ನಮಸ್ಕಾರ,

ನಮ್ಮ ದೇಶದ ಆಟಿಕೆ ಉದ್ಯಮದಲ್ಲಿ ಅಪಾರ ಸಾಮರ್ಥ್ಯ ಅಡಗಿದೆ ಎಂಬುದು ನಾನಿಲ್ಲಿ ಮಾತನಾಡುವಾಗ ಗೋಚರವಾಗುತ್ತಿದೆ. ಈ ಉದ್ಯಮದ ಬಲ, ಸಾಮರ್ಥ್ಯ ಮತ್ತು ಗುರುತೇ ಆತ್ಮನಿರ್ಭರ್ ಭಾರತ ಆಂದೋಲನದ ಮಹತ್ವದ ಭಾಗವಾಗಿದೆ. ದೇಶದ ಚೊಚ್ಚಲ ಆಟಿಕೆ ಮೇಳದಲ್ಲಿ ನಾವೆಲ್ಲರೂ ಭಾಗಿಯಾಗಿರುವುದೇ ಆನಂದದ ವಿಷಯ. ಈ ಆಟಿಕೆ ಮೇಳಕ್ಕೆ ನನ್ನನ್ನು ಸೇರ್ಪಡೆ ಮಾಡಿದ ನನ್ನ ಸಂಪುಟ ಸಹೋದ್ಯೋಗಿಗಳು, ಆಟಿಕೆ ಉದ್ಯಮದ ಎಲ್ಲ ಪ್ರತಿನಿಧಿಗಳು, ನನ್ನ ಸಹೋದರ ಮತ್ತು ಸಹೋದರಿ ಕಸುಬುದಾರರು, ಕಲಾವಿದರು, ಪೋಷಕರು ಮತ್ತು ನನ್ನ ನೆಚ್ಚಿನ ಮಕ್ಕಳೆ!

ಆಟಿಕೆ ಮೇಳದ ಉದ್ಘಾಟನಾ ಸಮಾರಂಭವು ಕೇವಲ ವ್ಯವಹಾರ ಻ಅಥವಾ ಆರ್ಥಿಕ ಕಾರ್ಯಕ್ರಮವಲ್ಲ. ದೇಶದ ಶತಮಾನಗಳಷ್ಟು ಹಳೆಯದಾದ ಕ್ರೀಡೆ ಮತ್ತು ನಲಿದಾಟ ಸಂಸ್ಕೃತಿಯ ಸಂಪರ್ಕವನ್ನು ಬಲಪಡಿಸುವ ಕೊಂಡಿಯಾಗಿದೆ. 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 1 ಸಾವಿರಕ್ಕಿಂತ ಹೆಚ್ಚಿನ ಪ್ರದರ್ಶಕರು, ವೃತ್ತಿಪರರು, ಶಾಲೆಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ ಎಂದು ನಾನು ಕೇಳಿ ತಿಳಿದುಕೊಂಡಿದ್ದೇನೆ. ಆಟಿಕೆಗಳ ವಿನ್ಯಾಸ, ಅನುಶೋಧನೆ, ತಂತ್ರಜ್ಞಾನ, ಮಾರುಕಟ್ಟೆ, ಪ್ಯಾಕೇಜಿಂಗ್ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಲು ಮತ್ತು ನಿಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಭಾರತದ ಆನ್ ಲೈನ್ ಗೇಮಿಂಗ್ ಉದ್ಯಮ ಮತ್ತು ವಿದ್ಯುನ್ಮಾನ ಕ್ರೀಡಾ ಕೈಗಾರಿಕೆಯಲ್ಲಿರುವ ವಿಪುಲ ಅವಕಾಶಗಳನ್ನು ತಿಳಿದುಕೊಳ್ಳಲು ಆಟಿಕೆ ಮೇಳ-2021 ಸೂಕ್ತ ವೇದಿಕೆಯಾಗಿದೆ. ಮಕ್ಕಳಿಗೆ ಇಲ್ಲಿ ಸಾಕಷ್ಟು ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಎಲ್ಲ ಪಾಲುದಾರರು ಮತ್ತು ಮಕ್ಕಳನ್ನು ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ.

ಭಾರತದ ಆಟಿಕೆಗಳ ಸೃಜನಾತ್ಮಕ ಸಂಬಂಧವು ಈ ದೇಶದ ಇತಿಹಾಸದಷ್ಟೆ ಪುರಾತನವಾಗಿದೆ. ಪುರಾತನ ಸಿಂಧು ಕಣಿವೆ ನಾಗರಿಕತೆ, ಮೊಹೆಂಜೊ-ದಾರೊ ಮತ್ತು ಹರಪ್ಪ ನಾಗರಿಕತೆ ಕಾಲದ ಆಟಿಕೆಗಳು ಮತ್ತು ಬೊಂಬೆಗಳ ಬಗ್ಗೆ ಇಡೀ ವಿಶ್ವವೇ ಸಂಶೋಧನೆ ನಡೆಸಿವೆ. ಪುರಾತನ ಕಾಲದಲ್ಲಿ ವಿಶ್ವದ ಪ್ರವಾಸಿಗರು ಭಾರತಕ್ಕೆ ಬಂದಾಗ ಅವರು ಇಲ್ಲಿ ಕ್ರೀಡೆಗಳನ್ನು ಕಲಿತರು. ಜೊತೆಯಲ್ಲೇ ಅವರ ದೇಶಕ್ಕೆ ಅವುಗಳನ್ನು ಕೊಂಡೊಯ್ದರು. ಚೆಸ್ ಇದೀಗ ವಿಶ್ವದ ಜನಪ್ರಿಯ ಕ್ರೀಡೆಯಾಗಿ ಹೊರಹೊಮ್ಮಿದೆ. ಆದರೆ ಅದು ಉದಯಿಸಿದ್ದೇ ಭಾರತದಲ್ಲಿ. ಚದುರಂಗ ಹೆಸರಿನ ಕ್ರೀಡೆಯೇ ಈಗ ಚೆಸ್ ಆಗಿ ಪರಿವರ್ತನೆಯಾಗಿದೆ. ಆಧುನಿಕ ಲೂಡೊವನ್ನು ಪಾಚಿಸಿ ಆಟವಾಗಿ ಆಡಲಾಗುತ್ತಿತ್ತು. ಬಲರಾಮನ ಬಳಿ ಹಲವಾರು ಆಟಿಕೆಗಳಿದ್ದವು ಎಂದು ನಮ್ಮ ಪುರಾಣಗಳು ಹೇಳುತ್ತವೆ. ಗೋಕುಲದಲ್ಲಿ ಗೋಪಾಲಕೃಷ್ಣನು ಸ್ನೇಹಿತರೊಂದಿಗೆ ಮನೆಯ ಹೊರಗೆ ಆಡಲು ಚೆಂಡು ಬಳಸುತ್ತಿದ್ದ. ಪುರಾತನ ದೇವಾಲಯಗಳಲ್ಲೂ ನಮ್ಮ ಪುರಾತನ ಕ್ರೀಡೆಗಳು, ಆಟಿಕೆಗಳು ಮತ್ತು ಕರಕುಶಲಗಳು ಮೈದಳೆದಿವೆ. ತಮಿಳುನಾಡಿನ ಚೆನ್ನೈ ಸುತ್ತಮುತ್ತಲಿರುವ ದೇವಾಲಯಗಳನ್ನು ನೋಡಿದರೆ ಅಲ್ಲಿನ ಗೋಡೆಗಳ ಮೇಲೆ ವೈವಿಧ್ಯಮಯ ಕ್ರೀಡೆಗಳು ಮತ್ತು ಆಟಿಕೆಗಳ ಅತ್ಯಾಕರ್ಷಕ ಚಿತ್ರಗಳು ನಮ್ಮ ಕಣ್ಣು ಕೋರೈಸುತ್ತವೆ.

ಸ್ನೇಹಿತರೆ,

ಯಾವುದೇ ಸಂಸ್ಕೃತಿಯಲ್ಲಿ ಕ್ರೀಡೆಗಳು ಮತ್ತು ಆಟಿಕೆಗಳು ನಂಬಿಕೆಯ ಭಾಗವಾದಾಗ ಆ ಸಮಾಜವು ಕ್ರೀಡಾ ವಿಜ್ಞಾನವನ್ನು ದೀರ್ಘವಾಗಿ ಅರ್ಥಮಾಡಿಕೊಳ್ಳುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಅವರ ವಿಶ್ಲೇಷಣಾತ್ಮಕ ಮನಃಸ್ಥಿತಿ ಬೆಳೆಸಲು ಆಟಿಕೆಗಳು ಅಮೋಘ ಕೊಡುಗೆ ನೀಡಿವೆ. ಇಂದಿಗೂ ಸಹ ಭಾರತದ ಆಟಿಕೆಗಳು ಆಧುನಿಕ ಫ್ಯಾನ್ಸಿ ಆಟಿಕೆಗಳಿಗೆ ಹೋಲಿಸಿದರೆ ಸರಳವಾಗಿವೆ ಮತ್ತು ಅಗ್ಗದ ಬೆಲೆಗೆ ಸಿಗುತ್ತಿವೆ. ಅವು ಸಾಮಾಜಿಕ ಮತ್ತು ಭೌಗೋಳಿಕ ಪರಿಸರದ ಜೊತೆ ಸಂಬಂಧ ಹೊಂದಿವೆ.

ಸ್ನೇಹಿತರೆ,

ಮರುಬಳಕೆ ಮತ್ತು ಪುನರ್ ಉಪಯೋಗ ಭಾರತೀಯ ಜೀವನ ಶೈಲಿಯ ಭಾಗವಾಗಿದೆ. ಇದು ನಮ್ಮ ಆಟಿಕೆಗಳಲ್ಲೂ ಪ್ರತಿಫಲಿಸುತ್ತಿದೆ. ಬಹುತೇಕ ಆಟಿಕೆಗಳು ಸ್ವಾಭಾವಿಕ ಮತ್ತು ಪರಿಸರ ಸ್ನೇಹಿಯಾಗಿರುತ್ತವೆ. ಅವುಗಳನ್ನು ನೈಸರ್ಗಿಕ ಬಣ್ಣಗಳಿಂದ ಚೆಂದ ಮಾಡಲಾಗಿರುತ್ತದೆ. ಹಾಗಾಗಿ ಅವು ಸದಾಕಾಲವೂ ಸುರಕ್ಷಿತ. ವಾರಾಣಸಿಯ ಮರದ ಗೊಂಬೆಗಳು ಮತ್ತು ಆಟಿಕೆಗಳು, ರಾಜಸ್ತಾನದ ಮಣ್ಣಿನ ಬೊಂಬೆಗಳು, ಆಂಧ್ರಪ್ರದೇಶದ ಬೊಮ್ಮಲು - ಬೊಂಬೆಗಳು, ಅಸ್ಸಾಂನ ಟೆರ್ರಾಕೋಟ ಆಟಿಕೆಗಳು ವೈವಿಧ್ಯಮಯ ಸಂಸ್ಕೃತಿ, ಕಲೆ ಮತ್ತು ಆಚರಣೆಯನ್ನು ಸಾರುತ್ತಿವೆ. ಈ ಎಲ್ಲ ಬೊಂಬೆಗಳು ಪರಿಸರಸ್ನೇಹಿಯಾಗಿ ಸೃಜನಾತ್ಮಕವಾಗಿವೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯನ್ನು ಯುವ ಮನಸ್ಸುಗಳೊಂದಿಗೆ ಬೆಸೆಯಲು ಈ ಬೊಂಬೆಗಳು ಮಹತ್ವದ ಕೊಂಡಿಗಳಾಗಿವೆ. ಆದ್ದರಿಂದ ನಾನು ಬೊಂಬೆ ತಯಾರಕರಿಗೆ ಇಲ್ಲಿ ಮನವಿ ಮಾಡುವುದೇನೆಂದರೆ, ನೀವೆಲ್ಲ ಉತ್ತಮ ಆಟಿಕೆಗಳನ್ನು ಪರಿಸರಶಾಸ್ತ್ರ ಮತ್ತು ಮನಃಶಾಸ್ತ್ರಕ್ಕೆ ಪೂರಕವಾಗಿ ತಯಾರಿಸಿ. ಆಟಿಕೆಗಳಲ್ಲಿ ಪ್ಲಾಸ್ಟಿಕ್ ಅನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಲು ನಾವೇಕೆ ಪ್ರಯತ್ನಿಸಬಾರದು. ಮರುಬಳಕೆಗೆ ಅವಕಾಶವಿರುವ ವಸ್ತುಗಳನ್ನು ಉಪಯೋಗಿಸಿ. ಭಾರತದ ದೃಷ್ಟಿಕೋನಗಳು ಮತ್ತು ಪರಿಕಲ್ಪನೆಗಳ ಬಗ್ಗೆ ಇಡೀ ವಿಶ್ವಾದ್ಯಂತ ಮಾತುಕತೆಗಳು ನಡೆಯುತ್ತಿವೆ. ಭಾರತ ಅನನ್ಯ ದೃಷ್ಟಿಕೋನವನ್ನು ವಿಶ್ವಕ್ಕೆ ನೀಡುವ ಸಾಮರ್ಥ್ಯ ಹೊಂದಿದೆ. ನಮ್ಮ ಸಂಪ್ರದಾಯ, ನಮ್ಮ ಉಡುಪು ಮತ್ತು ಆಹಾರ ಅಭ್ಯಾಸಗಳಲ್ಲಿ ವೈಶಿಷ್ಟ್ಯಗಳಿವೆ. ಪೂರ್ವಿಕರ ಬದುಕು, ಹಾಡು-ಪಾಡುಗಳನ್ನು ಮುಂದಿನ ಪೀಳಿಗೆಗೆ ರವಾನಿಸಲು ಆಟಿಕೆಗಳನ್ನು ಉಳಿಸುತ್ತಾ ಬಂದಿದ್ದೇವೆ. ಹಬ್ಬದ ಋತುವಿನಲ್ಲಿ ಕುಟುಂಬಗಳು ಬೊಂಬೆಗಳನ್ನು ಕೂರಿಸಿ ವೈವಿಧ್ಯಮಯ ಆಚರಣೆಗಳನ್ನು ವಿನಿಮಯ ಮಾಡಿಕೊಳ್ಳುವ ಆಚರಣೆ ಸಹ ನಮ್ಮ ದೇಶದಲ್ಲಿದೆ. ಇದರಿಂದ ಭಾರತೀಯತೆಯ ಸ್ಫೂರ್ತಿ ಮತ್ತು ಚೈತನ್ಯ ನಮ್ಮ ಮಕ್ಕಳಲ್ಲಿ ಮತ್ತಷ್ಟು ಬಲಿಷ್ಠವಾಗಿ ಅಭಿವೃದ್ಧಿಯಾಗಲಿದೆ. ಇದು ಈ ಮಣ್ಣಿನ ವಾಸನೆಯೂ ಆಗಿದೆ.

ಪ್ರೀತಿಯ ಮಕ್ಕಳೆ ಮತ್ತು ಸ್ನೇಹಿತರೆ,

ಗುರುದೇವ್ ಠಾಗೋರ್ ಅವರು ತಮ್ಮ ಒಂದು ಕವನದಲ್ಲಿ ಬೊಂಬೆಗಳು ಮತ್ತು ಬಣ್ಣಗಳ ಕುರಿತು ಸಾಲುಗಳನ್ನು ಬರೆದಿದ್ದಾರೆ. ಮಕ್ಕಳಿಗೆ ಆಟಿಕೆಗಳಿಂದ ಅಮಿತ ಸಂತೋಷ ಉಂಟಾಗುತ್ತದೆ ಎಂಬುದನ್ನು ಅವರು ಬಹಳ ಅರ್ಥಪೂರ್ಣವಾಗಿ ಕವನ ರಚಿಸಿದ್ದಾರೆ. ಮಕ್ಕಳು ಇಂದಿಗೂ ಸಹ ಬೊಂಬೆಗಳು ಸೇರಿದಂತೆ ನಾನಾ ಆಟಿಕೆಗಳನ್ನು ನೋಡಿಕೊಂಡೇ ಜೀವನ ಅನುಭವಿಸುತ್ತವೆ, ಬದುಕು ರೂಪಿಸಿಕೊಳ್ಳುತ್ತವೆ. ನಮಗೆಲ್ಲರಿಗೂ ಬಾಲ್ಯದ ಅಪಾರ ನೆನಪುಗಳಿವೆ. ಕಾಗದದಲ್ಲಿ ವಿಮಾನಗಳನ್ನು ತಯಾರಿಸುತ್ತಿದ್ದ ಗಾಳಿಪಟಗಳನ್ನು ಹಾರಿಸುತ್ತಿದ್ದ ಫ್ಯಾನ್ ಗಳನ್ನು ತಯಾರಿಸುತ್ತಿದ್ದ ನೆನಪುಗಳು ಮಾಸಲು ಸಾಧ್ಯವೇ ಇಲ್ಲ. ಭಾರತದ ಕ್ರೀಡೆ ಮತ್ತು ಆಟಿಕೆಗಳಿಗೆ ಜ್ಞಾನ, ವಿಜ್ಞಾನ, ಮನರಂಜನೆ ಮತ್ತು ಮನಃಶಾಸ್ತ್ರದ ಹಿನ್ನೆಲೆ ಇದೆ. ಉದಾಹರಣೆಗೆ ಕವಣೆ ಆಟದಿಂದ ಮಕ್ಕಳು ಸಂಭಾವ್ಯ ಮತ್ತು ಆಂತರಿಕ ಶಕ್ತಿಯ ಮೂಲತತ್ವಗಳನ್ನು ಕಲಿಯುತ್ತವೆ. ಫಜಲ್ ಬೊಂಬೆಗಳು ಕಾರ್ಯತಂತ್ರ ಆಲೋಚನೆಗಳನ್ನು ಬೆಳೆಸುತ್ತದೆ. ಮತ್ತು ಸಮಸ್ಯೆಗಳ ಪರಿಹಾರ ಮಾಡುವ ಚಿಂತನೆಯನ್ನು ತುಂಬುತ್ತದೆ. ಕೇವಲ ಪುಸ್ತಕ ಜ್ಞಾನದಿಂದ ಮಕ್ಕಳ ಸರ್ವಾಂಗೀಣ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಾಧ್ಯವಿಲ್ಲ.

ಸ್ನೇಹಿತರೆ,

ಅಡುಗೆ ಮನೆಯಲ್ಲಿರುವ ಪಾತ್ರೆ ವಸ್ತುಗಳನ್ನು ಮಕ್ಕಳ ಕೈಗೆ ನೀಡಿ. ಅವು ಮನೆ-ಮಂದಿಗೆಲ್ಲ ಊಟ-ಉಪಚಾರ ಮಾಡುವಷ್ಟು ಸಶಕ್ತವಾಗಿರುತ್ತವೆ. ದಿನನಿತ್ಯದ ಜೀವನದಲ್ಲಿ ಪೋಷಕರ ಹಾವ-ಭಾವಗಳನ್ನು ಸೂಕ್ಷ್ಮವಾಗಿ ಗಮನಿಸುವ ಮಕ್ಕಳು ಪ್ರತಿ ಪಾತ್ರೆ-ಪಗಡೆಗಳ ಬಳಕೆಯ ಬಗ್ಗೆ ಅರಿವು ಹೊಂದಿರುತ್ತವೆ. ಹೀಗೆ ಪ್ರತಿಯೊಂದು ವಸ್ತುವೂ ಪ್ರತಿ ಮಗುವಿನ ಉಜ್ವಲ ಭವಿಷ್ಯ ಬೆಳಗಲು ಕಲಿಕಾ ಸಾಮಗ್ರಿಗಳಾಗಿರುತ್ತವೆ. ವಿಮಾನಗಳು, ರಾಕೆಟ್ ಗಳು, ಉಪಗ್ರಹಗಳ ಆಟಿಕೆಗಳು ಮಕ್ಕಳ ಉತ್ಸಾಹ, ಕುತೂಹಲ ಮತ್ತು ಸೃಜನಶೀಲತೆಯನ್ನು ಬೃಹದಾಕಾರವಾಗಿ ಬೆಳೆಸುವ ಮೂಲಗಳಾಗಿರುತ್ತವೆ. ಹಾಗಾಗಿ ನಾನು ಈ ಮೂಲಕ ಎಲ್ಲ ಪೋಷಕರಿಗೆ ಮನವಿ ಮಾಡುವುದೇನೆಂದರೆ, ನಿಮ್ಮ ಮಕ್ಕಳಿಗೆ ಸೃಜನಾತ್ಮಕ ಆಟಿಕೆಗಳನ್ನು ಪರಿಚಯ ಮಾಡಿಸಿ.ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅವು ಖಂಡಿತ ಪ್ರೇರೇಪಣೆ ನೀಡುತ್ತವೆ. ಗೊಂಬೆಗಳ ವೈಜ್ಞಾನಿಕ ಅಂಶಗಳನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ಇದು ಮಕ್ಕಳ ಕಲಿಕೆಗೆ ಸಂಪೂರ್ಣ ಸಹಕಾರಿ. ಶಿಕ್ಷಕರೂ ಸಹ ಶಾಲೆಗಳಲ್ಲಿ ಮಕ್ಕಳಿಗೆ ಆಟಿಕೆಗಳನ್ನು ಒದಗಿಸಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಆಟಿಕೆಗಳ ಪರಿಣಾಮಕಾರಿ ಬಳಕೆಗೆ ಒತ್ತು ನೀಡಲಾಗಿದೆ.

ಸ್ನೇಹಿತರೆ,

ಆಟಿಕೆ ಮೇಳದ ಈ ಸುಸಂದರ್ಭದಲ್ಲಿ ನಾವೆಲ್ಲರೂ ಆಧುನಿಕ ಅವತಾರದಲ್ಲಿ ಈ ಎಲ್ಲ ಸಾಧ್ಯತೆಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಹೊರಬೇಕಾಗಿದೆ. ಮೇಡ್ ಇನ್ ಇಂಡಿಯಾಕ್ಕೆ ಇಂದು ಬೇಡಿಕೆ ಇದೆ ಎಂದಾದರೆ, ಹ್ಯಾಂಡ್ ಮೇಡ್ ಇನ್ ಇಂಡಿಯಾಕ್ಕೂ ಸಹ ಬೇಡಿಕೆ ಹೆಚ್ಚಾಗುತ್ತದೆ. ಜನರು ಇದೀಗ ಬೊಂಬೆಗಳನ್ನು ಕೇವಲ ಉತ್ಪನ್ನವಾಗಿ ನೋಡದೆ, ಆ ಬೊಂಬೆಯ ಅನುಭವ ಮತ್ತು ಹಿನ್ನೆಲೆಯನ್ನು ಸಂಪರ್ಕಿಸುವ ಕಡೆಗೆ ಗಮನ ನೀಡುತ್ತಿದ್ದಾರೆ. ಆದ್ದರಿಂದ ನಾವುಗಳು ಹ್ಯಾಂಡ್ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಉತ್ತೇಜಿಸಬೇಕು. ನಾವು ಬೊಂಬೆಗಳನ್ನು ತಯಾರಿಸುವಾಗ ಅದರಲ್ಲಿ ಮಕ್ಕಳ ಮನಸ್ಸುಗಳನ್ನು ತುಂಬಬೇಕು. ಬಾಲ್ಯದ ಅಪೂರ್ವ ಆನಂದ ಮತ್ತು ಕನಸುಗಳನ್ನು ಆ ಬೊಂಬೆಯಲ್ಲಿ ಸೇರಿಸಬೇಕು. ಇದರಿಂದ ಹೊಮ್ಮುವ ಉಲ್ಲಾಸ ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಲಿದೆ.

ನಮ್ಮ ದೇಶ ಈ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡಿದೆ ಎಂದು ನಾನು ಸಂತಸ ಪಡುತ್ತೇನೆ. ಆತ್ಮನಿರ್ಭರ್ ಭಾರತ ನಿರ್ಮಾಣದ ಅಭಿಯಾನಕ್ಕೆ ನಮ್ಮೆಲ್ಲ ಪ್ರಯತ್ನಗಳು ಬೆಂಬಲ ನೀಡುತ್ತವೆ. ಮತ್ತು ಬಾಲ್ಯದ ಹೊಸ ಜಗತ್ತು ಸೃಷ್ಟಿಯಾಗುತ್ತದೆ ಎಂದು ನಾನು ನಂಬಿದ್ದೇನೆ. ಈ ವಿಶ್ವಾಸ ಮತ್ತು ನಂಬಿಕೆಯೊಂದಿಗೆ ನಿಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೊಸ ಕಾರ್ಯವಿಧಾನ, ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಭಾರತದ ಆಟಿಕೆ ಉತ್ಪನ್ನಗಳನ್ನು ವಿಶ್ವಕ್ಕೆ ಪರಿಚಯಿಸುವ ನಿರಂತರ ಪ್ರಯತ್ನಗಳು ಸಾಗುತ್ತವೆ ಎಂದು ನಂಬಿದ್ದೇನೆ. ಈ ನಿಟ್ಟಿನಲ್ಲಿ ಈ ಮೇಳವು ದಿಟ್ಟ ಹೆಜ್ಜೆ ಮುಂದಿಟ್ಟಿದೆ ಎಂದು ಭಾವಿಸುತ್ತಾ ನಿಮ್ಮೆಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"