ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಜಿ, ಗೃಹ ಸಚಿವರಾದ ಶ್ರೀ ಅಮಿತ್ ಶಾ, ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಉಪಕುಲಪತಿ ವಿಮಲ್ ಪಟೇಲ್ ಜಿ, ಅಧಿಕಾರಿಗಳು, ಶಿಕ್ಷಕರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪೋಷಕರು, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!
ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಬಂದಿರುವುದು ವಿಶೇಷ ಸಂತೋಷ ತಂದಿದೆ. ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಲು ಬಯಸುವ ಯುವಕರಿಗೆ, ಇದು ಕೇವಲ ಸಮವಸ್ತ್ರ ಮತ್ತು ಕ್ಲಬ್ ಮಾತ್ರವಲ್ಲ, ಇದು ತುಂಬಾ ವಿಸ್ತಾರವಾಗಿದೆ. ಮತ್ತು ಈ ಕ್ಷೇತ್ರದಲ್ಲಿ ಸುಶಿಕ್ಷಿತ ಮಾನವಸಂಪನ್ಮೂಲವು ಇಂದಿನ ಅವಶ್ಯಕತೆಯಾಗಿದೆ. ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯವು ರಕ್ಷಣಾ ಕ್ಷೇತ್ರದಲ್ಲಿ 21 ನೇ ಶತಮಾನದ ಸವಾಲುಗಳಿಗೆ ಅನುಗುಣವಾಗಿ ನಮ್ಮ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಆ ವ್ಯವಸ್ಥೆಗಳನ್ನು ನಿರ್ವಹಿಸುವ ಜನರನ್ನು ವಿಕಸನಗೊಳಿಸುವ ದೃಷ್ಟಿಯೊಂದಿಗೆ ಹುಟ್ಟಿದೆ. ಆರಂಭದಲ್ಲಿ ಇದನ್ನು ಗುಜರಾತ್‌ನಲ್ಲಿ ರಕ್ಷಾ ಶಕ್ತಿ ವಿಶ್ವವಿದ್ಯಾಲಯ ಎಂದು ಕರೆಯಲಾಗುತ್ತಿತ್ತು. ನಂತರ, ಭಾರತ ಸರ್ಕಾರವು ಇದನ್ನು ಇಡೀ ದೇಶಕ್ಕೆ ಪ್ರಮುಖ ವಿಶ್ವವಿದ್ಯಾಲಯವೆಂದು ಗುರುತಿಸಿತು. ಇಂದು ಇದು ಒಂದು ರೀತಿಯ ರಾಷ್ಟ್ರದ ಕೊಡುಗೆಯಾಗಿದೆ, ದೇಶದ ರತ್ನವಾಗಿದೆ, ಇದು ಮುಂಬರುವ ಸಮಯದಲ್ಲಿ ಚರ್ಚೆಗಳು, ಶಿಕ್ಷಣ ಮತ್ತು ತರಬೇತಿಯ ಮೂಲಕ ರಾಷ್ಟ್ರದ ಭದ್ರತೆಗೆ ಹೊಸ ಆತ್ಮವಿಶ್ವಾಸವನ್ನು ಉಂಟುಮಾಡುತ್ತದೆ. ಇಂದು, ಇಲ್ಲಿಂದ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಇಂದು ಮತ್ತೊಂದು ಶುಭ ಸಂದರ್ಭ. ಉಪ್ಪಿನ ಸತ್ಯಾಗ್ರಹಕ್ಕಾಗಿ ಈ ದಿನ ಈ ನೆಲದಿಂದ ದಾಂಡಿ ಯಾತ್ರೆಯನ್ನು ಪ್ರಾರಂಭಿಸಲಾಯಿತು. ಬ್ರಿಟಿಷರ ಅನ್ಯಾಯದ ವಿರುದ್ಧ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಚಳವಳಿಯ ಮೂಲಕ ಬ್ರಿಟಿಷ್ ಸರ್ಕಾರ ಭಾರತೀಯರ ಸಾಮೂಹಿಕ ಶಕ್ತಿಯನ್ನು ಅರಿತುಕೊಂಡಿತು. ನಾವು 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ದಾಂಡಿ ಯಾತ್ರೆಯಲ್ಲಿ ಭಾಗವಹಿಸಿದ ಎಲ್ಲ ಸತ್ಯಾಗ್ರಹಿಗಳಿಗೆ ಮತ್ತು ವೀರ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಇಂದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಪ್ರಮುಖ ದಿನವಾಗಿದೆ, ಆದರೆ ಇದು ನನಗೆ ಸ್ಮರಣೀಯ ಸಂದರ್ಭವಾಗಿದೆ. ಅಮಿತ್ ಭಾಯ್ ಹೇಳುತ್ತಿದ್ದಂತೆಯೇ - ಈ ವಿಶ್ವವಿದ್ಯಾನಿಲಯವು ಈ ಕಲ್ಪನೆಯೊಂದಿಗೆ ಹುಟ್ಟಿದೆ ಮತ್ತು ಸಹಜವಾಗಿ, ನಾನು ದೀರ್ಘಕಾಲ ಮಂಥನ ನಡೆಸಿದೆ, ನಾನು ಅನೇಕ ತಜ್ಞರೊಂದಿಗೆ ಸಂವಾದ ನಡೆಸಿದೆ. ಜಗತ್ತಿನಲ್ಲಿ ಈ ದಿಕ್ಕಿನಲ್ಲಿ ಏನಾಗುತ್ತಿದೆ ಎಂಬುದನ್ನು ಅಧ್ಯಯನ ಮಾಡಿ, ಮತ್ತು ಎಲ್ಲಾ ಪ್ರಯತ್ನಗಳ ನಂತರ, ಗುಜರಾತ್ನ ನೆಲದಲ್ಲಿ ಇಲ್ಲಿ ಸಣ್ಣದಾಗಿ ರೂಪುಗೊಂಡಿತು. ಬ್ರಿಟಿಷರ ಕಾಲದಲ್ಲಿ ದೇಶದ ರಕ್ಷಣಾ ಕ್ಷೇತ್ರವು ಸಾಮಾನ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆಯ ವಾಡಿಕೆಯ ವ್ಯವಸ್ಥೆಯ ಭಾಗವಾಗಿತ್ತು ಎಂಬುದನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ, ಬ್ರಿಟಿಷರು ಬಲದ ಬಳಕೆಯ ಮೂಲಕ ತಮ್ಮ ಸಾಮ್ರಾಜ್ಯವನ್ನು ನಡೆಸಬಲ್ಲ ಗಟ್ಟಿಮುಟ್ಟಾದ ಜನರನ್ನು ನೇಮಿಸಿಕೊಂಡರು. ಕೆಲವೊಮ್ಮೆ ಬ್ರಿಟಿಷರು ವಿವಿಧ ಜನಾಂಗೀಯ ಜನಸಮೂಹದಿಂದ ಜನರನ್ನು ಆರಿಸಿಕೊಂಡರು, ಅವರ ಕೆಲಸವು ಭಾರತದ ಜನರ ವಿರುದ್ಧ ಬಲವಾಗಿ ಕೋಲನ್ನು ಬಳಸುವುದಾಗಿತ್ತು, ಇದರಿಂದಾಗಿ ಅವರು ತಮ್ಮ ಆಡಳಿತವನ್ನು ಸುಲಭವಾಗಿ ಮುಂದುವರಿಸಬಹುದಾಗಿತ್ತು. ಸ್ವಾತಂತ್ರ್ಯದ ನಂತರ ಈ ಕ್ಷೇತ್ರದಲ್ಲಿ ಸುಧಾರಣೆಗಳು ಮತ್ತು ಆಮೂಲಾಗ್ರ ಬದಲಾವಣೆಗಳ ಅಗತ್ಯವಿತ್ತು. ಆದರೆ ದುರದೃಷ್ಟವಶಾತ್ ನಾವು ಈ ಕ್ಷೇತ್ರದಲ್ಲಿ ಹಿಂದುಳಿದಿದ್ದೇವೆ. ಪರಿಣಾಮವಾಗಿ, ಪೊಲೀಸ್ ಪಡೆಗಳಿಂದ ದೂರವಿರಲು ಸಾಮಾನ್ಯ ಗ್ರಹಿಕೆ ಮುಂದುವರಿದಿದೆ.
ಸಮವಸ್ತ್ರವನ್ನು ಸೈನ್ಯವೂ ಧರಿಸುತ್ತಾರೆ. ಆದರೆ ಸೇನೆಯ ಬಗ್ಗೆ ಭಾವನೆ ಏನು? ಸೇನೆಯನ್ನು ನೋಡಿದಾಗಲೆಲ್ಲ ಜನರು ಬಿಕ್ಕಟ್ಟಿಗೆ ಕೊನೆಯನ್ನು ಕಾಣುತ್ತಾರೆ. ಇದು ಸೇನೆಯ ಬಗ್ಗೆ ಇರುವ ಭಾವನೆ. ಆದ್ದರಿಂದ, ಭಾರತದ ಭದ್ರತಾ ಕ್ಷೇತ್ರದಲ್ಲಿ ಅಂತಹ ಮಾನವಶಕ್ತಿಯನ್ನು ಸಿದ್ಧಪಡಿಸುವುದು ಬಹಳ ಮುಖ್ಯ, ಅದು ಸಾಮಾನ್ಯ ಜನರ ಮನಸ್ಸಿನಲ್ಲಿ ಸ್ನೇಹ ಮತ್ತು ವಿಶ್ವಾಸದ ಭಾವನೆಯನ್ನು ಉಂಟುಮಾಡುತ್ತದೆ. ನಮ್ಮ ಸಂಪೂರ್ಣ ತರಬೇತಿ ಮಾಡ್ಯೂಲ್ ಅನ್ನು ಬದಲಾಯಿಸುವ ಅಗತ್ಯವಿತ್ತು. ಸುದೀರ್ಘ ಚರ್ಚೆಯ ನಂತರ ಈ ಪ್ರಯೋಗವನ್ನು ಭಾರತದಲ್ಲಿ ಮೊದಲ ಬಾರಿಗೆ ಮಾಡಲಾಯಿತು ಮತ್ತು ಇಂದು ಇದು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ರೂಪದಲ್ಲಿ ವಿಕಸನಗೊಂಡಿದೆ.
ಭದ್ರತೆ ಎಂದರೆ ಸಮವಸ್ತ್ರ, ಶಕ್ತಿ, ಫೋರ್ಸ್, ಪಿಸ್ತೂಲ್ ಇತ್ಯಾದಿ ಎನ್ನುವ ದಿನಗಳು ಕಳೆದುಹೋಗಿವೆ, ರಕ್ಷಣಾ ಕ್ಷೇತ್ರದಲ್ಲಿ ಈಗ ಹಲವಾರು ಹೊಸ ಸವಾಲುಗಳಿವೆ. ಹಿಂದೆ, ಒಂದು ಘಟನೆಯ ಸುದ್ದಿಯು ಹಳ್ಳಿಯ ದೂರದ ಭಾಗಕ್ಕೆ ಪ್ರಯಾಣಿಸಲು ಗಂಟೆಗಳು ಮತ್ತು ಮುಂದಿನ ಹಳ್ಳಿಗೆ ಒಂದು ದಿನ ತೆಗೆದುಕೊಳ್ಳುತ್ತಿತ್ತು. ಘಟನೆಯ ಬಗ್ಗೆ ರಾಜ್ಯಕ್ಕೆ ತಿಳಿಯುವ ಹೊತ್ತಿಗೆ 24 ರಿಂದ 48 ಗಂಟೆಗಳು ಬೇಕಾಗುತ್ತಿತ್ತು. ಆಗ ಮಾತ್ರ ಪೊಲೀಸರು ಕಾರ್ಯಪ್ರವೃತ್ತರಾಗಿ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುತ್ತಿತ್ತು. ಇಂದು ಸಂವಹನವು ಕ್ಷಣಾರ್ಧದಲ್ಲಿ ನಡೆಯುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಒಂದೇ ಸ್ಥಳದಲ್ಲಿ ವ್ಯವಸ್ಥೆಗಳನ್ನು ಕೇಂದ್ರೀಕರಿಸಿ ಮುನ್ನಡೆಯಲು ಸಾಧ್ಯವಿಲ್ಲ. ಆದ್ದರಿಂದ, ಪ್ರತಿ ಘಟಕಕ್ಕೆ ಪರಿಣತಿ, ಸಾಮರ್ಥ್ಯ ಮತ್ತು ಅದೇ ಪ್ರಮಾಣದ ಬಲದ ಅಗತ್ಯವಿದೆ. ಆಗ ಮಾತ್ರ ನಾವು ಪರಿಸ್ಥಿತಿಯನ್ನು ನಿಯಂತ್ರಿಸಬಹುದು. ಸಂಖ್ಯಾಬಲಕ್ಕಿಂತ ಹೆಚ್ಚಾಗಿ ಬೇಕಾಗಿರುವುದು ಎಲ್ಲವನ್ನೂ ನಿಭಾಯಿಸಬಲ್ಲ, ತಂತ್ರಜ್ಞಾನವನ್ನು ತಿಳಿದಿರುವ, ಅನುಸರಿಸುವ ಮತ್ತು ಮಾನವನ ಮನಸ್ಸನ್ನು ಅರ್ಥಮಾಡಿಕೊಳ್ಳುವ ತರಬೇತಿ ಪಡೆದ ಮಾನವಶಕ್ತಿ. ಯುವ ಪೀಳಿಗೆಯೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ಅವರು ತಿಳಿದಿರಬೇಕು, ಸಾಮೂಹಿಕ ಚಳವಳಿಗಳ ಸಮಯದಲ್ಲಿ ನಾಯಕರೊಂದಿಗೆ ವ್ಯವಹರಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಮತ್ತು ಮಾತುಕತೆ ನಡೆಸುವ ಸಾಮರ್ಥ್ಯವನ್ನು ಹೊಂದಿರಬೇಕು.
ಭದ್ರತಾ ಕ್ಷೇತ್ರದಲ್ಲಿ ತರಬೇತಿ ಪಡೆದ ಮಾನವಶಕ್ತಿಯ ಅನುಪಸ್ಥಿತಿಯಲ್ಲಿ, ಒಬ್ಬರು ಮಾತುಕತೆ ನಡೆಸುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು ಮತ್ತು ಕೆಲವೊಮ್ಮೆ ಒಂದು ತಪ್ಪು ಪದದಿಂದಾಗಿ ಅನುಕೂಲಕರ ಪರಿಸ್ಥಿತಿಯು ಭೀಕರವಾದ ತಿರುವು ಪಡೆಯಬಹುದು. ನಾನು ಹೇಳಬಯಸುವುದೇನೆಂದರೆ, ಸಮಾಜವಿರೋಧಿಗಳ ವಿರುದ್ಧ ಕಠಿಣವಾಗಿ ವ್ಯವಹರಿಸುವ ಇಂತಹ ಮಾನವ ಸಂಪನ್ಮೂಲವನ್ನು ನಾವು ಪ್ರಜಾಪ್ರಭುತ್ವ ವ್ಯವಸ್ಥೆಗಳಿಗೆ ಅನುಗುಣವಾಗಿ ಸಮಾಜದ ಬಗ್ಗೆ ಮೃದುವಾಗಿ ವರ್ತಿಸುವ ಮತ್ತು ಜನರ ಹಿತವನ್ನೇ ಪ್ರಧಾನವೆಂದು ಪರಿಗಣಿಸಿ ಅಭಿವೃದ್ಧಿಪಡಿಸಬೇಕು. ಪ್ರಪಂಚದ ವಿವಿಧ ಭಾಗಗಳಿಂದ ಪೊಲೀಸರ ಬಗ್ಗೆ ಒಳ್ಳೆಯ ಅಭಿಪ್ರಾಯವಿರುವ ಸುದ್ದಿಗಳನ್ನು ನಾವು ಆಗಾಗ್ಗೆ ಕಾಣುತ್ತೇವೆ. ಆದರೆ ನಮ್ಮ ದೇಶದ ದೌರ್ಭಾಗ್ಯವೆಂದರೆ ಸಿನಿಮಾದಲ್ಲಿ ಪೊಲೀಸರನ್ನು ಕೆಟ್ಟದಾಗಿ ಬಿಂಬಿಸಲಾಗುತ್ದದೆ. ಪತ್ರಿಕೆಗಳ ವಿಷಯದಲ್ಲೂ ಅಷ್ಟೇ. ಪರಿಣಾಮವಾಗಿ, ನಿಜವಾದ ಕಥೆಗಳು ಕೆಲವೊಮ್ಮೆ ಸಮಾಜವನ್ನು ತಲುಪುವುದಿಲ್ಲ. ಇತ್ತೀಚೆಗೆ, ಕೊರೊನಾ ಅವಧಿಯಲ್ಲಿ ಪೊಲೀಸ್ ಸಿಬ್ಬಂದಿ ಸಮವಸ್ತ್ರದಲ್ಲಿ ಅಗತ್ಯವಿರುವವರಿಗೆ ಸೇವೆ ಸಲ್ಲಿಸುತ್ತಿರುವ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಿಂದ ವೈರಲ್ ಆಗುತ್ತಿವೆ. ಒಬ್ಬ ಪೋಲೀಸನು ರಾತ್ರಿಯಲ್ಲಿ ಹೊರಗೆ ಬಂದು ಹಸಿದವರಿಗೆ ಉಣಬಡಿಸುತ್ತಾನೆ ಅಥವಾ ಲಾಕ್‌ಡೌನ್‌ನಿಂದಾಗಿ ಔಷಧಿಗಳು ಖಾಲಿಯಾದವರಿಗೆ ಪೋಲೀಸರು ಔಷಧಿಗಳನ್ನು ತಲುಪಿಸುತ್ತಿದ್ದಾರೆ! ಕೊರೊನಾ ಅವಧಿಯಲ್ಲಿ ಹೊರಹೊಮ್ಮಿದ ಪೊಲೀಸರ ಮಾನವೀಯ ಮುಖದ ಬಗೆಗಿನ ಸುದ್ಧಿಗಳು ಈಗ ಕ್ರಮೇಣ ಕ್ಷೀಣಿಸುತ್ತಿವೆ.
ಎಲ್ಲವೂ ನಿಂತು ಹೋಗಿದೆ ಎಂದಲ್ಲ. ಆದರೆ ಗ್ರಹಿಸಿದ ನಿರೂಪಣೆ ಮತ್ತು ನಕಾರಾತ್ಮಕ ವಾತಾವರಣದಿಂದಾಗಿ, ಕೆಲವೊಮ್ಮೆ ಒಳ್ಳೆಯದನ್ನು ಮಾಡಲು ಬಯಸುವವರು ಸಹ ನಿರಾಶೆಗೊಳ್ಳುತ್ತಾರೆ. ಇಂತಹ ಪ್ರತಿಕೂಲ ವಾತಾವರಣದಲ್ಲಿ ನೀವೆಲ್ಲರೂ ಯುವಕರು ಹೆಜ್ಜೆ ಹಾಕಿದ್ದೀರಿ. ಜನಸಾಮಾನ್ಯರ ಹಕ್ಕುಗಳು ಮತ್ತು ಭದ್ರತೆಯನ್ನು ರಕ್ಷಿಸುವ ಮತ್ತು ಸಮಾಜದಲ್ಲಿ ಶಾಂತಿ, ಏಕತೆ ಮತ್ತು ಸಾಮರಸ್ಯದ ವಾತಾವರಣವನ್ನು ಕಾಪಾಡುವ ನಿರೀಕ್ಷೆಯೊಂದಿಗೆ ನಿಮ್ಮ ಪೋಷಕರು ನಿಮ್ಮನ್ನು ಇಲ್ಲಿಗೆ ಕಳುಹಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನವನ್ನು ಸಂತೋಷದಿಂದ ನಡೆಸಲು ಮತ್ತು ಸಮಾಜವು ಸಂತೋಷ ಮತ್ತು ಹೆಮ್ಮೆಯಿಂದ ಹಬ್ಬಗಳನ್ನು ಆಚರಿಸುವಲ್ಲಿ ನೀವು ಒಂದು ಪಾತ್ರವನ್ನು ತಿಳಿದುಕೊಳ್ಳಬೇಕು. ದೇಶಕ್ಕೆ ಸೇವೆ ಸಲ್ಲಿಸಲು ದೈಹಿಕ ಶಕ್ತಿಯು ಭದ್ರತಾ ಪಡೆಗಳಿಗೆ ಒಂದು ಮಟ್ಟಿಗೆ ನಿಜವಾಗಬಹುದು, ಆದರೆ ಈ ಕ್ಷೇತ್ರವು ವಿಸ್ತರಿಸಿದೆಯಾದ್ದರಿಂದ ನಮಗೆ ತರಬೇತಿ ಪಡೆದ ಮಾನವಶಕ್ತಿಯ ಅಗತ್ಯವಿದೆ.
ಇಂದಿನ ಯುಗದಲ್ಲಿ ಕುಟುಂಬಗಳು ಚಿಕ್ಕದಾಗಿವೆ. ಈ ಹಿಂದೆ ಅವಿಭಕ್ತ ಕುಟುಂಬಗಳಿದ್ದಾಗ ಕರ್ತವ್ಯ ನಿರ್ವಹಿಸಿದ ಪೊಲೀಸರು ದಣಿದು ಮನೆಗೆ ಮರಳಿದರೆ ತಾಯಿ, ತಂದೆ, ಅಜ್ಜಿ, ಅಕ್ಕಂದಿರು, ಅಣ್ಣ-ತಮ್ಮಂದಿರು ಮನೆಯನ್ನು ನೋಡಿಕೊಳ್ಳುತ್ತಿದ್ದರು. ಅವರು ನಿರಾಳವಾಗಿದ್ದರು ಮತ್ತು ಮರುದಿನ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿತ್ತು. ಇಂದು ಇದು ಚಿಕ್ಕ ಕುಟುಂಬಗಳ ಕಾಲವಾಗಿದೆ. ಇಂದು ಒಬ್ಬ ಪೋಲಿಸ್ ಪೇದೆಯು ದಿನಕ್ಕೆ 6 ರಿಂದ 16 ಗಂಟೆಗಳ ಕಾಲ ಮತ್ತು ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಾನೆ. ಆದರೆ ಅವನು ಮನೆಗೆ ಹಿಂದಿರುಗಿದಾಗ, ಮನೆಯಲ್ಲಿ ಯಾರೂ ಇರುವುದಿಲ್ಲ, ಅವನನ್ನು ಕೇಳಲು ಯಾರೂ ಇರುವುದಿಲ್ಲ, ಪೋಷಕರು ಇರುವುದಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ನಮ್ಮ ಭದ್ರತಾ ಪಡೆಗಳಿಗೆ ಒತ್ತಡವೇ ದೊಡ್ಡ ಸವಾಲಾಗಿದೆ. ಕುಟುಂಬ ಮತ್ತು ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಸಿಬ್ಬಂದಿಯು ಯಾವಾಗಲೂ ಒತ್ತಡಕ್ಕೊಳಗಾಗುತ್ತಾರೆ. ಆದ್ದರಿಂದ, ಭದ್ರತಾ ಪಡೆಗಳಲ್ಲಿ ಒತ್ತಡ ಮುಕ್ತ ಚಟುವಟಿಕೆಗಳಿಗೆ ಇದು ಅಗತ್ಯವಾಗಿದೆ. ಅದಕ್ಕೆ ತರಬೇತುದಾರರು ಬೇಕು. ಈ ರಕ್ಷಾ ವಿಶ್ವವಿದ್ಯಾನಿಲಯವು ಜನರನ್ನು ಹರ್ಷಚಿತ್ತದಿಂದ ಇರಿಸಬಲ್ಲ ತರಬೇತುದಾರರನ್ನು ಸಿದ್ಧಪಡಿಸಬಹುದು.
ಇಂದು ಸೇನೆ ಮತ್ತು ಪೊಲೀಸರಲ್ಲೂ ಯೋಗ ಮತ್ತು ವಿಶ್ರಾಂತಿ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಕರ ಅಗತ್ಯವಿದೆ. ಈ ವ್ಯಾಪ್ತಿ ಈಗ ರಕ್ಷಣಾ ವಲಯಕ್ಕೂ ಬರಲಿದೆ.
ಅದೇ ರೀತಿ ತಂತ್ರಜ್ಞಾನವೂ ದೊಡ್ಡ ಸವಾಲಾಗಿದೆ. ಮತ್ತು ಪರಿಣತಿಯ ಅನುಪಸ್ಥಿತಿಯಲ್ಲಿ ನಾವು ಸಮಯಕ್ಕೆ ಏನು ಮಾಡಬೇಕೆಂದು ನಮಗೆ ಸಾಧ್ಯವಾಗುತ್ತಿಲ್ಲ ಮತ್ತು ಕೆಲಸಗಳು ವಿಳಂಬವಾಗುತ್ತವೆ ಎಂದು ನಾನು ನೋಡಿದೆ. ಸೈಬರ್ ಭದ್ರತೆಯ ಸಮಸ್ಯೆಗಳು ಮತ್ತು ಅಪರಾಧದಲ್ಲಿ ತಂತ್ರಜ್ಞಾನವು ಹೆಚ್ಚುತ್ತಿರುವ ರೀತಿಯಲ್ಲಿ, ಅದೇ ರೀತಿಯಲ್ಲಿ, ತಂತ್ರಜ್ಞಾನವು ಅಪರಾಧಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಹಿಂದಿನ ಕಾಲದಲ್ಲಿ ಎಲ್ಲೋ ಕಳುವುನಡೆದರೆ ಕಳ್ಳನನ್ನು ಹಿಡಿಯಲು ಬಹಳ ಸಮಯ ಹಿಡಿಯುತ್ತಿತ್ತು. ಆದರೆ ಇಂದು ಸಿಸಿಟಿವಿ ಕ್ಯಾಮೆರಾಗಳಿವೆ. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಮೂಲಕ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಕೆಯಿಂದ ವ್ಯಕ್ತಿಯ ಚಲನವಲನವನ್ನು ಪತ್ತೆಹಚ್ಚುವುದು ಈಗ ತುಂಬಾ ಸುಲಭವಾಗಿದೆ ಮತ್ತು ಕಳುವು ಮಾಡಿದವನನ್ನು ಹಿಡಿಯಬಹುದು.
ಅಪರಾಧ ಜಗತ್ತು ತಂತ್ರಜ್ಞಾನವನ್ನು ಬಳಸುತ್ತಿರುವಂತೆಯೇ, ತಂತ್ರಜ್ಞಾನವು ಭದ್ರತಾ ಪಡೆಗಳಿಗೂ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿ ಮಾರ್ಪಟ್ಟಿದೆ. ಆದರೆ ಸರಿಯಾದ ವ್ಯಕ್ತಿಗಳ ಕೈಯಲ್ಲಿ ಸರಿಯಾದ ಅಸ್ತ್ರ ಮತ್ತು ಸರಿಯಾದ ಸಮಯದಲ್ಲಿ ಕೆಲಸವನ್ನು ಮಾಡುವ ಸಾಮರ್ಥ್ಯವು ತರಬೇತಿಯಿಲ್ಲದೆ ಸಾಧ್ಯವಿಲ್ಲ. ನಿಮ್ಮ ಕೇಸ್ ಸ್ಟಡೀಸ್ ಸಮಯದಲ್ಲಿ, ಅಪರಾಧಿಗಳು ಅಪರಾಧಗಳನ್ನು ನಡೆಸುವಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸುತ್ತಾರೆ ಮತ್ತು ತಂತ್ರಜ್ಞಾನದ ಬಳಕೆಯ ಮೂಲಕ ಆ ಅಪರಾಧಗಳನ್ನು ಹೇಗೆ ಪತ್ತೆಹಚ್ಚಲಾಗಿದೆ ಎಂಬುದನ್ನು ನೀವು ಕಂಡುಕೊಂಡಿರಬೇಕು.
ರಕ್ಷಣಾ ಕ್ಷೇತ್ರದಲ್ಲಿ ಈಗ ದೈಹಿಕ ತರಬೇತಿ ಮತ್ತು ಮುಂಜಾನೆ ಪರೇಡ್‌ಗಳು ಸಾಕಾಗುವುದಿಲ್ಲ. ದೈಹಿಕವಾಗಿ ಅನರ್ಹರಾಗಿದ್ದರೂ ನನ್ನ ದಿವ್ಯಾಂಗ್ ಸಹೋದರರು ಮತ್ತು ಸಹೋದರಿಯರು ರಕ್ಷಾ ವಿಶ್ವವಿದ್ಯಾಲಯದಿಂದ ತರಬೇತಿ ಪಡೆದ ನಂತರ ರಕ್ಷಣಾ ಕ್ಷೇತ್ರದಲ್ಲಿ ಕೊಡುಗೆ ನೀಡಬಹುದು ಎಂದು ಕೆಲವೊಮ್ಮೆ ನನಗೆ ಅನಿಸುತ್ತದೆ. ವ್ಯಾಪ್ತಿ ಬಹಳವಾಗಿ ಬದಲಾಗಿದೆ. ಈ ರಕ್ಷಾ ವಿಶ್ವವಿದ್ಯಾಲಯವು ಆ ವ್ಯಾಪ್ತಿಗೆ ಸೂಕ್ತವಾದ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ನಡೆಯಬೇಕು.
ಶಿಕ್ಷಣದ ದೃಷ್ಟಿಯಿಂದ ಗಾಂಧಿನಗರ ತುಂಬಾ ವೈಬ್ರೆಂಟ್ ಆಗುತ್ತಿದೆ ಎಂದು ಗೃಹ ಸಚಿವರು ಹೇಳಿದ್ದರಂತೆ. ನಾವು ಇಲ್ಲಿ ಹಲವಾರು ವಿಶ್ವವಿದ್ಯಾನಿಲಯಗಳನ್ನು ಹೊಂದಿದ್ದೇವೆ ಮತ್ತು ಪ್ರಪಂಚದಲ್ಲಿ ಕೇವಲ ಎರಡು ನಿರ್ದಿಷ್ಟ ವಿಶ್ವವಿದ್ಯಾಲಯಗಳಿವೆ. ಈ ಎರಡು ವಿಶ್ವವಿದ್ಯಾನಿಲಯಗಳ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಗಾಂಧಿನಗರವನ್ನು ಹೊರತುಪಡಿಸಿ, ಜಗತ್ತಿನಲ್ಲಿ ಎಲ್ಲಿಯೂ ಯಾವುದೇ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಅಥವಾ ಮಕ್ಕಳ ವಿಶ್ವವಿದ್ಯಾಲಯವಿಲ್ಲ.
ಅಂತೆಯೇ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವು ಅಪರಾಧ ಪತ್ತೆಯಿಂದ ನ್ಯಾಯದವರೆಗೆ ಎಲ್ಲವನ್ನೂ ಒಳಗೊಂಡಿದೆ. ಆದರೆ ಈ ಮೂರು ವಿಶ್ವವಿದ್ಯಾನಿಲಯಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಿದರೆ ಮಾತ್ರ ಫಲಿತಾಂಶಗಳು ದೊರಕುತ್ತವೆ. ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯ, ವಿಧಿವಿಜ್ಞಾನ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳು ತಮ್ಮದೇ ದಾರಿಯಲ್ಲಿ ಹೋದರೆ, ಅಪೇಕ್ಷಿತ ಫಲಿತಾಂಶಗಳು ದೊರಕುವುದಿಲ್ಲ.
ಇಂದು ನಾನು ನಿಮ್ಮ ನಡುವೆ ಇರುವಾಗ, ವರ್ಷದಲ್ಲಿ ಮೂರು ತಿಂಗಳಿಗೊಮ್ಮೆ ಎಲ್ಲಾ ಮೂರು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಾಮಾನ್ಯ ವಿಚಾರ ಸಂಕಿರಣವನ್ನು ಆಯೋಜಿಸಲು ಮತ್ತು ರಾಷ್ಟ್ರದ ಭದ್ರತೆಯನ್ನು ಬಲಪಡಿಸಲು ಹೊಸ ಮಾದರಿಯೊಂದಿಗೆ ಹೊರಬರಲು ನಾನು ಎಲ್ಲಾ ಅಧಿಕಾರಿಗಳನ್ನು ವಿನಂತಿಸಲು ಬಯಸುತ್ತೇನೆ. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಮಕ್ಕಳು ನ್ಯಾಯ ವಿಜ್ಞಾನವು ನ್ಯಾಯಕ್ಕಾಗಿ ಹೇಗೆ ಉಪಯುಕ್ತವಾಗಿದೆ ಎಂಬುದನ್ನು ಅಧ್ಯಯನ ಮಾಡಬೇಕಾಗುತ್ತದೆ.
ಅಪರಾಧ ಪತ್ತೆಯನ್ನು ಅಧ್ಯಯನ ಮಾಡುವವರು ಯಾವ ವಿಭಾಗದ ಅಡಿಯಲ್ಲಿ ಯಾವ ಸಾಕ್ಷ್ಯವನ್ನು ಹಾಕಬೇಕು ಎಂಬುದನ್ನು ನೋಡಬೇಕು ಇದರಿಂದ ಅವರು ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯದಿಂದ ತಾಂತ್ರಿಕ ಬೆಂಬಲವನ್ನು ಮತ್ತು ಅಪರಾಧಿಗಳಿಗೆ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳುವುದನ್ನು ಮತ್ತು ದೇಶವನ್ನು ರಕ್ಷಿಸಲು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಕಾನೂನು ಬೆಂಬಲವನ್ನು ಪಡೆಯಬಹುದು. ನ್ಯಾಯಾಂಗ ವ್ಯವಸ್ಥೆಯು ಸಮಯಕ್ಕೆ ಸರಿಯಾಗಿ ನ್ಯಾಯವನ್ನು ನೀಡಲು ಮತ್ತು ಅಪರಾಧಿಗಳಿಗೆ ಶಿಕ್ಷೆಯನ್ನು ನೀಡಲು ಸಮರ್ಥವಾದಾಗ, ಅಪರಾಧಿಗಳಲ್ಲಿ ಭಯದ ವಾತಾವರಣವನ್ನು ನಿರ್ಮಾಣವಾಗುತ್ತದೆ.
ಜೈಲು ವ್ಯವಸ್ಥೆಗಳ ಬಗ್ಗೆ ಚೆನ್ನಾಗಿ ತಿಳಿದಿರುವ ವಿದ್ಯಾರ್ಥಿಗಳನ್ನು ತಯಾರಿಸಲು ನಾನು ರಕ್ಷಾ ವಿಶ್ವವಿದ್ಯಾಲಯವನ್ನು ಆದ್ಯತೆ ನೀಡುತ್ತೇನೆ. ಜೈಲು ವ್ಯವಸ್ಥೆಗಳನ್ನು ಆಧುನೀಕರಿಸುವುದು ಹೇಗೆ, ಖೈದಿಗಳು ಅಥವಾ ವಿಚಾರಣಾಧೀನ ಕೈದಿಗಳ ಮನಸ್ಸನ್ನು ಹೇಗೆ ಬಳಸಿಕೊಳ್ಳಬೇಕು, ಅವರು ಅಪರಾಧಗಳ ಪ್ರಪಂಚದಿಂದ ಹೇಗೆ ಹೊರಬರಬೇಕು, ಅವರು ಯಾವ ಸಂದರ್ಭಗಳಲ್ಲಿ ಅಪರಾಧಗಳನ್ನು ಮಾಡಿದರು ಇತ್ಯಾದಿ. ರಕ್ಷಾ ವಿಶ್ವವಿದ್ಯಾಲಯದಲ್ಲಿಯೂ ಅಂತಹ ಅಂಶವಿರಬೇಕು.
ಕೈದಿಗಳನ್ನು ಸುಧಾರಿಸುವ, ಜೈಲಿನ ವಾತಾವರಣವನ್ನು ಬದಲಾಯಿಸುವ, ಜೈಲಿನಿಂದ ಹೊರಬಂದಾಗ ಅವರ ಮನಸ್ಸನ್ನು ನೋಡುವ ಮತ್ತು ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುವ ಪರಿಣತಿಯನ್ನು ಹೊಂದಿರಬೇಕಾದ ಅಂತಹ ವಿದ್ಯಾರ್ಥಿಗಳನ್ನು ನಾವು ಸಿದ್ಧಪಡಿಸಬಹುದೇ? ಅದಕ್ಕೆ ಸಮರ್ಥ ಮಾನವ ಸಂಪನ್ಮೂಲದ ಅಗತ್ಯವಿದೆ. ಉದಾಹರಣೆಗೆ, ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಹೊಂದಿರುವ ಪೊಲೀಸ್ ಇಲಾಖೆಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ಜೈಲುಗಳನ್ನು ನೋಡಿಕೊಳ್ಳಲು ಕೇಳಿದರೆ. ಅವರು ಅದರಲ್ಲಿ ತರಬೇತಿ ಪಡೆದಿರುವುದಿಲ್ಲ. ಅಪರಾಧಿಗಳನ್ನು ನಿಭಾಯಿಸಲು ಮಾತ್ರ ತರಬೇತಿ ಪಡೆದಿರುತ್ತಾರೆ. ಆದರೆ ಆ ರೀತಿ ಕೆಲಸವಾಗದು. ಕ್ಷೇತ್ರಗಳು ಹೆಚ್ಚಿವೆ ಎಂದು ನಾನು ನಂಬುತ್ತೇನೆ ಮತ್ತು ಈ ದಿಕ್ಕಿನಲ್ಲಿ ನಾವು ಅವರೆಲ್ಲರಿಗಾಗಿ ಪ್ರಯತ್ನಗಳನ್ನು ಮಾಡಬೇಕಾಗಿದೆ.
ಇಂದು ರಕ್ಷಾ ವಿಶ್ವವಿದ್ಯಾಲಯದ ಭವ್ಯ ಕಟ್ಟಡವನ್ನು ಉದ್ಘಾಟಿಸುವ ಅವಕಾಶ ಸಿಕ್ಕಿದೆ. ಈ ವಿಶ್ವವಿದ್ಯಾನಿಲಯಕ್ಕೆ ಸ್ಥಳ ಗುರುತಿಸುವ ಪ್ರಕ್ರಿಯೆಯಲ್ಲಿದ್ದಾಗ, ಹಲವಾರು ಪ್ರಶ್ನೆಗಳು ಮತ್ತು ಒತ್ತಡಗಳು ಇದ್ದವು. ನೀವೇಕೆ ಹೀಗೆ ಮಾಡುತ್ತಿದ್ದೀರಿ, ಅದನ್ನೂ ಇಷ್ಟು ದೂರದ ಜಾಗದಲ್ಲಿ ಎಲ್ಲರೂ ಹೇಳುತ್ತಿದ್ದರು. ಆದರೆ ಗಾಂಧಿನಗರದಿಂದ 25-50 ಕಿ.ಮೀ ದೂರ ಹೋಗಬೇಕಾದರೆ ವಿಶ್ವವಿದ್ಯಾಲಯದ ಮಹತ್ವ ಕಡಿಮೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದೆ. ವಿಶ್ವವಿದ್ಯಾನಿಲಯಕ್ಕೆ ಸಾಮರ್ಥ್ಯವಿದ್ದರೆ, ಅದು ಗಾಂಧಿನಗರದ ಕೇಂದ್ರವಾಗಬಹುದು ಮತ್ತು ಇಂದು ಕಟ್ಟಡವನ್ನು ನೋಡಿದ ನಂತರ ಒಳ್ಳೆಯ ಪ್ರಾರಂಭವಾಗಿದೆ ಎಂದು ನಾನು ಭಾವಿಸುತ್ತೇನೆ.
ಈ ಕಟ್ಟಡದ ನಿರ್ವಹಣೆಯ ಜವಾಬ್ದಾರಿ ಗುತ್ತಿಗೆದಾರರದ್ದಲ್ಲ ಅಥವಾ ಸರ್ಕಾರದ ಬಜೆಟ್‌ನಲ್ಲಿರುವುದಿಲ್ಲ. ಪ್ರತಿಯೊಬ್ಬ ನಿವಾಸಿಯೂ ಅದನ್ನು ತನ್ನದೇ ಎಂದು ಪರಿಗಣಿಸಿದರೆ ಮತ್ತು ಪ್ರತಿಯೊಂದು ಗೋಡೆ, ಕಿಟಕಿ ಅಥವಾ ಪೀಠೋಪಕರಣಗಳನ್ನು ನಿರ್ವಹಿಸಿದರೆ ಮತ್ತು ಅದರ ಸುಧಾರಣೆಗೆ ಕೆಲಸ ಮಾಡಿದರೆ ಕಟ್ಟಡವು ಭವ್ಯವಾಗಬಹುದು.
ಸುಮಾರು 50 ವರ್ಷಗಳ ಹಿಂದೆ ಅಹಮದಾಬಾದ್‌ನಲ್ಲಿ ಐಐಎಂ ರಚನೆಯಾದಾಗ, ಅದರ ಕ್ಯಾಂಪಸ್ ಅನ್ನು ಭಾರತದಲ್ಲಿ ಒಂದು ಮಾದರಿ ಎಂದು ಪರಿಗಣಿಸಲಾಗಿತ್ತು. ನಂತರ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ನಿರ್ಮಿಸಿದಾಗ, ಭಾರತದಾದ್ಯಂತದ ಜನರು ಅದರತ್ತ ಆಕರ್ಷಿತರಾದರು. ಈ ರಕ್ಷಾ ವಿಶ್ವವಿದ್ಯಾನಿಲಯ ಕ್ಯಾಂಪಸ್ ಕೂಡ ಮುಂದಿನ ದಿನಗಳಲ್ಲಿ ಜನರ ಆಕರ್ಷಣೆಗೆ ಕಾರಣವಾಗಲಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ರಕ್ಷಾ ವಿಶ್ವವಿದ್ಯಾನಿಲಯದ ಆವರಣವು ಈಗಾಗಲೇ ಅಸ್ತಿತ್ವದಲ್ಲಿರುವ ಐಐಟಿಗಳು, ಎನರ್ಜಿ ವಿಶ್ವವಿದ್ಯಾಲಯ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮತ್ತು ವಿಧಿ ವಿಜ್ಞಾನ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳಂತೆ ಮತ್ತೊಂದು ರತ್ನವಾಗಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದನ್ನು ಕೀಳು ಎಂದು ಪರಿಗಣಿಸಬೇಡಿ ಎಂದು ನಾನು ಕರೆ ನೀಡುತ್ತೇನೆ. ದೇಶಕ್ಕೆ ಸೇವೆ ಸಲ್ಲಿಸಲು ಇದು ದೊಡ್ಡ ವ್ಯಾಪ್ತಿಯನ್ನು ಹೊಂದಿದೆ. ಅದೇ ರೀತಿ ಇಲ್ಲಿಗೆ ಬಂದಿರುವ ಜನರು, ನಮ್ಮ ಪೊಲೀಸ್ ಸಿಬ್ಬಂದಿ ಮತ್ತು ಗೃಹ ಸಚಿವಾಲಯ ಇದನ್ನು ಪೊಲೀಸ್ ವಿಶ್ವವಿದ್ಯಾಲಯ ಎಂದು ಪರಿಗಣಿಸುವುದರಲ್ಲಿ ತಪ್ಪಿಲ್ಲ. ಇದು ಇಡೀ ದೇಶದ ರಕ್ಷಣೆಗಾಗಿ ಮಾನವಶಕ್ತಿಯನ್ನು ಸಿದ್ಧಪಡಿಸುವ ರಕ್ಷಣಾ ವಿಶ್ವವಿದ್ಯಾಲಯವಾಗಿದೆ. ಇಲ್ಲಿಂದ ಪದವಿ ಪಡೆಯುವ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಿಗೆ ಹೋಗುತ್ತಾರೆ. ಅವರು ರಕ್ಷಣಾ ಸಿಬ್ಬಂದಿಯ ಪೌಷ್ಟಿಕಾಂಶವನ್ನು ನಿರ್ಧರಿಸುವಲ್ಲಿ ಪರಿಣತಿಯನ್ನು ಹೊಂದಿರುವ ತಜ್ಞರಾಗಿರುತ್ತಾರೆ. ಅಪರಾಧಗಳ ವಿರುದ್ಧ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುವಲ್ಲಿ ಅನೇಕ ತಜ್ಞರು ತೊಡಗಿಸಿಕೊಂಡಿದ್ದಾರೆ. ಅವರು ಸಮವಸ್ತ್ರದಲ್ಲಿ ಇರಬೇಕಾದ ಅಗತ್ಯವಿಲ್ಲ, ಒಟ್ಟಿಗೆ ಕೆಲಸ ಮಾಡುವ ಮೂಲಕ ಅವರು ಉತ್ತಮ ಫಲಿತಾಂಶಗಳನ್ನು ನೀಡಬಹುದು. ಈ ಮನೋಭಾವದಿಂದ ನಾವು ಈ ವಿಶ್ವವಿದ್ಯಾಲಯದ ಪ್ರಗತಿಯಲ್ಲಿ ಮುನ್ನಡೆಯುತ್ತಿದ್ದೇವೆ.
ನಾವು ದೇಶದಲ್ಲಿ ಫೋರೆನ್ಸಿಕ್ ಸೈನ್ಸ್ ವಿಶ್ವವಿದ್ಯಾಲಯ ಮತ್ತು ರಕ್ಷಾ ವಿಶ್ವವಿದ್ಯಾಲಯವನ್ನು ವಿಸ್ತರಿಸಲು ಯೋಜಿಸಿದ್ದೇವೆ. ಅನೇಕ ವಿದ್ಯಾರ್ಥಿಗಳು ಬಾಲ್ಯದಿಂದಲೂ ಕ್ರೀಡಾಪಟುಗಳು, ವೈದ್ಯರು ಅಥವಾ ಇಂಜಿನಿಯರ್ ಆಗುವ ಆಸೆಯನ್ನು ಹೊಂದಿದ್ದಾರೆ. ಸಮವಸ್ತ್ರದ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಹೊಂದಿರುವ ಭಾಗವಿದ್ದರೂ, ಮಾನವೀಯ ಮೌಲ್ಯಗಳನ್ನು ಗೌರವಿಸುವ ಮೂಲಕ ಸಮವಸ್ತ್ರಧಾರಿಗಳು ಶ್ರಮಿಸಿದರೆ, ನಾವು ಈ ಗ್ರಹಿಕೆಯನ್ನು ಬದಲಾಯಿಸಬಹುದು ಮತ್ತು ಸಾಮಾನ್ಯರಲ್ಲಿ ಆತ್ಮವಿಶ್ವಾಸವನ್ನು ತುಂಬಬಹುದು ಎಂದು ನನಗೆ ಖಾತ್ರಿಯಿದೆ. ಇಂದು ಖಾಸಗಿ ಭದ್ರತಾ ವಲಯದಲ್ಲಿ ಅಭೂತಪೂರ್ವ ಬೆಳವಣಿಗೆಯಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಮಾತ್ರ ಕೆಲಸ ಮಾಡುತ್ತಿರುವ ಅನೇಕ ಸ್ಟಾರ್ಟ್‌ಅಪ್‌ಗಳಿವೆ. ನಿಮ್ಮ ತರಬೇತಿಯು ಅಂತಹ ಹೊಸ ಸ್ಟಾರ್ಟ್-ಅಪ್‌ಗಳ ಜಗತ್ತನ್ನು ಪ್ರವೇಶಿಸಲು ನಿಮ್ಮನ್ನು ಆಹ್ವಾನಿಸುತ್ತದೆ.
ದೇಶದ ಯುವಜನತೆ ದೇಶದ ರಕ್ಷಣೆಗೆ ಆದ್ಯತೆ ನೀಡುತ್ತಿರುವ ಈ ಸಂದರ್ಭದಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ಇನ್ನೊಂದು ಪ್ರಮುಖ ಅಂಶವಿದೆ. ನಾನು ಆರಂಭದಲ್ಲಿ ಹೇಳಿದ ಹಾಗೆ ಮಾತುಕತೆ ಒಂದು ಕಲೆ. ಉತ್ತಮ ಸಮಾಲೋಚಕರು ಸರಿಯಾದ ತರಬೇತಿಯ ನಂತರವೇ ಆಗುತ್ತಾರೆ. ಜಾಗತಿಕ ಮಟ್ಟದಲ್ಲಿ ಸಮಾಲೋಚಕರು ಬಹಳ ಉಪಯುಕ್ತರಾಗಿದ್ದಾರೆ. ಕ್ರಮೇಣ, ನೀವು ಜಾಗತಿಕ ಮಟ್ಟದ ಸಮಾಲೋಚಕರಾಗಲು ಪ್ರಗತಿ ಸಾಧಿಸಬಹುದು.
ಇದು ಸಮಾಜದಲ್ಲಿ ಬಹಳ ಅಗತ್ಯ ಎಂದು ನಾನು ನಂಬುತ್ತೇನೆ. ಅದೇ ರೀತಿ, ನೀವು ಮಾಬ್ ಸೈಕಾಲಜಿ, ಕ್ರೌಡ್ ಸೈಕಾಲಜಿಯನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡದಿದ್ದರೆ, ನೀವು ಅದನ್ನು ನಿಭಾಯಿಸಲು ಸಾಧ್ಯವಿಲ್ಲ. ರಕ್ಷಾ ವಿಶ್ವವಿದ್ಯಾಲಯದ ಮೂಲಕ, ಅಂತಹ ಸಂದರ್ಭಗಳನ್ನು ನಿಭಾಯಿಸಬಲ್ಲ ಜನರನ್ನು ನಾವು ಸಿದ್ಧಪಡಿಸಲು ಬಯಸುತ್ತೇವೆ. ದೇಶವನ್ನು ರಕ್ಷಿಸಲು ನಾವು ಪ್ರತಿ ಹಂತದಲ್ಲೂ ಸಮರ್ಪಿತ ಕಾರ್ಯಪಡೆಯನ್ನು ಸಿದ್ಧಪಡಿಸಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ನಾನು ಭಾವಿಸುತ್ತೇನೆ.
ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಆದರೆ ನೀವು ಸಮವಸ್ತ್ರವನ್ನು ಧರಿಸಿದ ನಂತರ ಜಗತ್ತು ನಿಮ್ಮ ಹಂಗಿನಲ್ಲಿದೆ ಎಂದು ಯಾವುದೇ ಆಲೋಚನೆಗಳನ್ನು ಮಾಡುವ ತಪ್ಪನ್ನು ಮಾಡಬೇಡಿ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ಇದು ಸಮವಸ್ತ್ರದ ಮೇಲಿನ ಗೌರವವನ್ನು ಹೆಚ್ಚಿಸುವುದಿಲ್ಲ. ಮಾನವೀಯತೆ ಜೀವಂತವಾಗಿರುವಾಗ ಸಮವಸ್ತ್ರದ ಗೌರವ ಹೆಚ್ಚಾಗುತ್ತದೆ ಮತ್ತು ಸಹಾನುಭೂತಿಯ ಭಾವನೆ ಮತ್ತು ತಾಯಿ, ಸಹೋದರಿಯರು, ದೀನದಲಿತರು, ಶೋಷಿತರು ಮತ್ತು ಶೋಷಿತರಿಗೆ ಏನಾದರೂ ಮಾಡಬೇಕೆಂಬ ಹಂಬಲವಿದೆ. ಆದ್ದರಿಂದ ಸ್ನೇಹಿತರೇ, ನಾವು ಜೀವನದಲ್ಲಿ ಮಾನವೀಯತೆಯ ಮೌಲ್ಯಗಳನ್ನು ಅತಿಮುಖ್ಯವೆಂದು ಪರಿಗಣಿಸಬೇಕು. ಸಮಾಜದಲ್ಲಿರುವ ಆತ್ಮೀಯತೆಯ ಭಾವವನ್ನು ಶಕ್ತಿಗಳ ಕಡೆಗೆ ಜೋಡಿಸಲು ನಾವು ಸಂಕಲ್ಪ ಮಾಡಬೇಕು. ಆದ್ದರಿಂದ ಸಮವಸ್ತ್ರದ ಪ್ರಭಾವ ಇರಬೇಕು, ಆದರೆ ಮಾನವೀಯತೆಯ ಕೊರತೆ ಇರಬಾರದು ಎಂದು ನಾನು ಬಯಸುತ್ತೇನೆ. ನಮ್ಮ ಯುವ ಪೀಳಿಗೆ ಈ ಮನೋಭಾವದಿಂದ ಈ ದಿಕ್ಕಿನಲ್ಲಿ ಸಾಗಿದರೆ, ನಾವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ.
ನಾನು ಇಲ್ಲಿ ಕೆಲವು ವಿದ್ಯಾರ್ಥಿಗಳನ್ನು ಗೌರವಿಸುವಾಗ ನನಗೆ ಸಂತೋಷವಾಯಿತು, ನಾನು ಲೆಕ್ಕಿಸಲಿಲ್ಲ ಆದರೆ ನನ್ನ ಪ್ರಾಥಮಿಕ ಅನಿಸಿಕೆ ಏನೆಂದರೆ ಹೆಣ್ಣು ಮಕ್ಕಳ ಸಂಖ್ಯೆ ಬಹುಶಃ ಹೆಚ್ಚಿರಬಹುದು. ಇದರರ್ಥ ನಮ್ಮ ಪೊಲೀಸ್ ಪಡೆಯಲ್ಲಿ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಮುಂದೆ ಬರುತ್ತಿದ್ದಾರೆ. ಅಷ್ಟೇ ಅಲ್ಲ, ನಮ್ಮ ಹೆಣ್ಣುಮಕ್ಕಳು ಸೇನೆಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಮುನ್ನಡೆಯುತ್ತಿದ್ದಾರೆ. ಅದೇ ರೀತಿ ಎನ್‌ಸಿಸಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಸೇರುತ್ತಿರುವುದನ್ನು ನೋಡಿದ್ದೇನೆ. ಇಂದು ಭಾರತ ಸರ್ಕಾರವು ಎನ್‌ಸಿಸಿ ವ್ಯಾಪ್ತಿಯನ್ನು ವಿಸ್ತರಿಸಿದೆ. ಗಡಿನಾಡಿನ ಶಾಲೆಗಳಲ್ಲಿ ಎನ್‌ಸಿಸಿಯನ್ನು ನಿರ್ವಹಿಸುವ ಮೂಲಕ ನೀವು ಸಾಕಷ್ಟು ಕೊಡುಗೆ ನೀಡಬಹುದು.
ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅತ್ಯಂತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನಮ್ಮ ಹೆಣ್ಣುಮಕ್ಕಳು ಪರಿಣಾಮಕಾರಿ ಪಾತ್ರವನ್ನು ವಹಿಸದ ಜೀವನದ ಯಾವುದೇ ಕ್ಷೇತ್ರವಿಲ್ಲ ಎಂದು ನಾವು ನೋಡಿದ್ದೇವೆ ಮತ್ತು ಇದು ಅವರ ಶಕ್ತಿಯಾಗಿದೆ. ಒಲಿಂಪಿಕ್ಸ್, ವಿಜ್ಞಾನ ಮತ್ತು ಶಿಕ್ಷಣದಲ್ಲಿ ಗೆಲುವು ಸಾಧಿಸಲಿ, ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು. ನಮ್ಮ ಹೆಣ್ಣುಮಕ್ಕಳು ರಕ್ಷಣಾ ಕ್ಷೇತ್ರದಲ್ಲೂ ಪ್ರಾಬಲ್ಯ ಸಾಧಿಸುತ್ತಾರೆ ಮತ್ತು ಇದು ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ತುಂಬಾ ಭರವಸೆ ನೀಡುತ್ತದೆ ಎಂದು ನನಗೆ ಖಾತ್ರಿಯಿದೆ. ನಾವು ಒಂದು ಪ್ರಮುಖ ಉಪಕ್ರಮವನ್ನು ತೆಗೆದುಕೊಂಡಿದ್ದೇವೆ ಮತ್ತು ಅದನ್ನು ಯಶಸ್ವಿಗೊಳಿಸುವುದು ಮೊದಲ ಬ್ಯಾಚ್‌ನ ಜವಾಬ್ದಾರಿಯಾಗಿದೆ.
ಈ ವಿಶ್ವವಿದ್ಯಾನಿಲಯವು ಎಷ್ಟು ಮಹತ್ವದ ಬದಲಾವಣೆಯನ್ನು ತರಬಹುದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯು ಎಷ್ಟು ಮಹತ್ವದ ಬದಲಾವಣೆಯನ್ನು ತರಬಹುದು ಎಂಬುದಕ್ಕೆ ನಾನು ಗುಜರಾತ್‌ನ ಎರಡು ಘಟನೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ಬಯಸುತ್ತೇನೆ. ಬಹಳ ಹಿಂದೆಯೇ ಅಹಮದಾಬಾದ್‌ನ ಲೇವಾದೇವಿಗಾರರು, ಸಮಾಜದ ಗಣ್ಯರು ಮತ್ತು ವ್ಯಾಪಾರ ವರ್ಗದವರು ಗುಜರಾತ್‌ನಲ್ಲಿ ಫಾರ್ಮಸಿ ಕಾಲೇಜು ಇರಬೇಕೆಂದು ನಿರ್ಧರಿಸಿದರು. 50 ವರ್ಷಗಳ ಹಿಂದೆ ಫಾರ್ಮಸಿ ಕಾಲೇಜು ರಚನೆಯಾಯಿತು. ಆಗ ಒಂದು ಸಾಧಾರಣ ಕಾಲೇಜು ನಿರ್ಮಾಣವಾಯಿತು. ಆದರೆ ಇಂದು ಗುಜರಾತ್ ಔಷಧ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದರೆ, ಅದರ ಮೂಲ ಆ ಸಣ್ಣ ಫಾರ್ಮಸಿ ಕಾಲೇಜಿನಲ್ಲಿದೆ. ಆ ಕಾಲೇಜಿನಿಂದ ಪದವಿ ಪಡೆದ ಹುಡುಗರು ನಂತರ ಗುಜರಾತ್ ಅನ್ನು ಔಷಧೀಯ ಉದ್ಯಮದ ಕೇಂದ್ರವನ್ನಾಗಿ ಮಾಡಲು ಸಹಾಯ ಮಾಡಿದರು. ಇಂದು, ಕೊರೊನಾ ಅವಧಿಯ ನಂತರ ಭಾರತವನ್ನು ಫಾರ್ಮಾದ ಕೇಂದ್ರವೆಂದು ಜಗತ್ತು ಅಂಗೀಕರಿಸಿದೆ. ಚಿಕ್ಕ ಕಾಲೇಜಿನಿಂದ ಈ ಕೆಲಸ ಆರಂಭವಾಯಿತು.
ಅದೇ ರೀತಿ ಅಹಮದಾಬಾದ್ ಐಐಎಂ ವಿಶ್ವವಿದ್ಯಾನಿಲಯವಲ್ಲ ಮತ್ತು ಪದವಿ ಕೋರ್ಸ್ ಅನ್ನು ನೀಡುವುದಿಲ್ಲ. ಇದು ಯಾವುದೇ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಹೊಂದಿಲ್ಲ ಮತ್ತು ಇದು ಪ್ರಮಾಣಪತ್ರ ಕೋರ್ಸ್‌ಗಳನ್ನು ನೀಡುತ್ತದೆ. ಇದು ಪ್ರಾರಂಭವಾದಾಗ, ಆರು-ಎಂಟು-ಹನ್ನೆರಡು ತಿಂಗಳ ಪ್ರಮಾಣಪತ್ರ ಕೋರ್ಸ್‌ನೊಂದಿಗೆ ಏನಾಗುತ್ತದೆ ಎಂದು ಜನರು ಬಹುಶಃ ಆಶ್ಚರ್ಯ ಪಡುತ್ತಾರೆ. ಆದರೆ ಐಐಎಂ ಎಂತಹ ಖ್ಯಾತಿಯನ್ನು ಗಳಿಸಿತು ಎಂದರೆ ಇಂದು ವಿಶ್ವದ ಹೆಚ್ಚಿನ ಸಿಇಒಗಳು ಐಐಎಂನಿಂದ ಪದವಿ ಪಡೆದಿದ್ದಾರೆ.
ಸ್ನೇಹಿತರೇ, ಈ ರಕ್ಷಾ ವಿಶ್ವವಿದ್ಯಾನಿಲಯದಲ್ಲಿ ವಿಶ್ವವಿದ್ಯಾನಿಲಯದ ಸಾಮರ್ಥ್ಯವನ್ನು ನಾನು ನೋಡುತ್ತಿದ್ದೇನೆ ಅದು ಇಡೀ ಭಾರತದ ರಕ್ಷಣಾ ಕ್ಷೇತ್ರದ ಚಿತ್ರಣವನ್ನು ಬದಲಾಯಿಸುತ್ತದೆ, ರಕ್ಷಣಾ ದೃಷ್ಟಿಕೋನವನ್ನು ಬದಲಾಯಿಸುತ್ತದೆ ಮತ್ತು ನಮ್ಮ ಯುವ ಪೀಳಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಸಂಪೂರ್ಣ ವಿಶ್ವಾಸದೊಂದಿಗೆ ಮೊದಲ ತಲೆಮಾರಿನ ಹೆಚ್ಚಿನ ಜವಾಬ್ದಾರಿ ಬರುತ್ತದೆ. ಮೊದಲ ಘಟಿಕೋತ್ಸವದ ವಿದ್ಯಾರ್ಥಿಗಳ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ. ಆದುದರಿಂದ ಈ ವಿಶ್ವವಿದ್ಯಾನಿಲಯದಿಂದ ಸಂಪನ್ನಗೊಂಡವರು ಮತ್ತು ಪ್ರಥಮ ಘಟಿಕೋತ್ಸವದಲ್ಲಿ ಬೀಳ್ಕೊಡುತ್ತಿರುವವರು ಈ ರಕ್ಷಾ ವಿಶ್ವವಿದ್ಯಾಲಯದ ಘನತೆಯನ್ನು ಹೆಚ್ಚಿಸಬೇಕೆಂದು ನಾನು ಹೇಳುತ್ತೇನೆ. ಇದು ನಿಮ್ಮ ಜೀವನದ ಮಂತ್ರವಾಗಬೇಕು. ಈ ಕ್ಷೇತ್ರದಲ್ಲಿ ಮುಂದೆ ಬರಲು ಯುವಕರು, ಪುತ್ರರು ಮತ್ತು ಹೆಣ್ಣು ಮಕ್ಕಳನ್ನು ನೀವು ಪ್ರೇರೇಪಿಸಬೇಕು. ಅವರು ನಿಮ್ಮಿಂದ ಸ್ಫೂರ್ತಿ ಪಡೆಯುತ್ತಾರೆ ಇದರಿಂದಾಗಿ ನೀವು ಸಮಾಜದಲ್ಲಿ ದೊಡ್ಡ ಪಾತ್ರವನ್ನು ವಹಿಸಬಹುದು.
ನೀವು ಈ ಕಾರ್ಯವನ್ನು ಸಾಧಿಸಿದರೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅಂತಹ ಪಯಣ ಪ್ರಾರಂಭವಾಯಿತು ಎಂದು ನಾನು ನಂಬುತ್ತೇನೆ, ದೇಶವು ಸ್ವಾತಂತ್ರ್ಯದ ನೂರು ವರ್ಷಗಳನ್ನು ಆಚರಿಸಿದಾಗ, ರಕ್ಷಣಾ ಕ್ಷೇತ್ರದ ಅಸ್ಮಿತೆ ವಿಭಿನ್ನವಾಗಿರುತ್ತದೆ ಮತ್ತು ರಕ್ಷಣಾ ಕ್ಷೇತ್ರದತ್ತ ಜನರ ದೃಷ್ಟಿಕೋನವು ವಿಭಿನ್ನವಾಗಿರುತ್ತದೆ. ಮತ್ತು ದೇಶದ ಸಾಮಾನ್ಯ ಪ್ರಜೆ, ಅವನು ಗಡಿಯಲ್ಲಿನ ಕಾವಲುಗಾರನಾಗಿರಲಿ, ಅಥವಾ ನಿಮ್ಮ ಪ್ರದೇಶದ ಕಾವಲುಗಾರನಾಗಿರಲಿ, ದೇಶವನ್ನು ರಕ್ಷಿಸಲು ಸಮಾಜ ಮತ್ತು ವ್ಯವಸ್ಥೆ ಹೇಗೆ ಒಟ್ಟಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಪ್ರತಿಯೊಬ್ಬರೂ ನೋಡುತ್ತಾರೆ. ದೇಶವು ತನ್ನ ಸ್ವಾತಂತ್ರ್ಯದ 100 ನೇ ವರ್ಷವನ್ನು ಆಚರಿಸಿದಾಗ, ನಾವು ಆ ಶಕ್ತಿಯೊಂದಿಗೆ ನಿಲ್ಲುತ್ತೇವೆ. ಈ ನಂಬಿಕೆಯೊಂದಿಗೆ, ನಾನು ಎಲ್ಲಾ ಯುವಕರಿಗೆ ನನ್ನ ಶುಭಾಶಯಗಳನ್ನು ಹೇಳುತ್ತೇನೆ. ಅವರ ಕುಟುಂಬದ ಸದಸ್ಯರಿಗೂ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಬಹಳ ಧನ್ಯವಾದಗಳು!