ಭೂಮಿ ಮರಳುಗಾಡು ಆಗುವಿಕೆ ತಡೆಯುವ ಕುರಿತಂತೆ ವಿಶ್ವಸಂಸ್ಥೆಯ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳ 14ನೇ ಸಿಒಪಿ ಶೃಂಗಸಭೆಗೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ. ಭಾರತಕ್ಕೆ ಈ ಸಮ್ಮೇಳನವನ್ನು ತಂದ ಕಾರ್ಯಕಾರಿ ಕಾರ್ಯದರ್ಶಿ ಶ್ರೀ ಇಬ್ರಾಹಿಂ ಜಿಯೋ ಅವರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಈ ಶೃಂಗಸಭೆಗೆ ದಾಖಲೆಯ ಪ್ರತಿನಿಧಿಗಳ ನೋಂದಣಿ ಆಗಿರುವುದು ಭೂ ಸವಕಳಿಯನ್ನು ತಡೆಯುವ ಅಥವಾ ಅದನ್ನು ಪೂರ್ವ ಸ್ಥಿತಿಗೆ ಮರಳಿಸುವ ಜಾಗತಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಸಹ ಅಧ್ಯಕ್ಷೀಯ ಸ್ಥಾನವನ್ನು ಎರಡು ವರ್ಷಗಳ ಅವಧಿಗೆ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪರಿಣಾಮಕಾರಿ ಕೊಡುಗೆ ನೀಡಲು ಭಾರತ ಎದುರು ನೋಡುತ್ತಿದೆ. ಗೆಳೆಯರೇ, ಶತಮಾನಗಳಿಂದಲೂ ಭಾರತ ಸದಾ ಭೂಮಿಗೆ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ಭಾರತದ ಸಂಸ್ಕೃತಿಯಲ್ಲಿ ಭೂಮಿಗೆ ಅತ್ಯಂತ ಪವಿತ್ರ ಸ್ಥಾನವಿದೆ ಮತ್ತು ಅದನ್ನು ನಾವು ಮಾತೃ ಎಂದೇ ಪರಿಗಣಿಸಿದ್ದೇವೆ.
ನಾವು ಮುಂಜಾನೆ ಎದ್ದಾಕ್ಷಣ ಕಾಲುಗಳನ್ನು ನೆಲಕ್ಕೂರುವ ಮೊದಲು ಭೂ ತಾಯಿಯನ್ನು ಕ್ಷಮಿಸು ಎಂದು ಬೇಡಿಕೊಳ್ಳುತ್ತೇವೆ.
ಸಮುದ್ರ ವಾಸನೆ ದೇವಿ, ಪರ್ವತ ಸ್ಥಾನ ಮಂಡಿತೇ
ವಿಷ್ಣು ಪತ್ನಿ ನಮಸ್ ತುಬ್ಯಂ, ಪಾದ ಸ್ಪರ್ಶಂ ಕ್ಷಮಾಸವ ಮೇ
ಗೆಳೆಯರೇ, ಹವಾಮಾನ ಮತ್ತು ಪರಿಸರ ಎರಡೂ ನಮ್ಮ ಜೈವಿಕ ವೈವಿಧ್ಯತೆ ಮತ್ತು ಭೂಮಿಯ ಮೇಲೆ ಪರಿಣಾಮ ಬೀರುತ್ತವೆ. ಹವಾಮಾನ ವೈಪರೀತ್ಯದಿಂದಾಗಿ ವಿಶ್ವ ನಕಾರಾತ್ಮಕ ಪರಿಣಾಮಗಳನ್ನು ಎದುರಿಸುತ್ತಿದೆ ಎಂಬುದನ್ನು ಸರ್ವರೂ ಬಹುವಾಗಿ ಒಪ್ಪಿದ್ದಾರೆ. ಇದರಿಂದಾಗಿ ಭೂಮಿ ಮತ್ತು ಗಿಡಮರಗಳು ಹಾಗೂ ಪ್ರಾಣಿಗಳಿಗೆ ನಷ್ಟವಾಗುತ್ತಿದ್ದು, ಅವುಗಳು ಅಳಿವಿನ ಅಂಚಿಗೆ ತಲುಪುತ್ತಿವೆ. ಹವಾಮಾನ ವೈಪರೀತ್ಯ ಹಲವು ರೀತಿಯಲ್ಲಿ ಭೂ ಸವಕಳಿಗೆ ಕಾರಣವಾಗುತ್ತಿದೆ, ಅದು ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆ ಮತ್ತು ಅಲೆಗಳ ಏರಿಳಿತ ಹೆಚ್ಚಾಗುವುದಾಗಿರಬಹುದು, ಇಲ್ಲವೇ ಬಿರುಗಾಳಿಯಿಂದ ಕೂಡಿದ ಭಾರಿ ಮಳೆಯಾಗಿರಬಹುದು ಮತ್ತು ಬಿಸಿ ಉಷ್ಣಾಂಶದಿಂದ ಆಗುವ ಮರಳಿನ ಬಿರುಗಾಳಿ ಇರಬಹುದು. ಮಹಿಳೆಯರೇ ಮತ್ತು ಮಹನೀಯರೆ, ಭಾರತ ಮೂರು ಒಪ್ಪಂದಗಳಿಗೂ ಸಿಒಪಿಗಳನ್ನು ನಡೆಸುವ ಜಾಗತಿಕ ಪ್ರತಿನಿಧಿಗಳನ್ನು ಒಂದುಗೂಡಿಸಿ ಆತಿಥ್ಯವಹಿಸಿದೆ. ಇದು ರಿಯೋ ಒಪ್ಪಂದದ ಎಲ್ಲ ಮೂರು ಮುಖ್ಯ ಸಮಸ್ಯೆಗಳನ್ನು ಎದುರಿಸಲು ನಾವು ಬದ್ಧವಾಗಿದ್ದೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ.
ಹವಾಮಾನ ವೈಪರೀತ್ಯ, ಜೀವ ವೈವಿಧ್ಯತೆ ಮತ್ತು ಭೂ ಸವಕಳಿ ಈ ಮೂರು ಮುಖ್ಯ ಸಮಸ್ಯೆಗಳನ್ನು ಎದುರಿಸಲು ಭಾರತ ದಕ್ಷಿಣ-ದಕ್ಷಿಣ ಸಹಕಾರ ಹೆಚ್ಚಿಸುವ ಕ್ರಮಗಳ ಪ್ರಸ್ತಾವವನ್ನು ಮುಂದಿಡಲು ತುಂಬಾ ಸಂತೋಷವಾಗುತ್ತಿದೆ.
ಗೆಳೆಯರೇ, ಜಗತ್ತಿನ 23 ರಾಷ್ಟ್ರಗಳು ಭೂಮಿ ಮರುಭೂಮಿ ಆಗುತ್ತಿರುವ ಸಮಸ್ಯೆಯಿಂದ ಬಾಧಿತವಾಗಿವೆ ಎಂಬುದನ್ನು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ಇದರಿಂದಾಗಿ ನಾವು ಭೂಮಿ ರಕ್ಷಣೆಗೆ ಕಡ್ಡಾಯವಾಗಿ ಕ್ರಮ ಕೈಗೊಳ್ಳಬೇಕಾದ ತುರ್ತು ಸೃಷ್ಟಿಸಿದೆ ಮತ್ತು ಇದರ ಜೊತೆಗೆ ಜಗತ್ತು ಜಲ ಬಿಕ್ಕಟ್ಟು ಕೂಡ ಎದುರಿಸುತ್ತಿದೆ. ನಾವು ಫಲವತ್ತತೆ ಕಳೆದುಕೊಂಡ ಭೂಮಿಯ ಸಮಸ್ಯೆಯನ್ನು ಎದುರಿಸುವಾಗ, ಜಲ ಕ್ಷಾಮದ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಅಂತರ್ಜಲ ವೃದ್ಧಿ, ನೀರು ಹರಿದು ಹೋಗುವುದನ್ನು ತಡೆಯುವುದು ಮತ್ತು ಮಣ್ಣಿನಲ್ಲಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಕ್ರಮಗಳು ಸಮಗ್ರ ಭೂಮಿ ಮತ್ತು ಜಲ ಸಂರಕ್ಷಣೆ ಕಾರ್ಯತಂತ್ರಗಳಾಗಿವೆ. ಭೂ ಸವಕಳಿ ತಟಸ್ಥ ಕಾರ್ಯತಂತ್ರಕ್ಕಾಗಿ ಜಾಗತಿಕ ಜಲ ಕ್ರಿಯಾ ಅಜೆಂಡಾ ರೂಪಿಸಬೇಕೆಂದು ನಾನು ಯುಎನ್ ಸಿಸಿಡಿ ನಾಯಕತ್ವವನ್ನು ಆಗ್ರಹಿಸುತ್ತೇನೆ. ಗೆಳೆಯರೇ, ಭೂಮಿಯ ಆರೋಗ್ಯ ಸಂರಕ್ಷಣೆ ಸುಸ್ಥಿರ ಅಭಿವೃದ್ಧಿಗೆ ಅತ್ಯಂತ ಪ್ರಮುಖ ಅಂಶವಾಗಿದೆ. ಇಂದು ಪ್ಯಾರೀಸ್ ನಲ್ಲಿ ಯುಎನ್ ಎಫ್ ಸಿಸಿಸಿ ಆಯೋಜಿಸಿದ್ದ ಸಿಒಪಿಯಲ್ಲಿ ಭಾರತ ತನ್ನ ಸಲಹೆಗಳನ್ನು ಸಲ್ಲಿಸಿರುವುದು ನೆನಪಾಗುತ್ತಿದೆ.
ಅದರಲ್ಲಿ ಭೂಮಿ, ನೀರು, ವಾಯು, ಮರ ಮತ್ತು ಸಕಲ ಜೀವಜಂತುಗಳ ನಡುವೆ ಆರೋಗ್ಯಕರ ಸಮತೋಲನ ಕಾಯ್ದುಕೊಳ್ಳುವ ಅಂಶಗಳು ಭಾರತದ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿವುದುನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಗೆಳೆಯರೇ ಭಾರತದಲ್ಲಿ ಹಸಿರು ಹೊದಿಕೆ ಪ್ರಮಾಣ ಹೆಚ್ಚಾಗಿರುವುದು ನಿಮಗೆ ಸಂತೋಷವನ್ನುಂಟು ಮಾಡಬಹುದು. 2015ರಿಂದ 2017ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಮರ ಮತ್ತು ಅರಣ್ಯ ವ್ಯಾಪ್ತಿ 0.8 ಮಿಲಿಯನ್ ಹೆಕ್ಟೇರ್ ಹೆಚ್ಚಾಗಿದೆ.
ಭಾರತದಲ್ಲಿ ಯಾವುದೇ ಅರಣ್ಯ ಭೂಮಿಯನ್ನು ಅಭಿವೃದ್ಧಿ ಉದ್ದೇಶಕ್ಕೆ ಪರಿವರ್ತಿಸಿಕೊಂಡರೆ ಅದಕ್ಕೆ ಸಮನಾಗಿ ಸಾಮೂಹಿಕ ಅರಣ್ಯೀಕರಣಕ್ಕೆ ಮೀಸಲಾದ ಭೂಮಿಯಲ್ಲಿ ಗಿಡಗಳನ್ನು ನೆಡಬೇಕಾಗಿದೆ. ಅಲ್ಲದೆ ಅರಣ್ಯ ಭೂಮಿಯಿಂದ ಸಿಗಬಹುದಾದ ಇಳುವರಿಗೆ ಸಮನಾದ ಮರಹುಟ್ಟಿನ ಮೌಲ್ಯವನ್ನು ಹಣಕಾಸು ರೂಪದಲ್ಲಿ ಪಾವತಿ ಮಾಡುವ ಅಗತ್ಯವಿದೆ.
ಕಳೆದ ವಾರವಷ್ಟೇ ಅಭಿವೃದ್ಧಿಗೊಳಿಸಲಾದ ಅರಣ್ಯ ಪ್ರದೇಶಕ್ಕೆ ಬದಲಾಗಿ ಅರಣ್ಯವನ್ನು ಬೆಳೆಸಲು ಪ್ರಾದೇಶಿಕ ಸರ್ಕಾರಗಳಿಗೆ ಸುಮಾರು 6 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ 40 ರಿಂದ 50 ಸಾವಿರ ಕೋಟಿ ರೂಪಾಯಿಗಳ ನಿಧಿಯನ್ನು ಬಿಡುಗಡೆ ಮಾಡಿರುವುದನ್ನು ನಿಮಗೆ ತಳಿಸಲು ಹರ್ಷವಾಗುತ್ತಿದೆ.
ರೈತರ ಆದಾಯ ದುಪ್ಪಟ್ಟುಗೊಳಿಸುವ ಕಾರ್ಯಕ್ರಮವನ್ನು ತಮ್ಮ ಸರ್ಕಾರ ಆರಂಭಿಸಿದ್ದು, ರೈತರ ಬೆಳೆಗಳ ಇಳುವರಿ ಹೆಚ್ಚಳಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಭೂಸಂರಕ್ಷಣೆ ಮತ್ತು ಸಣ್ಣ ನೀರಾವರಿ ಕೂಡ ಸೇರಿದೆ. “ಪ್ರತಿ ಹನಿ, ಅಧಿಕ ಇಳುವರಿ” ಎಂಬ ಧ್ಯೇಯದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಅಲ್ಲದೆ, ಶೂನ್ಯ ಬಜೆಟ್ ನೈಸರ್ಗಿಕ ಕೃಷಿಗೆ ನಾವು ಆದ್ಯತೆ ನೀಡಿದ್ದೇವೆ. ಪ್ರತಿಯೊಂದು ಜಮೀನಿನ ಮಣ್ಣಿನ ಗುಣಮಟ್ಟ ಅರಿಯಲು ನಾವು ಯೋಜನೆಯೊಂದನ್ನು ಆರಂಭಿಸಿದ್ದು, ಎಲ್ಲ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ. ಇದರಿಂದಾಗಿ ರೈತರು ಯಾವ ಬಗೆಯ ಬೆಳೆಗಳನ್ನು ಬೆಳೆಯಬೇಕು, ಯಾವ ರಸಗೊಬ್ಬರಗಳನ್ನು ಬಳಸಬೇಕು ಮತ್ತು ಎಷ್ಟು ಪ್ರಮಾಣದ ನೀರು ಬಳಕೆ ಮಾಡಬೇಕು ಎಂಬುದನ್ನು ಅರಿಯಲು ಸಹಾಯವಾಗುತ್ತದೆ. ಈವರೆಗೆ ಸುಮಾರು 217 ಮಿಲಿಯನ್ ಮಣ್ಣಿನ ಆರೋಗ್ಯ ಕಾರ್ಡ್ ಗಳನ್ನು ವಿತರಿಸಲಾಗಿದೆ. ಅಲ್ಲದೆ ನಾವು ಜೈವಿಕ ರಸಗೊಬ್ಬರ ಬಳಕೆಯನ್ನು ಹೆಚ್ಚಿಸಲು ಉತ್ತೇಜಿಸುವ ಜೊತೆಗೆ ರೈತರಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ.
ಜಲ ನಿರ್ವಹಣೆ ಮತ್ತೊಂದು ಪ್ರಮುಖ ವಿಷಯವಾಗಿದ್ದು, ಒಟ್ಟಾರೆ ಜಲ ಸಂಬಂಧಿ ಪ್ರಮುಖ ವಿಷಯಗಳ ಬಗ್ಗೆ ನೀತಿ ನಿರ್ಧಾರಗಳನ್ನು ಕೈಗೊಳ್ಳಲು ನಾವು ಜಲಶಕ್ತಿ ಸಚಿವಾಲಯವನ್ನು ಸೃಷ್ಟಿಸಿದ್ದೇವೆ. ಎಲ್ಲ ಬಗೆಯ ನೀರಿನ ಮೌಲ್ಯವನ್ನು ನಾವು ಗುರುತಿಸಿ ಹಲವು ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಶೂನ್ಯ ದ್ರವ ತ್ಯಾಜ್ಯ ನೀತಿ ಜಾರಿಗೊಳಿಸಲಾಗಿದೆ. ತ್ಯಾಜ್ಯ ನೀರನ್ನು ಒಂದು ನಿಗದಿತ ಉಷ್ಣಾಂಶದಲ್ಲಿ ಸಂಸ್ಕರಿಸಿ ಮತ್ತೆ ಅದನ್ನು ನದಿ ವ್ಯವಸ್ಥೆಗೆ ಬಿಡಲಾಗುವುದು, ಇದರಿಂದ ನೀರಿನಲ್ಲಿನ ಯಾವುದೇ ಜೀವಕ್ಕೆ ಹಾನಿಯಾಗುವುದಿಲ್ಲ. ಗೆಳೆಯರೇ ನಾನು ಇನ್ನೊಂದು ಬಗೆಯ ಭೂಸವಕಳಿ ವಿಧಾನದ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಅದನ್ನು ನಾವು ತಡೆಯಲು ಸಾಧ್ಯವಿಲ್ಲ ಮತ್ತು ಅದನ್ನು ಪೂರ್ವ ಸ್ಥಿತಿಗೆ ಮರಳಿಸುವುದು ಕೂಡ ಅಸಾಧ್ಯ. ಇದು ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ. ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ಜೊತೆಗೆ ಭೂಮಿಯನ್ನು ಕೃಷಿಗೆ ಯೋಗ್ಯವಲ್ಲದ ಮತ್ತು ಅನುತ್ಪಾದಕಗೊಳಿಸುತ್ತಿದೆ.
ತಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಭಾರತ ಏಕ ಅಥವಾ ಬಿಡಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸುತ್ತದೆ ಎಂದು ಪ್ರಕಟಿಸಿದೆ. ಅದಕ್ಕೆ ಪರ್ಯಾಯವಾಗಿ ನಾವು ಹಲವು ಪರಿಸರಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಬದ್ಧವಾಗಿದ್ದೇವೆ ಮತ್ತು ಪರಿಣಾಮಕಾರಿಯಾಗಿ ಪ್ಲಾಸ್ಟಿಕ್ ಸಂಗ್ರಹ ಮಾಡಿ ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಗುವುದು.
ಜಗತ್ತು ಬಿಡಿ ಅಥವಾ ಏಕ ಪ್ಲಾಸ್ಟಿಕ್ ಬಳಕೆಗೆ ವಿದಾಯ ಹೇಳುವ ಕಾಲ ಬಂದಿದೆ ಎಂದು ನನಗೆ ಅನಿಸುತ್ತಿದೆ.
ಗೆಳೆಯರೇ, ಮಾನವ ಸಬಲೀಕರಣ, ಆ ರಾಜ್ಯದ ಪರಿಸರದ ಜೊತೆ ನಿಕಟ ಬಾಂಧವ್ಯ ಹೊಂದಿರುತ್ತದೆ. ಅದು ಜಲಸಂಪನ್ಮೂಲಗಳ ಸದ್ಬಳಕೆ ಆಗಿರಬಹುದು ಅಥವಾ ಪ್ಲಾಸ್ಟಿಕ್ ಬಳಕೆ ತಗ್ಗಿಸಬಹುದಾಗಿರಬಹುದು, ಇಲ್ಲವೇ ವರ್ತನೆಯಲ್ಲಿನ ಬದಲಾವಣೆ ತಂದುಕೊಂಡು ಮುಂದಡಿ ಇಡುವುದಾಗಿರಬಹುದು. ಸಮಾಜದ ಎಲ್ಲ ವರ್ಗಗಗಳು ನಿರ್ಧರಿಸಿದರೆ ಏನಾದರೂ ಸಾಧಿಸಿ, ನಿಗದಿತ ಫಲಿತಾಂಶಗಳನ್ನು ಪಡೆಯುವುದು ಸಾಧ್ಯ.
ನಾವು ನೀತಿ ನಿರೂಪಣೆಯಲ್ಲಿ ಎಷ್ಟೇ ಬದಲಾವಣೆಗಳನ್ನು ತಂದರೂ ಸಹ ತಳಮಟ್ಟದಲ್ಲಿ ತಂಡಗಳಿಂದ ಕೆಲಸಗಳಾದರೆ ಮಾತ್ರ ಬದಲಾವಣೆಯನ್ನು ವಾಸ್ತವದಲ್ಲಿ ಕಾಣಬಹುದು. ಭಾರತ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಇದನ್ನು ಕಂಡಿದೆ. ದೇಶದ ಎಲ್ಲ ವರ್ಗದ ಜನರು ಇದರಲ್ಲಿ ಭಾಗವಹಿಸಿದ್ದರಿಂದ ನೈರ್ಮಲೀಕರಣ ವ್ಯಾಪ್ತಿ 2014ರಲ್ಲಿ ಶೇಕಡ 38ರಷ್ಟಿದ್ದದ್ದು ಇಂದು ಶೇ.99ಕ್ಕೆ ಏರಿಕೆಯಾಗಿರುವುದೇ ಸಾಕ್ಷಿ.
ಅದೇ ರೀತಿಯ ಸ್ಫೂರ್ತಿಯನ್ನು ನಾವು ಇದೀಗ ಬಿಡಿ ಪ್ಲಾಸ್ಟಿಕ್ ಬಳಕೆ ಕೊನೆಗಾಣಿಸುವ ಅಭಿಯಾನದಲ್ಲೂ ಕಾಣುತ್ತಿದ್ದು, ವಿಶೇಷವಾಗಿ ಯುವಜನಾಂಗ ಹೆಚ್ಚಿನ ಬೆಂಬಲ ನೀಡುತ್ತಿರುವ ಜೊತೆಗೆ ಅವರೇ ಮುಂದೆ ನಿಂತು ಸಕಾರಾತ್ಮಕ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮವೂ ಕೂಡ ಅತ್ಯಂತ ಮೌಲ್ಯಯುತ ಪಾತ್ರವನ್ನು ವಹಿಸುತ್ತಿದೆ.
ಗೆಳೆಯರೇ, ಜಾಗತಿಕ ಭೂ ಅಜೆಂಡಾಕ್ಕೆ ನಾನು ಮತ್ತೊಂದು ಬದ್ಧತೆಯನ್ನು ಪ್ರಕಟಿಸುತ್ತಿದ್ದೇನೆ. ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿರುವ ಎಲ್ ಡಿ ಎನ್(ಭೂ ಸವಕಳಿ ತಟಸ್ಥ ಕಾರ್ಯತಂತ್ರ)ಗಳನ್ನು ಅರ್ಥಮಾಡಿಕೊಂಡು ಅಳವಡಿಸಿಕೊಳ್ಳಲು ಮುಂದಾಗುವ ರಾಷ್ಟ್ರಗಳಿಗೆ ಭಾರತ ಬೆಂಬಲ ನೀಡುತ್ತದೆ. ಈ ವೇದಿಕೆಯ ಮೂಲಕ ನಾನು ಪ್ರಕಟಿಸಲು ಬಯಸುವುದೆಂದರೆ ಈಗಿನಿಂದ 2030ರ ನಡುವಿನ ಅವಧಿಯಲ್ಲಿ ಭೂ ಸವಕಳಿ ಸ್ಥಿತಿಯನ್ನು 21 ಮಿಲಿಯನ್ ಹೆಕ್ಟೇರ್ ನಿಂದ 26 ಮಿಲಿಯನ್ ಹೆಕ್ಟೇರ್ಗೆ ಮತ್ತೆ ಪೂರ್ವ ಸ್ಥಿತಿಗೆ ತರುವ ಗುರಿಯನ್ನು ಹೊಂದಿದೆ.
ಇದು ಭಾರತದ ದೊಡ್ಡ ಬದ್ಧತೆಯ ಅರಣ್ಯ ವ್ಯಾಪ್ತಿ ವಿಸ್ತರಿಸುವ ಮೂಲಕ ಕಾರ್ಬನ್ ಸಿನ್ ಅನ್ನು 2.5 ಬಿಲಿಯನ್ ಮೆಟ್ರಿಕ್ ಟನ್ ನಿಂದ 3 ಬಿಲಿಯನ್ ಮೆಟ್ರಿಕ್ ಟನ್ ಗೆ ಏರಿಸುವ ಹೆಚ್ಚುವರಿ ಗುರಿಯನ್ನು ಭಾರತ ಬೆಂಬಲಿಸುತ್ತದೆ.
ಭೂ ಸವಕಳಿ ತಡೆಗಟ್ಟುವುದು ಸೇರಿದಂತೆ ಹಲವು ಕಾರ್ಯಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ದೂರಸಂವೇದಿ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿರುವುದು ಭಾರತಕ್ಕೆ ಹೆಮ್ಮೆ ಎನಿಸುತ್ತದೆ. ಭಾರತ ಇತರೆ ಮಿತ್ರ ರಾಷ್ಟ್ರಗಳಿಗೆ ಕಡಿಮೆ ವೆಚ್ಚದ ಉಪಗ್ರಹ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಭೂ ಮರುಸ್ಥಾಪನೆ ಕಾರ್ಯತಂತ್ರಗಳನ್ನು ಅಭಿವೃದ್ಧಿಗೊಳಿಸಲು ಸಹಾಯ ನೀಡುತ್ತದೆ ಎಂದು ಹೇಳಲು ಸಂತಸವಾಗುತ್ತಿದೆ.
ಭೂ ಸವಕಳಿ ವಿಷಯಗಳನ್ನು ಎದುರಿಸಲು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಮತ್ತು ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸಲು ಭಾರತದಲ್ಲಿ ಭಾರತೀಯ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಮಂಡಳಿಯಲ್ಲಿ ಜೇಷ್ಠತಾ ಕೇಂದ್ರ(ಎಕ್ಸಲೆನ್ಸ್ ಸೆಂಟರ್) ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ. ಇದು ಭೂ ಸವಕಳಿ ಸಂಬಂಧಿ ವಿಷಯಗಳನ್ನು ಎದುರಿಸಲು ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡುವುದು, ತಂತ್ರಜ್ಞಾನ ಮತ್ತು ಜ್ಞಾನ ವಿನಿಮಯಕ್ಕೆ ದಕ್ಷಿಣ-ದಕ್ಷಿಣ ಸಹಕಾರದಲ್ಲಿ ಕ್ರಿಯಾಶೀಲವಾಗಿರಲು ನೆರವಾಗುತ್ತದೆ.
ಗೆಳೆಯರೇ, ಮಹತ್ವಾಕಾಂಕ್ಷೆಯ ನವದೆಹಲಿ ಘೋಷಣೆಯನ್ನು ಪರಿಗಣಿಸಲಾಗುತ್ತಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. 2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಬೇಕು ಎಂಬುದರ ಅರಿವು ನಮಗೆಲ್ಲಾ ಇದೆ, ಅದರಲ್ಲಿ ಎಲ್ ಡಿ ಎನ್ ಕೂಡ ಅದರ ಒಂದು ಭಾಗವಾಗಿದೆ. ಆದ್ದರಿಂದ ನಾನು ಭೂ ಸವಕಳಿ ತಟಸ್ಥ ಜಾಗತಿಕ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಸಮಾಲೋಚನೆಗಳು ನಡೆಯಬೇಕು ಎಂದು ಬಯಸುತ್ತೇನೆ.
ನಮ್ಮ ಪ್ರಾಚೀನ ಪುರಾಣಗಳಲ್ಲಿರುವ ಒಂದು ತುಂಬಾ ಜನಪ್ರಿಯ ಪ್ರಾರ್ಥನೆಯನ್ನು ಹೇಳುವ ಮೂಲಕ ನಾನು ಭಾಷಣವನ್ನು ಸಮಾಪ್ತಿಗೊಳಿಸುತ್ತೇನೆ.
ओम् द्यौः शान्तिः, अन्तरिक्षं शान्तिः
ಶಾಂತಿ ಎಂಬ ಅಕ್ಷರ ಕೇವಲ ಶಾಂತಿಯನ್ನು ಮಾತ್ರ ಉಲ್ಲೇಖಿಸುವುದಿಲ್ಲ. ಅದು ಹಿಂಸೆಗೆ ವಿರುದ್ಧವಾದ ಪದವೂ ಅಲ್ಲ, ಇಲ್ಲಿ ಅದು ಅಭ್ಯುದಯವನ್ನು ಉಲ್ಲೇಖಿಸುತ್ತದೆ.
ಪ್ರತಿಯೊಂದಕ್ಕೂ ಒಂದು ಕಾನೂನು ಉದ್ದೇಶವಿರುತ್ತದೆ ಮತ್ತು ಪ್ರತಿಯೊಬ್ಬರೂ ಆ ಒಂದು ಉದ್ದೇಶವನ್ನು ಈಡೇರಿಸಬೇಕು.
ओम् द्यौः शान्तिः, अन्तरिक्षं शान्तिः
ಗುರಿ ಈಡೇರಿಸುವುದು ಒಂದು ಬಗೆಯ ಅಭ್ಯುದಯ ಆದ್ದರಿಂದ ಇದು ಆಗಸ, ಸ್ವರ್ಗ ಮತ್ತು ಬಾಹ್ಯಾಕಾಶ ಕೂಡ ಅಭಿವೃದ್ಧಿಯಾಗಲಿ
पृथिवी शान्तिः, आपः शान्तिः,
ओषधयः शान्तिः, वनस्पतयः शान्तिः, विश्वेदेवाः शान्तिः,
ब्रह्म शान्तिः
ಭೂ ತಾಯಿ ಕೂಡ ಅಭಿವೃದ್ಧಿ ಹೊಂದಲಿ ಇದರಲ್ಲಿ ನಮ್ಮ ಪ್ರಾಣಿ ಮತ್ತು ಸಸ್ಯ ಪ್ರಬೇಧಗಳು ಸೇರಿವೆ. ಏಕೆಂದರೆ ನಾವು ನಮ್ಮ ಗ್ರಹವನ್ನು ಅವುಗಳೊಂದಿಗೆ ಹಂಚಿಕೊಂಡಿದ್ದೇವೆ.
सर्वं शान्तिः, शान्तिरेव शान्तिः,
सा मे शान्तिरेधि।।
ಅವುಗಳೂ ಕೂಡ ಅಭ್ಯುದಯ ಹೊಂದಲಿ ಪ್ರತಿಯೊಂದು ಹನಿ ನೀರು ಅಭ್ಯುದಯವಾಗಲಿ
ओम् शान्तिः शान्तिः शान्तिः।।
ಸ್ವರ್ಗದಲ್ಲಿರುವ ದೇವರೂ ಕೂಡ ಅಭ್ಯುದಯವಾಗಲಿ ಸಕಲರೂ ಶ್ರೇಯೋಭಿವೃದ್ಧಿ ಹೊಂದಲಿ.
ಓಂ ಶಾಂತಿಃ ಶಾಂತಿಃ ಶಾಂತಿಃ ||
ಓಂ ಶ್ರೇಯೋಭಿವೃದ್ಧಿ, ಶ್ರೇಯೋಭಿವೃದ್ಧಿ, ಶ್ರೇಯೋಭಿವೃದ್ಧಿ.
ನಮ್ಮ ಪೂರ್ವಜರ ಚಿಂತನೆ ಮತ್ತು ತತ್ವ ಶ್ರೇಷ್ಠ ವಿಚಾರಧಾರೆಗಳಿಂದ ತುಂಬಿಕೊಂಡಿತ್ತು. ಅವರು ನಾನು ಮತ್ತು ನಾವು ಎಂಬುದರ ನಡುವಿನ ವಾಸ್ತವ ಸಂಬಂಧವನ್ನು ಚೆನ್ನಾಗಿ ಅರಿತಿದ್ದರು. ಅವರಿಗೆ ಚೆನ್ನಾಗಿ ಗೊತ್ತಿತ್ತು ನನ್ನ ಶ್ರೇಯೋಭಿವೃದ್ಧಿ ಎಂದರೆ ಅದು ನಮ್ಮ ಶ್ರೇಯೋಭಿವೃದ್ಧಿಯಿಂದ ಮಾತ್ರ ಸಾಧ್ಯ ಎಂಬುದು.
ನಮ್ಮ ಪೂರ್ವಜರು ಹೇಳಿದ್ದು, ನಾವು ಎಂದರೆ ನಮ್ಮ ಕುಟುಂಬ ಮಾತ್ರವಲ್ಲ ಅಥವಾ ಸಮುದಾಯ ಅಥವಾ ಇಡೀ ಮನುಕುಲವಲ್ಲ, ಅದರಲ್ಲಿ ಆಕಾಶ, ನೀರು, ಗ್ರಹ, ಮರಗಳು.. ಎಲ್ಲವೂ ಸೇರಿತ್ತು.
ಅವರು ಶಾಂತಿ ಮತ್ತು ಶ್ರೇಯೋಭಿವೃದ್ಧಿಗೆ ಯಾವ ಅನುಕ್ರಮದಲ್ಲಿ ಪ್ರಾರ್ಥನೆ ಮಾಡುತ್ತಿದ್ದರು ಎಂಬುದನ್ನು ತಿಳಿಯುವುದು ಕೂಡ ಅತಿಮುಖ್ಯವಾದುದು. ಅವರು ಆಕಾಶವನ್ನು ಪ್ರಾರ್ಥಿಸುತ್ತಿದ್ದರು. ಆನಂತರ ಭೂಮಿ, ನೀರು ಮತ್ತು ಗ್ರಹಗಳನ್ನು ಪ್ರಾರ್ಥಿಸುತ್ತಿದ್ದರು, ಏಕೆಂದರೆ ಇವೆಲ್ಲಾ ನಮ್ಮನ್ನು ಸುಸ್ಥಿರವಾಗಿ ಇಡುವಂತಹವು. ಇದನ್ನೇ ನಾವು ಪರಿಸರ ಎಂದು ಕರೆಯುತ್ತೇವೆ. ಇವೆಲ್ಲಾ ಅಭಿವೃದ್ಧಿ ಹೊಂದಿದರೆ ನಂತರ ನಾನು ಅಭಿವೃದ್ಧಿ ಹೊಂದುತ್ತೇನೆ ಎಂಬುದು ಅವರ ಮಂತ್ರವಾಗಿತ್ತು. ಇಂದಿಗೂ ಸಹ ಆ ಚಿಂತನೆಗಳು ಅತ್ಯಂತ ಪ್ರಸ್ತುತವಾಗಿವೆ.
ಅದೇ ಸ್ಫೂರ್ತಿಯೊಂದಿಗೆ ಈ ಶೃಂಗಸಭೆಯಲ್ಲಿ ಭಾಗವಹಿಸಿರುವ ನಿಮ್ಮೆಲ್ಲರನ್ನೂ ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ.
ಧನ್ಯವಾದಗಳು,
ತುಂಬಾ ತುಂಬಾ ಧನ್ಯವಾದಗಳು.