. ನಮ್ಮ ನ್ಯಾಯ ವ್ಯವಸ್ಥೆ ಸಮಾಜದ ತಳಮಟ್ಟದಲ್ಲಿರುವ ವ್ಯಕ್ತಿಗೂ ನ್ಯಾಯ ಲಭಿಸುವಂತಿದೆ, ಇಲ್ಲಿ ಪ್ರತೀ ವ್ಯಕ್ತಿಗೂ ನ್ಯಾಯ ಲಭಿಸುವುದು ಖಚಿತ ಮತ್ತು ನ್ಯಾಯವು ಸಕಾಲದಲ್ಲಿ ಲಭಿಸಲಿದೆ.

ಇಂದು, ನ್ಯಾಯಾಂಗದಂತೆ, ಸರಕಾರ ಕೂಡಾ ಈ ನಿಟ್ಟಿನಲ್ಲಿ ತನ್ನ ಕರ್ತವ್ಯಗಳನ್ನು ಈಡೇರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತದ ಪ್ರಜಾಪ್ರಭುತ್ವ ಮತ್ತು ನಮ್ಮ ನ್ಯಾಯಾಂಗಗಳು ಕಠಿಣತಮ ಪರಿಸ್ಥಿತಿಗಳಲ್ಲಿಯೂ ಭಾರತದ ನಾಗರಿಕರ ನ್ಯಾಯದ ಹಕ್ಕನ್ನು ರಕ್ಷಿಸಿವೆ. ನಾವಿದಕ್ಕೆ ಉತ್ತಮ ಉದಾಹರಣೆಯನ್ನು ಕೊರೊನಾ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಕಾಣಬಹುದು. ಈ ಬಿಕ್ಕಟ್ಟಿನಲ್ಲಿಯೂ, ದೇಶವು ಒಂದೆಡೆ ತನ್ನ ಸಾಮರ್ಥ್ಯವನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ನಮ್ಮ ನ್ಯಾಯಾಂಗವು ತನ್ನ ಅರ್ಪಣಾಭಾವ ಮತ್ತು ಬದ್ಧತೆಯನ್ನು ತೋರ್ಪಡಿಸಿದೆ. ಲಾಕ್ ಡೌನ್ ನ ಮೊದಲ ದಿನಗಳಲ್ಲಿ ಗುಜರಾತ್ ಹೈಕೋರ್ಟು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಯನ್ನು ಆರಂಭಿಸಿದ ರೀತಿ, ಎಸ್.ಎಂ.ಎಸ್.ಮೂಲಕ ಸಂದೇಶ ರವಾನೆ, ಪ್ರಕರಣಗಳ ಇ-ಫೈಲಿಂಗ್ ಮತ್ತು “ನನ್ನ ಪ್ರಕರಣಗಳ ಸ್ಥಿತಿ ಗತಿಯ ಬಗ್ಗೆ ಮಿಂಚಂಚೆ (ಇಮೈಲ್) ಸೌಲಭ್ಯವನ್ನು ಅದು ಒದಗಿಸಿದ ಕ್ರಮ, ನ್ಯಾಯಾಲಯದ ಡಿಸ್ಪ್ಲೇ ಬೋರ್ಡ್ ಯೂಟ್ಯೂಬ್ ನಲ್ಲಿಯೂ ಪ್ರದರ್ಶಿಸಲ್ಪಟ್ಟ ರೀತಿ, ಪ್ರತೀ ದಿನ ತೀರ್ಪುಗಳು ಮತ್ತು ಆದೇಶಗಳನ್ನು ವೆಬ್ ಸೈಟಿನಲ್ಲಿ ಅಪ್ ಲೋಡ್ ಮಾಡಲಾದ ಕ್ರಮ- ಈ ಎಲ್ಲಾ ಸಂಗತಿಗಳೂ ನಮ್ಮ ನ್ಯಾಯ ವ್ಯವಸ್ಥೆ ಹೇಗೆ ಹೊಂದಾಣಿಕೆಗಳನ್ನು ಮೈಗೂಢಿಸಿಕೊಳ್ಳಬಹುದು ಮತ್ತು ಅದು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೇಗೆ ಪ್ರಯತ್ನಗಳನ್ನು ಮಾಡಬಲ್ಲದು ಎಂಬುದನ್ನು ಸಾಬೀತು ಮಾಡಿವೆ.

ನ್ಯಾಯಾಲಯ ಕಲಾಪಗಳನ್ನು ಲೈವ್ ಸ್ಟ್ರೀಮಿಂಗ್ ಮಾಡಿದ ಮೊದಲ ನ್ಯಾಯಾಲಯ ಗುಜರಾತ್ ಹೈಕೋರ್ಟ್ ಎಂದು ನನಗೆ ತಿಳಿಸಲಾಗಿದೆ.ಮತ್ತು ಬಹಳ ಧೀರ್ಘ ಕಾಲದಿಂದ ಚರ್ಚೆಯಲ್ಲಿದ್ದ ಮುಕ್ತ ನ್ಯಾಯಾಲಯದ ಚಿಂತನೆಯನ್ನು ಕೂಡಾ ಗುಜರಾತ್ ಹೈಕೋರ್ಟ್ ಅನುಷ್ಟಾನಕ್ಕೆ ತಂದಿದೆ. ಇದು ನಮಗೆ ತೃಪ್ತಿ ತರುವ ಕೆಲಸವಾಗಿದೆ. ಕಾನೂನು ಸಚಿವಾಲಯ ಅಭಿವೃದ್ಧಿಪಡಿಸಿದ ಇ-ನ್ಯಾಯಾಲಯಗಳನ್ನು ಸಂಯೋಜಿಸುವ ಆಂದೋಲನ ಮಾದರಿ ಯೋಜನೆಯು ನಮ್ಮ ನ್ಯಾಯಾಲಯಗಳಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ವರ್ಚುವಲ್ ನ್ಯಾಯಾಲಯಗಳಂತೆ ಕಾರ್ಯ ನಿರ್ವಹಿಸುವುದಕ್ಕೆ ಸಹಾಯ ಮಾಡಿದೆ. ಡಿಜಿಟಲ್ ಇಂಡಿಯಾ ಮಿಷನ್ ಅತ್ಯಂತ ತ್ವರಿತವಾಗಿ ನಮ್ಮ ನ್ಯಾಯ ವ್ಯವಸ್ಥೆಯನ್ನು ಇಂದು ಆಧುನೀಕರಣಗೊಳಿಸುತ್ತಿದೆ.

ದೇಶದಲ್ಲಿಂದು 18,000 ಕ್ಕೂ ಅಧಿಕ ನ್ಯಾಯಾಲಯಗಳನ್ನು ಕಂಪ್ಯೂಟರೀಕರಣ ಮಾಡಲಾಗಿದೆ. ಸರ್ವೋಚ್ಛ ನ್ಯಾಯಾಲಯವು ವೀಡಿಯೋ ಮತ್ತು ಟೆಲಿ-ಕಾನ್ಫರೆನ್ಸಿಂಗ್ ಗೆ ಕಾನೂನಿನ ಪಾವಿತ್ರ್ಯ ನೀಡಿದ ಬಳಿಕ ಇ-ಪ್ರಕ್ರಿಯೆಗಳು ಹೆಚ್ಚು ವೇಗ ಪಡೆದುಕೊಂಡಿವೆ. ನಮ್ಮ ಸುಪ್ರೀಂ ಕೋರ್ಟು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಶ್ವದಲ್ಲಿಯೇ ಗರಿಷ್ಟ ಪ್ರಮಾಣದ ಪ್ರಕರಣಗಳನ್ನು ವಿಚಾರಣೆ ಮಾಡಿದ ಕೋರ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ಹೈಕೋರ್ಟುಗಳು ಮತ್ತು ಜಿಲ್ಲಾ ನ್ಯಾಯಾಲಯಗಳು ಕೋವಿಡ್ ಅವಧಿಯಲ್ಲಿ ಗರಿಷ್ಟ ಪ್ರಕರಣಗಳ ವಿಚಾರಣೆಯನ್ನು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿವೆ. ಇ-ಫಿಲ್ಲಿಂಗ್ ವ್ಯವಸ್ಥೆಯು ನ್ಯಾಯದಾನಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಿದೆ. ಅದೇ ರೀತಿ ವಿಶಿಷ್ಟ ಗುರುತಿಸುವಿಕೆ ಕೋಡ್ ಮತ್ತು ಕ್ಯೂ.ಆರ್. ಕೋಡ್ ಗಳನ್ನು ಇಂದು ನಮ್ಮ ನ್ಯಾಯಾಲಯಗಳು ಪ್ರತೀ ಪ್ರಕರಣಕ್ಕೆ ನೀಡುತ್ತಿವೆ. ಇದರಿಂದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪಡೆಯುವುದು ಸುಲಭವಾಗಿರಿಸುವುದು ಮಾತ್ರವಲ್ಲ ಅದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲಕ್ಕೆ ಬಲವಾದ ತಳಕಟ್ಟನ್ನು ನಿರ್ಮಾಣ ಮಾಡಿದೆ. ವಕೀಲರು ಮತ್ತು ಕಕ್ಷಿದಾರರು ಎಲ್ಲಾ ಪ್ರಕರಣಗಳನ್ನು ಮತ್ತು ಆದೇಶಗಳನ್ನು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಮೂಲಕ ಸುಲಭದಲ್ಲಿ ನೋಡಬಹುದಾಗಿದೆ. ನ್ಯಾಯವನ್ನು ಸುಲಭಗೊಳಿಸುವ ಈ ಕ್ರಮ ನಮ್ಮ ನಾಗರಿಕರ ಜೀವನವನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಮತ್ತು ಅದು ದೇಶದಲ್ಲಿ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ಹೆಚ್ಚಿಸಿದೆ. ಇದರಿಂದ ಭಾರತದಲ್ಲಿ ತಮ್ಮ ನ್ಯಾಯಯುತ ಹಕ್ಕುಗಳು ರಕ್ಷಿಸಲ್ಪಡುತ್ತವೆ ಎಂಬ ವಿಶ್ವಾಸ ವಿದೇಶಿ ಹೂಡಿಕೆದಾರರಲ್ಲಿ ಮೂಡುವಂತಾಗಿದೆ. ವಿಶ್ವ ಬ್ಯಾಂಕ್ ಕೂಡಾ ತನ್ನ ವ್ಯಾಪಾರೋದ್ಯಮವನ್ನು ಕುರಿತ 2018 ರ ವರದಿಯಲ್ಲಿ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ವ್ಯವಸ್ಥೆಯನ್ನು ಶ್ಲಾಘಿಸಿದೆ.

ಗೌರವಾನ್ವಿತರೇ,

ಸರ್ವೋಚ್ಚ ನ್ಯಾಯಾಲಯದ ಇ-ಸಮಿತಿಯು ಎನ್.ಐ.ಸಿ.ಯೊಂದಿಗೆ ಅತ್ಯಂತ ನಿಕಟವಾಗಿ ಕಾರ್ಯಾಚರಿಸುತ್ತಿದ್ದು, ಬರಲಿರುವ ದಿನಗಳಲ್ಲಿ ನ್ಯಾಯವನ್ನು ಹೆಚ್ಚು ಸುಲಭಗೊಳಿಸುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಭದ್ರತೆಯ ಜೊತೆ ಕ್ಲೌಡ್ ಆಧಾರಿತ ಮೂಲಸೌಕರ್ಯದಂತಹ ಅಂಶಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಭವಿಷ್ಯದ ಆವಶ್ಯಕತೆಗಳಿಗೆ ಸಿದ್ದವಾಗಿಡಲು ಕೃತಕ ಬುದ್ಧಿಮತ್ತೆಯನ್ನು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಬಳಸಬಹುದಾದ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ ನ್ಯಾಯಾಂಗದ ದಕ್ಷತೆ ಮತ್ತು ವೇಗವನ್ನು ಹೆಚ್ಚಿಸಬಲ್ಲದು. ದೇಶದ ಆತ್ಮ ನಿರ್ಭರ ಭಾರತ ಆಂದೋಲನ ಈ ಪ್ರಯತ್ನಗಳಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದೆ.

ಭಾರತದ ಸ್ವಂತ ವೀಡಿಯೋ ಕಾನ್ಫರೆನ್ಸಿಂಗ್ ವೇದಿಕೆಗಳಿಗೆ ಕೂಡಾ ಆತ್ಮನಿರ್ಭರ ಭಾರತ ಆಂದೋಲನದಡಿಯಲ್ಲಿ ಉತ್ತೇಜನ ನೀಡಲಾಗುತ್ತಿದೆ. ದೇಶದಲ್ಲಿ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು, ಸಾಮಾನ್ಯ ಜನತೆಗೆ ಅನುಕೂಲತೆಗಳನ್ನು ಒದಗಿಸಲು ಹೈಕೋರ್ಟು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಇ-ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಜಾಗತಿಕ ಸಾಂಕ್ರಾಮಿಕದ ಈ ಕಠಿಣ ಸಮಯದಲ್ಲಿಯೂ ಆನ್ ಲೈನ್ ಲೋಕ ಅದಾಲತ್ ಗಳು ನವ -ಸಹಜವಾಗಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಗುಜರಾತಿನ ಜುನಾಗಡ್ ನಲ್ಲಿ 35-40 ವರ್ಷಗಳ ಹಿಂದೆ ಮೊದಲ ಲೋಕ ಅದಾಲತನ್ನು ಸ್ಥಾಪಿಸಲಾಯಿತು. ಇಂದು ಇ-ಲೋಕ ಅದಾಲತ್ ಗಳು ಸಕಾಲಿಕ ಮತ್ತು ಅನುಕೂಲಕರ ನ್ಯಾಯ ಮಾಧ್ಯಮವಾಗುತ್ತಿವೆ. ಇದುವರೆಗೆ ಲಕ್ಷಾಂತರ ಪ್ರಕರಣಗಳು ದೇಶದ 24 ರಾಜ್ಯಗಳಲ್ಲಿ ವರದಿಯಾಗಿವೆ ಮತ್ತು ಅವುಗಳನ್ನು ಇತ್ಯರ್ಥಪಡಿಸಲಾಗಿದೆ. ಈ ವೇಗ, ಸೌಲಭ್ಯ ಮತ್ತು ವಿಶ್ವಾಸ ಇಂದು ನಮ್ಮ ನ್ಯಾಯಾಂಗ ವ್ಯವಸ್ಥೆಯ ಬೇಡಿಕೆಯಾಗಿದೆ.

ಗುಜರಾತ್ ಇನ್ನೊಂದು ವಿಷಯದಲ್ಲಿಯೂ ತನ್ನ ಕೊಡುಗೆ ಬಗ್ಗೆ ಹೆಮ್ಮೆ ಹೊಂದಿದೆ. ಸಂಜೆ ನ್ಯಾಯಾಲಯಗಳನ್ನು ಆರಂಭಿಸುವ ಪರಂಪರೆಯನ್ನು ಹಾಕಿದ್ದು ಗುಜರಾತ್ ಮತ್ತು ಅದು ಬಡವರ ಬದುಕನ್ನು ಸುಧಾರಿಸಲು ಅನೇಕ ಉಪಕ್ರಮಗಳನ್ನು ಕೈಗೊಂಡಿತು. ಯಾವುದೇ ಸಮಾಜದಲ್ಲಿ, ನ್ಯಾಯವು ನೀತಿ ಮತ್ತು ನಿಯಮಗಳ ಮಹತ್ವವನ್ನು ಹೇಳುತ್ತದೆ. ನಾಗರಿಕರಲ್ಲಿ ಖಚಿತತೆಯನು ತರುವಲ್ಲಿ ನ್ಯಾಯದ ಪಾತ್ರ ಮಹತ್ವದ್ದು, ಮತ್ತು ಆರಾಮದಲ್ಲಿರುವ ಸಮಾಜವು ಪ್ರಗತಿಯ ಬಗ್ಗೆ ಚಿಂತಿಸುತ್ತದೆ. ನಿರ್ಣಯಗಳನು ಕೈಗೊಂಡು ಪ್ರಯತ್ನಗಳ ಮೂಲಕ ಪ್ರಗತಿಯತ್ತ ಸಾಗುತ್ತದೆ. ನಮ್ಮ ನ್ಯಾಯಾಂಗ ಮತ್ತು ನ್ಯಾಯಾಂಗದ ಹಿರಿಯ ಸದಸ್ಯರು ನಮ್ಮ ಸಂವಿಧಾನದ ನ್ಯಾಯಾಧಿಕಾರವನ್ನು ಇನ್ನಷ್ಟು ಸಶಕ್ತೀಕರಿಸುವಲ್ಲಿ ಕೈಜೋಡಿಸುತ್ತಾರೆ ಎಂಬ ಬಗ್ಗೆ ನಾನು ಖಚಿತ ಭರವಸೆ ಹೊಂದಿದ್ದೇನೆ. ನ್ಯಾಯದ ಈ ಶಕ್ತಿಯೊಂದಿಗೆ ನಮ್ಮ ದೇಶವು ಮುನ್ನಡೆಯಲಿದೆ ಮತ್ತು ಸ್ವಾವಲಂಬಿ ಭಾರತದ ನಮ್ಮ ಕನಸು ಪ್ರಯತ್ನಗಳು, ಸಾಮೂಹಿಕ ಶಕ್ತಿ, ದೃಢ ಸಂಕಲ್ಪ ಮತ್ತು ನಮ್ಮ ನಿರಂತರ ಅನುಷ್ಟಾನ ಪದ್ದತಿಯ ಮೂಲಕ ನನಸಾಗಲಿದೆ. ಈ ಶುಭ ಹಾರೈಕೆಗಳೊಂದಿಗೆ ನಿಮ್ಮೆಲ್ಲರಿಗೂ ಮತ್ತೊಮ್ಮೆ ವಜ್ರ ಮಹೋತ್ಸವದ ಅಭಿನಂದನೆಗಳು! ಬಹಳ ಬಹಳ ಶುಭಾಶಯಗಳು!

ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Income inequality declining with support from Govt initiatives: Report

Media Coverage

Income inequality declining with support from Govt initiatives: Report
NM on the go

Nm on the go

Always be the first to hear from the PM. Get the App Now!
...
Chairman and CEO of Microsoft, Satya Nadella meets Prime Minister, Shri Narendra Modi
January 06, 2025

Chairman and CEO of Microsoft, Satya Nadella met with Prime Minister, Shri Narendra Modi in New Delhi.

Shri Modi expressed his happiness to know about Microsoft's ambitious expansion and investment plans in India. Both have discussed various aspects of tech, innovation and AI in the meeting.

Responding to the X post of Satya Nadella about the meeting, Shri Modi said;

“It was indeed a delight to meet you, @satyanadella! Glad to know about Microsoft's ambitious expansion and investment plans in India. It was also wonderful discussing various aspects of tech, innovation and AI in our meeting.”