ಹೊಸ ವರ್ಷದ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ವಿಶ್ವದ ವಿವಿಧ ನಾಯಕರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಭೂತಾನ್ ದೊರೆ ಶ್ರೀ ಜಿಗ್ಮೆ ಖೇಸರ್ ನಂಗೆಲ್ ವಾಂಗ್ಚುಕ್ ಮತ್ತು ಪ್ರಧಾನ ಮಂತ್ರಿ ಶ್ರೀ ಲಿಯೊನ್ಚೆನ್ (ಡಾ) ಲೋಟೇ ಶೇರಿಂಗ್, ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಮತ್ತು ಪ್ರಧಾನಿ ಶ್ರೀ ಮಹಿಂದಾ ರಾಜಪಕ್ಸೆ, ಮಾಲ್ಡೀವ್ಸ್ ಅಧ್ಯಕ್ಷ ಶ್ರೀ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಬಾಂಗ್ಲಾದೇಶದ ಪ್ರಧಾನಿ ಶ್ರೀಮತಿ ಶೇಖ್ ಹಸೀನಾ ಮತ್ತು ನೇಪಾಳ ಪ್ರಧಾನಿ ಶ್ರೀ ಕೆ.ಪಿ. ಶರ್ಮಾ ಒಲಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
ಪ್ರಧಾನ ಮಂತ್ರಿಗಳು ತಮ್ಮ ವೈಯಕ್ತಿಕ ಹಾಗೂ ಭಾರತದ ಜನತೆಯ ಪರವಾಗಿ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು. ‘ನೆರೆಹೊರೆಯವರು ಮೊದಲು’ ನೀತಿಗೆ ಭಾರತದ ಬದ್ಧತೆ ಮತ್ತು ಪರಸ್ಪರ ಶಾಂತಿ, ಸುರಕ್ಷತೆ, ಸಮೃದ್ಧಿ ಮತ್ತು ಪ್ರಗತಿಯ ದೃಷ್ಟಿಕೋನವನ್ನು ಭಾರತದ ಎಲ್ಲ ಸ್ನೇಹಿತರು ಮತ್ತು ಈ ಪ್ರದೇಶದ ಪಾಲುದಾರರಿಗೆ ಅವರು ಒತ್ತಿ ಹೇಳಿದರು.
ಭೂತಾನ್ ದೊರೆಯೊಂದಿಗಿನ ಸಂಭಾಷಣೆಯಲ್ಲಿ ಪ್ರಧಾನಿಯವರು ಕಳೆದ ವರ್ಷದ ಪ್ರಮುಖ ಸಾಧನೆಗಳ ಬಗ್ಗೆ ಪ್ರಸ್ತಾಪಿಸಿದರು. ಇದು ಭಾರತ ಮತ್ತು ಭೂತಾನ್ ನಡುವಿನ ವಿಶೇಷ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಕಾರಣವಾಗಿದೆ. ಪ್ರಧಾನಿ ಅವರು ಭೂತಾನ್ ಗೆ ನೀಡಿದ ತಮ್ಮ ಭೇಟಿ ಮತ್ತು ಅಲ್ಲಿನ ಜನರಿಂದ ಪಡೆದ ಪ್ರೀತಿ ಮತ್ತು ವಿಶ್ವಾಸವನ್ನು ಸ್ಮರಿಸಿಕೊಂಡರು. ಉಭಯ ದೇಶಗಳ ನಡುವೆ ಯುವಜನ ವಿನಿಮಯವನ್ನು ಹೆಚ್ಚಿಸುವ ಅಗತ್ಯತೆಯನ್ನೂ ಅವರು ಒತ್ತಿ ಹೇಳಿದರು. ಭೂತಾನ್ ದೊರೆಯ ಮುಂಬರುವ ಭಾರತ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ಪ್ರಧಾನಿಯವರು ಹೇಳಿದರು.
ಶ್ರೀಲಂಕಾ ಅಧ್ಯಕ್ಷ ಶ್ರೀ.ಗೋಟಬಯಾ ರಾಜಪಕ್ಸೆ ಅವರು ಪ್ರಧಾನಮಂತ್ರಿಯವರ ಶುಭಾಶಯಗಳನ್ನು ಪ್ರೀತಿಯಿಂದ ಸ್ವೀಕರಿಸಿದರು ಮತ್ತು 2020 ರಲ್ಲಿ ಭಾರತ ಮತ್ತು ಶ್ರೀಲಂಕಾ ತಮ್ಮ ಸ್ನೇಹ ಸಂಬಂಧವನ್ನು ಇನ್ನಷ್ಟು ವೃದ್ಧಿಸಿಕೊಳ್ಳುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.
ಶ್ರೀಲಂಕಾ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಮಾತನಾಡಿದ ಪ್ರಧಾನಿಯವರು, ಶ್ರೀಲಂಕಾದೊಂದಿಗೆ ನಿಕಟ ಮತ್ತು ವ್ಯಾಪಕವಾದ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಧಾನಿ ರಾಜಪಕ್ಸೆಯವರು ಶುಭಾಶಯಗಳನ್ನು ತಿಳಿಸಿದರು ಮತ್ತು ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಹೆಚ್ಚಿಸುವ ಆಶಯ ವ್ಯಕ್ತಪಡಿಸಿದರು.
ಮಾಲ್ಡೀವ್ಸ್ ಅಧ್ಯಕ್ಷರು ಮತ್ತು ಮಾಲ್ಡೀವ್ಸ್ ಜನರು ಅಭಿವೃದ್ಧಿಯ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗಲಿ ಪ್ರಧಾನಿ ಶ್ರೀ ಮೋದಿ ಶುಭ ಹಾರೈಸಿದರು. ಅಧ್ಯಕ್ಷ ಸೋಲಿಹ್ ಅವರು ಪ್ರಧಾನಮಂತ್ರಿಯವರ ಆಶಯಗಳನ್ನು ಪ್ರೀತಿಯಿಂದ ಒಪ್ಪಿಕೊಂಡರು ಮತ್ತು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಮೂಲಕ ಮತ್ತು ಒಟ್ಟಾಗಿ ಕೆಲಸ ಮಾಡಲು ಹೊಸ ಕ್ಷೇತ್ರಗಳನ್ನು ಅನ್ವೇಷಿಸುವ ಮೂಲಕ ಭಾರತದೊಂದಿಗಿನ ಸಂಬಂಧಗಳನ್ನು ಇನ್ನಷ್ಟು ಗಾಢವಾಗಿಸಲು ಮತ್ತು ಬಲಪಡಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತನಾಡಿದ ಪ್ರಧಾನ ಮಂತ್ರಿಯವರು, ಮುಂದಿನ ಮೂರು ವರ್ಷಗಳ ಕಾಲ ಅವಾಮಿ ಲೀಗ್‌ನ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದಕ್ಕಾಗಿ ಅವರನ್ನು ಅಭಿನಂದಿಸಿದರು. ಭಾರತಕ್ಕೆ ಬಾಂಗ್ಲಾದೇಶದ ಮಾಜಿ ಹೈಕಮಿಷನರ್ ಸೈಯದ್ ಮುಜೀಂ ಅಲಿ ಅವರ ಅಕಾಲಿಕ ನಿಧನದ ಬಗ್ಗೆ ಪ್ರಧಾನಿ ಸಂತಾಪ ಸೂಚಿಸಿದರು. 2019 ರಲ್ಲಿ ಭಾರತ-ಬಾಂಗ್ಲಾದೇಶ ಸಂಬಂಧದಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಪ್ರಧಾನಿ ಗಮನ ಸೆಳೆದರು. ಮುಂಬರುವ ಬಂಗಬಂಧು ಜನ್ಮ ಶತಮಾನೋತ್ಸವ ಮತ್ತು ಬಾಂಗ್ಲಾದೇಶದ ವಿಮೋಚನೆಯ 50 ವರ್ಷಗಳು ಹಾಗೂ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯು, ತಮ್ಮ ಸರ್ಕಾರದ ಆದ್ಯತೆಯಾಗಿರುವ ಭಾರತ-ಬಾಂಗ್ಲಾದೇಶ ಸಂಬಂಧಗಳು ನಿಕಟವಾಗಲು ಹಾಗೂ ಮತ್ತಷ್ಟು ಪ್ರಗತಿಗೆ ಪ್ರಮುಖ ಮೈಲಿಗಲ್ಲುಗಳನ್ನು ಒದಗಿಸಲಿದೆದೆ ಎಂದು ಅವರು ಹೇಳಿದ್ದಾರೆ.
ನೇಪಾಳ ಪ್ರಧಾನಿ ಒಲಿ ಅವರೊಂದಿಗಿನ ಸಂವಾದದಲ್ಲಿ, ಹಲವಾರು ಯೋಜನೆಗಳು ಪೂರ್ಣಗೊಂಡ 2019 ರಲ್ಲಿ ಭಾರತ-ನೇಪಾಳ ಸಂಬಂಧದ ಪ್ರಗತಿಯ ಬಗ್ಗೆ ಪ್ರಧಾನಿಯವರು ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದರು. ಮೋತಿಹಾರಿ (ಭಾರತ) – ಅಮ್ಲೆಖ್‌ಗುಂಜ್ (ನೇಪಾಳ) ಪೆಟ್ರೋಲಿಯಂ ಉತ್ಪನ್ನಗಳ ಪೈಪ್‌ಲೈನ್ ಅನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಿರುವುದನ್ನು ಅವರು ನಿರ್ದಿಷ್ಟವಾಗಿ ಪ್ರಸ್ತಾಪಿಸಿದರು. ಬಿರಾಟ್‌ನಗರದಲ್ಲಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮತ್ತು ನೇಪಾಳದ ವಸತಿ ಪುನರ್ನಿರ್ಮಾಣ ಯೋಜನೆಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಶೀಘ್ರ ಉದ್ಘಾಟಿಸಲು ಇಬ್ಬರೂ ನಾಯಕರು ಸಮ್ಮತಿಸಿದರು.