ಗೌರವಾನ್ವಿತ, ಇಸ್ರೇಲಿನ ಪ್ರಧಾನ ಮಂತ್ರಿಯವರೇ, ಗೌರವಾನ್ವಿತ ನೆದರ್ ಲ್ಯಾಂಡಿನ ಪ್ರಧಾನ ಮಂತ್ರಿಯವರೇ, ವಿಶ್ವದ ವಿವಿಧೆಡೆಗಳಿಂದ ಭಾಗವಹಿಸಿರುವ ಗೌರವಾನ್ವಿತ ಸಚಿವರೇ, ನನ್ನ ಸಂಪುಟ ಸದಸ್ಯರೇ, ಮುಖ್ಯಮಂತ್ರಿಗಳೇ, ಉಪ ರಾಜ್ಯಪಾಲರುಗಳೇ ಮತ್ತು ಗೌರವಾನ್ವಿತ ಅತಿಥಿಗಳೇ, ನಾನು ತಮ್ಮ ಸಂದೇಶವನ್ನು ಹಂಚಿಕೊಂಡಿರುವುದಕ್ಕಾಗಿ ಗೌರವಾನ್ವಿತರಾದ ನೆದರ್ ಲ್ಯಾಂಡಿನ ಪ್ರಧಾನ ಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
ರೀಇನ್ವೆಸ್ಟಿನ ಮೂರನೇ ಆವೃತ್ತಿಯ ಅಂಗವಾಗಿ ನಿಮ್ಮೆಲ್ಲರನ್ನೂ ನೋಡುತ್ತಿರುವುದು ಬಹಳ ಸಂತೋಷ ತಂದಿದೆ. ಈ ಮೊದಲಿನ ಆವೃತ್ತಿಗಳಲ್ಲಿ, ನಾವು ಮರುನವೀಕೃತ ಇಂಧನಕ್ಕೆ ಸಂಬಂಧಿಸಿ ಮೆಗಾವ್ಯಾಟ್ ಗಳಿಂದ ಗಿಗಾವ್ಯಾಟ್ ಗಳತ್ತ ಸಾಗುವ ಪ್ರಯಾಣದ ಬಗ್ಗೆ ಮಾತನಾಡಿದ್ದೆವು. ನಾವು “ಒಂದು ಸೂರ್ಯ, ಒಂದು ವಿಶ್ವ, ಒಂದು ಜಾಲ” ದ ಬಗ್ಗೆ ಸೌರ ಇಂಧನಕ್ಕೆ ಹೆಚ್ಚಿನ ಉತ್ತೇಜನ ಕೊಡುವ ಹಿನ್ನೆಲೆಯಲ್ಲಿ ಮಾತನಾಡಿದ್ದೆವು. ಬಹಳ ಸಣ್ಣ ಅವಧಿಯಲ್ಲಿ ಈ ಯೋಜನೆಗಳಲ್ಲಿ ಹಲವು ವಾಸ್ತವಕ್ಕೆ ಬಂದಿವೆ.
ಸ್ನೇಹಿತರೇ,
ಕಳೆದ 6 ವರ್ಷಗಳಲ್ಲಿ, ಭಾರತವು ಸಾಟಿಯಿಲ್ಲದ , ಹೋಲಿಕೆರಹಿತವಾದ ಪ್ರಯಾಣದಲ್ಲಿದೆ. ನಾವು ನಮ್ಮ ಉತ್ಪಾದನಾ ಸಾಮರ್ಥ್ಯ್ವವನ್ನು ವೃದ್ಧಿಸುತ್ತಿದ್ದೇವೆ ಮತ್ತು ಜಾಲವನ್ನು ಭಾರತದ ಪ್ರತಿಯೊಬ್ಬ ನಾಗರಿಕರಿಗೂ ವಿದ್ಯುತ್ ಲಭ್ಯವಾಗುವಂತೆ ಮಾಡುವುದನ್ನು ಖಾತ್ರಿಪಡಿಸುವುದಕ್ಕಾಗಿ ವಿಸ್ತರಿಸುತ್ತಿದ್ದೇವೆ. ಇದು ಆತನ ಪೂರ್ಣ ಸಾಮರ್ಥ್ಯ ಅನಾವರಣಗೊಳ್ಳಲು ಸಹಾಯ ಮಾಡುತ್ತದೆ. ಇದೇ ವೇಳೆ, ನಾವು ಬಹಳ ತ್ವರಿತವಾಗಿ ಮರುನವೀಕೃತ ಮೂಲಗಳಿಂದ ಇಂಧನ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದೇವೆ. ನಾನು ನಿಮಗೆ ಕೆಲವು ವಸ್ತು ಸ್ಥಿತಿಯ ಅಂಶಗಳನ್ನು ತಿಳಿಸುತ್ತೇನೆ.
ಇಂದು, ಭಾರತವು ಮರುನವೀಕೃತ ಇಂಧನ ಸಾಮರ್ಥ್ಯದಲ್ಲಿ ವಿಶ್ವದಲ್ಲಿಯೇ ನಾಲ್ಕನೇಯ ಸ್ಥಾನದಲ್ಲಿದೆ. ಅದು ಎಲ್ಲಾ ಪ್ರಮುಖ ರಾಷ್ಟ್ರಗಳಲ್ಲಿ ತ್ವರಿತವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಮರುನವೀಕೃತ ಇಂಧನ ಸಾಮರ್ಥ್ಯ ಪ್ರಸ್ತುತ 136 ಗಿಗಾ ವ್ಯಾಟ್ ಗಳಷ್ಟಿದೆ, ನಮ್ಮ ಒಟ್ಟು ಸಾಮರ್ಥ್ಯದಲ್ಲಿ ಇದು 36 ಶೇಖಡ. 2022 ರ ವೇಳೆಗೆ ಮರುನವೀಕೃತ ಸಾಮರ್ಥ್ಯದ ಪಾಲು 200 ಗಿಗಾ ವ್ಯಾಟ್ ಮೀರುತ್ತದೆ.
2017 ರಿಂದ ನಮ್ಮ ವಾರ್ಷಿಕ ಮರುನವೀಕೃತ ಇಂಧನ ಸಾಮರ್ಥ್ಯ ಸೇರ್ಪಡೆಯು ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ತಿನ ಪ್ರಮಾಣಕ್ಕಿಂತ ಹೆಚ್ಚಿದೆ ಎಂಬುದನ್ನು ಅರಿತರೆ ತಾವು ಸಂತೋಷಪಡುವಿರಿ. ಕಳೆದ 6 ವರ್ಷಗಳಲ್ಲಿ, ನಾವು ಸ್ಥಾಪಿತ ಮರುನವೀಕೃತ ಇಂಧನ ಸಾಮರ್ಥ್ಯವನ್ನು ಎರಡೂವರೆ ಪಟ್ಟು ಹೆಚ್ಚಿಸಿದ್ದೇವೆ. ಕಳೆದ 6 ವರ್ಷಗಳಲ್ಲಿ ಸ್ಥಾಪಿತ ಸೌರ ಇಂಧನ ಸಾಮರ್ಥ್ಯ 13 ಪಟ್ಟು ಹೆಚ್ಚಾಗಿದೆ.
ಸ್ನೇಹಿತರೇ,
ಮರುನವೀಕೃತ ಇಂಧನ ವಲಯದಲ್ಲಿ ಭಾರತದ ಪ್ರಗತಿಯು ವಾತಾವರಣ ಬದಲಾವಣೆ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ನಮ್ಮ ಬದ್ಧತೆ ಮತ್ತು ನಿರ್ಣಯದ ಫಲ. ಅದು ಕೈಗೆಟಕುವ ದರದಲ್ಲಿ ಇಲ್ಲದ್ದಿದ್ದ ಸಂದರ್ಭದಲ್ಲಿಯೂ, ನಾವು ಮರುನವೀಕೃತ ಇಂಧನದಲ್ಲಿ ಹೂಡಿಕೆ ಮಾಡಿದೆವು. ಈಗ ನಮ್ಮ ಹೂಡಿಕೆ ಮತ್ತು ಪ್ರಮಾಣಗಳು ವೆಚ್ಚವನ್ನು ಕಡಿಮೆ ಮಾಡಿವೆ. ದೃಢವಾದ ಪರಿಸರ ನೀತಿಗಳು ದೃಢವಾದ ಆರ್ಥಿಕತೆಯೂ ಆಗಬಲ್ಲವು ಎಂಬುದನ್ನು ನಾವು ಜಗತ್ತಿಗೆ ತೋರಿಸಿಕೊಡುತ್ತಿದ್ದೇವೆ. ಇಂದು, ಇಂದು ಭಾರತವು 2 ಡಿಗ್ರಿ ಅನುಸರಣಾ ಗುರಿಯನ್ನು ಸಾಧಿಸುವ ಕೆಲವೇ ಕೆಲವು ರಾಷ್ಟ್ರಗಳ ಹಾದಿಯಲ್ಲಿ ಇದೆ.
ಸ್ನೇಹಿತರೇ,
ಲಭ್ಯತೆ, ದಕ್ಷತೆ ಮತ್ತು ವಿಕಸನದ ಧೋರಣೆಯನ್ನು ಅನುಸರಿಸಿಕೊಂಡು ಸ್ವಚ್ಚ ಇಂಧನ ಮೂಲಗಳತ್ತ ನಮ್ಮ ಪರಿವರ್ತನೆ ಸಾಗಿದೆ. ನಾನು ವಿದ್ಯುತ್ತಿನ ಸಂಪರ್ಕ ಒದಗಣೆ ಕುರಿತು ಮಾತನಾಡುವಾಗ, ನೀವು ಅದರ ಅಂದಾಜನ್ನು ಅಂಕೆಗಳಲ್ಲಿ ಮಾಡಬಹುದು. ಕೆಲವೇ ಕೆಲವು ವರ್ಷಗಳಲ್ಲಿ ಸುಮಾರು 2.5 ಕೋಟಿ ಅಥವಾ 25 ಮಿಲಿಯನ್ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ನಾನು ಇಂಧನ ದಕ್ಷತೆಯ ಬಗ್ಗೆ ಮಾತನಾಡುವಾಗ, ನಾವು ಈ ಆಂದೋಲನವನ್ನು ಒಂದು ಸಚಿವಾಲಯ ಅಥವಾ ಇಲಾಖೆಗೆ ಸೀಮಿತ ಮಾಡಿಲ್ಲ. ನಾವು ಇದನ್ನು ಇಡೀ ಸರಕಾರದ ಗುರಿಯಾಗಿಸಿದ್ದೇವೆ. ನಮ್ಮೆಲ್ಲ ನೀತಿಗಳು ಇಂಧನ ದಕ್ಷತೆಯನ್ನು ಸಾಧಿಸಲು ಗಮನ ಕೊಟ್ಟಿವೆ. ಇದರಲ್ಲಿ ಎಲ್.ಇ.ಡಿ. ಬಲ್ಬ್ ಗಳು, ಎಲ್.ಇ.ಡಿ. ಬೀದಿ ದೀಪಗಳು, ಸ್ಮಾರ್ಟ್ ಮೀಟರುಗಳು, ವಿದ್ಯುತ್ ವಾಹನಗಳಿಗೆ ಆದ್ಯತೆ ಮತ್ತು ಪ್ರಸರಣದಲ್ಲಾಗುವ ನಷ್ಟವನ್ನು ಕಡಿಮೆ ಮಾಡುವುದು ಸೇರಿವೆ. ನಾನು ಇಂಧನ ವಿಕಸನದ ಬಗ್ಗೆ ಮಾತನಾಡುವಾಗ, ಪಿ.ಎಂ.-ಕುಸುಮ್ ನೊಂದಿಗೆ ನಾವು ಕೃಷಿ ಕ್ಷೇತ್ರಕ್ಕೆ ಸೌರ ಆಧಾರಿತ ವಿದ್ಯುತ್ತಿನಿಂದ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶ ಹೊಂದಿದ್ದೇವೆ.
ಸ್ನೇಹಿತರೇ,
ಮರುನವೀಕೃತ ವಲಯದಲ್ಲಿ ಹೂಡಿಕೆಗೆ ಭಾರತವು ಆದ್ಯತೆಯ ತಾಣವಾಗುತ್ತಿದೆ. ಕಳೆದ 6 ವರ್ಷಗಳಲ್ಲಿ ಸುಮಾರು 5 ಲಕ್ಷ ಕೋ.ರೂ. ಗಳನ್ನು ಅಥವಾ 64 ಬಿಲಿಯನ್ ಡಾಲರುಗಳನ್ನು ಭಾರತದ ಮರುನವೀಕೃತ ಇಂಧನ ವಲಯದಲ್ಲಿ ಹೂಡಿಕೆ ಮಾಡಲಾಗಿದೆ. ನಾವು ಭಾರತವನ್ನು ಮರುನವೀಕೃತ ಇಂಧನ ವಲಯದಲ್ಲಿ ಜಾಗತಿಕ ಉತ್ಪಾದನಾ ತಾಣವನ್ನಾಗಿಸುವ ಇಚ್ಛೆಯನ್ನು ಹೊಂದಿದ್ದೇವೆ.
ನೀವು ಭಾರತದ ಮರುನವೀಕೃತ ಇಂಧನ ವಲಯದಲ್ಲಿ ಯಾಕೆ ಹೂಡಿಕೆ ಮಾಡಬೇಕು ಎಂಬುದಕ್ಕೆ ಹಲವಾರು ಕಾರಣಗಳನ್ನು ನಾನು ನಿಮಗೆ ನೀಡುತ್ತೇನೆ. ಮರುನವೀಕೃತ ವಲಯಕ್ಕೆ ಸಂಬಂಧಿಸಿ ಭಾರತವು ಬಹಳ ಉದಾರವಾದ ವಿದೇಶೀ ಹೂಡಿಕೆ ನೀತಿಯನ್ನು ಹೊಂದಿದೆ. ವಿದೇಶೀ ಹೂಡಿಕೆದಾರರು ತಾವೇ ಹೂಡಿಕೆ ಮಾಡಬಹುದು ಅಥವಾ ಭಾರತದ ಸಹಭಾಗಿಗಳ ಜೊತೆಗೂಡಿ ಮರುನವೀಕೃತ ಇಂಧನ ಆಧಾರಿತ ವಿದ್ಯುತ್ ಉತ್ಪಾದನಾ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಮರುನವೀಕೃತ ಇಂಧನ ವಲಯದಲ್ಲಿ ವಾರಕ್ಕೆ 24 ಗಂಟೆಯೂ ವಿದ್ಯುತ್ ಪೂರೈಕೆಗೆ ಸಂಬಂಧಿಸಿ ನವೀನ ಬಿಡ್ ಗಳ ಬಗ್ಗೆ ಭಾರತ ಗಮನ ನೀಡುತ್ತಿದೆ. ಸೌರ–ಪವನ ಹೈಬ್ರಿಡ್ ಯೋಜನೆಗಳನ್ನೂ ಯಶಸ್ವಿಯಾಗಿ ಅನ್ವೇಷಿಸಲಾಗಿದೆ.
ದೇಶೀಯವಾಗಿ ಉತ್ಪಾದಿಸಿದ ಸೌರ ಕೋಶಗಳು ಮತ್ತು ಮಾದರಿಗಳ ಬೇಡಿಕೆ ಮುಂದಿನ ಮೂರು ವರ್ಷಗಳಲ್ಲಿ 36 ಗಿಗಾವ್ಯಾಟ್ ಗಳಿಗೂ ಅಧಿಕವಾಗಿರುತ್ತದೆ. ನಮ್ಮ ನೀತಿಗಳು ತಾಂತ್ರಿಕ ಕ್ರಾಂತಿಗೆ ಅನುಗುಣವಾಗಿವೆ. ನಾವು ಸಮಗ್ರ ರಾಷ್ಟ್ರೀಯ ಹೈಡ್ರೋಜನ್ ಇಂಧನ ಮಿಶನ್ ಆರಂಭಿಸಲು ಉದ್ದೇಶಿಸಿದ್ದೇವೆ. ಇಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಪಿ.ಎಲ್.ಐ.ಗಳ ಯಶಸ್ಸಿನ ಬಳಿಕ, ನಾವು ಇಂತಹದೇ ಪ್ರೋತ್ಸಾಹವನ್ನು ಹೆಚ್ಚಿನ ದಕ್ಷತೆಯ ಸೌರ ಮಾದರಿಗಳಿಗೆ ನೀಡಲು ನಿರ್ಧರಿಸಿದ್ದೇವೆ. “ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣ”ವನ್ನು ಖಾತ್ರಿಪಡಿಸುವುದು ನಮ್ಮ ಗರಿಷ್ಟ ಆದ್ಯತೆಯಾಗಿದೆ. ನಾವು ಇದಕ್ಕಾಗಿಯೇ ಯೋಜನಾ ಅಭಿವೃದ್ಧಿ ಕೋಶಗಳನ್ನು ಮತ್ತು ಎಫ್.ಡಿ.ಐ. ಕೋಶಗಳನ್ನು ಎಲ್ಲಾ ಸಚಿವಾಲಯಗಳಲ್ಲಿ ಹೂಡಿಕೆದಾರರಿಗೆ ಅನುಕೂಲ ಒದಗಿಸುವುದಕ್ಕಾಗಿ ಸ್ಥಾಪಿಸಿದ್ದೇವೆ.
ಇಂದು, ಭಾರತದ ಪ್ರತಿಯೊಂದು ಗ್ರಾಮಕ್ಕೂ ಮತ್ತು ಸರಿ ಸುಮಾರು ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಲಭ್ಯವಿದೆ. ನಾಳೆ ಅವರ ಇಂಧನ ಬೇಡಿಕೆ ಹೆಚ್ಚಲಿದೆ. ಹೀಗೆ, ಭಾರತದಲ್ಲಿ ಇಂಧನ ಬೇಡಿಕೆ ಹೆಚ್ಚುತ್ತಲೇ ಹೋಗುತ್ತದೆ. ಮುಂದಿನ ದಶಕಕ್ಕಾಗಿ ಬೃಹತ್ ಪಮಾಣದಲ್ಲಿ ಮರುನವೀಕೃತ ಇಂಧನ ಬಳಕೆ ಯೋಜನೆಗಳಿವೆ. ಇವು ವರ್ಷಕ್ಕೆ 20 ಬಿಲಿಯನ್ ಡಾಲರುಗಳು ಅಥವಾ ಸುಮಾರು 1.5 ಲಕ್ಷ ಕೋಟಿ ರೂ. ಗಳ ವ್ಯಾಪಾರದ ಅವಕಾಶಗಳನ್ನು ಸೃಷ್ಟಿಸಲಿವೆ. ಭಾರತದಲ್ಲಿ ಹೂಡಿಕೆಗೆ ಇದು ದೊಡ್ಡ ಅವಕಾಶ. ನಾನು ಭಾರತದ ಮರುನವೀಕೃತ ಇಂಧನ ಪ್ರಯಾಣದಲ್ಲಿ ಸೇರಿಕೊಳ್ಳುವಂತೆ ಹೂಡಿಕೆದಾರರನ್ನು, ಅಭಿವೃದ್ಧಿದಾರರನ್ನು ಮತ್ತು ವ್ಯಾಪಾರೋದ್ಯಮಿಗಳನ್ನು ಆಹ್ವಾನಿಸುತ್ತೇನೆ.
ಸ್ನೇಹಿತರೇ
ಈ ಕಾಯಕ್ರಮ ಭಾರತದಲ್ಲಿಯ ಮರುನವೀಕೃತ ಇಂಧನದ ಭಾಗೀದಾರರನ್ನು ಅತ್ಯುತ್ತಮ ಜಾಗತಿಕ ಉದ್ಯಮಗಳ ಜೊತೆ, ನೀತಿ ನಿರೂಪಕರ ಜೊತೆ ಮತ್ತು ಅಕಾಡೆಮಿಕ್ ವಲಯದ ಜೊತೆ ಸಂಪರ್ಕಿಸುತ್ತದೆ. ಈ ಸಮ್ಮೇಳನ ಭಾರತವು ಹೊಸ ಇಂಧನ ಭವಿಷ್ಯದತ್ತ ಮುನ್ನಡೆಯಲು ಫಲಪ್ರದ ವಿಚಾರಮಂಥನವನ್ನು ನಡೆಸುತ್ತದೆ ಎಂಬ ಬಗ್ಗೆ ನನಗೆ ಭರವಸೆ ಇದೆ.
ಧನ್ಯವಾದಗಳು.