ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನಾರ್ವೆಯ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಯೋನಸ್ ಗಾರ್ ಸ್ತೋರ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಿಗಾಗಿ ಹವಾಮಾನ ಹಣಕಾಸು ಕ್ರೋಡೀಕರಿಸುವ ಉಪಕ್ರಮಗಳು ಸೇರಿದಂತೆ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಮಾನ, ಸಕಾಲಿಕ ಮತ್ತು ಸಾಕಷ್ಟು ಹವಾಮಾನ ಹಣಕಾಸು ಖಾತರಿಪಡಿಸುವ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು ಮತ್ತು ಈ ಉದ್ದೇಶಕ್ಕಾಗಿ ಘನತೆವೆತ್ತ ಸ್ತೋರ ಅವರ ಬದ್ಧತೆಯನ್ನು ಶ್ಲಾಘಿಸಿದರು.
ನೀಲಿ ಆರ್ಥಿಕತೆಯ ಕಾರ್ಯಪಡೆ ಸೇರಿದಂತೆ ಪ್ರಸ್ತುತ ಚಾಲನೆ ಪಡೆದಿರುವ ವಿವಿಧ ದ್ವಿಪಕ್ಷೀಯ ಸಹಕಾರ ಉಪಕ್ರಮಗಳನ್ನು ಉಭಯ ನಾಯಕರು ಪರಿಶೀಲಿಸಿದರು. ಹಸಿರು ಜಲಜನಕ, ಹಡಗು, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಭಾರತ-ನಾರ್ವೆ ಸಹಭಾಗಿತ್ವವು ಹೆಚ್ಚುತ್ತಿರುವ ಬಗ್ಗೆ ಅವರು ಸಂತೃಪ್ತಿ ವ್ಯಕ್ತಪಡಿಸಿದರು.