ಹರ ಹರ ಮಹಾದೇವ್! ಹರ ಹರ ಮಹಾದೇವ್! ಹರ ಹರ ಮಹಾದೇವ್!

ಕಾಶಿ ಕೊತ್ವಾಲ್, ಮಾತೆ ಅನ್ನಪೂರ್ಣ, ಮಾತೆ ಗಂಗಾಗೆ ಜಯವಾಗಲಿ

ಜೋ ಬೋಲೆ ಸೋ ನಿಹಾಲ್, ಸತ್ ಶ್ರೀ ಅಕಾಲ್! ನಮೋ ಬುದ್ಧಾಯ!

ಕಾಶಿಯ ಎಲ್ಲಾ ಜನತೆಗೆ ಮತ್ತು ದೇಶದ ಜನತೆಗೆ ಕಾರ್ತಿಕ ಪೂರ್ಣಿಮಾ ದೇವ ದೀಪಾವಳಿಯ ಅಂಗವಾಗಿ ಹೃದಯಪೂರ್ವಕ ಶುಭಾಶಯಗಳು. ಗುರು ನಾನಕ್ ದೇವ್ ಜೀ ಅವರ ಪ್ರಕಾಶ ಪರ್ವಕ್ಕಾಗಿ ನಿಮಗೆಲ್ಲಾ ಅಭಿನಂದನೆಗಳು. 

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ನನ್ನ ಸಂಸತ್ತಿನ ಸಹೋದ್ಯೋಗಿ ಶ್ರೀ ರಾಧಾ ಮೋಹನ ಸಿಂಗ್ ಜೀ, ಉತ್ತರ ಪ್ರದೇಶ ಸರಕಾರದ ಸಚಿವರಾದ ಭಾಯಿ ಅಶುತೋಷ್ ಜೀ, ರವೀಂದ್ರ ಜೈಸ್ವಾಲ್ ಜೀ, ನೀಲಕಾಂತ್ ತಿವಾರಿ ಜೀ, ಉತ್ತರ ಪ್ರದೇಶ ರಾಜ್ಯ ಬಿ.ಜೆ.ಪಿ. ಅಧ್ಯಕ್ಷರಾದ ಭಾಯಿ ಸ್ವತಂತ್ರ ದೇವ್ ಸಿಂಗ್ ಜೀ, ಶಾಸಕರಾದ ಸೌರವ ಶ್ರೀವಾಸ್ತವ ಜೀ, ವಿಧಾನ ಪರಿಷತ್ ಸದಸ್ಯರಾದ ಭಾಯಿ ಅಶೋಕ್ ಧಾವನ್ ಜೀ, ಸ್ಥಳೀಯ ಬಿ.ಜೆ.ಪಿ. ನಾಯಕರಾದ ಮಹೇಶ್ಚಂದ ಶ್ರೀವಾಸ್ತವ ಜೀ, ವಿದ್ಯಾಸಾಗರ ರೈ ಜೀ, ಇತರ ಎಲ್ಲಾ ಗೌರವಾನ್ವಿತರೇ ಮತ್ತು ಕಾಶಿಯ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ

ನಾವು,  ಕಾಶಿಯ ಜನತೆ ಕಾರ್ತಿಕ ಮಾಸವನ್ನು ಪವಿತ್ರ, ಶುಭಕರ ಮಾಸ ಎಂದು ಕರೆಯುತ್ತೇವೆ. ಕಾತಿಕಿ ಪುನವಾಸಿಯಂತೆ ಇದು ದೇವರುಗಳಿಗೆ ವಿಶೇಷ ತಿಂಗಳು, ತಲೆತಲಾಂತರಗಳಿಂದ, ಗಂಗಾ ನದಿಯಲ್ಲಿ ಮುಳುಗು ಸ್ನಾನ, ತೀರ್ಥ ಸ್ನಾನ ಮಾಡುವ, ಈ ದಿನದಂದು ದಾನ ಧರ್ಮ ಮಾಡುವ ಸಂಪ್ರದಾಯವಿದೆ. ತಲೆತಲಾಂತರದಿಂದಲೂ ಪಂಚಗಂಗಾ ಘಾಟ್, ದಶಾಶ್ವಮೇಧ ಘಾಟ್, ಶೀಟ್ಲಾ ಘಾಟ್ ಅಥವಾ ಆಸ್ಸಿ ಘಾಟಿನಲ್ಲಿ ಭಕ್ತರು ತೀರ್ಥಸ್ನಾನ ಮಾಡುತ್ತಾರೆ. ಗಂಗಾ ನದಿಯ ಎಲ್ಲಾ ದಂಡೆಗಳಲ್ಲೂ , ಗೊಡೋವ್ಲಿಯಾ ಮತ್ತು ಗ್ಯಾನವ್ಯಾಪೀ ಧರ್ಮಶಾಲಾ ಸಹಿತ ಜನರು ಇಲ್ಲಿ ತಂಡೋಪತಂಡವಾಗಿ ಬರುತ್ತಾರೆ, ಕಿಕ್ಕಿರಿದು ತುಂಬಿರುತ್ತಾರೆ. ಪಂಡಿತ್ ರಾಂಕಿಂಕರ್ ಮಹಾರಾಜಾ ಅವರು ಬಾಬಾ ವಿಶ್ವನಾಥರ ರಾಮ ಕಥಾವನ್ನು ಕಾರ್ತಿಕದ ಇಡೀ ತಿಂಗಳು ವಾಚನ ಮಾಡುತ್ತಾರೆ. ದೇಶದ ವಿವಿಧ ಭಾಗಗಳಿಂದ ಜನರು ಅವರ ಕಥೆಯನ್ನು ಕೇಳಲು ಬರುತ್ತಾರೆ.

ಕೊರೊನಾ ಬಹಳಷ್ಟನ್ನು ಬದಲಾಯಿಸಿರಬಹುದು, ಆದರೆ ಯಾರಿಗೂ ಶಕ್ತಿಯನ್ನು, ಭಕ್ತಿ ಭಾವನೆಯನ್ನು ಮತ್ತು ಕಾಶಿಯ ಪ್ರಭಾವವನ್ನು ಬದಲಾಯಿಸಲು ಸಾಧ್ಯವಾಗದು. ಬೆಳಿಗ್ಗೆಯಿಂದಲೇ, ಕಾಶಿಯ ಜನರು ಸ್ನಾನ ಮಾಡುತ್ತಾ, ಭಕ್ತಿಯನ್ನು ಸಮರ್ಪಿಸುತ್ತಾ, ದಾನ ಧರ್ಮದಲ್ಲಿ ತೊಡಗಿರುತ್ತಾರೆ. ಕಾಶಿ ಸದಾ ರೋಮಾಂಚಕಾರಿ. ಕಾಶಿಯ ಬೀದಿಗಳು ಸದಾ ಶಕ್ತಿಯನ್ನು ಹೊರಸೂಸುತ್ತಿರುತ್ತವೆ. ಕಾಶಿಯ ದಂಡೆಗಳು ಸದಾ ದೈವಿಕವಾಗಿರುತ್ತವೆ ಮತ್ತು ಇದು ನನ್ನ ಅಲೌಕಿಕ ಕಾಶಿ.

ಸ್ನೇಹಿತರೇ,

ಕಾಶಿಯು ಗಂಗಾ ತಾಯಿಯ ಸಾನಿಧ್ಯದಲ್ಲಿ ದೀಪಗಳ ಹಬ್ಬವನ್ನು ಆಚರಿಸುತ್ತಿದೆ, ಮತ್ತು ಮಹಾದೇವನ ಆಶೀರ್ವಾದದೊಂದಿಗೆ ಇದರ ಭಾಗವಹಿಸಲು ಅವಕಾಶ ಲಭಿಸಿರುವುದು ನನ್ನ ಅದೃಷ್ಟ. ಕಾಶಿಯಲ್ಲಿ ಷಟ್ಪಥ ಹೆದ್ದಾರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಅವಕಾಶವೂ ನನಗೆ ಲಭಿಸಿದೆ. ಸಂಜೆ ನಾನು ದೇವ ದೀಪಾವಳಿಯನ್ನು ಸಾಕ್ಷೀಕರಿಸಲಿದ್ದೇನೆ. ಇಲ್ಲಿಗೆ ಬರುವುದಕ್ಕೆ ಮೊದಲು ನನಗೆ ಕಾಶಿ ವಿಶ್ವನಾಥ ಕಾರಿಡಾರಿಗೆ ಭೇಟಿ ನೀಡುವ ಅವಕಾಶವೂ ಲಭಿಸಿತ್ತು ಮತ್ತು ಸಾರಾನಾಥದಲ್ಲಿ ನಾನು ಲೇಸರ್ ಪ್ರದರ್ಶನವನ್ನೂ  ವೀಕ್ಷಿಸಲಿದ್ದೇನೆ. ನಾನು ಇದನ್ನು ಮಹಾದೇವನ ಆಶೀರ್ವಾದವೆಂದು ಭಾವಿಸುತ್ತೇನೆ ಮತ್ತು ಕಾಶಿ ಜನತೆಯ ವಿಶೇಷ ಪ್ರೀತಿ, ವಿಶ್ವಾಸ ಎಂದು ಪರಿಗಣಿಸುತ್ತೇನೆ.

ಸ್ನೇಹಿತರೇ,

ಕಾಶಿಗೆ ಇದೊಂದು ವಿಶೇಷ ಸಂದರ್ಭ. ನಿನ್ನೆ ನಾನು ಮನ್ ಕಿ ಬಾತ್ ನಲ್ಲಿ ಇದನ್ನು ಪ್ರಸ್ತಾಪಿಸಿದ್ದನ್ನು ನೀವು ಕೇಳಿರಬಹುದು. ಮತ್ತು ಈಗ ಯೋಗಿ ಜೀ ಅದನ್ನು ಪೂರ್ಣ ಶಕ್ತಿಯಿಂದ  ಪುನರುಚ್ಚರಿಸಿದರು. ಅನ್ನಪೂರ್ಣ ಮಾತೆಯ ವಿಗ್ರಹವನ್ನು  ಸುಮಾರು 100 ವರ್ಷಗಳ ಹಿಂದೆ ಕಾಶಿಯಿಂದ ಕದ್ದೊಯ್ಯಲಾಗಿತ್ತು, ಮತು ಅದು ಭಾರತಕ್ಕೆ ವಾಪಸು ಬರುತ್ತಿದೆ. ಅನ್ನಪೂರ್ಣ ಮಾತೆ ಮರಳಿ ತನ್ನ ಮನೆಗೆ ಬರುತ್ತಿದ್ದಾರೆ. ಕಾಶಿಗೆ ಇದು ಅದೃಷ್ಟದ ಸಂದರ್ಭ. ನಮ್ಮ ದೇವರುಗಳ ಪ್ರಾಚೀನ ವಿಗ್ರಹಗಳು ನಮ್ಮ ನಂಬಿಕೆ, ನಿಷ್ಟೆಗಳ ಪ್ರತೀಕಗಳು ಮಾತ್ರವಲ್ಲ, ನಮ್ಮ ಅಮೂಲ್ಯ ಪರಂಪರೆಯ ಭಾಗ ಕೂಡಾ. ಇಂತಹ ಪ್ರಯತ್ನಗಳನ್ನು ಮೊದಲೇ ಮಾಡಲಾಗಿದ್ದರೆ, ಇಂತಹ ಹಲವು ವಿಗ್ರಹಗಳನ್ನು ಭಾರತಕ್ಕೆ ಮರಳಿ ತರಲು ಸಾಧ್ಯವಿತ್ತು. ಆದಾಗ್ಯೂ ಕೆಲವು ಜನರು ಬೇರೆ ರೀತಿಯಲ್ಲಿ ಯೋಚಿಸುತ್ತಾರೆ. ನಮಗೆ, ವಂಶ ಪಾರಂಪರ್ಯವಾಗಿ ಎಂದರೆ ದೇಶದ ಪರಂಪರೆ ಎಂದರ್ಥ.

ಕೆಲವರಿಗೆ, ವಂಶ ಪಾರಂಪರ್ಯ ಅಥವಾ ಪಿತ್ರಾರ್ಜಿತ ಎಂದರೆ ಅವರ ಕುಟುಂಬ ಮತ್ತು ಅವರ ಕುಟುಂಬದ ಹೆಸರು. ನಮಗೆ, ವಂಶಪಾರಂಪರ್ಯ ಎಂದರೆ ನಮ್ಮ ಸಂಸ್ಕೃತಿ, ನಂಬಿಕೆ, ಮತ್ತು ಮೌಲ್ಯಗಳು. ಪಿತ್ರಾರ್ಜಿತ ಎಂದರೆ ಅವರಿಗೆ ಅವರ ಪ್ರತಿಮೆಗಳು ಮತ್ತು ಅವರ ಕುಟುಂಬದ ಛಾಯಾಚಿತ್ರಗಳು. ಆದುದರಿಂದ ನಾವು ದೇಶದ ಪರಂಪರೆಯನ್ನು ಕಾಪಾಡಲು ಆದ್ಯತೆ ನೀಡುತ್ತಿರುವಾಗ, ಅವರು ಅವರ ಕುಟುಂಬದ ಆಡಳಿತವನ್ನು ಉಳಿಸಿಕೊಳ್ಳುವುದಕ್ಕೇ ಗಮನ ಕೇಂದ್ರೀಕರಿಸಿದರು. ಕಾಶಿಯ ಜನರೇ ಹೇಳಿ, ನಾನು ಸರಿಯಾದ ದಾರಿಯಲ್ಲಿದ್ದೇನಲ್ಲವೇ?. ನಾನು ಸರಿಯಾದುದನ್ನು ಮಾಡುತ್ತಿದ್ದೇನೆಯೇ?. ನೋಡಿ, ಇದೆಲ್ಲ ಆಗುತ್ತಿರುವುದು ನಿಮ್ಮ ಆಶೀರ್ವಾದದಿಂದ. ಇಂದು, ಕಾಶಿಯ ಪರಂಪರೆ ಮರಳಿ ಬಂದಿದೆ, ಮಾತಾ ಅನ್ನಪೂರ್ಣ ಆಗಮನದ ಸುದ್ದಿ ಕೇಳಿ ಕಾಶಿಯು ಸಂತಸಗೊಂಡಿದೆ.

ಸ್ನೇಹಿತರೇ,

ಕಾಶಿಯ 84 ಘಾಟ್ ಗಳನ್ನು ಮಿಲಿಯಾಂತರ ದೀಪಗಳ ಬೆಳಕಿನಲ್ಲಿ ನೋಡುವುದೇ ಒಂದು ಅದ್ಭುತ. ಗಂಗಾ ನದಿಯ ಅಲೆಗಳ ಮಧ್ಯದಲ್ಲಿ ಈ ಬೆಳಕು ಸೆಳವನ್ನು ಇನ್ನಷ್ಟು ಹೆಚ್ಚು ದೈವಿಕವನ್ನಾಗಿಸುತ್ತಿದೆ. ಭಕ್ತಿಯನ್ನು ಉದ್ದೀಪಿಸುತ್ತಿದೆ. ಮತ್ತು ನೋಡಿ, ಇದಕ್ಕೆ ಸಾಕ್ಷಿ ಯಾರು?. ಈ ದೇವ ದೀಪಾವಳಿ ಕಾಶಿ ಮಹಾದೇವನ ಹಣೆಯಲ್ಲಿ ಪೂರ್ಣಿಮೆಯ ದಿನದಂದು ಚಂದ್ರ ಕಂಗೊಳಿಸುವಂತೆ ಇದೆ. ಇದು ಕಾಶಿಯ ವೈಭವ. ಇದನ್ನು ನಮ್ಮ ವೇದಗಳಲ್ಲಿ ಹೇಳಲಾಗಿದೆ: “काश्यां हि काशते काशी सर्वप्रकाशिका”. ಇದರರ್ಥ ಕಾಶಿಯು  ಅರಿವಿನಿಂದ, ಜ್ಞಾನದಿಂದ ಅಲಂಕರಿಸಲ್ಪಟ್ಟಿದೆ ಮತ್ತು ಆದುದರಿಂದ ಕಾಶಿಯು ಇಡೀ ಜಗತ್ತಿಗೆ ಅರಿವನ್ನು ಪಸರಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಪ್ರತೀ ಶಕೆಯಲ್ಲಿಯೂ ಕಾಶಿಯು ಕೆಲವು ಸಂತರ ತಪಸ್ಸಿನಿಂದ ಅರಿವನ್ನು, ಜ್ಞಾನವನ್ನು ಗಳಿಸಿದೆ ಮತ್ತು ಕಾಶಿಯು ಜಗತ್ತಿಗೆ ಮಾರ್ಗದರ್ಶಕನಾಗಿ ಮುನ್ನಡೆದಿದೆ. ಆದಿ ಶಂಕರಾಚಾರ್ಯ ಜೀ ಅವರು ಪಂಚಗಂಗಾ ಘಾಟಿನಲ್ಲಿ ಈ ದೇವ ದೀಪಾವಳಿಗೆ ಪ್ರೇರಣೆ ನೀಡಿದರು, ಮತ್ತು ಅದನ್ನು ನಾವಿಂದು ಕಾಣುತ್ತಿದ್ದೇವೆ. ಬಳಿಕ ಅಹಿಲ್ಯಾಬಾಯಿ ಹೋಳ್ಕರ್ ಜೀ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದರು. ಅಹಿಲ್ಯಾಬಾಯಿ ಹೋಳ್ಕರ್ ಜೀ ಅವರು ಪಂಚಗಂಗಾ ಘಾಟಿನಲ್ಲಿ ರೂಪಿಸಿದ 1000 ದೀಪಗಳ ಸಾಲು ಈ ಪರಂಪರೆಗೆ ಸಾಕ್ಷಿಯಾಗಿದೆ.

ಸ್ನೇಹಿತರೇ,

ತ್ರಿಪುರಾಸುರ ಎಂಬ ಅಸುರ ಇಡೀ ವಿಶ್ವವನ್ನು ಭಯಭೀತಗೊಳಿಸಿದ್ದ, ಆತನನ್ನು ಭಗವಾನ್ ಶಿವ ಪೂರ್ಣಿಮೆಯ ದಿನದಂದು ನಿವಾರಿಸಿದ ಎಂದು ದಂತ ಕಥೆಗಳು ಹೇಳುತ್ತವೆ. ಉಳಿದ ದೇವತೆಗಳು ಭಗವಾನ್ ಮಹಾದೇವರು  ನೆಲೆಸಿದ ಭೂಮಿಯಲ್ಲಿ ಭಯೋತ್ಪಾದನೆ, ಭಯಾನಕತೆ ಮತ್ತು ಅಂಧಃಕಾರದ ಅಂತ್ಯವನ್ನು ಸಂಭ್ರಮಿಸಲು ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸಿದರು. ದೇವತೆಗಳು ಆಚರಿಸಿದ ದೀಪಾವಳಿಯೇ ದೇವ ದೀಪಾವಳಿ. ಈ ದೇವತೆಗಳು ಯಾರು?. ಆ ದೇವತೆಗಳು ಈಗಲೂ ಇಲ್ಲಿದ್ದಾರೆ ಮತ್ತು ಬನಾರಸ್ಸಿನಲ್ಲಿ ದೀಪಾವಳಿ ಆಚರಿಸುತ್ತಿದ್ದಾರೆ. ನಮ್ಮ ದೊಡ್ಡ ಋಷಿಗಳು ಮತ್ತು ಸಂತರು ಬರೆದಿದ್ದಾರೆ “लोक बेदह बिदित बारानसी की बड़ाई, बासी नर–नारि ईस–अंबिका–स्वरूप हैं”. ಇದರ ಅರ್ಥ ಕಾಶಿಯ ಜನರು ದೇವರ ಅಭಿವ್ಯಕ್ತಿಗಳು. ಕಾಶಿಯ ಜನತೆ ದೇವಿ ಮತ್ತು ಶಿವನ ಅಭಿವ್ಯಕ್ತಿಗಳು, ಆದುದರಿಂದ ಈ 84 ಘಾಟ್ ಗಳಲ್ಲಿ ದೇವರು ಮಿಲಿಯಾಂತರ ದೀಪಗಳನ್ನು ಹಚ್ಚಿ ಬೆಳಕು ಹರಡುತ್ತಿದ್ದಾರೆ. ಈ ದೀಪಗಳನ್ನು ದೇಶಕ್ಕಾಗಿ ತಮ್ಮ ಅಮೂಲ್ಯ ಜೀವವನ್ನು  ತ್ಯಾಗ ಮಾಡಿದವರಿಗಾಗಿಯೂ ಹಚ್ಚಲಾಗುತ್ತಿದೆ. ದೇವ ದೀಪಾವಳಿಯ ಹಿಂದಿರುವ ಕಾಶಿಯ ಪರಂಪರೆಯ ಸ್ಪೂರ್ತಿ ದೇಶಕ್ಕಾಗಿ ತಮ್ಮನ್ನು ತಾವು ತ್ಯಾಗ ಮಾಡಿಕೊಂಡವರಿಗಾಗಿ ರುವಂತಹದಾಗಿದೆ ಎಂಬುದು ನಮ್ಮನ್ನು ಭಾವಪರವಶರನ್ನಾಗಿಸುತ್ತದೆ. ಈ ಸಂದರ್ಭದಲ್ಲಿ, ನಾನು ದೇಶದ ರಕ್ಷಣೆಗಾಗಿ  ಹುತಾತ್ಮರಾದ ನಮ್ಮ ಶೂರ, ಧೈರ್ಯವಂತ ಪುತ್ರರಿಗೆ ವಂದಿಸುತ್ತೇನೆ. ಅವರು ತಮ್ಮ ಇಡೀ ಯೌವನವನ್ನು ತ್ಯಾಗ ಮಾಡಿದ್ದಾರೆ,  ಮಾತ್ರವಲ್ಲ ತಮ್ಮ ಕನಸುಗಳನ್ನು ಭಾರತ ಮಾತೆಯ ಅಡಿಗಳಲ್ಲಿ ಸಮರ್ಪಿಸಿದ್ದಾರೆ.  

ಸ್ನೇಹಿತರೇ,

ಗಡಿಯಲ್ಲಿ ಒಳನುಸುಳುವವರಿಗೆ, ವಿಸ್ತರಣಾವಾದಿ ಶಕ್ತಿಗಳಿಗೆ, ದೇಶದೊಳಗಿದ್ದೇ ದೇಶವನ್ನು ವಿಚ್ಛಿದ್ರಗೊಳಿಸಲು ಒಳಸಂಚು ನಡೆಸುತ್ತಿರುವವರಿಗೆ  ದೇಶವು ಸೂಕ್ತ ಉತ್ತರವನ್ನು ನೀಡಲು ಪ್ರಯತ್ನಿಸುತ್ತಿದೆ. ಆದರೆ, ಇದೇ ವೇಳೆಗೆ, ದೇಶವು ಬಡತನದ ಕತ್ತಲೆಯ ವಿರುದ್ಧ, ಅನ್ಯಾಯದ ಮತ್ತು ಪಕ್ಷಪಾತದ ವಿರುದ್ದ ಬೆಳಕು ಹಚ್ಚಲು ಹಾಗು ಬದಲಾವಣೆಗಾಗಿ ಮುಂದಡಿ ಇಡಲು ತೊಡಗಿದೆ. ಇಂದು ಬಡವರಿಗೆ ಅವರ ಜಿಲ್ಲೆಗಳಲ್ಲಿಯೇ ಮತ್ತು ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನಾ ಮೂಲಕ ಉದ್ಯೋಗ ನೀಡುವ ಆಂದೋಲನ ಚಾಲ್ತಿಯಲ್ಲಿದೆ. ಸ್ವಾಮಿತ್ವ ಯೋಜನಾ ಅಡಿಯಲ್ಲಿ ಅವರ ಮನೆಗಳಿಗೆ ಸಂಬಂಧಿಸಿ ಜನ ಸಾಮಾನ್ಯರಿಗೆ ಕಾನೂನು ಬದ್ಧ ಹಕ್ಕುಗಳನ್ನು ನೀಡುವ ಕಾರ್ಯಕ್ರಮ ಜಾರಿಯಲ್ಲಿದೆ. ಇಂದು ರೈತರು ಮಧ್ಯವರ್ತಿಗಳಿಂದ, ಶೋಷಕರಿಂದ ವಿಮೋಚನೆಗೊಂಡಿದ್ದಾರೆ. ಇಂದು ಬ್ಯಾಂಕುಗಳು ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಮತ್ತು ಬಂಡವಾಳ ನೀಡಲು ಮುಂದೆ ಬರುತ್ತಿವೆ, ಕೆಲವು ದಿನಗಳ ಹಿಂದೆ,  ನಾನು ಕಾಶಿಯಲ್ಲಿ “ಸ್ವಾನಿಧಿ ಯೋಜನಾ” ಫಲಾನುಭವಿಗಳ ಜೊತೆ ಮಾತನಾಡಿದ್ದೆ. ಆತ್ಮನಿರ್ಭರ ಭಾರತದ ಭಾಗವಾಗಿ ದೇಶವು ಸ್ಥಳೀಯ ಉತ್ಪನ್ನಗಳ ಪರವಾಗಿ ಮಾತನಾಡುತ್ತಿದೆ. ಇದು ನಡೆಯುತ್ತಿಲ್ಲವೇ?. ನೀವಿದನ್ನು ಸದಾ ನೆನಪಿಡುತ್ತೀರೋ ಅಥವಾ ನಾನಿಲ್ಲಿಂದ ಹೊರಟ ಕೂಡಲೇ ಮರೆತುಬಿಡುತ್ತೀರೋ?. ನಾನು ವೋಕಲ್ ಫಾರ್ ಎನ್ನುತ್ತೇನೆ, ಮತ್ತು ನೀವು ಲೋಕಲ್ ಎಂದು ಹೇಳಿ. ಹೇಳುತೀರಾ?. ವೋಕಲ್ ಫಾರ್ ಲೋಕಲ್!. ಜನರು ಹಬ್ಬಗಳನ್ನು ಮತ್ತು ದೀಪಾವಳಿಯನ್ನು ಈ ಬಾರಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಆಚರಿಸುವ ಮತ್ತು ಉಡುಗೊರೆ ನೀಡುವ ರೀತಿ ಬಹಳ ಪ್ರೇರಣಾದಾಯಕ. ಆದರೆ ಇದು ಹಬ್ಬಗಳಿಗೆ ಮಾತ್ರವೇ ಸೀಮಿತಗೊಳ್ಳಬಾರದು. ಇದು ನಮ್ಮ  ಜೀವನದ ಭಾಗವಾಗಬೇಕು. ನಮ್ಮ ಹಬ್ಬಗಳು ನಮ್ಮ ಪ್ರಯತ್ನಗಳ ಮೂಲಕ ಮತ್ತೊಮ್ಮೆ ಬಡವರ  ಸೇವೆಯ ಮಾಧ್ಯಮಗಳಾಗಬೇಕು.

ಸ್ನೇಹಿತರೇ,

ಗುರು ನಾನಕ್ ದೇವ್ ಜೀ ಅವರು ತಮ್ಮ ಇಡೀ ಬದುಕನ್ನು ಬಡವರ, ಶೋಷಿತರ ಮತ್ತು ನಿರ್ಲಕ್ಷಿತರ ಸೇವೆಗಾಗಿ ಮುಡಿಪಾಗಿಟ್ಟವರು. ಕಾಶಿ ಕೂಡಾ ಗುರು ನಾನಕ್ ದೇವ್ ಜೀ  ಜೊತೆ ನಿಕಟ ಸಂಪರ್ಕವನ್ನು ಹೊಂದಿದೆ. ಅವರು ಕಾಶಿಯಲ್ಲಿ ಬಹಳ ಧೀರ್ಘ ಅವಧಿಯನ್ನು ಕಳೆದಿದ್ದರು. ಕಾಶಿಯ ಗುರುಭಾಗ್ ಗುರುದ್ವಾರ ಈ ಚಾರಿತ್ರಿಕ ಸಂದರ್ಭಕ್ಕೆ ಸಾಕ್ಷಿ. ಗುರು ನಾನಕ್ ದೇವ್ ಜೀ ಅವರು ಇಲ್ಲಿಗೆ ಬಂದು ಕಾಶಿಯ ಜನತೆಗೆ ಹೊಸ ದಾರಿ ತೋರಿಸಿದರು. ಇಂದು ನಾವು ಸುಧಾರಣೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಗುರು ನಾನಕ್  ದೇವ್ ಜೀ ಅವರೇ ಸಮಾಜದ ಮತ್ತು ವ್ಯವಸ್ಥೆಯ ಸುಧಾರಣೆಗಳಿಗೆ ಒಂದು ದೊಡ್ಡ ಸಂಕೇತ. ಸಮಾಜದ ಮತ್ತು ದೇಶದ ಹಿತಕ್ಕಾಗಿ ಬದಲಾವಣೆಗಳನ್ನು ತಂದಾಗ ವಿರೋಧದ ಅಲೆಗಳು ಭುಗಿಲೇಳುವುದನ್ನು ನಾವು ನೋಡಿದ್ದೇವೆ. ಆದರೆ ಈ ಸುಧಾರಣೆಗಳ ಮಹತ್ವ ತಿಳಿಯಲು ಆರಂಭಿಸಿದಾಗ, ಪ್ರತಿಯೊಂದೂ ತಣ್ಣಗಾಗುತ್ತದೆ ಮತ್ತು ಸಹಜ ಸ್ಥಿತಿಗೆ ಬರುತ್ತದೆ. ಗುರು ನಾನಕ್ ದೇವ್ ಜೀ ಅವರ ಜೀವನದಿಂದ ನಮಗೆ ದೊರೆಯುವ ಪಾಠ ಇದು.

ಸ್ನೇಹಿತರೇ,

ಕಾಶಿಯ ಅಭಿವೃದ್ಧಿ ಕೆಲಸಗಳು ಆರಂಭವಾದಾಗ, ಪ್ರತಿಭಟನಕಾರರು ವಿರೋಧಕ್ಕಾಗಿ ಇದನ್ನು ವಿರೋಧಿಸಿದರು. ಅದನ್ನವರು ಮಾಡಲಿಲ್ಲವೇ?. ಅವರು ಮಾಡಿದರು. ಕಾಶಿ ವಿಶ್ವನಾಥ ಕಾರಿಡಾರನ್ನು ನಿರ್ಮಾಣ ಮಾಡಲು ನಿರ್ಧರಿಸಿದಾಗ, ಭಕ್ತರ ಅನುಕೂಲತೆಗಳು ಹೆಚ್ಚಿ, ಸೌಂದರ್ಯ ಮತ್ತು ದೈವಿಕತೆ ಹೆಚ್ಚಿಸುವಂತಹ ಕಾರ್ಯಗಳನ್ನು ಮಾಡಲು ಹೊರಟಾಗ, ನೀವು ನೆನಪಿಸಿಕೊಳ್ಳಿ, ವಿರೋಧಿ ಶಕ್ತಿಗಳು ಇದರ ಬಗ್ಗೆ ಬಹಳಷ್ಟು ಹೇಳಿದ್ದವು. ಅವು ಇತರ ಹಲವು ಕೆಲಸಗಳನ್ನೂ ಮಾಡಿದವು. ಆದರೆ, ಇಂದು ಕಾಶಿಯ ವೈಭವ ಬಾಬಾ ಆಶೀರ್ವಾದದೊಂದಿಗೆ ಪುನಶ್ಚೇತನಗೊಂಡಿದೆ. ಶತಮಾನಗಳ ಹಳೆಯ ಬಾಬಾ ದರ್ಬಾರ್ ಮತ್ತು ಗಂಗಾ ಮಾತೆಯ ನಡುವಣ ಸಂಪರ್ಕ ಮರು ಸ್ಥಾಪನೆಗೊಂಡಿದೆ. 

ಸ್ನೇಹಿತರೇ,

ಉತ್ತಮ ಕೆಲಸಗಳನ್ನು ಸರಿಯಾದ ಸ್ಪೂರ್ತಿಯಿಂದ ಮಾಡಿದ್ದೇ ಆದರೆ, ಅವುಗಳು ವಿರೋಧದ ನಡುವೆಯೂ ಪೂರ್ಣಗೊಳ್ಳುತ್ತವೆ. ಅಯೋಧ್ಯೆಯ ರಾಮ ದೇವಾಲಯಕ್ಕಿಂತ ದೊಡ್ಡ ಉದಾಹರಣೆ ಇದಕ್ಕೆ ಬೇರೆ ಯಾವುದಿದ್ದೀತು?. ಈ ಪವಿತ್ರ ಕೆಲಸವನ್ನು ದಶಕಗಳಿಂದ ವಿಳಂಬ ಮಾಡಲು ಏನೇನೆಲ್ಲಾ ಮಾಡಿದರು?. ಅಡ್ಡಿ ತರಲು ಎಲ್ಲವನ್ನೂ ಮಾಡಿದರು.  ಭಯವನ್ನು ಹುಟ್ಟಿಸಲು ಯಾವೆಲ್ಲ ಪ್ರಯತ್ನಗಳನ್ನು ಮಾಡಿದರು?. ಆದರೆ ರಾಮ್ ಜೀ ಆಶಯ ಇತ್ತಾದ್ದರಿಂದ ದೇವಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ.

ಸ್ನೇಹಿತರೇ,

ಅಯೋಧ್ಯಾ, ಕಾಶಿ ಮತ್ತು ಪ್ರಯಾಗಗಳನ್ನು ಒಳಗೊಂಡ ಇಡೀ ಪಟ್ಟಿ ಇಂದು ಆಧ್ಯಾತ್ಮಿಕತೆಯ ಭಾರೀ ಶಕ್ತಿಯೊಂದಿಗೆ  ಪ್ರವಾಸೋದ್ಯಮಕ್ಕೆ ಸಿದ್ದಗೊಳ್ಳುತ್ತಿದೆ. ಇಡೀ ವಿಶ್ವದ ಪ್ರವಾಸಿಗರು ಇಂದು ಈ ವಲಯದತ್ತ ನೋಡುತ್ತಿದ್ದಾರೆ. ಅಯೋಧ್ಯೆಯನ್ನು ಯಾವ ರೀತಿ ವೇಗವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ, ಪ್ರಯಾಗರಾಜ್ ನಲ್ಲಿ ಕುಂಭವನ್ನು ಆಯೋಜಿಸಿದ ರೀತಿ, ಇಂದು ಅಭಿವೃದ್ಧಿಯ ಪಥದಲ್ಲಿರುವ ಕಾಶಿಯತ್ತ ಅವರು ನೋಡುತ್ತಿದ್ದಾರೆ. ಅಲೌಕಿಕ ಮಹತ್ವದ ದುರ್ಗಾ ಕುಂಡ ಪ್ರದೇಶಾಭಿವೃದ್ಧಿಯನ್ನು ಬನಾರಸ್ಸಿನಲ್ಲಿಯ ಕಾಶಿ ವಿಶ್ವನಾಥ ದೇವಾಲಯದ ಜೊತೆಗೆ ಅಭಿವೃದ್ಧಿ ಮಾಡಲಾಗಿದೆ. ಇತರ ದೇವಾಲಯಗಳು ಮತ್ತು  ಪರಿಕ್ರಮ ಕೇಂದ್ರಗಳನ್ನು ಕೂಡಾ ಅಭಿವೃದ್ಧಿ ಮಾಡಲಾಗುತ್ತಿದೆ. ಘಾಟ್ ಗಳ ಸ್ಥಿತಿ ಗತಿ ತ್ವರಿತವಾಗಿ ಬದಲಾಗಿದೆ ಮತ್ತು ಸುಭ-ಇ-ಬನಾರಸ್ ಗೆ ಅಲೌಕಿಕ ಸೆಳಕು ಸೇರ್ಪಡೆಯಾಗಿದೆ. ಗಂಗಾ ಮಾತೆಯ ನೀರು ಕೂಡಾ ಈಗ ಶುದ್ದವಾಗಿದೆ. ಇದು ಪ್ರಾಚೀನ ಕಾಶಿಯ ಆಧುನಿಕ ಅವತಾರ. ಇದು ಬನಾರಾಸಿನ ಎಂದೆಂದಿಗೂ ಕೊನೆಯಾಗದ ವಿಶೇಷತೆ.

ಸ್ನೇಹಿತರೇ,

ಇಲ್ಲಿಂದ ನಾನು ಸಾರನಾಥಕ್ಕೆ, ಬುದ್ಧ ದೇವರ ಜನ್ಮಸ್ಥಳಕ್ಕೆ ಹೋಗುತ್ತಿದ್ದೇನೆ. ಸಾರನಾಥದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂಬ ನಿಮ್ಮ ಧೀರ್ಘಾವಧಿಯ ಬೇಡಿಕೆ ಮತ್ತು ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದ ಬೇಡಿಕೆ ಈಗ ಈಡೇರಿದೆ. ಲೇಸರ್ ಪ್ರದರ್ಶನ ಈಗ ಬುದ್ಧ ದೇವರ  ಅನುಕಂಪ, ದಯೆ ಮತ್ತು ಆಹಿಂಸೆಯನ್ನು ಪ್ರತ್ಯಕ್ಷೀಕರಿಸಲಿದೆ. ಈ ಸಂದೇಶಗಳು ವಿಶ್ವವು ಹಿಂಸೆಯ ಭಯ, ಅಶಾಂತಿ, ಮತ್ತು ಭಯೋತ್ಪಾದನೆ ಬಗ್ಗೆ ಕಳವಳಗೊಂಡಿರುವಾಗ ಇಂದು ಹೆಚ್ಚು ಪ್ರಸ್ತುತವಾಗಿವೆ. ಭಗವಾನ್ ಬುದ್ಧರು ಹೇಳುತ್ತಿದ್ದರು : न हि वेरेन वेरानि सम्मन्ती ध कुदाचन अवेरेन हि सम्मन्ति एस धम्मो सनन्तनो ಇದರರ್ಥ ದ್ವೇಷವು ದ್ವೇಷವನ್ನು ಮೌನಿಯಾಗಿಸುವುದಿಲ್ಲ, ಅಥವಾ ಸುಮ್ಮನಿರಿಸುವುದಿಲ್ಲ. ಸೌಹಾರ್ದತೆಯು ದ್ವೇಷವನ್ನು ತಣ್ಣಗಾಗಿಸುತ್ತದೆ. ದೇವ ದೀಪಾವಳಿಯಿಂದಾಗಿ ದೈವಿಕತೆಯನ್ನು, ಭಕ್ತಿಯನ್ನು  ಪ್ರಚುರಪಡಿಸಿದ ಕಾಶಿಯಿಂದ ಬಂದಿರುವ ಸಂದೇಶ ಇದು. ನಮ್ಮ ಮನಸ್ಸುಗಳು ಈ ದೀಪಗಳಂತೆ ಬೆಳಗಬೇಕು. ಇಲ್ಲಿ ಎಲ್ಲದರಲ್ಲೂ ಧನಾತ್ಮಕತೆಯ ಭಾವನೆ ಇದೆ. ಅಭಿವೃದ್ಧಿಯ ಹಾದಿಯನ್ನು ನಿರ್ಮಾಣ ಮಾಡಲಾಗಿದೆ. ಇಡೀ ಜಗತ್ತು ಅನುಭೂತಿಯನ್ನು ಅನುಸರಿಸಬೇಕು ಮತ್ತು ತನ್ನೊಳಗೆ ದಯೆಯನ್ನು ಅಳವಡಿಸಿಕೊಳ್ಳಬೇಕು. ಕಾಶಿಯ ಈ ಸಂದೇಶ, ಈ ದೀಪಗಳ ಶಕ್ತಿ ಇಡೀ ದೇಶದ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುತ್ತದೆ ಎಂಬುದರ ಬಗ್ಗೆ ನನಗೆ ವಿಶ್ವಾಸವಿದೆ. 130 ಕೋಟಿ ದೇಶವಾಸಿಗಳೊಂದಿಗೆ, ದೇಶವು ಆರಂಭಿಸಿರುವ ಸ್ವಾವಲಂಬಿ ಭಾರತದ ಪ್ರಯಾಣವನ್ನು ನಾವು ಈಡೇರಿಸಲಿದ್ದೇವೆ.

ಈ ಶುಭ ಹಾರೈಕೆಗಳೊಂದಿಗೆ, ನಾನು ದೇವ ದೀಪಾವಳಿ ಮತ್ತು ಪ್ರಕಾಶ ಪರ್ವದಂದು ನಿಮಗೆಲ್ಲರಿಗೂ ಶುಭವಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ. ನಾನು ಆಗಾಗ ನಿಮ್ಮನ್ನು ಭೇಟಿಯಾಗಬೇಕಾಗಿತ್ತು, ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಎಲ್ಲರಿಗೂ ಜಾರಿ ಮಾಡಲಾದ ನಿಯಮಗಳಿಂದಾಗಿ ನನ್ನ ಭೇಟಿ ತಡವಾಗಿದೆ. ಇಂತಹ ಧೀರ್ಘ ಅವಧಿಯಿಂದಾಗಿ ನಾನು ಏನನ್ನೋ ಕಳೆದುಕೊಂಡಂತಹ ಭಾವನೆ ಬಂದಿತ್ತು. ನಾನು ನಿಮ್ಮನ್ನು ನೋಡದೆ ಬಹಳ ದಿನಗಳಾಗಿದ್ದವು. ಇಂದು ನಾನು ಇಲ್ಲಿಗೆ ಬಂದಾಗ ಬಹಳ ಸಂತುಷ್ಟನಾಗಿದ್ದೇನೆ. ನಿಮ್ಮನ್ನು ಭೇಟಿಯಾದ ಬಳಿಕ ನನ್ನಲ್ಲಿ ಶಕ್ತಿ ತುಂಬಿದೆ. ಆದರೆ ನಾನು ನಿಮಗೆ ಹೇಳುತ್ತೇನೆ ಏನೆಂದರೆ, ಈ ಕೊರೊನಾ ಅವಧಿಯಲ್ಲಿ ನಾನು ಒಂದು ದಿನ ಕೂಡಾ ನಿಮ್ಮಿಂದ ದೂರ ಇರಲಿಲ್ಲ. ಸ್ನೇಹಿತರೇ, ನಾನು ಕೊರೊನಾ ಪ್ರಕರಣಗಳ ಹೆಚ್ಚಳದ ಮೇಲೆ ನಿಗಾ ಇರಿಸಿದ್ದೆ. ಆಸ್ಪತ್ರೆಗಳ ವ್ಯವಸ್ಥೆ ಮತ್ತು ಸಾಮಾಜಿಕ ಸಂಘಟನೆಗಳು ಹೇಗೆ ಕೆಲಸ ಮಾಡುತ್ತಿವೆ ಮತ್ತು ಯಾರೂ ಹಸಿವೆಯಿಂದ ಕಂಗೆಡಬಾರದು ಎಂಬ ಬಗ್ಗೆ ನಾನು ನಿಗಾ ಇಟ್ಟಿದ್ದೆ. ಅನ್ನಪೂರ್ಣ ಮಾತೆಯ ಈ ಭೂಮಿಯಿಂದ ನೀವು ಒದಗಿಸಿದ ಸೇವೆ ಯಾರೊಬ್ಬರೂ ಹಸಿವೆಯಿಂದ ಕಂಗೆಡದಂತೆ ಮಾಡಿತು. ಔಷದಿ ಇಲ್ಲದೆ ಯಾರೂ ಪರದಾಡದಂತೆ ಮಾಡಿತು. ಇದು ನಿಮ್ಮ ಸೇವೆಯನ್ನು ಪ್ರತಿಫಲಿಸುತ್ತದೆ. ಈ ದೇಶಾದ್ಯಂತ ಮತ್ತು ನನ್ನ ಕಾಶಿಯಲ್ಲಿ 4-8 ತಿಂಗಳುಗಳ ಕಾಲ ನಡೆದ ಈ ಸೇವಾ ಸ್ಪೂರ್ತಿಯಿಂದ ನಾನು ಬಹಳ ಸಂತೋಷಗೊಂಡಿದ್ದೇನೆ. ಈ ಸೇವೆಗೆ ನಿಮ್ಮ ಅರ್ಪಣಾಭಾವದ ದುಡಿಮೆಗೆ ನಾನು ಮತ್ತೊಮ್ಮೆ ಈ ಕಾಶಿಯ ಜನತೆಗೆ ಇಂದು ಗಂಗಾ ಮಾತೆಯ ದಡದಿಂದ ವಂದನೆಗಳನ್ನು ಸಲ್ಲಿಸುತ್ತೇನೆ. ಬಡವರ ಬಗ್ಗೆ ನಿಮ್ಮ ಕಾಳಜಿ ನನ್ನ ಮನಸ್ಸನ್ನು ತಟ್ಟಿದೆ. ನಾನು ನಿಮಗಾಗಿ ಏನು ಮಾಡಿದರೂ ಅದು ಕಡಿಮೆಯೇ. ನಿಮಗೆ ನನ್ನ ಸೇವೆಯಲ್ಲಿ ಕೊರತೆಯಾಗಂತೆ ನಾನು ನೋಡಿಕೊಳ್ಳುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ. 

ಇದು ನನಗೆ ವೈಭವದ ಹಬ್ಬ, ಇಂದು ನನಗೆ ಇಲ್ಲಿಗೆ, ನಿಮ್ಮಲ್ಲಿಗೆ ಇಂತಹ ಪ್ರೇರಣಾದಾಯಕ, ಸಂಭ್ರಮದ  ವಾತಾವರಣದಲ್ಲಿ ಭಾಗವಹಿಸಲು ಬರುವುದಕ್ಕೆ ಅವಕಾಶ ಲಭಿಸಿದೆ. ಕೊರೊನಾವನ್ನು ಸೋಲಿಸಿದ ಬಳಿಕ ಗಂಗಾ ಮಾತೆ ಹರಿಯುವ ರೀತಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ನಾವು ತ್ವರಿತಗತಿಯಲ್ಲಿ ಬೆಳೆಯಲಿದ್ದೇವೆ. ಗಂಗಾ ಮಾತೆ ಶತಮಾನಗಳಿಂದ ಅಡೆತಡೆಗಳನ್ನು, ಬಿಕ್ಕಟ್ಟುಗಳನ್ನು ಎದುರಿಸಿ ಹರಿಯುತ್ತಿದ್ದಾಳೆ. ಅಭಿವೃದ್ಧಿ ಕೂಡಾ ಇದೇ ರೀತಿಯಲ್ಲಿ ಪ್ರವಹಿಸುತ್ತದೆ. ನಾನು ಈ ನಂಬಿಕೆಯೊಂದಿಗೆ ದಿಲ್ಲಿಗೆ ಮರಳುತ್ತೇನೆ. ನಾನು ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಜೈ ಕಾಶಿ, ಜೈ ಮಾ ಭಾರತಿ.

ಹರ ಹರ ಮಹಾದೇವ್ !

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.