ಘನವೆತ್ತ ರಾಷ್ಟ್ರಪತಿಯವರಾದ ಶ್ರೀ ಪ್ರಣಬ್ ಮುಖರ್ಜೀ ಅವರೆ, ರಾಷ್ಟ್ರಪತಿಯಾಗಿ ನೂತನವಾಗಿ ಆಯ್ಕೆಯಾಗಿರುವ ಮಾನ್ಯ ರಾಮನಾಥ್ ಕೋವಿಂದ್ ಜೀ ಅವರೇ, ಮಾನ್ಯ ಉಪರಾಷ್ಟ್ರಪತಿ ಜೀ, ಸಮಾರಂಭದಲ್ಲಿ ಉಪಸ್ಥಿತರಿರುವ ಎಲ್ಲ ಮಾನ್ಯ ಗಣ್ಯರೆ,
ಮಿಶ್ರ ಭಾವನೆಗಳನ್ನು ಒಳಗೊಂಡ ಕ್ಷಣವಿದು. ರಾಷ್ಟ್ರಪತಿ ಭವನದಲ್ಲಿ ಪ್ರಣಬ್ ದಾ ಅವರ ಕಾರ್ಯನಿರ್ವಹಣೆಯ ಕೊನೆಯ ದಿನವಿಂದು. ಒಂದು ರೀತಿಯಲ್ಲಿ ಈ ಸಮಾರಂಭದಲ್ಲಿ ನಾನು ಮಾತನಾಡಲು ನಿಂತಾಗ ಬಹಳ ನೆನಪುಗಳು ಮನ:ಪಟದಲ್ಲಿ ಮೂಡುವುದು ಸಹಜ, ಸ್ವಾಭಾವಿಕ. ಅವರ ವ್ಯಕ್ತಿತ್ವ, ಅವರ ಕಾರ್ಯಕ್ಷಮತೆಗಳ ಬಗ್ಗೆ ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಭೂತಕಾಲದ ಜತೆ ವರ್ತಮಾನ ಕಾಲವನ್ನು ತಾಳೆಹಾಕಿ ನೋಡುವುದು ಮಾನವ ಸಹಜ ಗುಣ, ಇದು ಸ್ವಾಭಾವಿಕ ಕೂಡ. ಪ್ರತಿಯೊಂದು ಘಟನೆಯನ್ನು, ಪ್ರತಿಯೊಂದು ನಿರ್ಣಯವನ್ನು, ಪ್ರತಿಯೊಂದು ಕ್ರಮವನ್ನು ತಾನು ಕಾರ್ಯನಿರ್ವಹಿಸುತ್ತಿದ್ದ ದಿನಗಳ ಜತೆ ತಾಳೆ ಹಾಕಿ ನೋಡುವುದು ಸ್ವಾಭಾವಿಕ ಗುಣ. ಇಷ್ಟು ವರ್ಷಗಳ ಕಾಲ ಸರಕಾರದಲ್ಲಿ ಆಡಳಿತ ನಡೆಸಿ, ಸರ್ಕಾರದ ವಿವಿಧ ಪ್ರಮುಖ ಹುದ್ದೆಗಳಲ್ಲಿದ್ದು, ಪ್ರಸ್ತುತ ಸರಕಾರದ ಯಾವುದೇ ನಿರ್ಣಯವನ್ನು ಅವರು ತಮ್ಮ ಕಾಲದ ಜತೆಗೆ ತೂಗಿ ನೋಡಿದ್ದನ್ನು, ಹೋಲಿಕೆ ಮಾಡಿದ್ದನ್ನು ನಾನು ನನ್ನ ಮೂರು ವರ್ಷಗಳ ಅವಧಿಯಲ್ಲಿ ಎಂದೂ ನೋಡಲಿಲ್ಲ. ಇದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ನಮ್ಮ ಸರ್ಕಾರದ ನಿರ್ಣಯಗಳನ್ನು ತಮ್ಮ ಕಾಲಾವಧಿಯ ನಿರ್ಣಯಗಳ ಜತೆ ಹೋಲಿಕೆ ಮಾಡಲಿಲ್ಲ. ಪ್ರತಿಯೊಂದನ್ನು ವರ್ತಮಾನಕಾಲದ ಸಮಯಕ್ಕನುಗುಣವಾಗಿಯೇ ಮೌಲ್ಯಮಾಪನ ಮಾಡಿದರು. ಇದು ಅವರ ಬಹುದೊಡ್ಡ ಗುಣ ಎಂದು ನಾನು ಭಾವಿಸುತ್ತೇನೆ.
ಸರಕಾರ ಯಾವುದಾದರೂ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿತ್ತು, ಪ್ರತಿಯೊಂದು ಬಾರಿಯೂ ನನಗೆ ಅವರನ್ನು ಭೇಟಿಯಾಗುವ ಅವಕಾಶ ದೊರೆಯುತ್ತಿದ್ದುದು, ಮನಬಿಚ್ಚಿ ಮಾತನಾಡುವ ಅವಕಾಶ ದೊರೆಯುತ್ತಿತ್ತು, ಇದು ನನ್ನ ಸೌಭಾಗ್ಯವೆಂದು ನಾನು ಭಾವಿಸುತ್ತೇನೆ. ಅವರು ಪ್ರತಿಯೊಂದು ಮಾತುಗಳನ್ನು ಬಹಳ ಆಸಕ್ತಿಯಿಂದ ಆಲಿಸುತ್ತಿದ್ದರು. ಸುಧಾರಣೆಯ ಅವಶ್ಯವಿದ್ದೆಡೆ ಸಲಹೆ ನೀಡುತ್ತಿದ್ದರು. ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದರು. ಒಬ್ ಪ್ರೇಕ್ಷಕನಂತೆ, ಒಬ್ಬ ತಂದೆಯ ರೂಪದಲ್ಲಿ ರಾಷ್ಟ್ರಪತಿಗಳ ಪಾತ್ರ ಹೇಗಿರುತ್ತದೆ, ಕಾಯ್ದೆ, ಕಾನೂನು, ವ್ಯಾಪ್ತಿಯನ್ನೂ ಮೀರಿ, ತನ್ನವರೆನ್ನುವ ಭಾವನೆಯಿಂದ, ಪ್ರೀತಿಯಿಂದ, ಈ ರಾಷ್ಟ್ರಜೀವನದ ಕುಟುಂಬದ ಒಬ್ಬ ಹಿರಿಯನಂತೆ ಅವರು ಮಾರ್ಗದರ್ಶನ ನೀಡುತ್ತಿದ್ದರು. ನಾನು ಒಂದು ರಾಜ್ಯದಲ್ಲಿ ಕೆಲಸ ನಿರ್ವಹಿಸಿ ಬಂದಿದ್ದೆ. ಈ ಅಧಿಕಾರದ ಯಾವುದೇ ಅನುಭವವಿಲ್ಲದ, ನನ್ನಂತಹ ಹೊಸ ವ್ಯಕ್ತಿಗೆ ಹೊಸ ವಿಷಯಗಳನ್ನು ತಿಳಿಯುವಲ್ಲಿ, ನಿರ್ಣಯವನ್ನು ಕೈಗೊಳ್ಳುವಲ್ಲಿ ಅವರ ಪಾತ್ರ, ಸಹಾಯ ಅತ್ಯಂತ ಮಹತ್ವದ್ದು. ಅವರ ಕಾರಣದಿಂದಲೇ ನಾವು ಕಳೆದ ಮೂರು ವರ್ಷಗಳಲ್ಲಿ ಅನೇಕ ಮಹತ್ವಪೂರ್ಣ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು.
ಜ್ಞಾನಭಂಡಾರ, ಸಹಜತೆ, ಸರಳತೆಗಳು ಯಾವುದೇ ವ್ಯಕ್ತಿಯನ್ನು ಆಕರ್ಷಿಸುತ್ತದೆ. ಆದರೆ ನಮ್ಮಿಬ್ಬರ ಬೆಳವಣಿಗೆ ಬೇರೆ ಬೇರೆ ವಿಚಾರಧಾರೆಯಲ್ಲಿ, ಬೇರೆ ಬೇರೆ ಕಾರ್ಯಶೈಲಿಯಲ್ಲಿತ್ತು. ಅನುಭವದಲ್ಲಿಯೂ ಕೂಡಾ ನನ್ನ ಮತ್ತು ಅವರ ನಡುವೆ ಬಹಳ ಅಂತರವಿದೆ. ಆದರೆ ಈ ರೀತಿಯ ಭಾವನೆ ನನ್ನಲ್ಲಿ ಎಂದೂ ಉಂಟಾಗದಂತೆ ಅವರು ನೋಡಿಕೊಂಡರು. ಅವರು ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು, “ನಾನು ಇಂದು ರಾಷ್ಟ್ರಪತಿಯಾಗಿದ್ದೇನೆ, ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಜನತೆ ನಿಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ನಿಮ್ಮ ಜವಾಬ್ಧಾರಿ ಮತ್ತು ನನ್ನ ಕೆಲಸ. ಇದಕ್ಕಾಗಿ ರಾಷ್ಟ್ರಪತಿ ಹುದ್ದೆ, ರಾಷ್ಟ್ರಪತಿ ಭವನ ಮತ್ತು ಸ್ವಯಂ ನಾನು ಪ್ರಣಬ್ ಮುಖರ್ಜೀ ಏನು ಮಾಡಬೇಕೋ ಮಾಡುತ್ತೇನೆ”. ಇದು ನನಗೆ ದೊಡ್ಡ ಸಮಾಧಾನದ ವಿಷಯವಾಗಿತ್ತು. ಇದಕ್ಕಾಗಿ ನಾನು ಮಾನ್ಯ ರಾಷ್ಟ್ರಪತಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಇಂದು ಇಲ್ಲಿ ಅನೇಕ ವರದಿಗಳನ್ನು ಸಲ್ಲಿಸಲಾಯಿತು. ಶ್ರೀ ಪ್ರಣಬ್ ಮುಖರ್ಜೀ ಅವರು ನೆಲಮಟ್ಟದಿಂದ ಬಂದವರು, ಆದ್ದರಿಂದಲೇ ಅವರು ರಾಷ್ಟ್ರಪತಿ ಭವನವನ್ನು ಜನರ ಭವನವನ್ನಾಗಿಸಿದರು. ಜನರ ಮಧ್ಯದಿಂದ ಬೆಳೆದುಬಂದ, ಜನಗಳ ನಡುವೆ ಇದ್ದು ರಾಜಕೀಯ ಜೀವನ ನಡೆಸಿದ ಕಾರಣ ಅವರಿಗ ಜನಶಕ್ತಿ ಎಂದರೆ ಏನು, ಜನರ ಭಾವನೆಗಳು ಹೇಗಿರುತ್ತವೆ ಎಂಬುದನ್ನು ಅವರು ತಿಳಿದುಕೊಂಡಿದ್ದರು. ಅವರಿಗೆ ಈ ವಿಷಯಗಳ ಬಗ್ಗೆ ಯಾವುದೇ ಪುಸ್ತಕದ ಅಧ್ಯಯನದ ಅವಶ್ಯಕತೆ ಇರಲಿಲ್ಲ. ಅವರು ಜನರ ಭಾವನೆಗಳನ್ನು ಅನುಭವಿಸುತ್ತಿದ್ದರು ಮತ್ತು ಅದನ್ನು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಪ್ರಯತ್ನವನ್ನೂ ಕೂಡಾ ಮಾಡುತ್ತಿದ್ದರು. ಈ ಕಾರಣದಿಂದಾಗಿ ಭಾರತದ ರಾಷ್ಟ್ರಪತಿ ಭವನ ಜನರ ಭವನವಾಗಿ ರೂಪುಗೊಂಡಿತು. ಒಂದು ರೀತಿಯಲ್ಲಿ ಜನತಾ ಜನಾರ್ಧನನಿಗೆ ರಾಷ್ಟ್ರಪತಿ ಭವನದ ಬಾಗಿಲು ತೆರೆಯಿತು.
ಅವರು ಸ್ವತ: ಇತಿಹಾಸದ ವಿದ್ಯಾರ್ಥಿ. ಇತಿಹಾಸದ ಪ್ರತಿಯೊಂದು ಘಟನೆಯೂ ಅವರ ಬೆರಳ ತುದಿಯಲ್ಲಿದೆ ಎಂಬುದನ್ನು ನಾನು ಬಲ್ಲೆ. ಯಾವುದೇ ವಿಷಯವನ್ನು ತೆಗೆದುಕೊಳ್ಳಿ ಅವರು ಅದರ ದಿನಾಂಕ ಸಹಿತ ಮಾತನಾಡುತ್ತಾರೆ. ರಾಷ್ಟ್ರಪತಿ ಭವನದಲ್ಲಿ ಅವರ ಕಾರ್ಯಾವಧಿಯ ಅವರ ಜ್ಞಾನವನ್ನು, ಅವರ ಇತಿಹಾಸದ ಬಗೆಗಿನ ತಿಳುವಳಿಕೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಬಗೆಗೆ ದೊಡ್ಡ ಇತಿಹಾಸದ ಭಂಡಾರವೇ ಸಿದ್ಧವಾಗಿದೆ ಎಂದು ಇದೀಗ ತಾನೆ ಓಮಿತಾ ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ. ಇಲ್ಲಿನ ಮರವಾಗಲಿ, ಬಳ್ಳಿಯಾಗಲಿ, ಕಲ್ಲಾಗಲಿ ಪ್ರತಿಯೊಂದಕ್ಕೂ ತನ್ನದೇ ಆದ ಇತಿಹಾಸವಿದೆ. ಪ್ರತಿಯೊಂದಕ್ಕು ತನ್ನದೇ ಆದ ವಿಶೇಷತೆ ಇದೆ. ಅವೆಲ್ಲವೂ ಇನ್ನು ಮುಂದೆ ಪುಸ್ತಕ ರೂಪದಲ್ಲಿ ಲಭ್ಯವಾಗಲಿದೆ
ಇದೊಂದು ದೊಡ್ಡ ಕಾರ್ಯ. ನಾನು ಇದಕ್ಕಾಗಿ ಅವರಿಗೂ ಮತ್ತು ಅವರ ತಂಡದ ಎಲ್ಲ ಸದಸ್ಯರಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಮತ್ತೊಮ್ಮೆ ಶ್ರೀ ಪ್ರಣಬ್ ದಾ ಅವರಿಗೆ ತುಂಬು ಜೀವನದ ಶುಭ ಹಾರೈಕೆಗಳನ್ನು ಅರ್ಪಿಸುತ್ತೇನೆ. ಅವರ ದೀರ್ಘಕಾಲದ ಅನುಭವಗಳು ಅವರ ಎರಡನೇ ಇನಿಂಗ್ಸ್‍ನಲ್ಲಿ ಕೂಡಾ ನನ್ನಂತ ಅನೇಕ ಜನರಿಗೆ ವೈಯಕ್ತಿಕವಾಗಿ ಹಾಗೂ ದೇಶಕ್ಕೆ ಸ್ವಾಭಾವಿಕವಾಗಿ ಉಪಯೋಗವಾಗುತ್ತಿರಲಿ ಎಂದು ನಾನು ಆಶಿಸುತ್ತೇನೆ.
ನಾನು ಮತ್ತೊಮ್ಮೆ ಶುಭಾಶಯಗಳನ್ನು ಕೋರುತ್ತಾ ತಮಗೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ.