ಸಚಿವ ಸಂಪುಟದ ನನ್ನ ಸಹೋದ್ಯೋಗಿ ಶ್ರೀ ಥಾವರ್ ಚಂದ್ ಗಹ್ಲೋಲ್ ಅವರೆ,
ಶ್ರೀ ವಿಜಯ್ ಸಾಂಪ್ಲ ಅವರೆ,
ಶ್ರೀ ರಾಮದಾಸ್ ಅಠಾವಲೆ ಅವರೆ,
ಶ್ರೀ ಕೃಷ್ಣಾ ಪಾಲ್ ಅವರೆ,
ಶ್ರೀ ವಿಜಯ್ ಗೋಯಲ್ ಅವರೆ,
ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳ ಸಚಿವರಾದ ಡಾ.ಲತಾ ಕೃಷ್ಣ ರಾವ್ ಅವರೆ ಮತ್ತು ಉಪಸ್ಥಿತರಿರುವ ಎಲ್ಲ ಪೂಜ್ಯ ಮಹಾನುಭಾವರೆ ಮತ್ತು ಸೋದರ ಸೋದರಿಯರೆ,
ಡಾಕ್ಟರ್ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್(DIAC) ಅನ್ನು ದೇಶಕ್ಕೆ ಸಮರ್ಪಿಸುವ ಅವಕಾಶ ದೊರೆತಿದ್ದು ನನ್ನ ಸೌಭಾಗ್ಯವಾಗಿದೆ.
ಈ ಅಂತಾರಾಷ್ಟ್ರೀಯ ಕೇಂದ್ರದ ಶಂಕುಸ್ಥಾಪನೆಯ ಅವಕಾಶ ಸಹ 2015ರ ಏಪ್ರಿಲ್ ನಲ್ಲಿ ನನಗೆ ದೊರೆತಿದ್ದುದು ನನ್ನ ಇಂದಿನ ಎರಡು ಪಟ್ಟು ಸಂತೋಷಕ್ಕೆ ಕಾರಣವಾಗಿದೆ. ಬಹಳ ಕಡಿಮೆ ಅವಧಿಯಲ್ಲಿ ಅದೂ ನಿಗದಿತ ಸಮಯಕ್ಕಿಂತ ಮೊದಲೇ ಈ ಭವ್ಯ ಅಂತಾರಾಷ್ಟ್ರೀಯ ಕೇಂದ್ರವು ನಿರ್ಮಾಣವಾಗಿದೆ. ಈ ಕೇಂದ್ರದ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ಪ್ರತಿಯೊಂದು ವಿಭಾಗವನ್ನು ನಾನು ಬಹಳ ಅಭಿನಂದಿಸುತ್ತೇನೆ.
ಈ ಕೇಂದ್ರವು ಬಾಬಾ ಸಾಹೇಬ್ ಅವರ ಬಗೆಗಿನ ಶಿಕ್ಷಣವನ್ನು, ಅವರ ವಿಚಾರಧಾರೆಗಳನ್ನು ಪ್ರಸಾರ ಮಾಡಲು ಒಂದು ದೊಡ್ಡ ಪ್ರೇರಣಾ ಸ್ಥಳದ ಪಾತ್ರವನ್ನು ನಿಭಾಯಿಸುತ್ತದೆ ಎಂಬ ವಿಶ್ವಾಸ ನನಗಿದೆ. ಡಾಕ್ಟರ್ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿಯೇ “ಡಾಕ್ಟರ್ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಸೋಷಿಯೊ-ಎಕನಾಮಿಕ್ ಟ್ರಾನ್ಸ್ ಫಾರ್ಮೇಷನ್” ಅನ್ನು ಸಹ ನಿರ್ಮಿಸಲಾಗಿದೆ. ಈ ಕೇಂದ್ರಗಳು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳ ಮೇಲೆ ಸಂಶೋಧನೆ ನಡೆಸುವ ಒಂದು ಪ್ರಮುಖ ಕೇಂದ್ರವಾಗಲಿದೆ.
‘ಎಲ್ಲರ ಜೊತೆ ಎಲ್ಲರ ವಿಕಾಸ’, ಇದನ್ನು ಕೆಲವರು ಆಂತರಿಕ ಪ್ರಗತಿ(inclusive growth) ಎನ್ನುತ್ತಾರೆ. ಈ ಮಂತ್ರದೊಂದಿಗೆ ಸಾಗುತ್ತಾ ಆರ್ಥಿಕ ಮತ್ತು ಸಾಮಾಜಿಕ ವಿಷಯಗಳತ್ತ ಹೇಗೆ ಗಮನ ಕೊಡುವುದು ಎಂಬುದನ್ನು ಈ ಕೇಂದ್ರದಲ್ಲಿ ಒಂದು Think Tankನಂತೆ ಸಹ ಚಿಂತನ ಮಂಥನಗಳನ್ನು ನಡೆಸಲಾಗುವುದು.
ಹೊಸ ಪೀಳಿಗೆಗೆ ಈ ಕೇಂದ್ರವು ಒಂದು ವರದಾನದಂತೆ ಆಗಿದೆ ಎಂದು ನನಗೆ ಅನ್ನಿಸುತ್ತಿದೆ. ಅವರು ಇಲ್ಲಿಗೆ ಬಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ನೋಡಬಹುದು, ಅರಿಯಬಹುದು.
ಜೊತೆಗಾರರೆ, ನಮ್ಮ ದೇಶದಲ್ಲಿ ಕಾಲಕಾಲಕ್ಕೆ ಇಂತಹ ಮಹಾನ್ ಚೇತನಗಳು ಜನ್ಮ ತಳೆಯುತ್ತವೆ. ಅವರು ಕೇವಲ ಸಾಮಾಜಿಕ ಸುಧಾರಣೆಯನ್ನು ಮಾಡಿರುವುದಲ್ಲದೆ ಅವರ ವಿಚಾರಗಳು ದೇಶದ ಭವಿಷ್ಯವನ್ನು ರೂಪಿಸುತ್ತವೆ, ದೇಶದ ಯೋಚನಾಶಕ್ತಿಯನ್ನು ರೂಪಿಸುತ್ತವೆ. ಬಾಬಾ ಸಾಹೇಬ್ ಅವರು ಹೋದ ನಂತರ ಹಲವಾರು ವರ್ಷಗಳವರೆಗೆ ಅವರ ವಿಚಾರಗಳನ್ನು ಮರೆಮಾಚುವ ಪ್ರಯತ್ನಗಳು ನಡೆದವು, ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರವನ್ನು ಅಳಿಸುವ ಪ್ರಯತ್ನ ನಡೆಯಿತು. ಆದರೆ ಇಂತಹ ಜನರು ಬಾಬಾ ಸಾಹೇಬ್ ಅವರ ವಿಚಾರಗಳನ್ನು ಭಾರತೀಯ ಜನಮಾನಸದಿಂದ ಅಳಿಸಲಾರರು, ಇದು ಬಾಬಾ ಸಾಹೇಬ್ ಅವರ ಅದ್ಭುತ ಶಕ್ತಿಯಾಗಿತ್ತು.
ಯಾವ ಕುಟುಂಬಕ್ಕಾಗಿ ಇದೆಲ್ಲವನ್ನೂ ಮಾಡಲಾಯಿತೊ ಆ ಕುಟುಂಬಕ್ಕಿಂತ ಅಧಿಕ ಜನರು ಇಂದು ಬಾಬಾ ಸಾಹೇಬ್ ಅವರಿಂದ ಪ್ರಭಾವಕ್ಕೊಳಗಾಗಿದ್ದಾರೆ ಎಂದು ಹೇಳಿದರೆ ನನ್ನ ಈ ಮಾತು ತಪ್ಪಾಗಲಾರದು. ರಾಷ್ಟ್ರ ನಿರ್ಮಾಣದಲ್ಲಿ ಬಾಬಾ ಸಾಹೇಬ್ ಅವರು ವಹಿಸಿದ ಪಾತ್ರದಿಂದಾಗಿ ನಾವೆಲ್ಲರೂ ಅವರಿಗೆ ಋಣಿಯಾಗಿದ್ದೇವೆ. ಅವರ ವಿಚಾರಧಾರೆಗಳು ಹೆಚ್ಚು ಹೆಚ್ಚು ಜನರನ್ನು ತಲಪಬೇಕು ಎಂದು ನಮ್ಮ ಸರ್ಕಾರವು ಪ್ರಯತ್ನಿಸುತ್ತಿದೆ. ವಿಶೇಷವಾಗಿ ಯುವ ಪೀಳಿಗೆ ಅವರ ಬಗ್ಗೆ ತಿಳಿದುಕೊಳ್ಳಬೇಕು, ಅವರನ್ನು ಅಧ್ಯಯನ ಮಾಡಬೇಕು.
ಈ ಕಾರಣಕ್ಕಾಗಿ ಬಾಬಾ ಸಾಹೇಬ್ ಅವರ ಜೀವನಕ್ಕೆ ಸಂಬಂಧಿಸಿದ ಈ ಮಹತ್ವಪೂರ್ಣ ಸ್ಥಳವನ್ನು ತೀರ್ಥಸ್ಥಳದಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಾಬಾ ಸಾಹೇಬ್ ಅವರು ನಿಧನರಾದ ದೆಹಲಿಯ ಅಲೀಪುರದಲ್ಲಿ ಡಾಕ್ಟರ್ ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಇದೇ ರೀತಿ ಬಾಬಾ ಸಾಹೇಬ್ ಅವರು ಜನಿಸಿದ ಮಧ್ಯಪ್ರದೇಶದ ‘ಮಹೂ’ವಿನಲ್ಲಿ ಸಹ ಸ್ಮಾರಕ ನಿರ್ಮಾಣವಾಗುತ್ತಿದ್ದು ಅದನ್ನು ಸಹ ತೀರ್ಥಕ್ಷೇತ್ರ ಎಂಬಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಾಬಾ ಸಾಹೇಬ್ ಅವರು ವಾಸಿಸುತ್ತಿದ್ದ ಲಂಡನ್ ನಿವಾಸವನ್ನು ಮಹಾರಾಷ್ಟ್ರದ ಬಿಜೆಪಿ ಸರ್ಕಾರವು ಖರೀದಿಸಿ ಅದನ್ನು ಸಹ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದೇ ರೀತಿ ಮುಂಬೈನಲ್ಲಿ ಹಿಂದೂ ಮಿಲ್ ನ ಜಮೀನಿನಲ್ಲಿ ಅಂಬೇಡ್ಕರ್ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಈ ಪಂಚ ತೀರ್ಥಸ್ಥಳಗಳು ಒಂದು ರೀತಿಯಲ್ಲಿ ಬಾಬಾ ಸಾಹೇಬ್ ಅವರಿಗೆ ಇಂದಿನ ಪೀಳಿಗೆಯು ಸಲ್ಲಿಸುತ್ತಿರುವ ಶ್ರದ್ಧಾಂಜಲಿಯಾಗಿದೆ.
ಹಾಗೆಯೇ ಕಳೆದ ವರ್ಷ ಆರ್ಥಿಕ ಲೋಕದಲ್ಲಿ ಆರನೆಯ ತೀರ್ಥವನ್ನು ಸಹ ನಿರ್ಮಿಸಲಾಗಿದೆ. ಇದು ದೇಶಕ್ಕೆ ಡಿಜಿಟಲ್ ರೀತಿಯಲ್ಲಿ ಬೆಳಕು ನೀಡುತ್ತಿದೆ, ದೇಶವನ್ನು ಸಶಕ್ತಗೊಳಿಸುತ್ತಿದೆ. ಕಳೆದ ವರ್ಷ ಆರಂಭಿಸಿದ Bharat Interface for Money ಅಂದರೆ BHIM App ಬಾಬಾ ಸಾಹೇಬ್ ಅವರ ಆರ್ಥಿಕ ದೃಷ್ಟಿಕೋನಕ್ಕೆ ನಮ್ಮ ಸರ್ಕಾರವು ಸಲ್ಲಿಸಿದ ಶ್ರದ್ಧಾಂಜಲಿಯಾಗಿದೆ. BHIM App ಬಡವರು, ದಲಿತರು, ಹಿಂದುಳಿದವರು, ಶೋಷಿತರು, ವಂಚಿತರ ಪಾಲಿಗೆ ವರದಾನವಾಗಿ ಬಂದಿದೆ.
ಸೋದರ ಸೋದರಿಯರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ನಡೆಸಿದ ಸಂಘರ್ಷಗಳು ನಮಗೆ ಬಹಳ ಚೆನ್ನಾಗಿ ಪರಿಚಿತವಾಗಿವೆ. ಆದರೆ ಅವರ ಜೀವನವು ಸಂಘರ್ಷಗಳ ಜೊತೆಗೆ ಆಶಾಭಾವನೆಯ ಪ್ರೇರಣೆಯಿಂದಲೂ ತುಂಬಿದೆ. ಹತಾಶೆ, ನಿರಾಶೆಯಿಂದ ಬಹು ದೂರಕ್ಕೆ ಇಂತಹ ಒಂದು ಭಾರತದ ಕನಸನ್ನು ಅದು ತನ್ನ ಆಂತರಿಕ ಕೆಡುಕುಗಳನ್ನು ಕೊನೆಗಾಣಿಸಿ ಎಲ್ಲರನ್ನೂ ಜೊತೆಗೆ ಕರೆದೊಯ್ಯುವುದು. ಸಂವಿಧಾನ ಸಭೆಯ ಮೊದಲ ಮೀಟಿಂಗ್ ನಡೆದ ನಂತರ ಡಿಸೆಂಬರ್ 17,1946ರಂದು ನಡೆದ ಸಭೆಯ ಮೀಟಿಂಗ್ ನಲ್ಲಿ ಅವರು ಹೇಳಿದ್ದನ್ನು ಅವರದೇ ಮಾತುಗಳಲ್ಲಿ ಹೇಳುತ್ತಿದ್ದೇನೆ:
“ಈ ದೇಶದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪ್ರಗತಿಯು ಇಂದಲ್ಲ ನಾಳೆ ಆಗಿಯೇ ಆಗುತ್ತದೆ. ಸೂಕ್ತ ಸಮಯ ಮತ್ತು ಪರಿಸ್ಥಿತಿಗಳು ಒದಗಿ ಬಂದಾಗ ಈ ವಿಶಾಲ ದೇಶವು ಒಂದುಗೂಡದೆ ಇರುವುದಿಲ್ಲ. ವಿಶ್ವದ ಯಾವುದೇ ಶಕ್ತಿಯು ಅದರ ಏಕತೆಗೆ ಅಡ್ಡಿಯಾಗಲು ಸಾಧ್ಯವಿಲ್ಲ.
ಈ ದೇಶದಲ್ಲಿ ಇಷ್ಟೆಲ್ಲ ಧರ್ಮಗಳು ಮತ್ತು ಜಾತಿಗಳು ಇದ್ದ ನಂತರವೂ ಒಂದಲ್ಲಾ ಒಂದು ರೀತಿಯಲ್ಲಿ ನಾವೆಲ್ಲರೂ ಒಂದಾಗುತ್ತೇವೆ ಎಂಬುದರ ಕುರಿತು ನನ್ನ ಮನಸ್ಸಿನಲ್ಲಿ ಸ್ವಲ್ಪವೂ ಸಂಶಯ ಉಳಿದಿಲ್ಲ.
ದೇಶದ ಎಲ್ಲ ಘಟಕಗಳನ್ನು ತನ್ನೊಂದಿಗೆ ತೆಗೆದುಕೊಂಡು ಏಕತೆಯ ಮಾರ್ಗದಲ್ಲಿ ಮುಂದೆ ಸಾಗಲು ಶಕ್ತಿ ಇರುವಂತೆಯೇ, ಬುದ್ಧಿವಂತಿಕೆಯೂ ಇದೆ ಎಂದು ನಾವು ನಮ್ಮ ಆಚರಣೆಯಿಂದ ಹೇಳುತ್ತೇವೆ”.
ಈ ಎಲ್ಲ ಮಾತುಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರದು, ಅದೆಷ್ಟು ಆತ್ಮವಿಶ್ವಾಸವಿದೆ! ನಿರಾಶೆಯ ಸುಳಿವು ಲವಲೇಶವೂ ಇಲ್ಲ. ದೇಶದ ಸಾಮಾಜಿಕ ಕೆಡಕುಗಳನ್ನು ಜೀವನಪರ್ಯಂತ ಎದುರಿಸಿದ ವ್ಯಕ್ತಿ ದೇಶದ ಬಗ್ಗೆ ಅದೆಷ್ಟು ಆಶಾಭಾವನೆಯನ್ನು ಇಟ್ಟುಕೊಂಡಿದ್ದರು.
ಸೋದರ ಸೋದರಿಯರೆ, ಸಂವಿಧಾನದ ರಚನೆಯಿಂದ ಹಿಡಿದು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ಬಳಿಕವೂ ನಾವು ಬಾಬಾ ಸಾಹೇಬ್ ಅವರ ಆಶಾಭಾವನೆಗಳನ್ನು, ಆ ಕನಸುಗಳನ್ನು ಪೂರ್ತಿ ಮಾಡಲು ಆಗಿಲ್ಲ. ಕೆಲವರಿಗೆ ಕೆಲವೊಮ್ಮೆ ಹುಟ್ಟಿದ ಸಮಯದಲ್ಲಿ ದೊರಕಿದ ಜಾತಿಯು ಜನ್ಮ ನೀಡಿದ ಭೂಮಿಗಿಂತ ಹೆಚ್ಚು ಮಹತ್ವಪೂರ್ಣವಾಗುತ್ತದೆ. ಇಂದಿನ ಪೀಳಿಗೆಯವರು ಈ ಸಾಮಾಜಿಕ ಕೆಡುಕುಗಳನ್ನು ಕೊನೆಗೊಳಿಸುವ ಪಾತ್ರ ವಹಿಸಬಲ್ಲರು, ಅವರಲ್ಲಿ ಆ ಸಾಮರ್ಥ್ಯವಿದೆ. ವಿಶೇಷವಾಗಿ ಕಳೆದ 15-20 ವರ್ಷಗಳಲ್ಲಿ ಬಂದಿರುವ ಬದಲಾವಣೆಯನ್ನು ನಾನು ನೋಡುತ್ತಿದ್ದೇನೆ, ಇದರ ಸಂಪೂರ್ಣ ಶ್ರೇಯಸ್ಸನ್ನು ನಾನು ನವಪೀಳಿಗೆಗೆ ಕೊಡಲು ಬಯಸುತ್ತೇನೆ. ದೇಶವನ್ನು ಜಾತಿಯ ಹೆಸರಿನಲ್ಲಿ ಯಾರು ಒಡೆಯಲು ಪ್ರಯತ್ನಿಸುತ್ತಿದ್ದಾರೊ ಅವರು ದೇಶವನ್ನು ಜಾತಿಯ ಹೆಸರಿನಲ್ಲಿ ಬೇರೆ ಬೇರೆ ಮಾಡಿ ಯಾವ ನಡೆಯಿಂದ ಮುಂದಕ್ಕೆ ಸಾಗಬೇಕೊ ಆ ನಡೆಯಿಂದ ಮುಂದಕ್ಕೆ ಸಾಗಲು ತಮಗೆ ಆಗುವುದಿಲ್ಲ ಎಂದು ಸಹ ಅವರಿಗೆ ಚೆನ್ನಾಗಿ ಗೊತ್ತು. ಆದ್ದರಿಂದ ‘ನವಭಾರತ’ವನ್ನು ನಾನು ಜಾತಿಗಳ ಸಂಕೋಲೆಗಳಿಂದ ಮುಕ್ತಗೊಳಿಸುವ ಮಾತಾಡಿದರೆ ಅದರ ಹಿಂದೆ ಯುವ ಪೀಳಿಗೆಗಳ ಮೇಲೆ ನನಗಿರುವ ಅಪಾರ ಭರವಸೆ ಕಾರಣವಾಗಿದೆ. ಇಂದಿನ ಯುವಶಕ್ತಿ ಬಾಬಾ ಸಾಹೇಬ್ ಅವರ ಕನಸುಗಳನ್ನು ಸಾಕಾರಗೊಳಿಸುವ ಶಕ್ತಿ ಹೊಂದಿದೆ.
ಜೊತೆಗಾರರೆ, 1950ರಲ್ಲಿ ದೇಶವು ಪ್ರಜಾಪ್ರಭುತ್ವವನ್ನು ಸ್ವೀಕರಿಸಿದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದನ್ನು ಅವರ ಮಾತುಗಳಲ್ಲೇ ಮತ್ತೊಮ್ಮೆ ಹೇಳುತ್ತೇನೆ:
“ನಾವು ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದಷ್ಟೇ ತೃಪ್ತರಾಗಬಾರದು. ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿಯೂ ಮಾಡಬೇಕು. ರಾಜಕೀಯ ಪ್ರಜಾಪ್ರಭುತ್ವದ ಆಧಾರವು ಸಾಮಾಜಿಕ ಪ್ರಜಾಪ್ರಭುತ್ವವಾಗಿ ಎಲ್ಲಿಯವರೆಗೆ ಇರುವುದಿಲ್ಲವೋ ಅಲ್ಲಿಯವರೆಗೆ ಅದು ದೃಢವಾಗಿ ನಿಲ್ಲುವುದಿಲ್ಲ”.
ಈ ಸಾಮಾಜಿಕ ಪ್ರಜಾಪ್ರಭುತ್ವವು ಪ್ರತಿಯೊಬ್ಬ ಭಾರತೀಯನ ಸ್ವಾತಂತ್ರ್ಯ ಮತ್ತು ಸಮಾನತೆಯ ಮಂತ್ರವೇ ಆಗಿತ್ತು. ಸಮಾನತೆ ಎನ್ನುವುದು ಕೇವಲ ಹಕ್ಕು ಎನ್ನುವುದಷ್ಟೇ ಆಗಿರದೆ ಸಮಾನ ರೀತಿಯಲ್ಲಿ ಜೀವನ ನಡೆಸುವ ಸಮಾನತೆಯೂ ಹೌದು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಮ್ಮ ದೇಶದಲ್ಲಿ ಲಕ್ಷಾಂತರ, ಕೋಟ್ಯಂತರ ಜನರ ಜೀವನದಲ್ಲಿ ಈ ರೀತಿಯ ಸಮಾನತೆ ಕಾಣದ ಸ್ಥಿತಿಯಿದೆ. ಬಹಳಷ್ಟು ಮೂಲಭೂತ ವಿಷಯಗಳಾದ ವಿದ್ಯುತ್ ಸಂಪರ್ಕ, ನೀರು ಸಂಪರ್ಕ, ಒಂದು ಪುಟ್ಟ ಮನೆ, ಜೀವ ವಿಮೆ ಅವರ ಪಾಲಿಗೆ ಜೀವನದ ಬಹು ದೊಡ್ಡ ಸವಾಲುಗಳಾಗಿ ಉಳಿದಿದ್ದವು.
ನೀವು ನಮ್ಮ ಸರ್ಕಾರದ ಕಾರ್ಯ ವಿಧಾನವನ್ನು ನೋಡಿದರೆ, ನಮ್ಮ ಕಾರ್ಯ ಸಂಸ್ಕೃತಿಯನ್ನು ನೋಡಿದರೆ ಕಳೆದ ಮೂರು-ಮೂರುವರೆ ವರ್ಷಗಳಲ್ಲಿ ನಾವು ಬಾಬಾ ಸಾಹೇಬ್ ಅವರ ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿದ್ದೇವೆ. ನಮ್ಮ ಸರ್ಕಾರದ ಯೋಜನೆಗಳು ಸಾಮಾಜಿಕ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುತ್ತವೆ. ಜನಧನ್ ಯೋಜನೆಯನ್ನೇ ತೆಗೆದುಕೊಳ್ಳಿ. ಈ ಯೋಜನೆಯು ದೇಶದ ಕೋಟ್ಯಂತರ ಬಡವರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸೇರಿಸುವ ಹಕ್ಕು ನೀಡಿತು. ಬ್ಯಾಂಕ್ ಖಾತೆ ಹೊಂದಿದ್ದವರ, ಡೆಬಿಟ್ ಕಾರ್ಡ್ ಹೊಂದಿದ್ದವರ ಸಾಲಿಗೆ ಇಂತಹ ಜನರನ್ನು ಸೇರಿಸಿತು.
ಈ ಯೋಜನೆಯ ಮೂಲಕ ಸರ್ಕಾರವು 30 ಕೋಟಿಗಿಂತ ಹೆಚ್ಚು ಬಡವರಿಗೆ ಬ್ಯಾಂಕ್ ಖಾತೆಗಳನ್ನು ತೆರೆಸಿತು. 23 ಕೋಟಿಗಿಂತ ಅಧಿಕ ಜನರಿಗೆ ರುಪೇ ಡೆಬಿಟ್ ಕಾರ್ಡ್ ಕೊಡಲಾಗಿದೆ. ಈಗ ಬಡವರಲ್ಲೂ ಆ ಸಮಾನತೆಯ ಭಾವ ಬಂದಿದೆ. ATM ಸರತಿ ಸಾಲನ್ನು ನೋಡಿ ಹೆದರುತ್ತಿದ್ದ ಆತ ಇಂದು ತಾನು ಸಹ ರುಪೇ ಡೆಬಿಟ್ ಕಾರ್ಡ್ ಬಳಸಿ ಹಣ ತೆಗೆಯುತ್ತಾನೆ.
ಇಲ್ಲಿ ನೆರೆದಿರುವ ಎಷ್ಟು ಜನರಿಗೆ ಪ್ರತಿ ನಾಲ್ಕೈದು ತಿಂಗಳಿಗೊಮ್ಮೆ ತಮ್ಮ ಹಳ್ಳಿಗೆ ಹೋಗುವ ಅವಕಾಶ ಸಿಗುತ್ತದೆ ಎಂದು ನನಗೆ ಗೊತ್ತಿಲ್ಲ. ತಮ್ಮ ಹಳ್ಳಿಗೆ ಹೋಗಿ ತುಂಬಾ ದಿನಗಳೇ ಆಗಿರುವ ಜನರು ಈಗ ಅಲ್ಲಿಗೆ ಹೋಗಿ ನೋಡಬೇಕು ಎಂದು ನನ್ನ ಮನವಿಯಾಗಿದೆ. ಹಳ್ಳಿಯಲ್ಲಿ ಯಾರಾದರೂ ಬಡವರನ್ನು ಉಜ್ವಲಾ ಯೋಜನೆಯ ಕುರಿತು ಕೇಳಿ. ಕೆಲವು ಮನೆಗಳಲ್ಲಿ ಮೊದಲು ಅಡುಗೆ ಅನಿಲ ಸಂಪರ್ಕ ಇರುತ್ತಿತ್ತು, ಕೆಲವು ಮನೆಗಳಲ್ಲಿ ಸೌದೆ, ಇದ್ದಿಲಿನಿಂದ ಅಡುಗೆ ತಯಾರಿಸುತ್ತಿದ್ದರು. ಆದರೆ ಈಗ ಈ ಉಜ್ವಲಾ ಯೋಜನೆಯಿಂದ ಈ ವ್ಯತ್ಯಾಸ ಅಳಿಸಿ ಹೋಗಿದೆ ಎಂದು ನಿಮಗೆ ಗೊತ್ತಾಗುತ್ತದೆ. ಇದು ಸಾಮಾಜಿಕ ಭೇದಭಾವಕ್ಕೆ ಉದಾಹರಣೆಯಾಗಿದ್ದು ನಮ್ಮ ಸರ್ಕಾರವು ಇದನ್ನು ತೊಡೆದು ಹಾಕಿದೆ. ಈಗ ಹಳ್ಳಿಯ ಬಡವನ ಮನೆಯಲ್ಲೂ ಗ್ಯಾಸ್ ಒಲೆಯಲ್ಲಿ ಅಡುಗೆ ಮಾಡುತ್ತಾರೆ. ಈಗ ಬಡ ಮಹಿಳೆ ಸೌದೆ ಒಲೆಯ ಹೊಗೆಯಲ್ಲಿ ತನ್ನ ಜೀವನವನ್ನು ಸವೆಸಬೇಕಾದ ಅವಶ್ಯಕತೆಯಿಲ್ಲ.
ತಮ್ಮ ಹಳ್ಳಿಯೊಂದಿಗೆ ಹೆಚ್ಚು ಸಂಪರ್ಕ ಇಟ್ಟುಕೊಂಡಿರುವ ಜನರಿಗೆ ಈ ಬದಲಾವಣೆ ಬಹಳ ಸುಲಭವಾಗಿ ಅರ್ಥವಾಗುತ್ತದೆ. ನೀವು ಹಳ್ಳಿಗೆ ಹೋದಾಗ ಮತ್ತೊಂದು ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ ನಿಂದ ಹಳ್ಳಿಯ ಮಹಿಳೆಯರಲ್ಲಿ ಯಾವ ರೀತಿ ಸಮಾನತೆಯ ಭಾವ ಮೂಡಿದೆ ಎಂದು ಈ ಯೋಜನೆಯ ಪ್ರಭಾವವನ್ನು ನೋಡಿ. ಹಳ್ಳಿಯ ಕೆಲವೇ ಮನೆಗಳಲ್ಲಿ ಶೌಚಾಲಯ ಇರುವುದು ಮತ್ತು ಬಹುತೇಕ ಮನೆಗಳಲ್ಲಿ ಇಲ್ಲದಿರುವುದು ಒಂದು ಭೇದವನ್ನು ಉಂಟು ಮಾಡುತ್ತಿತ್ತು. ಗ್ರಾಮೀಣ ಮಹಿಳೆಯರ ಆರೋಗ್ಯ ಮತ್ತು ಅವರ ಸುರಕ್ಷತೆಗೂ ಇದರಿಂದಾಗಿ ಸಂಕಷ್ಟ ಬರುತ್ತಿತ್ತು. ಆದರೆ ಈಗ ನಿಧಾನವಾಗಿ ದೇಶದ ಬಹುತೇಕ ಹಳ್ಳಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಹಿಂದೆ ಸ್ವಚ್ಛತೆಯ ಪ್ರಮಾಣ ಶೇಕಡಾ 40ರಷ್ಟಿತ್ತು, ಈಗ ಅದು ಹೆಚ್ಚಿ ಶೇ.70ಕ್ಕಿಂತ ಹೆಚ್ಚಾಗಿದೆ.
ಸಾಮಾಜಿಕ ಪ್ರಜಾಪ್ರಭುತ್ವವನ್ನು ದೃಢಗೊಳಿಸುವ ದಿಸೆಯಲ್ಲಿ ಬಹು ದೊಡ್ಡ ಕೆಲಸವನ್ನು ನಮ್ಮ ಸರ್ಕಾರದ ವಿಮಾ ಯೋಜನೆಗಳು ಮಾಡುತ್ತಿವೆ. ಪ್ರಧಾನ ಮಂತ್ರಿ ವಿಮಾ ಯೋಜನೆ ಮತ್ತು ಜೀವನ ಜ್ಯೋತಿ ವಿಮಾ ಯೋಜನೆಯಿಂದ ಈಗ ದೇಶದ 18 ಕೋಟಿ ಬಡವರು ಇದರ ಜೊತೆಗೆ ಸೇರಿದ್ದಾರೆ. ಈ ಯೋಜನೆಗಳ ಮೂಲಕ ಕೇವಲ ಒಂದು ರೂಪಾಯಿಗೆ ಅಪಘಾತ ವಿಮೆ ಮತ್ತು ಪ್ರತಿದಿನ 90 ಪೈಸೆ ಪ್ರೀಮಿಯಂ ಕಟ್ಟುವ ಮೂಲಕ ಜೀವ ವಿಮೆ ಒದಗಿಸಲಾಗುತ್ತಿದೆ.
ಈ ಯೋಜನೆಗಳಡಿ ಬಡವರಿಗೆ ಸುಮಾರು 1800 ಕೋಟಿ ರೂಪಾಯಿಗಳ ಕ್ಲೇಮ್ ಇದುವರೆಗೆ ನೀಡಲಾಗಿದೆ ಎಂದು ತಿಳಿದು ನಿಮಗೆ ಅಚ್ಚರಿಯಾಗಬಹುದು. ಹಳ್ಳಿಯ ಮೂಲೆಯಲ್ಲಿ ವಾಸಿಸುವ ಬಡವ ಎಷ್ಟು ದೊಡ್ಡ ಚಿಂತೆಯಿಂದ ಮುಕ್ತನಾಗುತ್ತಿದ್ದಾನೆ ಎಂದು ಯೋಚಿಸಿ.
ಸೋದರ ಸೋದರಿಯರೆ, ಬಾಬಾ ಸಾಹೇಬ್ ಅವರ ವಿಚಾರಧಾರೆಯ ಮೂಲದಲ್ಲಿ ಸಮಾನತೆಯು ಹಲವು ರೂಪಗಳಲ್ಲಿ ಅಡಗಿದೆ.
ಗೌರವದ ಸಮಾನತೆ,
ಕಾನೂನಿನ ಸಮಾನತೆ,
ಹಕ್ಕುಗಳ ಸಮಾನತೆ,
ಮಾನವೀಯ ಗೌರವದ ಸಮಾನತೆ,
ಅವಕಾಶಗಳ ಸಮಾನತೆ
ಇಂತಹ ಅದೆಷ್ಟು ವಿಷಯಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ನಿರಂತರವಾಗಿ ಎತ್ತುತ್ತಿದ್ದರು. ಅವರು ಯಾವಾಗಲೂ ಭಾರತದಲ್ಲಿ ಸರ್ಕಾರಗಳು ಸಂವಿಧಾನವನ್ನು ಪಾಲಿಸುತ್ತಾ ಧರ್ಮ ಭೇದ, ಜಾತಿ ಭೇದ ಮಾಡದೆ ಸಾಗಬೇಕು ಎಂಬ ಆಶಾಭಾವನೆಯನ್ನು ಹೊಂದಿದ್ದರು. ಇಂದು ನಮ್ಮ ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಯಾವುದೇ ಭೇದಭಾವ ಮಾಡದೆ ಎಲ್ಲರಿಗೂ ಸಮಾನತೆಯ ಹಕ್ಕುಗಳನ್ನು ನೀಡುವ ಪ್ರಯತ್ನ ಮಾಡುತ್ತಿರುವುದು ನಿಮಗೆ ಕಾಣುತ್ತದೆ.
ಇತ್ತೀಚೆಗೆ ತಾನೇ ಸರ್ಕಾರವು ‘ಪ್ರಧಾನ ಮಂತ್ರಿ ಸಹಜ್’ ಎಂಬ ಪ್ರತಿ ಮನೆಗೂ ವಿದ್ಯುತ್ ಅಂದರೆ ಸೌಭಾಗ್ಯ ನೀಡುವ ಮತ್ತೊಂದು ಯೋಜನೆ ಆರಂಭಿಸಿದೆ. ಈ ಯೋಜನೆಯಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾದ ಬಳಿಕವೂ 18ನೆಯ ಶತಮಾನದಲ್ಲಿರುವಂತೆ ವಾಸಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಇಂತಹ ನಾಲ್ಕು ಕೋಟಿಗಿಂತ ಹೆಚ್ಚು ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಲಾಗುವುದು. ಕಳೆದ 70 ವರ್ಷಗಳಲ್ಲಿ ನಡೆದುಕೊಂಡು ಬಂದಿದ್ದ ಅಸಮಾನತೆಯು ಈ ಸೌಭಾಗ್ಯ ಯೋಜನೆಯಿಂದ ಕೊನೆಗಾಣುತ್ತಿದೆ.
ಸಮಾನತೆ ಹೆಚ್ಚಿಸುವ ಈ ಸರಪಣಿಯಲ್ಲಿ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಸಹ ಮತ್ತೊಂದು ಮಹತ್ವಪೂರ್ಣ ಯೋಜನೆಯಾಗಿದೆ. ಇಂದಿಗೂ ದೇಶದಲ್ಲಿ ತಮ್ಮ ಬಳಿ ಸ್ವಂತ ಸೂರು ಇಲ್ಲದ ಕೋಟ್ಯಂತರ ಜನರಿದ್ದಾರೆ. ಮನೆ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಮೊದಲು ಮನೆ ಇರುವುದು ಅವಶ್ಯಕವಾಗಿದೆ.
ಆದ್ದರಿಂದ ಸರ್ಕಾರವು 2022ರೊಳಗೆ ಹಳ್ಳಿಯಾಗಿರಲಿ ಅಥವಾ ಪಟ್ಟಣವಾಗಿರಲಿ, ಪ್ರತಿಯೊಬ್ಬ ಬಡವನಿಗೂ ತನ್ನ ಮನೆ ಇರಬೇಕು ಎಂಬ ಗುರಿಯನ್ನು ಹಾಕಿಕೊಂಡಿದೆ. ಇದಕ್ಕಾಗಿ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ, ಬಡವ ಮತ್ತು ಮಧ್ಯಮ ವರ್ಗಗಳಿಗೆ ಸಾಲದ ಬಡ್ಡಿಯಿಂದ ಬಿಡುಗಡೆ ನೀಡುತ್ತಿದೆ. ಮನೆಯ ವಿಷಯದಲ್ಲಿ ಸಮಾನತೆಯ ಭಾವ ಬರಬೇಕಾದರೆ ಯಾರೂ ಸ್ವಂತ ಮನೆಯಿಂದ ವಂಚಿತರಾಗಿ ಇರಬಾರದು.
ಸೋದರ ಸೋದರಿಯರೆ, ಈ ಯೋಜನೆಗಳು ತಮ್ಮದೇ ನಿರ್ಧಾರಿತ ವೇಗದಲ್ಲಿ ನಡೆಯುತ್ತಿವೆ ಮತ್ತು ನಿಗದಿತ ಸಮಯಕ್ಕೆ ಅಥವಾ ಅದಕ್ಕಿಂತ ಮೊದಲೇ ಪೂರ್ತಿಯಾಗಬಹುದು.
ನಮ್ಮ ಸರ್ಕಾರದಲ್ಲಿ ಯೋಜನೆಗಳು ನಿಂತು ಹೋಗವುದಿಲ್ಲ ಮತ್ತು ನಿಧಾನವಾಗಿ ಸಾಗುವುದಿಲ್ಲ ಎನ್ನುವುದಕ್ಕೆ ಈ ಡಾಕ್ಟರ್ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ಒಂದು ಉತ್ತಮ ಉದಾಹರಣೆಯಾಗಿದೆ. ಯಾವುದೇ ಗುರಿಯನ್ನು ನಿರ್ಧರಿಸಿಕೊಂಡರೆ ಅದನ್ನು ಪೂರ್ತಿ ಮಾಡುವುದಕ್ಕಾಗಿ ನಮ್ಮ ಸರ್ಕಾರದಲ್ಲಿ ಸಂಪೂರ್ಣ ಶಕ್ತಿಯನ್ನು ಪಣಕ್ಕಿಡಲಾಗುತ್ತದೆ ಮತ್ತು ಇದೇ ನಮ್ಮ ಕಾರ್ಯ ಸಂಸ್ಕೃತಿಯಾಗಿದೆ.
ಪ್ರತಿಯೊಂದು ಯೋಜನೆಯನ್ನು ಕೇವಲ ಗುರಿಯೊಂದಿಗೆ ಬಂಧಿಸುವುದಷ್ಟೇ ಅಲ್ಲ, ಅದನ್ನು ನಿಗದಿತ ಸಮಯದೊಳಗೆ ಪೂರ್ತಿ ಮಾಡುವುದು ಸಹ ನಮ್ಮ ಪ್ರಯತ್ನವಾಗಿದೆ. ಇದು ಈಗಿನಿಂದ ಅಲ್ಲ, ಕೆಲವು ತಿಂಗಳು ಮೊದಲೇ ಸರ್ಕಾರವು ಈ ರೀತಿಯಾಗಿ ನಿರ್ಧರಿಸಿತ್ತು.
2014ರಲ್ಲಿ ನಾನು ಕೆಂಪು ಕೋಟೆಯಲ್ಲಿ ನಿಂತು ಒಂದು ವರ್ಷದ ಒಳಗೆ ದೇಶದ ಎಲ್ಲ ಸರ್ಕಾರೀ ಶಾಲೆಗಳ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗುವುದು ಎಂದು ಹೇಳಿದ್ದು ನಿಮಗೆ ನೆನಪಿರಬಹುದು. ನಾವು ಒಂದು ವರ್ಷದ ಒಳಗೆ ಶಾಲೆಗಳಲ್ಲಿ ನಾಲ್ಕು ಲಕ್ಷಕ್ಕಿಂತ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದೆವು. ಶಾಲೆಯಲ್ಲಿ ಶೌಚಾಲಯ ಇಲ್ಲದಿದ್ದರಿಂದ ಹೆಣ್ಣು ಮಕ್ಕಳು ತಮ್ಮ ಓದನ್ನು ಅರ್ಧಕ್ಕೇ ನಿಲ್ಲಿಸಬೇಕಾಗುತ್ತಿತ್ತು, ಅವರ ಜೀವನದಲ್ಲಿ ಈಗ ಎಂತಹ ದೊಡ್ಡ ಬದಲಾವಣೆ ಬಂದಿದೆ ಎಂಬುದನ್ನು ನೀವು ಚೆನ್ನಾಗಿ ಅರ್ಧ ಮಾಡಿಕೊಳ್ಳಬಲ್ಲಿರಿ.
ಜೊತೆಗಾರರೆ, 2015ರಲ್ಲಿ ನಾನು ಕೆಂಪು ಕೋಟೆಯಿಂದಲೇ ಮತ್ತೊಂದು ಘೋಷಣೆ ಮಾಡಿದ್ದೆ. ಒಂದು ಸಾವಿರ ದಿನಗಳಲ್ಲಿ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ವಿದ್ಯುತ್ ಇಲ್ಲದ ಆ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡುವ ಘೋಷಣೆ ಮಾಡಿದ್ದೆ. ಒಂದು ಸಾವಿರ ದಿನಗಳು ಪೂರ್ತಿಯಾಗಲು ಇನ್ನೂ ಕೆಲವು ತಿಂಗಳು ಉಳಿದಿವೆ, ಕೇವಲ ಎರಡು ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡುವ ಕೆಲಸವಷ್ಟೇ ಉಳಿದಿದೆ.
ಮತ್ತೊಂದೆಡೆ ಯೋಜನೆಗಳ ಕುರಿತು ಮಾತನಾಡುವುದಾದರೆ ರೈತರಿಗೆ ‘ಸಾಯಿಲ್ ಹೆಲ್ತ್ ಕಾರ್ಡ್’ ನೀಡುವ ಸ್ಕೀಂ ಅನ್ನು 2015ರ ಫೆಬ್ರವರಿಯಲ್ಲಿ ಪ್ರಾರಂಭಿಸಲಾಗಿತ್ತು. ನಾವು 2018ರ ಒಳಗೆ ದೇಶದ 14 ಕೋಟಿ ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ ಕೊಡುತ್ತೇವೆ ಎಂದು ಗುರಿ ಹಾಕಿಕೊಂಡಿದ್ದೇವೆ. ಇದುವರೆಗೆ 10 ಕೋಟಿಗಿಂತ ಹೆಚ್ಚು ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ ನೀಡಲಾಗಿದೆ. ಅಂದರೆ ಇದು ನಮ್ಮ ಗುರಿಗಿಂತ ಬಹಳ ದೂರವೇನಿಲ್ಲ.
ಇದೇ ರೀತಿ ‘ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ’ಯನ್ನು 2015ರ ಜುಲೈನಲ್ಲಿ ಆರಂಭಿಸಲಾಗಿತ್ತು. ವರ್ಷಗಳಿಂದ ಕುಂಟುತ್ತಿರುವ ದೇಶದ 99 ನೀರಾವರಿ ಯೋಜನೆಗಳನ್ನು 2019ರಲ್ಲಿ ಪೂರೈಸುವ ಗುರಿಯನ್ನು ನಾವು ಹಾಕಿಕೊಂಡಿದ್ದೇವೆ. ಇದುವರೆಗೆ 21 ಯೋಜನೆಗಳು ಪೂರ್ತಿಯಾಗಿವೆ. ಮುಂದಿನ ವರ್ಷ 50ಕ್ಕಿಂತ ಹೆಚ್ಚು ಯೋಜನೆಗಳನ್ನು ಪೂರ್ತಿ ಮಾಡಲಾಗುವುದು. ಈ ಯೋಜನೆಯ ಪ್ರಗತಿ ಸಹ ನಿಗದಿತ ಗುರಿ ತಲುಪಲಿದೆ.
ರೈತರಿಗೆ ಅವರ ಫಸಲಿಗೆ ಸೂಕ್ತ ಬೆಲೆ ದೊರಕಬೇಕು, ಅವರು ತಮ್ಮ ಬೆಳೆಯನ್ನು ಸುಲಭವಾಗಿ ಮಾರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಇ-ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ ಯೋಜನೆಯನ್ನು(E-NAM ಯೋಜನೆ) 2016ರ ಏಪ್ರಿಲ್ ನಲ್ಲಿ ಆರಂಭಿಸಲಾಗಿತ್ತು. ಈ ಯೋಜನೆಯಡಿ ಸರ್ಕಾರವು ದೇಶದ 580ಕ್ಕಿಂತ ಹೆಚ್ಚು ಮಂಡಿಗಳನ್ನು ಆನ್ ಲೈನ್ ಗೆ ಸೇರಿಸುವ ನಿರ್ಧಾರ ಮಾಡಿತ್ತು. ಇದುವರೆಗೆ 470ಕ್ಕಿಂತ ಅಧಿಕ ಕೃಷಿ ಮಂಡಿಗಳನ್ನು ಆನ್ ಲೈನ್ ಗೆ ಸೇರಿಸಲಾಗಿದೆ.
ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಕುರಿತು ಆಗಲೇ ಹೇಳಿದ್ದೇನೆ. ಇದನ್ನು ಕಳೆದ ವರ್ಷ ಮೇ ಒಂದರಂದು ಆರಂಭಿಸಲಾಗಿತ್ತು. ಸರ್ಕಾರವು 2019ರೊಳಗೆ 5 ಕೋಟಿ ಬಡ ಮಹಿಳೆಯರಿಗೆ ಸಮಾನತೆಯ ಹಕ್ಕು ನೀಡುವ ಕುರಿತು ಹೇಳುತ್ತಿತ್ತು. ಸರ್ಕಾರವು ಅದೇ ದೃಷ್ಟಿಕೋನದೊಂದಿಗೆ ನಡೆಯುತ್ತಿದೆ. ನಮ್ಮ ಸರ್ಕಾರದಲ್ಲಿ ಯೋಜನೆಗಳಲ್ಲಿ ಆಗುವ ವಿಳಂಬವನ್ನು ಬೇಜವಾಬ್ದಾರಿ ಅಪರಾಧವೆಂದು ಭಾವಿಸಲಾಗುತ್ತದೆ.
ಈಗ ಈ ಅಂಬೇಡ್ಕರ್ ಸೆಂಟರ್ ಅನ್ನೇ ನೋಡಿ, ಇದನ್ನು ನಿರ್ಮಿಸುವ ನಿರ್ಧಾರವನ್ನು 1992ರಲ್ಲಿ ತೆಗೆದುಕೊಳ್ಳಲಾಗಿತ್ತು. ಆದರೆ 23 ವರ್ಷಗಳವರೆಗೆ ಏನೂ ಆಗಲಿಲ್ಲ. ನಮ್ಮ ಸರ್ಕಾರವು ಬಂದ ಬಳಿಕ ಇದರ ಶಂಕುಸ್ಥಾಪನೆಯಾಯಿತು ಮತ್ತು ನಮ್ಮ ಸರ್ಕಾರವೇ ಇದನ್ನು ಲೋಕಾರ್ಪಣೆ ಮಾಡುತ್ತಿದೆ. ಅಂಬೇಡ್ಕರ್ ಅವರ ಹೆಸರಿನಲ್ಲಿ ವೋಟು ಕೇಳುವ ರಾಜಕೀಯ ಪಕ್ಷಗಳಿಗೆ ಬಹುಶಃ ಇದು ಗೊತ್ತೂ ಇಲ್ಲ ಎನಿಸುತ್ತಿದೆ.
ಇತ್ತೀಚೆಗೆ ಅವರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅಲ್ಲ, ಬಾಬಾ ಭೋಲೆ(ಈಶ್ವರ) ನೆನಪಿಗೆ ಬರುತ್ತಿದ್ದಾರೆ. ನಡೆಯಿರಿ, ಇದಿಷ್ಟೇ ಸಾಕು.
ಜೊತೆಗಾರರೆ, ಈ ಕೇಂದ್ರವನ್ನು ನಿಗದಿತ ತಾರೀಖಿಗಿಂತ ಮೊದಲೇ ನಿರ್ಮಿಸಿದ ರೀತಿಯಲ್ಲೇ ಇತರ ಎಲ್ಲ ಯೋಜನೆಗಳಿಗೂ ಸಮಯ ನಿಗದಿಪಡಿಸಲಾಗುತ್ತಿದೆ. ಒಂದು ಸಲಕ್ಕೆ ಎಲ್ಲ ವ್ಯವಸ್ಥೆಗಳು ಸರಿಯಾಗಿ, ಯೋಜನೆಗೆ ವೇಗ ಬಂದಿರುವಾಗ ಗುರಿಯನ್ನು ಇನ್ನೂ ಬೇಗ ತಲಪುವ ಸಲುವಾಗಿ ನಾವು ನಿಗದಿತ ಅವಧಿಯನ್ನು ಇನ್ನೂ ಕಡಿಮೆ ಮಾಡುತ್ತಿದ್ದೇವೆ.
ಇತ್ತೀಚೆಗಷ್ಟೇ ನಾವು ‘ಮಿಷನ್ ಇಂದ್ರಧನುಷ್’ ಯೋಜನೆಗಾಗಿ ನಿಗದಿ ಮಾಡಿದ್ದ ಅವಧಿಗಿಂತ ಎರಡು ವರ್ಷ ಕಡಿಮೆ ಮಾಡಿದ್ದೇವೆ. ಮಿಷನ್ ಇಂದ್ರಧನುಷ್ ನ ಅಡಿಯಲ್ಲಿ ನಮ್ಮ ಸರ್ಕಾರವು ದೇಶದಲ್ಲಿ ಇದುವರೆಗೂ ಲಸಿಕೆಯೇ ಹಾಕಿಸಿರದ ಎಲ್ಲ ಜಾಗಗಳಿಗೂ ತಲುಪಿ ಲಸಿಕೆ ಹಾಕುವ ಅಭಿಯಾನವನ್ನು ನಡೆಸುತ್ತಿದೆ. ಲಕ್ಷಾಂತರ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆಯನ್ನೇ ಹಾಕಿಸಿಕೊಂಡಿರಲಿಲ್ಲ. ನಮ್ಮ ಈ ಅಭಿಯಾನದಲ್ಲಿ ಇದುವರೆಗೆ ಎರಡೂವರೆ ಕೋಟಿಗಿಂತ ಹೆಚ್ಚು ಮಕ್ಕಳು ಮತ್ತು 70 ಲಕ್ಷಕ್ಕಿಂತ ಹೆಚ್ಚು ಗರ್ಭಿಣಿಯರಿಗೆ ಲಸಿಕೆಯನ್ನು ಹಾಕಲಾಗಿದೆ.
ಹಿಂದಿನ ಸರ್ಕಾರವು 2020ರೊಳಗೆ ದೇಶದಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕುವ ಗುರಿ ಸಾಧಿಸಬೇಕಿತ್ತು. ಇದನ್ನೂ ಕಡಿಮೆ ಮಾಡಿ 2018ರೊಳಗೆ ಗುರಿ ತಲುಪುವ ಸಂಕಲ್ಪ ಮಾಡಲಾಗಿದೆ. ಈ ಗುರಿ ತಲುಪಲು ಮಿಷನ್ ಇಂದ್ರಧನುಷ್ ನ ಜೊತೆಗೇ ‘ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್’ ಆರಂಭಿಸಲಾಗಿದೆ.
ಇದೇ ರೀತಿ ಸರ್ಕಾರವು ಪ್ರತಿ ಹಳ್ಳಿಗೆ ರಸ್ತೆ ಸಂಪರ್ಕ ನೀಡುವ ಗುರಿಯನ್ನು 2022ಕ್ಕೆ ನಿಗದಿ ಪಡಿಸಿತ್ತು. ಆದರೆ ಹಿಡಿತ ಸಾಧಿಸಿದ ಮೇಲೆ ಕೆಲಸದಲ್ಲಿ ಇನ್ನೂ ವೇಗ ಬಂದಿದ್ದು ಅದನ್ನು ಸಹ 2022ಕ್ಕೆ ಮೊದಲೇ ಅಂದರೆ 2019ಕ್ಕೇ ಪೂರ್ಣಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ.
ಜೊತೆಗಾರರೆ, ಶ್ರೀ ಅಟಲ್ ವಾಜಪೇಯಿ ಅವರ ಸರ್ಕಾರವಿದ್ದಾಗ ‘ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ’ ಆರಂಭವಾಯಿತು. ಆದರೆ ಇಷ್ಟು ವರ್ಷಗಳ ಬಳಿಕವೂ ದೇಶದ ಎಲ್ಲ ಹಳ್ಳಿಗಳು ರಸ್ತೆ ಸಂಪರ್ಕ ಹೊಂದಿಲ್ಲ. ಸೆಪ್ಟೆಂಬರ್ 2014ರಲ್ಲಿ ಇಂತಹ ಸ್ಥಿತಿಯಿತ್ತು. ನಾವು ಬಂದ ನಂತರದ ಸ್ಥಿತಿಯ ಕುರಿತು ಹೇಳುತ್ತೇನೆ. ನಾವು 2014ರ ಮೇ ತಿಂಗಳಲ್ಲಿ ಸರ್ಕಾರ ರಚಿಸಿದೆವು. 2014ರಲ್ಲಿ ನಾನು ಪರಿಶೀಲನೆ ಮಾಡಿಸಿದಾಗ ಕೇವಲ ಶೇಕಡಾ 57 ಹಳ್ಳಿಗಳಷ್ಟೇ ರಸ್ತೆ ಸಂಪರ್ಕ ಹೊಂದಿದ್ದವು. ಮೂರು ವರ್ಷಗಳ ಪ್ರಯತ್ನದ ನಂತರ ಈಗ ಶೇಕಡಾ 81 ಅಂದರೆ 80%ಗಿಂತ ಹೆಚ್ಚು ಹಳ್ಳಿಗಳಿಗೆ ರಸ್ತೆ ಸಂಪರ್ಕ ಒದಗಿಸಲಾಗಿದೆ. ಈಗ ಶೇಕಡಾ ನೂರು ಹಳ್ಳಿಗಳು ರಸ್ತೆ ಸಂಪರ್ಕ ಹೊಂದುವಂತೆ ಮಾಡಲು ಸರ್ಕಾರವು ಬಹಳ ವೇಗವಾಗಿ ಕೆಲಸ ಮಾಡುತ್ತಿದೆ.
ಸರ್ಕಾರವು ದೇಶದ ದೂರದೂರದ ಪ್ರದೇಶಗಳಲ್ಲಿ ವಾಸಿಸುವ ದಲಿತ, ಹಿಂದುಳಿದ ಸೋದರ ಸೋದರಿಯರಿಗೆ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುತ್ತಿದೆ. ಆದ್ದರಿಂದ ನಾವು ‘ಸ್ಟ್ಯಾಂಡ್ ಅಪ್ ಇಂಡಿಯಾ’ ಕಾರ್ಯಕ್ರಮವನ್ನು ಆರಂಭಿಸಿದೆವು. ಜೊತೆಗೇ ಈ ಯೋಜನೆಯ ಮೂಲಕ ಪ್ರತಿಯೊಂದು ಬ್ಯಾಂಕ್ ಶಾಖೆಯು ಕನಿಷ್ಠ ಒಬ್ಬ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸಾಲ ಕೊಡಲೇಬೇಕು ಎಂದು ಸಹ ಗುರಿ ನೀಡಲಾಗಿದೆ.
ಸೋದರ ಸೋದರಿಯರೆ, ದೇಶದಲ್ಲಿ ಉದ್ಯೋಗದ ಸ್ವರೂಪವನ್ನು ಬದಲಿಸುವ ಮುದ್ರಾ ಯೋಜನೆಯ ಪ್ರಯೋಜನ ಪಡೆದ ಸುಮಾರು ಶೇಕಡಾ 60 ಜನರು ದಲಿತ, ಹಿಂದುಳಿದವರು ಮತ್ತು ಆದಿವಾಸಿಗಳೇ ಆಗಿದ್ದಾರೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಈ ಯೋಜನೆಯಡಿ ಇದುವರೆಗೆ ಸುಮಾರು ಒಂಭತ್ತು ಮುಕ್ಕಾಲು ಕೋಟಿ ಜನ ಸಾಲ ಪಡೆದಿದ್ದಾರೆ. ಅವರಿಗೆ ಯಾವುದೇ ಬ್ಯಾಂಕ್ ಶ್ಯೂರಿಟಿ ಇಲ್ಲದೆಯೇ ನಾಲ್ಕು ಕೋಟಿಗಿಂತ ಹೆಚ್ಚು ಸಾಲವನ್ನು ನೀಡಲಾಗಿದೆ.
ಜೊತೆಗಾರರೆ, ಸಾಮಾಜಿಕ ಹಕ್ಕುಗಳೆಂದರೆ ಈ ಸರ್ಕಾರಕ್ಕೆ ಕೇವಲ ಹೇಳುವ-ಕೇಳುವ ವಿಷಯವಲ್ಲ, ಬದಲಿಗೆ ಅದೊಂದು ಬದ್ಧತೆಯಾಗಿದೆ. ನಾವು ಮಾತನಾಡುವ ‘ನವಭಾರತ’ವು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಭಾರತವೂ ಆಗಿದೆ.
ಎಲ್ಲರಿಗೂ ಸಮಾನ ಅವಕಾಶ, ಸಮಾನ ಹಕ್ಕುಗಳು. ಜಾತಿಯ ಸಂಕೋಲೆಯಿಂದ ಮುಕ್ತವಾದ ನಮ್ಮ ಭಾರತ. ತಂತ್ರಜ್ಞಾನದ ಶಕ್ತಿಯಿಂದ ಮುಂದೆ ಸಾಗುತ್ತಿರುವ ಭಾರತ, ಎಲ್ಲರ ಜೊತೆ ಎಲ್ಲರ ವಿಕಾಸ ಮಾಡುತ್ತಿರುವ ಭಾರತ.
ಬನ್ನಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸುಗಳನ್ನು ಸಾಕಾರಗೊಳಿಸಲು ನಾವು ಸಂಕಲ್ಪ ಮಾಡೋಣ. ಬಾಬಾ ಸಾಹೇಬ್ ನಮಗೆ 2022ರೊಳಗೆ ಈ ಸಂಕಲ್ಪಗಳ ಸಿದ್ಧಿ ಪಡೆಯಲು ಶಕ್ತಿ ನೀಡಿ, ಇದೇ ಆಶಯದೊಂದಿಗೆ ನಾನು ನನ್ನ ಮಾತು ಮುಗಿಸುತ್ತೇನೆ.
ನಿಮ್ಮೆಲ್ಲರಿಗೆ ಬಹಳ ಬಹಳ ಧನ್ಯವಾದಗಳು!!! ಜೈ ಭೀಮ್! ಜೈ ಭೀಮ್!