“ಜಲ್ ಜೀವನ್ ಅಭಿಯಾನ ವಿಕೇಂದ್ರೀಕರಣದ ದೊಡ್ಡ ಚಳವಳಿಯೂ ಆಗಿದೆ. ಇದು ಗ್ರಾಮಚಾಲಿತ-ಮಹಿಳಾ –ಚಾಲಿತ ಚಳವಳಿ. ಇದರ ಮೂಲ ನೆಲೆ ಜನಾಂದೋಲನ ಮತ್ತು ಸಾರ್ವಜನಿಕ ಪಾಲ್ಗೊಳ್ಳುವಿಕೆ”
“ಜನರಿಗೆ ಕೊಳವೆ ಮೂಲಕ ನೀರು ತಲುಪಿಸಲು ಕೇವಲ ಎರಡು ವರ್ಷಗಳಲ್ಲಿ ಕಳೆದ ಏಳು ದಶಕಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸ ಮಾಡಲಾಗಿದೆ”
“ಗುಜರಾತ್ ನಂತಹ ರಾಜ್ಯದಿಂದ ಬಂದ ನಾನು ಬರದಂತಹ ಪರಿಸ್ಥಿತಿಯನ್ನು ಕಂಡಿದ್ದೇನೆ ಮತ್ತು ಪ್ರತಿ ಹನಿ ನೀರಿನ ಪ್ರಾಮುಖ್ಯವನ್ನು ಅರಿತುಕೊಂಡಿದ್ದೇನೆ. ಹೀಗಾಗಿಯೇ, ಗುಜರಾತ್ ಮುಖ್ಯಮಂತ್ರಿಯಾಗಿ ನೀರಿನ ಲಭ್ಯತೆ ಮತ್ತು ಜಲ ಸಂರಕ್ಷಣೆ ನನ್ನ ಆದ್ಯತೆಗಳಲ್ಲಿ ಒಂದಾಗಿತ್ತು”
“ಇಂದು, ದೇಶದ ಸುಮಾರು 80 ಜಿಲ್ಲೆಗಳ ಸುಮಾರು 1.25 ಲಕ್ಷ ಗ್ರಾಮಗಳ ಪ್ರತಿ ಮನೆಗೆ ನೀರು ತಲುಪುತ್ತಿದೆ”
“ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಕೊಳವೆ ನೀರಿನ ಸಂಪರ್ಕಗಳ ಸಂಖ್ಯೆ 31 ಲಕ್ಷದಿಂದ 1.16 ಕೋಟಿಗೆ ಹೆಚ್ಚಳವಾಗಿದೆ”
“ಪ್ರತಿ ಮನೆ ಮತ್ತು ಶಾಲೆಯಲ್ಲೂ ಶೌಚಾಲಯ, ಅಗ್ಗದ ದರದ ಸ್ಯಾನಿಟರಿ ಪ್ಯಾಡ್ ಗಳು, ಗರ್ಭಿಣಿಯರಿಗೆ ಪೌಷ್ಟಿಕಾಂಶದ ಬೆಂಬಲ ಮತ್ತು ಲಸಿಕೆ ‘ಮಾತೃ ಶಕ್ತಿ’ ಬಲಪಡಿಸಿವೆ”

ನಮಸ್ಕಾರ,

ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಗಜೇಂದ್ರ ಸಿಂಗ್ ಶೆಖಾವತ್ ಜೀ, ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಜೀ, ಶ್ರೀ ಬಿಶ್ವೇಶ್ವರ್ ತುಡು ಜೀ, ಮುಖ್ಯ ಮಂತ್ರಿಗಳೇ ಮತ್ತು ರಾಜ್ಯಗಳ ಸಚಿವರೇ, ದೇಶಾದ್ಯಂತದ ಪಂಚಾಯತ್ ಗಳ ಮತ್ತು ಪಾನಿ ಸಮಿತಿಗಳ ಸದಸ್ಯರೇ ಮತ್ತು ಈ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಪಾಲ್ಗೊಂಡಿರುವ ನನ್ನ ಸಹೋದರರೇ ಮತ್ತು ಸಹೋದರಿಯರೇ,

ಅಕ್ಟೋಬರ್ 2ರಂದು ನಾವು ಈ ದೇಶದ ಇಬ್ಬರು ಶ್ರೇಷ್ಠ ಪುತ್ರರನ್ನು ಬಹಳ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ. ಭಾರತದ ಹಳ್ಳಿಗಳು, ಗ್ರಾಮಗಳು ಬಹಳ ಉನ್ನತ ವ್ಯಕ್ತಿತ್ವವನ್ನು ಹೊಂದಿದ್ದ ಈ ಇಬ್ಬರು ಮಹನೀಯರಾದ ಪೂಜ್ಯ ಬಾಪು ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜೀ ಅವರ ಹೃದಯದ ಭಾಗವಾಗಿದ್ದವು. ’ಗ್ರಾಮ ಸಭಾ’ಗಳ ಮಾದರಿಯಲ್ಲಿ ’ಜಲ ಜೀವನ ಸಂವಾದ’ವನ್ನು ಇಂದು ದೇಶಾದ್ಯಂತ ಲಕ್ಷಾಂತರ ಹಳ್ಳಿಗಳಲ್ಲಿ ಆಯೋಜಿಸುತ್ತಿರುವುದು ನನಗೆ ಸಂತೋಷ ತಂದಿದೆ. ಇಂತಹ ಅಭೂತಪೂರ್ವ ಮತ್ತು ರಾಷ್ಟ್ರವ್ಯಾಪೀ ಆಂದೋಲನ ಈ ರೀತಿಯ ಉತ್ಸಾಹ ಮತ್ತು ಶಕ್ತಿಯಿಂದಷ್ಟೇ ಯಶಸ್ಸು ಗಳಿಸುವುದು ಸಾಧ್ಯ. ಜಲ್ ಜೀವನ್ ಆಂದೋಲನದ ಉದ್ದೇಶ ಜನರಿಗೆ ನೀರು ಲಭ್ಯವಾಗುವಂತೆ ಮಾಡುವುದು ಮಾತ್ರ ಅಲ್ಲ. ಇದು ಬಹಳ ದೊಡ್ಡ ವಿಕೇಂದ್ರೀಕರಣ ಚಳವಳಿ. ಇದು ಗ್ರಾಮ ಕೇಂದ್ರಿತ ಮತ್ತು ಮಹಿಳೆಯರಿಂದ ಚಾಲಿತವಾಗುವ ಆಂದೋಲನ. ಇದರ ಮುಖ್ಯ ಭೂಮಿಕೆ ಜನಾಂದೋಲನ ಮತ್ತು ಸಾರ್ವಜನಿಕ ಸಹಭಾಗಿತ್ವ. ಮತ್ತು ನಾವಿಂದು ಇದರ ಸಾಧ್ಯತೆಯನ್ನು ಈ ಕಾರ್ಯಕ್ರಮದಲ್ಲಿ ನೋಡುತ್ತಿದ್ದೇವೆ.

ಸಹೋದರರೇ ಮತ್ತು ಸಹೋದರಿಯರೇ,

ಜಲ್ ಜೀವನ್ ಆಂದೋಲನ ಹೆಚ್ಚು ಸಶಕ್ತೀಕರಣಗೊಳ್ಳಲು ಮತ್ತು ಪಾರದರ್ಶಕವಾಗಲು ಇಂದು ಇನ್ನೂ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಆಂದೋಲನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳೂ ಜಲ್ ಜೀವನ್ ಆಂದೋಲನ ಆಪ್ ನಲ್ಲಿ ಲಭ್ಯವಿರುತ್ತವೆ. ಎಷ್ಟು ಮನೆಗಳಿಗೆ ನೀರು ಲಭಿಸುತ್ತಿದೆ, ನೀರಿನ ಗುಣಮಟ್ಟ, ನೀರು ಪೂರೈಕೆ ಯೋಜನೆಯ ವಿವರಗಳು ಇತ್ಯಾದಿಗಳು ಅಲ್ಲಿ ಲಭ್ಯವಿರುತ್ತವೆ. ಅದು ನಿಮ್ಮ ಗ್ರಾಮಗಳ ಮಾಹಿತಿಯನ್ನೂ ಒಳಗೊಂಡಿರುತ್ತದೆ. ನೀರಿನ ಗುಣಮಟ್ಟ ಮೇಲುಸ್ತುವಾರಿ  ಮತ್ತು ನಿಗಾ ಚೌಕಟ್ಟು ನೀರಿನ ಗುಣಮಟ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಗ್ರಾಮಗಳ ಜನರು ಕೂಡಾ ನೀರಿನ ಶುದ್ಧತೆ ಬಗ್ಗೆ ಈ ಆಪ್ ಮೂಲಕ ನಿಕಟ ನಿಗಾ ಇಡಲು ಸಾಧ್ಯವಾಗುತ್ತದೆ.

ಸ್ನೇಹಿತರೇ,

ಈ ವರ್ಷ ನಾವು ಪೂಜ್ಯ ಬಾಪು ಅವರ ಜನ್ಮದಿನವನ್ನು ಸ್ವಾತಂತ್ರ್ಯದ ಪುಣ್ಯಕರವಾದ ಸಂದರ್ಭದ ಜೊತೆಗೆ ಆಚರಿಸುತ್ತಿದ್ದೇವೆ. ಬಾಪು ಅವರ ಕನಸುಗಳನ್ನು ನನಸಾಗುವಂತೆ ಮಾಡಲು ಜನತೆ ಅವಿಶ್ರಾಂತವಾಗಿ ಕಾರ್ಯ ನಿರ್ವಹಿಸಿದರು ಮತ್ತು ತಮ್ಮ ಬೆಂಬಲವನ್ನು ನೀಡಿದರು ಎಂಬುದು ಬಹಳ ದೊಡ್ಡ ತೃಪ್ತಿಯ ಸಂಗತಿ. ಇಂದು ದೇಶದ ನಗರಗಳು ಮತ್ತು ಗ್ರಾಮಗಳು ಬಯಲು ಶೌಚ ಮುಕ್ತ ಎಂದು ಘೋಷಿಸಲ್ಪಟ್ಟಿವೆ. ಸುಮಾರು ಎರಡು ಲಕ್ಷ ಹಳ್ಳಿಗಳು ತ್ಯಾಜ್ಯ ನಿರ್ವಹಣೆಯಲ್ಲಿ ನಿರತವಾಗಿವೆ. 40,000 ಕ್ಕೂ ಅಧಿಕ ಗ್ರಾಮ ಪಂಚಾಯತ್‌ಗಳು ಏಕ ಬಳಕೆ ಪ್ಲಾಸ್ಟಿಕನ್ನು ನಿಲ್ಲಿಸಲು ನಿರ್ಧರಿಸಿವೆ. ಖಾದಿ, ಬಹಳ ದೀರ್ಘ ಕಾಲದಿಂದ ನಿರ್ಲಕ್ಷಕ್ಕೆ ಬಲಿಯಾಗಿತ್ತು, ಈಗ ಅದನ್ನು ಅನೇಕ ಪಟ್ಟು ಹೆಚ್ಚು ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಎಲ್ಲಾ ಪ್ರಯತ್ನಗಳ ಮೂಲಕ, ದೇಶವು ಆತ್ಮ ನಿರ್ಭರ ಆಂದೋಲನದ ದೃಢ ನಿರ್ಧಾರದೊಂದಿಗೆ  ಮುನ್ನಡೆಯುತ್ತಿದೆ.

ಸ್ನೇಹಿತರೇ,

ಗಾಂಧೀಜಿ ಹೇಳುತ್ತಿದ್ದರು ’ಗ್ರಾಮ ಸ್ವರಾಜ್ಯ’ದ ನೈಜ ಅರ್ಥವೆಂದರೆ ಅದು ಆತ್ಮವಿಶ್ವಾಸದಿಂದ ಪುಟಿಯುತ್ತಿರುವುದು ಎಂದು. ಆದುದರಿಂದ ಗ್ರಾಮ ಸ್ವರಾಜ್ಯದ ಈ ತತ್ವ ವಾಸ್ತವವಾಗಬೇಕು ಎನ್ನುವುದು ನನ್ನ ಸತತ ಆಶಯವಾಗಿದೆ. ಗುಜರಾತಿನಲ್ಲಿ ನನ್ನ ಬಹಳ ದೀರ್ಘ ಅಧಿಕಾರಾವಧಿಯಲ್ಲಿ ಗ್ರಾಮ ಸ್ವರಾಜ್ಯದ ಮುನ್ನೋಟವನ್ನು ,ಕಲ್ಪನೆಯನ್ನು ಅರಿತುಕೊಳ್ಳುವ ಅವಕಾಶ ನನಗೆ ಲಭ್ಯವಾಗಿತ್ತು. ನಿರ್ಮಲ ಗಾಂವ್ ಅಡಿಯಲ್ಲಿ ಬಯಲು ಶೌಚ ಮುಕ್ತ  ನಿರ್ಧಾರ, ಜಲ್ ಮಂದಿರ್ ಆಂದೋಲನದ ಅಂಗವಾಗಿ ಹಳೆಯ ಮೆಟ್ಟಿಲು ಬಾವಿಗಳ ಪುನಶ್ಚೇತನ,  ಜ್ಯೋತಿ ಗ್ರಾಮ ಯೋಜನೆ ಅಡಿಯಲ್ಲಿ ಗ್ರಾಮಗಳಿಗೆ 24 ಗಂಟೆ ವಿದ್ಯುತ್, ತೀರ್ಥ ಗ್ರಾಮ ಯೋಜನೆ ಅಡಿಯಲ್ಲಿ ಗ್ರಾಮಗಳಲ್ಲಿ ಸೌಹಾರ್ದಕ್ಕೆ ಉತ್ತೇಜನ, ಇ-ಗ್ರಾಮ ಮೂಲಕ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ, ಮುಂತಾದ ಪ್ರಯತ್ನಗಳ ಮೂಲಕ ಅಭಿವೃದ್ಧಿಯಲ್ಲಿ ರಾಜ್ಯವು ಮುಂಚೂಣಿಯಲ್ಲಿರುವಂತೆ ಮಾಡಲಾಗಿತ್ತು. ಕಳೆದೆರಡು ದಶಕಗಳಲ್ಲಿ ಗುಜರಾತ್ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಇಂತಹ ಕಾರ್ಯಕ್ರಮಗಳಿಗಾಗಿ, ಅದರಲ್ಲೂ ವಿಶೇಷವಾಗಿ ನೀರಿಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆಯಿತು.

ಸ್ನೇಹಿತರೇ,

ದೇಶವು 2014ರಲ್ಲಿ ನನಗೆ ಹೊಸ ಜವಾಬ್ದಾರಿಯನ್ನು ನೀಡಿದಾಗ, ನನಗೆ ಗುಜರಾತಿನ ಗ್ರಾಮ ಸ್ವರಾಜ್ಯದ ಅನುಭವವನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸುವ ಅವಕಾಶ ಲಭಿಸಿತು. ಗ್ರಾಮ ಸ್ವರಾಜ್ಯ ಎಂದರೆ ಪಂಚಾಯತ್ ಗಳಿಗೆ ಚುನಾವಣೆ ನಡೆಸುವುದು ಮಾತ್ರವಲ್ಲ, ಅಥವಾ ಸರಪಂಚರನ್ನು ಆಯ್ಕೆ ಮಾಡುವುದು ಮಾತ್ರವಲ್ಲ, ಗ್ರಾಮಗಳ ಜನತೆ ಗ್ರಾಮಗಳ ಅಭಿವೃದ್ಧಿ ಕೆಲಸಗಳ ಯೋಜನೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಗ್ರಾಮ ಸ್ವರಾಜ್ಯ ಹೆಚ್ಚು ಉಪಯುಕ್ತವಾಗುತ್ತದೆ. ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಸರಕಾರವು 2.25 ಲಕ್ಶ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ನೇರವಾಗಿ ಗ್ರಾಮ ಪಂಚಾಯತ್ ಗಳಿಗೆ ನೀಡಿದೆ. ಅದರಲ್ಲೂ ವಿಶೇಷವಾಗಿ ನೀರು ಮತ್ತು ನೈರ್ಮಲ್ಯಕ್ಕಾಗಿ ಈ ಹಣವನ್ನು ಒದಗಿಸಲಾಗಿದೆ. ಈಗ ಒಂದೆಡೆ ಗ್ರಾಮ ಪಂಚಾಯತ್ ಗಳಿಗೆ ಹೆಚ್ಚು ಹೆಚ್ಚು ಅಧಿಕಾರ ಒದಗಿಸುತ್ತಿರುವಂತೆ ಇನ್ನೊಂದೆಡೆ ಪಾರದರ್ಶಕತೆಗೂ ಗಮನ ನೀಡಲಾಗುತ್ತಿದೆ. ಜಲ್ ಜೀವನ್ ಮಿಷನ್ ಮತ್ತು ಪಾನಿ ಸಮಿತಿಗಳು (ಜಲ ಸಮಿತಿಗಳು) ಗ್ರಾಮ ಸ್ವರಾಜ್ಯದತ್ತ ಕೇಂದ್ರ ಸರಕಾರದ ಬದ್ಧತೆಗೆ ದೊಡ್ಡ ಸಾಕ್ಷಿಗಳು.

ಸ್ನೇಹಿತರೇ,

ಹಳ್ಳಿಗಳಲ್ಲಿ ನೀರನ್ನು ತರಲು ಮಹಿಳೆಯರು ಮತ್ತು ಮಕ್ಕಳು ಹೇಗೆ ಮೈಲುಗಟ್ಟಲೆ ನಡೆಯುತ್ತಾರೆ ಎಂಬ ಬಗ್ಗೆ ವಿವರವಾಗಿ ಹೇಳುವ ಹಲವು ಚಲನಚಿತ್ರಗಳನ್ನು ನಾವು ನೋಡಿದ್ದೇವೆ. ಆ ಬಗ್ಗೆ ಕಥೆಗಳನ್ನು ಓದಿದ್ದೇವೆ ಮತ್ತು ಕಾವ್ಯವನ್ನು ಕೇಳಿದ್ದೇವೆ. ಹಳ್ಳಿಗಳ ವಿಷಯ ಬಂದಾಗ ಜನರ ಮನಸ್ಸಿನಲ್ಲಿ ಇಂತಹ ಹೋರಾಟದ ಚಿತ್ರಗಳು ಮೂಡಿರುತ್ತವೆ. ಬಹಳ ಕಡಿಮೆ ಸಂಖ್ಯೆಯ ಜನರು ಮಾತ್ರ ತಮ್ಮ ಮನಸ್ಸಿನಲ್ಲಿ ಈ ಜನರು ಪ್ರತೀ ದಿನ ಯಾಕೆ ನದಿಗಳಿಗೆ ಅಥವಾ ಕೆರೆಗಳಿಗೆ ಹೋಗಬೇಕು ಮತ್ತು ಅವರಿಗೆ ನೀರು ಏಕೆ ಲಭ್ಯವಾಗುತ್ತಿಲ್ಲ ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾರೆ. ಬಹಳ ದೀರ್ಘ ಕಾಲ ತೀರ್ಮಾನ ತೆಗೆದುಕೊಳ್ಳುವ ಜವಾಬ್ದಾರಿ ಹೊಂದಿದ್ದವರು ಈ ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಳ್ಳಬೇಕಿತ್ತು ಎಂದು ನನಗನಿಸುತ್ತದೆ. ಆದರೆ ಅವರು ಕೇಳಿಕೊಳ್ಳಲಿಲ್ಲ. ಯಾಕೆಂದರೆ ಈ ಜನರು ವಾಸಿಸುತ್ತಿದ್ದ ಪ್ರದೇಶಗಳು ನೀರಿನ ಸಮಸ್ಯೆಯನ್ನು ಎಂದೂ ಎದುರಿಸಿರಲಿಲ್ಲ. ನೀರಿಲ್ಲದೆ ಜೀವನ ಎಷ್ಟು ದುರ್ಭರ ಎಂಬುದರ ಬಗ್ಗೆಯೂ ಅವರಿಗೆ ಗೊತ್ತಿರಲಿಲ್ಲ. ಅವರ ಮನೆಯಲ್ಲಿ ಸಾಕಷ್ಟು ನೀರು ಲಭ್ಯ ಇತ್ತು, ಈಜು ಕೊಳದಲ್ಲಿ ನೀರಿತ್ತು, ಅವರಿಗೆ ಎಲ್ಲೆಂದರಲ್ಲಿ ನೀರು ಸಿಕ್ಕುತ್ತಿತ್ತು. ಇಂತಹ ಜನರು ಬಡತನವನ್ನು ಕಂಡವರಲ್ಲ. ಅದರಿಂದಾಗಿ ಅವರಿಗೆ ಬಡತನ ಒಂದು ಆಕರ್ಷಣೆಯಾಗಿ ಕಂಡಿತು. ಸಾಹಿತ್ಯದಲ್ಲಿಯ ವಿವರಣೆಯಾಗಿ ಮತ್ತು ಬುದ್ಧಿಜೀವಿ ಜ್ಞಾನವಾಗಿ ಅವರಿಗೆ ದಕ್ಕಿತು. ಈ ಜನರು ಮಾದರಿ ಗ್ರಾಮ, ಹಳ್ಳಿಯ ಬಗ್ಗೆ ಪ್ರೀತಿ ಹೊಂದಿರಬೇಕಾಗಿತ್ತು, ಆದರೆ ಅವರು ಹಳ್ಳಿಗಳ ಕಡುಬಡತನವನ್ನು  ಮೆಚ್ಚುತ್ತಾ  ನಿಂತರು.

ನಾನು ಗುಜರಾತಿನಂತಹ ರಾಜ್ಯದಿಂದ ಬಂದವನು. ಹೆಚ್ಚಿನ ಸಮಯ ಬರವನ್ನು ನೋಡಿದವನು. ಪ್ರತೀ ನೀರ ಹನಿಯ ಮಹತ್ವ ನನಗೆ ಗೊತ್ತಿದೆ. ಗುಜರಾತಿನ ಮುಖ್ಯಮಂತ್ರಿಯಾಗಿ ಜನತೆಗೆ ನೀರು ಲಭ್ಯವಾಗುವಂತೆ ಮಾಡುವುದು ಮತ್ತು ಜಲ ಸಂರಕ್ಷಣೆ ನನ್ನ ಆದ್ಯತೆಗಳಾಗಿದ್ದವು. ಜನತೆಗೆ ಮತ್ತು ರೈತರಿಗೆ ನೀರು ಲಭಿಸುವಂತೆ ಮಾತ್ರ ಮಾಡಿದ್ದಲ್ಲ, ನಾವು ಬಾವಿಗಳಲ್ಲಿ ಅಂತರ್ಜಲ ಕೂಡಾ ಹೆಚ್ಚುವಂತೆ ಮಾಡಿದೆವು. ಪ್ರಧಾನ ಮಂತ್ರಿಯಾದ ಬಳಿಕ ನೀರಿನ ಸವಾಲುಗಳ ಬಗ್ಗೆ ನಾನು ನಿರಂತರವಾಗಿ ಕಾರ್ಯನಿರತನಾಗಲು ಬಲು ದೊಡ್ಡ ಕಾರಣ ಇದೇ. ಇಂದು ನಾವು ಪಡೆಯುತ್ತಿರುವ ಫಲಿತಾಂಶಗಳು ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಪಡುವಂತೆ ಮಾಡಲಿವೆ.

ಸ್ವಾತಂತ್ರ್ಯದಿಂದ 2019 ರವರೆಗೆ, ನಮ್ಮ ದೇಶದಲ್ಲಿ ಬರೇ ಮೂರು ಕೋಟಿ ಮನೆಗಳಿಗೆ ನಳ್ಳಿ ನೀರು ಲಭ್ಯವಿತ್ತು. 2019 ರಲ್ಲಿ ಜಲ್ ಜೀವನ್ ಅಭಿಯಾನ ಆರಂಭಗೊಂಡಂದಿನಿಂದ ಈಗ ಐದು ಕೋಟಿ ಮನೆಗಳಿಗೆ ಕುಡಿಯುವ ನಳ್ಳಿ ನೀರಿನ ಲಭ್ಯತೆ ಇದೆ. ಇಂದು ದೇಶದ 80 ಜಿಲ್ಲೆಗಳ 1.25 ಲಕ್ಷ ಗ್ರಾಮಗಳ ಪ್ರತೀ ಮನೆಗಳಿಗೆ ಕೊಳವೆ/ನಳ್ಳಿಗಳ ಮೂಲಕ ನೀರು ತಲುಪುತ್ತಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕಳೆದ ಏಳು ದಶಕಗಳಲ್ಲಿ ಮಾಡಲಾದ ಕೆಲಸಕ್ಕಿಂತ ಇಂದಿನ ಭಾರತದಲ್ಲಿ ಎರಡು ವರ್ಷಗಳಲ್ಲಿ  ಮಾಡಲಾದ ಕೆಲಸ ಹೆಚ್ಚಿನದು. ದೇಶದ ಯಾವುದೇ ಸಹೋದರಿ ಮತ್ತು ಮಗಳು ನೀರಿಗಾಗಿ ದಿನನಿತ್ಯ ಬಹಳ ದೂರ ನಡಿಗೆ ಮಾಡಬೇಕಾದಂತಹ ಅನಿವಾರ್ಯತೆ ನಿವಾರಣೆಯಾಗುವ ದಿನ ಬಹಳ ದೂರವೇನೂ ಇಲ್ಲ. ಆಕೆ ಆ ಸಮಯವನ್ನು ತನ್ನ ಅಭ್ಯುದಯಕ್ಕೆ, ಶಿಕ್ಷಣಕ್ಕೆ ಅಥವಾ ತನ್ನದೇ ಉದ್ಯೋಗ ಸ್ಥಾಪನೆಗೆ ಬಳಸಲು ಸಮರ್ಥಳಾಗಲಿದ್ದಾಳೆ.

 

ಸಹೋದರರೇ ಮತ್ತು ಸಹೋದರಿಯರೇ,

ನೀರಿನ ಕೊರತೆ ಭಾರತದ ಅಭಿವೃದ್ಧಿಗೆ ಒಂದು ತೊಡಕಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರ ಪ್ರಯತ್ನವೂ ಈ ನಿಟ್ಟಿನಲ್ಲಿ ಬಹಳ ಅವಶ್ಯ. ನಾವು ನಮ್ಮ ಭವಿಷ್ಯದ ತಲೆಮಾರಿಗೆ ಉತ್ತರದಾಯಿಗಳಾಗಿರುತ್ತೇವೆ. ನಾವು ನಮ್ಮ ಮಕ್ಕಳ ಇಡೀ ಜೀವನದ ಶಕ್ತಿ  ರಾಷ್ಟ್ರ ನಿರ್ಮಾಣಕ್ಕೆ ಬಳಕೆಯಾಗುವುದಕ್ಕೆ ಬದಲು  ನೀರಿನ ಕೊರತೆ ಪರಿಹರಿಸುವುದಕ್ಕೆ ಜೀವನ ಮುಡಿಪಾಗಿಡುವಂತಾಗಬಾರದು. ಅಂತಹ ಪರಿಸ್ಥಿತಿಗೆ ನಾವು ಅವಕಾಶ ಮಾಡಿಕೊಡಬಾರದು. ಇದನ್ನು ಖಾತ್ರಿಪಡಿಸಲು ನಾವು ನಮ್ಮ ಪ್ರಯತ್ನಗಳನ್ನು ಯುದ್ದೋಪಾದಿಯಲ್ಲಿ ನಡೆಸಬೇಕು. ಸ್ವಾತಂತ್ರ್ಯದ 75 ವರ್ಷಗಳ ದೀರ್ಘಾವಧಿ ಕಳೆದು ಹೋಗಿದೆ, ನಾವೀಗ ಬಹಳ ತ್ವರಿತಗತಿಯಲ್ಲಿ ಮುನ್ನಡೆಯಬೇಕಾಗಿದೆ. ನಾವು ದೇಶದ ಯಾವುದೇ ಭಾಗಕ್ಕೆ ಟ್ಯಾಂಕರ್ ಇಲ್ಲವೇ ರೈಲುಗಳ ಮೂಲಕ ನೀರು ಸಾಗಾಟ ಮಾಡುವಂತಹ ಪರಿಸ್ಥಿತಿ ಬಾರದಿರುವಂತೆ ಖಾತ್ರಿಪಡಿಸಬೇಕು.

ಸ್ನೇಹಿತರೇ,

ನಾನು ಈ ಮೊದಲು ಹೇಳಿದಂತೆ ನಾವು ನೀರನ್ನು ಒಂದು ವರ ನೀಡಲ್ಪಟ್ಟ ವಸ್ತುವಿನಂತೆ ಬಳಸಬೇಕು. ಆದರೆ ಕೆಲವರು ಅದರ ಮಹತ್ವವನ್ನು ಗಮನಿಸುವುದಿಲ್ಲ ಮತ್ತು ನೀರು ಪೋಲಾಗುವ ಕುರಿತೂ ಗಮನ ಕೊಡುವುದಿಲ್ಲ, ಯಾಕೆಂದರೆ ಅದು ಸುಲಭವಾಗಿ ಸಿಗುತ್ತಿದೆ. ಅವರಿಗೆ ನೀರಿನ ಮೌಲ್ಯ ತಿಳಿದಿರುವುದಿಲ್ಲ. ನೀರಿನ ಮೌಲ್ಯ ಗೊತ್ತಿರುವುದು ಅದರ ಕೊರತೆಯನ್ನು ಅನುಭವಿಸುತ್ತಿರುವವರಿಗೆ ಮಾತ್ರ. ಅವರಿಗೆ ಮಾತ್ರ ಒಂದು ಹನಿ ನೀರನ್ನು ಸಂಗ್ರಹಿಸಲು ಎಷ್ಟು ಪ್ರಯತ್ನ ಮಾಡಬೇಕು ಎಂಬುದು ತಿಳಿದಿರುತ್ತದೆ. ಸಾಕಷ್ಟು ನೀರು ಇರುವವರು ನೀರನ್ನು ಸಂರಕ್ಷಿಸಲು ಹೆಚ್ಚು ಪ್ರಯತ್ನಗಳನ್ನು ಮಾಡಬೇಕು ಎಂದು ನಾನು ನಾಗರಿಕರಲ್ಲಿ ಮನವಿ ಮಾಡುತ್ತೇನೆ. ಮತ್ತು ಜನರು ಕೂಡಾ ತಮ್ಮ ಅಭ್ಯಾಸಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಬಹಳ ಕಡೆಗಳಲ್ಲಿ ನಳ್ಳಿ ನೀರಿನ ಟ್ಯಾಪ್ ಗಳಿಂದ ನೀರು ಹರಿದು ಪೋಲಾಗುತ್ತಿರುವುದನ್ನು ನಾವು ನೋಡುತ್ತಿರುತ್ತೇವೆ, ಆದರೆ ಜನರು ಆ ಬಗ್ಗೆ ಚಿಂತಿಸುವುದೇ ಇಲ್ಲ. ರಾತ್ರಿ ವೇಳೆ ಜನರು ನಳ್ಳಿಯನ್ನು ತೆರೆದಿಟ್ಟು ಅದರ ಕೆಳಗೆ ಬಕೆಟನ್ನು ಬೋರಲಾಗಿ ಇಟ್ಟಿರುವುದನ್ನೂ ನಾನು ನೋಡಿದ್ದೇನೆ. ಬೆಳಿಗ್ಗೆ ನೀರು ಬಂದಾಗ ಮತ್ತು ಅದು ಬೋರಲಾಗಿಟ್ಟ ಬಕೆಟಿನ ಮೇಲೆ ಬಿದ್ದಾಗ, ಆ ಶಬ್ದ ಅವರಿಗೆ ಬೆಳಗ್ಗಿನ ಅಲಾರಾಂನಂತೆ ಕೇಳುತ್ತದೆ. ಅವರು  ತಮ್ಮ ಸುತ್ತಲೂ ನೀರಿನ ಪರಿಸ್ಥಿತಿ ಎಚ್ಚರಿಕೆ ಗಂಟೆ ಬಡಿಯುವಷ್ಟು ದಾರುಣವಾಗಿದೆ ಎಂಬುದನ್ನು ಅರಿತುಕೊಂಡಿರುವುದಿಲ್ಲ.

ಜಲ ಸಂರಕ್ಷಣೆ ಅಥವಾ ಜಲ ಕೊಯಿಲುಗಳನ್ನು ತಮ್ಮ ಜೀವನದ ಬಹಳ ದೊಡ್ಡ ಆಂದೋಲನ ಮಾಡಿದವರನ್ನು, ಅಂತಹ ಇಂತಹ ಶ್ರೇಷ್ಟ ವ್ಯಕ್ತಿತ್ವಗಳ ಬಗ್ಗೆ   ’ಮನ್ ಕಿ ಬಾತ್’ ನಲ್ಲಿ ನಾನು ಆಗಾಗ ಉಲ್ಲೇಖಿಸುತ್ತಿರುತ್ತೇನೆ. ಇಂತಹ ಜನರಿಂದ ನಾವು ಕಲಿತುಕೊಳ್ಳಬೇಕು ಮತ್ತು ಪ್ರೇರಣೆ ಪಡೆಯಬೇಕು. ದೇಶದ ವಿವಿಧ ಮೂಲೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ ಮತ್ತು ನಮ್ಮ ಗ್ರಾಮಗಳಿಗೆ, ಹಳ್ಳಿಗಳಿಗೆ ಅವುಗಳ ಮಾಹಿತಿ ಬಹಳ ಉಪಯುಕ್ತವಾಗಿರುತ್ತದೆ. ಈ ಕಾರ್ಯಕ್ರಮದ ಜೊತೆ ಸಂಯೋಜನೆಗೊಂಡಿರುವ ದೇಶದ ಗ್ರಾಮ ಪಂಚಾಯತ್ ಗಳಿಗೆ ಗ್ರಾಮಗಳಲ್ಲಿಯ ಜಲ ಮೂಲಗಳನ್ನು ಸಂರಕ್ಷಿಸಲು ಮತ್ತು ಅವುಗಳನ್ನು ಸ್ವಚ್ಛ ಮಾಡಲು ಪೂರ್ಣ ಹೃದಯದಿಂದ ದುಡಿಯಬೇಕು ಎಂದು ನಾನು ಮನವಿ ಮಾಡುತ್ತೇನೆ. ಮಳೆ ನೀರನ್ನು ಸಂರಕ್ಷಿಸುವ ಮೂಲಕ, ಮನೆ ಬಳಕೆಯ ನೀರನ್ನು ಕೃಷಿಗೆ ಬಳಸುವ ಮೂಲಕ ಮತ್ತು ಕಡಿಮೆ ನೀರು ಬಳಕೆ ಮಾಡುವ ಬೆಳೆಗಳನ್ನು ಉತ್ತೇಜಿಸುವ ಮೂಲಕ ನಾವು ನಮ್ಮ ಗುರಿಗಳನ್ನು ಸಾಧಿಸಬಹುದು.

ಸ್ನೇಹಿತರೇ,

ದೇಶದ ಹಲವು ವಲಯಗಳಲ್ಲಿ ಮಾಲಿನ್ಯಯುಕ್ತ  ನೀರಿನ ಸಮಸ್ಯೆ ಇದೆ. ಮತ್ತು ಕೆಲವು ಪ್ರದೇಶಗಳಲ್ಲಿ ಆರ್ಸೆನಿಕ್ ಅಂಶ ಬಹಳ ಹೆಚ್ಚಾಗಿದೆ. ಅಂತಹ ಪ್ರದೇಶಗಳಲ್ಲಿ ಪ್ರತೀ ಮನೆಗೂ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಅಲ್ಲಿಯ ಜನರಿಗೆ ಜೀವನದಲ್ಲಿಯೇ ಒಂದು ಬಹಳ ದೊಡ್ಡ ಆಶೀರ್ವಾದ ಮತ್ತು ವರ. ಒಂದು ಕಾಲದಲ್ಲಿ ದೇಶದ 61 ಜಿಲ್ಲೆಗಳಲ್ಲಿ ಬರೇ ಎಂಟು ಲಕ್ಷ ನಳ್ಳಿ ನೀರಿನ ಸಂಪರ್ಕಗಳಿದ್ದವು. ಅಲ್ಲಿ ಮೆದುಳು ಜ್ವರದ ಬಾಧೆ ಇತ್ತು. ಇಂದು ಈ ಸಂಖ್ಯೆ 1.11 ಕೋಟಿಗೆ ತಲುಪಿದೆ. ಅಭಿವೃದ್ಧಿಯ ಓಟದಲ್ಲಿ ಹಿಂದುಳಿದಿದ್ದ ಜಿಲ್ಲೆಗಳಲ್ಲಿ ಮತ್ತು ಅಭಿವೃದ್ಧಿಯ ಆಕಾಂಕ್ಷೆ ಇರುವ ಜಿಲ್ಲೆಗಳಲ್ಲಿ ಆದ್ಯತೆಯ ಆಧಾರದಲ್ಲಿ ಪ್ರತೀ ಮನೆಗೂ ನೀರನ್ನು ಪೂರೈಸಲಾಗುತ್ತಿದೆ. ಈಗ ಅಭಿವೃದ್ಧಿಯ ಆಶೋತ್ತರಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ನಳ್ಳಿ ನೀರಿನ ಸಂಪರ್ಕಗಳ ಸಂಖ್ಯೆ 31 ಲಕ್ಷದಿಂದ 1.16 ಕೋಟಿಯನ್ನು ದಾಟಿದೆ.

ಸ್ನೇಹಿತರೇ,

ದೇಶದಲ್ಲಿ ಕುಡಿಯುವ ನೀರು ಪೂರೈಕೆಯನ್ನು ಖಾತ್ರಿಗೊಳಿಸುವುದರ ಜೊತೆಗೆ ನೀರಿನ ನಿರ್ವಹಣೆಗೆ ಸಂಬಂಧಿಸಿ ಮತ್ತು ನೀರಾವರಿಗೆ ಸಮಗ್ರ ಮೂಲಸೌಕರ್ಯ ನಿರ್ಮಾಣ ಮಾಡಲು ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸಗಳು ನಡೆಯುತ್ತಿವೆ. ಮೊದಲ ಬಾರಿಗೆ ನೀರಿಗೆ ಸಂಬಂಧಿಸಿದ ವಿಷಯಗಳನ್ನು ನೀರಿನ ಸಮರ್ಪಕ ನಿರ್ವಹಣೆಗಾಗಿ ಜಲ್ ಶಕ್ತಿ ಸಚಿವಾಲಯದ ಅಡಿಯಲ್ಲಿ ತರಲಾಗಿದೆ. ಗಂಗಾ ಮತ್ತು ಇತರ ನದಿಗಳ ನೀರನ್ನು ಮಾಲಿನ್ಯ ಮುಕ್ತ ಮಾಡಲು ರೂಪಿಸಲಾದ ಸ್ಪಷ್ಟ ವ್ಯೂಹವನ್ನು ಅನುಸರಿಸಿ ಕೆಲಸಗಳು ನಡೆಯುತ್ತಿವೆ. ಅಟಲ್ ಭೂಜಲ ಯೋಜನಾ ಅಡಿಯಲ್ಲಿ ದೇಶದ ಏಳು ರಾಜ್ಯಗಳಲ್ಲಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ  ಕಾಮಗಾರಿಗಳು ಪ್ರಗತಿಯಲ್ಲಿವೆ. ಕಳೆದ ಏಳು ವರ್ಷಗಳಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಯ್ ಯೋಜನಾ ಅಡಿಯಲ್ಲಿ  ಕೊಳವೆ ಮೂಲಕ ನೀರಾವರಿಗೆ ಮತ್ತು ಕಿರು ನೀರಾವರಿಗೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಇದುವರೆಗೆ 13 ಲಕ್ಷ ಹೆಕ್ಟೇರ್ ಭೂಮಿಯನ್ನು ಕಿರು ನೀರಾವರಿ ಅಡಿಯಲ್ಲಿ ತರಲಾಗಿದೆ. ‘ಹನಿಯೊಂದು, ಬೆಳೆ ಹೆಚ್ಚು’ ದೃಢ ನಿರ್ಧಾರವನ್ನು ಕಾರ್ಯಗತ ಮಾಡುವಲ್ಲಿ ಇಂತಹ ಹಲವಾರು ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದೀರ್ಘ ಕಾಲದಿಂದ ಬಾಕಿ ಉಳಿದಿದ್ದ 99 ನೀರಾವರಿ ಯೋಜನೆಗಳಲ್ಲಿ ಸುಮಾರು ಅರ್ಧದಷ್ಟು ಪೂರ್ಣಗೊಂಡಿವೆ ಮತ್ತು ಉಳಿದವುಗಳ ಕಾಮಗಾರಿ ಬಹಳ ವೇಗವಾಗಿ ನಡೆಯುತ್ತಿದೆ. ದೇಶಾದ್ಯಂತ ಅಣೆಕಟ್ಟೆಗಳ ಉತ್ತಮ ನಿರ್ವಹಣೆಗಾಗಿ ಮತ್ತು ನಿಭಾವಣೆಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗುತ್ತಿದೆ. ಇದರಡಿ 200ಕ್ಕೂ ಅಧಿಕ ಅಣೆಕಟ್ಟೆಗಳನ್ನು ಸುಧಾರಿಸಲಾಗಿದೆ.

ಸ್ನೇಹಿತರೇ,

ನ್ಯೂನ ಪೋಷಣೆಯ ಯುದ್ಧದಲ್ಲಿ ನೀರು ಕೂಡಾ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ಪ್ರತೀ ಮನೆಗೂ ನೀರು ತಲುಪಿದರೆ, ಮಕ್ಕಳ ಆರೋಗ್ಯ ಸುಧಾರಿಸುತ್ತದೆ. ಇತ್ತೀಚೆಗೆ ಸರಕಾರವು ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆ ಅಡಿಯಲ್ಲಿ ದೇಶಾದ್ಯಂತ ಮಕ್ಕಳಿಗೆ  ಶಾಲೆಗಳಲ್ಲ್ಲಿ ಅವರ ಪೋಷಣೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ ಮತ್ತು ಅವರ ಪೋಷಣೆಯನ್ನು ಖಾತ್ರಿಪಡಿಸಲಾಗುತ್ತದೆ. ಕೇಂದ್ರ ಸರಕಾರವು ಈ ಯೋಜನೆ ಅಡಿಯಲ್ಲಿ 54,000 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ಖರ್ಚು ಮಾಡುತ್ತಿದೆ. ಇದರಿಂದ ದೇಶದ ಸುಮಾರು 12  ಕೋಟಿ ಮಕ್ಕಳಿಗೆ ಪ್ರಯೋಜನವಾಗಲಿದೆ.

ಸ್ನೇಹಿತರೇ

ಇದೊಂದು ಹೇಳಿಕೆ:

उप-कर्तुम् यथा सु-अल्पम्, समर्थो न तथा महान् |

प्रायः कूपः तृषाम् हन्ति, सततम् न तु वारिधिः ||

ಅಂದರೆ ಸಣ್ಣದೊಂದು ಬಾವಿ ಜನರ ಬಾಯಾರಿಕೆಯನ್ನು ತಣಿಸಬಲ್ಲದು, ಆದರೆ ಅಂತಹ ದೊಡ್ಡ ಸಾಗರ ಅದನ್ನು ಮಾಡಲಾರದು. ಇದು ಎಷ್ಟು ಸತ್ಯ!. ಕೆಲವೊಮ್ಮೆ ನಾವು ಯಾರಾದರೊಬ್ಬರ ಸಣ್ಣ ಪ್ರಯತ್ನಗಳು ದೊಡ್ಡ ನಿರ್ಧಾರಗಳಿಗಿಂತ ದೊಡ್ಡದಾಗಿರುವುದನ್ನು ನೋಡಿದ್ದೇವೆ. ಇಂದು ಇದು ಗ್ರಾಮ ಮಟ್ಟದಲ್ಲಿಯ ಪಾನಿ ಸಮಿತಿಗಳಿಗೂ ಅನ್ವಯಿಸುತ್ತದೆ. ಗ್ರಾಮ ಮಟ್ಟದಲ್ಲಿ ಪಾನಿ ಸಮಿತಿಗಳು ನೀರಿಗೆ ಸಂಬಂಧಪಟ್ಟಂತಹ ಕೆಲಸಗಳನ್ನು ಮತ್ತು ಜಲ ಸಂರಕ್ಷಣೆಯನ್ನು ಮಾಡುತ್ತಿವೆಯಾದರೂ ಅವುಗಳ ವ್ಯಾಪ್ತಿ ಮಾತ್ರ ಬಹಳ ದೊಡ್ಡದು. ಈ ಪಾನಿ ಸಮಿತಿಗಳು ಬಡವರು-ದಲಿತರು-ಅವಕಾಶವಂಚಿತರು-ಆದಿವಾಸಿಗಳ ಬದುಕಿನಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತರುತ್ತಿವೆ.

ಸ್ವಾತಂತ್ರ್ಯದ ಏಳು ದಶಕಗಳ ಬಳಿಕವೂ ನಳ್ಳಿ ನೀರು ದೊರೆಯದ ಜನರ ಬದುಕಿನಲ್ಲಿ ಸಣ್ಣ ಟ್ಯಾಪ್ ಅವರ ಜಗತ್ತನ್ನೇ ಬದಲಾಯಿಸಿದೆ. ಜಲ್ ಜೀವನ್ ಅಭಿಯಾನದಡಿ ರೂಪಿಸಲಾದ ಪಾನಿ ಸಮಿತಿಯ ಸದಸ್ಯರಲ್ಲಿ 50 ಶೇಖಡಾ  ಸದಸ್ಯರು ಮಹಿಳೆಯರೇ ಆಗಿರುವುದು ಹೆಮ್ಮೆಯ ಸಂಗತಿ. ಬಹಳ ಕಡಿಮೆ ಅವಧಿಯಲ್ಲಿ ದೇಶದ 3.5 ಲಕ್ಷ ಗ್ರಾಮಗಳಲ್ಲಿ ಪಾನಿ ಸಮಿತಿಗಳ ರಚನೆಯಾಗಿರುವುದು ದೇಶದ ಸಾಧನೆ. ಕೆಲ ಸಮಯದ ಹಿಂದೆ ಜಲ್ ಜೀವನ್ ಸಂವಾದದಲ್ಲಿ ಈ ಪಾನಿ ಸಮಿತಿಗಳಲ್ಲಿ ಗ್ರಾಮೀಣ ಮಹಿಳೆಯರು ಹೇಗೆ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಮಹಿಳೆಯರಿಗೆ ಅವರ ಗ್ರಾಮದ ನೀರಿನ ಗುಣಮಟ್ಟ ಪರೀಕ್ಷೆ ಮಾಡಲು ವಿಶೇಷ ತರಬೇತಿ ನೀಡಲಾಗಿರುವುದು ನನಗೆ ಸಂತೋಷದ ಸಂಗತಿಯಾಗಿದೆ.

 

ಸ್ನೇಹಿತರೇ,

ಗ್ರಾಮೀಣ ಮಹಿಳೆಯರ ಸಶಕ್ತೀಕರಣ ನಮ್ಮ ಸರಕಾರದ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿದೆ. ವರ್ಷಗಳಿಂದ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಸುರಕ್ಷೆಗೆ ವಿಶೇಷ ಗಮನವನ್ನು ನೀಡಲಾಗುತ್ತಿದೆ. ಮನೆಗಳಲ್ಲಿ ಮತ್ತು ಶಾಲೆಗಳಲ್ಲಿ ಶೌಚಾಲಯಗಳು, ಕಡಿಮೆದರದಲ್ಲಿ ಸ್ಯಾನಿಟರಿ ಪ್ಯಾಡ್ ಗಳು, ಗರ್ಭಿಣಿಯರಿಗೆ ಪೋಷಣೆಗಾಗಿ ಸಾವಿರಾರು ರೂಪಾಯಿಗಳು ಮತ್ತು ಲಸಿಕಾಕರಣ ಆಂದೋಲನಗಳೊಂದಿಗೆ ಮಹಿಳೆಯರು ಸಶಕ್ತೀಕರಣಗೊಂಡಿದ್ದಾರೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನಾ ಅಡಿಯಲ್ಲಿ ಎರಡು ಕೋಟಿಗೂ ಅಧಿಕ ಗರ್ಭಿಣಿ ಮಹಿಳೆಯರಿಗೆ ಸುಮಾರು 8,000 ಕೋ.ರೂ.ಗಳ ನೇರ ನೆರವು ನೀಡಲಾಗಿದೆ. ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ನಿರ್ಮಾಣವಾದ 2.5 ಕೋಟಿ ಪಕ್ಕಾ ಮನೆಗಳಲ್ಲಿ ಬಹುತೇಕ ಮನೆಗಳು ಮಹಿಳೆಯರ ಮಾಲಕತ್ವದವುಗಳಾಗಿವೆ. ಉಜ್ವಲ ಯೋಜನಾವು ಕೋಟ್ಯಾಂತರ ಗ್ರಾಮೀಣ ಮಹಿಳೆಯರನ್ನು ಕಟ್ಟಿಗೆಯ ಹೊಗೆಯಿಂದ ಮುಕ್ತಗೊಳಿಸಿದೆ.

ಮುದ್ರಾ ಯೋಜನೆ ಅಡಿಯಲ್ಲಿ 70 ಶೇಖಡಾದಷ್ಟು ಸಾಲಗಳನ್ನು ಮಹಿಳಾ ಉದ್ಯಮಿಗಳು ಪಡೆದಿದ್ದಾರೆ. ಗ್ರಾಮೀಣ ಮಹಿಳೆಯರು ಕೂಡಾ ಸ್ವ –ಸಹಾಯ ಗುಂಪುಗಳ ಮೂಲಕ ಸ್ವಾವಲಂಬನೆಯ ಜೊತೆ ಜೋಡಿಸಲ್ಪಟ್ಟಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಸ್ವ ಸಹಾಯ ಗುಂಪುಗಳ ಸಂಖ್ಯೆಯಲ್ಲಿ  ಮೂರು ಪಟ್ಟು ಹೆಚ್ಚಳವಾಗಿದೆ. ಮತ್ತು ಸಹೋದರಿಯರ ಸಹಭಾಗಿತ್ವ ಕೂಡಾ ಮೂರು ಪಟ್ಟು ಹೆಚ್ಚಾಗಿರುವುದು ಖಾತ್ರಿಯಾಗಿದೆ. ರಾಷ್ಟ್ರೀಯ ಜೀವನೋಪಾಯ ಮಿಷನ್ನಿನಡಿಯಲ್ಲಿ ಸಹೋದರಿಯರಿಗೆ ಸರಕಾರ ನೀಡುತ್ತಿದ್ದ ನೆರವು 2014ಕ್ಕಿಂತ  ಮೊದಲ ಐದು ವರ್ಷಗಳಿಗೆ ಹೋಲಿಸಿದರೆ ಕಳೆದ ಏಳು ವರ್ಷಗಳಲ್ಲಿ 13 ಪಟ್ಟು ಹೆಚ್ಚಾಗಿದೆ. ಈ ತಾಯಂದಿರು ಮತ್ತು ಸಹೋದರಿಯರಿಗೆ ಸ್ವ-ಸಹಾಯ ಗುಂಪುಗಳ ಮೂಲಕ 4 ಲಕ್ಷ ಕೋ.ರೂ.ಗಳ ಸಾಲವನ್ನೂ ಒದಗಿಸಲಾಗಿದೆ. ಸ್ವ ಸಹಾಯ ಗುಂಪುಗಳಿಗೆ ಭದ್ರತೆ ರಹಿತ ಸಾಲದ ಪ್ರಮಾಣವನ್ನು ಸರಕಾರ ಗಣನೀಯವಾಗಿ ಹೆಚ್ಚಿಸಿದೆ.

ಸಹೋದರರೇ ಮತ್ತು ಸಹೋದರಿಯರೇ,

ಭಾರತದ ಅಭಿವೃದ್ಧಿಯು ಹಳ್ಳಿಗಳ ಅಭಿವೃದ್ಧಿಯನ್ನು ಅವಲಂಬಿಸಿದೆ. ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ  ಬದುಕುತ್ತಿರುವ  ಜನತೆಯ ಜೊತೆ ಯುವಜನತೆ ಮತ್ತು ರೈತರನ್ನು ಒಳಗೊಂಡಂತೆ ಭಾರತದ ಗ್ರಾಮಗಳನ್ನು ಹೆಚ್ಚು ದಕ್ಷ ಮಾಡಬಲ್ಲ  ಯೋಜನೆಗಳಿಗೆ ಸರಕಾರ ಆದ್ಯತೆಯನ್ನು ನೀಡುತ್ತಿದೆ. ಗ್ರಾಮಗಳಲ್ಲಿ, ಹಳ್ಳಿಗಳಲ್ಲಿ ಮನೆಗಳು ಮತ್ತು ಪಶುಗಳಿಂದ ಉತ್ಪಾದನೆಯಾಗುವಂತಹ ತ್ಯಾಜ್ಯವನ್ನು ಬಳಸುವ ಗೋಬರ್ಧನ ಯೋಜನೆ ಚಾಲ್ತಿಯಲ್ಲಿದೆ. ಈ ಯೋಜನೆ ಅಡಿಯಲ್ಲಿ 150ಕ್ಕೂ ಅಧಿಕ ಜಿಲ್ಲೆಗಳಲ್ಲಿ 300ಕ್ಕೂ ಅಧಿಕ ಜೈವಿಕ ಅನಿಲ ಸ್ಥಾವರಗಳು ನಿರ್ಮಾಣವಾಗಿವೆ. ಗ್ರಾಮಸ್ಥರಿಗೆ ಉತ್ತಮ ಪ್ರಥಮ ಚಿಕಿತ್ಸೆ ಮತ್ತು ಅವಶ್ಯ ಪರೀಕ್ಷೆ ಸೌಲಭ್ಯಗಳು ಲಭ್ಯವಾಗುವಂತೆ ಮಾಡಲು 1.5 ಲಕ್ಷಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇವುಗಳಲ್ಲಿ 80,000 ಅರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಈಗಾಗಲೇ ಸ್ಥಾಪನೆ ಮಾಡಲಾಗಿದೆ. ಗ್ರಾಮಗಳಲ್ಲಿ ಅಂಗನವಾಡಿಗಳಲ್ಲಿ ಕೆಲಸ ಮಾಡುವ ನಮ್ಮ ಸಹೋದರಿಯರ ಹಣಕಾಸು ನೆರವನ್ನು ಹೆಚ್ಚಿಸಲಾಗಿದೆ. ಗ್ರಾಮಗಳಲ್ಲಿ ಸರಕಾರಿ ಸೇವೆಗಳನ್ನು ಲಭ್ಯವಾಗುವಂತೆ ಮಾಡುವುದಕ್ಕಾಗಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.

ಪಿ.ಎಂ. ಸ್ವಾಮಿತ್ವ ಯೋಜನಾ ಅಡಿಯಲ್ಲಿ ಗ್ರಾಮೀಣ ಭೂಮಿಗಳ ಮತ್ತು ಮನೆಗಳ ಡಿಜಿಟಲ್ ಆಸ್ತಿ ಕಾರ್ಡ್ ಗಳನ್ನು ಡ್ರೋನ್ ಗಳನ್ನು ಬಳಸಿ ಮ್ಯಾಪಿಂಗ್ ಮಾಡುವ ಮೂಲಕ ತಯಾರಿಸಲಾಗುತ್ತಿದೆ. ಏಳು ವರ್ಷಗಳ ಹಿಂದಿನವರೆಗೆ ದೇಶದಲ್ಲಿ ನೂರಕ್ಕಿಂತ ಕಡಿಮೆ ಪಂಚಾಯತ್‌ಗಳು ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಹೊಂದಿದ್ದವು. ಇಂದು ಸ್ವಾಮಿತ್ವ ಯೋಜನೆ ಅಡಿಯಲ್ಲಿ ಆಪ್ಟಿಕಲ್ ಫೈಬರ್ 1.5 ಲಕ್ಷ ಪಂಚಾಯತ್ ಗಳನ್ನು ತಲುಪಿದೆ. ಕೈಗೆಟಕುವ ದರದಲ್ಲಿ ಮೊಬೈಲ್ ಫೋನ್ ಗಳ ಲಭ್ಯತೆ ಮತ್ತು ಅಗ್ಗದ ಅಂತರ್ಜಾಲ ಸೇವೆಗಳಿಂದಾಗಿ ಇಂದು ಹಳ್ಳಿಗಳಲ್ಲಿಯ ಹೆಚ್ಚು ಹೆಚ್ಚು ಜನರು ನಗರಗಳಲ್ಲಿಯದಕ್ಕಿಂತಲೂ ಹೆಚ್ಚು ಅಂತರ್ಜಾಲ ಬಳಕೆ ಮಾಡುತ್ತಿದ್ದಾರೆ. ಇಂದು ಮೂರು ಲಕ್ಷಕ್ಕಿಂತ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳು ಡಜನ್ನುಗಟ್ಟಲೆ ಸರಕಾರಿ ಯೋಜನೆಗಳನ್ನು ಹಳ್ಳಿಗಳಲ್ಲಿಯೇ ಒದಗಿಸುತ್ತಿವೆ ಮತ್ತು ಸಾವಿರಾರು ಯುವಜನತೆಗೆ ಉದ್ಯೋಗವನ್ನೂ ನೀಡುತ್ತಿವೆ.

ಇಂದು ಎಲ್ಲಾ ರೀತಿಯ ಗ್ರಾಮೀಣ ಮೂಲಸೌಕರ್ಯಗಳಿಗಾಗಿ ದಾಖಲೆ ಪ್ರಮಾಣದ ಹೂಡಿಕೆಯನ್ನು ಮಾಡಲಾಗುತ್ತಿದೆ. ಅದು ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನಾ ಇರಲಿ, 1 ಲಕ್ಷ ಕೋ.ರೂ.ಗಳ ಕೃಷಿ ನಿಧಿ, ಗ್ರಾಮಗಳ ಬಳಿ ಶೀತಲೀಕೃತ ದಾಸ್ತಾನುಗಾರಗಳ ನಿರ್ಮಾಣ, ಕೈಗಾರಿಕಾ ಗುಚ್ಛಗಳ ನಿರ್ಮಾಣ ಅಥವಾ ಕೃಷಿ ಮಾರುಕಟ್ಟೆಗಳ ಆಧುನೀಕರಣ ಇರಲಿ, ಪ್ರತೀ ರಂಗದಲ್ಲಿಯೂ ಬಹಳ ತ್ವರಿತಗತಿಯಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ. ಜಲ್ ಜೀವನ್ ಆಭಿಯಾನಕ್ಕೆ ನಿಗದಿ ಮಾಡಲಾಗಿರುವ 3.60 ಲಕ್ಷ ಕೋ.ರೂ.ಗಳನ್ನು ಗ್ರಾಮಗಳಲ್ಲಿಯೇ ವ್ಯಯಿಸಲಾಗುತ್ತದೆ. ಇದು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ಒದಗಿಸುವುದು ಮಾತ್ರವಲ್ಲದೆ ಹಳ್ಳಿಗಳಲ್ಲಿ ಹಲವು ಉದ್ಯೋಗ ಅವಕಾಶಗಳನ್ನು ನಿರ್ಮಾಣ ಮಾಡಲಿದೆ.

ಸ್ನೇಹಿತರೇ,

ಅತ್ಯಂತ ಕಠಿಣ ಗುರಿಗಳನ್ನು ಬದ್ಧತೆ ಮತ್ತು ಸಾಮೂಹಿಕ ಪ್ರಯತ್ನಗಳ ಮೂಲಕ ಭಾರತೀಯರು ಸಾಧಿಸಬಲ್ಲರೆಂಬುದನ್ನು ನಾವು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ. ಈ ಆಂದೋಲನವನ್ನು ಯಶಸ್ವಿಗೊಳಿಸಲು ನಾವು ಒಗ್ಗೂಡಬೇಕಾಗಿದೆ. ಜಲ್ ಜೀವನ್ ಅಭಿಯಾನ ತನ್ನ ಗುರಿಯನ್ನು ಆದಷ್ಟು ಬೇಗ ತಲುಪಲಿದೆ ಎಂಬ ಆಶಯದೊಂದಿಗೆ ನಾನು ನನ್ನ ಭಾಷಣವನ್ನು ನಿಲ್ಲಿಸುತ್ತೇನೆ.

ನಿಮ್ಮೆಲ್ಲರಿಗೂ ಬಹಳ ಶುಭಾಶಯಗಳು!

ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
Prime Minister meets with Crown Prince of Kuwait
December 22, 2024

​Prime Minister Shri Narendra Modi met today with His Highness Sheikh Sabah Al-Khaled Al-Hamad Al-Mubarak Al-Sabah, Crown Prince of the State of Kuwait. Prime Minister fondly recalled his recent meeting with His Highness the Crown Prince on the margins of the UNGA session in September 2024.

Prime Minister conveyed that India attaches utmost importance to its bilateral relations with Kuwait. The leaders acknowledged that bilateral relations were progressing well and welcomed their elevation to a Strategic Partnership. They emphasized on close coordination between both sides in the UN and other multilateral fora. Prime Minister expressed confidence that India-GCC relations will be further strengthened under the Presidency of Kuwait.

⁠Prime Minister invited His Highness the Crown Prince of Kuwait to visit India at a mutually convenient date.

His Highness the Crown Prince of Kuwait hosted a banquet in honour of Prime Minister.