India is working to become a $5 trillion economy: PM Modi in Houston #HowdyModi
Be it the 9/11 or 26/11 attacks, the brainchild is is always found at the same place: PM #HowdyModi
With abrogation of Article 370, Jammu, Kashmir and Ladakh have got equal rights as rest of India: PM Modi #HowdyModi
Data is the new gold: PM Modi #HowdyModi
Answer to Howdy Modi is 'Everything is fine in India': PM #HowdyModi
We are challenging ourselves; we are changing ourselves: PM Modi in Houston #HowdyModi
We are aiming high; we are achieving higher: PM Modi #HowdyModi

ಹೌಡಿ ಸ್ನೇಹಿತರೇ

ಈ ದೃಶ್ಯ, ಈ ವಾತಾವರಣ ಕಲ್ಪನೆಗೆ ನಿಲುಕಲಾರದ್ದು. ಟೆಕ್ಸಾಸ್ ವಿಷಯದಲ್ಲಿ ಎಲ್ಲವೂ ದೊಡ್ಡದಾಗಿರಬೇಕು ಮತ್ತು ಭವ್ಯವಾಗಿರಬೇಕು, ಇದು ಟೆಕ್ಸಾಸ್ ನ ಸ್ವರೂಪದಲ್ಲೇ ಬೇರೂರಿದೆ.

ಇಂದು ಟೆಕ್ಸಾಸ್‌ನ ಚೈತನ್ಯವೂ ಇಲ್ಲಿ ಪ್ರತಿಫಲಿಸುತ್ತಿದೆ. ಈ ಭಾರಿ ಜನಸಮೂಹದ ಉಪಸ್ಥಿತಿಯು ಕೇವಲ ಲೆಕ್ಕಕ್ಕೆ ಸೀಮಿತವಾಗಿಲ್ಲ, ಇಂದು ನಾವು ಇಲ್ಲಿ ಇತಿಹಾಸಕ್ಕೆ ಸಾಕ್ಷಿಯಾಗುತ್ತಿದ್ದೇವೆ ಮತ್ತು ಹಾಗೆಯೇ ರಸಾಯನಶಾಸ್ತ್ರಕ್ಕೂ ಸಹ.

NRGಯಲ್ಲಿರುವ ಈ ಶಕ್ತಿಯು ಭಾರತ ಮತ್ತು ಅಮೆರಿಕದ ನಡುವೆ ಬೆಳೆಯುತ್ತಿರುವ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

ಅದು ಇಲ್ಲಿ ಅಧ್ಯಕ್ಷ ಟ್ರಂಪ್ ಅವರ ಉಪಸ್ಥಿತಿಯಾಗಿರಬಹುದು ಅಥವಾ ಅಮೆರಿಕದ ಶ್ರೇಷ್ಠ ಪ್ರಜಾಪ್ರಭುತ್ವದ ಚುನಾಯಿತ ಪ್ರತಿನಿಧಿಗಳ ಉಪಸ್ಥಿತಿಯಾಗಿರಬಹುದು ಅವರು ರಿಪಬ್ಲಿಕನ್ ಆಗಿರಲಿ ಅಥವಾ ಡೆಮಾಕ್ರಾಟ್ ಗಳಾಗಿರಲಿ, ಅವರು ಇಲ್ಲಿ ಉಪಸ್ಥಿತರಿರುವುದು ಮತ್ತು ಭಾರತವನ್ನು ಹೊಗಳುವುದು, ನನ್ನನ್ನು ಶ್ಲಾಘಿಸುವುದು, ಅಭಿನಂದಿಸುವುದು, ಏನು ಸ್ಟೆನಿ ಹೋಯರ್, ಸೆನೆಟರ್ ಕಾರ್ನಿನ್, ಸೆನೆಟರ್ ಕ್ರೂಜ್ ಮತ್ತು ಇತರ ಸ್ನೇಹಿತರು ಭಾರತದ ಪ್ರಗತಿಯ ಬಗ್ಗೆ ಹೇಳಿದ್ದಾರೆ ಮತ್ತು ನಮ್ಮನ್ನು ಹೊಗಳಿದ್ದಾರೆ, ಇದು ಅಮೆರಿಕದಲ್ಲಿನ ಭಾರತೀಯರ ಸಾಮರ್ಥ್ಯಗಳನ್ನು ಮತ್ತು ಅವರ ಸಾಧನೆಗಳನ್ನು ಗೌರವಿಸುತ್ತಿದೆ.

ಇದು 1.3 ಬಿಲಿಯನ್ ಭಾರತೀಯರಿಗೆ ಸಂದ ಗೌರವ. ಚುನಾಯಿತ ಪ್ರತಿನಿಧಿಗಳನ್ನು ಹೊರತುಪಡಿಸಿ ಇನ್ನೂ ಅನೇಕ ಅಮೇರಿಕನ್ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಇದ್ದಾರೆ. ಪ್ರತಿಯೊಬ್ಬ ಭಾರತೀಯರ ಪರವಾಗಿ ನಾನು ಅವರಿಗೆ ಹೃತ್ಪೂರ್ವಕ ಸ್ವಾಗತವನ್ನು ಬಯಸುತ್ತೇನೆ.

ಈ ಕಾರ್ಯಕ್ರಮದ ಆಯೋಜಕರನ್ನೂ ಕೂಡ ನಾನು ಅಭಿನಂದಿಸುತ್ತೇನೆ. ಈ ಕಾರ್ಯಕ್ರಮಕ್ಕಾಗಿ ಹೆಚ್ಚಿನ ಸಂಖ್ಯೆಯ ಜನರು ನೋಂದಾಯಿಸಿಕೊಂಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ ಆದರೆ ಸ್ಥಳಾವಕಾಶದ ಕೊರತೆಯಿಂದಾಗಿ ಸಾವಿರಾರು ಜನರು ಇಲ್ಲಿಗೆ ಬರಲು ಸಾಧ್ಯವಾಗಿಲ್ಲ. ಇಲ್ಲಿಗೆ ಬರಲು ಸಾಧ್ಯವಾಗದವರಿಗೆ ನಾನು ವೈಯಕ್ತಿಕವಾಗಿ ಕ್ಷಮೆಯಾಚಿಸುತ್ತೇನೆ.

ಎರಡು ದಿನಗಳ ಹಿಂದೆ ಹವಾಮಾನದ ಹಠಾತ್ ಬದಲಾವಣೆಯ ನಂತರ ಪರಿಸ್ಥಿತಿಯನ್ನು ನಿಭಾಯಿಸಿದ ಮತ್ತು ಇಷ್ಟು ಕಡಿಮೆ ಸಮಯದಲ್ಲಿ ವ್ಯವಸ್ಥೆಗಳನ್ನು ಸುವ್ಯವಸ್ಥಿತಗೊಳಿಸಿದ ಹೂಸ್ಟನ್ ಮತ್ತು ಟೆಕ್ಸಾಸ್ ಆಡಳಿತಕ್ಕೆ ನಾನು ನನ್ನ ತುಂಬು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಅಧ್ಯಕ್ಷ ಟ್ರಂಪ್ ಹೇಳಿದಂತೆ, ಹೂಸ್ಟನ್ ನವರು ಶಕ್ತಿಶಾಲಿಗಳು ಎಂದು ಸಾಬೀತುಪಡಿಸಿದ್ದಾರೆ.

ಸ್ನೇಹಿತರೇ,

ಈ ಕಾರ್ಯಕ್ರಮದ ಹೆಸರು ಹೌಡಿ ಮೋದಿ, ಆದರೆ ಕೇವಲ ಮೋದಿ ಮಾತ್ರ ಏನೂ ಅಲ್ಲ. ನಾನು 130 ಕೋಟಿ ಭಾರತೀಯರ ಆಶಯದಂತೆ ಕೆಲಸ ಮಾಡುವ ಒಬ್ಬ ಸಾಮಾನ್ಯ ವ್ಯಕ್ತಿ. ಹಾಗಾಗಿ ನೀವು ಹೌಡಿ ಮೋದಿ ಎಂದು ಕೇಳಿದಾಗ, ನನ್ನ ಹೃದಯವು ಅದಕ್ಕೆ ಹೇಳುವ ಉತ್ತರ- ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ.

ಸ್ನೇಹಿತರೇ,

ನಾನು ಹೇಳಿದ್ದರ ಬಗ್ಗೆ ನಮ್ಮ ಅಮೇರಿಕನ್ ಸ್ನೇಹಿತರು ಬೆರಗಾಗಬೇಕು. ಅಧ್ಯಕ್ಷ ಟ್ರಂಪ್ ಮತ್ತು ನನ್ನ ಅಮೇರಿಕನ್ ಸ್ನೇಹಿತರೇ, ನಾನು ಭಾರತದ ಕೆಲವು ವಿಭಿನ್ನ ಭಾಷೆಗಳಲ್ಲಿ ಇಷ್ಟನ್ನು ಮಾತ್ರ ಹೇಳಿದ್ದೇನೆ- ಎಲ್ಲವೂ ಚೆನ್ನಾಗಿದೆ.

ನಮ್ಮ ಭಾಷೆಗಳು ನಮ್ಮ ಪ್ರಗತಿಪರ ಮತ್ತು ಪ್ರಜಾಸತ್ತೆ ಸಮಾಜದ ಬಹು ದೊಡ್ಡ ಗುರುತುಗಳು. ಶತಮಾನಗಳಿಂದ ನೂರಾರು ಭಾಷೆಗಳು, ನೂರಾರು ಉಪಭಾಷೆಗಳು ಸಹಬಾಳ್ವೆಯ ಪ್ರಜ್ಞೆಯೊಂದಿಗೆ ನಮ್ಮ ದೇಶದಲ್ಲಿ ಮುಂದುವರಿಯುತ್ತಿವೆ ಮತ್ತು ಅವು ಇನ್ನೂ ಲಕ್ಷಾಂತರ ಜನರ ಮಾತೃಭಾಷೆಯಾಗಿ ಉಳಿದಿವೆ. ಭಾಷೆಗಳು ಮಾತ್ರವಲ್ಲ, ನಮ್ಮ ದೇಶವು ವಿಭಿನ್ನ ಪಂಥಗಳು, ಡಜನ್ಗಟ್ಟಲೆ ಪಂಗಡಗಳು, ವಿಭಿನ್ನ ಪೂಜಾ ವಿಧಾನಗಳು, ನೂರಾರು ವಿಭಿನ್ನ ಪ್ರಾದೇಶಿಕ ಪಾಕ ಪದ್ಧತಿಗಳು, ವಿಭಿನ್ನ ದಿರಿಸಿನ ಮಾದರಿಗಳು, ವಿಭಿನ್ನ ಋತುಗಳನ್ನು ಹೊಂದಿದೆ, ಇದು ಈ ನೆಲವನ್ನು ಅದ್ಭುತಗೊಳಿಸಿದೆ.

ವೈವಿಧ್ಯತೆಯಲ್ಲಿ ಏಕತೆ ನಮ್ಮ ಪರಂಪರೆಯಾಗಿದೆ, ಇದು ನಮ್ಮ ವಿಶೇಷತೆ. ಭಾರತದ ಈ ವೈವಿಧ್ಯತೆಯು ನಮ್ಮ ರೋಮಾಂಚಕ ಪ್ರಜಾಪ್ರಭುತ್ವದ ಆಧಾರವಾಗಿದೆ. ಇದು ನಮ್ಮ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿದೆ. ನಾವು ಎಲ್ಲಿಗೆ ಹೋದರೂ, ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವದ ವಿಧಿಗಳನ್ನು ನಮ್ಮೊಂದಿಗೆ ಸಾಗಿಸುತ್ತೇವೆ.

ಇಂದು, ಈ ಕ್ರೀಡಾಂಗಣದಲ್ಲಿ ಕುಳಿತಿರುವ 50 ಸಾವಿರಕ್ಕೂ ಹೆಚ್ಚು ಭಾರತೀಯರು ಇಂದು ನಮ್ಮ ಶ್ರೇಷ್ಠ ಸಂಪ್ರದಾಯದ ಪ್ರತಿನಿಧಿಗಳಾಗಿ ಹಾಜರಾಗಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವದ ಅತಿದೊಡ್ಡ ಆಚರಣೆಯಾದ 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ನಿಮ್ಮಲ್ಲಿ ಹಲವರು ಸಕ್ರಿಯ ಕೊಡುಗೆ ನೀಡಿದ್ದೀರಿ. ಇದು ನಿಜಕ್ಕೂ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯನ್ನು ಜಗತ್ತಿಗೆ ತೋರಿಸಿದ ಚುನಾವಣೆಯಾಗಿದೆ.

ಈ ಚುನಾವಣೆಯಲ್ಲಿ 610 ದಶಲಕ್ಷಕ್ಕೂ ಹೆಚ್ಚು ಮತದಾರರು ಭಾಗವಹಿಸಿದ್ದರು. ಒಂದು ರೀತಿಯಲ್ಲಿ ಹೇಳುವುದಾದರೆ, ಅಮೆರಿಕದ ಒಟ್ಟು ಜನಸಂಖ್ಯೆಯ ದುಪ್ಪಟ್ಟು. 80 ಮಿಲಿಯನ್ ಯುವಕರು ಮೊದಲ ಬಾರಿಗೆ ಮತದಾರರಾಗಿದ್ದರು.

ಈ ಬಾರಿ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ ಮತ್ತು ಈ ಬಾರಿ ಅತಿ ಹೆಚ್ಚು ಮಹಿಳೆಯರು ಆಯ್ಕೆಯಾಗಿದ್ದಾರೆ.

ಸ್ನೇಹಿತರೇ,

2019 ರ ಸಾರ್ವತ್ರಿಕ ಚುನಾವಣೆಗಳು ಮತ್ತೊಂದು ಹೊಸ ದಾಖಲೆಯನ್ನು ಮಾಡಿವೆ. ಆರು ದಶಕಗಳ ನಂತರ ಒಂದು ಸರ್ಕಾರವು ತಮ್ಮ ಹಿಂದಿನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಹಿಂದಿನದಕ್ಕಿಂತ ಹೆಚ್ಚಿನ ಸಂಖ್ಯೆಯೊಂದಿಗೆ ಅಧಿಕಾರಕ್ಕೆ ಮರಳಿದೆ.

ಇದೆಲ್ಲ ಏಕೆ ಸಂಭವಿಸಿತು, ಇದಕ್ಕೆ ಕಾರಣವೇನು? ಇಲ್ಲ, ಅದು ಮೋದಿಯ ಕಾರಣಕ್ಕಲ್ಲ, ಇದು ಸಂಭವಿಸಿದ್ದು ಭಾರತೀಯರಿಂದ.

ಸ್ನೇಹಿತರೇ,

ಭಾರತೀಯರನ್ನು ಅವರ ತಾಳ್ಮೆಯ ಗುಣದಿಂದ ಗುರುತಿಸಲಾಗುತ್ತದೆ ಆದರೆ ಈಗ ನಾವು ದೇಶದ ಅಭಿವೃದ್ಧಿಗಾಗಿ ತಾಳ್ಮೆ ಕಳೆದುಕೊಂಡಿದ್ದೇವೆ ಮತ್ತು 21 ನೇ ಶತಮಾನದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ. ಇಂದು ಭಾರತದ ಅತ್ಯಂತ ಜನಪ್ರಿಯ ಪದವೆಂದರೆ ಅಭಿವೃದ್ಧಿ, ಇಂದು ಭಾರತದ ಅತಿದೊಡ್ಡ ಮಂತ್ರವೆಂದರೆ – ಸಬ್ಕಾ ಸಾಥ್ ಸಬ್ಕಾ ವಿಕಾಸ್. ಇಂದು ಭಾರತದ ಅತಿದೊಡ್ಡ ನೀತಿಯೆಂದರೆ, ಸಾರ್ವಜನಿಕರ ಭಾಗವಹಿಸುವಿಕೆ. ಇಂದು, ಭಾರತದ ಅತ್ಯಂತ ಜನಪ್ರಿಯ ಘೋಷಣೆಯೆಂದರೆ, ಸಂಕಲ್ಪದ ಮೂಲಕ ಸಾಧನೆ ಮತ್ತು ಇಂದು ಭಾರತದ ಅತಿದೊಡ್ಡ ಸಂಕಲ್ಪವೆಂದರೆ – ನವ ಭಾರತ.

ಇಂದು ಭಾರತವು ನವ ಭಾರತದ ಕನಸನ್ನು ಈಡೇರಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿದೆ ಮತ್ತು ಅದರಲ್ಲಿರುವ ಪ್ರಮುಖ ವಿಷಯವೆಂದರೆ ನಾವು ಯಾರೊಂದಿಗೂ ಸ್ಪರ್ಧಿಗಿಳಿದಿಲ್ಲ, ಬದಲಿಗೆ ನಮ್ಮ ಸ್ಪರ್ಧೆ ನಮ್ಮೊಂದಿಗೆ ಮಾತ್ರ.

ನಮಗೆ ನಾವೇ ಸವಾಲು ಹಾಕಿಕೊಳ್ಳುತ್ತಿದ್ದೇವೆ. ನಾವೇ ಬದಲಾಗುತ್ತಿದ್ದೇವೆ.

ಸ್ನೇಹಿತರೇ,

ಇಂದು ಭಾರತ ಎಂದಿಗಿಂತಲೂ ವೇಗವಾಗಿ ಮುನ್ನಡೆಯಲು ಬಯಸಿದೆ. ಇಂದು, ಭಾರತವು ಏನೂ ಬದಲಾಗುವುದಿಲ್ಲ ಎಂಬ ಭಾವನೆಯಿರುವ ಕೆಲವು ಜನರ ಆಲೋಚನೆಯನ್ನು ಪ್ರಶ್ನಿಸುತ್ತಿದೆ,

ಕಳೆದ ಐದು ವರ್ಷಗಳಲ್ಲಿ, 130 ಕೋಟಿ ಭಾರತೀಯರು ಒಟ್ಟಾಗಿ ಪ್ರತಿ ಕ್ಷೇತ್ರದಲ್ಲೂ ಇಂತಹ ಫಲಿತಾಂಶಗಳನ್ನು ಸಾಧಿಸಿದ್ದಾರೆ, ಇದನ್ನು ಮೊದಲು ಯಾರೂ ಊಹಿಸಿರಲಿಲ್ಲ.

ನಾವು ಉನ್ನತ ಗುರಿ ಹೊಂದಿದ್ದೇವೆ, ನಾವು ಹೆಚ್ಚಿನದನ್ನು ಸಾಧಿಸುತ್ತಿದ್ದೇವೆ.

ಸೋದರ, ಸೋದರಿಯರೇ,

ಏಳು ದಶಕಗಳಲ್ಲಿ ದೇಶದ ಗ್ರಾಮೀಣ ನೈರ್ಮಲ್ಯವು ಕೇವಲ ಶೇ.38 ರಷ್ಟಿತ್ತು. ಐದು ವರ್ಷಗಳಲ್ಲಿ, ನಾವು 110 ದಶಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಇಂದು ಗ್ರಾಮೀಣ ನೈರ್ಮಲ್ಯವು ಶೇಕಡಾ 99 ರಷ್ಟಿದೆ.

ದೇಶದಲ್ಲಿ ಅಡುಗೆ ಅನಿಲ ಸಂಪರ್ಕವು ಕೇವಲ ಶೇ.55 ರಷ್ಟಿತ್ತು. ಐದು ವರ್ಷಗಳಲ್ಲಿ ಅದು 95 ಪ್ರತಿಶತವನ್ನು ತಲುಪಿದೆ. ಕೇವಲ ಐದು ವರ್ಷಗಳಲ್ಲಿ, ನಾವು 150 ದಶಲಕ್ಷಕ್ಕೂ ಹೆಚ್ಚು ಜನರನ್ನು ಅನಿಲ ಸಂಪರ್ಕದೊಂದಿಗೆ ಜೋಡಿಸಿದ್ದೇವೆ.

ಈ ಹಿಂದೆ ಭಾರತದಲ್ಲಿ ಗ್ರಾಮೀಣ ರಸ್ತೆ ಸಂಪರ್ಕವು ಕೇವಲ 55 ಪ್ರತಿಶತದಷ್ಟಿತ್ತು. ಐದು ವರ್ಷಗಳಲ್ಲಿ, ನಾವು ಅದನ್ನು 97 ಪ್ರತಿಶತಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಕೇವಲ ಐದು ವರ್ಷಗಳಲ್ಲಿ, ನಾವು ದೇಶದ ಗ್ರಾಮೀಣ ಪ್ರದೇಶಗಳಲ್ಲಿ 2 ಲಕ್ಷ ಕಿಲೋಮೀಟರ್ ಅಂದರೆ 200 ಸಾವಿರ ಕಿ.ಮೀ.ರಸ್ತೆಗಳನ್ನು ನಿರ್ಮಿಸಿದ್ದೇವೆ,

ಭಾರತದಲ್ಲಿ ಶೇಕಡಾ 50 ಕ್ಕಿಂತ ಕಡಿಮೆ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರು. ಇಂದು, ಐದು ವರ್ಷಗಳಲ್ಲಿ, ಸುಮಾರು ಶೇಕಡಾ 100 ರಷ್ಟು ಕುಟುಂಬಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸೇರಿಕೊಂಡಿವೆ. ಐದು ವರ್ಷಗಳಲ್ಲಿ, ನಾವು 370 ದಶಲಕ್ಷಕ್ಕೂ ಹೆಚ್ಚು ಜನರ ಹೊಸ ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ.

ಸ್ನೇಹಿತರೇ,

ಇಂದು, ಜನರು ಮೂಲಭೂತ ಅವಶ್ಯಕತೆಗಳ ಬಗ್ಗೆ ಚಿಂತೆ ಮಾಡದಿರುವಾಗ, ಅವರು ದೊಡ್ಡ ಕನಸು ಕಾಣಲು ಸಮರ್ಥರಾಗಿದ್ದಾರೆ ಮತ್ತು ಅವರ ಎಲ್ಲಾ ಶಕ್ತಿಯನ್ನು ಅದನ್ನು ಸಾಧಿಸುವ ದಿಕ್ಕಿನಲ್ಲಿ ಹಾಕುತ್ತಿದ್ದಾರೆ.

ಸ್ನೇಹಿತರೇ,

ನಮಗೆ ಸುಲಲಿತ ಜೀವನದಷ್ಟೇ ಮುಖ್ಯವಾದ್ದು ಸುಲಲಿತ ವ್ಯವಹಾರ ಮತ್ತು ಅದರ ಹಾದಿಯು ಸಬಲೀಕರಣ. ದೇಶದ ಜನಸಾಮಾನ್ಯರು ಸಶಕ್ತರಾದಾಗ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಅತ್ಯಂತ ವೇಗದಲ್ಲಿ ಮುಂದುವರಿಯುತ್ತದೆ.
ಇಂದು ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಇದನ್ನು ಹೇಳಲಾಗುತ್ತದೆ – ಡೇಟಾ ಹೊಸ ತೈಲ. ತೈಲದ ವಿಷಯಕ್ಕೆ ಬಂದಾಗ ಇದರ ಅರ್ಥವೇನೆಂದು ಹೂಸ್ಟನ್ ನವರಾದ ನಿಮಗೆ ಚೆನ್ನಾಗಿ ತಿಳಿದಿದೆ.

ಡೇಟಾ ಹೊಸ ಚಿನ್ನ ಎಂದು ನಾನು ಇದಕ್ಕೆ ಸೇರಿಸುತ್ತೇನೆ. ಇಂಡಸ್ಟ್ರಿ 4.0 ನ ಸಂಪೂರ್ಣ ಗಮನವು ಡೇಟಾದ ಮೇಲಿದೆ. ಇಡೀ ಜಗತ್ತಿನಲ್ಲಿ, ಎಚ್ಚರಿಕೆಯಿಂದ ಕೇಳಿಸಿಕೊಳ್ಳಿ, ಇಡೀ ಜಗತ್ತಿನಲ್ಲಿ ಎಲ್ಲಿಯಾದರೂ ಕಡಿಮೆ ಬೆಲೆಯ ಡೇಟಾ ಲಭ್ಯವಿದ್ದರೆ, ಆ ದೇಶ ಭಾರತ.

ಇಂದು ಭಾರತದಲ್ಲಿ, 1 ಜಿಬಿ ಡೇಟಾದ ಬೆಲೆ ಕೇವಲ 25-30 ಸೆಂಟ್ ಮಾತ್ರ, ಅಂದರೆ ಕೇವಲ ಒಂದು ಡಾಲರ್‌ನ ಕಾಲು ಭಾಗ ಮತ್ತು 1 ಜಿಬಿ ಡೇಟಾದ ಸರಾಸರಿ ಜಾಗತಿಕ ಬೆಲೆ ಇದಕ್ಕಿಂತ 25-30 ಪಟ್ಟು ಹೆಚ್ಚಾಗಿದೆ ಎಂದು ಇಲ್ಲಿ ನಾನು ಹೇಳಲು ಬಯಸುತ್ತೇನೆ.

ಈ ಅಗ್ಗದ ಡೇಟಾ ಭಾರತದಲ್ಲಿ ಡಿಜಿಟಲ್ ಇಂಡಿಯಾದ ಹೊಸ ಗುರುತಾಗುತ್ತಿದೆ. ಅಗ್ಗದ ಮಾಹಿತಿಯು ಭಾರತದಲ್ಲಿ ಆಡಳಿತವನ್ನು ಪುನರ್ ವ್ಯಾಖ್ಯಾನಿಸಿದೆ. ಇಂದು, ಭಾರತದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸುಮಾರು 10 ಸಾವಿರ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ.

ಸ್ನೇಹಿತರೇ,

ಪಾಸ್ಪೋರ್ಟ್ ಪಡೆಯಲು ಭಾರತದಲ್ಲಿ ಎರಡು ಮೂರು ತಿಂಗಳುಗಳನ್ನು ಬೇಕಾಗಿದ್ದ ಕಾಲವಿತ್ತು. ಈಗ ಪಾಸ್‌ಪೋರ್ಟ್ ಒಂದು ವಾರದೊಳಗೆ ಮನೆಗೆ ಬರುತ್ತದೆ. ಮುಂಚೆ ವೀಸಾದೊಂದಿಗೆ ಇದ್ದ ಸಮಸ್ಯೆಗಳ ಬಗ್ಗೆ ನೀವು ನನಗಿಂತ ಹೆಚ್ಚು ತಿಳಿದಿರಬಹುದು. ಇಂದು ಅಮೆರಿಕಾ ಭಾರತದ ಇ-ವೀಸಾ ಸೌಲಭ್ಯದ ಅತಿದೊಡ್ಡ ಬಳಕೆದಾರರಲ್ಲಿ ಒಂದಾಗಿದೆ.

ಸ್ನೇಹಿತರೇ,

ಹೊಸ ಕಂಪನಿಯ ನೋಂದಣಿಗೆ ಎರಡು ಮೂರು ವಾರಗಳು ಬೇಕಾದ ಸಮಯವಿತ್ತು. ಈಗ ಹೊಸ ಕಂಪನಿಯನ್ನು 24 ಗಂಟೆಗಳ ಒಳಗೆ ನೋಂದಾಯಿಸಬಹುದು. ತೆರಿಗೆ ರಿಟರ್ನ್ ಸಲ್ಲಿಸುವ ದೊಡ್ಡ ತಲೆನೋವು ಇದ್ದ ಸಮಯವಿತ್ತು. ತೆರಿಗೆ ಮರುಪಾವತಿ ಬೇಕಾಗಿದ್ದವು.

ಆಗಿರುವ ಬದಲಾವಣೆಗಳ ಬಗ್ಗೆ ಕೇಳಿದರೆ ಈಗ ನೀವು ಗಾಬರಿಯಾಗುತ್ತೀರಿ. ಈ ಬಾರಿ, ಆಗಸ್ಟ್ 31 ರಂದು, ಒಂದು ದಿನದಲ್ಲಿ, ನಾನು ಒಂದು ದಿನದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ, ಸುಮಾರು 50 ಲಕ್ಷ ಜನರು ಅಂದರೆ 5 ಮಿಲಿಯನ್ ಜನರು ಒಂದೇ ದಿನದಲ್ಲಿ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ್ದಾರೆ.

ಅಂದರೆ ಕೇವಲ ಒಂದು ದಿನದಲ್ಲಿ 5 ಮಿಲಿಯನ್ ಆದಾಯ ತೆರಿಗೆ ಸಲ್ಲಿಕೆ, ಅಂದರೆ ಹೂಸ್ಟನ್‌ನ ಒಟ್ಟು ಜನಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು. ಮೊದಲು ತೆರಿಗೆ ಮರುಪಾವತಿಗೆ ತಿಂಗಳುಗಳನ್ನು ತೆಗೆದುಕೊಳ್ಳುತ್ತಿದ್ದ ಮತ್ತೊಂದು ದೊಡ್ಡ ಸಮಸ್ಯೆ, ಈಗ ಅದನ್ನು ನೇರವಾಗಿ 8 ರಿಂದ 10 ದಿನಗಳಲ್ಲಿ ಬ್ಯಾಂಕಿಗೆ ವರ್ಗಾಯಿಸಲಾಗುತ್ತದೆ.

ಸೋದರ, ಸೋದರಿಯರೇ,

ತ್ವರಿತ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಯಾವುದೇ ದೇಶದ ನಾಗರಿಕರಿಗೆ ಕಲ್ಯಾಣ ಯೋಜನೆಗಳು ಅವಶ್ಯಕ. ಅಗತ್ಯವಿರುವ ನಾಗರಿಕರಿಗಾಗಿ ಕಲ್ಯಾಣ ಯೋಜನೆಗಳನ್ನು ಒದಗಿಸುವುದರ ಜೊತೆಗೆ, ನವಭಾರತವನ್ನು ನಿರ್ಮಿಸಲು ಕೆಲವು ವಿಷಯಗಳಿಗೆ ವಿದಾಯ ಹೇಳಲಾಗುತ್ತಿದೆ.

ನಾವು ವಿದಾಯಕ್ಕೆ ನೀಡಿದ್ದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಕಲ್ಯಾಣಕ್ಕೆ ನೀಡಿದ್ದೇವೆ. ಈ ಅಕ್ಟೋಬರ್ 2 ರಂದು, ದೇಶವು ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆಯನ್ನು ಆಚರಿಸುವಾಗ, ಭಾರತವು ಬಯಲು ಮಲವಿಸರ್ಜನೆಗೆ ವಿದಾಯ ಹೇಳಲಿದೆ.

ಕಳೆದ ಐದು ವರ್ಷಗಳಲ್ಲಿ ಭಾರತವು 1500 ಕ್ಕೂ ಹೆಚ್ಚು ಹಳೆಯ ಮತ್ತು ಪುರಾತನ ಕಾನೂನುಗಳಿಗೆ ವಿದಾಯ ಹೇಳಿದೆ. ಭಾರತದಲ್ಲಿ ಡಜನ್ಗಟ್ಟಲೆ ತೆರಿಗೆಗಳ ಜಾಲ ಸಹ ವ್ಯವಹಾರ ಸ್ನೇಹಿ ವಾತಾವರಣವನ್ನು ಬೆಳೆಸಲು ಅಡ್ಡಿಯಾಗಿದೆ.

ನಮ್ಮ ಸರ್ಕಾರವು ಈ ತೆರಿಗೆಗಳ ಜಾಲಕ್ಕೆ ವಿದಾಯ ಹೇಳಿ ಜಿಎಸ್‌ಟಿಯನ್ನು ಜಾರಿಗೆ ತಂದಿತು. ಇಷ್ಟು ವರ್ಷಗಳ ನಂತರ, ದೇಶದಲ್ಲಿ ಒಂದು ರಾಷ್ಟ್ರ, ಒಂದು ತೆರಿಗೆಯ ಕನಸನ್ನು ನಾವು ಸಾಕಾರಗೊಳಿಸಿದ್ದೇವೆ.

ಸ್ನೇಹಿತರೇ,

ನಾವು ಭ್ರಷ್ಟಾಚಾರಕ್ಕೂ ಸವಾಲು ಹಾಕುತ್ತಿದ್ದೇವೆ. ಅದಕ್ಕೆ ಪ್ರತಿ ಹಂತದಿಂದಲೂ ವಿದಾಯ ಹೇಳಲು ನಾವು ಒಂದರ ನಂತರ ಒಂದು ಹೆಜ್ಜೆ ಇಡುತ್ತಿದ್ದೇವೆ. ಕಳೆದ ಎರಡು-ಮೂರು ವರ್ಷಗಳಲ್ಲಿ, ಭಾರತವು ಮೂರೂವರೆ ಲಕ್ಷಕ್ಕೂ ಹೆಚ್ಚು ಸಂಶಯಾಸ್ಪದ ಕಂಪನಿಗಳಿಗೆ ವಿದಾಯ ಹೇಳಿದೆ.

ದಾಖಲೆಗಳಲ್ಲಿ ಮಾತ್ರ ಅಸ್ತಿತ್ವದಲ್ಲಿದ್ದ ಮತ್ತು ಸರ್ಕಾರಿ ಸೇವೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದ 80 ದಶಲಕ್ಷಕ್ಕೂ ಹೆಚ್ಚು ನಕಲಿ ಹೆಸರುಗಳಿಗೆ ನಾವು ವಿದಾಯ ಹೇಳಿದ್ದೇವೆ. ಸ್ನೇಹಿತರೇ, ಈ ನಕಲಿ ಹೆಸರುಗಳನ್ನು ತೆಗೆದುಹಾಕುವುದರ ಮೂಲಕ ಎಷ್ಟು ಉಳಿಸಲಾಗಿದೆ ಎಂದು ನೀವು ಊಹಿಸಬಲ್ಲಿರಾ? ಸುಮಾರು 20 ಬಿಲಿಯನ್ ಡಾಲರ್ ಗಳಷ್ಟು.

ನಾವು ದೇಶದಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ ಆದ್ದರಿಂದ ಅಭಿವೃದ್ಧಿಯ ಪ್ರಯೋಜನಗಳು ಪ್ರತಿಯೊಬ್ಬ ಭಾರತೀಯರಿಗೂ ತಲುಪುತ್ತವೆ. ಸೋದರ, ಸೋದರಿಯರೇ, ಒಬ್ಬ ಭಾರತೀಯನೂ ಸಹ ಅಭಿವೃದ್ಧಿಯಿಂದ ದೂರವಿದ್ದರೆ, ಅದನ್ನು ಭಾರತ ಒಪ್ಪುವುದಿಲ್ಲ.

70 ವರ್ಷಗಳಿಂದ ನಮ್ಮ ದೇಶವು ಹೊಂದಿದ್ದ ಮತ್ತೊಂದು ದೊಡ್ಡ ಸವಾಲಿಗೆ ಭಾರತವು ಕೆಲವೇ ದಿನಗಳ ಹಿಂದೆ ವಿದಾಯ ಹೇಳಿದೆ.
ಹೌದು, ನೀವಂದುಕೊಂಡಿದ್ದು ಸರಿಯಿದೆ. ಅದು 370 ನೇ ವಿಧಿಯ ವಿಷಯ. 370 ನೇ ವಿಧಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಜನರನ್ನು ಅಭಿವೃದ್ಧಿ ಮತ್ತು ಸಮಾನ ಹಕ್ಕುಗಳಿಂದ ವಂಚಿತಗೊಳಿಸಿತ್ತು. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಗುಂಪುಗಳು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದವು.

ಭಾರತದ ಸಂವಿಧಾನವು ಉಳಿದ ಭಾರತೀಯರಿಗೆ ನೀಡಿರುವ ಹಕ್ಕುಗಳು ಈಗ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಜನರಿಗೆ ಸಹ ಲಭ್ಯವಿವೆ.

ಮಹಿಳೆಯರು, ಮಕ್ಕಳು ಮತ್ತು ದಲಿತರ ಮೇಲಿನ ತಾರತಮ್ಯ ಈಗ ಕೊನೆಗೊಂಡಿದೆ.

ಸ್ನೇಹಿತರೇ,

ನಮ್ಮ ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆ ಎರಡರಲ್ಲೂ ಇದನ್ನು ಗಂಟೆಗಟ್ಟಲೆ ಚರ್ಚಿಸಲಾಯಿತು, ಇದನ್ನು ದೇಶದಲ್ಲಿ ಮತ್ತು ಇಡೀ ಪ್ರಪಂಚದಲ್ಲಿ ನೇರ ಪ್ರಸಾರ ಮಾಡಲಾಯಿತು. ಭಾರತದಲ್ಲಿ, ನಮ್ಮ ಪಕ್ಷಕ್ಕೆ ಮೇಲ್ಮನೆಯಲ್ಲಿ ಅಂದರೆ ರಾಜ್ಯಸಭೆಯಲ್ಲಿ ಬಹುಮತವಿಲ್ಲ, ಆದರೆ ನಮ್ಮ ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆ ಎರಡೂ ಇದಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸಿದವು.

ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ, ಭಾರತದ ಎಲ್ಲ ಸಂಸದರಿಗೆ ನಿಂತು ಗೌರವ ಸಲ್ಲಿಸಬೇಕೆಂದು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ.

ತುಂಬ ಧನ್ಯವಾದಗಳು.

ಭಾರತವು ತನಗಾಗಿ ಏನು ಮಾಡುತ್ತಿದ್ದರೂ ಅದು ತಮ್ಮ ದೇಶವನ್ನು ನಿರ್ವಹಿಸಲು ಸಾಧ್ಯವಾಗದ ಕೆಲವು ಜನರನ್ನು ತೊಂದರೆಗೊಳಿಸುತ್ತಿದೆ. ಈ ಜನರು ಭಾರತದ ಬಗೆಗಿನ ದ್ವೇಷವನ್ನು ತಮ್ಮ ರಾಜಕೀಯದ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ.
ಅಶಾಂತಿಯನ್ನು ಬಯಸುವವರು, ಭಯೋತ್ಪಾದನೆಯನ್ನು ಬೆಂಬಲಿಸುವವರು ಮತ್ತು ಭಯೋತ್ಪಾದನೆಯನ್ನು ಪೋಷಿಸುವವರು ಇವರು. ಅವರ ಯಾರೆಂದು ನಿಮ್ಮೆಲ್ಲರಿಗೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೇ ತಿಳಿದಿದೆ.

ಅದು ಅಮೇರಿಕಾದ 9/11 ಆಗಿರಲಿ ಅಥವಾ ಮುಂಬೈನ 26/11 ಆಗಿರಲಿ, ಅದರ ಸಂಚುಕೋರರನ್ನು ಅಲ್ಲಿ ಕಂಡುಹಿಡಿಯಬಹುದು.

ಸ್ನೇಹಿತರೇ,

ಭಯೋತ್ಪಾದನೆ ವಿರುದ್ಧ ಮತ್ತು ಭಯೋತ್ಪಾದನೆಯನ್ನು ಉತ್ತೇಜಿಸುವವರ ವಿರುದ್ಧ ನಿರ್ಣಾಯಕ ಹೋರಾಟದ ಕಾಲ ಬಂದಿದೆ. ಈ ಹೋರಾಟದಲ್ಲಿ ಅಧ್ಯಕ್ಷ ಟ್ರಂಪ್ ಭಯೋತ್ಪಾದನೆ ವಿರುದ್ಧ ದೃಢ ವಾಗಿ ನಿಂತಿದ್ದಾರೆ ಎಂದು ನಾನು ಇಲ್ಲಿ ಒತ್ತಿ ಹೇಳಲು ಬಯಸುತ್ತೇನೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಧ್ಯಕ್ಷ ಟ್ರಂಪ್ ಅವರ ಸ್ಥೈರ್ಯಕ್ಕಾಗಿ ನಾವು ನಿಂತು ಗೌರವಿಸಬೇಕು.
ಧನ್ಯವಾದ. ಧನ್ಯವಾದಗಳು ಸ್ನೇಹಿತರೇ.

ಸೋದರ, ಸೋದರಿಯರೇ,

ಭಾರತದಲ್ಲಿ ಬಹಳಷ್ಟು ನಡೆಯುತ್ತಿದೆ, ಬಹಳಷ್ಟು ಬದಲಾಗುತ್ತಿದೆ ಮತ್ತು ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕೆಂಬ ನಮ್ಮ ಉದ್ದೇಶಗಳೊಂದಿಗೆ ನಾವು ಮುಂದುವರಿಯುತ್ತಿದ್ದೇವೆ.

ಹೊಸ ಸವಾಲುಗಳನ್ನು ಹಾಕಲು ಮತ್ತು ಅವುಗಳನ್ನು ಸಾಧಿಸಲು ನಾವು ದೃಢ ನಿಶ್ಚಯವನ್ನು ಹೊಂದಿದ್ದೇವೆ. ದೇಶದ ಕೆಲವು ಭಾವನೆಗಳ ಬಗ್ಗೆ ನಾನು ಕೆಲವು ದಿನಗಳ ಹಿಂದೆ ಒಂದು ಕವಿತೆ ಬರೆದಿದ್ದೇನೆ. ಇಂದು ನಾನು ಅದರಿಂದ ಕೇವಲ ಎರಡು ಸಾಲುಗಳನ್ನು ಹೇಳುತ್ತೇನೆ. ಹೆಚ್ಚು ಸಮಯವಿಲ್ಲದ ಕಾರಣ, ನಾನು ಹೆಚ್ಚು ಹೇಳುವುದಿಲ್ಲ.

ಅಲ್ಲಿ ಮಲಗಿರುವ ಕಷ್ಟಗಳ ಪರ್ವತವೇ, ಅದು ನನ್ನ ಚೈತನ್ಯದ ಗೋಪುರವೂ ಆಗಿದೆ.

ಸ್ನೇಹಿತರೇ,

ಭಾರತ ಇಂದು ಸವಾಲುಗಳಿಂದ ತಪ್ಪಿಸಿಕೊಳ್ಳುತ್ತಿಲ್ಲ, ನಾವು ಅವುಗಳನ್ನು ಮುಖಾಮುಖಿಯಾಗುತ್ತಿದ್ದೇವೆ. ಇಂದು ಭಾರತವು ಸಮಸ್ಯೆಗಳಿಗೆ ಕಂತುಗಳ ಬದಲಾವಣೆಗಳನ್ನಲ್ಲದೇ ಸಂಪೂರ್ಣ ಪರಿಹಾರವನ್ನು ನೀಡುವಂತೆ ಒತ್ತಾಯಿಸುತ್ತಿದೆ. ಇಂದು, ಭಾರತವು ಸ್ವಲ್ಪವೇ ಸಮಯದ ಹಿಂದೆ ಅಸಾಧ್ಯವೆಂದು ತೋರುತ್ತಿದ್ದ ಎಲ್ಲವನ್ನೂ ಸಾಧ್ಯವಾಗಿಸುತ್ತಿದೆ.

ಸ್ನೇಹಿತರೇ,

ಭಾರತ ಈಗ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಸಜ್ಜಾಗಿದೆ. ಮೂಲಸೌಕರ್ಯ, ಹೂಡಿಕೆ ಮತ್ತು ರಫ್ತು ಹೆಚ್ಚಿಸಲು ನಾವು ಒತ್ತು ನೀಡುತ್ತಿದ್ದೇವೆ. ಜನಸ್ನೇಹಿ, ಅಭಿವೃದ್ಧಿ ಸ್ನೇಹಿ ಮತ್ತು ಹೂಡಿಕೆ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಮೂಲಕ ನಾವು ಮುಂದುವರಿಯುತ್ತಿದ್ದೇವೆ.

ನಾವು ಮೂಲಸೌಕರ್ಯಕ್ಕಾಗಿ ನೂರು ಲಕ್ಷ ಕೋಟಿ ಅಂದರೆ ಸುಮಾರು 1.3 ಟ್ರಿಲಿಯನ್ ಡಾಲರ್ ಖರ್ಚು ಮಾಡಲಿದ್ದೇವೆ.

ಸ್ನೇಹಿತರೇ,

ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ, ಕಳೆದ ಐದು ವರ್ಷಗಳಲ್ಲಿ ಭಾರತದ ಬೆಳವಣಿಗೆಯ ದರ ಸರಾಸರಿ ಶೇ.7.5 ಆಗಿದೆ. ಯಾವುದೇ ಸರ್ಕಾರದ ಸಂಪೂರ್ಣ ಅಧಿಕಾರಾವಧಿಯ ಸರಾಸರಿಯನ್ನು ನಾವು ನೋಡಿದರೆ, ಇದು ಹಿಂದೆಂದೂ ಸಂಭವಿಸಿಲ್ಲ ಎಂಬುದನ್ನು ಸಹ ನೀವು ನೆನಪಿನಲ್ಲಿಡಿ.

ಇದೇ ಮೊದಲ ಬಾರಿಗೆ, ಕಡಿಮೆ ಹಣದುಬ್ಬರ, ಕಡಿಮೆ ಹಣಕಾಸಿನ ಕೊರತೆ ಮತ್ತು ಹೆಚ್ಚಿನ ಬೆಳವಣಿಗೆಯ ಅವಧಿ ಕಂಡುಬಂದಿದೆ. ಇಂದು ಭಾರತವು ವಿಶ್ವದ ಅತ್ಯುತ್ತಮ ಎಫ್‌ಡಿಐ ತಾಣವಾಗಿದೆ. ಎಫ್‌ಡಿಐ ಒಳಹರಿವು 2014 ರಿಂದ 2019 ರವರೆಗೆ ದ್ವಿಗುಣಗೊಂಡಿದೆ.

ಇತ್ತೀಚೆಗೆ, ನಾವು ಏಕ ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಎಫ್‌ಡಿಐ ನಿಯಮಗಳನ್ನು ಸರಳೀಕರಿಸಿದ್ದೇವೆ. ಕಲ್ಲಿದ್ದಲು ಗಣಿಗಾರಿಕೆ ಮತ್ತು ತಯಾರಿಕೆಯ ಗುತ್ತಿಗೆಯಲ್ಲಿ ವಿದೇಶಿ ಹೂಡಿಕೆಯನ್ನು ಈಗ ಶೇ.100 ರವರೆಗೆ ಮಾಡಬಹುದು.

ನಾನು ನಿನ್ನೆ ಇಲ್ಲಿ ಹ್ಯೂಸ್ಟನ್‌ನಲ್ಲಿ ಇಂಧನ ಕ್ಷೇತ್ರದ ಸಿಇಒಗಳನ್ನು ಭೇಟಿಯಾದೆ. ಕಾರ್ಪೊರೇಟ್ ತೆರಿಗೆಯನ್ನು ತೀವ್ರವಾಗಿ ಕಡಿಮೆ ಮಾಡಲು ಭಾರತ ತೆಗೆದುಕೊಂಡ ನಿರ್ಧಾರವು ಎಲ್ಲರೂ ಸಂಭ್ರಮಿಸುವಂತೆ ಮಾಡಿದೆ. ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡುವ ನಿರ್ಧಾರವು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ವ್ಯಾಪಾರ ಮುಖಂಡರಲ್ಲಿಯೂ ಸಹ ಒಂದು ಸಕಾರಾತ್ಮಕ ಸಂದೇಶಕ್ಕೆ ಕಾರಣವಾಗಿದೆ ಎಂಬುದು ಅವರ ಪ್ರತಿಕ್ರಿಯೆ.

ಈ ನಿರ್ಧಾರವು ಭಾರತವನ್ನು ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ.

ಸ್ನೇಹಿತರೇ,

ಭಾರತದಲ್ಲಿ ಭಾರತೀಯರು ಮತ್ತು ಅಮೆರಿಕದಲ್ಲಿ ಅಮೆರಿಕನ್ನರಿಗೆ ಮುಂದುವರಿಯಲು ಅಪಾರ ಅವಕಾಶಗಳಿವೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಗಾಗಿ ನವ ಭಾರತದ ಹಾದಿ ಮತ್ತು ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಅಮೆರಿಕದ ಬಲವಾದ ಆರ್ಥಿಕ ಬೆಳವಣಿಗೆ ಈ ಸಾಧ್ಯತೆಗಳಿಗೆ ಹೊಸ ರೆಕ್ಕೆಗಳನ್ನು ನೀಡುತ್ತದೆ.

ಅಧ್ಯಕ್ಷ ಟ್ರಂಪ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರುವ ಆರ್ಥಿಕ ಪವಾಡಗಳು ಪರಿಸ್ಥಿತಿಯನ್ನು ಮತ್ತಷ್ಟು ಸುಧಾರಿಸಲಿವೆ. ಮುಂದಿನ ಎರಡು ಮೂರು ದಿನಗಳಲ್ಲಿ ನಾನು ಅಧ್ಯಕ್ಷ ಟ್ರಂಪ್ ಅವರೊಂದಿಗೆ ಚರ್ಚಿಸಲಿದ್ದೇನೆ. ಅದು ಕೆಲವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.

ಅಧ್ಯಕ್ಷ ಟ್ರಂಪ್ ನನ್ನನ್ನು ಕಠಿಣ ಸಂಧಾನಕಾರ ಎಂದು ಕರೆದರೂ ಸ್ವತಃ ಅವರೇ ಒಪ್ಪಂದದ ಕಲೆಯಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ನಾನು ಅವರಿಂದ ಬಹಳಷ್ಟು ಕಲಿಯುತ್ತಿದ್ದೇನೆ.

ಸ್ನೇಹಿತರೇ,

ಉತ್ತಮ ಭವಿಷ್ಯದೆಡಿಗಿನ ನಮ್ಮ ಓಟವು ಈಗ ಹೆಚ್ಚು ವೇಗ ಪಡೆಯಲಿದೆ. ನನ್ನ ಸ್ನೇಹಿತರಾದ ನೀವೆಲ್ಲರೂ ಇದರ ಪ್ರಮುಖ ಭಾಗ, ಇದರ ಹಿಂದಿನ ಪ್ರೇರಕ ಶಕ್ತಿ. ನೀವು ನಿಮ್ಮ ದೇಶದಿಂದ ದೂರವಿರುತ್ತೀರಿ, ಆದರೆ ನಿಮ್ಮ ದೇಶದ ಸರ್ಕಾರ ನಿಮ್ಮಿಂದ ದೂರವಿಲ್ಲ.
ಕಳೆದ ಐದು ವರ್ಷಗಳಲ್ಲಿ, ನಾವು ಮಾತುಕತೆಗಳ ಅರ್ಥ ಮತ್ತು ಭಾರತೀಯ ವಲಸೆಗಾರರೊಂದಿಗೆ ಸಂವಹನ ನಡೆಸುವ ವಿಧಾನ ಎರಡನ್ನೂ ಬದಲಾಯಿಸಿದ್ದೇವೆ. ಈಗ ವಿದೇಶದಲ್ಲಿರುವ ಭಾರತದ ರಾಯಭಾರ ಕಚೇರಿ ಮತ್ತು ದೂತಾವಾಸವು ಕೇವಲ ಸರ್ಕಾರಿ ಕಚೇರಿಯಲ್ಲ, ನಿಮ್ಮ ಮೊದಲ ಪಾಲುದಾರರು.

ವಿದೇಶದಲ್ಲಿ ಕೆಲಸ ಮಾಡುವ ನಮ್ಮ ಸ್ನೇಹಿತರ ಹಿತಾಸಕ್ತಿಗಳನ್ನು ಕಾಪಾಡಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. MADAD, ಇ-ವಲಸೆ, ವಿದೇಶಕ್ಕೆ ಹೋಗುವ ಮೊದಲು ನಿರ್ಗಮನ ತರಬೇತಿ, ಸಾಗರೋತ್ತರ ಭಾರತೀಯರಿಗೆ ವಿಮಾ ಯೋಜನೆಯ ಸುಧಾರಣೆ, ಎಲ್ಲಾ ಪಿಐಒ ಕಾರ್ಡುದಾರರಿಗೆ ಒಸಿಐ ಕಾರ್ಡ್ ಸೌಲಭ್ಯ ಮತ್ತು ವಿದೇಶಕ್ಕೆ ಹೋಗುವ ಮೊದಲು ಮತ್ತು ನಂತರ ಸಾಗರೋತ್ತರ ಭಾರತೀಯರಿಗೆ ನೆರವಾಗುವ ಇಂತಹ ಅನೇಕ ಕೆಲಸಗಳನ್ನು ಮಾಡಲಾಗಿದೆ

ನಮ್ಮ ಸರ್ಕಾರ ಭಾರತೀಯ ಸಮುದಾಯ ಕಲ್ಯಾಣ ನಿಧಿಯನ್ನು ಸಹ ಬಲಪಡಿಸಿದೆ. ಸಾಗರೋತ್ತರ ಭಾರತೀಯ ಸಹಾಯ ಕೇಂದ್ರಗಳನ್ನು ಜಗತ್ತಿನ ಅನೇಕ ಹೊಸ ನಗರಗಳಲ್ಲಿ ತೆರೆಯಲಾಗಿದೆ.

ಸೋದರ, ಸೋದರಿಯರೇ,

ಇಂದು, ಈ ವೇದಿಕೆಯಿಂದ ಹೊರಹೊಮ್ಮುವ ಸಂದೇಶವು 21 ನೇ ಶತಮಾನದಲ್ಲಿ ಹೊಸ ವ್ಯಾಖ್ಯಾನಗಳಿಗೆ, ಹೊಸ ಸಾಧ್ಯತೆಗಳಿಗೆ ಕಾರಣವಾಗುತ್ತದೆ. ನಾವು ಎರಡೂ ದೇಶಗಳು ಒಂದೇ ಪ್ರಜಾಪ್ರಭುತ್ವ ಮೌಲ್ಯಗಳ ಶಕ್ತಿಯನ್ನು ಹೊಂದಿದ್ದೇವೆ.

ಹೊಸ ನಿರ್ಮಾಣಕ್ಕಾಗಿ ಎರಡೂ ದೇಶಗಳು ಒಂದೇ ರೀತಿಯ ನಿರ್ಣಯಗಳನ್ನು ಹೊಂದಿವೆ ಮತ್ತು ಇವೆರಡೂ ಖಂಡಿತವಾಗಿಯೂ ಉಜ್ವಲ ಭವಿಷ್ಯದತ್ತ ನಮ್ಮನ್ನು ಕರೆದೊಯ್ಯುತ್ತವೆ.

ಸನ್ಮಾನ್ಯ ಅಧ್ಯಕ್ಷರೇ, ನೀವು ಕುಟುಂಬದೊಂದಿಗೆ ಭಾರತಕ್ಕೆ ಭೇಟಿ ನೀಡಿ ನಿಮ್ಮನ್ನು ಸ್ವಾಗತಿಸಲು ನಮಗೆ ಅವಕಾಶ ನೀಡಬೇಕು. ನಮ್ಮ ಸ್ನೇಹವು ಭಾರತ ಮತ್ತು ಅಮೇರಿಕಾದ ಸಮಾನ ಕನಸುಗಳು ಮತ್ತು ರೋಮಾಂಚಕ ಭವಿಷ್ಯಕ್ಕೆ ಹೊಸ ಎತ್ತರವನ್ನು ನೀಡುತ್ತದೆ.

ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕದ ರಾಜಕೀಯ, ಸಾಮಾಜಿಕ ಮತ್ತು ವ್ಯಾಪಾರ ಮುಖಂಡರಿಗೆ ಇಲ್ಲಿ ಉಪಸ್ಥಿತರಿದ್ದಿದ್ದಕ್ಕಾಗಿ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ.

ಟೆಕ್ಸಾಸ್ ಸರ್ಕಾರ ಮತ್ತು ಇಲ್ಲಿನ ಆಡಳಿತಕ್ಕೂ ನಾನು ಧನ್ಯವಾದ ಅರ್ಪಿಸುತ್ತೇನೆ.

ಧನ್ಯವಾದಗಳು ಹ್ಯೂಸ್ಟನ್, ಧನ್ಯವಾದಗಳು ಅಮೆರಿಕಾ.

ದೇವರು ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ.

ಧನ್ಯವಾದಗಳು. 

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”