ರಷ್ಯಾ ಒಕ್ಕೂಟದ ಅಧ್ಯಕ್ಷ ಗೌರವಾನ್ವಿತ ಶ್ರೀ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.
ಆಪ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಮತ್ತು ಜಾಗತಿಕವಾಗಿ ಹಾಗೂ ಈ ವಲಯದಲ್ಲಿನ ಪರಿಣಾಮಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಿದರು. ಈ ವಿಷಯದಲ್ಲಿ ಕಾರ್ಯತಂತ್ರದ ಪಾಲುದಾರರಾಗಿ ಒಟ್ಟಾಗಿ ಕೆಲಸ ಮಾಡುವ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು ಮತ್ತು ಈ ವಿಷಯದಲ್ಲಿ ಪರಸ್ಪರ ಸಂಪರ್ಕದಲ್ಲಿರುವಂತೆ ಈ ನಾಯಕರು ತಮ್ಮ ಹಿರಿಯ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದಿಂದ ಎದುರಾಗಿರುವ ಸವಾಲುಗಳ ನಡುವೆಯೂ ಉಭಯ ದೇಶಗಳ ಮಧ್ಯೆ ವಿಶೇಷ ಮತ್ತು ವಿಶೇಷವಾದ ಕಾರ್ಯತಂತ್ರದ ಪಾಲುದಾರಿಕೆ ಪ್ರಗತಿ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿನ ದ್ವಿಪಕ್ಷೀಯ ಸಹಕಾರ ಮತ್ತು ವಿಶೇಷವಾಗಿ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಬಗ್ಗೆ ಇವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರಿಕ್ಸ್ ಶೃಂಗ ಸಭೆ ಒಳಗೊಂಡಂತೆ ಮುಂಬರುವ ಬಹುಹಂತದ ಕಾರ್ಯಕ್ರಮಗಳು, ಎಸ್.ಸಿ.ಒ ರಾಷ್ಟ್ರಗಳ ಮಂಡಳಿ ಮುಖ್ಯಸ್ಥರು ಮತ್ತು ಭಾರತ ಪಾಲ್ಗೊಳ್ಳಲಿರುವ ಪೂರ್ವ ಆರ್ಥಿಕ ಒಕ್ಕೂಟ ಸಭೆ ಕುರಿತಂತೆಯೂ ಉಭಯ ನಾಯಕರು ಸಮಾಲೋಚಿಸಿದರು.
ಮುಂದಿನ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಧ್ಯಕ್ಷ ಪುಟಿನ್ ಅವರ ಭೇಟಿಯನ್ನು ಎದುರುನೋಡುತ್ತಿರುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ನಿರ್ದಿಷ್ಟವಾಗಿ ಆಪ್ಘಾನಿಸ್ತಾನದಲ್ಲಿನ ಪರಿಸ್ಥಿತಿ, ಉಳಿದಂತೆ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಪರಸ್ಪರ ಸಂಪರ್ಕದಲ್ಲಿರಲು ಉಭಯ ನಾಯಕರು ಸಮ್ಮತಿಸಿದ್ದಾರೆ.