ನಮಸ್ಕಾರ!
ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೋಷ್ಯಾರಿ ಅವರೆ, ಮುಖ್ಯಮಂತ್ರಿಗಳಾದ ಶ್ರೀ ಉದ್ಧವ್ ಠಾಕರೆ ಅವರೆ, ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾಗಿರುವ ಅಶ್ವಿನಿ ವೈಷ್ಣವ್ ಅವರೆ, ಮತ್ತು ರಾವ್ ಸಾಹೇಬ್ ದಾನ್ವೆ ಅವರೆ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಗಳಾಗಿರುವ ಅಜಿತ್ ಪವಾರ್ ಅವರೆ ಹಾಗೂ ಮಾಜಿ ಮುಖ್ಯಂತ್ರಿಗಳಾದ ದೇವೆಂದ್ರ ಫಡ್ನವಿಸ್ ಅವರೆ ಹಾಗೂ ರಾಜ್ಯದ ಎಲ್ಲ ಸಂಸದರೆ ಮತ್ತು ಶಾಸಕರೆ, ಹಾಗೂ ನನ್ನ ಸಹೋದರ ಮತ್ತು ಸಹೋದರಿಯರೆ..
ನಾಳೆ ಛತ್ರಪತಿ ಶಿವಾಜಿ ಅವರ ಜನ್ಮದಿನವಿದೆ. ಎಲ್ಲಕ್ಕಿಂತ ಮೊದಲು ನಮ್ಮ ರಾಷ್ಟ್ರನಾಯಕ ಛತ್ರಪತಿ ಶಿವಾಜಿ ಅವರ ಮುಂದೆ ನನ್ನ ಶಿರಬಾಗಿ ನಮಿಸಿ, ಗೌರವ ಸಲ್ಲಿಸುವೆನು. ಭಾರತದ ಹೆಮ್ಮೆಯಾಗಿರುವ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಗುರುತಾಗಿರುವ ಮಹಾನಾಯಕ ಶಿವಾಜಿ. ಶಿವಾಜಿ ಜನ್ಮದಿನದ ಮುನ್ನಾದಿನವೇ ಠಾಣೆ ಮತ್ತು ದಿವಾ ನಿಲ್ದಾಣಗಳ ನಡುವೆ ಆರನೆಯ ರೈಲ್ವೆ ಮಾರ್ಗವನ್ನು ಲೋಕಾರ್ಪಣೆಯಾಗುತ್ತಿರುವುದರಿಂದ ಪ್ರತಿ ಮುಂಬೈಕರ್‌ಗೂ ಅಭಿನಂದನೆಗಳು.
ಈ ಹೊಸ ರೈಲು ಮಾರ್ಗವು ಮುಂಬೈ ಜನಜೀವನದಲ್ಲಿ ಒಂದು ಮಹತ್ತರ ಬದಲಾವಣೆ ತರಲಿದೆ. ಬದುಕನ್ನು ಸರಾಗಗೊಳಿಸಲಿದೆ. ಈ ಹೊಸ ರೈಲು ಮಾರ್ಗವು ಮುಂಬೈನ ಎಂದೂ ಮುಗಿಯದ, ವಿಶ್ರಾಂತ ಪಡೆಯದ ಅವಿರತ ಬದುಕಿಗೆ ಮತ್ತೊಂದು ತಂತುವಾಗಲಿದೆ. ಈ ಎರಡು ಮಾರ್ಗಗಳನ್ನು ಆರಂಭಿಸಿರುವುದರಿಂದ ಮುಂಬೈ ಜನತೆಗೆ ನೇರವಾಗಿ ನಾಲ್ಕು ಅನುಕೂಲಗಳು ಆಗಲಿವೆ.
ಮೊದಲನೆಯದ್ದು: ಸ್ಥಳೀಯವಾಗಿ ಓಡಾಡುವ ಲೋಕಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರತ್ಯೇಕ ಮಾರ್ಗಗಳು ದೊರೆಯಲಿವೆ.
ಎರಡನೆಯದ್ದು: ಮುಂಬೈಯಿಂದ ಇತರ ರಾಜ್ಯಗಳಿಗೆ ಹೋಗುವ, ಇತರ ರಾಜ್ಯಗಳಿಂದ ಮುಂಬೈಗೆ ಬರಲಿರುವ ರೈಲುಗಳು, ಲೋಕಲ್ ಟ್ರೇನ್ ಪ್ಯಾಸೇಜಿಗಾಗಿ ಕಾಯುವುದು ತಪ್ಪುತ್ತದೆ.
ಮೂರನೆಯದ್ದು: ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲುಗಳು ಕಲ್ಯಾಣ್ ಮತ್ತು ಕುರ್ಲಾ ವಿಭಾಗದ ನಡುವೆ ಯಾವುದೇ ಅಡೆತಡೆಗಳಿಲ್ಲದೆ ಸಂಚಾರ ಕೈಗೊಳ್ಳಬಹುದು.
ನಾಲ್ಕನೆಯದ್ದಾಗಿ: ಕಾಳ್ವಾ ಹಾಗೂ ಮುಂಬ್ರಾದಲ್ಲಿರುವ ಸ್ನೇಹಿತರಿಗೆ ಇನ್ನು ಮೇಲೆ ಭಾನುವಾರದ ಸಂಚಾರ ದಟ್ಟಣೆಯಿಂದ ಮುಕ್ತಿ ಸಿಗಲಿದೆ.
ಸ್ನೇಹಿತರೆ,
ಇಂದು ಕೇಂದ್ರೀಯ ರೈಲ್ವೆ ಲೈನಿನಿಂದ 36 ಹೊಸ ಲೋಕಲ್ ಟ್ರೇನ್‌ಗಳು ಸಂಚಾರ ಆರಂಭಿಸಲಿವೆ. ಇವುಗಳಲ್ಲಿ ಬಹುತೇಕ ರೈಲುಗಳು ವಾತಾನುಕೂಲಿತ ಅನುಕೂಳ ಹೊಂದಿವೆ. ಇದು ಕೇಂದ್ರ ಸರ್ಕಾರವು ಸ್ಥಳೀಯ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಲೋಕಲ್ ಟ್ರೇನ್‌ಗಳ ಉನ್ನತೀಕರಣ ಹಾಗೂ ಆಧುನೀಕರಣಗೊಳಿಸುವುದಾಗಿ ಈ ಹಿಂದೆ ತಿಳಿಸಿತ್ತು. ಆ ನಿಟ್ಟಿನಲ್ಲಿ ಬದ್ಧವಾಗಿರುವ ಕೇಂದ್ರ ಸರ್ಕಾರವು ಈ ಅನುಕೂಲ ಮಾಡಿದೆ. ಕಳೆದ ಏಳು ವರ್ಷಗಳಲ್ಲಿ ಮೆಟ್ರೊ ಸಂಚಾರ ಮಾರ್ಗವನ್ನೂ ವಿಸ್ತರಿಸಲಾಗಿದೆ. ಮುಂಬೈಗೆ ಹೊಂದಿಕೊಂಡಂತೆ ಇರುವ ಉಪನಗರಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಮೆಟ್ರೊ ಅತಿ ತೀವ್ರಗತಿಯಲ್ಲಿ ವಿಸ್ತರಿಸಿದೆ.
ಸಹೋದರ ಮತ್ತು ಸಹೋದರಿಯರೆ,
ಮುಂಬೈಗೆ ಹೆಚ್ಚುವರಿ ಲೋಕಲ್ ಟ್ರೇನುಗಳ ಬೇಡಿಕೆ ಬಲು ಹಳತಾಗಿದೆ. ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಈ ರೈಲುಗಳ ಆಧುನೀಕರಣದ ಬೇಡಿಕೆಯೂ ಇತ್ತು. 2008ರಲ್ಲಿ ಈ ಐದನೆಯ ಮತ್ತು ಆರನೆಯ ರೈಲ್ವೆ ಮಾರ್ಗಗಳಿಗೆ ಶಿಲಾನ್ಯಾಸ ಮಾಡಲಾಗಿದೆ. 2015ರಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ದುರದೃಷ್ಟಾವಶಾತ್ ಈ ಯೋಜನೆಯು 2014ರವರೆಗೂ ಈ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿತ್ತು. ಒಂದಲ್ಲ ಒಂದು ಕಾರಣದಿಂದಾಗಿ ವಿಳಂಬವಾಗಿತ್ತು. ಅದಾದ ನಂತರ ಈ ಯೋಜನೆಯನ್ನು ನಮ್ಮ ಕೈಗೆತ್ತಿಕೊಂಡೆವು. ಮತ್ತು ಪರಿಹಾರ ಒದಗಿಸಿದೆವು.
34 ಮಾರ್ಗಗಳು ಹಳೆಯ ಮಾರ್ಗಗಳೊಂದಿಗೆ ಹೊಸ ಮಾರ್ಗಗಳೊಂದಿಗೆ ಸಂಪರ್ಕ ಸಾಧಿಸಬೇಕಿದೆ ಎಂದು ನನಗೆ ತಿಳಿಸಲಾಯಿತು. ನಮ್ಮ ಕಾರ್ಮಿಕರು ಹಾಗೂ ಎಂಜಿನಿಯರ್‌ಗಳು, ಈ ಯೋಜನೆಯನ್ನು ಹಲವು ಸವಾಲುಗಳ ನಡುವೆಯೂ ಪೂರ್ಣಗೊಳಿಸಿದ್ದಾರೆ. ಡಜನ್ ಗಟ್ಟಲೆ ಬ್ರಿಜ್‌ಗಳು, ಫ್ಲೈ ಓವರ್‌ಗಳು, ಸುರಂಗಗಳನ್ನು ನಿರ್ಮಿಸಲಾಯಿತು. ರಾಷ್ಟ್ರ ನಿರ್ಮಾಣದಲ್ಲಿ ತೋರಿರುವ ಈ ಬದ್ಧತೆಗಾಗಿ ಹೃತ್ಪೂರ್ವಕವಾಗಿ ಅಭಿನಂದಿಸುವೆ.
ಸಹೋದರ ಸಹೋದರಿಯರೆ,
ಮುಂಬೈ ಮೆಟ್ರೊಪೊಲಿಸ್ ಸ್ವತಂತ್ರ ಭಾರತದ ಅಭಿವೃದ್ಧಿಗಾಗಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಸದ್ಯ ಮುಂಬೈಗೆ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಾಧ್ಯವಾಗುವಂತೆ ಸಮರ್ಥ ಮುಂಬೈ ಮಾಡಲು ಅನೇಕ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗಾಗಿ ಮುಂಬೈನಲ್ಲಿ 21ನೇ ಶತಮಾನದ ಎಲ್ಲ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ರೈಲು ಸಂಪರ್ಕದ ವಿಚಾರವಾಗಿ ಮಾತನಾಡುವುದಾದರೆ ಸಾವಿರಾರು ಕೋಟಿ ರೂಪಾಯಿಗಳಷ್ಟು ಬಂಡವಾಳ ಹೂಡಲಾಗಿದೆ. ಮುಂಬೈ ಉಪನಗರ ರೈಲ್ವೆ ಸ್ಟೇಷನ್ ಅತ್ಯಾಧುನಿಕ ಅನುಕೂಲಗಳಿಂದ ಹಾಗೂ ತಂತ್ರಜ್ಞಾನದಿಂದ ಕೂಡಿದೆ. ನಮ್ಮ ಉದ್ದೇಶ ಈ ಕೇಂದ್ರದ ಸಾಮರ್ಥ್ಯವನ್ನು 400 ಕಿ.ಮೀ.ಗಳವರೆಗೂ ಹೆಚ್ಚಿಸಬೇಕಾಗಿದೆ. ಜೊತೆಗೆ ಆಧುನಿಕ ಸಿಗ್ನಲ್ ವ್ಯವಸ್ಥೆ ಸಿಬಿಟಿಸಿಯನ್ನೂ ಅಳವಡಿಸಬೇಕು. ಮತ್ತು ಇತರ 19 ನಿಲ್ದಾಣಗಳನ್ನು ಆಧುನೀಕರಿಸುವ ಯೋಜನೆಯೂ ಇದೆ.
ಸಹೋದರ ಮತ್ತು ಸಹೋದರಿಯರೆ,
ಕೇವಲ ಮುಂಬೈನ ಒಳಮಾರ್ಗಗಳಲ್ಲ, ಮುಂಬೈ ಮಹಾನಗರವನ್ನು ಇತರ ನಗರಗಳೊಂದಿಗೆ, ರಾಜ್ಯಗಳೊಂದಿಗೆ ಸಂಪರ್ಕ ಏರ್ಪಡಿಸುವ ಎಲ್ಲ ಮಾರ್ಗಗಳೂ ಆಧುನೀಕರಿಸುವ ಅಗತ್ಯವಿದೆ. ಆದ್ದರಿಂದ ಅಹ್ಮದಾಬಾದ್–ಮುಂಬೈ ಅತಿವೇಗದ ರೈಲು ಸದ್ಯಕ್ಕೆ ಮುಂಬೈಗೆ ಮತ್ತು ದೇಶಕ್ಕೆ ಅಗತ್ಯ ಇರುವ ತುರ್ತು ಮಾರ್ಗವಾಗಿದೆ. ಇದು ಮುಂಬೈನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮುಂಬೈಗೆ ಕನಸುಗಳ ಮಹಾನಗರಿ ಎಂದು ಕರೆಯಲಾಗುತ್ತದೆ. ಆ ಹೆಸರಿಗೆ ನ್ಯಾಯ ಸಲ್ಲಿಸುತ್ತದೆ. ಈ ಯೋಜನೆಯನ್ನು ಕೂಡಲೇ ಮುಗಿಸುವುದು ನಮ್ಮೆಲ್ಲರ ತುರ್ತು ಜರೂರು ಆಗಬೇಕಿದೆ. ಅದರಂತೆಯೇ Western Dedicated Freight Corridor ಸಹ ಮುಂಬೈಗೆ ನೂತನ ದಿಶೆಯನ್ನು ತೋರಲಿದೆ.
ಸ್ನೇಹಿತರೆ,
ನಮಗೆಲ್ಲ ತಿಳಿದಿದೆ, ಭಾರತೀಯ ರೈಲಿನಲ್ಲಿ ಸಂಚಾರ ಮಾಡುವವರ ಜನಸಂಖ್ಯೆಯು ವಿಶ್ವದ ಕೆಲವು ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ. ಭಾರತೀಯ ರೈಲನ್ನು ಸುರಕ್ಷಿತಗೊಳಿಸುವುದ, ಅನುಕೂಲಕರವಾಗಿಸುವುದು, ಆಧುನೀಕರಿಸುವುದು ನಮ್ಮ ಸರ್ಕಾರದ ಹಲವು ಆದ್ಯತೆಗಳಲ್ಲಿ ಒಂದಾಗಿದೆ. ಕೊರೊನಾದಂಥ ಜಾಗತಿಕ ಪಿಡುಗು ಸಹ ನಮ್ಮ ಬದ್ಧತೆಯನ್ನು, ಶ್ರದ್ಧೆಯನ್ನು ಕಲಕಲು ಆಗಲಿಲ್ಲ. ಕಳೆದೆರಡು ವರ್ಷಗಳಲ್ಲಿ ರೈಲ್ವೆ ಇಲಾಖೆ ಹಲವು ಹೊಸ ದಾಖಲೆಗಳನ್ನು ಬರೆದಿದೆ. 8000 ಕಿ.ಮಿ. ದೂರವನ್ನು ವಿದ್ಯುತ್ ಸಂಪರ್ಕಿತ ಮಾರ್ಗವಾಗಿ ಪೂರ್ಣಗೊಳಿಸಲಾಗಿದೆ. 4500 ಕಿ.ಮಿ.ಗಳಷ್ಟು ದೂರದ ರೈಲ್ವೆ ಲೈನುಗಳನ್ನು ಜೋಡಿಮಾರ್ಗವಾಗಿ ಪೂರ್ಣಗೊಳಿಸಲಾಗಿದೆ. ಕೊರೊನಾದ ಮಹಾ ಪಿಡುಗಿನ ಸಮಯದಲ್ಲಿಯೇ ಕೃಷಿಕರು ಮತ್ತು ದೇಶದ ಮಾರುಕಟ್ಟೆಯೊಂದಿಗೆ ಕಿಸಾನ್ ರೈಲುಗಳ ಮೂಲಕ ಸಂಪರ್ಕ ಕಲ್ಪಿಸಲಾಯಿತು.
ಸ್ನೇಹಿತರೆ,
ರೈಲ್ವೆ ಇಲಾಖೆಯಲ್ಲಿ ತರುವ ಬದಲಾವಣೆಗಳು ಹಾಗೂ ಸುಧಾರಣೆಗಳು ದೇಶದ ಸಂಚಾರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನೇ ತರಬಲ್ಲವು ಎಂದು ನಮಗೆಲ್ಲ ತಿಳಿದಿದೆ. ಆದ್ದರಿಂದ ಕೇಂದ್ರ ಸರ್ಕಾರವು ಕಳೆದ ಏಳು ವರ್ಷಗಳಿಂದ ರೈಲ್ವೆ ಇಲಾಖೆಯಲ್ಲಿ ಸಾಧ್ಯ ಇರುವ ಎಲ್ಲ ಸುಧಾರಣೆಗಳಿಗೂ ಉತ್ತೇಜನ ನೀಡುತ್ತಿದೆ. ಈ ಹಿಂದೆ ನಿರ್ಮಾಣದ ಕಾರ್ಯಗಳಲ್ಲಿ ಯೋಜನೆಗಳನ್ನು ನಿರೂಪಿಸುವುದರಿಂದ ಆರಂಭಿಸಿ, ಕಾರ್ಯಾನುಷ್ಠಾನಕ್ಕೆ ತರುವಲ್ಲಿ ಸಹಭಾಗಿತ್ವ ಮತ್ತು ಸಂಯೋಜನಾ ಶಕ್ತಿಯ ಕೊರತೆ ಇತ್ತು. ಇಂಥ ಧೋರಣೆಯಿಂದ ದೇಶವನ್ನು 21ನೇ ಶತಮಾನಕ್ಕೆ ಅಗತ್ಯ ಇರುವಂತೆ ನಿರ್ಮಿಸುವುದು ಅಸಾಧ್ಯವಾಗಿದೆ.
ಆದ್ದರಿಂದಲೇ ನಾವು ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಯೋಜನೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳನ್ನೂ ಒಂದೇ ವೇದಿಕೆಯ ಅಡಿ ತರಲಾಗಿದೆ. ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ಕ್ಷೇತ್ರಗಳನ್ನು ಒಂದೇ ವೇದಿಕೆಗೆ ತಂದಿರುವುದರಿಂದ ನಿರ್ಮಾಣದ ಯೋಜನೆಗಳಿಗೆ ಅಗತ್ಯ ಇರುವ ಎಲ್ಲ ಮಾಹಿತಿಯೂ ಒಟ್ಟಿಗೆ ಸಿಗುತ್ತದೆ. ಪ್ರತಿಯೊಬ್ಬ ಪಾಲುದಾರನಿಗೂ ಅಗತ್ಯ ಇರುವ ಮಾಹಿತಿಯು ಕೂಡಲೇ ಸಿಗುವಂತಾಗಿದೆ. ಹೀಗಿದ್ದಾಗ ಪ್ರತಿಯೊಬ್ಬರೂ ತಮ್ಮ ತಮ್ಮ ಪಾಲುದಾರಿಕೆಯನ್ನು ನಿರ್ವಹಿಸಲು ಅನುಕೂಲವಾಗುತ್ತದೆ. ಯೋಜನೆಗಳ ಕಾರ್ಯಾನುಷ್ಠಾನಕ್ಕೆ ಇದರಿಂದ ಒಂದು ವೇಗ ದೊರೆಯುತ್ತದೆ. ಇಡೀ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದಾಗಿದೆ. ಮುಂಬೈ ಮತ್ತು ದೇಶದ ಇತರೆಡೆಯೂ ರೈಲ್ವೆ ವಿಭಾಗದ ಉನ್ನತೀಕರಣಕ್ಕಾಗಿ ನಾವು ಗತಿಶಕ್ತಿಯ ವೇಗದಲ್ಲಿ ಕಾರ್ಯ ನಿರ್ವಹಿಸಲಿದ್ದೇವೆ.
ಸ್ನೇಹಿತರೆ,
ಈ ಹಿಂದಿನಿಂದಲೂ ಬಡವರು ಹಾಗೂ ಮಧ್ಯಮ ವರ್ಗದವರು ಬಳಸುವ ಸಂಪನ್ಮೂಲಗಳಲ್ಲಿ ಬಂಡವಾಳ ಹೂಡುವ ಅಗತ್ಯ ಇಲ್ಲವೆಂದು ಈ ನಂಬಲಾಗಿತ್ತು. ಇದರ ಪರಿಣಾಮವಾಗಿ ಭಾರತದ ಸಾರ್ವಜನಿಕ ಸಾರಿಗೆ ಇಲಾಖೆಯು ಬಳಲುತ್ತಲೇ ಬಂದಿತು. ಆದರೆ ಈಗ ಭಾರತವು ಅಂಥ ಹಳೆಯ ಧೋರಣೆಯನ್ನು ಕಡಿದು ಹಾಕಿದೆ. ಆಧುನಿಕ ರೈಲ್ವೆ ನಿಲ್ದಾಣಗಳಾದ ಗಾಂಧಿನಗರ ಮತ್ತು ಭೋಪಾಲ್‌ನ ನಿಲ್ದಾಣಗಳು ಆಧುನಿಕ ರೈಲ್ವೆ ನಿಲ್ದಾಣಗಳ ಮಾದರಿಯಾಗಿ ಬದಲಾಗಿವೆ. ಇಂದು 6000 ರೈಲ್ವೆ ನಿಲ್ದಾಣಗಳು ವೈಫೈ ಸೌಲಭ್ಯದೊಂದಿಗೆ ಸಂಪರ್ಕ ಪಡೆದಿವೆ. ವಂದೇ ಭಾರತ ಎಕ್ಸ್‌ಪ್ರೆಸ್ ಟ್ರೇನುಗಳು ಭಾರತೀಯ ರೈಲ್ವೆಗಳಿಗೆ ವೇಗ ಮತ್ತು ಆಧುನಿಕ ಸೌಲಭ್ಯಗಳನ್ನು ನೀಡುತ್ತಿವೆ. ಮುಂಬರಲಿರುವ ದಿನಗಳಲ್ಲಿ 400 ವಂದೇ ಭಾರತ ರೈಲುಗಳು ಭಾರತೀಯರ ಸೇವೆಗಾಗಿ ಸಂಚಾರ ಆರಂಭಿಸಲಿವೆ.
ಸಹೋದರ ಮತ್ತು ಸಹೋದರಿಯರೆ,
ನಮ್ಮ ಸರ್ಕಾರವು ಇನ್ನೊಂದು ಧೋರಣೆಯನ್ನೂ ಬದಲಿಸಿದೆ. ರೈಲ್ವೆಯ ಸಾಮರ್ಥ್ಯದ ಬಗೆಗಿನ ನಂಬಿಕೆಯೇ ಬದಲಾಗಿದೆ. ಕಳೆದ ಏಳೆಂಟು ವರ್ಷಗಳ ಹಿಂದೆ ರೈಲ್ವೆ ಕೋಚುಗಳನ್ನು ತಯಾರಿಸುವ ಕಾರ್ಖಾನೆಗಳ ನಡುವೆ ಹಾಗೂ ಇಲಾಖೆಯ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಈ ಕಾರ್ಖಾನೆಗಳ ಪರಿಸ್ಥಿತಿಯನ್ನು ಗಮನಿಸಿದಾಗ ಯಾರಿಗೂ ಈ ಕಾರ್ಖಾನೆಗಳೂ ಅತ್ಯಾಧುನಿಕ ಬೋಗಿಗಳನ್ನು ನಿರ್ಮಿಸಬಹುದು ಎಂಬ ಸಣ್ಣದೊಂದು ನಂಬಿಕೆಯೂ ಇರಲಿಲ್ಲ. ಆದರೆ ಇಂದು ವಂದೇ ಭಾರತ ಟ್ರೇನ್ ಹಾಗೂ ವಿಸ್ತಾಡೊಮ್ ಕೋಚ್‌ಗಳೂ ಸಹ ಇವೇ ಕಾರ್ಖಾನೆಗಳಲ್ಲಿ ನಿರ್ಮಿಸಲಾಯಿತು. ನಾವು ಇಂದು ಕೇವಲ ರೈಲ್ವೆ ಮಾರ್ಗ ಮತ್ತು ಬೋಗಿಗಳಲ್ಲಿ ಅಷ್ಟೇ ಅಲ್ಲ, ನಿರಂತರವಾಗಿ ಸಿಗ್ನಲಿಂಗ್ ವ್ಯವಸ್ಥೆಯನ್ನು ಆಧುನೀಕರಿಸುವತ್ತಲೂ ಶ್ರಮಿಸುತ್ತಿದ್ದೇವೆ. ನಮಗೆ ಇಲ್ಲಿ ಸ್ವಾವಲಂಬಿ ಪರಿಹಾರಗಳ ಅಗತ್ಯ ಇವೆ. ವಿದೇಶಿ ಅವಲಂಬನೆಗಳಿಂದ ನಮಗೆ ಮುಕ್ತಿ ಸಿಗಬೇಕಿದೆ.
ಸ್ನೇಹಿತರೆ,
ಈ ಹೊಸಬಗೆಯ ಅಭಿವೃದ್ಧಿಗಳು, ಅನುಕೂಲಗಳು ಹಾಗೂ ಸೌಲಭ್ಯಗಳು ಮುಂಬೈನ ಪ್ರತಿ ಪ್ರಜೆಗೂ ಸಾಕಷ್ಟು ಲಾಭ ತಂದು ಕೊಡಲಿದೆ. ಕೇವಲ ಮುಂಬೈಗೆ ಮಾತ್ರವಲ್ಲ, ಮುಂಬೈ ಸುತ್ತಲಿನ ನಗರಗಳಿಗೂ ಅನುಕೂಲವಾಗಲಿದೆ. ಈ ಅನುಕೂಲಗಳು ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಜೀವನಕ್ಕಾಗಿ ಅನ್ನದ ದಾರಿಯನ್ನು ಕಲ್ಪಿಸಿಕೊಡಲಿವೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ. ಮುಂಬೈನ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಲಾಗುವುದು ಎಂಬ ಬದ್ಧತೆಯನ್ನು ಪುನರುಚ್ಚರಿಸುವುದರೊಂದಿಗೆ ನಾನು ಮತ್ತೊಮ್ಮೆ ಎಲ್ಲ ಮುಂಬೈಕರ್‌ಗಳಿಗೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಅನಂತಾನಂತ ಧನ್ಯವಾದಗಳೊಂದಿಗೆ...