Constitution of India is the soul of our democracy: PM Narendra Modi during #MannKiBaat
Our Constitution is comprehensive. Equality for all and sensitivity towards everyone are its hallmarks: PM Modi during #MannKiBaat
#MannKiBaat: Baba Saheb Ambedkar ensured welfare of every section of society while drafting the Constitution, says Prime Minister Modi
India will never forget the terrorist attacks in Mumbai that shook the country 9 years back on 26/11: PM Modi during #MannKiBaat
Terrorism is the biggest threat to humanity. Not only is it a threat to India but also to countries across the world; World must unite to fight this menace: PM during #MannKiBaat
India being the land of Lord Buddha, Lord Mahavira, Guru Nanak, Mahatma Gandhi has always spread the message of non-violence across the world: PM during #MannKiBaat
#MannKiBaat: Our rivers and seas hold economic as well as strategic importance for our country. These are our gateways to the whole world, says PM
What if there is no fertile soil anywhere in this world? If there is no soil, there would be no trees, no creatures and human life would not be possible: PM during #MannKiBaat
Our Divyang brothers and sisters are determined, strong, courageous and resolute. Every moment we get to learn something from them: PM Modi during #MannKiBaat
#MannKiBaat: It is our endeavour that every person in the country is empowered. Our aim is to build an all-inclusive and harmonious society, says PM
Whether it is the Army, the Navy or the Air Force, the country salutes the courage, bravery, valour, power and sacrifice of our soldiers: PM Modi during #MannKiBaat

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಕೆಲ ದಿನಗಳ ಹಿಂದೆ ನನಗೆ ಕರ್ನಾಟಕದ ಪುಟ್ಟ ಮಕ್ಕಳೊಂದಿಗೆ(ಸ್ನೇಹಿತರೊಂದಿಗೆ) ಪರೋಕ್ಷ ಸಂವಾದದ ಅವಕಾಶ ದೊರೆಯಿತು. ಟೈಮ್ಸ್ ಸಮೂಹದ ವಿಜಯ ಕರ್ನಾಟಕ ಪತ್ರಿಕೆ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ದೇಶದ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆಯುವಂತೆ ಪ್ರೇರೇಪಿಸಿದರು. ನಂತರ ಅವರು ಅವುಗಳಲ್ಲಿ ಆಯ್ದ ಕೆಲ ಪತ್ರಗಳನ್ನು ಪ್ರಕಟಿಸಿದರು. ನಾನು ಆ ಪತ್ರಗಳನ್ನು ಓದಿದೆ. ನನಗೆ ತುಂಬಾ ಸಂತೋಷವಾಯಿತು. ಈ ಪುಟ್ಟ ಮಕ್ಕಳು ಕೂಡಾ ದೇಶದ ಸಮಸ್ಯೆಗಳ ಬಗ್ಗೆ ತಿಳಿದಿದ್ದಾರೆ. ದೇಶದಲ್ಲಾಗುತ್ತಿರುವ ಚರ್ಚೆಗಳ ಬಗ್ಗೆ ಅವರಿಗೆ ಅರಿವಿದೆ. ಬಹಳಷ್ಟು ವಿಷಯಗಳ ಬಗ್ಗೆ ಈ ಮಕ್ಕಳು ಬರೆದಿದ್ದರು. ಉತ್ತರ ಕನ್ನಡದ ಕೀರ್ತಿ ಹೆಗಡೆ, ಡಿಜಿಟಲ್ ಇಂಡಿಯಾವನ್ನು ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಒಂದು ಸಲಹೆಯನ್ನೂ ನೀಡಿದ್ದಾಳೆ.  ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಾರ್ಪಾಡಿನ ಅವಶ್ಯಕತೆಯಿದೆ, ಅಲ್ಲದೆ ಇಂದಿನ ಮಕ್ಕಳು ಕ್ಲಾಸ್ ರೂಂ ರೀಡಿಂಗ್ ಇಷ್ಟಪಡುವುದಿಲ್ಲ. ಅವರಿಗೆ ಪೃಕ್ರತಿಯ ಬಗ್ಗೆ ಅರಿಯುವುದು ಹೆಚ್ಚು ಇಷ್ಟ ಎಂದೂ ಬರೆದಿದ್ದಾಳೆ. ನಾವು ಮಕ್ಕಳಿಗೆ ನಿಸರ್ಗದ ಬಗ್ಗೆ ಅರಿವು ಮೂಡಿಸಿದಲ್ಲಿ ಬಹುಶಃ ಅವರು ಮುಂದೆ ಪ್ರಕೃತಿಯನ್ನು ಕಾಪಾಡುವಲ್ಲಿ ನಮಗೆ ನೆರವಾಗಬಹುದು. 
 
ಲಕ್ಷ್ಮೇಶ್ವರದ ರೀಡಾ ನದಾಫ್, ತಾನೊಬ್ಬ ಸೈನಿಕನ ಮಗಳು ಮತ್ತು ತನಗೆ ಆ ಬಗ್ಗೆ ಹೆಮ್ಮೆಯಿದೆ ಎಂದು ಬರೆದಿದ್ದಾಳೆ. ಹಿಂದೂಸ್ತಾನದ ಯಾವ ಪ್ರಜೆಗೆ ಸೈನಿಕರ ಬಗ್ಗೆ ಗೌರವವಿಲ್ಲ ಹೇಳಿ. ನೀವಂತೂ ಸೈನಿಕನ ಮಗಳು ಅಂದ ಮೇಲೆ ನಿಮಗೆ ಆ ಬಗ್ಗೆ ಹೆಮ್ಮೆಯೆನಿಸುವುದು ಸಹಜವೇ. ಕಲ್ಬುರ್ಗಿಯಿಂದ ಇರ್ಫಾನಾ ಬೇಗಂ, ತಮ್ಮ ಶಾಲೆ ಮನೆಯಿಂದ ಐದು ಕಿಲೋ ಮೀಟರ್ ದೂರ ಇದೆ. ಹಾಗಾಗಿ ಬೇಗ ಹೊರಡಬೇಕಾಗುತ್ತದೆ ಮತ್ತು ಮನೆಗೆ ಹಿಂದಿರುಗುವುದೂ ಬಹಳ ತಡವಾಗುತ್ತದೆ. ಅಲ್ಲದೆ ಸ್ನೇಹಿತರೊಂದಿಗೆ ಸಮಯ ಕಳೆಯಲೂ ಆಗುವುದಿಲ್ಲ ಎಂದು ಬರೆದಿದ್ದಾಳೆ. ಸಮೀಪದಲ್ಲಿಯೇ ಒಂದು ಶಾಲೆ  ಇರಬೇಕು ಎಂದು ಸಲಹೆ ನೀಡಿದ್ದಾಳೆ. ಆದರೆ ದೇಶವಾಸಿಗಳೇ, ಒಂದು ಪತ್ರಿಕೆಯು ಇಂತಹ ಕಾರ್ಯ ಪ್ರಾರಂಭಿಸಿ ಅದನ್ನು ಪ್ರಕಟಿಸಿ, ನನಗೂ ಅದರ ಪ್ರತಿಯನ್ನು ತಲುಪಿಸಿದ್ದಾರೆ ಮತ್ತು ನನಗೆ ಆ ಪತ್ರಗಳನ್ನು ಓದುವ ಅವಕಾಶ ದೊರೆತದ್ದು  ಸಂತೋಷ ತಂದಿದೆ. ನನಗೂ ಇದೊಂದು ಒಳ್ಳೇ ಅನುಭವವಾಗಿತ್ತು. 
 
ನನ್ನ ಪ್ರಿಯ ದೇಶಬಾಂಧವರೇ, ಇಂದು ನವೆಂಬರ್ 26. ಇದು ನಮ್ಮ ಸಂವಿಧಾನ ದಿನ. 1949ರಲ್ಲಿ ಇಂದೇ ಸಂವಿಧಾನ ರಚನಾ ಸಭೆ ಭಾರತದ ಸಂವಿಧಾನವನ್ನು ಅಂಗೀಕರಿಸಿತ್ತು.  1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂತು. ಆದ್ದರಿಂದಲೇ ನಾವು ಅದನ್ನು ಗಣತಂತ್ರ ದಿನವನ್ನಾಗಿ ಆಚರಿಸುತ್ತೇವೆ. ಭಾರತದ ಸಂವಿಧಾನ ನಮ್ಮ ಪ್ರಜಾಸತ್ತಾತ್ಮಕತೆಯ ಆತ್ಮವಿದ್ದಂತೆ. ಇಂದಿನ ದಿನ ಸಂವಿಧಾನ ರಚನಾ ಸಭೆಯ ಸದಸ್ಯರನ್ನು ಸ್ಮರಿಸುವ ದಿನವಾಗಿದೆ. ಅವರು ಭಾರತದ ಸಂವಿಧಾನ ರಚನೆಗೆ ಸರಿ ಸುಮಾರು 3 ವರ್ಷಗಳವರೆಗೆ ಶ್ರಮಿಸಿದ್ದಾರೆ. ಯಾರೇ ಆಗಲಿ ಆ ಚರ್ಚೆ ಓದಿದಾಗ, ರಾಷ್ಟ್ರಕ್ಕೆ ಅವರು ಸಮರ್ಪಿಸಿದ ಜೀವನದ ವಿಚಾರಧಾರೆ ಏನು ಎಂಬುದನ್ನು ತಿಳಿದು ನಮಗೆ ಹೆಮ್ಮೆ ಎನಿಸುತ್ತದೆ. ವಿವಿಧತೆಯಿಂದ ಕೂಡಿದ ನಮ್ಮ ದೇಶದಲ್ಲಿ ಸಂವಿಧಾನ ನಿರ್ಮಾಣಕ್ಕೆ ಅವರು ಎಷ್ಟು ಶ್ರಮಪಟ್ಟಿರಬಹುದು ಎಂದು ನೀವು ಊಹಿಸಬಲ್ಲಿರಾ? ಅದೂ ಕೂಡಾ ದೇಶ ಗುಲಾಮಗಿರಿಯಿಂದ ಮುಕ್ತವಾಗುವ ಸಮಯದಲ್ಲಿ ಅವರು ತಮ್ಮ ದೂರ ದರ್ಶಿತ್ವ ಮತ್ತು ಬುದ್ಧಿಶಕ್ತಿಯನ್ನು ಮೆರೆದಿರಬಹುದು? ಇದೇ ಸಂವಿಧಾನದ ಉಜ್ವಲ ಬೆಳಕಿನಲ್ಲಿ, ಸಂವಿಧಾನ ನಿರ್ಮಾತೃಗಳು, ಆ ಮಹಾಪುರುಷರ ವಿಚಾರಧಾರೆಗಳ ಹೊಂಬೆಳಕಿನಲ್ಲಿ ನವ ಭಾರತದ ನಿರ್ಮಾಣ ನಮ್ಮೆಲ್ಲರ ಹೊಣೆಯಾಗಿದೆ. ನಮ್ಮ ಸಂವಿಧಾನದ ವ್ಯಾಪ್ತಿ ದೊಡ್ಡದು. ಬಹುಶಃ ಅದರಲ್ಲಿ ಉಲ್ಲೇಖಿಸಲಾರದ ಯಾವುದೇ ಕ್ಷೇತ್ರವಿಲ್ಲ ಮತ್ತು ಪ್ರಕೃತಿಯ ಯಾವುದೇ ವಿಷಯವೂ ಇಲ್ಲವೆಂದಿಲ್ಲ. ಎಲ್ಲರಿಗೂ ಸಮಾನತೆ ಮತ್ತು ಎಲ್ಲರ ಬಗ್ಗೆಯೂ ಸಂವೇದನಶೀಲವಾಗಿರುವುದು ನಮ್ಮ ಸಂವಿಧಾನದ ವೈಶಿಷ್ಟ್ಯ.  ಬಡವನಾಗಿರಲಿ, ದಲಿತನಾಗಿರಲಿ, ಹಿಂದುಳಿದವನಾಗಿರಲಿ, ವಂಚಿತನಾಗಿರಲಿ, ಮೂಲ ನಿವಾಸಿಯಾಗಿರಲಿ, ಮಹಿಳೆಯಾಗಿರಲಿ ಹೀಗೆ ಸಂವಿಧಾನವು  ಪ್ರತಿ ನಾಗರಿಕನ ಮೂಲಭೂತ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಅವರ ಹಿತವನ್ನು ಕಾಪಾಡುತ್ತದೆ. ಸಂವಿಧಾನವನ್ನು ಅಕ್ಷರಶಃ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ನಾಗರಿಕನಾಗಿರಲಿ, ಆಡಳಿತ ವರ್ಗವಾಗಲಿ ಸಂವಿಧಾನದ ಭಾವವನ್ನು ಅರಿತು ಮುಂದುವರಿಯಬೇಕು. ಯಾರಿಗೂ ಯಾವುದೇ ರೀತಿಯ ಹಾನಿಯಾಗಕೂಡದು. ಇದೇ ಸಂವಿಧಾನದ ಸಂದೇಶ. ಇಂದು ಸಂವಿಧಾನ ದಿನವಾದ್ದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೆನಪು ಬರುವುದು ಸಹಜ. ಸಂವಿಧಾನ ರಚನಾ ಸಭೆಯಲ್ಲಿ ಮಹತ್ವಪೂರ್ಣ ವಿಷಯಗಳಿಗೆ ಸಂಬಂಧಿಸಿ 17 ಬೇರೆಬೇರೆ ಸಮಿತಿಗಳ ರಚನೆಯಾಗಿತ್ತು. ಇವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಕರಡು ರಚನಾ ಸಮಿತಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು ಅತ್ಯಂತ ಮಹತ್ವಪೂರ್ಣ ಪಾತ್ರದ ನಿರ್ವಹಣೆ ಮಾಡುತ್ತಿದ್ದರು. ಇಂದು ನಾವು ಭಾರತದ ಯಾವ ಸಂವಿಧಾನದ ಬಗ್ಗೆ ಹೆಮ್ಮೆ ಪಡುತ್ತೇವೋ ಅದರ ನಿರ್ಮಾಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುಶಲ ನೇತೃತ್ವದ ಅವಿಸ್ಮರಣೀಯ ಹೆಗ್ಗುರುತನ್ನು ಕಾಣಬಹುದು. ಅವರು ಸಮಾಜದ ಎಲ್ಲ ವರ್ಗದ ಕಲ್ಯಾಣವಾಗಬೇಕು ಎಂಬುದನ್ನು ಧೃಡಪಡಿಸಿದರು. ಡಿಸೆಂಬರ್ 6ರಂದು ಅವರ ಮಹಾಪರಿನಿರ್ವಾಣದ ದಿನ ಎಂದಿನಂತೆ ನಾವು ಅವರನ್ನು ಸ್ಮರಿಸುತ್ತೇವೆ. ದೇಶವನ್ನು ಸಮೃದ್ಧವಾಗಿಸುವಲ್ಲಿ ಮತ್ತು ಶಕ್ತಿಶಾಲಿಯಾಗಿಸುವಲ್ಲಿ ಬಾಬಾ ಸಾಹೇಬ್ ಅವರ ಪಾಲುದಾರಿಕೆ ಅವಿಸ್ಮರಣೀಯವಾಗಿದೆ. 
 
ಡಿಸೆಂಬರ್ ಹದಿನೈದು ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ ಪುಣ್ಯತಿಥಿ. ರೈತ ಪುತ್ರನಿಂದ ದೇಶದ ಲೋಹ ಪುರುಷನಾಗಿ ಪರಿವರ್ತಿತರಾದ ಸರ್ದಾರ್ ಪಟೇಲ್ ಅವರು ದೇಶವನ್ನು ಒಂದೇ ಸೂತ್ರದಲ್ಲಿ ಪೋಣಿಸಿಡುವ ಅಸಾಧಾರಣ ಕೆಲಸ ಮಾಡಿದ್ದರು.  ಸರ್ದಾರ್ ಪಟೇಲ್ ಅವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದರು. ಅವರು ಮೂಲಭೂತ ಹಕ್ಕುಗಳು,  ಅಲ್ಪಸಂಖ್ಯಾತರು ಮತ್ತು ಮೂಲ ನಿವಾಸಿಗಳಿಗಾಗಿ ರೂಪಿಸಲಾದ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದರು. 
 
ನವೆಂಬರ್ 26 ನಮ್ಮ ಸಂವಿಧಾನ ದಿನವಾಗಿದೆ. ಆದರೆ 9 ವರ್ಷಗಳ ಹಿಂದೆ ನವೆಂಬರ್ 26ರಂದು ಉಗ್ರರು ಮುಂಬೈ ಮೇಲೆ ದಾಳಿ ಮಾಡಿದ್ದರು ಎಂಬುದನ್ನು ಯಾರು ತಾನೇ ಮರೆಯಲು ಸಾಧ್ಯ? ಈ ಘಟನೆಯಲ್ಲಿ ಪ್ರಾಣ ತೆತ್ತ ಎಲ್ಲ ಧೈರ್ಯವಂತ ನಾಗರಿಕರು, ಪೋಲಿಸರು, ಸುರಕ್ಷತಾ ಸಿಬ್ಬಂದಿ ಎಲ್ಲರನ್ನೂ ದೇಶ ಸ್ಮರಿಸುತ್ತದೆ ಮತ್ತು ಅವರಿಗೆ ವಂದಿಸುತ್ತದೆ. ದೇಶ ಎಂದಿಗೂ ಅವರ ಬಲಿದಾನವನ್ನು ಮರೆಯಲಾರದು. ಭಯೋತ್ಪಾದನೆ ಎಂಬುದು ಇಂದು ವಿಶ್ವದ ಭೂ ಭಾಗದ ಎಲ್ಲೆಡೆ ಪ್ರತಿದಿನ ಘಟಿಸುವ ಒಂದು ಅತಿ ಭಯಂಕರ ರೂಪವಾಗಿದೆ. ಭಾರತದಲ್ಲಿ ಕಳೆದ 40 ವರ್ಷಗಳಿಂದ  ಭಯೋತ್ಪಾದನೆಯಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ. ಸಾವಿರಾರು ಸಾಮಾನ್ಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಕೆಲ ವರ್ಷಗಳ ಹಿಂದೆ ಭಾರತ ಭಯೋತ್ಪಾದನೆ ಬಗ್ಗೆ ಚರ್ಚೆ ಮಾಡಿದಾಗ, ಆತಂಕವಾದದ ಭಯಂಕರ ಸಂಕಟದ ಬಗ್ಗೆ ಚರ್ಚಿಸಿದಾಗ ವಿಶ್ವದ ಬಹಳಷ್ಟು ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಆದರೆ ಇಂದು ಭಯೋತ್ಪಾದನೆ ಅವರ ಮನೆ ಬಾಗಿಲು ತಟ್ಟುತ್ತಿರುವಾಗ ಎಲ್ಲ ದೇಶಗಳ ಸರ್ಕಾರಗಳು, ಮಾನವತಾವಾದದಲ್ಲಿ ವಿಶ್ವಾಸ ತೋರುವ ಮತ್ತು ಪ್ರಜಾಸತ್ತಾತ್ಮಕತೆಯಲ್ಲಿ ವಿಶ್ವಾಸವಿರುವ ಎಲ್ಲ ಸರ್ಕಾರಗಳು  ಭಯೋತ್ಪಾದನೆಯನ್ನು ಬಹುದೊಡ್ಡ ಸವಾಲೆಂದು ಪರಿಗಣಿಸಿವೆ. ಭಯೋತ್ಪಾದನೆ ವಿಶ್ವದ ಮಾನವೀಯತೆಗೆ ಸವಾಲೊಡ್ಡಿದೆ. ಮಾನವತಾವಾದಕ್ಕೆ ಸವಾಲೊಡ್ಡಿದೆ. ಅದು ಮಾನವೀಯ ಶಕ್ತಿಯನ್ನೇ ನಾಶ ಮಾಡುವ ಪಣ ತೊಟ್ಟಿದೆ. ಹಾಗಾಗಿ ಭಾರತವಷ್ಟೇ ಅಲ್ಲ ವಿಶ್ವದ ಸಂಪೂರ್ಣ ಮಾನವತಾವಾದಿ ಶಕ್ತಿಯನ್ನು ಒಗ್ಗೂಡಿಸಿ ಭಯೋತ್ಪಾದನೆಯನ್ನು ಪರಾಭವಗೊಳಿಸಲೇಬೇಕಿದೆ.  ಭಗವಾನ್ ಬುದ್ಧ, ಭಗವಾನ್ ಮಹಾವೀರ, ಗುರುನಾನಕ್, ಮಹಾತ್ಮಾ ಗಾಂಧಿ ಇವರೆಲ್ಲರೂ ವಿಶ್ವಕ್ಕೆ ಅಹಿಂಸೆಯನ್ನು ಬೋಧಿಸಿದ ನೆಲ ನಮ್ಮದಲ್ಲವೇ. ಭಯೋತ್ಪಾದನೆ ಮತ್ತು ಉಗ್ರವಾದ ನಮ್ಮ ಸಾಮಾಜಿಕ ರಚನೆಯನ್ನು ದುರ್ಬಲಗೊಳಿಸಿ ಛಿದ್ರ ವಿಛಿದ್ರಗೊಳಿಸುವ ದುಷ್ಟ ಪ್ರಯತ್ನ ಮಾಡುತ್ತಿದೆ. ಆದ್ದರಿಂದಲೇ ಮಾನವತಾವಾದಿ ಶಕ್ತಿಗಳು ಇನ್ನಷ್ಟು ಜಾಗೃತಗೊಳ್ಳಬೇಕಾದುದು ಸಮಯದ ಬೇಡಿಕೆಯಾಗಿದೆ. 
 
ನನ್ನ ಪ್ರಿಯ ದೇಶವಾಸಿಗಳೇ, ಡಿಸೆಂಬರ್ 4ರಂದು ನಾವೆಲ್ಲಾ ನೌಕಾದಳ ದಿನವನ್ನು ಆಚರಿಸೋಣ. ಭಾರತೀಯ ನೌಕಾ ದಳ ನಮ್ಮ ಸಮುದ್ರ ತೀರಗಳನ್ನು ರಕ್ಷಿಸಿ ಸುರಕ್ಷತೆ ಒದಗಿಸುತ್ತದೆ. ನೌಕಾಬಲದ ಎಲ್ಲರಿಗೂ ನನ್ನ ಅಭಿನಂದನೆಗಳು.  ನಮ್ಮ ನಾಗರಿಕತೆಯ ವಿಕಾಸವಾದದ್ದು ನದಿ ತೀರಗಳಲ್ಲಿ ಎಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಅದು ಸಿಂಧು ಆಗಿರಲಿ, ಗಂಗೆ ಆಗಿರಲಿ, ಯಮುನಾ ಆಗಿರಲಿ, ಸರಸ್ವತಿ ನದಿ ಆಗಿರಲಿ, ನಮ್ಮ ನದಿಗಳು ಮತ್ತು ಸಮುದ್ರಗಳು ಆರ್ಥಿಕ, ಮತ್ತು ಸಮರ ತಂತ್ರಗಾರಿಕೆ ಎರಡೂ ಉದ್ದೇಶಗಳಿಗೂ ಮಹತ್ವಪೂರ್ಣವಾಗಿವೆ. ಇವು ಸಂಪೂರ್ಣ ವಿಶ್ವಕ್ಕೆ ನಮ್ಮ ಹೆಬ್ಬಾಗಿಲು ಇದ್ದಂತೆ. ಮಹಾಸಾಗರಗಳೊಂದಿಗೆ ಈ ದೇಶದ, ನಮ್ಮ ಈ ನೆಲದ ಅವಿನಾಭಾವ ಸಂಬಂಧವಿದೆ. ನಾವು ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ 800-900 ವರ್ಷಗಳ ಹಿಂದೆ ಚೋಳ ವಂಶಸ್ಥರ ಸಮಯದಲ್ಲಿ ಚೋಳ ನೌಕಾದಳವನ್ನು ಅತ್ಯಂತ ಶಕ್ತಿಶಾಲಿ  ನೌಕಾದಳಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿತ್ತು. ಚೋಳ ಸಾಮ್ರಾಜ್ಯದ ವಿಸ್ತಾರದಲ್ಲಿ, ಅದನ್ನು ಅಂದಿನ ಆರ್ಥಿಕ ಮಹಾಶಕ್ತಿಯಾಗಿ ಮಾರ್ಪಡಿಸುವುದರಲ್ಲಿ  ಅವರ ನೌಕಾದಳ ಅತ್ಯಂತ ಪ್ರಮುಖ ಪಾತ್ರ ವಹಿಸಿತ್ತು. ಚೋಳ ನೌಕಾದಳ ಪ್ರಚಾರ, ಶೋಧ ಯಾತ್ರೆಗಳ ಸಾಕಷ್ಟು ಉದಾಹರಣೆಗಳು ಸಂಗಮ್-ಸಾಹಿತ್ಯದಲ್ಲಿ ಲಭ್ಯವಿದೆ. ವಿಶ್ವದಲ್ಲಿ ಹೆಚ್ಚಿನ ನೌಕಾದಳಗಳು ಇತ್ತೀಚೆಗೆ ಯುದ್ಧ ನೌಕೆಗಳಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿವೆ  ಆದರೆ 800-900 ವರ್ಷಗಳ ಹಿಂದೆಯೇ ಬಹು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಚೋಳ ನೌಕಾದಳದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಮಹಿಳೆಯರು ಯುದ್ಧದಲ್ಲೂ ಪಾಲ್ಗೊಳ್ಳುತ್ತಿದ್ದರು ಎಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಚೋಳ ಆಡಳಿತಗಾರರಲ್ಲಿ ನೌಕಾ ನಿರ್ಮಾಣದ ಕುರಿತು ಅಪಾರ ಜ್ಞಾನವಿತ್ತು. ನಾವು ನೌಕಾಬಲದ ಬಗ್ಗೆ ಮಾತಾಡುತ್ತಿರುವಾಗ ಛತ್ರಪತಿ ಶಿವಾಜಿ ಮಾಹಾರಾಜರು ಮತ್ತು ಅವರ ನೌಕಾಬಲದ ಸಾಮರ್ಥ್ಯವನ್ನು ಮರೆಯಲಾಗದು. ಸಮುದ್ರದ ತಟದಲ್ಲಿರುವ ಹಾಗೂ ಮಹತ್ವಪೂರ್ಣ ಪಾತ್ರ ಹೊಂದಿದ ಕೊಂಕಣ ಭಾಗ   ಶಿವಾಜಿ ಮಾಹಾರಾಜರ ರಾಜ್ಯದಲ್ಲಿತ್ತು. ಸಿಂಧು ದುರ್ಗ, ಮುರುಡ್ ಜಂಜೀರಾ, ಸ್ವರ್ಣ ದುರ್ಗಾದಂತಹ ಶಿವಾಜಿ ಮಹಾರಾಜರ ಆಳ್ವಿಕೆಗೆ ಒಳಪಟ್ಟ ಎಷ್ಟೋ ಕೋಟೆಗಳು ಒಂದೋ ಸಮುದ್ರ ತೀರದಲ್ಲಿದ್ದವು ಇಲ್ಲವೆ ಸಮುದ್ರದಿಂದಾವೃತವಾಗಿದ್ದವು.  ಈ ಕೋಟೆಗಳ ರಕ್ಷಣಾ ಕಾರ್ಯವನ್ನು ಮರಾಠಾ ನೌಕಾದಳ ಮಾಡುತ್ತಿತ್ತು. ಮರಾಠಾ ನೌಕಾದಳದಲ್ಲಿ ದೊಡ್ಡ ಹಡಗುಗಳ ಜೊತೆ ಪುಟ್ಟ ಹಡಗುಗಳ ಸಮನ್ವಯತೆ ಇತ್ತು. ಅವರ ನೌಕಾ ಸಿಬ್ಬಂದಿ ವೈರಿಗಳ ಮೇಲೆ ಪ್ರಹಾರ ಮಾಡಲು ಮತ್ತು ಅವರಿಂದ ತಪ್ಪಿಸಿಕೊಳ್ಳುವಲ್ಲಿ ಬಹಳ ಕೌಶಲ್ಯ ಸಾಧಿಸಿತ್ತು.  ನಾವು ಮರಾಠಾ ನೌಕಾದಳದ ಬಗ್ಗೆ ಮಾತಾಡುತ್ತಿರುವಾಗ ಕಾನ್ಹೋಜಿ ಆಂಗ್ರೆ ಅವರನ್ನು ನೆನಪಿಸಿಕೊಳ್ಳದಿರಲು ಸಾಧ್ಯವೇ? ಅವರು ಮರಾಠಾ ನೌಕಾಪಡೆಯನ್ನು ಒಂದು ಹೊಸ ಉತ್ತುಂಗಕ್ಕೆ ಕೊಂಡೊಯ್ದರು. ಅಲ್ಲದೇ ಹಲವಾರು ಸ್ಥಳಗಳಲ್ಲಿ ಮರಾಠಾ ನೌಕಾ ಸೈನಿಕ ಸಮುಚ್ಚಯಗಳನ್ನು ನಿರ್ಮಿಸಿದರು. ಸ್ವಾತಂತ್ರ್ಯ ನಂತರ ಗೋವಾ ಮುಕ್ತಿ ಸಂಗ್ರಾಮವಾಗಲೀ ಅಥವಾ 1971ರ  ಭಾರತ – ಪಾಕ್ ಯುದ್ಧವಾಗಲೀ.. ಹೀಗೆ ಹಲವು ಸಂದರ್ಭಗಳಲ್ಲಿ ನಮ್ಮ ನೌಕಾದಳ ತನ್ನ ಪರಾಕ್ರಮವನ್ನು ಮೆರೆದಿದೆ. ನಾವು ನೌಕಾದಳದ ಬಗ್ಗೆ ಮಾತನಾಡುತ್ತಿರುವಾಗ  ನಮಗೆ ಕೇವಲ ಯುದ್ಧವೇ ಕಣ್ಣ ಮುಂದೆ ತೇಲುತ್ತದೆ. ಆದರೆ ಭಾರತೀಯ ನೌಕಾದಳ ಮಾನವೀಯ ಕಾರ್ಯಗಳಲ್ಲೂ ಅಷ್ಟೇ ಉತ್ಸಾಹದಿಂದ ಮುಂದೆ ಬಂದಿದೆ. ಈ ವರ್ಷ ಜೂನ್ ತಿಂಗಳಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಲ್ಲಿ  ಮೋರಾ ಎಂಬ ಚಂಡಮಾರುತ ಸಂಕಷ್ಟ ತಂದೊಡ್ಡಿತ್ತು. ಆಗ ನಮ್ಮ ನೌಕಾದಳದ ಹಡಗು ಐ ಎನ್ ಎಸ್ ಸುಮಿತ್ರಾ ತಕ್ಷಣವೇ ರಕ್ಷಣೆಗೋಸ್ಕರ ಸಹಾಯ ಹಸ್ತ ಚಾಚಿತ್ತು ಮತ್ತು ಎಷ್ಟೋ ಮೀನುಗಾರರನ್ನು ರಕ್ಷಿಸಿ ಬಾಂಗ್ಲಾದೇಶಕ್ಕೆ ತಲುಪಿಸಿತ್ತು. ಈ ವರ್ಷದ ಮೇ – ಜೂನ್ ನಲ್ಲಿ ಶ್ರೀಲಂಕಾದಲ್ಲಿ ಪ್ರವಾಹದ ಭೀತಿ ಎದುರಾದಾಗ  ನಮ್ಮ ನೌಕಾಪಡೆಯ ಮೂರ್ ಹಡಗುಗಳು ತಕ್ಷಣವೇ ಅಲ್ಲಿಗೆ ತಲುಪಿ ಅಲ್ಲಿಯ ಸರ್ಕಾರ ಮತ್ತು ಜನತೆಗೆ ಸಹಾಯ ಒದಗಿಸಿತು. ಬಾಂಗ್ಲಾದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಾದ ರೋಹಿಂಗ್ಯಾ ಪ್ರಕರಣದಲ್ಲಿ ನಮ್ಮ ನೌಕಾದಳದ ಹಡಗು ಐ ಎನ್ ಎಸ್ ಘಡಿಯಾಲ್ ಸೂಕ್ತ ಸಹಾಯ ಕಲ್ಪಿಸಿತ್ತು. ಜೂನ್ನಲ್ಲಿ ಪಪುವಾ ನ್ಯೂ ಗಿನಿ ಸರ್ಕಾರ ನಮಗೆ ಎಸ್ ಓ ಎಸ್ ಸಂದೇಶ ನೀಡಿತು ಮತ್ತು ಅವರ ಫಿಶಿಂಗ್ ಬೋಟ್ ಮೀನುಗಾರರನ್ನು ರಕ್ಷಿಸಲು ನಮ್ಮ ನೌಕಾದಳ ಸಹಾಯ ಮಾಡಿತು. ನವೆಂಬರ್ 21ರಂದು ಪಶ್ಚಿಮ ಕೊಲ್ಲಿಯಲ್ಲಿ ಒಂದು ವ್ಯಾಪಾರಿ ಹಡಗಿನ ಹಡಗುಗಳ್ಳತನ  ಘಟನೆಯಲ್ಲೂ ನಮ್ಮ ನೌಕಾದಳದ ಹಡಗು ಐ ಎನ್ ಎಸ್ ತ್ರಿಕಂಡ್ ಸಹಾಯಕ್ಕಾಗಿ ಅಲ್ಲಿಗೆ ತಲುಪಿತ್ತು. ಫಿಜಿವರೆಗೂ ಆರೋಗ್ಯ ಸೇವೆ ತಲುಪಿಸುವುದಾಗಿರಲಿ, ತಾತ್ಕಾಲಿಕ ಪರಿಹಾರ ಒದಗಿಸುವುದಾಗಿರಲಿ, ನೆರೆ ರಾಷ್ಟ್ರಗಳಿಗೆ ಸಂಕಟದ ಸಮಯದಲ್ಲಿ ಮಾನವೀಯ ಸಹಾಯ ಕಲ್ಪಿಸುವುದಾಗಲೀ ನಮ್ಮ ನೌಕಾದಳ ಗೌರವಪೂರ್ಣ ಕೆಲಸ ಮಾಡುತ್ತಲೇ ಬಂದಿದೆ. ಭಾರತೀಯರಾದ ನಾವು ನಮ್ಮ ಭದ್ರತಾ ಪಡೆಯ ಕುರಿತು ಗೌರವಾದರ ಭಾವವನ್ನು ಹೊಂದಿದ್ದೇವೆ. ಅದು ಸೇನೆ ಆಗಿರಲಿ, ನೌಕಾದಳವಾಗಿರಲಿ, ಇಲ್ಲವೆ ವಾಯುಪಡೆಯಾಗಿರಲಿ ನಮ್ಮ ಸೈನಿಕರ ಸಾಹಸ, ಶೌರ್ಯ, ಪರಾಕ್ರಮ ಬಲಿದಾನಕ್ಕೆ ಪ್ರತಿಯೊಬ್ಬ ದೇಶವಾಸಿಯೂ ವಂದಿಸುತ್ತಾನೆ. 125 ಕೋಟಿ ದೇಶವಾಸಿಗಳು ಸುಖದಿಂದ ನೆಮ್ಮದಿಯಿಂದ ಬಾಳಲೆಂದು ಅವರು ತಮ್ಮ ಯೌವ್ವನವನ್ನೇ ದೇಶಕ್ಕಾಗಿ ಸಮರ್ಪಿಸುತ್ತಾರೆ. ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಡುತ್ತಾರೆ. ಪ್ರತಿ ವರ್ಷ ಡಿಸೆಂಬರ್ 7ರಂದು ಸಶಸ್ತ್ರ ಪಡೆಗಳ ಧ್ವಜ ದಿನ  ಆಚರಿಸುತ್ತದೆ. ಇದು ದೇಶದ ಸಶಸ್ತ್ರ ಪಡೆಗಳ ಕುರಿತು ಹೆಮ್ಮೆಪಡುವ ಮತ್ತು ಗೌರವವ್ಯಕ್ತಪಡಿಸುವ ದಿನವಾಗಿದೆ. ಈ ಕುರಿತು ರಕ್ಷಣಾ ಖಾತೆ ಡಿಸೆಂಬರ್ 1ರಿಂದ 7ರ ವರೆಗೆ ಅಭಿಯಾನವನ್ನು ಆರಂಭಿಸುವ ನಿರ್ಣಯ ಕೈಗೊಂಡಿರುವುದು ನನಗೆ ಸಂತಸ ತಂದಿದೆ. ದೇಶದ ನಾಗರಿಕರ ಬಳಿ ಹೋಗಿ ಸಶಸ್ತ್ರ ಪಡೆಗಳ ಬಗ್ಗೆ ಮಾಹಿತಿ ನೀಡುವುದು, ಜನರನ್ನು ಜಾಗೃತಗೊಳಿಸುವುದು ಇದರ ಉದ್ದೇಶ. ಸಂಪೂರ್ಣ ವಾರದಾದ್ಯಂತ ಮಕ್ಕಳು ಹಿರಿಯರು ಎಲ್ಲರೂ ಧ್ವಜ ಧರಿಸಿ. ದೇಶದಲ್ಲಿ ಸೇನೆ ಕುರಿತು ಒಂದು ಅಭಿಮಾನದ ಆಂದೋಲನವೇ ಜರುಗಲಿ. ಈ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಧ್ವಜಗಳನ್ನು ಹಂಚಬಹುದಾಗಿದೆ. ನಮ್ಮ ಸುತ್ತ ಮುತ್ತ, ನೆರೆ ಹೊರೆ, ಸ್ನೇಹಿತರು ಹೀಗೆ ಸಶಸ್ತ್ರ ಪಡೆಗಳೊಂದಿಗೆ ಕೆಲಸ ಮಾಡುವವರನ್ನು, ಅವರ ಅನುಭವಗಳನ್ನು, ಅವರ ಶೌರ್ಯದ ಕೆಲಸಗಳನ್ನು, ಅದಕ್ಕೆ ಸಂಬಂಧಪಟ್ಟ ವಿಡಿಯೋಗಳು ಮತ್ತು ಚಿತ್ರಗಳನ್ನು #armedforcesflagday ಅಡಿ ಪೋಸ್ಟ್ ಮಾಡಬಹುದು. ಶಾಲೆ ಕಾಲೇಜುಗಳಿಗೆ ಸೇನೆಯವರನ್ನು ಕರೆಸಿ ಅವರಿಂದ ಸೇನೆ ಬಗ್ಗೆ ಮಾಹಿತಿ ಪಡೆಯಬಹುದು. ನಮ್ಮ ಹೊಸ ಪೀಳಿಗೆಗೆ ಸೇನೆ ಕುರಿತು ಮಾಹಿತಿ ಪಡೆಯುವ ಒಂದು ಉತ್ತಮ ಅವಕಾಶ ಇದಾಗಬಹುದು.   ಇದು ನಮ್ಮ ಸೇನಾದಳದ ಎಲ್ಲ ಸೈನಿಕರ ಕಲ್ಯಾಣಕ್ಕಾಗಿ ಧನ ಸಂಗ್ರಹ ಮಾಡುವುದಕ್ಕಾಗಿರುತ್ತದೆ. ಈ ಹಣವನ್ನು ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಕುಟುಂಬಗಳಿಗೆ ಹಾಗೂ ಗಾಯಾಳು ಸೈನಿಕರ ಕಲ್ಯಾಣಕ್ಕಾಗಿ ಅವರ ಜೀವನ ಪುನರ್ನಿರ್ಮಾಣಕ್ಕಾಗಿ ಸೈನಿಕ ಕಲ್ಯಾಣ ಮಂಡಳಿಯ ಮೂಲಕ ಬಳಸಲಾಗುವುದು. ಆರ್ಥಿಕ ಸಹಾಯ ಮಾಡಲು ವಿಭಿನ್ನ ರೀತಿಯ ಪಾವತಿಗಳ ಬಗ್ಗೆ ksb.gov.inನಲ್ಲಿ ಮಾಹಿತಿ ಪಡೆಯಬಹುದು. ಇದಕ್ಕಾಗಿ ತಾವು ನಗದುರಹಿತ ಹಣ ಪಾವತಿ ಕೂಡಾ ಮಾಡಬಹುದು.  ಬನ್ನಿ ಈ ಸಂದರ್ಭದಲ್ಲಿ ನಮ್ಮ ಸಶಸ್ತ್ರ ಪಡೆಯ ಮನೋಬಲ ಹೆಚ್ಚುವಂತೆ ನಾವೂ ಏನನ್ನಾದರೂ ಮಾಡೋಣ. ನಾವೂ ಅವರ ಕಲ್ಯಾಣಕ್ಕಾಗಿ ಕೈ ಜೋಡಿಸೋಣ. 
 
ನನ್ನ ಪ್ರೀತಿಯ ದೇಶವಾಸಿಗಳೇ, ಡಿಸೆಂಬರ್ 5 ರಂದು ‘ವಿಶ್ವ ಮಣ್ಣು ದಿನ’ ಆಚರಿಸಲಾಗುತ್ತಿದೆ. ನಾನು ನಮ್ಮ ರೈತ ಸೋದರ ಸೋದರಿಯರೊಂದಿಗೆ ಕೂಡ ಸ್ವಲ್ಪ ಮಾತನಾಡಲು ಇಚ್ಚಿಸುತ್ತೇನೆ. ಮಣ್ಣು ಭೂಮಿಯ ಒಂದು ಮಹತ್ವಪೂರ್ಣವಾದ ಭಾಗ. ನಾವು ಏನನ್ನು ತಿನ್ನುತ್ತೆವೆಯೋ ಅದು ಈ ಮಣ್ಣಿನೊಂದಿಗೆ ಬೆಸೆದುಕೊಂಡಿದೆ. ಒಂದು ರೀತಿಯಲ್ಲಿ ಸಂಪೂರ್ಣ ಆಹಾರ ಸರಪಳಿ ಮಣ್ಣಿನೊಂದಿಗೆ ಬೆಸೆದುಕೊಂಡಿದೆ. ಸ್ವಲ್ಪ ಊಹಿಸಿ, ಒಂದುವೇಳೆ ಈ ವಿಶ್ವದಲ್ಲಿ ಎಲ್ಲಿಯೂ ಫಲವತ್ತಾದ ಮಣ್ಣು ಇಲ್ಲದಿದ್ದರೆ ಏನಾಗಬಹುದು? ಇದನ್ನು ಯೋಚಿಸಿದರೂ ಸಹ ಭಯವಾಗುತ್ತದೆ. ಮಣ್ಣು ಇಲ್ಲ, ಮರಗಿಡಗಳಿಲ್ಲ, ಮಾನವ ಜೀವನ ಎಲ್ಲಿ ಸಾಧ್ಯ? ಜೀವ ಜಂತುಗಳ ಇರುವಿಕೆ ಎಲ್ಲಿ ಸಾಧ್ಯ? ನಮ್ಮ ಸಂಸ್ಕೃತಿಯಲ್ಲಿ ಇದರ ಬಗ್ಗೆ ತುಂಬಾ ಹಿಂದೆಯೇ ಚಿಂತನೆ ಮಾಡಲಾಗಿತ್ತು ಮತ್ತು ಇದೇ ಕಾರಣದಿಂದ ನಾವು ಮಣ್ಣಿನ ಮಹತ್ವದ ಬಗ್ಗೆ ಪ್ರಾಚೀನ ಕಾಲದಿಂದಲೂ ಜಾಗರೂಕರಾಗಿದ್ದೇವೆ. ನಮ್ಮ ಸಂಸ್ಕೃತಿಯಲ್ಲಿ ಒಂದು ಕಡೆ ಭೂಮಿಯ ಬಗ್ಗೆ, ಮಣ್ಣಿನ ಬಗ್ಗೆ ಭಕ್ತಿ ಮತ್ತು ಗೌರವ ಭಾವನೆ ಜನರಲ್ಲಿ ಇರಲಿ ಎನ್ನುವ ಸಹಜ ಪ್ರಯತ್ನ ಇದ್ದರೆ ಮತ್ತೊಂದು ಕಡೆ ವೈಜ್ಞಾನಿಕ ವಿಧಾನಗಳು ಜೀವನದ ಭಾಗವಾಗಿ ಈ ಮಣ್ಣಿನ ಪೋಷಣೆ ಸತತವಾಗಿ ಆಗುತ್ತಿದೆ. ಈ ದೇಶದ ರೈತರ ಜೀವನದಲ್ಲಿ ಎರಡೂ ವಿಷಯಗಳಿಗೂ ಮಹತ್ವ ಇದೆ –ಯಾವುದೆಂದರೆ, ನಮ್ಮ ಮಣ್ಣಿನ ಬಗ್ಗೆ ಭಕ್ತಿ ಮತ್ತು ಜೊತೆ ಜೊತೆಗೆ ವೈಜ್ಞಾನಿಕ ರೂಪದಲ್ಲಿ ಮಣ್ಣನ್ನು ಉಳಿಸಿ ಕಾಪಾಡಿಕೊಳ್ಳುವುದು. ನಮ್ಮ ದೇಶದ ರೈತರು ಪರಂಪರೆಯ ಜೊತೆಗೆ ಬೆಸೆದುಕೊಂಡಿದ್ದಾರೆ ಮತ್ತು ಅಧುನಿಕ ವಿಜ್ಞಾನದ ಬಗ್ಗೆಯೂ ಆಸಕ್ತಿ ಇಟ್ಟುಕೊಂಡಿದ್ದಾರೆ, ಪ್ರಯತ್ನ ಪಡುತ್ತಾರೆ, ಸಂಕಲ್ಪ ಮಾಡುತ್ತಾರೆ ಎನ್ನುವುದು ನಮಗೆಲ್ಲರಿಗೂ ಹೆಮ್ಮೆ ತರುವ ವಿಚಾರ. ಹಿಮಾಚಲ ಪ್ರದೇಶದ ಹಮೀರ್ ಪುರ್ ಜಿಲ್ಲೆಯ ಟೋಹೂ ಹಳ್ಳಿ, ಭೋರಂಜ್ ಬ್ಲಾಕ್ ಮತ್ತು ಅಲ್ಲಿಯ ರೈತರ ಬಗ್ಗೆ ಕೇಳಿದ್ದೇನೆ. ಇಲ್ಲಿ ರೈತರು ಮೊದಲು ಲೆಕ್ಕಾಚಾರವಿಲ್ಲದೆ ರಾಸಾಯನಿಕ ಗೊಬ್ಬರಗಳ ಉಪಯೋಗ ಮಾಡುತ್ತಿದ್ದರು. ಇದೇ  ಕಾರಣಕ್ಕೆ ಆ ಮಣ್ಣಿನ ಆರೋಗ್ಯ ಹಾಳಾಗುತ್ತಾ ಬಂತು. ಇಳುವರಿ ಕಡಿಮೆಯಾಗುತ್ತಾ ಬಂತು.  ಇಳುವರಿ ಕಡಿಮೆಯಾಗಿದ್ದರಿಂದ ವರಮಾನ ಸಹ ಕಡಿಮೆಯಾಯಿತು ಮತ್ತು ಮಣ್ಣಿನ ಉತ್ಪಾದಕತೆ ಕ್ರಮೇಣ ಕಡಿಮೆಯಾಯಿತು. ಹಳ್ಳಿಯ ಕೆಲವು ಜಾಗರೂಕ ರೈತರು ಈ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡರು. ತದನಂತರ ಹಳ್ಳಿಯ ರೈತರು ಸರಿಯಾದ ಸಮಯದಲ್ಲಿ ತಮ್ಮ ಮಣ್ಣನ್ನು ಪರೀಕ್ಷೆ ಮಾಡಿಸಿದಾಗ ಎಷ್ಟು ಗೊಬ್ಬರ, ರಸಗೊಬ್ಬರ, ಸೂಕ್ಷ್ಮ ಪೋಷಕಾಂಶಗಳು ಮತ್ತು ಸಾವಯುವ ಗೊಬ್ಬರದ ಬಳಕೆ ಮಾಡಲು ಅವರಿಗೆ ಹೇಳಿದರೋ ಅವರು ಆ ಸಲಹೆಯನ್ನು ಪರಿಗಣಿಸಿದರು. ಮಣ್ಣಿನ ಆರೋಗ್ಯದ ಬಗ್ಗೆ ರೈತರಿಗೆ ಸಿಕ್ಕ ಮಾಹಿತಿ, ಮಾರ್ಗದರ್ಶನ ಮತ್ತು ಅದನ್ನು ಜಾರಿಗೊಳಿಸಿದ ಪರಿಣಾಮ ಏನು ಎಂಬುದನ್ನು ಕೇಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. 2016 – 17ನೇ ಸಾಲಿನಲ್ಲಿ ಗೋಧಿಯ ಉತ್ಪಾದನೆ ಪ್ರತಿ ಎಕರೆಗೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಯಿತು ಮತ್ತು ವರಮಾನದಲ್ಲಿ ಕೂಡ 4೦೦೦ದಿಂದ 6೦೦೦ ರೂಪಾಯಿಗಳ ತನಕ ವೃಧ್ಧಿಯಾಯಿತು. ಇದರ ಜೊತೆ ಜೊತೆಗೆ ಮಣ್ಣಿನ ಗುಣಮಟ್ಟದಲ್ಲಿ ಕೂಡ ಸುಧಾರಣೆಯಾಯಿತು. ರಸಗೊಬ್ಬರಗಳ ಉಪಯೋಗ ಕಡಿಮೆಯಾದ ಕಾರಣ ಹಣದ ಉಳಿತಾಯ ಕೂಡ ಆಯಿತು. ನನ್ನ ರೈತ ಸೋದರರು ಮಣ್ಣು ಆರೋಗ್ಯ ಕಾರ್ಡ್ ನಲ್ಲಿ ಕೊಡಲಾಗಿರುವ ಸಲಹೆಗಳನ್ನು ಕಾರ್ಯಗತಗೊಳಿಸಲು ಮುಂದೆ ಬಂದಿರುವುದನ್ನು ನೋಡಿ  ನನಗೆ ತುಂಬಾ ಖುಷಿಯಾಗುತ್ತದೆ. ಫಲಿತಾಂಶಗಳು ಸಿಗುತ್ತಿದ್ದಂತೆ ಅವರ ಉತ್ಸಾಹ ಸಹ ಹೆಚ್ಚಾಗುತ್ತಾ ಹೋಗುತ್ತಿದೆ. ಈಗ ರೈತರಿಗೆ, ‘ನಾವು ಫಸಲಿನ ಬಗ್ಗೆ ಚಿಂತಿಸಬೇಕೆಂದರೆ ಮೊದಲು ಭೂಮಿತಾಯಿಯ ಆರೈಕೆ ಮಾಡಬೇಕು ಮತ್ತು ನಾವು ಭೂಮಿತಾಯಿಯ ಆರೈಕೆ ಮಾಡಿದರೆ ಭೂಮಿತಾಯಿಯು ನಮ್ಮೆಲ್ಲರ ಆರೈಕೆ ಮಾಡುತ್ತಾಳೆ’ ಎಂಬುದು ಅರ್ಥವಾಗಿದೆ. ತಮ್ಮ ಮಣ್ಣನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಅದರ ಪ್ರಕಾರ ಫಸಲನ್ನು ಬೆಳೆಯುವ ಸಲುವಾಗಿ ದೇಶದೆಲ್ಲೆಡೆ ನಮ್ಮ 10 ಕೋಟಿಗೂ ಅಧಿಕ ರೈತರು ಮಣ್ಣು ಆರೋಗ್ಯ ಕಾರ್ಡ್ ಮಾಡಿಸಿಕೊಂಡಿದ್ದಾರೆ. ನಾವು ನಮ್ಮ ಭೂಮಿತಾಯಿಯನ್ನು ಪೂಜಿಸುತ್ತೇವೆ ಆದರೆ ಯೂರಿಯಾ ತರಹದ ರಸಗೊಬ್ಬರಗಳಿಂದ ಭೂಮಿತಾಯಿಯ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತಿದೆ ಎಂದು ಎಂದಾದರೂ ಯೋಚಿಸಿದ್ದೇವೆಯೇ? ಭೂಮಿತಾಯಿಗೆ ಅವಶ್ಯಕತೆಗಿಂತ ಹೆಚ್ಚು ಯೂರಿಯಾ ಉಪಯೋಗಿಸಿದರೆ ಗಂಭೀರವಾದ ಅಪಾಯವಾಗುತ್ತದೆ ಎಂದು ಎಲ್ಲಾ ತರಹದ  ವೈಜ್ಞಾನಿಕ ರೀತಿಯಿಂದ ಸಾಬೀತಾಗಿದೆ. ರೈತರು ಭೂಮಿತಾಯಿಯ  ಮಕ್ಕಳು, ಅವರು ಹೇಗೆ ತಾನೇ ಭೂಮಿತಾಯಿ ಅನಾರೋಗ್ಯದಿಂದ ಇರುವುದನ್ನು ನೋಡಬಲ್ಲರು? ಈ ತಾಯಿ –ಮಗನ ಸಂಬಂಧವನ್ನು ಮತ್ತೊಮ್ಮೆ ಜಾಗೃತಗೊಳಿಸುವುದು ಇಂದಿನ ಸಮಯದ ಬೇಡಿಕೆಯಾಗಿದೆ. 2022, ಸ್ವಾತಂತ್ರ್ಯದ 75ನೇ ವರ್ಷದ ಹೊತ್ತಿಗೆ ಇಂದು ಎಷ್ಟು ಯೂರಿಯಾದ ಉಪಯೋಗ ಮಾಡುತ್ತಿದ್ದಾರೋ ಅದರ ಅರ್ಧದಷ್ಟು ಉಪಯೋಗವನ್ನು ನಿಲ್ಲಿಸುತ್ತೇವೆ ಎಂದು ನಮ್ಮ ಮಣ್ಣಿನ ಮಕ್ಕಳು, ನಮ್ಮ ಭೂಮಿಯ ಸಂತಾನವಾದ ನಮ್ಮ ರೈತರು ಸಂಕಲ್ಪ ಮಾಡಬಹುದೇ? ಒಂದು ಸಾರಿ ನಮ್ಮ ಭೂಮಿತಾಯಿಯ ಮಕ್ಕಳು, ನನ್ನ ರೈತ ಸೋದರರು ಈ ಸಂಕಲ್ಪ ಮಾಡಿದರೆ ಆಗ ನೋಡಿ, ಭೂತಾಯಿಯ ಆರೋಗ್ಯ ಸುಧಾರಣೆಯಾಗುತ್ತದೆ, ಉತ್ಪಾದಕತೆ ಹೆಚ್ಚುತ್ತದೆ. ರೈತರ ಜೀವನದಲ್ಲಿ ಬದಲಾವಣೆ ಬರಲು  ಪ್ರಾರಂಭವಾಗುತ್ತದೆ.
 
ಜಾಗತಿಕ ತಾಪಮಾನ ಹೆಚ್ಚಳ ಮತ್ತು ಹವಾಮಾನ ಬದಲಾವಣೆ ಇಂದು ನಮ್ಮೆಲ್ಲರಿಗೂ ಅನುಭವಕ್ಕೆ ಬಂದಿದೆ. ದೀಪಾವಳಿಯ ಮುಂಚೆ ಚಳಿಗಾಲ ಬರುವ ಒಂದು ಕಾಲವಿತ್ತು.  ಈಗ ಡಿಸೆಂಬರ್ ನಲ್ಲಿ ಚಳಿಯು ನಿಧಾನವಾಗಿ  ಹೆಜ್ಜೆ ಇಡುತ್ತಿದೆ. ಆದರೆ ಚಳಿಯು ಪ್ರಾರಂಭವಾಗುತ್ತಿದ್ದಂತೆ ಕಂಬಳಿಯಿಂದ ಹೊರಗೆ ಬರುವುದು ನಮಗೆ ಇಷ್ಟವಾಗುವುದಿಲ್ಲ ಇದು ನಮ್ಮೆಲ್ಲರ ಅನುಭವ. ಆದರೆ ಇಂತಹ ಹವಾಮಾನದಲ್ಲಿ ಕೂಡ ಸತತವಾಗಿ ಜಾಗರೂಕರಾಗಿ ಇರುವ ಜನರು ಎಂತಹ ಪರಿಣಾಮವನ್ನು ಉಂಟುಮಾಡುತ್ತಿದ್ದಾರೆ ಎನ್ನುವ ಉದಾಹರಣೆ ನಮ್ಮೆಲ್ಲರಿಗೂ ಪ್ರೇರಣೆ ಕೊಡುತ್ತದೆ. ಮಧ್ಯಪ್ರದೇಶದ 8 ವರ್ಷದ ತುಷಾರ್ ಎನ್ನುವ ದಿವ್ಯಾಂಗ ಬಾಲಕ ತನ್ನ ಗ್ರಾಮವನ್ನು ಬಯಲು ಶೌಚ ಮುಕ್ತ ಮಾಡುವುದಕ್ಕಾಗಿ ಮುಂದಾಳತ್ವ ತೆಗೆದುಕೊಂಡ ಎಂದು ಕೇಳಿದರೆ ನಿಮಗೂ ಸಹ ಆಶ್ಚರ್ಯವಾಗಬಹುದು. ಇಂತಹ ದೊಡ್ಡ ಮಟ್ಟದ ಕೆಲಸ ಮತ್ತು ಇಷ್ಟು ಚಿಕ್ಕ ಬಾಲಕ! ಆದರೆ ಉತ್ಸಾಹ ಮತ್ತು ಸಂಕಲ್ಪ ಅದಕ್ಕಿಂತ ಎಷ್ಟೋ ಪಟ್ಟು ದೊಡ್ಡದಿತ್ತು, ಬೃಹದಾಕಾರವಾಗಿತ್ತು ಮತ್ತು ಶಕ್ತಿಯುತವಾಗಿತ್ತು.  8 ವರ್ಷದ ಬಾಲಕ, ಮಾತನಾಡಲು ಬರುವುದಿಲ್ಲ, ಆದರೆ ಅವನು ಶೀಟಿಯನ್ನು ತನ್ನ ಆಯುಧವನ್ನಾಗಿ ಮಾಡಿಕೊಂಡು ಬೆಳಗ್ಗೆ 5 ಘಂಟೆಗೆ ಎದ್ದು ತನ್ನ ಹಳ್ಳಿಯಲ್ಲಿ ಮನೆಮನೆಗೆ ಹೋಗಿ ಜನರನ್ನು ಶೀಟಿ ಹೊಡೆಯುವುದರ ಮೂಲಕ ನಿದ್ದೆಯಿಂದ ಎಬ್ಬಿಸಿ, ಕೈಸನ್ನೆಯಿಂದ ಬಯಲಿನಲ್ಲಿ ಶೌಚ ಮಾಡಬಾರದೆಂದು ತಿಳಿಸಿ ಹೇಳತೊಡಗಿದ. ಪ್ರತಿದಿನ 30–40 ಮನೆಗಳಿಗೆ ಹೋಗಿ ಸ್ವಚ್ಚತೆಯ ಬಗ್ಗೆ ಪಾಠ ಹೇಳುವ ಈ ಬಾಲಕನ ಪ್ರಯತ್ನದಿಂದ ಕುಮ್ಹಾರಿ ಗ್ರಾಮವು ಇಂದು ಬಯಲು ಶೌಚ ಮುಕ್ತವಾಗಿದೆ. ಸ್ವಚ್ಛತೆಗೆ ಕೊಡಬೇಕಾದ ಪ್ರಾಮುಖ್ಯತೆಯ ವಿಷಯದಲ್ಲಿ ಈ ಚಿಕ್ಕ ಬಾಲಕ ತುಷಾರ್ ಒಂದು ಪ್ರೇರಣಾ ಶಕ್ತಿಯಂತೆ ಕೆಲಸ ಮಾಡಿದ್ದಾನೆ. ಇದು, ಸ್ವಚ್ಛತೆಗೆ ಯಾವುದೇ ವಯಸ್ಸಿನ ಹಂಗಿಲ್ಲ, ಮತ್ತು ಯಾವುದೇ ಸೀಮಾರೇಖೆಗಳಿಲ್ಲ ಎಂಬುದನ್ನು ತೋರಿಸುತ್ತದೆ. ಮಕ್ಕಳು ಅಥವಾ ದೊಡ್ಡವರಾಗಲಿ, ಮಹಿಳೆ ಅಥವಾ ಪುರುಷರಾಗಲಿ, ಸ್ವಚ್ಛತೆ ಎನ್ನುವುದು ಎಲ್ಲರಿಗೂ ಅವಶ್ಯಕ ಮತ್ತು ಸ್ವಚ್ಛತೆಗಾಗಿ ಎಲ್ಲರೂ ಏನಾದರೂ ಸ್ವಲ್ಪ ಮಾಡಲೇ ಬೇಕಾದ ಅವಶ್ಯಕತೆ ಇದ್ದೇ ಇದೆ. ನಮ್ಮ ದಿವ್ಯಾಂಗ ಸೋದರ ಸೋದರಿಯರು ಧೃಢ ಮನಸ್ಸಿನವರು, ಸಾಮರ್ಥ್ಯವುಳ್ಳವರು, ಸಾಹಸಿಗಳು ಮತ್ತು ಸಂಕಲ್ಪಬಧ್ಧರು. ಪ್ರತಿ ಕ್ಷಣ ನಮಗೆ ಅವರಿಂದ ಏನಾದರೊಂದು ಕಲಿಯುವ ಅವಕಾಶ ಸಿಗುತ್ತದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಅವರು ಸಾಧನೆ ಮಾಡುತ್ತಿದ್ದಾರೆ. ಕ್ರೀಡಾ ಕ್ಷೇತ್ರವಾಗಲಿ, ಯಾವುದೇ ಸ್ಪರ್ಧೆಯಲ್ಲಾಗಲಿ, ಸಾಮಾಜಿಕ ಸೇವೆಗಳಲ್ಲಾಗಲಿ, ನಮ್ಮ ದಿವ್ಯಾಂಗರೂ ಯಾರಿಗಿಂತಲೂ ಹಿಂದೆ ಬಿದ್ದಿಲ್ಲ. ನಮ್ಮ ದಿವ್ಯಾಂಗ ಆಟಗಾರರು ರಿಯೋ ಒಲಂಪಿಕ್ಸ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಿ 4 ಪದಕಗಳನ್ನು ಗೆದ್ದಿದ್ದರು ಮತ್ತು ಅಂಧರ ಟಿ-20 ಕ್ರಿಕೆಟ್  ವಿಶ್ವಕಪ್ ನಲ್ಲಿ ಕೂಡ ಚಾಂಪಿಯನ್ ಆಗಿದ್ದರು ಎಂಬುದು ನಿಮಗೆಲ್ಲರಿಗೂ ನೆನಪಿರಬಹುದು. ದೇಶದಲ್ಲಿ ಬೇರೆಬೇರೆ ರೀತಿಯ ಪಂದ್ಯಾವಳಿಗಳು ಆಗುತ್ತಲೇ ಇರುತ್ತವೆ. ಸ್ವಲ್ಪದಿನಗಳ ಹಿಂದೆ ಉದಯಪುರದಲ್ಲಿ 17 ನೇ ರಾಷ್ಟ್ರೀಯ ಪ್ಯಾರಾ-ಸ್ವಿಮ್ಮಿಂಗ್ ಸ್ಪರ್ಧೆಗಳು ಅಯೋಜನೆಗೊಂಡಿದ್ದವು. ದೇಶದ ಎಲ್ಲ ವಿಭಿನ್ನ ಭಾಗಗಳಿಂದ ಬಂದ ನಮ್ಮ ಯುವ ದಿವ್ಯಾಂಗ ಸೋದರ ಸೋದರಿಯರು ಇದರಲ್ಲಿ ಭಾಗವಹಿಸಿದರು ಮತ್ತು ತಮ್ಮ ಕೌಶಲ್ಯವನ್ನು ಪರಿಚಯಿಸಿದರು. ಅವರಲ್ಲಿ ಒಬ್ಬ ಗುಜರಾತಿನ 19 ವರ್ಷ ವಯಸ್ಸಿನ ಜಿಗರ್ ಠಕ್ಕರ್. ಅವನ ಶರೀರದ ಶೇಕಡಾ 80 ಭಾಗದಲ್ಲಿ ಮಾಂಸಖಂಡಗಳಿಲ್ಲ ಆದರೆ ಅವನ ಸಾಹಸ, ಸಂಕಲ್ಪ ಮತ್ತು ಅವನ ಪ್ರಯತ್ನಗಳನ್ನು ನೋಡಿರಿ! ರಾಷ್ಟ್ರೀಯ ಪ್ಯಾರಾ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಈ 19 ವರ್ಷ ವಯಸ್ಸಿನ ಜಿಗರ್ ಠಕ್ಕರ್, ದೇಹದಲ್ಲಿ ಶೇಕಡಾ 80 ಮಾಂಸಖಂಡಗಳೇ ಇಲ್ಲದವನು 11 ಪದಕಗಳನ್ನು ಗೆದ್ದನು. 70ನೇ ರಾಷ್ಟ್ರೀಯ ಪ್ಯಾರಾ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ ಕೂಡ ಅವನು ಚಿನ್ನದ ಪದಕ ಗೆದ್ದಿದ್ದನು. ಅವನ ಈ ಕೌಶಲ್ಯದ ಪರಿಣಾಮವೇ ಇಂದು ಅವನು ಭಾರತೀಯ ಕ್ರೀಡಾ ಪ್ರಾಧಿಕಾರದ ಮೂಲಕ 20-20 ಪ್ಯಾರಾಲಿ೦ಪಿಕ್ಸ್ ಗೆ ಆಯ್ಕೆಯಾಗಿದ್ದಾನೆ. 32 ಪ್ಯಾರಾ ಈಜುಗಾರರಲ್ಲಿ ಅವನೂ ಸಹ ಒಬ್ಬ ಮತ್ತು ಅವನಿಗೆ ಗುಜರಾತ್ ನ ಗಾಂಧಿನಗರದ ಸೆಂಟರ್ ಫಾರ್ ಎಕ್ಸಲೆನ್ಸ್ನಲ್ಲಿ ತರಬೇತಿ ನೀಡಲಾಗುವುದು. ನಾನು ಯುವಕ ಜಿಗರ್ ಠಕ್ಕರ್ ನ ಉತ್ಸಾಹಕ್ಕೆ ನಮಸ್ಕರಿಸುತ್ತೇನೆ ಮತ್ತು ಅವನಿಗೆ ನನ್ನ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಇಂದು ದಿವ್ಯಾಂಗ ಜನರಿಗೋಸ್ಕರ ಪ್ರವೇಶ ಮತ್ತು ಅವಕಾಶದ ಬಗ್ಗೆ ವಿಶೇಷವಾಗಿ ಗಮನ ಹರಿಸಲಾಗುತ್ತಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸಶಕ್ತವಾಗಿರಲಿ, ಒಂದು ಸಂಘಟಿತ ಸಮಾಜ ನಿರ್ಮಾಣವಾಗಲಿ, ಸಮಾನತೆ ಮತ್ತು ಪ್ರೀತಿಯ ಭಾವನೆಯಿಂದ ಸಮಾಜದಲ್ಲಿ ಸಾಮರಸ್ಯ ಹೆಚ್ಚಲಿ ಮತ್ತು ಎಲ್ಲರೂ ಒಟ್ಟಾಗಿ ಮುಂದುವರೆಯಲಿ ಎಂಬುದು ನಮ್ಮ ಆಶಯ ಮತ್ತು ಅದಕ್ಕಾಗಿ  ನಮ್ಮ ಪ್ರಯತ್ನ.
ಕೆಲವು ದಿನಗಳ ನಂತರ ಈದ್-ಎ-ಮಿಲಾದ್-ಉನ್-ನಬಿಯ ಹಬ್ಬ ಆಚರಿಸಲಾಗುತ್ತದೆ. ಈ ದಿನ ಪೈಗಂಬರ್ ಹಜರತ್ ಮೊಹಮ್ಮದ್ ಅವರ ಜನ್ಮದಿನವಾಗಿದೆ. ನಾನು ಎಲ್ಲ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ಮತ್ತು ಈದ್ ನ ಈ ಹಬ್ಬ, ಸಮಾಜದಲ್ಲಿ ಶಾಂತಿ ಮತ್ತು ಸದ್ಭಾವನೆಯನ್ನು ಹೆಚ್ಚಿಸಲು ನಮ್ಮೆಲ್ಲರಿಗೂ ಹೊಸ ಪ್ರೇರಣೆ ಕೊಡಲಿ, ಹೊಸ ಶಕ್ತಿ ಕೊಡಲಿ, ಹೊಸ ಸಂಕಲ್ಪಗಳನ್ನು ಮಾಡಲು ಸಾಮರ್ಥ್ಯ ಕೊಡಲಿ ಎಂದು ಆಶಿಸುತ್ತೇನೆ.
 
ದೂರವಾಣಿ ಕರೆ:
ಪ್ರಧಾನಮಂತ್ರಿಗಳೇ, ನಮಸ್ಕಾರ. ನಾನು ಕಾನ್ಪುರ ದಿಂದ ನೀರಜಾ ಸಿಂಗ್ ಮಾತನಾಡುತ್ತಿದ್ದೇನೆ. ನಿಮ್ಮಲ್ಲಿ ನನ್ನ ವಿನಂತಿ ಏನೆಂದರೆ, ಈ ವರ್ಷಪೂರ್ತಿ ನೀವು ನಿಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಏನೇನು ಮಾತುಗಳನ್ನು ಹೇಳಿದ್ದಿರೋ, ಅದರಲ್ಲಿಯ ಹತ್ತು ಅತ್ಯುತ್ತಮ ಮಾತುಗಳನ್ನು ನಮ್ಮೊಂದಿಗೆ ಮತ್ತೆ ಹಂಚಿಕೊಳ್ಳಿ. ಅದರಿಂದ ನಮಗೆಲ್ಲರಿಗೂ ಮತ್ತೆ ಆ ಮಾತುಗಳ ನೆನಪಾಗಲಿ ಮತ್ತು ಅದರಿಂದ ಸ್ವಲ್ಪ ಕಲಿಯುವ ಅವಕಾಶ ಸಿಗಲಿ, ಧನ್ಯವಾದಗಳು.
ದೂರವಾಣಿ ಕರೆ ಸ್ಥಗಿತ:
 
ನಿಮ್ಮ ಮಾತು ಸತ್ಯ , 2017 ಮುಗಿಯುತ್ತಾ ಬಂದಿದೆ, 2018 ಬಾಗಿಲ ಹೊಸ್ತಿಲಲ್ಲಿ ನಿಂತಿದೆ.  ನೀವು ಒಳ್ಳೆಯ ಸಲಹೆ ಕೊಟ್ಟಿದ್ದೀರಿ. ಆದರೆ ನಿಮ್ಮ ಮಾತುಗಳಿಂದ ನನಗೆ ಅದರಲ್ಲಿ ಸ್ವಲ್ಪ ಸೇರಿಸುವುದಕ್ಕೆ ಮತ್ತು ಪರಿವರ್ತನೆ ಮಾಡುವುದಕ್ಕೆ ಮನಸ್ಸಾಗಿದೆ. ನಮ್ಮಲ್ಲಿ, ಗ್ರಾಮಗಳಲ್ಲಿ ಮುಖ್ಯಸ್ಥರು, ವಯಸ್ಸಾದ ಹಿರಿಯರು ಇರುತ್ತಾರೆ, ದೊಡ್ಡವರು, ವಯಸ್ಸಾದವರು ಯಾವಾಗಲೂ ‘ದುಃಖವನ್ನು ಮರೆತುಬಿಡು ಮತ್ತು ಸುಖವನ್ನು ಮರೆಯಲು ಅವಕಾಶ ಕೊಡಬೇಡ’ ಎಂದು ಹೇಳುತ್ತಿರುತ್ತಾರೆ.  ಅದರಂತೆ ದುಃಖವನ್ನು ಮರೆಯೋಣ, ಸುಖವನ್ನು ಮರೆಯದಿರೋಣ. ಈ ಮಾತನ್ನು ನಾವು ಪ್ರಚಾರ ಮಾಡಬೇಕು ಎಂದು ನನಗೆ ಅನ್ನಿಸುತ್ತದೆ.  ನಾವು ಸಹ ಒಳ್ಳೆಯದನ್ನು ಸ್ಮರಿಸುತ್ತಾ, ಒಳ್ಳೆಯದರ ಸಂಕಲ್ಪವನ್ನು ಮಾಡುತ್ತಾ 2018ಕ್ಕೆ ಪ್ರವೇಶ ಮಾಡೋಣ. ನಮ್ಮಲ್ಲಿ, ಬಹುಶಃ ಜಗತ್ತಿನೆಲ್ಲೆಡೆ ಎಲ್ಲರೂ ವರ್ಷದ ಕೊನೆಯಲ್ಲಿ ಲೆಕ್ಕಾಚಾರ ಹಾಕುತ್ತೇವೆ, ಚಿಂತನೆ-ಯೋಚನೆ ಮಾಡುತ್ತೇವೆ, ವಿಚಾರ ಮಂಥನ ಮಾಡುತ್ತೇವೆ ಮತ್ತು ಮುಂದಿನ ವರ್ಷಕ್ಕೆ ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ ಎಂಬುದು ನಮಗೆಲ್ಲರಿಗೂ ಗೊತ್ತು. ನಮ್ಮಲ್ಲಿ ಮಾಧ್ಯಮಗಳಲ್ಲಂತೂ ಕಳದು ಹೋದ ವರ್ಷದ ಹಲವು ರೋಚಕ ಘಟನೆಗಳನ್ನು ಮತ್ತೊಮ್ಮೆ  ನೆನಪಿಸಿಕೊಳ್ಳುವ ಪ್ರಯತ್ನ ಆಗುತ್ತದೆ. ಅದರಲ್ಲಿ ಧನಾತ್ಮಕ ಅಂಶವೂ ಇರುತ್ತದೆ, ಋಣಾತ್ಮಕ ಅಂಶವೂ ಇರುತ್ತದೆ. ಆದರೆ, ಒಳ್ಳೆಯದನ್ನು ನೆನಪಿಸಿಕೊಳ್ಳುತ್ತಾ ಒಳ್ಳೆಯದನ್ನು ಮಾಡುವ ಉದ್ದೇಶದೊಂದಿಗೆ 2018ಕ್ಕೆ ಪ್ರವೇಶ ಮಾಡಬೇಕು ಎಂದು ನಿಮಗೆ ಅನ್ನಿಸುವುದಿಲ್ಲವೇ? ನಾನು ನಿಮಗೆಲ್ಲರಿಗೂ ಒಂದು ಸಲಹೆ ನೀಡುತ್ತೇನೆ – ನೀವೆಲ್ಲರೂ ನೀವು ಕೇಳಿರುವ, ನೀವೇ ನೋಡಿರುವ, ಅನುಭವಿಸಿರುವ ಅಂದರೆ ಅದನ್ನು ಬೇರೆಯವರು ತಿಳಿದರೆ ಅವರಿಗೂ ಸಹ ಒಳ್ಳೆಯ ಭಾವನೆ ಹುಟ್ಟುವುದೋ ಅಂತಹ 5-10 ಧನಾತ್ಮಕ ಅನುಭವಗಳನ್ನು ಹಂಚಿಕೊಳ್ಳಿ. ಅದು ಛಾಯಾಚಿತ್ರಗಳ ಮೂಲಕವಾಗಲಿ, ಚಿಕ್ಕ ಯಾವುದಾದರೊಂದು ಘಟನೆಯ ರೂಪದಲ್ಲಾಗಲಿ,  ಕಥೆಯ ರೂಪದಲ್ಲಾಗಲಿ, ವೀಡಿಯೊದ ರೂಪದಲ್ಲಾಗಲಿ ಇರಬಹುದು, ಹಂಚಿಕೊಳ್ಳುವಿರಾ? ಇದಕ್ಕೆ ನಿಮ್ಮ ಕೊಡುಗೆ ನೀಡುವಿರಾ? ನಾನು ನಿಮ್ಮೆಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ, 2018 ರ ಸ್ವಾಗತವನ್ನು ನಾವು ಒಂದು ಒಳ್ಳೆಯ ವಾತಾವರಣದಲ್ಲಿ, ಒಳ್ಳೆಯ ನೆನಪಿನೊಂದಿಗೆ, ಧನಾತ್ಮಕ ಯೋಚನೆಗಳೊಂದಿಗೆ ಮತ್ತು ಧನಾತ್ಮಕ ಮಾತುಗಳನ್ನು ನೆನಪಿಸಿಕೊಂಡು ಮಾಡಬೇಕಾಗಿದೆ.
 
ಬನ್ನಿ, ನರೇಂದ್ರಮೋದಿ ಆಪ್ ನಲ್ಲಿ, MyGovನಲ್ಲಿ, ಅಥವಾ ಸಾಮಾಜಿಕ ಮಾಧ್ಯಮದಲ್ಲಿ #PositiveIndia ದ ಜೊತೆಗೆ ಸಕಾರಾತ್ಮಕವಾದ ಮಾತುಗಳನ್ನು ಹಂಚಿಕೊಳ್ಳೋಣ ಮತ್ತು ಪ್ರೇರಣೆ ಉಂಟುಮಾಡುವ ಘಟನೆಗಳನ್ನು ನೆನೆಯೋಣ. ಒಳ್ಳೆಯ ಮಾತುಗಳನ್ನು ನೆನಪಿಸಿಕೊಂಡರೆ ಮಾತ್ರ ಒಳ್ಳೆಯದನ್ನು ಮಾಡುವ ಮನಸ್ಥಿತಿ ಮೂಡುತ್ತದೆ, ಒಳ್ಳೆಯ ಕೆಲಸವಾಗುತ್ತದೆ, ಒಳ್ಳೆಯದನ್ನು ಮಾಡುವ ಕೆಲಸಕ್ಕೆ ಶಕ್ತಿ ದೊರಕುತ್ತದೆ. ಒಳ್ಳೆಯ ಭಾವನೆ, ಒಳ್ಳೆಯ ಸಂಕಲ್ಪಕ್ಕೆ ಕಾರಣವಾಗುತ್ತದೆ. ಒಳ್ಳೆಯ ಸಂಕಲ್ಪಗಳು ಒಳ್ಳೆಯ ಪರಿಣಾಮಗಳೆಡೆಗೆ ಮುಂದುವರೆಯುತ್ತದೆ.
 
ಬನ್ನಿ, ಈ ಸಾರಿ #PositiveIndia ದಲ್ಲಿ ಪ್ರಯತ್ನ ಮಾಡೋಣ. ನಾವೆಲ್ಲರೂ ಸೇರಿ ಬಲಿಷ್ಠವಾದ ಧನಾತ್ಮಕ ಅಲೆಯನ್ನು ಹುಟ್ಟುಹಾಕಿ ಮುಂಬರುವ ವರ್ಷವನ್ನು ಸ್ವಾಗತಿಸೋಣ. ಈ ಒಗ್ಗಟ್ಟಿನ ಆವೇಗದ ಶಕ್ತಿ ಮತ್ತು ಇದರ ಪರಿಣಾಮವನ್ನು ನಾವೆಲ್ಲರೂ ಒಟ್ಟಾಗಿ ನೋಡೋಣ. ನಾನು ಮುಂದಿನ ಮನ್ ಕಿ ಬಾತ್ ನಲ್ಲಿ ಈ #PositiveIndia ದಲ್ಲಿ ಬಂದ ವಿಷಯಗಳನ್ನು ದೇಶವಾಸಿಗಳಿಗೆ ತಲುಪಿಸಲು ಖಂಡಿತ ಪ್ರಯತ್ನ ಮಾಡುತ್ತೇನೆ.
 
ನನ್ನ ಪ್ರೀತಿಯ ದೇಶವಾಸಿಗಳೇ, ಮುಂದಿನ ತಿಂಗಳು ಮನದ ಮಾತಿನಲ್ಲಿ ನಿಮ್ಮೊಡನಿರುತ್ತೇನೆ. ಬಹಳಷ್ಟು ಮಾತುಗಳನ್ನು ಆಡಲು ಅವಕಾಶ ಸಿಗುತ್ತದೆ. ಅನಂತಾನಂತ ಧನ್ಯವಾದಗಳು.
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Annual malaria cases at 2 mn in 2023, down 97% since 1947: Health ministry

Media Coverage

Annual malaria cases at 2 mn in 2023, down 97% since 1947: Health ministry
NM on the go

Nm on the go

Always be the first to hear from the PM. Get the App Now!
...
PM to distribute over 50 lakh property cards to property owners under SVAMITVA Scheme
December 26, 2024
Drone survey already completed in 92% of targeted villages
Around 2.2 crore property cards prepared

Prime Minister Shri Narendra Modi will distribute over 50 lakh property cards under SVAMITVA Scheme to property owners in over 46,000 villages in 200 districts across 10 States and 2 Union territories on 27th December at around 12:30 PM through video conferencing.

SVAMITVA scheme was launched by Prime Minister with a vision to enhance the economic progress of rural India by providing ‘Record of Rights’ to households possessing houses in inhabited areas in villages through the latest surveying drone technology.

The scheme also helps facilitate monetization of properties and enabling institutional credit through bank loans; reducing property-related disputes; facilitating better assessment of properties and property tax in rural areas and enabling comprehensive village-level planning.

Drone survey has been completed in over 3.1 lakh villages, which covers 92% of the targeted villages. So far, around 2.2 crore property cards have been prepared for nearly 1.5 lakh villages.

The scheme has reached full saturation in Tripura, Goa, Uttarakhand and Haryana. Drone survey has been completed in the states of Madhya Pradesh, Uttar Pradesh, and Chhattisgarh and also in several Union Territories.