India is the land of Lord Buddha, Mahatma Gandhi and Sardar Patel. It is the land of non-violence: PM Modi during #MannKiBaat
#MannKiBaat: Violence in the name of faith is unacceptable, no one above law, says PM Modi
India is the land of diversities and our festivals reflect these diversities: PM during #MannKiBaat
Festivals are not only symbols of faith for us, but they are also associated with Swachhata: PM Modi during #MannKiBaat
Sports must become a part of our lives. It ensures physical fitness, mental alertness & personality enhancement: PM during #MannKiBaat
This Teachers’ Day, let us resolve that we would Teach to Transform, Educate to Empower, Learn to Lead: PM Modi during #MannKiBaat
#MannKiBaat:Teachers have a key role in transformation of society, says PM Modi
'Pradhan Mantri Jan-Dhan Yojana' has brought poor into the economic mainstream of India: PM Modi during #MannKiBaat

ನನ್ನ ಪ್ರಿಯ ದೇಶವಾಸಿಗಳೇ ಆದರಪೂರ್ವಕ ನಮಸ್ಕಾರ. 

ಒಂದೆಡೆ ದೇಶ ಉತ್ಸವಗಳಲ್ಲಿ ಮುಳುಗಿದ್ದರೆ ಮತ್ತೊಂದೆಡೆ ಹಿಂದೂಸ್ತಾನದ ಯಾವುದೋ ಮೂಲೆಯಿಂದ ಹಿಂಸೆಯ ಬಗ್ಗೆ ಸುದ್ದಿಗಳು ಕೇಳಿಬಂದಾಗ ದೇಶದ ಬಗ್ಗೆ ಕಾಳಜಿ ಮೂಡುವುದು ಸಹಜ. ಈ ನಮ್ಮ ದೇಶ ಬುದ್ಧ ಮತ್ತು ಗಾಂಧೀಜಿಯವರ ದೇಶ. ದೇಶದ ಒಗ್ಗಟ್ಟಿಗಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದ ಸರ್ದಾರ ಪಟೇಲರ ದೇಶವಾಗಿದೆ. ಸಹಸ್ರಾರು ವರ್ಷಗಳಿಂದಲೂ ನಮ್ಮ ಪೂರ್ವಜರು ಸಾರ್ವಜನಿಕ ಜೀವನಮೌಲ್ಯಗಳನ್ನು, ಅಹಿಂಸೆಯನ್ನು ಸಮಾನ ಆದರ ಭಾವವನ್ನು ಸ್ವೀಕರಿಸಿದ್ದಾರೆ. 

ಅದನ್ನೇ ನಮ್ಮ ಮನದಲ್ಲೂ ತುಂಬಿದ್ದಾರೆ. ಅಹಿಂಸಾ ಪರಮೋಧರ್ಮ ಎಂಬುದನ್ನು ನಾವು ಬಾಲ್ಯದಿಂದಲೂ ಕೇಳುತ್ತಾ ಬಂದಿದ್ದೇವೆ ಹೇಳುತ್ತಲೂ ಬಂದಿದ್ದೇವೆ. ನಾನು ಕೆಂಪು ಕೋಟೆಯಿಂದ ಹೇಳಿದ್ದೆ ನಂಬಿಕೆ ಹೆಸರಿನಲ್ಲಿ ಹಿಂಸೆ ಸಹಿಸಲಾಗುವುದಿಲ್ಲ ಎಂದು. ಅದು ಸಾಂಪ್ರದಾಯಿಕ ನಂಬಿಕೆ ಇರಲಿ, ರಾಜಕೀಯ ವಿಚಾರಧಾರೆಗಳ ಬಗ್ಗೆ ಇರುವ ನಂಬಿಕೆ ಇರಲಿ, ವ್ಯಕ್ತಿಯ ಕುರಿತಾದ ನಂಬಿಕೆ ಇರಲಿ, ಅಥವಾ ಪರಂಪರೆಗಳ ಕುರಿತದ್ದೇ ಆಗಿರಲಿ, ನಂಬಿಕೆ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ಸಿಗುವಂತೆ ಎಲ್ಲ ರೀತಿಯ ವ್ಯವಸ್ಥೆಯಿದೆ. ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ಮತ್ತು ಹಿಂಸಾ ಮಾರ್ಗದಲ್ಲಿ ದಂಗೆ ಏಳುವ ಯಾರನ್ನೂ, ಅವರು ವ್ಯಕ್ತಿಯೇ ಆಗಿರಲಿ ಅಥವಾ ಒಂದು ಪಂಥವೇ ಆಗಿರಲಿ ಅವರನ್ನು ಈ ದೇಶ ಎಂದಿಗೂ ಸಹಿಸುವುದಿಲ್ಲ ಮತ್ತು ಸರ್ಕಾರವೂ ಸಹಿಸುವುದಿಲ್ಲ ಎಂದು ನಾನು ದೇಶವಾಸಿಗಳಲ್ಲಿ ವಿಶ್ವಾಸಮೂಡಿಸಬಯಸುತ್ತೇನೆ. ಎಲ್ಲರೂ ಕಾನೂನಿಗೆ ತಲೆ ಬಾಗಲೇಬೇಕು, ಕಾನೂನು ಯಾರು ಜವಾಬ್ದಾರರು ಎಂಬುದನ್ನು ನಿರ್ಧರಿಸುತ್ತದೆ ಮತ್ತು ದೋಷಿಗಳಿಗೆ ಖಂಡಿತ ಶಿಕ್ಷೆ ನೀಡುತ್ತದೆ. 

ನನ್ನ ಪ್ರಿಯ ದೇಶಬಾಂಧವರೇ, ನಮ್ಮ ದೇಶ ವಿವಿಧತೆಯಿಂದ ಕೂಡಿದೆ. ಮತ್ತು ಈ ವಿವಿಧತೆ ಆಹಾರ ಪದ್ಧತಿ, ಜೀವನ ಕ್ರಮ, ಉಡುಪಿಗೆ ಮಾತ್ರ ಸೀಮಿತವಾಗಿಲ್ಲ. ಜೀವನದ ಪ್ರತಿಯೊಂದು ಆಗುಹೋಗುಗಳಲ್ಲೂ ನಮಗೆ ವಿವಿಧತೆ ಕಂಡುಬರುತ್ತದೆ. ಎಷ್ಟರಮಟ್ಟಿಗೆ ಎಂದರೆ ನಮ್ಮ ಹಬ್ಬ ಹರಿದಿನಗಳೂ ವಿವಿಧತೆಯಿಂದ ಕೂಡಿವೆ. ಸಾವಿರಾರು ವರ್ಷಗಳಷ್ಟು ಪುರಾತನವಾದ ನಮ್ಮ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯನ್ನು ನೋಡಿದರೆ ಸಾಮಾಜಿಕ ಪರಂಪರೆಯನ್ನು ಅವಲೋಕಿಸಿದರೆ. ಐತಿಹಾಸಿಕ ಘಟನೆಗಳನ್ನು ಗಮನಿಸಿದರೆ ವರ್ಷದ 365 ದಿನಗಳಲ್ಲಿಯೂ ಹಬ್ಬವಿಲ್ಲದ ಒಂದು ದಿನವೂ ಇರುವುದಿಲ್ಲ. ನಮ್ಮ ಎಲ್ಲ ಹಬ್ಬಗಳೂ ಪ್ರಕೃತಿಯ ಕ್ಯಾಲೆಂಡರ್‌ನಂತೆಯೇ ನಡೆಯುತ್ತವೆ ಎಂಬುದನ್ನು ನೀವೂ ಗಮನಿಸಿರಬಹುದು. ನಮ್ಮ ಹಲವಾರು ಹಬ್ಬಗಳು ನೇರವಾಗಿ ರೈತರಿಗೆ, ಮೀನುಗಾರರಿಗೆ ಸಂಬಂಧಿಸಿದ್ದಾಗಿರುತ್ತವೆ. 

ಇಂದು ನಾನು ಹಬ್ಬಗಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದರೆ ಮೊದಲು ನಿಮ್ಮೆಲ್ಲರಿಗೆ ’ಮಿಚ್ಛಾಮಿ ದುಕ್ಕಡಮ್’ ಎಂದು ಹೇಳಬಯಸುತ್ತೇನೆ. ಜೈನ ಸಮುದಾಯದವರು ನಿನ್ನೆ ಸಂವತ್ಸರೀ ಪರ್ವ ಆಚರಿಸಿದರು. ಜೈನ ಸಂಪ್ರದಾಯದಲ್ಲಿ ಭಾದ್ರಪದ ಮಾಸದಲ್ಲಿ ಪರ್ಯುಶನ ಪರ್ವ ಆಚರಿಸುತ್ತಾರೆ. ಪರ್ಯುಶನ ಪರ್ವದ ಕೊನೆಯ ದಿನ ಸಂವತ್ಸರದ ದಿನವಾಗಿರುತ್ತದೆ. ಇದು ಖಂಡಿತ ತನ್ನಲ್ಲಿಯೇ ಒಂದು ಅದ್ಭುತವಾದ ಪರಂಪರೆಯಾಗಿದೆ. ಸಂವತ್ಸರೀ ಪರ್ವ ಕ್ಷಮೆ, ಅಹಿಂಸೆ ಮತ್ತು ಸ್ನೇಹದ ಪ್ರತೀಕವಾಗಿದೆ ಹಾಗಾಗಿ ಇದನ್ನು ಕ್ಷಮಾವಾಣಿ ಪರ್ವವೆಂದೂ ಕರೆಯಲಾಗುತ್ತದೆ. ಈ ದಿನ ಪರಸ್ಪರ ’ಮಿಚ್ಛಾಮಿ ದುಕ್ಕಡಮ್’ ಎಂದು ಹೇಳುವ ಪರಂಪರೆಯಿದೆ. ಅಲ್ಲದೆ ನಮ್ಮ ಶಾಸ್ತ್ರಗಳಲ್ಲಿ ಕ್ಷಮಾ ವೀರಸ್ಯ ಭೂಷಣಂ ಅಂದರೆ ಕ್ಷಮೆ ಎಂಬುದು ವೀರರಿಗೆ ಭೂಷಣ ಎಂದು ಹೇಳಲಾಗಿದೆ. ಕ್ಷಮಿಸುವವನು ವೀರನಾಗುತ್ತಾನೆ. ಈ ಚರ್ಚೆಯನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಕ್ಷಮಿಸುವುದು ಶಕ್ತಿವಂತನ ವಿಷೇಶತೆಯಾಗಿದೆ ಎಂದು ಗಾಂಧೀಜಿ ಯಾವಾಗಲೂ ಹೇಳುತ್ತಿದ್ದರು. 

ಶೇಕ್ಸಪಿಯರ್ ತನ್ನ ನಾಟಕ ‘ದಿ ಮರ್ಚೆಂಟ್ ಆಫ್ ವೆನಿಸ್’ನಲ್ಲಿ ಕ್ಷಮೆಯ ಮಹತ್ವವನ್ನು ಹೇಳುತ್ತಾ “Mercy is twice blest, It blesseth him that gives and him that takes” ಎಂದು ಬರೆಯುತ್ತಾನೆ. ಅದರರ್ಥ, ಕ್ಷಮಿಸುವವನು ಮತ್ತು ಯಾರನ್ನು ಕ್ಷಮಿಸಲಾಗಿದೆಯೋ ಇಬ್ಬರಿಗೂ ದೇವರ ಆಶೀರ್ವಾದ ಲಭಿಸುತ್ತದೆ. 

ನನ್ನ ಪ್ರಿಯ ದೇಶಬಾಂಧವರೇ, ಈ ದಿನಗಳಲ್ಲಿ ಹಿಂದೂಸ್ತಾನದ ಮೂಲೆಮೂಲೆಯಲ್ಲೂ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. ಗಣೇಶ ಚತುರ್ಥಿಯ ಮಾತು ಬಂದಾಗ ಸಾರ್ವಜನಿಕ ಗಣೇಶೋತ್ಸವದ ವಿಷಯ ಸಹಜವೇ ಸರಿ. ಬಾಲ ಗಂಗಾಧರ ಲೋಕಮಾನ್ಯ ತಿಲಕರು 125 ವರ್ಷಗಳ ಹಿಂದೆ ಈ ಪರಂಪರೆ ಹುಟ್ಟುಹಾಕಿದರು. 125 ವರ್ಷಗಳ ಹಿಂದೆ ಸ್ವಾತಂತ್ರ್ಯಪೂರ್ವದಲ್ಲಿ ಇದು ಸ್ವಾತಂತ್ರ್ಯ ಆಂದೋಲನದ ಪ್ರತೀಕವಾಗಿತ್ತು. ಸ್ವಾತಂತ್ರ್ಯಾ ನಂತರ ಅದು ಸಾಮಾಜಿಕ ಶಿಕ್ಷಣ, ಸಾಮಾಜಿಕ ಚೈತನ್ಯ ಮೂಡಿಸುವ ಪ್ರತೀಕವಾಗಿದೆ. ಗಣೇಶ ಚತುರ್ಥಿ ಆಚರಣೆ 10 ದಿನಗಳವರೆಗೆ ಮುಂದುವರಿಯುತ್ತದೆ. ಈ ಮಹಾಪರ್ವವನ್ನು ಏಕತೆ, ಸಮಾನತೆ ಮತ್ತು ಶುಚಿತ್ವದ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಸಮಸ್ತ ದೇಶವಾಸಿಗಳಿಗೆ ಗಣೇಶೋತ್ಸವದ ಹಾರ್ದಿಕ ಶುಭಾಶಯಗಳು. 

ಪ್ರಸ್ತುತ ಕೇರಳದಲ್ಲಿ ಓಣಂ ಹಬ್ಬ ಆಚರಿಸಲಾಗುತ್ತಿದೆ. ಭಾರತದ ವರ್ಣಮಯ ಹಬ್ಬಗಳಲ್ಲಿ ಓಣಂ ಕೇರಳದ ಪ್ರಮುಖ ಹಬ್ಬವಾಗಿದೆ. ಈ ಹಬ್ಬ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪಡೆದಿದೆ. ಓಣಂ ಆಚರಣೆ ಕೇರಳದ ಸಮೃದ್ಧವಾದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಈ ಹಬ್ಬದಾಚರಣೆ ಸಮಾಜದಲ್ಲಿ ಪ್ರೀತಿ ಮತ್ತು ಸೌಹಾರ್ದತೆಯ ಸಂದೇಶ ನೀಡುವುದರೊಂದಿಗೆ ಜನರ ಮನದಲ್ಲಿ ಹೊಸ ಆನಂದ, ಹೊಸ ಆಸೆಗಳು, ಹೊಸ ವಿಶ್ವಾಸವನ್ನು ಹುಟ್ಟುಹಾಕುತ್ತದೆ. ಇತ್ತೀಚೆಗಂತೂ ನಮ್ಮ ಈ ಹಬ್ಬಗಳು ಪ್ರವಾಸಿಗರ ಆಕರ್ಷಣೆಗೂ ಕಾರಣವಾಗುತ್ತಿವೆ. ನಾನು ಜನರಲ್ಲಿ ಹೇಳಬಯಸುವುದೇನೆಂದರೆ, ಗುಜರಾತ್‌ನಲ್ಲಿ ನವರಾತ್ರಿ ಉತ್ಸವ, ಬಂಗಾಳದಲ್ಲಿ ದುರ್ಗಾ ಉತ್ಸವಗಳು ಈಗಾಗಲೇ ಒಂದು ರೀತಿ ಪ್ರವಾಸಿಗರನ್ನು ತಮ್ಮಲ್ಲಿ ಸೆಳೆಯುತ್ತಿವೆ ಹಾಗೆ ನಮ್ಮ ಇತರ ಹಬ್ಬಗಳು ವಿದೇಶಿಗರನ್ನು ಆಕರ್ಷಿಸಲು ಒಂದು ಅವಕಾಶವಾಗಿವೆ. ಈ ದಿಶೆಯಲ್ಲಿ ನಾವು ಏನು ಮಾಡಬಹುದು ಎಂದು ಆಲೋಚಿಸಬೇಕಿದೆ. ಈ ಹಬ್ಬಗಳ ಸಾಲಿನಲ್ಲಿ ಕೆಲ ದಿನಗಳಲ್ಲೇ ದೇಶದೆಲ್ಲೆಡೆ ’ಈದ್ ಉಲ್ ಜುಹಾ’ ಆಚರಿಸಲಾಗುವುದು. ದೇಶದ ಎಲ್ಲ ನಾಗರಿಕರಿಗೆ ಈದ್ ಉಲ್ ಜುಹಾ ಹಬ್ಬದ ಅನಂತ ಅನಂತ ಶುಭಾಷಯಗಳು. ಹಬ್ಬಗಳು ನಂಬಿಕೆ ಮತ್ತು ವಿಶ್ವಾಸದ ಪ್ರತೀಕವಂತೂ ಹೌದು ಹಾಗೆಯೇ ಈಗ ಈ ಹಬ್ಬಗಳನ್ನು ಸ್ವಚ್ಛತೆಯ ಪ್ರತೀಕವಾಗಿಸಬೇಕಿದೆ. ಪಾರಿವಾರಿಕ ಜೀವನದಲ್ಲಿ ಹಬ್ಬಗಳೊಂದಿಗೆ ಸ್ವಚ್ಛತೆಯೂ ಜೊತೆಗೂಡಿದೆ. ಹಬ್ಬದ ತಯಾರಿಯ ಅರ್ಥ ಮನೆಯನ್ನು ಶುಚಿಗೊಳಿಸುವುದು. ಇದು ನಮಗೆ ಹೊಸದೇನಲ್ಲ ಆದರೆ, ಇದು ಸಾಮಾಜಿಕ ಸ್ವಭಾವದಂತಾಗಬೇಕು ಎಂಬುದು ಅಗತ್ಯವಾಗಿದೆ. ಸಾರ್ವಜನಿಕವಾಗಿ ಸ್ವಚ್ಛತೆಯ ಜಾಗೃತಿ ಕೇವಲ ಮನೆಯಲ್ಲಿ ಮಾತ್ರವಲ್ಲದೆ ನಮ್ಮ ಸಂಪೂರ್ಣ ಗ್ರಾಮದಲ್ಲಿ, ನಗರದಲ್ಲಿ, ಪಟ್ಟಣದಲ್ಲಿ, ಸಂಪೂರ್ಣ ರಾಜ್ಯದಲ್ಲಿ, ನಮ್ಮ ದೇಶಾದ್ಯಂತ ಹಬ್ಬಗಳ ಜೊತೆಗೆ ಸ್ವಚ್ಛತೆಯೂ ಒಂದು ಬಿಡಿಸಲಾಗದ ಭಾಗವಾಗಲೇಬೇಕು. 

ನನ್ನ ಪ್ರಿಯ ದೇಶವಾಸಿಗಳೇ, ಆಧುನಿಕತೆಯ ವ್ಯಾಖ್ಯಾನ ಬದಲಾಗುತ್ತಾ ಸಾಗಿದೆ. ಇಂದಿನ ದಿನಗಳಲ್ಲಿ ನೀವು ಎಷ್ಟು ಸಂಸ್ಕಾರವಂತರು, ಎಷ್ಟು ಆಧುನಿಕರು, ನಿಮ್ಮ ಆಲೋಚನಾಲಹರಿ ಎಷ್ಟು ಆಧುನಿಕವಾದದ್ದು ಎಂಬುದನ್ನು ನಿರ್ಧರಿಸಲು ಒಂದು ಮಾನದಂಡ ಸಿದ್ಧಗೊಂಡಿದೆ. ಅದೇ ನೀವು ಪರಿಸರ ಕುರಿತು ಎಷ್ಟು ಜಾಗೃತರಾಗಿದ್ದೀರಿ ಎಂಬುದು. ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಪರಿಸರ ಸ್ನೇಹಿಯಾಗಿದ್ದೀರಾ ಇಲ್ಲವೆ ಅದಕ್ಕೆ ವಿರೋಧಿಯಾಗಿದ್ದೀರಾ? ನೀವು ಅದಕ್ಕೆ ವಿರುದ್ಧವಾಗಿದ್ದರೆ ಸಮಾಜದಲ್ಲಿ ಅದು ಕೆಟ್ಟದ್ದೆಂದು ಪರಿಗಣಿಸಲಾಗುತ್ತದೆ. ಅದರ ಪರಿಣಾಮದ ರೂಪದಲ್ಲಿ ಇಂದು ಪರಿಸರಸ್ನೇಹಿ ಗಣೇಶನನ್ನು ನಾನು ನೋಡುತಿದ್ದೇನೆ. ಇದೊಂದು ಅಭಿಯಾನದಂತೆ ಸಾಗುತ್ತಿದೆ. ನೀವು ಯುಟ್ಯೂಬ್ ನೋಡಿದರೆ ಪ್ರತಿ ಮನೆಗಳಲ್ಲೂ ಮಕ್ಕಳು ಮಣ್ಣು ತಂದು ಗಣೇಶನನ್ನು ತಯಾರಿಸುತ್ತಿದ್ದಾರೆ. ಅದಕ್ಕೆ ಬಣ್ಣ ಬಳಿಯುತ್ತಿದ್ದಾರೆ. ಒಬ್ಬರು ನೈಸರ್ಗಿಕ ಬಣ್ಣಗಳನ್ನು ಹಚ್ಚುತ್ತಿದ್ದರೆ ಇನ್ನೊಬ್ಬರು ಬಣ್ಣದ ಕಾಗದಗಳನ್ನು ಅಂಟಿಸುತ್ತಿದ್ದಾರೆ. ವಿಭಿನ್ನ ಪ್ರಕಾರದ ಪ್ರಯೋಗಗಳು ಮನೆ ಮನೆಯಲ್ಲೂ ನಡೆಯುತ್ತಿವೆ. ಒಂದು ರೀತಿ ಈ ಗಣೇಶೋತ್ಸವದಲ್ಲಿ ಪರಿಸರ ಜಾಗೃತಿ ಬೃಹತ್ ಕಲಿಕೆಯಂತೆ ಕಂಡುಬರುತ್ತಿದೆ. ಹಿಂದೆಂದೂ ಇದು ಕಂಡುಬಂದಿಲ್ಲ. ಮಾಧ್ಯಮಗಳೂ ಕೂಡ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಕೊಳ್ಳುವಂತೆ ಜನರನ್ನು ಪ್ರೇರೇಪಿಸುತ್ತಿವೆ ಮತ್ತು ಮಾರ್ಗದರ್ಶನ ತೋರುತ್ತ್ತಿವೆ. ನೋಡಿ ಎಂಥ ಮಹತ್ವಪೂರ್ಣ ಬದಲಾವಣೆಯಾಗಿದೆ. ಇದೊಂದು ಧನಾತ್ಮಕ ಬದಲಾವಣೆಯಾಗಿದೆ. ನಾನು ಹೇಳಿದಂತೆ ನಮ್ಮ ದೇಶ ಕೋಟಿಗಟ್ಟಲೆ ತೀಕ್ಷ್ಣಮತಿಯ ಪ್ರತಿಭಾವಂತರಿಂದ ತುಂಬಿದೆ ಮತ್ತು ಹೊಸ ಪ್ರಯೋಗಗಳು ಸಂತೋಷ ನೀಡುತ್ತವೆ. ನನಗೆ ಯಾರೋ ಹೇಳಿದ್ದರು. ನಮ್ಮಲ್ಲಿ ಓರ್ವ ವಿಶಿಷ್ಟವಾದ ಇಂಜಿನಿಯರ್ ಇದ್ದಾರೆ ಎಂದು. ಅವರು ವಿಶಿಷ್ಟ ಮಣ್ಣನ್ನು ಶೇಖರಿಸಿ, ಅದರ ಸಂಯೋಜನೆ ಮಾಡಿ, ಜನರಿಗೆ ಗಣೇಶ ತಯಾರಿಸುವ ತರಬೇತಿ ನೀಡುತ್ತಿದ್ದಾರೆ. ಜನರು ಇಂಥ ಗಣೇಶ ಮೂರ್ತಿಗಳನ್ನು ಒಂದು ಪುಟ್ಟ ಬಕೆಟ್‌ನಲ್ಲಿ ವಿಸರ್ಜಿಸಿದಾಗ ಅವು ಕೂಡಲೇ ನೀರಿನಲ್ಲಿ ಕರಗಿಹೋಗುತ್ತವೆ. ಅವರು ಇಲ್ಲಿಗೆ ನಿಲ್ಲಲಿಲ್ಲ, ಅದರಲ್ಲಿ ಒಂದು ತುಳಸಿಯ ಸಸಿ ನೆಟ್ಟು ಗಿಡ ಬೆಳೆಸಿದರು. 3 ವರ್ಷಗಳ ಹಿಂದೆ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿದ್ದೆ. ಈ ಅಕ್ಟೋಬರ್ 2ಕ್ಕೆ ಅದಕ್ಕೆ 3 ವರ್ಷ ತುಂಬುತ್ತವೆ. ಈಗ ಅದರ ಸಕಾರಾತ್ಮಕ ಪರಿಣಾಮ ಗೋಚರಿಸುತ್ತಿದೆ. ಶೌಚಾಲಯದ ಸಂಖ್ಯೆ ಶೇಕಡಾ 39ರಿಂದ ಸರಿಸುಮಾರು ಶೇಕಡಾ 67ರವರೆಗೂ ಏರಿದೆ. 2 ಲಕ್ಷ 30 ಸಾವಿರಕ್ಕಿಂತ ಹೆಚ್ಚು ಗ್ರಾಮಗಳು ಬಯಲು ಶೌಚ ಮುಕ್ತ ಎಂದು ಘೋಷಿಸಿವೆ. 

ಕೆಲ ದಿನಗಳ ಹಿಂದೆ, ಗುಜರಾತ್‌ನಲ್ಲಿ ಭಯಂಕರ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಸಾಕಷ್ಟು ಜನರು ಅಸುನೀಗಿದರು. ಆದರೆ ಪ್ರವಾಹ ತಗ್ಗಿದ ಮೇಲೆ ಎಲ್ಲೆಡೆ ಸಾಕಷ್ಟು ಕೊಳಕು (ಗಲೀಜು) ತುಂಬಿಬಿಟ್ಟಿತ್ತು. ಇಂಥ ಸಮಯದಲ್ಲಿ ಗುಜರಾತ್‌ನ ಬನಾಸ್‌ಕಾಂಠಾ ಜಿಲ್ಲೆಯ ಧಾನೆರಾದಲ್ಲಿ ಜಮೀಯತ್ ಉಲೇಮಾ ಎ ಹಿಂದ್ ಕಾರ್ಯಕರ್ತರು ಕಟಿಬದ್ಧರಾಗಿ ಪ್ರವಾಹಪೀಡಿತ 22 ದೇವಸ್ಥಾನಗಳು ಮತ್ತು 3 ಮಸೀದಿಗಳ ಸಂಪೂರ್ಣ ಸ್ವಚ್ಛತೆಯನ್ನು ಮಾಡಿದರು. ತಮ್ಮ ಬೆವರು ಹರಿಸಿ ಎಲ್ಲರೂ ದುಡಿದರು. ಎಲ್ಲರಿಗೂ ಪ್ರೇರಣಾದಾಯಕವಾದ, ಸ್ವಚ್ಛತೆಗಾಗಿ ಏಕತೆಯ ಉತ್ತಮ ಉದಾಹರಣೆಯನ್ನು ಜಮೀಯತ್ ಉಲೇಮಾ ಎ ಹಿಂದ್‌ನ ಎಲ್ಲ ಕಾರ್ಯಕರ್ತರು ಸಾಕಾರಗೊಳಿಸಿದರು. ಸ್ವಚ್ಛತೆಗಾಗಿ ಸಮರ್ಪಣಾ ಭಾವದಿಂದ ಮಾಡಿದಂತಹ ಪ್ರಯತ್ನ, ಇದು ನಮ್ಮ ಆಂತರಿಕ ಸ್ವಭಾವವಾಗಿಬಿಟ್ಟರೆ ನಮ್ಮ ದೇಶ ಉತ್ತುಂಗಕ್ಕೇರಬಹುದಾಗಿದೆ. 

ನನ್ನ ಪ್ರಿಯ ದೇಶವಾಸಿಗಳೇ, ಎಲ್ಲರಿಗೂ ನಾನೊಂದು ಆಹ್ವಾನ ನೀಡುತ್ತಿದ್ದೇನೆ. ಮತ್ತೊಮ್ಮೆ ಈ ಬಾರಿಯ ಅಕ್ಟೋಬರ್ 2ರ ಗಾಂಧಿ ಜಯಂತಿಗೆ 15-20 ದಿನ ಮೊದಲು, ಹಿಂದೆ ಹೇಗೆ ನೀರು ಕೊಡುವುದು ಪರಮಾತ್ಮನ ಸೇವೆ ಮಾಡಿದಂತೆ ಎಂದು ಹೇಳುತ್ತಿದ್ದರೋ, ಹಾಗೆ ಸ್ವಚ್ಛತೆಯೇ ಸೇವೆ ಎಂಬ ದೃಷ್ಟಿಯಿಂದ ಆಂದೋಲನ ಕೈಗೊಳ್ಳಿ. ದೇಶಾದ್ಯಂತ ಸ್ವಚ್ಛತೆಯ ವಾತಾವರಣ ಮೂಡಿಸಿ. ಎಲ್ಲೇ ಅವಕಾಶ ಸಿಗಲಿ, ಎಂಥದೇ ಅವಕಾಶ ಸಿಗಲಿ ಎಂದು ಅವಕಾಶಗಳನ್ನು ನಾವು ಹುಡುಕಬೇಕು. ಆದರೆ ಎಲ್ಲರೂ ಒಗ್ಗೂಡಬೇಕು. ಇದನ್ನು ದೀಪಾವಳಿ ಹಬ್ಬದ ಸಿದ್ಧತೆ ಅಂದುಕೊಳ್ಳಿ, ನವರಾತ್ರಿಯ ತಯಾರಿ, ದುರ್ಗಾ ಪೂಜೆಯ ತಯಾರಿ ಎಂದುಕೊಳ್ಳಿ. ಶ್ರಮದಾನ ಮಾಡಿ. ರಜಾ ದಿನ ಇಲ್ಲವೆ ರವಿವಾರ ಒಂದುಗೂಡಿ ಒಟ್ಟಿಗೇ ಕೆಲಸ ಮಾಡಿ. ಅಕ್ಕಪಕ್ಕದ ಗಲ್ಲಿಗಳಿಗೆ ಹೋಗಿ, ಹಳ್ಳಿಗಳಿಗೆ ಹೋಗಿ ಆದರೆ ಒಂದು ಆಂದೋಲನದ ರೂಪದಲ್ಲಿ ಕೆಲಸ ಮಾಡಿ. ಅಕ್ಟೋಬರ್ 2, ಗಾಂಧಿ ಜಯಂತಿಗೆ ಮೊದಲೇ 15-20 ದಿನಗಳಲ್ಲಿ ಸ್ವಚ್ಛತೆಯ ಆಂದೋಲನ ಸೃಷ್ಟಿಸಿ, ಗಾಂಧೀಜಿ ಕನಸಿನಂತೆ ಅಕ್ಟೋಬರ್ 2ನ್ನು ರೂಪಿಸಲು ನಾನು ಎಲ್ಲ ಸರ್ಕಾರೇತರ ಸಂಸ್ಥೆಗಳಿಗೆ, ಶಾಲೆಗಳಿಗೆ, ಕಾಲೇಜುಗಳಿಗೆ, ಸಾಮಾಜಿಕ, ಸಾಂಸ್ಕೃತಿಕ, ರಾಜತಾಂತ್ರಿಕ ಸಂಘ ಸಂಸ್ಥೆಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಕಲೆಕ್ಟರ್‌ಗಳಿಗೆ, ಸರಪಂಚರಿಗೆ ಹಾಗೂ ಪ್ರತಿಯೊಬ್ಬರಿಗೂ ಆಗ್ರಹಿಸುತ್ತೇನೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಮೈಗೌ ಡಾಟ್ ಇನ್ ನಲ್ಲಿ ಒಂದು ವಿಭಾಗವನ್ನು ಸೃಷ್ಟಿಸಿದೆ. ಇಲ್ಲಿ ನೀವು ಶೌಚಾಲಯ ನಿರ್ಮಿಸಿದ ನಂತರ ನೀವು ನಿಮ್ಮ ಹೆಸರು ಮತ್ತು ಯಾರಿಗೆ ಸಹಾಯ ಮಾಡಿದ್ದೀರಿ ಅವರ ಹೆಸರನ್ನು ನೊಂದಾಯಿಸಬಹುದಾಗಿದೆ. ನನ್ನ ಸಾಮಾಜಿಕ ಜಾಲತಾಣದ ಸ್ನೇಹಿತರು ಒಂದು ಅಭಿಯಾನವನ್ನೂ ಆರಂಭಿಸಬಹುದು. ವರ್ಚುವಲ್ ವರ್ಲ್ಡ್ ನೆಲೆಗಟ್ಟಿನಲ್ಲಿ ಕೆಲಸವಾಗಲಿ ಎಂಬುದಕ್ಕೆ ಪ್ರೇರಣೆ ನೀಡಬಹುದಾಗಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ’ಸ್ವಚ್ಛ ಸಂಕಲ್ಪದಿಂದ ಸ್ವಚ್ಛ ಸಿದ್ಧಿ’ ವಿಷಯಾಧಾರಿಸಿ ಪ್ರಬಂಧ ಸ್ಪರ್ಧೆ, ಲಘು ಚಿತ್ರ ನಿರ್ಮಾಣದ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಿದೆ. ಇದರಲ್ಲಿ ನೀವು ಬೇರೆಬೇರೆ ಭಾಷೆಗಳಲ್ಲಿ ಪ್ರಬಂಧ ಬರೆಯಬಹುದು. ಇದರಲ್ಲಿ ಯಾವುದೇ ವಯೋಮಾನದ ನಿರ್ಬಂಧವಿಲ್ಲ. ನೀವು ಲಘು ಚಿತ್ರಗಳನ್ನು ನಿಮ್ಮ ಮೊಬೈಲ್ ಬಳಸಿಯೇ ನಿರ್ಮಿಸಬಹುದು. ಸ್ವಚ್ಛತೆಯ ಪ್ರೇರಣೆ ನೀಡುವ 2-3 ನಿಮಿಷದ ಚಿತ್ರ ನಿರ್ಮಿಸಬಹುದು. ಅದು ಯಾವುದೇ ಭಾಷೆಯಲ್ಲಿರಬಹುದು ಇಲ್ಲವೆ ಮೂಕಿ ಚಿತ್ರವೂ ಆಗಿರಬಹುದು. ಈ ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ ಉತ್ತಮ ಮೂವರನ್ನು ಆಯ್ಕೆ ಮಾಡಲಾಗುವುದು. ಜಿಲ್ಲಾಮಟ್ಟದಲ್ಲಿ 3 ಮಂದಿ ಮತ್ತು ರಾಜ್ಯದಿಂದ ಮೂವರನ್ನು ಆಯ್ದು ಅವರಿಗೆ ಪುರಸ್ಕಾರ ನೀಡಲಾಗುವುದು. ಸ್ವಚ್ಛತೆಯ ಅಭಿಯಾನದ ಈ ರೂಪದೊಂದಿಗೂ ನೀವು ಒಗ್ಗೂಡಿ ಎಂದು ನಾನು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ. 

ಈ ಬಾರಿ ಅಕ್ಟೋಬರ್ 2 ಗಾಂಧಿ ಜಯಂತಿಯನ್ನು ಸ್ವಚ್ಛ ಅಕ್ಟೋಬರ್ 2 ಆಗಿ ಆಚರಿಸುವ ಸಂಕಲ್ಪ ಕೈಗೊಳ್ಳಿ ಮತ್ತು ಅದಕ್ಕಾಗಿ ಸೆಪ್ಟೆಂಬರ್ 15ರಿಂದ ’ಸ್ವಚ್ಛತೆಯೇ ಸೇವೆ’ ಎಂಬ ಮಂತ್ರವನ್ನು ಮನೆಮನೆಗೂ ತಲುಪಿಸಿ ಎಂದು ನಾನು ಮತ್ತೊಮ್ಮೆ ಹೇಳಬಯಸುತ್ತೇನೆ. ಸ್ವಚ್ಛತೆಗಾಗಿ ಯಾರಾದರೂ ಮುಂದಡಿಯಿಡಿ. ಸ್ವಯಂ ಪರಿಶ್ರಮದಿಂದ ಇದರಲ್ಲಿ ಪಾಲ್ಗೊಳ್ಳಿ. ಗಾಂಧಿ ಜಯಂತಿಯ ಈ ಅಕ್ಟೋಬರ್ 2 ಹೇಗೆ ಮಿನುಗುವುದು ಎಂದು ನೀವೇ ನೋಡಿ. 15 ದಿನಗಳ ’ಸ್ವಚ್ಛತೆಯೇ ಸೇವೆ’ ಎಂಬ ಈ ಅಭಿಯಾನದ ನಂತರ ಅಕ್ಟೋಬರ್ 2ರಂದು ಗಾಂಧಿ ಜಯಂತಿ ಆಚರಿಸಿದಾಗ ಪೂಜ್ಯ ಬಾಪು ಅವರಿಗೆ ಶೃದ್ಧಾಂಜಲಿ ಅರ್ಪಿಸುವಾಗ ನಮ್ಮಲ್ಲಿ ಪವಿತ್ರವಾದ ಆನಂದ ದೊರೆಯುವ ಭಾವನೆ ಮೂಡುವುದನ್ನು ನೀವೇ ಕಲ್ಪಿಸಿಕೊಳ್ಳಿ. 

ನನ್ನ ಪ್ರಿಯ ದೇಶಬಾಂಧವರೇ, ಇಂದು ನಾನು ವಿಶೇಷವಾಗಿ ನಿಮ್ಮೆಲ್ಲರಿಂದ ಋಣ ಸ್ವೀಕರಿಸಬಯಸುತ್ತೇನೆ. ಹೃದಯಪೂರ್ವಕವಾಗಿ ನಿಮಗೆ ಧನ್ಯವಾದ ಅರ್ಪಿಸಬಯಸುತ್ತೇನೆ. ನೀವು ಸುದೀರ್ಘ ಕಾಲದಿಂದ ಮನದ ಮಾತಿನೊಂದಿಗೆ ಜೊತೆಯಾಗಿದ್ದೀರಿ ಎಂಬುದಕ್ಕಲ್ಲ, ನಾನು ಆಭಾರಿಯಾಗಿರುವುದು ಏಕೆಂದರೆ ಮನದ ಮಾತು ಕಾರ್ಯಕ್ರಮದೊಂದಿಗೆ ದೇಶದ ಮೂಲೆಮೂಲೆಯ ಜನ ಒಗ್ಗೂಡುತ್ತಾರೆ. ಇದನ್ನು ಕೇಳುವವರ ಸಂಖ್ಯೆಯಂತೂ ಕೋಟಿಗಟ್ಟಲೆ ಇದೆ. ಅದರಲ್ಲಿ ಲಕ್ಷಾಂತರ ಜನರು ನನಗೆ ಆಗಾಗ ಪತ್ರ ಬರೆಯುತ್ತಾರೆ, ಸಂದೇಶ ಕಳುಹಿಸುತ್ತಾರೆ, ಕೆಲವೊಮ್ಮೆ ಫೋನ್ ಮೂಲಕ ಸಂದೇಶಗಳು ಬರುತ್ತವೆ. ಇದು ನನಗೆ ಒಂದು ಬಗೆಯ ನಿಧಿ ಇದ್ದಂತೆ. ದೇಶದ ಜನತೆಯ ಮನವನ್ನರಿಯಲು ಇದು ನನಗೆ ಒಂದು ದೊಡ್ಡ ಅವಕಾಶವಾಗಿ ಪರಿಣಮಿಸಿದೆ. ನೀವು ಮನದ ಮಾತಿನ ದಾರಿ ಕಾಯುವುದಕ್ಕಿಂತ ಹೆಚ್ಚಾಗಿ ನಾನು ನಿಮ್ಮ 

ಸಂದೇಶಗಳಿಗಾಗಿ ಕಾಯುತ್ತೇನೆ. ನಾನು ಕಾತರನಾಗಿರುತ್ತೇನೆ. ಏಕೆಂದರೆ ನಿಮ್ಮ ಪ್ರತಿ ಮಾತಿನಿಂದಲೂ ನನಗೆ ಏನಾದರೂ ಕಲಿಯಲು ಸಿಗುತ್ತದೆ. ನಾನು ಏನು ಕೆಲಸ ಮಾಡುತ್ತಿದ್ದೆನೆಯೋ ಅದಕ್ಕೆ ಕಂಕಣಬದ್ಧನಾಗಿರಲು ಅವಕಾಶ ದೊರೆಯುತ್ತದೆ. ನಿಮ್ಮ ಸಣ್ಣ ಪುಟ್ಟ ಮಾತುಗಳೂ ಸಾಕಷ್ಟು ವಿಷಯಗಳನ್ನು ಹೊಸ ರೀತಿಯಲ್ಲಿ ಆಲೋಚಿಸಲು ನನಗೆ ಸಹಾಯಕಾರಿಯಾಗುತ್ತವೆ. ಅದಕ್ಕೆಂದೇ ನಾನು ನಿಮ್ಮ ಈ ಪಾಲುದಾರಿಕೆಗಾಗಿ ಆಭಾರಿಯಾಗಿದ್ದೇನೆ. ನಿಮ್ಮ ಋಣವನ್ನು ಸ್ವೀಕರಿಸುತ್ತೇನೆ. ನಿಮ್ಮ ಮಾತುಗಳನ್ನು ನಾನು ಸ್ವತಃ ನೋಡುವ, ಕೇಳುವ, ಓದುವ, ಅರಿಯುವ ಪ್ರಯತ್ನ ಮಾಡುತ್ತೇನೆ. ಎಂತೆಂಥ ವಿಷಯಗಳು ಬರುತ್ತವೆ. ಈಗ ಈ ಕರೆ ಕೇಳಿಸಿಕೊಳ್ಳಿ, ಬಹುಶಃ ನೀವೂ ನಿಮ್ಮನ್ನು ಇದರಲ್ಲಿ ಕಾಣಬಹುದು. ಓಹ್, ನಾನೂ ಇಂಥ ತಪ್ಪು ಕೆಲಸ ಮಾಡಿರಬಹುದೆಂದು ನಿಮಗನ್ನಿಸಬಹುದು. ಎಷ್ಟೋ ಸಾರಿ ಕೆಲ ವಿಷಯಗಳು ಎಷ್ಟು ಅಭ್ಯಾಸವಾಗಿಬಿಡುತ್ತವೆ ಎಂದರೆ ನಾವು ತಪ್ಪು ಮಾಡುತ್ತಿದ್ದೇವೆ ಎಂದು ನಮಗೆ ಅನ್ನಿಸುವುದೇ ಇಲ್ಲ. 

ಪ್ರಧಾನಮಂತ್ರಿಯವರೇ, ಪುಣೆಯಿಂದ ನಾನು ಅಪರ್ಣಾ ಮಾತಾಡುತ್ತಿದ್ದೇನೆ. ನಾನು ನನ್ನ ಸ್ನೇಹಿತೆಯ ಬಗ್ಗೆ ಹೇಳಬಯಸುತ್ತೇನೆ. ಅವಳು ಯಾವಾಗಲೂ ಜನರಿಗೆ ಸಹಾಯ ಮಾಡುವ ಪ್ರಯತ್ನ ಮಾಡುತ್ತಾಳೆ. ಆದರೆ ಅವಳ ಒಂದು ಅಭ್ಯಾಸ ಕಂಡು ನನಗೆ ಆಶ್ಚರ್ಯವಾಗುತ್ತದೆ. ನಾನು ಒಮ್ಮೆ ಅವಳೊಂದಿಗೆ ಶಾಪಿಂಗ್ ಮಾಡಲು ಮಾಲ್‌ಗೆ ಹೋಗಿದ್ದೆ. ಒಂದು ಸೀರೆ ಖರೀದಿಸಲು ಅವಳು 2 ಸಾವಿರ ರೂಪಾಯಿಗಳನ್ನು ಮತ್ತು ಪಿಜ್ಜಾಗಾಗಿ 450 ರೂಪಾಯಿಗಳನ್ನು ಆರಾಮವಾಗಿ ಖರ್ಚು ಮಾಡಿಬಿಟ್ಟಳು. ಆದರೆ ಮಾಲ್‌ಗೆ ಬರುವಾಗ ತೆಗೆದುಕೊಂಡ ಆಟೋದವನೊಂದಿಗೆ 5 ರೂಪಾಯಿಗಾಗಿ ತುಂಬಾ ಹೊತ್ತು ಚೌಕಾಶಿ ಮಾಡುತ್ತಿದ್ದಳು. ಹಿಂದಿರುಗಿ ಹೋಗುತ್ತಿದ್ದಾಗ ತರಕಾರಿ ಖರೀದಿಸಿದಳು ಮತ್ತೆ ಅದರಲ್ಲಿ ಚೌಕಾಶಿ ಮಾಡಿ 4-5 ರೂಪಾಯಿ ಉಳಿಸಿದಳು. ನನಗೆ ತುಂಬಾ ಬೇಜಾರೆನಿಸಿತು. ನಾವು ದೊಡ್ಡದೊಡ್ಡ ಸ್ಥಳಗಳಲ್ಲಿ ಏನೂ ಕೇಳದೆಯೇ ದೊಡ್ಡ ಮೊತ್ತವನ್ನು ತೆರುತ್ತೇವೆ ಮತ್ತು ನಮ್ಮ ಶ್ರಮಿಕ ಸೋದರ ಸೋದರಿಯರೊಂದಿಗೆ ಕೆಲವೇ ರೂಪಾಯಿಗಳಿಗಾಗಿ ಜಗಳವಾಡುತ್ತೇವೆ. ಅವರ ಮೇಲೆ ಅವಿಶ್ವಾಸ ತೋರುತ್ತೇವೆ. ನೀವು ನಿಮ್ಮ ಮನದ ಮಾತಿನಲ್ಲಿ ಈ ಕುರಿತು ಖಂಡಿತ ಮಾತನಾಡಿ.ಈ ದೂರವಾಣಿ ಕರೆಯನ್ನು ಕೇಳಿದ ನಂತರ ನೀವೆಲ್ಲರೂ ಆಶ್ಚರ್ಯಚಕಿತರಾಗಬಹುದು ಮತ್ತು ಖಂಡಿತಾ ಎಚ್ಚೆತ್ತುಕೊಳ್ಳಬಹುದು ಜೊತೆಗೆ ಮುಂದೆಂದೂ ಇಂತಹ ತಪ್ಪು ಮಾಡುವುದಿಲ್ಲವೆಂದು ಮನದಲ್ಲೇ ನಿರ್ಧರಿಸಿರಬಹುದು ಎಂಬುದರ ಬಗ್ಗೆ ನನಗೆ ಸಂಪೂರ್ಣ 
ವಿಶ್ವಾಸವಿದೆ. ನಮ್ಮ ಮನೆಯ ಸುತ್ತಮುತ್ತ ಯಾರಾದರೂ ಮಾರಾಟ ಮಾಡಲು ಬಂದಾಗ, ಗಸ್ತು ತಿರುಗಲು ಬಂದಾಗ, ಯಾರಾದರೂ ಚಿಕ್ಕ ಅಂಗಡಿಯವರು ಅಥವಾ ತರಕಾರಿ ಮಾರುವವರ ಜೊತೆ ಸಂಪರ್ಕ ಬಂದಾಗ, ಕೆಲವೊಮ್ಮೆ ಆಟೋ ಚಾಲಕರ ಜೊತೆ ಸಂಪರ್ಕ ಬಂದಾಗ, ಎಂದಾದರೂ ನಾವು ಕೆಲಸಗಾರರ ಸಂಪರ್ಕಕ್ಕೆ ಬಂದಾಗ, ನಾವು ಅವರ ಜೊತೆ 2 ರೂಪಾಯಿ ಕಡಿಮೆ ಮಾಡು, 5 ರೂಪಾಯಿ ಕಡಿಮೆ ಮಾಡು.. ಎಂದು ಬೆಲೆಯ ಚೌಕಾಸಿ ಮಾಡುತ್ತೇವೆ ಎಂದು ನಿಮಗೆ ಅನ್ನಿಸುವುದಿಲ್ಲವೇ? ಆದರೆ, ನಾವು ಯಾವುದಾದರೂ ದೊಡ್ಡ ರೆಸ್ಟೋರೆಂಟ್‌ಗೆ ತಿನ್ನಲು ಹೋದಾಗ, ಬಿಲ್‌ನಲ್ಲಿ ಏನು ಬರೆದಿದೆ ಎಂದು ಸಹ ನೋಡದೇ ಹಣ ಪಾವತಿಸುತ್ತೇವೆ. ಅಷ್ಟೇ ಅಲ್ಲ.. ಸೀರೆ ಕೊಳ್ಳಲು ಶೋರೂಮ್‌ಗೆ ಹೋದಾಗ ಯಾವುದೇ ಚೌಕಾಸಿ ಮಾಡುವುದಿಲ್ಲ ಆದರೆ ಯಾವುದಾದರೂ ಬಡವನ ಜೊತೆ ನಮ್ಮ ಸಂಪರ್ಕವಾದಾಗ 
ಚೌಕಾಸಿ ಮಾಡದೇ ಬಿಡುವುದಿಲ್ಲ. ಆ ಬಡವನ ಮನಸ್ಸಿನಲ್ಲಿ ಏನಾಗುತ್ತಿರಬಹುದೆಂದು ನೀವೆಂದಾದರೂ ಯೋಚಿಸಿದ್ದೀರಾ? ಅವರಿಗೆ 2 ರೂಪಾಯಿ ಅಥವಾ 5 ರೂಪಾಯಿಯ ಪ್ರಶ್ನೆಯಲ್ಲ, ಅವನು ಬಡವನಾಗಿದ್ದರಿಂದ ಅವನ ಪ್ರಾಮಾಣಿಕತೆಯ ಬಗ್ಗೆ ಸಂಶಯ ಪಟ್ಟಿದ್ದೀರಿ. 2 ರೂಪಾಯಿ - 5 ರೂಪಾಯಿ ನಿಮ್ಮ ಜೀವನದ ಮೇಲೆ ಏನೂ ಪ್ರಭಾವ ಬೀರುವುದಿಲ್ಲ ಆದರೆ, ನಿಮ್ಮ ಈ ಅಭ್ಯಾಸ ಅವರ ಮನಸ್ಸಿಗೆ ಎಷ್ಟು ಆಳವಾದ ನೋವು ಉಂಟು ಮಾಡಬಹುದೆಂದು ನೀವು ಎಂದಾದರೂ ಯೋಚಿಸಿದ್ದೀರಾ? ಮೇಡಂ, ಮನ ಮುಟ್ಟುವಂಥ ಇಂತಹ ದೂರವಾಣಿ ಕರೆ ಮಾಡಿ ಒಂದು ಸಂದೇಶ ನೀಡಿದ್ದಕ್ಕೆ ನಾನು ನಿಮಗೆ ಕೃತಜ್ಞನಾಗಿದ್ದೇನೆ. ನನ್ನ ದೇಶವಾಸಿಗಳಿಗೆ, ಬಡವರ ಜೊತೆ ಹೀಗೆ ವರ್ತಿಸುವ ಅಭ್ಯಾಸವಿದ್ದರೆ ಅದನ್ನಬಿಟ್ಟು ಬಿಡುತ್ತಾರೆಂದು ನನಗೆ ನಂಬಿಕೆಯಿದೆ. 

ನನ್ನ ಪ್ರಿಯ ಯುವ ಸ್ನೇಹಿತರೇ, 29 ಆಗಸ್ಟನ್ನು ನಮ್ಮ ಸಂಪೂರ್ಣ ದೇಶ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸುತ್ತಿದೆ. ಇದು ಮಹಾನ್ ಹಾಕಿಪಟು ಮತ್ತು ಹಾಕಿ ಪಂದ್ಯದ ಜಾದೂಗಾರ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನ. ಹಾಕಿ ಕ್ರೀಡೆಗಾಗಿ ಅವರು ನೀಡಿದ ಕೊಡುಗೆಗೆ ಸಾಟಿಯಿಲ್ಲ. ನಮ್ಮ ದೇಶದ ಹೊಸ ಪೀಳಿಗೆ ಕ್ರೀಡೆಗಳೊಂದಿಗೆ ಬೆರೆಯಲಿ ಎಂಬ ಉದ್ದೇಶದಿಂದ ನಾನಿದನ್ನು ಸ್ಮರಿಸುತ್ತಿದ್ದೇನೆ. ಕ್ರೀಡೆ ನಮ್ಮ ಜೀವನದ ಒಂದು ಭಾಗವಾಗಲಿ. ನಾವು ವಿಶ್ವದ ಯುವ ದೇಶವಾದರೆ, ನಮ್ಮ ಈ ಯೌವ್ವನ ಕ್ರೀಡೆಯ ಮೈದಾನದಲ್ಲೂ ಕಾಣಿಸಬೇಕು. ಕ್ರೀಡೆ ಎಂದರೆ ದೈಹಿಕ ಕ್ಷಮತೆ, ಮಾನಸಿಕ ಸನ್ನದ್ಧತೆ, ವ್ಯಕ್ತಿತ್ವ ವಿಕಸನ. ಇದಕ್ಕಿಂತಾ ಹೆಚ್ಚು ಇನ್ನೇನು ಬೇಕು? ಕ್ರೀಡೆ ಎಂಬುದು ಒಂದು ರೀತಿಯಲ್ಲಿ ಮನಸ್ಸುಗಳನ್ನು ಬೆರೆಸುವಂಥ ಮೂಲಿಕೆಯಾಗಿದೆ. ನಮ್ಮ ದೇಶದ ಯುವ ಪೀಳಿಗೆ ಕ್ರೀಡಾ ಜಗತ್ತಿನಲ್ಲಿ ಮುಂಬರಲಿ ಮತ್ತು ಇಂದಿನ 
ಕಂಪ್ಯೂಟರ್ ಯುಗದಲ್ಲಿ ಪ್ಲೇ-ಸ್ಟೇಶನ್‌ಗಿಂತ ಆಟವಾಡುವ ಬಯಲು (ಪ್ಲೇಯಿಂಗ್ ಫೀಲ್ಡ್) ಹೆಚ್ಚು ಮಹತ್ವಪೂರ್ಣವಾದುದು ಎಂದು ಹೇಳಲು ನಾನು ಬಯಸುತ್ತೇನೆ. ಕಂಪ್ಯೂಟರ್‌ನಲ್ಲಿ ಫೀಫಾ ಆಡಿರಿ ಆದರೆ ಎಂದಾದರೂ ಹೊರಗೆ ಮೈದಾನದಲ್ಲೂ ಫುಟ್ಬಾಲ್‌ನೊಂದಿಗೂ ನಿಮ್ಮ ಕೈಚಳಕ ತೋರಿಸಿ. ಕಂಪ್ಯೂಟರ್‌ನಲ್ಲಿ ಕ್ರಿಕೆಟ್ ಆಡುತ್ತಿರಬಹುದು ಆದರೆ, ಹೊರ ಮೈದಾನದಲ್ಲಿ, ಆಕಾಶದಡಿಯಲ್ಲಿ, ಕ್ರಿಕೆಟ್ ಆಡುವ ಮಜವೇ ಬೇರೇ. ಒಂದು ಕುಟುಂಬದಿಂದ ಮಕ್ಕಳು ಹೊರಗೆ ಹೋದಾಗ, ತಾಯಿ ಮೊದಲಿಗೆ, ನೀವು ಎಷ್ಟೊತ್ತಿಗೆ ವಾಪಸ್ಸು ಬರುತ್ತೀರಿ ಎಂದು ಕೇಳುವ ಕಾಲವೊಂದಿತ್ತು. ಆದರೆ ಇಂದು, ಮಕ್ಕಳು ಮನೆಗೆ ಬಂದೊಡನೆ ಒಂದು ಮೂಲೆಯಲ್ಲಿ ಕಾರ್ಟೂನ್ ಫಿಲಂ ನೋಡುತ್ತಾ ಕೂರುತ್ತಾರೆ ಅಥವಾ ಮೊಬೈಲ್ ಗೇಮ್ ಜೊತೆ ಅಂಟಿಕೊಂಡುಬಿಡುತ್ತಾರೆ. ಆಗ ತಾಯಿ ಕಿರುಚುತ್ತಾ ನೀನು ಯಾವಾಗ ಮನೆಯಿಂದ ಹೊರಗೆ ಹೋಗುತ್ತೀಯಾ ಎಂದು ಕೇಳುವ ಕಾಲ ಬಂದಿದೆ. ಒಂದು ಕಾಲದಲ್ಲಿ ತಾಯಿ ಮಗನನ್ನು ನೀನು ಯಾವಾಗ ಬರುತ್ತೀಯಾ ಎಂದು ಕೇಳುತ್ತಿದ್ದಳು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ತಾಯಿ, ಮಗನೇ ನೀನು ಯಾವಾಗ ಹೊರಗೆ ಹೋಗುತ್ತೀಯಾ ಎಂದು ಕೇಳುವಂತಾಗಿದೆ. ಕಾಲ ಬದಲಾಗಿದೆ. 

ಯುವ ಸ್ನೇಹಿತರೇ, ಕ್ರೀಡಾ ಸಚಿವಾಲಯ, ಪ್ರತಿಭಾವಂತ ಕ್ರೀಡಾ ಪಟುಗಳನ್ನು ಹುಡುಕಲು ಮತ್ತು ಅವರಿಗೆ ಪುಷ್ಟಿ ನೀಡಲು ಕ್ರೀಡಾ ಪ್ರತಿಭೆ ಶೋಧ ಪೋರ್ಟಲ್ ಒಂದನ್ನು ನಿರ್ಮಿಸಿದೆ. ನಮ್ಮ ದೇಶದ ಮಕ್ಕಳು ಯಾವುದಾದರೂ ಕ್ಷೇತ್ರದಲ್ಲಿ ಸ್ವಲ್ಪ ಸಾಧನೆ ಮಾಡಿದ್ದರೆ, ಅವರಲ್ಲಿ ಪ್ರತಿಭೆ ಇದ್ದರೆ, ಅವರು ಈ ಪೋರ್ಟಲ್‌ನಲ್ಲಿ ತಮ್ಮ ಸ್ವ-ಪರಿಚಯ ಅಥವಾ ವೀಡಿಯೋ ಅಪ್‌ಲೋಡ್ ಮಾಡಬಹುದು. ಆಯ್ಕೆಯಾದ ಹೊಸ ಆಟಗಾರರಿಗೆ ಕ್ರೀಡಾ ಸಚಿವಾಲಯ ತರಬೇತಿ ನೀಡುತ್ತದೆ ಮತ್ತು ಸಚಿವಾಲಯ ನಾಳೆಯೇ ಈ ಪೋರ್ಟಲ್ ಅನ್ನು ಉದ್ಘಾಟಿಸಲಿದೆ. ಅಕ್ಟೋಬರ್ 6ರಿಂದ 28ರ ವರೆಗೆ ನಮ್ಮ ಭಾರತದಲ್ಲಿ ಫೀಫಾ 17 ವರ್ಷದೊಳಗಿನವರ ವಿಶ್ವಕಪ್ ಆಯೋಜಿಸಲಾಗುತ್ತಿರುವುದು ನಮ್ಮ ಯುವಕರಿಗೆ ಸಂತಸದ ವಿಷಯವಾಗಿದೆ. ವಿಶ್ವಾದ್ಯಂತ 24 ತಂಡಗಳು ಭಾರತವನ್ನು ತಮ್ಮ ಮನೆಯನ್ನಾಗಿಸಿಕೊಳ್ಳಲಿವೆ. 

ಬನ್ನಿ, ವಿಶ್ವಾದ್ಯಂತ ಬರುವ ಯುವ ಅತಿಥಿಗಳನ್ನು, ಕ್ರೀಡಾ ಹುರುಪಿನೊಂದಿಗೆ ಸ್ವಾಗತಿಸೋಣ. ಕ್ರೀಡೆಯನ್ನು ಆನಂದಿಸೋಣ. ದೇಶದಲ್ಲಿ ಉತ್ಸವದ ವಾತಾವರಣ ಸೃಷ್ಠಿ ಮಾಡೋಣ. ನಾನಿಂದು ಕ್ರೀಡೆಗಳ ಬಗ್ಗೆ ಮಾತನಾಡುತ್ತಿದ್ದೇನೆಂದರೆ, ಕಳೆದ ವಾರ ನನ್ನ ಮನ ಮುಟ್ಟುವಂತಹ ಒಂದು ಘಟನೆ ನಡೆಯಿತು. ದೇಶವಾಸಿಗಳೊಂದಿಗೆ ನಾನದನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನನಗೆ ಬಹಳ ಚಿಕ್ಕ ವಯಸ್ಸಿನ ಕೆಲವು ಹೆಣ್ಣುಮಕ್ಕಳನ್ನು ಭೇಟಿ ಮಾಡುವ ಅವಕಾಶ ದೊರೆಯಿತು ಮತ್ತು ಅವರಲ್ಲಿ ಕೆಲವರು ಹಿಮಾಲಯದಲ್ಲಿ ಜನಿಸಿದವರಾಗಿದ್ದಾರೆ. ಸಮುದ್ರದ ಜೊತೆ ಎಂದೂ ನಂಟೇ ಇಲ್ಲದಂತಹವರು. ಇಂತಹ 6 ಹೆಣ್ಣುಮಕ್ಕಳು ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಧೈರ್ಯ, ಅವರ ಉತ್ಸಾಹ ನಮ್ಮೆಲ್ಲರನ್ನೂ ಪ್ರೇರೇಪಿಸುವಂತಿದೆ. ಈ 6 ಹೆಣ್ಣುಮಕ್ಕಳು, ಒಂದು ಚಿಕ್ಕ ದೋಣಿ ಐಎನ್‌ಎಸ್ ತಾರಿಣಿ ತೆಗೆದುಕೊಂಡು ಸಮುದ್ರವನ್ನು ದಾಟಲು ಹೊರಡುತ್ತಾರೆ. ಈ ಅಭಿಯಾನಕ್ಕೆ ’ನಾವಿಕಾ ಸಾಗರ ಪರಿಕ್ರಮ’ ಎಂದು ಹೆಸರಿಸಲಾಗಿದೆ. ಇವರು ವಿಶ್ವ ಪರ್ಯಟಣೆ ಮಾಡಿ ಎಷ್ಟೋ ತಿಂಗಳುಗಳ ನಂತರ ಭಾರತಕ್ಕೆ ಹಿಂದಿರುಗಲಿದ್ದಾರೆ. ಕೆಲವೊಮ್ಮೆ 40 ದಿನಗಳಷ್ಟು ಕಾಲ ನೀರಿನಲ್ಲಿ ಕಳೆಯಲಿದ್ದಾರೆ. ಕೆಲವೊಮ್ಮೆ 30 ದಿನಗಳ ಕಾಲ ನೀರಿನಲ್ಲಿ ಕಳೆಯಲಿದ್ದಾರೆ. ಸಮುದ್ರದ ಅಲೆಗಳ ನಡುವೆ, ನಮ್ಮ ಈ 6 ಹೆಣ್ಣುಮಕ್ಕಳು ಸಾಹಸ ಪ್ರದರ್ಶಿಸಲಿದ್ದಾರೆ. ಜಗತ್ತಿನಲ್ಲೇ ಇದು ಮೊದಲ ಬಾರಿಗೆ ನಡೆಯಲಿದೆ. ಈ ನಮ್ಮ ಹೆಣ್ಣುಮಕ್ಕಳ ಬಗ್ಗೆ ಯಾವ 

ಹಿಂದೂಸ್ತಾನಿಗೆ ತಾನೇ ಹೆಮ್ಮೆಯಾಗುವುದಿಲ್ಲ? ಈ ಹೆಣ್ಣುಮಕ್ಕಳ ಧೈರ್ಯಕ್ಕೆ ನಾನು ನಮನಗಳನ್ನು ಸಲ್ಲಿಸುತ್ತೇನೆ. ಜೊತೆಗೆ, ಅವರು ತಮ್ಮ ಅನುಭವಗಳನ್ನು ದೇಶದೊಂದಿಗೆ ಹಂಚಿಕೊಳ್ಳಲು ನಾನು ಹೇಳಿದ್ದೇನೆ. ಇದೊಂದು ರೀತಿಯ ಸಾಹಸ ಗಾಥೆ, ಸ್ವಂತ ಅನುಭವದ ಕಥೆಯಾದ್ದರಿಂದ ನೀವು ಅದನ್ನು ಓದಲಿ ಎಂಬುದಕ್ಕಾಗಿ ನಾನು ನರೇಂದ್ರ ಮೋದಿ ಆಪ್‌ನಲ್ಲಿ ಅವರ ಅನುಭವಗಳನ್ನು ಪ್ರಕಟಿಸುವ ವ್ಯವಸ್ಥೆ ಮಾಡುತ್ತೇನೆ. ಈ ಹೆಣ್ಣುಮಕ್ಕಳ ಕಥೆಯನ್ನು ನಿಮಗೆ ತಲುಪಿಸಲು ನನಗೆ ಬಹಳ ಸಂತೋಷವೆನಿಸುತ್ತದೆ. ಈ ಹೆಣ್ಣುಮಕ್ಕಳಿಗೆ ನನ್ನ ಅನಂತ ಅನಂತ ಶುಭಾಷಯಗಳು ಮತ್ತು ಅನಂತ ಆಶೀರ್ವಾದಗಳು. 

ನನ್ನ ಪ್ರಿಯ ದೇಶಬಾಂಧವರೇ, ಸೆಪ್ಟೆಂಬರ್ 5 ರಂದು ನಾವೆಲ್ಲ ಶಿಕ್ಷಕರ ದಿನಾಚರಣೆ ಆಚರಿಸುತ್ತೇವೆ. ನಮ್ಮ ದೇಶದ ಅಂದಿನ ರಾಷ್ಟ್ರಪತಿಗಳಾದ ರಾಧಾಕೃಷ್ಣನ್ ಅವರ ಜನ್ಮದಿನವಿದು. ಅವರು ರಾಷ್ಟ್ರಪತಿಗಳಾಗಿದ್ದರೂ ಜೀವನಪರ್ಯಂತ ತಮ್ಮನ್ನು ತಾವು ಶಿಕ್ಷಕರಾಗಿಯೇ ಬಿಂಬಿಸಿಕೊಳ್ಳುತ್ತಿದ್ದರು. ಅವರು ಎಂದಿಗೂ ಶಿಕ್ಷಕನಾಗಿಯೇ ಬದುಕಲು ಇಷ್ಟಪಡುತ್ತಿದ್ದರು. ಅವರು ಶಿಕ್ಷಣಕ್ಕಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಒಬ್ಬ ಅಧ್ಯಯನಶೀಲರು, ರಾಜಕೀಯ ತಜ್ಞರು, ಭಾರತದ ರಾಷ್ಟ್ರಪತಿಗಳಾಗಿದ್ದರೂ ಪ್ರತಿಕ್ಷಣವೂ ಶಿಕ್ಷಕನಾಗಿಯೇ ಕಳೆಯುತ್ತಿದ್ದರು. ನಾನು ಅವರಿಗೆ ನಮಿಸುತ್ತೇನೆ. 

ಮಹಾನ್ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟಿನ್ “It is the supreme art of the teacher to awaken joy in creative expression and knowledge”ಎಂದು ಹೇಳಿದ್ದರು. ತಮ್ಮ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ ಮತ್ತು ಜ್ಞಾನದ ಆನಂದವನ್ನು ಸೃಷ್ಟಿಸುವುದೇ ಒಬ್ಬ ಶಿಕ್ಷಕನ ಮಹತ್ವಪೂರ್ಣವಾದ ಗುಣವಾಗಿದೆ. ಈ ಬಾರಿ ನಾವು ಶಿಕ್ಷಕರ ದಿನಾಚರಣೆ ಆಚರಿಸುವಾಗ ಎಲ್ಲರೂ ಒಗ್ಗೂಡಿ ಒಂದು ಸಂಕಲ್ಪ ಮಾಡಬಹುದೇ? ಒಂದು ಮಿಶನ್ ರೂಪದಲ್ಲಿ ಅಭಿಯಾನವನ್ನು ಆರಂಭಿಸಬಹುದೇ? ಪರಿವರ್ತನೆಗಾಗಿ ಬೋಧನೆ, ಸಬಲೀಕರಣಕ್ಕಾಗಿ ಶಿಕ್ಷಣ, ಮುನ್ನಡೆಸಲು ಕಲಿಕೆ ಎಂಬ ಸಂಕಲ್ಪದೊಂದಿಗೆ ಈ ವಿಷಯವನ್ನು ಮುಂದುವರಿಸಬಹುದೇ? ಪ್ರತಿಯೊಬ್ಬರನ್ನೂ ೫ ವರ್ಷದ ಅವಧಿಗೆ ಒಂದು ಸಂಕಲ್ಪದೊಂದಿಗೆ ಜೋಡಿಸಿ, ಅದನ್ನು ಸಾಧಿಸುವ ದಾರಿ ತೋರಿ, ಅವರು ಅದನ್ನು ೫ ವರ್ಷಗಳಲ್ಲಿ ಸಾಧಿಸುವಂತೆ ಮಾಡಿ. ಜೀವನದಲ್ಲಿ ಸಫಲರಾಗುವ ಆನಂದ ಪಡೆಯಿರಿ- ಇಂಥ ವಾತಾವರಣವನ್ನು ನಮ್ಮ ಶಾಲೆ, ಕಾಲೇಜುಗಳು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಮಾಡಬಲ್ಲವು. ನಮ್ಮ ದೇಶದಲ್ಲಿ ನಾವು ಪರಿವರ್ತನೆ ಬಗ್ಗೆ ಮಾತನಾಡುವಾಗ ಕುಟುಂಬದಲ್ಲಿ ತಾಯಿಯ ನೆನಪಾದಂತೆ ಸಮಾಜದಲ್ಲಿ ಶಿಕ್ಷಕನ ನೆನಪಾಗುತ್ತದೆ. ಪರಿವರ್ತನೆಯಲ್ಲಿ ಒಬ್ಬ ಶಿಕ್ಷಕನ ಪಾತ್ರ ಬಹಳ ಮಹತ್ವಪೂರ್ಣವಾದದ್ದು. ಪ್ರತಿ ಶಿಕ್ಷಕನ ಜೀವನದಲ್ಲಿಯೂ ಅವರ ಸಹಜವಾದ ಪ್ರಯತ್ನದಿಂದ ಯಾರಾದರೂ ಯಶಸ್ವಿಯಾಗಿ ಪರಿವರ್ತನೆಯಾದಂತಹ ಘಟನೆಗಳು ನಡೆದೇ ಇರುತ್ತವೆ. ನಾವು ಸಾಮೂಹಿಕವಾಗಿ ಪ್ರಯತ್ನಿಸಿದರೆ, ದೇಶದ ಪರಿವರ್ತನೆಯಲ್ಲಿ ನಾವು ಬಹುದೊಡ್ಡ ಪಾತ್ರವಹಿಸಬಹುದು. ಬನ್ನಿ, ಪರಿವರ್ತನೆಗಾಗಿ ಬೋಧಿಸಿ ಎಂಬ ಮಂತ್ರದೊಂದಿಗೆ ಮುನ್ನಡೆಯೋಣ. 

ಪ್ರಧಾನಮಂತ್ರಿಗಳೇ ನಮಸ್ಕಾರ, ನನ್ನ ಹೆಸರು ಡಾಕ್ಟರ್ ಅನನ್ಯಾ ಅವಸ್ಥಿ. ನಾನು ಮುಂಬೈ ನಗರವಾಸಿ. ನಾನು ಹೊವಾರ್ಡ್ ವಿಶ್ವವಿದ್ಯಾಲಯದ ಇಂಡಿಯಾ ರಿಸರ್ಚ್ ಸೆಂಟರ್‌ಗಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಒಬ್ಬ ಸಂಶೋಧಕಿಯಾಗಿ ನನಗೆ ವಿತ್ತೀಯ ಕ್ರೋಢಿಕರಣ ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಯೋಜನೆಗಳಿಗೆ ಸಂಬಂಧಿಸಿದ ವಿತ್ತೀಯ ಸಮಾವೇಶದಲ್ಲಿ ವಿಶೇಷ ಅಭಿರುಚಿಯಿದೆ. 2014ರಲ್ಲಿ ಜನ್‌ಧನ್ ಯೋಜನೆ ಆರಂಭವಾಯಿತು. ಇದರಿಂದಾಗಿ ಭಾರತ ಆರ್ಥಿಕವಾಗಿ ಸುಭದ್ರವಾಗಿದೆಯೇ, ಇನ್ನಷ್ಟು ಸಶಕ್ತವಾಗಿದೆಯೇ, ಈ ಸಶಕ್ತೀಕರಣ ಮತ್ತು ಸೌಕರ್ಯಗಳು ನಗರ ಮತ್ತು ಗ್ರಾಮಗಳ ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ತಲುಪಿವೆಯೇ ಎಂಬುದು ನನ್ನ ಪ್ರಶ್ನೆ. ಧನ್ಯವಾದಗಳು 

ನನ್ನ ಪ್ರಿಯ ದೇಶವಾಸಿಗಳೇ, ’ಪ್ರಧಾನಮಂತ್ರಿ ಜನ್‌ಧನ್ ಯೋಜನೆ’ ವಿತ್ತೀಯ ಕ್ರೋಢೀಕರಣ ಇದು ಭಾರತದಲ್ಲೇ ಅಲ್ಲ, ಸಂಪೂರ್ಣ ವಿಶ್ವದ ಆರ್ಥಿಕ ತಜ್ಞರ ಚರ್ಚಾ ವಿಷಯವಾಗಿದೆ. 2014ರ ಆಗಸ್ಟ್ 28ರಂದು ಮನದಲ್ಲಿ ಒಂದು ಕನಸು ಹೊತ್ತು ಈ ಅಭಿಯಾನ ಪ್ರಾರಂಭಿಸಿದ್ದೆ. ನಾಳೆ ಆಗಸ್ಟ್ 28ಕ್ಕೆ ಈ ’ಪ್ರಧಾನಮಂತ್ರಿ ಜನ್‌ಧನ್ ಯೋಜನೆ’ಗೆ 3 ವರ್ಷಗಳು ತುಂಬುತ್ತವೆ. 30 ಕೋಟಿ ಹೊಸ ಕುಟುಂಬಗಳನ್ನು ಇದಕ್ಕೆ ಸೇರ್ಪಡೆಗೊಳಿಸಲಾಗಿದೆ. ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ವಿಶ್ವದ ಎಷ್ಟೋ ದೇಶಗಳ ಜನಸಂಖ್ಯೆಗಿಂತ ಈ ಸಂಖ್ಯೆ ದೊಡ್ಡದಾಗಿದೆ. 3 ವರ್ಷಗಳೊಳಗೆ ಸಮಾಜದ ಕಟ್ಟ ಕಡೆಯ ನನ್ನ ಬಡ ಸೋದರನೂ ದೇಶದ ಅರ್ಥವ್ಯವಸ್ಥೆಯ ಮುಖ್ಯವಾಹಿನಿಯ ಭಾಗವಾಗಿದ್ದಾನೆ, ಅವನ ಅಭ್ಯಾಸಗಳು ಬದಲಾಗಿವೆ, ಅವನು ಬ್ಯಾಂಕ್‌ನಲ್ಲಿ ವ್ಯವಹರಿಸಲಾರಂಭಿಸಿದ್ದಾನೆ, ಅವನು ಹಣದ ಉಳಿತಾಯ 
ಮಾಡುತ್ತಿದ್ದಾನೆ, ಅವನು ಹಣದ ಸುರಕ್ಷತೆಯನ್ನು ಅನುಭವಿಸುತ್ತಿದ್ದಾನೆ ಎಂಬುದರ ಕುರಿತು ಇಂದು ನನಗೆ ಬಹಳ ನೆಮ್ಮದಿ ಎನಿಸುತ್ತದೆ. ಕೈಯಲ್ಲಿ ಹಣವಿದ್ದರೆ, ಜೇಬಲ್ಲಿ, ಮನೆಯಲ್ಲಿ ಹಣವಿದ್ದರೆ, ವೃಥಾ ಖರ್ಚು ಮಾಡುವ ಮನಸ್ಸಾಗುತ್ತದೆ. ಈಗ ಸಂಯಮದಿಂದಿರುವ ವಾತಾವರಣ ಸೃಷ್ಟಿಯಾಗಿದೆ. ನಿಧಾನವಾಗಿ ಅವನಿಗೂ ಈ ಹಣ ತನ್ನ ಮಕ್ಕಳಿಗೆ ಉಪಯೋಗಕ್ಕೆ ಬರಬಹುದು ಮುಂಬರುವ ದಿನಗಳಲ್ಲಿ ಯಾವುದಾದರೂ ಒಳ್ಳೇ ಕೆಲಸ ಮಾಡಬೇಕಾದರೆ ಈ ಹಣ ಬಳಸಬಹುದು ಎಂದೆನಿಸಲಾರಂಭಿಸಿದೆ. ಇಷ್ಟೇ ಅಲ್ಲ, ಬಡವ ತನ್ನ ಜೇಬಿನಲ್ಲಿದ್ದ ರುಪೇ ಕಾರ್ಡ ನೋಡಿದಾಗಲೆಲ್ಲ ಶ್ರೀಮಂತರ ಸರಿಸಮಾನ ತನ್ನನ್ನು ಕಾಣುತ್ತಾನೆ. ಅವರ ಜೇಬಿನಲ್ಲಿ ಕ್ರೆಡಿಟ್ ಕಾರ್ಡ ಇದ್ದರೆ ನನ್ನ ಜೇಬಲ್ಲೂ ರುಪೇ ಕಾರ್ಡ್ ಇದೆ ಎಂಬ ಸ್ವಾಭಿಮಾನದ ಭಾವ ಅವನಲ್ಲಿ ಮೂಡುತ್ತದೆ. 

ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಲ್ಲಿ ನಮ್ಮ ಬಡ ಜನರ ಮೂಲಕ ಸುಮಾರು 65 ಸಾವಿರ ಕೋಟಿ ರೂಪಾಯಿಯಷ್ಟು ಮೊತ್ತ ಬ್ಯಾಂಕಿಗೆ ಜಮಾ ಆಗಿದೆ. ಒಂದು ರೀತಿಯಲ್ಲಿ ಇದು ಬಡವನ ಉಳಿತಾಯವಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಅವನ ಶಕ್ತಿಯಾಗಿದೆ. ಅಲ್ಲದೆ ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಲ್ಲಿ ಯಾರು ಖಾತೆ ತೆರೆದಿದ್ದಾರೋ ಅವರಿಗೆ ವಿಮಾ ಸೌಲಭ್ಯವೂ ದೊರೆತಿದೆ. ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಗಳಲ್ಲಿ ಒಂದು ರೂಪಾಯಿ, 30 ರೂಪಾಯಿ ಬಹಳ ಅಲ್ಪ ಮೊತ್ತದ ಪ್ರೀಮಿಯಂ ಆದರೂ ಅದು ಬಡವನ ಜೀವನದಲ್ಲಿ ಒಂದು ಹೊಸ ವಿಶ್ವಾಸವನ್ನು ಮೂಡಿಸುತ್ತದೆ. ಎಷ್ಟೋ ಕುಟುಂಬಗಳಲ್ಲಿ ಒಂದು ರೂಪಾಯಿಯ ವಿಮೆಯಿಂದಾಗಿ ಬಡವನಿಗೆ ಸಂಕಟ ಎದುರಾದಾಗ, ಕುಟುಂಬದಲ್ಲಿ ಯಜಮಾನ ತೀರಿಹೋದಾಗ ಕೆಲ ದಿನಗಳಲ್ಲೇ 2 ಲಕ್ಷ ರೂಪಾಯಿಗಳು ದೊರೆತಿವೆ. ’ಪ್ರಧಾನಮಂತ್ರಿ ಮುದ್ರಾ ಯೋಜನೆ’, ಸ್ಟಾರ್ಟ್ ಅಪ್ ಯೋಜನೆ’, ಸ್ಟ್ಯಾಂಡ್ ಅಪ್ ಯೋಜನೆ’ - ದಲಿತರಾಗಿರಲಿ, ಆದಿವಾಸಿಗಳಾಗಲಿ, ಮಹಿಳೆಯರಾಗಲಿ, ಓದು ಮುಗಿಸಿದ ಯುವಕರಾಗಲಿ, ತಮ್ಮ ಕಾಲ ಮೇಲೆ ತಾವು ನಿಂತು ಏನನ್ನಾದರೂ ಮಾಡಬಯಸುವ ಯುವಕರಾಗಲಿ, ಹೀಗೆ ಕೋಟಿಕೋಟಿ ಯುವಕರಿಗೆ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಯಾವುದೇ ಗ್ಯಾರಂಟಿಯಿಲ್ಲದೆ ಬ್ಯಾಂಕ್‌ಗಳಿಂದ ಹಣ ದೊರೆಯಿತು ಮತ್ತು ಅವರು ಸ್ವಾವಲಂಬಿಗಳಾದರು ಅಷ್ಟೇ ಅಲ್ಲ, ಇವರು ಒಂದಿಬ್ಬರಿಗೆ ಉದ್ಯೋಗ ನೀಡುವ ಸಫಲ ಪ್ರಯತ್ನವನ್ನೂ ಮಾಡಿದರು. ಕಳೆದ ದಿನಗಳಲ್ಲಿ ಬ್ಯಾಂಕಿನವರು ನನ್ನನ್ನು ಭೇಟಿ ಮಾಡಿದರು, ಜನ್‌ಧನ್ ಯೋಜನೆಯಿಂದಾಗಿ, ವಿಮೆಯಿಂದಾಗಿ ರುಪೆ ಕಾರ್ಡನಿಂದಾಗಿ, ಪ್ರಧಾನಮಂತ್ರಿ ಮುದ್ರಾ ಯೋಜನೆಯಿಂದಾಗಿ ಸಾಮಾನ್ಯ ಜನರಿಗೆ ಹೇಗೆ ಸಹಾಯವಾಗಿದೆ ಎಂಬುದರ ಕುರಿತು ಅವರು ಸಮೀಕ್ಷೆ ಮಾಡಿಸಿದ್ದಾರೆ. ಅದರಲ್ಲಿ ಬಹಳ ಪ್ರೇರಣಾತ್ಮಕ ವಿಷಯಗಳು ತಿಳಿದುಬಂದಿವೆ. ಇಂದು ಅಷ್ಟೊಂದು ಸಮಯವಿಲ್ಲ ಆದರೆ ನಾನು ಖಂಡಿತ ಬ್ಯಾಂಕ್‌ನವರೊಂದಿಗೆ ಇಂಥ ವಿಚಾರಗಳನ್ನು ಮೈಗೌ ಡಾಟ್ ಇನ್‌ಗೆ ಅಪ್‌ಲೋಡ್ ಮಾಡಿ, ಜನರು ಅದನ್ನು ಓದಲಿ ಎಂದು ಹೇಳುತ್ತೇನೆ. ಒಂದು ಯೋಜನೆ ವ್ಯಕ್ತಿಯ ಜೀವನದಲ್ಲಿ ಎಂಥ ಬದಲಾವಣೆ ತರುತ್ತದೆ, ಹೇಗೆ ಹೊಸ ಹುರುಪು ತುಂಬುತ್ತದೆ, ವ್ಯಕ್ತಿಗಳ ಜೀವನದಲ್ಲಿ ಹೇಗೆ ಸುಧಾರಣೆಯಾಗುತ್ತದೆ, ಜನರಿಗೆ ಇದರಿಂದ ಪ್ರೇರಣೆ ದೊರೆಯುತ್ತದೆ ಎಂಬ ಬಗ್ಗೆ ಸಾವಿರಾರು ಉದಾಹರಣೆಗಳು ನನ್ನ ಮುಂದೆ ಬಂದಿವೆ. ಅವನ್ನು ನಿಮಗೆ ತಲುಪಿಸುವ ಸಂಪೂರ್ಣ ಪ್ರಯತ್ನ ಮಾಡುತ್ತೇನೆ ಮತ್ತು ಇಂಥ ಪ್ರೇರಕ ಘಟನೆಗಳ ಲಾಭವನ್ನು ಮಾಧ್ಯಮದವರೂ ಪಡೆಯಬಹುದು. ಅವರೂ ಇಂಥವರ ಸಂದರ್ಶನ ಮಾಡಿ ಹೊಸ ಪೀಳಿಗೆಗೆ ಹೊಸ ಪ್ರೇರಣೆ ನೀಡಬಹುದಾಗಿದೆ. 

ನನ್ನ ಪ್ರಿಯ ದೇಶಬಂಧುಗಳೇ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಮಿಚ್ಛಾಮಿ ದುಕ್ಕಡಮ್, ಅನಂತ ಅನಂತ ಧನ್ಯವಾದಗಳು. 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"