ಭಾರತ ಮತ್ತು ಹೊರರಾಷ್ಟ್ರಗಳ ಗೌರವಾನ್ವಿತ ಅತಿಥಿಗಳೇ, ನಮಸ್ತೆ!
`ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ ಸಮಾವೇಶ – 2020’(RAISE) ಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೇಲಿನ ಚರ್ಚೆಯನ್ನು ಪ್ರೋತ್ಸಾಹಿಸಲು ಇದೊಂದು ದೊಡ್ಡ ಪ್ರಯತ್ನವಾಗಿದೆ. ನೀವೆಲ್ಲರೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮತ್ತು ಮಾನವ ಸಬಲೀಕರಣದ ಅಂಶಗಳನ್ನು ಸಮರ್ಪಕವಾಗಿ ಪ್ರಕಾಶಮಾನಗೊಳಿಸಿದ್ದೀರಿ. ತಂತ್ರಜ್ಞಾನವು ನಮ್ಮೆಲ್ಲಾ ಕಾರ್ಯ ಕ್ಷೇತ್ರ ಅಥವಾ ಕೆಲಸದ ಸ್ಥಳಗಳನ್ನು ಪರಿವರ್ತಿಸಿದೆ. ಇದು ಸಂಪರ್ಕವನ್ನು ಸುಧಾರಿಸಿದೆ. ಸಮಯ ಮತ್ತು ತಂತ್ರಜ್ಞಾನವು ಮತ್ತೆ ಪ್ರಮುಖ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡಿದೆ. ಹಾಗಾಗಿ, ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಜವಾಬ್ದಾರಿ ನಡುವಿನ ಈ ವಿಲೀನವು ಮಾನವ ಸ್ಪರ್ಶದೊಂದಿಗೆ ತಂತ್ರಜ್ಞಾನವನ್ನು ಉತ್ಕೃಷ್ಟಗೊಳಿಸುತ್ತದೆ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ ಎಂದರು.
ಸ್ನೇಹಿತರೇ,
ಹೊಣೆಗಾರಿಕೆಯುಳ್ಳ (ಉತ್ತರದಾಹಿತ್ವವುಳ್ಳ) ಕೃತಕ ಬುದ್ಧಿಮತ್ತೆಯು ಮಾನವನ ಬೌದ್ಧಿಕ ಶಕ್ತಿಯ ಗೌರವವಾಗಿದೆ ಅಥವಾ ಪ್ರಶಂಸನೀಯ ತಂತ್ರಜ್ಞಾನವಾಗಿದೆ. ಆಲೋಚನಾ ಶಕ್ತಿಯು ಮಾನವರಿಗೆ ಸಾಧನ ಮತ್ತು ತಂತ್ರಜ್ಞಾನವನ್ನು ಕಂಡುಹಿಡಿಯಲು ಅನುವು ಮಾಡಿಕೊಟ್ಟಿದೆ. ಇಂದು ಈ ಸಾಧನಗಳು ಮತ್ತು ತಂತ್ರಜ್ಞಾನಗಳು ಮಾನವನಿಗೆ ಆಲೋಚಿಸುವ ಮತ್ತು ಕಲಿಕಾ ಶಕ್ತಿಯನ್ನು ಸಂಪಾದಿಸಿಕೊಟ್ಟಿವೆ. ಈ ನಿಟ್ಟಿನಲ್ಲಿ ಹೊರಹೊಮ್ಮಿರುವ ಪ್ರಮುಖ ತಂತ್ರಜ್ಞಾನವೇ ಕೃತಕ ಬುದ್ಧಿಮತ್ತೆ. ಮಾನವರ ಜತೆ ಕೃತಕ ಬುದ್ಧಿಮತ್ತೆ ತಂಡ ಕೆಲಸ ಮಾಡಿದರೆ ಈ ಸುಂದರ ಪೃಥ್ವಿಯ ಮೇಲೆ ಅದ್ಭುತಗಳನ್ನು ಸೃಷ್ಟಿಸಲು ಸಾಧ್ಯವಿದೆ.
ಸ್ನೇಹಿತರೇ,
ಪ್ರತಿ ಹಂತದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಜ್ಞಾನ ಮತ್ತು ಕಲಿಕೆ ವಿಷಯದಲ್ಲಿ ಭಾರತವು ವಿಶ್ವವನ್ನು ಮುನ್ನಡೆಸಿದೆ. ಈ ಹೊತ್ತಿನ ಮಾಹಿತಿ ತಂತ್ರಜ್ಞಾನ ಯುಗದ ಕಾಲಘಟ್ಟದಲ್ಲಿ, ಭಾರತವು ಮಹೋನ್ನತ ಕೊಡುಗೆ ನೀಡುತ್ತಾ ಬಂದಿದೆ. ಅತ್ಯಂತ ಪ್ರತಿಭಾವಂತ ತಂತ್ರಜ್ಞಾನ ನಾಯಕರು ಮತ್ತು ತಜ್ಞರು ಭಾರತೀಯರಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಜಾಗತಿಕ ಮಾಹಿತಿ ತಂತ್ರಜ್ಞಾನ ಸೇವಾ ಉದ್ಯಮದಲ್ಲಿ ಭಾರತ `ಶಕ್ತಿ ಮನೆ ಅಥವಾ ಪವರ್ ಹೌಸ್’ ಎಂಬುದನ್ನು ಸಾಧಿಸಿ ತೋರಿಸಿದೆ. ನಾವು ಡಿಜಿಟಲ್ ಕ್ಷೇತ್ರದಲ್ಲೂ ಶ್ರೇಷ್ಠತೆಯನ್ನು ಮುಂದುವರಿಸುವ ಮೂಲಕ ಇಡೀ ಜಗತ್ತಿಗೆ ಆನಂದ ಉಂಟುಮಾಡಬೇಕಿದೆ.
ಸ್ನೇಹಿತರೇ,
ತಂತ್ರಜ್ಞಾನವು ಪಾರದರ್ಶಕತೆ ಮತ್ತು ಸೇವಾ ವಿತರಣೆಯಲ್ಲಿ ಸುಧಾರಣೆ ತರುತ್ತದೆ ಎಂಬುದನ್ನು ನಾವು ಭಾರತದಲ್ಲಿ ಕಣ್ಣಾರೆ ಕಂಡಿದ್ದೇವೆ, ಅನುಭವಿಸಿದ್ದೇವೆ. ಇಡೀ ವಿಶ್ವದಲ್ಲೇ ಅತಿದೊಡ್ಡ ಮತ್ತು ಅನನ್ಯ ಎನಿಸಿರುವ ಗುರುತಿನ ವ್ಯವಸ್ಥೆ – ಆಧಾರ್ ಸಂಖ್ಯೆಯನ್ನು ಅಳವಡಿಸಿಕೊಂಡಿದ್ದೇವೆ. ಜತೆಗೆ, ವಿಶ್ವದ ಅತ್ಯಂತ ನವೀನ ಡಿಜಿಟಲ್ ಪಾವತಿ ವ್ಯವಸ್ಥೆ – ಯುಪಿಐ ಅನ್ನು ಸಹ ಹೊಂದಿದ್ದೇವೆ. ಇದು ನಾನಾ ಡಿಜಿಟಲ್ ಸೇವೆಗಳನ್ನು ಪಡೆಯಲು ನಮಗೆ ಅನುವು ಮಾಡಿಕೊಟ್ಟಿದೆ. ದೇಶದ ಬಡವರು ಮತ್ತು ನಿರ್ಲಕ್ಷಿತ ಜನರಿಗೆ ನೇರ ನಗದು ವರ್ಗಾವಣೆ ಮತ್ತಿತರ ಹಣಕಾಸು ಸೇವೆಗಳನ್ನು ಒದಗಿಸಲು ಇದರಿಂದ ಸಾಧ್ಯವಾಗುತ್ತಿದೆ. ದೇಶಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಬಣವಾಗುತ್ತಿರುವ ಈ ಸಂದರ್ಭದಲ್ಲಿ ಭಾರತದ `ಡಿಜಿಟಲ್ ವ್ಯವಸ್ಥೆ’ ಹೇಗೆ ಸನ್ನದ್ಧವಾಗಿದೆ. ಅದು ಹೇಗೆಲ್ಲಾ ಸಹಾಯಕವಾಗುತ್ತಿದೆ ಎಂಬುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಡಿಜಿಟಲ್ ಸೇವೆಯೊಂದಿಗೆ ನಾವು ಜನರನ್ನು ಮುಟ್ಟಿದ್ದೇವೆ. ಅವರ ಸಂಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸಿದ್ದೇವೆ. ಅತ್ಯಂತ ದಕ್ಷತೆಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ. ಭಾರತವು ಆಪ್ಟಿಕಲ್ ಫೈಬರ್ ಜಾಲವನ್ನು ವೇಗವಾಗಿ ವಿಸ್ತರಿಸುತ್ತಿದೆ. ದೇಶದ ಪ್ರತಿ ಗ್ರಾಮಕ್ಕೆ ಅತಿವೇಗದ ಅಂತರ್ಜಾಲ ಸೇವೆ ಒದಗಿಸುವುದು ಇದರ ಗುರಿಯಾಗಿದೆ.
ಸ್ನೇಹಿತರೇ,
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಭಾರತವು `ವಿಶ್ವದ ಗಮ್ಯತಾಣ’ವಾಗಬೇಕು ಎಂದು ನಾವು ಬಯಸುತ್ತೇವೆ. ಹಲವಾರು ಭಾರತೀಯರು ವಿಶೇಷವಾಗಿ ತಂತ್ರಜ್ಞಾನ ನಿಪುಣರು, ವೃತ್ತಿಪರರು, ತಜ್ಞರು ಮತ್ತು ಎಂಜಿನಿಯರ್ಗಳು ಕೃತಕ ಬುದ್ಧಿಮತ್ತೆ ಮೇಲೆ ಈಗಾಗಲೇ ಕೆಲಸ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಣತರು ಇದರ ಮೇಲೆ ಇನ್ನೂ ಹೆಚ್ಚಿನ ಕೆಲಸ ಮಾಡುತ್ತಾರೆ ಎಂಬ ಆಶಾವಾದ ತಮ್ಮದಾಗಿದೆ. `ನಂಬಿಕೆ, ಸಹಭಾಗಿತ್ವ, ಜವಾಬ್ದಾರಿ ಮತ್ತು ಒಳಗೊಳ್ಳುವಿಕೆ ಮತ್ತು ತಂಡದಲ್ಲಿ ಕಾರ್ಯ ನಿರ್ವಹಿಸುವಿಕೆ’ ತತ್ವಗಳ ಅನುಸರಣೆಯಿಂದ ಈ ಕಾರ್ಯ ಸಾಧನೆ ಸಾಧ್ಯವಾಗುತ್ತದೆ ಎಂಬುದು ನಮ್ಮ ಸಲಹೆಯಾಗಿದೆ.
ಸ್ನೇಹಿತರೇ,
ಭಾರತ ಇತ್ತೀಚೆಗಷ್ಟೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ – 2020 ಅನ್ನು ಅಳವಡಿಸಿಕೊಂಡಿದೆ. ಶಿಕ್ಷಣದ ಪ್ರಮುಖ ಭಾಗವಾಗಿ ತಂತ್ರಜ್ಞಾನ ಆಧರಿತ ಕಲಿಕೆ ಮತ್ತು ಕೌಶಲ್ಯಕ್ಕೆ ಹೊಸ ನೀತಿಯಲ್ಲಿ ಗಮನ ಕೇಂದ್ರೀಕರಿಸಲಾಗಿದೆ. ದೇಶದ ಹಲವಾರು ಪ್ರಾದೇಶಿಕ ಭಾಷೆಗಳು ಮತ್ತು ಉಪಭಾಷೆ (ಪ್ರಾಂತೀಯ) ಗಳಲ್ಲಿ ವಿದ್ಯುನ್ಮಾನ–ಕೋರ್ಸ್ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸ್ವಾಭಾವಿಕ ಭಾಷಾ ಸಂಸ್ಕರಣೆ (ಎನ್ಎಲ್ ಪಿ) ಸಾಮರ್ಥ್ಯ ಬಳಕೆಯಿಂದ ಈ ಎಲ್ಲಾ ಪ್ರಯತ್ನಗಳ ಪ್ರಯೋಜನ ಲಭಿಸಲಿದೆ. ಈ ವರ್ಷದ ಏಪ್ರಿಲ್ ನಲ್ಲಿ ನಾವು ಯುವ ಸಮುದಾಯದ ಕಾರ್ಯಕ್ರಮಗಳಿಗೆ `ಹೊಣೆಗಾರಿಕೆಯುಳ್ಳ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ’ವನ್ನು ಅನಾವರಣಗೊಳಿಸಿದ್ದೇವೆ. ಈ ಕಾರ್ಯಕ್ರಮದ ಅಡಿ, 11 ಸಾವಿರಕ್ಕಿಂತ ಹೆಚ್ಚಿನ ಶಾಲಾ ವಿದ್ಯಾರ್ಥಿಗಳು ಮೂಲ (ಸರಳ) ಕೋರ್ಸ್ ಗಳನ್ನು ಪೂರ್ಣಗೊಳಿಸಿದ್ದಾರೆ. ಅವರೆಲ್ಲರೂ ಇದೀಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಯೋಜನೆಗಳನ್ನು (ಪ್ರಾಜೆಕ್ಟ್) ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದಾರೆ.
ಸ್ನೇಹಿತರೇ,
ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ (ಎನ್ ಇಟಿಎಫ್) ಯನ್ನು ಸೃಷ್ಟಿಸಲಾಗುತ್ತಿದೆ. ಇದು ವಿದ್ಯುನ್ಮಾನ ಶಿಕ್ಷಣ ಘಟಕಗಳನ್ನು ಸೃಜಿಸಿ, ಡಿಜಿಟಲ್ ಮೂಲಸೌಕರ್ಯ, ಡಿಜಿಟಲ್ ವಸ್ತು ವಿಷಯ ಮತ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಿದೆ. ವಾಸ್ತವಿಕ (ವರ್ಚುಯಲ್) ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದ್ದು, ಇವು ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅವಕಾಶ ಕಲ್ಪಿಸಲಿವೆ. ದೇಶದ ಯುವ ಸಮುದಾಯದಲ್ಲಿ ಉದ್ಯಮಶೀಲತೆ ಮತ್ತು ಆವಿಷ್ಕಾರದ ಸಂಸ್ಕೃತಿ ಉತ್ತೇಜಿಸುವ ಸಲುವಾಗಿ ನಾವು `ಅಟಲ್ ಇನ್ನೋವೇಷನ್ ಮಿಷನ್’ ಅಥವಾ `ಅಟಲ್ ಆವಿಷ್ಕಾರ (ಅನುಶೋಧನೆ) ಕಾರ್ಯಕ್ರಮ’ ಅನಾವರಣಗೊಳಿಸಿದ್ದೇವೆ. ಈ ಎಲ್ಲಾ ಕ್ರಮಗಳ ಮೂಲಕ ನಾವು ದೇಶದ ಜನತೆಗೆ ಉದಯೋನ್ಮುಖ ತಂತ್ರಜ್ಞಾನಗಳ ಪ್ರಯೋಜನ ಒದಗಿಸುವ ಗುರಿಯೊಂದಿಗೆ ದಾಪುಹೆಜ್ಜೆ ಇಟ್ಟಿದ್ದೇವೆ.
ಸ್ನೇಹಿತರೇ,
`ರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಕಾರ್ಯಕ್ರಮ’ ಕುರಿತು ಪ್ರಸ್ತಾಪಿಸಲು ನಾನಿಲ್ಲಿ ಇಚ್ಛಿಸುತ್ತೇನೆ. ಜನರ ನಾನಾ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಈ ಕಾರ್ಯಕ್ರಮ ಸಮರ್ಪಣೆ ಆಗಲಿದೆ. ಎಲ್ಲಾ ಪಾಲುದಾರರ ಬೆಂಬಲ ಮತ್ತು ಸಹಕಾರದೊಂದಿಗೆ ಈ ಕಾರ್ಯಕ್ರಮ ಜಾರಿಯಾಗಲಿದೆ. `ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ’ ಸಮಾವೇಶವು ವಿಚಾರಗಳು ಮತ್ತು ಸಮಸ್ಯೆಗಳ ಪರಿಹಾರ ಮತ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಉತ್ತಮ ವೇದಿಕೆಯಾಗಲಿದೆ. ಈ ಎಲ್ಲಾ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಗವಂತೆ ನಾನು ನಿಮ್ಮೆಲ್ಲರನ್ನು ಈ ಮಾಲಕ ಆಹ್ವಾನಿಸುತ್ತೇನೆ.
ಸ್ನೇಹಿತರೇ,
ನಮ್ಮ ಮುಂದಿರುವ ಕೆಲವೊಂದು ಸವಾಲುಗಳನ್ನು ಹಂಚೊಕೊಳ್ಳಲು ನಾನು ಇಷ್ಟಪಡುತ್ತೇನೆ. ನಮ್ಮ ಸ್ವತ್ತುಗಳು ಮತ್ತು ಸಂಪನ್ಮೂಲಗಳ ಸಮರ್ಪಕ ನಿರ್ವಹಣೆಗೆ ನಾವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಬಹುದಾ? ಹಲವು ಕಡೆ ನಮ್ಮ ಸಂಪನ್ಮೂಲಗಳು ಜಡವಾಗಿವೆ. ಮತ್ತೆ ಕೆಲವೆಡೆ, ಸಂಪನ್ಮೂಲಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ನಾವು ಕ್ರಿಯಾತ್ಮಕವಾಗಿ ಈ ಸಂಪನ್ಮೂಲಗಳನ್ನು ಮರುಹಂಚಿಕೆ ಅಥವಾ ಪುನರ್ವಿಂಗಡಣೆ ಮಾಡಿ, ಅವುಗಳ ಸಮರ್ಪಕ ಬಳಕೆ ಮಾಡಬಹುದಾ? ನಮ್ಮ ನಾಗರಿಕರ ಮನೆ ಬಾಗಿಲಿಗೆ ಪ್ರಾಮಾಣಿಕವಾಗಿ ಮತ್ತು ಕಡುಚೂಟಿಯಾಗಿ (ಚುರುಕಾಗಿ) ಸೇವೆಗಳನ್ನು ವಿತರಿಸುವ ಮೂಲಕ ಅವರನ್ನು ಸಂತೋಷಪಡಿಸಬಹುದಾ?
ಸ್ನೇಹಿತರೇ,
ದೇಶದ ಭವಿಷ್ಯ ಯುವ ಸಮುದಾಯದ ಮೇಲೆ ನಿಂತಿದೆ ಮತ್ತು ಪ್ರತಿ ಯುವಜೀವದ ಏಳ್ಗೆಯೇ ಪ್ರಮುಖ ವಿಷಯವಾಗಿದೆ. ಪ್ರತಿ ಮಗುವಿಗೂ ಅನನ್ಯವಾದ ಪ್ರತಿಭೆ, ಸಾಮರ್ಥ್ಯ ಮತ್ತು ಅಭಿರುಚಿ ಇದೆ. ಆದರೆ ಕೆಲವೊಮ್ಮೆ, ಸರಿಯಾದ ವ್ಯಕ್ತಿ ತಪ್ಪಾದ (ಅಡ್ಡ) ದಾರಿ (ಸ್ಥಳ) ಯಲ್ಲಿ ಕೊನೆಗೊಳ್ಳುತ್ತಿದ್ದಾನೆ. ಈ ರೀತಿಯ ಅಧ್ವಾನಗಳನ್ನು ಸರಿಪಡಿಸಲು ಹಾದಿಗಳಿವೆ. ಪ್ರತಿ ಮಗು ಬೆಳೆಯುವಾಗ ಅವನನ್ನು ಅಥವಾ ಅವಳನ್ನು ಗಮನಿಸುವುದಾದರೂ ಹೇಗೆ? ಪೋಷಕರು, ಶಿಕ್ಷಕರು ಮತ್ತು ಸ್ನೇಹಿತರು ಸೂಕ್ಷ್ಮವಾಗಿ ಬೆಳೆಯುವ ಮಕ್ಕಳನ್ನು ಗಮನಿಸುತ್ತಾರಾ? ಬಾಲ್ಯದಿಂದ ಹಿಡಿದು ಪ್ರೌಢಾವಸ್ಥೆಗೆ ಬರುವ ತನಕ ಆ ಮಕ್ಕಳನ್ನು ಗಮನಿಸಬೇಕು. ಮತ್ತು, ಅವುಗಳ ದಾಖಲೆಗಳನ್ನು ಇಡಬೇಕು. ಹೀಗೆ ಮಾಡುವುದರಿಂದ ಆ ಮಗುವಿನ ಸ್ವಾಭಾವಿಕ ಗುಣಲಕ್ಷಣಗಳನ್ನು ದೀರ್ಘ ಕಾಲದಲ್ಲಿ ಪತ್ತೆ ಮಾಡಲು ಸಹಾಯಕವಾಗುತ್ತದೆ. ಈ ರೀತಿಯಲ್ಲಿ ನಿರಂತರ ಗಮನ ನೀಡುವಿಕೆಯು ಯುವ ಸಮುದಾಯವನ್ನು ಸನ್ಮಾರ್ಗಕ್ಕೆ ಕೊಂಡೊಯ್ಯಲು, ಮಾರ್ಗದರ್ಶನ ನೀಡಲು ಪರಿಣಾಮಕಾರಿಯಾಗುತ್ತದೆ. ಪ್ರತಿ ಮಗುವಿನ ಅಭಿರುಚಿಯ ವಿಶ್ಲೇಷಣಾತ್ಮ ವರದಿ ನೀಡುವ ವ್ಯವಸ್ಥೆ ನಮ್ಮಲ್ಲಿದೆಯೇ? ಈ ವ್ಯವಸ್ಥೆ ಇದ್ದಾಗ ಮಾತ್ರ ಹಲವಾರು ಯುವ ಜೀವಗಳಿಗೆ ಉಜ್ವಲ ಅವಕಾಶಗಳ ಬಾಗಿಲು ತೆರೆಯಲು ಸಾಧ್ಯ. ಇಂತಹ ಯುವ ಮಾನವ ಸಂಪನ್ಮೂಲಗಳ ನಕಾಶೆಯಿಂದ ಸರಕಾರಗಳು ಮತ್ತು ಉದ್ಯಮ ವಲಯದಲ್ಲಿ ದೀರ್ಘಕಾಲೀನ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಸ್ನೇಹಿತರೇ,
ದೇಶದ ಕೃಷಿ ಮತ್ತು ಆರೋಗ್ಯ ಸಂರಕ್ಷಣಾ ವಲಯದ ಸಬಲೀಕರಣಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಬಹುದೊಡ್ಡ ಪಾತ್ರ ವಹಿಸುತ್ತದೆ ಎಂಬುದನ್ನು ನಾನು ನೋಡಿದ್ದೇನೆ. ಮುಂದಿನ ಪೀಳೀಗೆಗೆ ನಗರ ಮೂಲಸೌಕರ್ಯ ಸೃಷ್ಟಿ ಮತ್ತು ಸಂಚಾರ ದಟ್ಟಣೆ ನಿಯಂತ್ರಣ, ಒಳಚರಂಡಿ ವ್ಯವಸ್ಥೆ ಸುಧಾರಣೆ, ಇಂಧನ ಗ್ರಿಡ್ಗಳ ಸ್ಥಾಪನೆ ಮತ್ತಿತರ ನಗರ ಪ್ರದೇಶಗಳ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಈ ತಂತ್ರಜ್ಞಾನ ನೆರವಾಗಲಿದೆ. ಪ್ರಕೃತಿ ವಿಕೋಪಗಳ ನಿರ್ವಹಣಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲು ಸಹ ಇದನ್ನು ಬಳಕೆ ಮಾಡಿಕೊಳ್ಳಬಹುದು. ಅಲ್ಲದೆ, ಹವಾಮಾನ ಬದಲಾವಣೆ ಸಮಸ್ಯೆಗಳನ್ನು ನಿವಾರಿಸಲು ಈ ತಂತ್ರಜ್ಞಾನವನ್ನು ಬಳಸಬಹುದು.
ಸ್ನೇಹಿತರೇ,
ಈ ಚೆಂದದ ಪೃಥ್ವಿ ಹಲವು ಭಾಷೆ, ಸಂಸ್ಕೃತಿ, ಆಚರಣೆಗಳಿಂದ ಸಮ್ಮಿಲನಗೊಂಡಿದೆ. ಭಾರತದಲ್ಲಿ ಹಲವು ಭಾಷೆಗಳು ಮತ್ತು ಉಪಭಾಷೆಗಳಿವೆ. ಇಂತಹ ವೈವಿಧ್ಯತೆಯಿಂದಲೇ ನಮ್ಮ ದೇಶದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಿದೆ. ಪ್ರೊ. ರಾಜ್ ರೆಡ್ಡಿ ನೀಡಿರುವ ಸಲಹೆಯಂತೆ, ನಾವೇಕೆ ಭಾಷೆಗಳಿಗಿರುವ ಕಂದಕಗಳನ್ನು ಮುಚ್ಚಿಹಾಕಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಬಾರದು? ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೇಗೆ ನಮ್ಮ ದಿವ್ಯಾಂಗ ಸಹೋದರರು ಮತ್ತು ಸಹೋದರಿಯರನ್ನು ಸಬಲೀಕರಿಸುತ್ತದೆ ಎಂಬುದರ ಸರಳ ಮತ್ತು ಪರಿಣಾಮಕಾರಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ನಾವೆಲ್ಲಾ ಆಲೋಚಿಸೋಣ.
ಸ್ನೇಹಿತರೇ,
ಜ್ಞಾನ ವಿನಿಮಯಕ್ಕೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಏಕೆ ಬಳಸಬಾರದು? ಸಬಲೀಕರಣದಂತೆಯೇ ಜ್ಞಾನ, ಮಾಹಿತಿ ಮತ್ತು ಕೌಶಲ್ಯ ಸುಲಭವಾಗಿ ಸಿಗುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ.
ಸ್ನೇಹಿತರೇ,
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೇಗೆ ಬಳಸುತ್ತೇವೆ ಎಂಯ ನಂಬಿಕೆ ಖಾತ್ರಿಪಡಿಸುವ ಸಂಘಟಿತ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಈ ನಂಬಿಕೆ ಸ್ಥಾಪಿಸಬೇಕಾದರೆ, ಪಾರದರ್ಶಕತೆಯೇ ಪ್ರಮುಖ ಅಂಶ. ಹೊಣೆಗಾರಿಕೆಯೂ ಅಷ್ಟೇ ಪ್ರಮುಖ. ಆದರೆ, ಕೆಲವು ರಾಷ್ಟ್ರಗಳು ಈ ತಂತ್ರಜ್ಞಾನವನ್ನು ಶಸ್ತ್ರಾಸ್ತ್ರ ಕಾರಣಗಳಿಗೆ ಬಳಸುವ ಉದ್ದೇಶಗಳಿಂದ ನಾವು ಇಡೀ ವಿಶ್ವವನ್ನು ಸಂರಕ್ಷಿಸಬೇಕು.
ಸ್ನೇಹಿತರೇ,
ನಾವಿಲ್ಲಿ ಎಐ ತಂತ್ರಜ್ಞಾನ ಕುರಿತು ಚರ್ಚಿಸುತ್ತಿದ್ದೇವೆ. ಜತೆಗೆ, ಮಾನವ ಸೃಜನಶೀಲತೆ ಮತ್ತು ಭಾವನೆಗಳು ನಮ್ಮ ಅತಿದೊಡ್ಡ ಬಲವಾಗಿ ಮುಂದುವರೆಯುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವು ಯಂತ್ರಗಳಿಗಿಂತ ನಮ್ಮ ಅನನ್ಯ ಪ್ರಯೋಜನಗಳಾಗಿವೆ. ನಮ್ಮ ಬುದ್ಧಿಶಕ್ತಿ ಮತ್ತು ಅನುಭೂತಿಯನ್ನು ಬಳಸದಿದ್ದರೆ ಚುರುಕಾದ ಎಐ ತಂತ್ರಜ್ಞಾನ ಒಂದರಿಂದಲೇ ಮನುಕುಲದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ ಇಲ್ಲ. ಹಾಗಾಗಿ, ಮಾನವ ಬುದ್ಧಿಶಕ್ತಿಯನ್ನು ಉಳಿಸುವ ಬಗ್ಗೆ ನಾವಿಂದು ಆಲೋಚಿಸಬೇಕಿದೆ. ಮಾನವ ಬುದ್ಧಿಶಕ್ತಿಯು ಎಐ ತಂತ್ರಜ್ಞಾನಕ್ಕಿಂತ ಕೆಲವು ಹೆಜ್ಜೆ ಮುಂದಿದೆ ಎಂಬುದನ್ನು ನಾವು ಮನಗಂಡು, ಎಚ್ಚರಿಕೆ ವಹಿಸುವ ಜತೆಗೆ, ಖಾತ್ರಿಪಡಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮಾನವನ ಸ್ವಂತ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಎಐ ತಂತ್ರಜ್ಞಾನ ಹೇಗೆ ಸಹಾಯಕವಾಗುತ್ತದೆ ಎಂಬ ಬಗ್ಗೆ ನಾವು ಆಲೋಚಿಸಬೇಕಿದೆ.
ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ – ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಪ್ರತಿ ವ್ಯಕ್ತಿಯ ಅನನ್ಯ ಸಾಮರ್ಥ್ಯವನ್ನು ತೆರೆಯಲಿದೆ. ಸಮಾಜಕ್ಕೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಪ್ರತಿ ವ್ಯಕ್ತಿಯನ್ನು ಸಬಲೀಕರಿಸುತ್ತದೆ.
ಸ್ನೇಹಿತರೇ,
ಈ ಸಮಾವೇಶದಲ್ಲಿ ವಿಶ್ವದ ಮುಂಚೂಣಿ ಪಾಲುದಾರರಿಗೆ ನಾವು ಜಾಗತಿಕ ವೇದಿಕೆ ಕಲ್ಪಿಸಿದ್ದೇವೆ. ನಾವಿಲ್ಲಿ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳೋಣ. ಪರಿಕಲ್ಪನೆಗಳನ್ನು ಹಂಚಿಕೊಂಡು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಾಮಾನ್ಯ ಸನ್ನದ್ದು (ಅಭ್ಯಾಸ ಕ್ರಮ) ರೂಪಿಸೋಣ. ನಾವೆಲ್ಲಾ ಪಾಲುದಾರರಂತೆ ಜತೆಗೂಡಿ ಕೆಲಸ ಮಾಡುವುದು ನಿರ್ಣಾಯಕವಾಗಿದೆ. ಈ ಜಾಗತಿಕ ಸಮಾವೇಶದಲ್ಲಿ ಒಟ್ಟಾಗಿ ಪಾಲ್ಗೊಡಿರುವ ನಿಮಗೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಈ ಜಾಗತಿಕ ಸಮಾವೇಶಕ್ಕೆ ಎಲ್ಲ ರೀತಿಯ ಯಶಸ್ಸು ಸಿಗಲಿ ಎಂದು ನಾನು ಹಾರೈಸುತ್ತೇನೆ. ಮುಂದಿನ ನಾಲ್ಕು ದಿನಗಳ ಕಾಲ ನಡೆಯುವ ಚರ್ಚೆ ಮತ್ತು ವಿಚಾರ ಮಂಥನಗಳು `ಜವಾಬ್ದಾರಿಯುತ ಎಐ ತಂತ್ರಜ್ಞಾನ’ ಅಳವಡಿಕೆಗೆ ಕ್ರಿಯಾ ಮಾರ್ಗಸೂಚಿ ರೂಪಿಸಲಿದೆ ಎಂಬ ಆಶಾವಾದ ನನ್ನದಾಗಿದೆ. ಈ ಕ್ರಿಯಾ ಮಾರ್ಗಸೂಚಿಯು ವಿಶ್ವದ ಜನರ ಜೀವನ ಮತ್ತು ಜೀವನೋಪಾಯಗಳನ್ನು ಪರಿವರ್ತಿಸಲು ನಿಜಕ್ಕೂ ಸಹಾಯಕವಾಗಲಿದೆ ಎಂದು ನಂಬಿದ್ದೇನೆ.
ನಿಮಗೆಲ್ಲರಿಗೂ ನನ್ನ ಶುಭ ಹಾರೈಕೆಗಳು.
ಧನ್ಯವಾದಗಳು!