“ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ದೇಶದ ಅತ್ಯುನ್ನತ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದರಿಂದ ಇಂದಿನ ದಿನ ಭಾರತೀಯ ಪ್ರಜಾಪ್ರಭುತ್ವಕ್ಕೆ ಒಂದು ಬಹಳ ಮಹತ್ವದ ದಿನವಾಗಿದೆ"
"ಶ್ರೀ ಹರ್ಮೋಹನ್ ಸಿಂಗ್ ಯಾದವ್ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಡಾ. ರಾಮ್ ಮನೋಹರ್ ಲೋಹಿಯಾ ಅವರ ವಿಚಾರ ಸಿದ್ಧಾಂತಗಳನ್ನು ಅನುಸರಿಸಿದರು”
"ಹರ್ಮೋಹನ್ ಸಿಂಗ್ ಯಾದವ್ ಜೀ ಅವರು ಸಿಖ್ ಸಾಮೂಹಿಕ ಹತ್ಯಾಕಾಂಡದ ವಿರುದ್ಧ ರಾಜಕೀಯ ನಿಲುವನ್ನು ತಳೆದಿದ್ದಲ್ಲದೆ, ಅವರು ಸಿಖ್ಸ ಹೋದರರು ಮತ್ತು ಸಹೋದರಿಯರನ್ನು ರಕ್ಷಿಸಲು ಮುಂಚೂಣಿಯಲ್ಲಿ ನಿಂತು ಹೋರಾಡಿದರು”.
"ಇತ್ತೀಚಿನ ದಿನಗಳಲ್ಲಿ, ಸೈದ್ಧಾಂತಿಕ ಅಥವಾ ರಾಜಕೀಯ ಹಿತಾಸಕ್ತಿಗಳನ್ನು ಸಮಾಜ ಮತ್ತು ದೇಶದ ಹಿತಾಸಕ್ತಿಗಳಿಗಿಂತ ಮೇಲ್ಮಟ್ಟದಲ್ಲಿ ಇಡುವ ಪ್ರವೃತ್ತಿ ಇದೆ”.
"ಒಂದು ಪಕ್ಷ ಅಥವಾ ವ್ಯಕ್ತಿಯ ವಿರೋಧವು ದೇಶದ ವಿರೋಧವಾಗಿ ಬದಲಾಗಬಾರದಂತೆ ನೋಡಿಕೊಳ್ಳುವುದು ಪ್ರತಿಯೊಂದು ರಾಜಕೀಯ ಪಕ್ಷದ ಜವಾಬ್ದಾರಿಯಾಗಿದೆ"
"ಡಾ. ಲೋಹಿಯಾ ರಾಮಾಯಣ ಉತ್ಸವಗಳನ್ನು ಆಯೋಜಿಸುವ ಮತ್ತು ಗಂಗೆಯ ಬಗ್ಗೆ ಕಾಳಜಿ ವಹಿಸುವ ಮೂಲಕ ದೇಶದ ಸಾಂಸ್ಕೃತಿಕ ಶಕ್ತಿಯನ್ನು ಬಲಪಡಿಸಲು ಶ್ರಮಿಸಿದರು"
"ಸಾಮಾಜಿಕ ನ್ಯಾಯವೆಂದರೆ ಸಮಾಜದ ಪ್ರತಿಯೊಂದು ವರ್ಗವೂ ಸಮಾನ ಅವಕಾಶಗಳನ್ನು ಪಡೆಯಬೇಕು, ಮತ್ತು ಯಾರೂ ಜೀವನದ ಮೂಲಭೂತ ಅಗತ್ಯಗಳಿಂದ ವಂಚಿತರಾಗಬಾರದು.

ನಮಸ್ಕಾರ!

 ದಿವಂಗತ ಹರ್ಮೋಹನ್ ಸಿಂಗ್ ಯಾದವ್ ಅವರ ಪುಣ್ಯತಿಥಿಯಂದು ಅವರಿಗೆ ನಾನು ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಈ ಕಾರ್ಯಕ್ರಮಕ್ಕೆ ನನ್ನನ್ನು ತುಂಬಾ ಪ್ರೀತಿಯಿಂದ ಆಹ್ವಾನಿಸಿದ್ದಕ್ಕಾಗಿ ನಾನು ಸುಖರಾಮ್ ಜೀ ಅವರಿಗೆ ಆಭಾರಿಯಾಗಿದ್ದೇನೆ. ಇದಲ್ಲದೆ, ನಿಮ್ಮೆಲ್ಲರ ನಡುವೆ ಇರುವುದಕ್ಕಾಗಿ ಈ ಕಾರ್ಯಕ್ರಮಕ್ಕಾಗಿ ಕಾನ್ಪುರಕ್ಕೆ ಬರಬೇಕೆಂಬುದು ನನ್ನ ಬಯಕೆಯಾಗಿತ್ತು. ಆದರೆ ಇಂದು, ನಮ್ಮ ದೇಶದ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಒಂದು ದೊಡ್ಡ ಕಾರ್ಯಕ್ರಮ ನಡೆಯುವ ಸಂದರ್ಭವಾಗಿದೆ. ಇಂದು ನಮ್ಮ ಹೊಸ ರಾಷ್ಟ್ರಪತಿಗಳು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಬುಡಕಟ್ಟು ಸಮಾಜದ ಮಹಿಳಾ ರಾಷ್ಟ್ರಪತಿ ಅವರು ದೇಶದ ನಾಯಕತ್ವವನ್ನು ವಹಿಸುತ್ತಿದ್ದಾರೆ. ಇದು ನಮ್ಮ ಪ್ರಜಾಪ್ರಭುತ್ವದ ಶಕ್ತಿ ಮತ್ತು ಒಳಗೊಳ್ಳುವಿಕೆಯ ಜೀವಂತ ಉದಾಹರಣೆಯಾಗಿದೆ. ಈ ಸಂದರ್ಭದಲ್ಲಿ ಇಂದು ದಿಲ್ಲಿಯಲ್ಲಿ ವಿವಿಧ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಾಂವಿಧಾನಿಕ ಬಾಧ್ಯತೆಗಳಿಗಾಗಿ ನಾನು ದೆಹಲಿಯಲ್ಲಿ ಇರುವುದು ಅನಿವಾರ್ಯ ಮತ್ತು ಅಗತ್ಯವೂ ಆಗಿದೆ. ಆದ್ದರಿಂದ, ನಾನು ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಿಮ್ಮೊಂದಿಗೆ ಸೇರುತ್ತಿದ್ದೇನೆ.

ಸ್ನೇಹಿತರೇ,

ಸಾವಿನ ನಂತರವೂ ಜೀವನವು ಶಾಶ್ವತವಾಗಿದೆ ಎಂಬ ನಂಬಿಕೆ ನಮ್ಮಲ್ಲಿದೆ. ಭಗವಾನ್ ಕೃಷ್ಣನು ಗೀತೆಯಲ್ಲಿ ಹೀಗೆ ಹೇಳಿದ್ದಾನೆ - नैनं छिन्दन्ति शस्त्राणि नैनं दहति पावकः। ಅಂದರೆ, ಆತ್ಮವು ಶಾಶ್ವತವಾಗಿದೆ; ಅದು ಅಮರವಾದುದು. ಆದ್ದರಿಂದಲೇ, ಸಮಾಜಕ್ಕಾಗಿ ಬದುಕುವವರು ಮತ್ತು ಮನುಕುಲಕ್ಕೆ ಸೇವೆ ಸಲ್ಲಿಸುವವರು ಮರಣದ ನಂತರವೂ ಅಮರರಾಗಿ ಉಳಿಯುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧಿಯವರಾಗಲೀ, ಅಥವಾ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜೀ, ರಾಮ್ ಮನೋಹರ್ ಲೋಹಿಯಾ ಜೀ ಮತ್ತು ಸ್ವಾತಂತ್ರ್ಯದ ನಂತರ  ಜಯಪ್ರಕಾಶ್ ನಾರಾಯಣ್ ಜೀ ಆಗಿರಲಿ, ಹಲವಾರು ಮಹಾನ್ ಚೇತನಗಳ ಅಮರ ಚಿಂತನೆಗಳು ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತಿವೆ. ಹರ್ಮೋಹನ್ ಸಿಂಗ್ ಯಾದವ್ ಜೀ ಅವರು ತಮ್ಮ  ಸುದೀರ್ಘ ರಾಜಕೀಯ ಜೀವನದಲ್ಲಿ ಲೋಹಿಯಾ ಜೀ ಅವರ ಆದರ್ಶಗಳನ್ನು ಉತ್ತರ ಪ್ರದೇಶ ಮತ್ತು ಕಾನ್ಪುರದ ಮಣ್ಣಿನಿಂದ ಹೊರಗೂ ಪ್ರಸಾರ ಮಾಡಿದರು. ರಾಜ್ಯ ಮತ್ತು ದೇಶದ ರಾಜಕೀಯದಲ್ಲಿ ಅವರು ನೀಡಿದ ಕೊಡುಗೆ, ಸಮಾಜಕ್ಕಾಗಿ ಅವರು ಮಾಡಿದ ಕೆಲಸಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ.

ಸ್ನೇಹಿತರೇ,

ಚೌಧರಿ ಹರ್ಮೋಹನ್ ಸಿಂಗ್ ಯಾದವ್ ಅವರು ಗ್ರಾಮ ಪಂಚಾಯತ್ ನಿಂದ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. ಕ್ರಮೇಣ ಅವರು ಗ್ರಾಮ ಸಭೆಯಿಂದ ರಾಜ್ಯಸಭೆಯತ್ತ  ಸಾಗಿದರು. ಅವರು ಪ್ರಧಾನರಾದರು, ನಂತರ ವಿಧಾನ ಪರಿಷತ್ತಿನ ಸದಸ್ಯರಾದರು ಮತ್ತು ಸಂಸದರಾದರು. ಒಂದಾನೊಂದು ಕಾಲದಲ್ಲಿ, ಯುಪಿಯ ರಾಜಕೀಯವು ಮೆಹರ್ಬನ್ ಸಿಂಗ್ ಅವರಿಂದ ನಿರ್ದೇಶನವನ್ನು ಪಡೆಯುತ್ತಿತ್ತು. ರಾಜಕೀಯದ ವಿಷಯದಲ್ಲಿ ಈ ಎತ್ತರವನ್ನು ತಲುಪಿದ ನಂತರವೂ, ಹರ್ಮೋಹನ್ ಸಿಂಗ್ ಅವರ ಆದ್ಯತೆ ಸಮಾಜವೇ ಆಗಿತ್ತು. ಅವರು ಸಮಾಜಕ್ಕಾಗಿ ಸಮರ್ಥ ನಾಯಕತ್ವವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ  ಕಾರ್ಯನಿರತರಾಗಿದ್ದರು. ಅವರು ಯುವಕರನ್ನು ಮುನ್ನಡೆಸಿದ್ದರು ಮತ್ತು ಲೋಹಿಯಾ ಅವರ ಸಂಕಲ್ಪಗಳನ್ನು, ದೃಢ ನಿರ್ಧಾರಗಳನ್ನು  ಮುನ್ನಡೆಸಿದ್ದರು. 1984 ರಲ್ಲಿಯೂ ಅವರ ದೃಢವಾದ ವ್ಯಕ್ತಿತ್ವವನ್ನು ನಾವು ನೋಡಿದ್ದೇವೆ. ಹರ್ಮೋಹನ್ ಸಿಂಗ್ ಯಾದವ್ ಅವರು ಸಿಖ್ ಹತ್ಯಾಕಾಂಡದ ವಿರುದ್ಧ ರಾಜಕೀಯ ನಿಲುವು ತಳೆದಿದ್ದಲ್ಲದೆ, ಸಿಖ್ ಸಹೋದರರು ಮತ್ತು  ಸಹೋದರಿಯರನ್ನು ರಕ್ಷಿಸಲು ಮುಂದೆ ಬಂದಿದ್ದರು. ತನ್ನ ಜೀವವನ್ನು ಪಣಕ್ಕಿಟ್ಟು, ಅವರು ಅನೇಕ ಮುಗ್ಧ ಜೀವಗಳನ್ನು ಮತ್ತು ಸಿಖ್ ಕುಟುಂಬಗಳನ್ನು ರಕ್ಷಿಸಿದ್ದರು. ಅವರಿಗೆ ಶೌರ್ಯ ಚಕ್ರವನ್ನು ನೀಡುವ ಮೂಲಕ  ದೇಶವು ಅವರ ನಾಯಕತ್ವವನ್ನು ಗುರುತಿಸಿ ಮನ್ನಣೆ ನೀಡಿತು. ಸಾಮಾಜಿಕ ಜೀವನದಲ್ಲಿ ಹರ್ಮೋಹನ್ ಸಿಂಗ್ ಯಾದವ್ ಅವರು ನಿರ್ಮಾಣ ಮಾಡಿದ ಆದರ್ಶ ಉದಾಹರಣೆಯು ಹೋಲಿಕೆ ಇಲ್ಲದ್ದು.

ಸ್ನೇಹಿತರೇ,

ಹರ್ಮೋಹನ್ ಜೀ ಅವರು ಪೂಜ್ಯ ಅಟಲ್ ಜೀ ಅವರಂತಹ ನಾಯಕರ ಶಕೆಯಲ್ಲಿ ಸಂಸತ್ತಿನಲ್ಲಿ ಕೆಲಸ ಮಾಡಿದ್ದರು. "ಸರ್ಕಾರಗಳು ಬರುತ್ತವೆ, ಮತ್ತು ಸರ್ಕಾರಗಳು ಹೋಗುತ್ತವೆ, ಪಕ್ಷಗಳು ರೂಪುಗೊಳ್ಳುತ್ತವೆ ಮತ್ತು ವಿಸರ್ಜಿಸಲ್ಪಡುತ್ತವೆ, ಆದರೆ ಈ ದೇಶವು ಉಳಿಯಬೇಕು ಮತ್ತು ಪ್ರಜಾಪ್ರಭುತ್ವವು ಅಲ್ಲಿ ಶಾಶ್ವತವಾಗಿರಬೇಕು" ಎಂದು ಅಟಲ್ ಜೀ ಹೇಳುತ್ತಿದ್ದರು. ಇದು ನಮ್ಮ ಪ್ರಜಾಪ್ರಭುತ್ವದ ಆತ್ಮ. "ಪಕ್ಷವು ಒಬ್ಬ ವ್ಯಕ್ತಿಗಿಂತ ದೊಡ್ಡದು, ಮತ್ತು ಪಕ್ಷಕ್ಕಿಂತ ದೇಶವು ದೊಡ್ಡದು!" ಏಕೆಂದರೆ ಪ್ರಜಾಪ್ರಭುತ್ವದಿಂದಾಗಿ ಪಕ್ಷಗಳು ಅಸ್ತಿತ್ವದಲ್ಲಿವೆ, ಮತ್ತು ದೇಶದ ಕಾರಣದಿಂದಾಗಿ ಪ್ರಜಾಪ್ರಭುತ್ವವು ಅಸ್ತಿತ್ವದಲ್ಲಿದೆ. ನಮ್ಮ ದೇಶದ ಹೆಚ್ಚಿನ ಪಕ್ಷಗಳು, ವಿಶೇಷವಾಗಿ ಎಲ್ಲಾ ಕಾಂಗ್ರೆಸ್ಸೇತರ ಪಕ್ಷಗಳು ಸಹ ಈ ಕಲ್ಪನೆಯನ್ನು, ಚಿಂತನೆಯನ್ನು ಅನುಸರಿಸುತ್ತಿವೆ ಮತ್ತು ದೇಶಕ್ಕಾಗಿ ಸಹಕಾರ ಮತ್ತು ಸಮನ್ವಯದ ಕಲ್ಪನೆಯನ್ನು ಅನುಸರಿಸುತ್ತಿವೆ. 1971ರಲ್ಲಿ ಭಾರತ-ಪಾಕ್ ಯುದ್ಧ ನಡೆದಾಗ, ಪ್ರತಿಯೊಂದು ಪ್ರಮುಖ ಪಕ್ಷವೂ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತದ್ದು ನನಗೆ ಇನ್ನೂ ನೆನಪಿದೆ. ದೇಶವು ಮೊದಲ ಪರಮಾಣು ಪರೀಕ್ಷೆಯನ್ನು ನಡೆಸಿದಾಗ, ಎಲ್ಲಾ ಪಕ್ಷಗಳು ಆ ಕಾಲದ ಸರ್ಕಾರದೊಂದಿಗೆ ದೃಢವಾಗಿ ನಿಂತವು. ತುರ್ತು ಪರಿಸ್ಥಿತಿಯ ಸಮಯದಲ್ಲಿ ದೇಶದ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಿದಾಗ, ಎಲ್ಲಾ ಪ್ರಮುಖ ಪಕ್ಷಗಳು ಒಗ್ಗೂಡಿ ಸಂವಿಧಾನವನ್ನು ಉಳಿಸಲು ಹೋರಾಡಿದವು. ಚೌಧರಿ ಹರ್ಮೋಹನ್ ಸಿಂಗ್ ಯಾದವ್ ಜೀ ಅವರು ಆ ಹೋರಾಟದ ಸಮಯದಲ್ಲಿ ಸೈನಿಕರಂತೆ ಹೋರಾಡಿದವರಲ್ಲಿ ಒಬ್ಬರಾಗಿದ್ದರು. ಅಂದರೆ, ನಮ್ಮ ದೇಶದ ಮತ್ತು ಸಮಾಜದ ಹಿತಾಸಕ್ತಿಗಳು ಸಿದ್ಧಾಂತಗಳಿಗಿಂತ ದೊಡ್ಡದಾಗಿವೆ.

ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ಸಮಾಜ ಮತ್ತು ದೇಶದ ಹಿತಾಸಕ್ತಿಗಿಂತ ಸಿದ್ಧಾಂತ ಅಥವಾ ರಾಜಕೀಯ ಹಿತಾಸಕ್ತಿಗಳನ್ನು ಆದ್ಯತೆಯಲ್ಲಿರಿಸುವ  ಪದ್ಧತಿಯು ಪ್ರಾರಂಭವಾಗಿದೆ. ಕೆಲವೊಮ್ಮೆ, ಕೆಲವು ವಿರೋಧ ಪಕ್ಷಗಳು ಸರ್ಕಾರದ ಕೆಲಸದಲ್ಲಿ ಅಡೆತಡೆಗಳನ್ನು ತಂದೊಡ್ಡುತ್ತವೆ, ಏಕೆಂದರೆ ಅವರು ಅಧಿಕಾರದಲ್ಲಿದ್ದಾಗ ಆ ನಿರ್ಧಾರಗಳನ್ನು ಸ್ವತಃ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ಈಗ ಈ ನಿರ್ಧಾರಗಳನ್ನು ಜಾರಿಗೆ ತಂದರೆ, ಅವರು ಅದನ್ನು ವಿರೋಧಿಸುತ್ತಾರೆ. ದೇಶದ ಜನರು ಈ ಮನಸ್ಥಿತಿಯನ್ನು ಇಷ್ಟಪಡುವುದಿಲ್ಲ. ಒಂದು ಪಕ್ಷ ಅಥವಾ ಒಬ್ಬ ವ್ಯಕ್ತಿಯ ವಿರೋಧವು ದೇಶದ ಹಿತಸಕ್ತಿಗಳ ವಿರುದ್ಧವಾಗದಂತೆ ನೋಡಿಕೊಳ್ಳುವುದು ಪ್ರತಿಯೊಂದು ರಾಜಕೀಯ ಪಕ್ಷದ ಜವಾಬ್ದಾರಿಯಾಗಿದೆ. ಸಿದ್ಧಾಂತಗಳಿಗೆ ಪ್ರತ್ಯೇಕ ಸ್ಥಾನವಿದೆ, ಮತ್ತು ಅವುಗಳನ್ನು ಹಾಗೆ ಇರಿಸುವುದು ಸಹಜ. ರಾಜಕೀಯ ಮಹತ್ವಾಕಾಂಕ್ಷೆಗಳು ಇರಬಹುದು. ಆದರೆ ದೇಶಕ್ಕೆ ಆದ್ಯತೆ ನೀಡಬೇಕು. ಸಮಾಜಕ್ಕೆ ಆದ್ಯತೆ ನೀಡಬೇಕು; ಮತ್ತು ರಾಷ್ಟ್ರಕ್ಕೆ  ಮೊದಲ ಆದ್ಯತೆ ಲಭಿಸಬೇಕು.  

ಸ್ನೇಹಿತರೇ,

ಲೋಹಿಯಾ ಅವರು ಸಮಾಜವಾದವು ಸಮಾನತೆಯ ಸಂಕೇತ ಎಂದು ನಂಬಿದ್ದರು. ಸಮಾಜವಾದದ ಕುಸಿತವು ಅಸಮಾನತೆಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದರು. ಭಾರತದಲ್ಲಿ ಈ ಎರಡೂ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಭಾರತದ ಮೂಲತತ್ತ್ವಗಳ ಮೇಲಿನ ಚರ್ಚೆಗಳು ಮತ್ತು ಸಮಾಲೋಚನೆಗಳಲ್ಲಿ  ಸಮಾಜವನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ ಎಂಬುದನ್ನು ನಾವು ನೋಡಿದ್ದೇವೆ. ನಮಗೆ, ಸಮಾಜವು ನಮ್ಮ ಏಕತೆ ಮತ್ತು ಸಹಕಾರಕ್ಕೆ ಮೂಲಾಧಾರವಾಗಿದೆ. ನಮಗೆ, ಸಮಾಜ ಎಂದರೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕೃತಿ ನಮ್ಮ ಪ್ರಕೃತಿ. ಅದಕ್ಕಾಗಿಯೇ, ಲೋಹಿಯಾ ಜೀ ಭಾರತದ ಸಾಂಸ್ಕೃತಿಕ ಸಾಮರ್ಥ್ಯದ ಬಗ್ಗೆ ಮಾತನಾಡುತ್ತಿದ್ದರು. ಅವರು ರಾಮಾಯಣ ಉತ್ಸವವನ್ನು  ಪ್ರಾರಂಭಿಸುವ ಮೂಲಕ ನಮ್ಮ ಪರಂಪರೆ ಮತ್ತು ಭಾವನಾತ್ಮಕ ಏಕತೆಗೆ ಮೂಲಭೂಮಿಕೆಯನ್ನು ಸಿದ್ಧಪಡಿಸಿದರು.  ಅವರು ದಶಕಗಳ ಹಿಂದೆಯೇ ಗಂಗಾ ನದಿಯಂತಹ ಪವಿತ್ರ ನದಿಗಳ ಸಂರಕ್ಷಣೆಯ ಬಗ್ಗೆ ಯೋಚಿಸಿದ್ದರು. ಇಂದು ದೇಶವು ನಮಾಮಿ ಗಂಗೆ ಅಭಿಯಾನದ ಮೂಲಕ ಆ ಕನಸನ್ನು ನನಸು ಮಾಡುತ್ತಿದೆ. ಇಂದು ದೇಶವು ತನ್ನ ಸಮಾಜದ ಸಾಂಸ್ಕೃತಿಕ ಸಂಕೇತಗಳನ್ನು ಪುನರುಜ್ಜೀವನಗೊಳಿಸುತ್ತಿದೆ. ಈ ಪ್ರಯತ್ನಗಳು ಸಮಾಜದ ಸಾಂಸ್ಕೃತಿಕ ಪ್ರಜ್ಞೆ, ಸಮಾಜದ ಶಕ್ತಿಯನ್ನು ಜಾಗೃತಗೊಳಿಸುತ್ತಿವೆ ಮತ್ತು ನಮ್ಮ ಅಂತರ್ಸಂಬಂಧವನ್ನು ಬಲಪಡಿಸುತ್ತಿವೆ. ಅಂತೆಯೇ, ನವ ಭಾರತಕ್ಕಾಗಿ, ದೇಶವು ತನ್ನ ಹಕ್ಕುಗಳನ್ನು ಮೀರಿ ಇಂದು ಕರ್ತವ್ಯಗಳ ಬಗ್ಗೆ ಮಾತನಾಡುತ್ತಿದೆ. ಈ ಕರ್ತವ್ಯ ಪ್ರಜ್ಞೆ ಬಲಗೊಂಡಾಗ, ಸಮಾಜವು ತನ್ನಿಂದತಾನೇ ಬಲಗೊಳ್ಳುತ್ತದೆ.

ಸ್ನೇಹಿತರೇ,

ಸಮಾಜದ ಸೇವೆಗಾಗಿ, ನಾವು ಸಾಮಾಜಿಕ ನ್ಯಾಯದ ಮನೋಭಾವವನ್ನು ಸ್ವೀಕರಿಸುವುದು ಮತ್ತು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಇಂದು, ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಇದನ್ನು ಅರ್ಥಮಾಡಿಕೊಳ್ಳುವುದು ಮತ್ತು ಈ ದಿಕ್ಕಿನಲ್ಲಿ ಸಾಗುವುದು ಬಹಳ ಮುಖ್ಯ. ಸಾಮಾಜಿಕ ನ್ಯಾಯವೆಂದರೆ ಸಮಾಜದ ಪ್ರತಿಯೊಂದು ವರ್ಗವು ಸಮಾನ ಅವಕಾಶಗಳನ್ನು ಪಡೆಯುವುದು ಮತ್ತು ಯಾರೂ ಜೀವನದ ಮೂಲಭೂತ ಅಗತ್ಯಗಳಿಂದ ವಂಚಿತರಾಗದಂತಿರುವುದು. ನಾವು ದಲಿತರು, ಹಿಂದುಳಿದ ವರ್ಗಗಳು, ಆದಿವಾಸಿಗಳು, ಮಹಿಳೆಯರು ಮತ್ತು ದಿವ್ಯಾಂಗರನ್ನು ಅಭಿವೃದ್ಧಿ ಪಥಕ್ಕೆ ತಂದಾಗ ಮಾತ್ರ ದೇಶವು ಮುಂದುವರಿಯುತ್ತದೆ. ಹರ್ಮೋಹನ್ ಜೀ ಅವರು ಈ ಬದಲಾವಣೆಗೆ ಶಿಕ್ಷಣವೇ ಅತ್ಯುತ್ತಮವೆಂದು ಪರಿಗಣಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸವು ಹಲವಾರು ಯುವಜನರ ಭವಿಷ್ಯವನ್ನು ರೂಪಿಸಿತು. ಸುಖರಾಮ್ ಜಿ ಮತ್ತು ಸಹೋದರ ಮೋಹಿತ್ ಇಂದು ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. "ಶಿಕ್ಷಣದ ಮೂಲಕ ಸಬಲೀಕರಣ" ಮತ್ತು "ಶಿಕ್ಷಣದಲ್ಲಿ  ಸಬಲೀಕರಣ ಅಡಕವಾಗಿದೆ" ಎಂಬ ಮಂತ್ರದೊಂದಿಗೆ ದೇಶವು ಮುಂದುವರಿಯುತ್ತಿದೆ. ಅದಕ್ಕಾಗಿಯೇ, ಇಂದು ಹೆಣ್ಣುಮಕ್ಕಳಿಗಾಗಿ 'ಬೇಟಿ ಬಚಾವೋ, ಬೇಟಿ ಪಡಾವೋ' ನಂತಹ ಅಭಿಯಾನಗಳು ಯಶಸ್ವಿಯಾಗುತ್ತಿವೆ. ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗಾಗಿ ದೇಶವು ಏಕಲವ್ಯ ಶಾಲೆಗಳನ್ನು ಪ್ರಾರಂಭಿಸಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ, ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಡ ಕುಟುಂಬಗಳು ಮತ್ತು ಹಳ್ಳಿಗಳ ಮಕ್ಕಳು ಇಂಗ್ಲಿಷ್ ನಿಂದಾಗಿ ಹಿಂದೆ ಬೀಳದಂತೆ ನೋಡಿಕೊಳ್ಳಲಾಗುತ್ತಿದೆ. ಎಲ್ಲರಿಗೂ ವಸತಿ, ಎಲ್ಲರಿಗೂ ವಿದ್ಯುತ್ ಸಂಪರ್ಕ, ಜಲ-ಜೀವನ್ ಮಿಷನ್ ಅಡಿಯಲ್ಲಿ ಎಲ್ಲರಿಗೂ ಶುದ್ಧ ನೀರು, ರೈತರಿಗೆ ಸಮ್ಮಾನ್ ನಿಧಿಯಂತಹ ಪ್ರಯತ್ನಗಳು ಮತ್ತು ಯೋಜನೆಗಳು ಬಡವರು, ಹಿಂದುಳಿದವರು ಮತ್ತು ದಲಿತ-ಬುಡಕಟ್ಟು ಜನರ ಕನಸುಗಳಿಗೆ ರೆಕ್ಕೆಗಳನ್ನು ನೀಡುತ್ತಿವೆ ಮತ್ತು ದೇಶದಲ್ಲಿ ಸಾಮಾಜಿಕ ನ್ಯಾಯದ ಭೂಮಿಕೆಯನ್ನು ಬಲಪಡಿಸುತ್ತಿವೆ. ಅಮೃತ ಕಾಲ್ನ ಮುಂದಿನ 25 ವರ್ಷಗಳು ಸಾಮಾಜಿಕ ನ್ಯಾಯದ ಈ ನಿರ್ಣಯಗಳು ಸಂಪೂರ್ಣವಾಗಿ ಈಡೇರುವುದನ್ನು ಖಚಿತಪಡಿಸಿಕೊಳ್ಳುವ ವರ್ಷಗಳಾಗಿವೆ. ದೇಶದ ಈ ಅಭಿಯಾನಗಳಲ್ಲಿ ನಾವೆಲ್ಲರೂ ನಮ್ಮ ಪಾತ್ರವನ್ನು ಸುಸೂತ್ರವಾಗಿ ನಿರ್ವಹಿಸುತ್ತೇವೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಪೂಜ್ಯ ದಿವಂಗತ ಹರ್ಮೋಹನ್ ಸಿಂಗ್ ಯಾದವ್ ಜೀ ಅವರಿಗೆ ಮತ್ತೊಮ್ಮೆ ನನ್ನ ವಿನಮ್ರ ನಮನಗಳು! ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.