ವೇದಿಕೆಯಲ್ಲಿರುವ ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಜಗದೀಪ ಧನ್ ಕರ್ ಜೀ, ಕೇಂದ್ರ ಸರಕಾರದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಧರ್ಮೇಂದ್ರ ಪ್ರಧಾನ್ ಜೀ ಮತ್ತು ದೇಬಶ್ರೀ ಚೌಧುರೀ ಜೀ, ಸಂಸತ್ ಸದಸ್ಯರಾದ ದಿವ್ಯೇಂದು ಅಧಿಕಾರೀ ಜೀ, ಶಾಸಕರಾದ ತಪಸ್ ಮಂಡಲ್ ಜೀ, ಸಹೋದರರೇ ಮತ್ತು ಸಹೋದರಿಯರೇ!.
ಪಶ್ಚಿಮ ಬಂಗಾಳ ಸಹಿತ ಇಡೀಯ ಪೂರ್ವ ಭಾರತಕ್ಕೆ ಇಂದು ಬಹಳ ದೊಡ್ಡ ಅವಕಾಶ ಲಭಿಸಿದೆ. ಪೂರ್ವ ಭಾರತದ ಸಂಪರ್ಕಕ್ಕೆ ಮತ್ತು ಸ್ವಚ್ಚ ಇಂಧನದಲ್ಲಿ ಸ್ವಾವಲಂಬನೆಗೆ ಸಂಬಂಧಿಸಿ ಇಂದು ಮಹತ್ವದ ದಿನ. ನಿರ್ದಿಷ್ಟವಾಗಿ, ಈ ಇಡೀ ವಲಯದ ಅನಿಲ ಸಂಪರ್ಕವನ್ನು ಸಶಕ್ತೀಕರಣ ಮಾಡುವ ಪ್ರಮುಖ ಯೋಜನೆಗಳನ್ನು ಇಂದು ರಾಷ್ಟ್ರಕ್ಕೆ ಅರ್ಪಿಸಲಾಗಿದೆ. ಇಂದು ಲೋಕಾರ್ಪಣೆ ಮಾಡಲಾದ ಮತ್ತು ಶಿಲಾನ್ಯಾಸ ಮಾಡಲಾದ ನಾಲ್ಕು ಯೋಜನೆಗಳು ಪೂರ್ವ ಭಾರತದ ಪಶ್ಚಿಮ ಬಂಗಾಳ ಸಹಿತ ಹಲವಾರು ರಾಜ್ಯಗಳಲ್ಲಿ ಜೀವಿಸಲು ಅನುಕೂಲಕರ ವಾತಾವರಣ ಮತ್ತು ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ಸುಧಾರಿಸಲಿವೆ. ಈ ಯೋಜನೆಗಳು ಹಾಲ್ಡಿಯಾವನ್ನು ದೇಶದ ಆಧುನಿಕ ಮತ್ತು ಬೃಹತ್ ಆಮದು-ರಫ್ತು ಕೇಂದ್ರವನ್ನಾಗಿ ಅಭಿವೃದ್ಧಿ ಮಾಡಲಿವೆ.
ಸ್ನೇಹಿತರೇ,
ಅನಿಲ ಆಧಾರಿತ ಆರ್ಥಿಕತೆ ಭಾರತದ ಇಂದಿನ ಆವಶ್ಯಕತೆಯಾಗಿದೆ. ಒಂದು ರಾಷ್ಟ್ರ, ಒಂದು ಅನಿಲ ಜಾಲ ಎಂಬುದು ಈ ಆವಶ್ಯಕತೆಯ ನಿಟ್ಟಿನಲ್ಲಿ ನಡೆಯುತ್ತಿರುವ ಆಂದೋಲನವಾಗಿದೆ. ಇದಕ್ಕಾಗಿ ಅನಿಲ ಕೊಳವೆಮಾರ್ಗ ಜಾಲದ ವಿಸ್ತರಣೆಯ ಮೇಲೆ ಆದ್ಯ ಗಮನ ನೀಡಲಾಗಿದೆ, ಇದು ನೈಸರ್ಗಿಕ ಅನಿಲ ದರಗಳ ಇಳಿಕೆಗೂ ಅವಕಾಶ ಒದಗಿಸುತ್ತದೆ. ಹಲವಾರು ವರ್ಷಗಳಿಂದ, ತೈಲ ಮತ್ತು ಅನಿಲ ವಲಯಗಳಲ್ಲಿ ಹಲವಾರು ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಇವುಗಳ ಫಲವಾಗಿ ಇಂದು ಭಾರತವು ಏಶ್ಯಾದಲ್ಲಿಯೇ ಅತಿ ಹೆಚ್ಚು ಅನಿಲ ಬಳಸುವ ದೇಶಗಳಲ್ಲಿ ಒಂದಾಗಿದೆ. ದೇಶವು ಸ್ವಚ್ಚ ಮತ್ತು ಕೈಗೆಟಕುವ ದರದಲ್ಲಿ ಇಂಧನಕ್ಕಾಗಿ ’ಹೈಡ್ರೋಜನ್ ಮಿಶನ್” ಘೋಷಣೆ ಮಾಡಿದೆ, ಇದು ಈ ವರ್ಷದ ಬಜೆಟಿನಲ್ಲಿ ಸ್ವಚ್ಚ ಇಂಧನಕ್ಕೆ ಹೆಚ್ಚಿನ ಶಕ್ತಿ ತುಂಬಿದೆ.
ಸ್ನೇಹಿತರೇ,
ಆರು ವರ್ಷಗಳ ಹಿಂದೆ ದೇಶವು ನಮಗೆ ಅವಕಾಶ ಕೊಟ್ಟಾಗ, ಅಭಿವೃದ್ಧಿಯ ಪ್ರಯಾಣದಲ್ಲಿ ಹಿಂದುಳಿದಿದ್ದ ಪೂರ್ವ ಭಾರತವನ್ನು ಅಭಿವೃದ್ಧಿ ಮಾಡಲು ಪಣತೊಟ್ಟು ಮುಂದುವರೆದೆವು. ಪೂರ್ವ ಭಾರತದಲ್ಲಿ ವ್ಯಾಪಾರೋದ್ಯಮಕ್ಕೆ ಮತ್ತು ಮನುಕುಲಕ್ಕೆ ಆಧುನಿಕ ಸೌಲಭ್ಯಗಳನ್ನು ನಿರ್ಮಾಣ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡೆವು. ಅದು ರೈಲಿರಲಿ, ರಸ್ತೆಗಳಿರಲಿ, ವಿಮಾನ ನಿಲ್ದಾಣಗಳಿರಲಿ, ಜಲಮಾರ್ಗಗಳಿರಲಿ, ಬಂದರುಗಳಿರಲಿ, ಪ್ರತೀ ವಲಯದಲ್ಲಿಯೂ ಕೆಲಸಗಳನ್ನು ಕೈಗೆತ್ತಿಕೊಂಡೆವು. ಈ ವಲಯದಲ್ಲಿ ಬಹು ದೊಡ್ಡ ಕೊರತೆ ಎಂದರೆ ಸಾಂಪ್ರದಾಯಿಕ ಸಂಪರ್ಕದ ಕೊರತೆ ಮತ್ತು ಅನಿಲ ಸಂಪರ್ಕ ಕೂಡಾ ಒಂದು ದೊಡ್ಡ ಸಮಸ್ಯೆಯಾಗಿತ್ತು. ಅನಿಲದ ಗೈರು ಹಾಜರಿಯಿಂದಾಗಿ ಹೊಸ ಉದ್ಯಮಗಳು ಬರುತ್ತಿರಲಿಲ್ಲ. ಪೂರ್ವ ಭಾರತದಲ್ಲಿ ಹಳೆಯ ಉದ್ಯಮಗಳು ಕೂಡಾ ಮುಚ್ಚಲ್ಪಡುತ್ತಿದ್ದವು. ಈ ಸಮಸ್ಯೆಯನ್ನು ನಿವಾರಿಸಲು, ಪೂರ್ವ ಭಾರತವನ್ನು ಪೂರ್ವದ ಬಂದರುಗಳು ಮತ್ತು ಪಶ್ಚಿಮದ ಬಂದರುಗಳ ಜೊತೆ ಜೋಡಿಸಲು ನಿರ್ಧರಿಸಲಾಯಿತು.
ಸ್ನೇಹಿತರೇ,
ಪ್ರಧಾನ ಮಂತ್ರಿ ಉರ್ಜ ಗಂಗಾ ಕೊಳವೆ ಮಾರ್ಗ ಈ ಗುರಿ ಸಾಧನೆಯ ನಿಟ್ಟಿನಲ್ಲಿ ಒಂದು ಹೆಜ್ಜೆ. ಇಂದು, ಈ ಕೊಳವೆ ಮಾರ್ಗದ ಪ್ರಮುಖ ಭಾಗವನ್ನು ಲೋಕಾರ್ಪಣೆ ಮಾಡಲಾಗಿದೆ. 350 ಕಿಲೋ ಮೀಟರ್ ಉದ್ದದ ಧೋಭಿ-ದುರ್ಗಾಪುರ ಕೊಳವೆಮಾರ್ಗದಿಂದ ಪಶ್ಚಿಮ ಬಂಗಾಳದ 10 ಜಿಲ್ಲೆಗಳು, ಬಿಹಾರ ಮತ್ತು ಜಾರ್ಖಂಡದ ಜಿಲ್ಲೆಗಳಿಗೆ ನೇರ ಲಾಭ ದೊರೆಯಲಿದೆ. ಈ ಕೊಳವೆ ಮಾರ್ಗ ನಿರ್ಮಾಣದಲ್ಲಿ ಸುಮಾರು 11 ಲಕ್ಷ ಮಾನವ ದಿನಗಳ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಈಗ ಅದು ಪೂರ್ಣಗೊಂಡಿದೆ, ಈ ಜಿಲ್ಲೆಗಳಲ್ಲಿಯ ಸಾವಿರಾರು ಕುಟುಂಬಗಳು ಅವರ ಅಡುಗೆ ಮನೆಯಲ್ಲಿ ಕಡಿಮೆ ದರದಲ್ಲಿ ಅನಿಲ ಪಡೆಯಲು ಸಮರ್ಥವಾಗಿವೆ ಮತ್ತು ಸಿ.ಎನ್.ಜಿ. ಆಧಾರಿತ ಕಡಿಮೆ ಮಾಲಿನ್ಯಕಾರಕ ವಾಹನಗಳ ಓಡಾಟಕ್ಕೂ ಇದರಿಂದ ಅನುಕೂಲವಾಗಲಿದೆ. ಇದೇ ವೇಳೆ, ದುರ್ಗಾಪುರ ಮತ್ತು ಸಿಂಧ್ರಿ ರಸಗೊಬ್ಬರ ಕಾರ್ಖಾನೆಗಳಿಗೆ ನಿರಂತರ ಅನಿಲ ಪೂರೈಕೆ ಸಾಧ್ಯವಾಗಲಿದೆ. ಈ ಎರಡು ಕಾರ್ಖಾನೆಗಳ ಬೆಳವಣಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲಿದೆ ಮತ್ತು ರೈತರಿಗೆ ಸಾಕಷ್ಟು ಹಾಗು ಕಡಿಮೆ ವೆಚ್ಚದಲ್ಲಿ ರಸಗೊಬ್ಬರ ಒದಗಲಿದೆ. ಜಗದೀಶಪುರ-ಹಾಲ್ಡಿಯಾದ ದುರ್ಗಾಪುರ-ಹಾಲ್ಡಿಯಾ ವಿಭಾಗವನ್ನು ಹಾಗು ಬೊಕಾರೋ-ಧಾಮ್ರಾ ಕೊಳವೆಮಾರ್ಗವನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ನಾನು ಗೈಲ್ ಮತ್ತು ಪಶ್ಚಿಮ ಬಂಗಾಳ ಸರಕಾರಕ್ಕೆ ಮನವಿ ಮಾಡುತ್ತೇನೆ.
ಸ್ನೇಹಿತರೇ,
ನೈಸರ್ಗಿಕ ಅನಿಲದ ಜೊತೆ ಈ ವಲಯದಲ್ಲಿ ಎಲ್.ಪಿ.ಜಿ. ಅನಿಲ ಮೂಲಸೌಕರ್ಯವನ್ನು ಬಲಪಡಿಸುವ ಕಾರ್ಯಗಳು ನಡೆಯುತ್ತಿವೆ. ಇದು ಬಹಳ ಮುಖ್ಯ ಯಾಕೆಂದರೆ, ಉಜ್ವಲಾ ಯೋಜನೆಯ ಬಳಿಕ ಪೂರ್ವ ಭಾರತದಲ್ಲಿ ಎಲ್.ಪಿ.ಜಿ. ಅನಿಲ ವ್ಯಾಪ್ತಿ ಗಮನಾರ್ಹವಾಗಿ ಹೆಚ್ಚಿದೆ. ಇದರಿಂದ ಬೇಡಿಕೆ ಕೂಡಾ ಹೆಚ್ಚಾಗಿದೆ. ಉಜ್ವಲಾ ಯೋಜನಾ ಅಡಿಯಲ್ಲಿ ಸುಮಾರು 90 ಲಕ್ಷ ಸಹೋದರಿಯರು ಮತ್ತು ಪುತ್ರಿಯರು ಪಶ್ಚಿಮ ಬಂಗಾಳದಲ್ಲಿ ಉಚಿತ ಅನಿಲ ಸಂಪರ್ಕಗಳನ್ನು ಪಡೆದಿದ್ದಾರೆ. ಇವರಲ್ಲಿ 36 ಲಕ್ಷ ಎಸ್.ಟಿ/ಎಸ್.ಸಿ. ವರ್ಗದ ಮಹಿಳೆಯರು ಸೇರಿದ್ದಾರೆ. 2014ರಲ್ಲಿ ಪಶ್ಚಿಮ ಬಂಗಾಳದಲ್ಲಿ ಎಲ್.ಪಿ.ಜಿ. ಅನಿಲ ವ್ಯಾಪ್ತಿ ಪ್ರತಿಶತ 41 ರಷ್ಟಿತ್ತು. ನಮ್ಮ ಸರಕಾರದ ನಿರಂತರ ಪ್ರಯತ್ನಗಳ ಫಲವಾಗಿ ಬಂಗಾಳದಲ್ಲಿ ಎಲ್.ಪಿ.ಜಿ. ಅನಿಲದ ವ್ಯಾಪ್ತಿ ಈಗ 99 ಪ್ರತಿಶತವನ್ನು ದಾಟಿದೆ. 41 ಪ್ರತಿಶತ ಎಲ್ಲಿ ಮತ್ತು 99 ಪ್ರತಿಶತಕ್ಕೂ ಅಧಿಕ ಎಲ್ಲಿ!. ಈ ಬಜೆಟಿನಲ್ಲಿ ದೇಶದಲ್ಲಿ ಉಜ್ವಲಾ ಯೋಜನಾ ಅಡಿಯಲ್ಲಿ ಬಡವರಿಗೆ ಇನ್ನೂ ಒಂದು ಕೋಟಿ ಉಚಿತ ಅನಿಲ ಸಂಪರ್ಕಗಳನ್ನು ಒದಗಿಸಲು ಪ್ರಸ್ತಾವಿಸಲಾಗಿದೆ. ಹಾಲ್ಡಿಯಾದಲ್ಲಿಯ ಎಲ್.ಪಿ.ಜಿ.ಆಮದು ಟರ್ಮಿನಲ್ ಈ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸುವಲ್ಲಿ ಬಹು ಪ್ರಮುಖವಾದ ಪಾತ್ರವನ್ನು ವಹಿಸಲಿದೆ. ಇದರಿಂದ ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ, ಛತ್ತೀಸ್ ಗಢ, ಉತ್ತರ ಪ್ರದೇಶ, ಮತ್ತು ಈಶಾನ್ಯಗಳ ಕೋಟ್ಯಾಂತರ ಕುಟುಂಬಗಳಿಗೆ ಸಹಾಯವಾಗಲಿದೆ. ಈ ವಲಯದಿಂದ ಎರಡು ಕೋಟಿಗೂ ಅಧಿಕ ಜನರಿಗೆ ಅನಿಲ ಪೂರೈಕೆ ಲಭಿಸಲಿದೆ. ಇವರಲ್ಲಿ ಸುಮಾರು ಒಂದು ಕೋಟಿ ಜನರು ಉಜ್ವಲಾ ಯೋಜನಾದ ಫಲಾನುಭವಿಗಳು. ಇದೇ ವೇಳೆ, ಬೃಹತ್ ಸಂಖ್ಯೆಯ ಉದ್ಯೋಗಗಳು ಇಲ್ಲಿಯ ಯುವಜನತೆಗೆ ಲಭ್ಯವಾಗಲಿವೆ.
ಸ್ನೇಹಿತರೇ,
ಸ್ವಚ್ಛ ಇಂಧನಕ್ಕೆ ನಮ್ಮ ಬದ್ಧತೆಯ ಅಂಗವಾಗಿ , ಬಿ-6 ಇಂಧನ ಸ್ಥಾವರದ ಸಾಮರ್ಥ್ಯ ವರ್ಧನೆಯ ಕೆಲಸವೂ ಇಂದು ಆರಂಭವಾಗಿದೆ. ಹಾಲ್ಡಿಯಾ ತೈಲ ಶುದ್ದೀಕರಣಾಗಾರದ ಎರಡನೇ ಕ್ಯಾಟಲಿಟಿಕ್ ಡೀ ವ್ಯಾಕ್ಸಿಂಗ್ ಘಟಕ ಸಿದ್ದಗೊಂಡ ಬಳಿಕ, ಲ್ಯೂಬ್ ಆಧಾರಿತ ತೈಲಗಳಿಗಾಗಿ ವಿದೇಶಗಳ ಅವಲಂಬನೆ ಕಡಿಮೆಯಾಗಲಿದೆ. ಇದರಿಂದ ದೇಶಕ್ಕೆ ಕೋಟ್ಯಾಂತರ ರೂಪಾಯಿಗಳ ಉಳಿತಾಯ ಆಗಲಿದೆ. ವಾಸ್ತವವಾಗಿ, ಇಂದು, ನಾವು ರಫ್ತು ಸಾಮರ್ಥ್ಯವನ್ನು ರೂಪಿಸಲು ಸಮರ್ಥರಾಗುವಂತಹ ಪರಿಸ್ಥಿತಿಯತ್ತ ಸಾಗುತ್ತಿದ್ದೇವೆ.
ಸ್ನೇಹಿತರೇ,
ನಾವು ಪಶ್ಚಿಮ ಬಂಗಾಳವನ್ನು ದೇಶದ ಪ್ರಮುಖ ವ್ಯಾಪಾರ ಮತ್ತು ಕೈಗಾರಿಕಾ ಕೇಂದ್ರವಾಗಿ ಮರು ಅಭಿವೃದ್ಧಿ ಮಾಡಲು ಅವಿಶ್ರಾಂತವಾಗಿ ಕಾರ್ಯನಿರತರಾಗಿದ್ದೇವೆ. ಇದರಲ್ಲಿ ಪ್ರಮುಖವಾಗಿ ಬಂದರು ಮುಂಚೂಣಿ ಅಭಿವೃದ್ಧಿ ಮಾದರಿಯೂ ಅಡಕವಾಗಿದೆ. ಕೋಲ್ಕೊತ್ತಾದ ಶ್ಯಾಂ ಪ್ರಸಾದ್ ಮುಖರ್ಜಿ ಬಂದರು ಮಂಡಳಿಯನ್ನು ಅಭಿವೃದ್ಧಿ ಮಾಡಲು ಕಳೆದ ಹಲವು ವರ್ಷಗಳಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಲ್ಡಿಯಾ ಡಾಕ್ ಸಂಕೀರ್ಣದ ಸಾಮರ್ಥ್ಯವನ್ನು ಬಲಪಡಿಸುವುದು ಮತ್ತು ನೆರೆಯ ದೇಶಗಳ ಜೊತೆ ಅದರ ಸಂಪರ್ಕವನ್ನು ಬಲಪಡಿಸುವುದು ಬಹಳ ಮುಖ್ಯ. ಹೊಸದಾಗಿ ನಿರ್ಮಾಣವಾದ ಮೇಲ್ ಸೇತುವೆ ಸಂಪರ್ಕವನ್ನು ಹೆಚ್ಚಿಸಲಿದೆ. ಈಗ ಹಾಲ್ಡಿಯಾದಿಂದ ಸರಕುಗಳು ಬಂದರಿಗೆ ಬಹಳ ಕಡಿಮೆ ಸಮಯದಲ್ಲಿ ತಲುಪಲಿವೆ ಮತ್ತು ಅಲ್ಲಿ ದಟ್ಟಣೆ ಮತ್ತು ಜಾಮ್ ಗಳು ಇರುವುದಿಲ್ಲ. ಭಾರತದ ಒಳನಾಡು ಜಲ ಮಾರ್ಗ ಪ್ರಾಧಿಕಾರವು ಇಲ್ಲಿ ಬಹುಮಾದರಿ ಟರ್ಮಿನಲ್ ನಿರ್ಮಾಣ ಮಾಡಲು ಯೋಜನೆ ರೂಪಿಸುತ್ತಿದೆ. ಇಂತಹ ಪ್ರಸ್ತಾವಗಳೊಂದಿಗೆ ಹಾಲ್ಡಿಯಾವು ಆತ್ಮನಿರ್ಭರ ಭಾರತಕ್ಕೆ ಭಾರೀ ಸಾಮರ್ಥ್ಯದ ಕೇಂದ್ರವಾಗಿ ಮೂಡಿ ಬರಲಿದೆ. ನಾನು ನನ್ನ ಸಹೋದ್ಯೋಗಿ ಮಿತ್ರ ಧರ್ಮೇಂದ್ರ ಪ್ರಧಾನ್ ಜೀ ಮತ್ತವರ ಇಡೀ ತಂಡವನ್ನು ಈ ಅಭಿವೃದ್ಧಿಗಾಗಿ ಅಭಿನಂದಿಸುತ್ತೇನೆ ಮತ್ತು ಈ ತಂಡವು ಅತ್ಯಲ್ಪ ಕಾಲದಲ್ಲಿ ಸಾಮಾನ್ಯ ಮನುಷ್ಯರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಫಲವಾಗುತ್ತದೆ ಎಂಬ ವಿಶ್ವಾಸ ನನ್ನದಾಗಿದೆ. ಮತ್ತೊಮ್ಮೆ ನನ್ನ ಶುಭಾಶಯಗಳು, ಪಶ್ಚಿಮ ಬಂಗಾಳಕ್ಕೆ ಮತ್ತು ಪೂರ್ವ ಭಾರತದ ಎಲ್ಲಾ ರಾಜ್ಯಗಳಿಗೆ ಈ ಸೌಲಭ್ಯಗಳಿಗಾಗಿ ಶುಭ ಹಾರೈಕೆಗಳು
ಬಹಳ ಧನ್ಯವಾದಗಳು!