ಪ್ರಧಾನಮಂತ್ರಿ ಲಾಫ್ವೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು 2018ರ ಏಪ್ರಿಲ್ 16-17ರಂದು ಸ್ಟಾಕ್ ಹೋಮ್ ಗೆ ಅಧಿಕೃತ ಭೇಟಿ ನೀಡಿದ್ದರು.
ಪ್ರಧಾನಮಂತ್ರಿ ಮೋದಿ ಮತ್ತು ಪ್ರಧಾನಮಂತ್ರಿ ಲಾಫ್ವೆನ್ ಅವರು ಏಪ್ರಿಲ್ 17ರಂದು ಭೇಟಿ ಮಾಡಿ, 2016ರಲ್ಲಿ ಮುಂಬೈನಲ್ಲಿ ಬಿಡುಗಡೆ ಮಾಡಿದ್ದ ತಮ್ಮ ಜಂಟಿ ಹೇಳಿಕೆಯನ್ನು ಸ್ಮರಿಸಿದರು ಮತ್ತು ಅದರ ಜಾರಿಯಲ್ಲಿ ಈವರೆಗೆ ಆಗಿರುವ ಪ್ರಗತಿಯನ್ನು ಸ್ವಾಗತಿಸಿ, ಸಹಕಾರದ ಸಮಗ್ರ ರಾಜಕೀಯ ಚೌಕಟ್ಟಾದ ಜಂಟಿ ಹೇಳಿಕೆಯ ಬಗ್ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಭಾರತ ಮತ್ತು ಸ್ವೀಡನ್ ಪ್ರಜಾಪ್ರಭುತ್ವ, ನೆಲದ ಕಾನೂನು, ಮಾನವ ಹಕ್ಕುಗಳಿಗೆ ಗೌರವ, ಬಹುತ್ವ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯ ಮೌಲ್ಯಗಳನ್ನು ಹಂಚಿಕೊಂಡಿವೆ. ಇಬ್ಬರೂ ಪ್ರಧಾನ ಮಂತ್ರಿಗಳು ಹವಾಮಾನ ಬದಲಾವಣೆ, 2030 ಕಾರ್ಯಕ್ರಮ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ, ಮಾನವ ಹಕ್ಕುಗಳು, ಲಿಂಗ ಸಮಾನತೆ, ಮಾನವೀಯ ವಿಷಯಗಳು,ಅಂತಾರಾಷ್ಟ್ರೀಯ ವ್ಯಾಪಾರ ಸೇರಿದಂತೆ ಪರಸ್ಪರ ಹಿತದ ಪ್ರಮುಖ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಸಂವಾದ ಮತ್ತು ಸಹಕಾರಕ್ಕಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಹವಾಮಾನ ಬದಲಾವಣೆ ತಡೆಗೆ ಜಾಗತಿಕ ಪ್ರಯತ್ನಗಳನ್ನು ತ್ವರಿತಗೊಳಿಸುವ ತುರ್ತು ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು ಮತ್ತು ಪ್ಯಾರಿಸ್ ಒಪ್ಪಂದಕ್ಕೆ ತಮ್ಮ ಇಬ್ಬರ ಸಮಾನ ನಿರಂತರ ಬದ್ಧತೆಯನ್ನು ಪ್ರತಿಪಾದಿಸಿದರು. ಎರಡೂ ಕಡೆಯವರು ಭದ್ರತಾ ನೀತಿಯ ಸಂವಾದವನ್ನು ಜಂಟಿ ಹೇಳಿಕೆಗನುಗುಣವಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದಲ್ಲಿ ಮುಂದುವರಿಸಲು ಸಮ್ಮತಿ ಸೂಚಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಆಪ್ತ ಸಹಕಾರಕ್ಕೆ ಸಮ್ಮತಿ ಸೂಚಿಸಿದರು. 2030 ಕಾರ್ಯಕ್ರಮದ ಅನುಷ್ಠಾನಕ್ಕೆ ಸದಸ್ಯ ರಾಷ್ಟ್ರಗಳಿಗೆ ಬೆಂಬಲ ನೀಡುವ ವಿಶ್ವಸಂಸ್ಥೆಯನ್ನು ಸಮರ್ಥಗೊಳಿಸುವುದನ್ನು ಖಾತ್ರಿ ಪಡಿಸಲು, ವಿಶ್ವಸಂಸ್ಥೆಯ ಮಹಾ ಪ್ರಧಾನಕಾರ್ಯದರ್ಶಿಯವರ ಸುಧಾರಣಾ ಪ್ರಯತ್ನಗಳ ಬಗ್ಗೆ ಗಮನ ಹರಿಸಿದರು. 21ನೇ ಶತಮಾನದ ವಾಸ್ತವಗಳಿಗೆ ವಿಶ್ವಸಂಸ್ಥೆಯನ್ನು ಹೆಚ್ಚು ಪ್ರತಿನಿಧಿತ್ವಗೊಳಿಸಲು, ಹೊಣೆಗಾರರನ್ನಾಗಿಸಲು, ಸಮರ್ಥ ಮತ್ತು ಸ್ಪಂದನಾತ್ಮಕವಾಗಿಸಲು ಅದರ ವಿಸ್ತರಣೆ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯವನ್ನೂ ಅವರು ಪುನರುಚ್ಚರಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (2021-22) ಶಾಶ್ವತ ವಲ್ಲದ ಸದಸ್ಯತ್ವಕ್ಕೆ ಭಾರತದ ಅಭ್ಯರ್ಥಿಕೆ ಮತ್ತು ವಿಸ್ತರಿತ ಮತ್ತು ಸುಧಾರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವದ ಬೆಂಬಲಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಲಾಫ್ವೆನ್ ಅವರಿಗೆ ಧನ್ಯವಾದ ಅರ್ಪಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು, ಜಾಗತಿಕ ರಫ್ತು ನಿಯಂತ್ರಣ, ಪ್ರಸರಣ ಮಾಡದಿರುವುದು ಮತ್ತು ನಿಶ್ಶಸ್ತ್ರೀಕರಣ ಉದ್ದೇಶಗಳನ್ನು ಬಲಪಡಿಸಲುಮತ್ತು ಬೆಂಬಲಿಸಲು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು ಹಾಗೂ ಈ ಕ್ಷೇತ್ರಗಳಲ್ಲಿ ಆಪ್ತವಾದ ಸಹಕಾರವನ್ನು ಎದಿರು ನೋಡುತ್ತಿರುವುದಾಗಿ ತಿಳಿಸಿದರು. ಆಸ್ಟ್ರೇಲಿಯಾ ಗುಂಪು (ಎ.ಜಿ.), ವಸ್ಸೇನಾರ್ ಒಪ್ಪಂದ (ಡಬ್ಲ್ಯುಎ), ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (ಎಂ.ಟಿ.ಸಿ.ಆರ್.) ಮತ್ತು ಖಂಡಾಂತರ ಕ್ಷಿಪಣಿ ಪ್ರಸರಣದ ವಿರುದ್ಧ ಹೇಗ್ ನೀತಿ ಸಂಹಿತೆ (ಎಚ್.ಸಿ.ಓ.ಸಿ.) ಸೇರಿದಂತೆ ಅಂತಾರಾಷ್ಟ್ರೀಯ ರಫ್ತು ನಿಯಂತ್ರಣ ಆಡಳಿತಕ್ಕೆ ಭಾರತದ ಇತ್ತೀಚಿನ ಸೇರ್ಪಡೆಯನ್ನು ಪ್ರಧಾನಮಂತ್ರಿ ಲಾಫ್ವೆನ್ ಅವರು ಸ್ವಾಗತಿಸಿದರು ಮತ್ತು ಪರಮಾಣು ಪೂರೈಕೆ ಗುಂಪಿ (ಎನ್.ಎಸ್.ಜಿ.)ನಲ್ಲಿ ಭಾರತದ ಸದಸ್ಯತ್ವಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಇಬ್ಬರೂ ಪ್ರಧಾನಮಂತ್ರಿಗಳು, ಭಯೋತ್ಪಾದನೆ ನಿಗ್ರಹ, ಭಯೋತ್ಪಾದಕ ಜಾಲಗಳ ಮತ್ತು ಆರ್ಥಿಕ ನೆರವಿಗೆ ಕಡಿವಾಣ ಮತ್ತು ಹಿಂಸಾತ್ಮಕ ವಿಧ್ವಂಸಕತೆ ತಡೆಗೆ ಬಲವಾದ ಅಂತಾರಾಷ್ಟ್ರೀಯ ಪಾಲುದಾರಿಕೆ ಮತ್ತು ಬೃಹತ್ ಏಕತೆಗೆ ಕರೆ ನೀಡಿದರು. ಭಯೋತ್ಪಾದನೆಯ ಬದಲಾಗುತ್ತಿರುವ ಬೆದರಿಕೆಯನ್ನು ಬಲವಾಗಿ ಎದುರಿಸಲು ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಕಾನೂನು ಚೌಕಟ್ಟನ್ನು ನಿಯಮಿತವಾಗಿ ನವೀಕರಿಸಬೇಕು ಎಂದು ಅವರು ಪ್ರತಿಪಾದಿಸಿದರು ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕೈಗೊಳ್ಳುವ ಯಾವುದೇ ಕ್ರಮಗಳು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿರಬೇಕೆಂದು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಎರಡೂ ರಾಷ್ಟ್ರಗಳು, ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ನಿರ್ಣಯದ ಕರಡನ್ನು (ಸಿಸಿಐಟಿ) ಆದಷ್ಟು ಬೇಗ ಆಖೈರುಗೊಳಿಸಲು ಕರೆ ನೀಡಿದರು. ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಉತ್ತೇಜಿಸಲು, ಅವರು ಈ ಕೆಳಗಿನ ಭಾರತ – ಸ್ವೀಡನ್ ಜಂಟಿ ಕ್ರಿಯಾ ಯೋಜನೆಗೆ ನಿರ್ಧರಿಸಿದರು. ಇದರಡಿ, ಭಾರತ ಮತ್ತು ಸ್ವೀಡನ್ ಸೂಕ್ತ ಸಚಿವರು, ಸಂಸ್ಥೆ ಮತ್ತು ಆಕ್ಟರ್ ಗಳ ಮೂಲಕ ಈ ಗುರಿಯನ್ನು ಹೊಂದಿದೆ:
ನಾವಿನ್ಯತೆ
- ನಾವಿನ್ಯತೆಯ ಮೂಲಕ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯಂಥ ಸಾಮಾಜಿಕ ಸವಾಲುಗಳನ್ನು ಎದುರಿಸಲು ಮತ್ತು ಸಮೃದ್ಧಿ ಮತ್ತು ಪ್ರಗತಿಗಾಗಿ ಪರಸ್ಪರರ ಬದ್ಧತೆಯ ಆಧಾರದಲ್ಲಿ, ಸುಸ್ಥಿರ ಭವಿಷ್ಯಕ್ಕಾಗಿ ಬಹು ಬಾಧ್ಯಸ್ಥ ನಾವಿನ್ಯ ಪಾಲುದಾರರನ್ನು ಆಹ್ವಾನಿಸುವುದು.
- ಸ್ವೀಡನ್ ಪೇಟೆಂಟ್ ನೋಂದಣಿ ಕಚೇರಿ ಮತ್ತು ಭಾರತದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆಯೊಂದಿಗೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದಡಿ ಬೌದ್ಧಿಕ ಆಸ್ತಿಯ ಹಕ್ಕಿನ ಕ್ಷೇತ್ರದಲ್ಲಿ ಸಂವಾದ ಮತ್ತು ಸಹಕಾರ ಕಾರ್ಯಗಳನ್ನು ನಡೆಸಲು.
ವಾಣಿಜ್ಯ ಮತ್ತು ಹೂಡಿಕೆ
- ಎರಡೂ ಕಡೆಗಳಿಂದ ವಾಣಿಜ್ಯ ಮತ್ತು ಹೂಡಿಕೆಗೆ ಅವಕಾಶ ನೀಡಲು ಅಂದರೆ ಇನ್ವೆಸ್ಟ್ ಇಂಡಿಯಾದಲ್ಲಿ ಸ್ವೀಡನ್ನಿನ ಹೂಡಿಕೆ ಮತ್ತು ಬ್ಯುಸೆನೆಸ್ ಸ್ವೀಡನ್ ನಲ್ಲಿ ಭಾರತದ ಹೂಡಿಕೆಗೆ ಉತ್ತೇಜನ.
- ಭಾರತ ಮತ್ತು ಸ್ವೀಡನ್ ವಾಣಿಜ್ಯ ಸಹಕಾರವನ್ನು ಸ್ಮಾರ್ಟ್ ನಗರಗಳು, ಡಿಜಿಟಲೀಕರಮ, ಕೌಶಲ ಅಭಿವೃದ್ಧಿ ಮತ್ತು ರಕ್ಷಣೆ ಕ್ಷೇತ್ರದಲ್ಲಿ ಭಾರತ – ಸ್ವೀಡನ್ ವಾಣಿಜ್ಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಭಾರತ – ಸ್ವೀಡನ್ ವಾಣಿಜ್ಯ ನಾಯಕರ ದುಂಡು ಮೇಜಿನ ಸಭೆ (ಐ.ಎಸ್.ಬಿ.ಎಲ್.ಆರ್.ಟಿ.) ಕಾರ್ಯಕ್ಕೆ ಉತ್ತೇಜಿಸುವುದು ಮತ್ತು ಅದರ ಬಾಂಧವ್ಯ, ಕಲ್ಪನೆ, ಪಾಲುದಾರಿಕೆ ಮತ್ತು ಶಿಫಾರಸುಗಳನ್ನು ಮುಂದೆ ತೆಗೆದುಕೊಂಡು ಹೋಗುವುದು.
ಸ್ಮಾರ್ಟ್ ನಗರಗಳು ಮತ್ತು ಮುಂದಿನ ಪೀಳಿಗೆಯ ಸಾರಿಗೆ
- ಸ್ಮಾರ್ಟ್ ನಗರಗಳಲ್ಲಿ ಚಾಲನೆ ಆಧಾರಿತ ನಗರಾಭಿವೃದ್ಧಿ, ವಾಯುಮಾಲಿನ್ಯ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ-ಇಂಧನ,ತ್ಯಾಜ್ಯ-ನೀರಿನ ಸಂಸ್ಕರಣೆ, ಡಿಸ್ಟ್ರಿಕ್ಟ್ ಕೂಲಿಂಗ್ ಮತ್ತು ಸರ್ಕ್ಯುಲರ್ ಆರ್ಥಿಕತೆಯಲ್ಲಿ ಸಹಕಾರದ ಶೋಧನೆ ಮತ್ತು ಜ್ಞಾನದ ವಿನಿಮಯ ಸೇರಿದಂತೆ ಮಾತುಕತೆಯ ಮೂಲಕ ಸಾಮರ್ಥ್ಯ ನಿರ್ಮಾಣ.
- ಎಲೆಕ್ಟ್ರೋ ಮೊಬಿಲಿಟಿ ಮತ್ತು ಪುನರ್ ನವೀಕರಿಸುವ ಇಂಧನ ಕ್ಷೇತ್ರಗಳಲ್ಲಿ ಸಹಕಾರದ ಶೋಧನೆ ಮತ್ತು ತಾಂತ್ರಿಕ ಜ್ಞಾನದ ವಿನಿಮಯ.
- ರೈಲ್ವೆ ಅಂದರೆ ರೈಲು ನೀತಿ ಅಭಿವೃದ್ಧಿ, ರೈಲ್ವೆಯ ಸುರಕ್ಷತೆ, ತರಬೇತಿ ಮತ್ತು ಕಾರ್ಯಾಚರಣೆ ಹಾಗೂ ನಿರ್ವಹಣೆ ಕ್ಷೇತ್ರದಲ್ಲಿನ ಸಹಕಾರದ ಶೋಧನೆ ಮತ್ತು ತಾಂತ್ರಿಕ ಅರಿವಿನ ವಿನಿಮಯ.
ಸ್ಮಾರ್ಟ್, ಸುಸ್ಥಿರ ಮತ್ತು ಪುನರ್ ನವೀಕರಿಸುವ ಇಂಧನ
- ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನ ಅಂದರೆ ಸ್ಮಾರ್ಟ್ ಮೀಟರಿಂಗ್, ಬೇಡಿಕೆಯ ಸ್ಪಂದನ, ವಿದ್ಯುತ್ ಗುಣಮಟ್ಟ ನಿರ್ವಹಣೆ, ಯಾಂತ್ರೀಕೃತ ವಿತರಣೆ, ವಿದ್ಯುತ್ ಚಾಲಿತ ವಾಹನ / ಚಾರ್ಜಿಂಗ್ ಮೂಲಸೌಕರ್ಯಗಳಲ್ಲಿ ಹಾಗೂ ಸಂಶೋಧನೆ, ಸಾಮರ್ಥ್ಯ ವರ್ಧನೆ, ನೀತಿ ಸಹಕಾರ ಮತ್ತು ನವೀಕರಣದ ಏಕೀಕರಣದ ಪ್ರದರ್ಶನ ಮತ್ತು ಅಭಿವೃದ್ಧಿಯ ಮೇಲೆ ಪರಸ್ಪರ ಸಹಯೋಗವನ್ನು ತೊಡಗಿಸಿಕೊಳ್ಳುವುದು. ವ್ಯಾಪಾರ ವಿನ್ಯಾಸ ಸೇರಿದಂತೆ ಮಾರುಕಟ್ಟೆಯ ವಿನ್ಯಾಸದ ಅವಶ್ಯಕತೆಯ ಬಗ್ಗೆ ಅರಿಯುವುದು.
- ಭಾರತ – ಸ್ವೀಡನ್ ನಾವಿನ್ಯತೆಯ ವೇಗ, ನವೀಕರಿಸಬಹುದಾದ ಇಂಧನ ಬಳಕೆ ಮತ್ತು ಇಂಧನ ಧಕ್ಷತೆಗಾಗಿ ತಂತ್ರಜ್ಞಾನದ ಮೇಲೆ ಗಮನ ಹರಿಸುವ ಮೂಲಕ ಹೊಸ ನಾವಿನ್ಯತೆಯ ಇಂಧನ ತಂತ್ರಜ್ಞಾನದ ವಾಣಿಜ್ಯ ಸಹಕಾರ ಮತ್ತು ನಾವಿನ್ಯತೆ, ಸಂಶೋಧನೆ ವಿಸ್ತರಿಸುವುದು.
ಮಹಿಳೆಯರ ಕೌಶಲ ಅಭಿವೃದ್ಧಿ ಮತ್ತು ಸಬಲೀಕರಣ
- ಕೈಗಾರಿಕೆಗಳಿಗೆ ಸೂಕ್ತವಾದ ಉದ್ಯೋಗ ಅಂದರೆ ಫೋರ್ಕ್ ಲಿಫ್ಟ್ ಚಾಲಕರು, ಗೋದಾಮು ವ್ಯವಸ್ಥಾಪಕರು, ಜೋಡಣೆಯ ಆಪರೇಟರ್ ಗಳು ಮತ್ತು ಇತ್ಯಾದಿಗಾಗಿ ಮಹಿಳೆಯರಿಗೆ ಕೌಶಲ ತರಬೇತಿ ನೀಡುವ ಮಹಾರಾಷ್ಟ್ರದ ಪುಣೆಯಲ್ಲಿ ಸ್ವೀಡನ್ ಮತ್ತು ಭಾರತದ ಕಾರ್ಯ ನಿರ್ವಾಹಕರು ಕೈಗೊಂಡಿರುವ “Kraftsamla”ದಂಥ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉದ್ಯೋಗ ಮತ್ತು ಉದ್ಯಮಶೀಲತೆ ಅವಕಾಶಕ್ಕಾಗಿ ಕೌಶಲವರ್ಧನೆಯ ಮೂಲಕ ಮಹಿಳೆಯರ ಸಬಲೀಕರಣದ ಜಂಟಿ ಪ್ರಯತ್ನಗಳಿಗೆ ಉತ್ತೇಜನ ನೀಡುವುದು.
ರಕ್ಷಣೆ
- ರಕ್ಷಣಾ ವಲಯದಲ್ಲಿನ ಸಹಕಾರಕ್ಕಾಗಿ ಪರಸ್ಪರರ ರಕ್ಷಣೆಯ ವರ್ಗೀಕೃತ ಮಾಹಿತಿಯ ವಿನಿಮಯ ಕುರಿತ ದ್ವಿಪಕ್ಷೀಯ ಒಪ್ಪಂದದ ಅನ್ವೇಷಣೆ ಮತ್ತು ಆಖೈರುಗೊಳಿಸುವುದು.
- ರಕ್ಷಣಾ ಸಹಕಾರ ಕುರಿತಂತೆ ಭಾರತ – ಸ್ವೀಡನ್ ಮಾತುಕತೆ ಹೆಚ್ಚಿಸುವುದು. 2018-19ರಲ್ಲಿ ಭಾರತ – ಸ್ವೀಡನ್ ಗಳಲ್ಲಿ ಭಾರತ – ಸ್ವೀಡನ್ ರಕ್ಷಣಾ ವಿಚಾರಸಂಕಿರಣಗಳನ್ನು ಆಯೋಜಿಸುವುದು ಮತ್ತು ಐ.ಎಸ್.ಬಿ.ಎಲ್.ಆರ್.ಟಿ.ಯೊಂದಿಗೆ ಒಟ್ಟಾಗಿ ಭಾರತದಲ್ಲಿ ರಕ್ಷಣಾ ಉತ್ಪಾದನೆ ಕಾರಿಡಾರ್ ನಲ್ಲಿ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸುವುದು.
- ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ (ಎಸ್.ಎಂ.ಇ.)ಗಳಿಗೆ ಬೃಹತ್ ರಕ್ಷಣಾ ಮತ್ತು ಏರೋಸ್ಪೇಸ್ ಮೂಲ ಸಾಧನಗಳ ಉತ್ಪಾದಕರೊಂದಿಗೆ (ಓಇಎಂಗಳು) ಪೂರೈಕೆ ಸರಪಣಿ ಅಭಿವೃದ್ಧಿಪಡಿಸಲು ಕೈಗಾರಿಕಾ ಪಾಲುದಾರರಿಗೆ ಉತ್ತೇಜಿಸುವುದು.
ಬಾಹ್ಯಾಕಾಶ ಮತ್ತು ವಿಜ್ಞಾನ
- ಬಾಹ್ಯಾಕಾಶ ಸಂಶೋಧನೆ, ತಂತ್ರಜ್ಞಾನ, ನಾವಿನ್ಯತೆ ಮತ್ತು ಆನ್ವಯಿಕಗಳ ಮೇಲಿನ ದ್ವಿಪಕ್ಷೀಯ ಸಹಕಾರದ ಮಹತ್ವವನ್ನು ದೃಢಪಡಿಸುವುದು. ತಿಳಿವಳಿಕೆ ಒಪ್ಪಂದಗಳ ಅದರಲ್ಲೂ ಭೂ ನಿಗಾ, ಗ್ರಹದ ಶೋಧನೆ ಮತ್ತು ಉಪಗ್ರಹ ನೆಲ ನಿಲ್ದಾಣ ಚಟುವಟಿಕೆಗಳ ಒಪ್ಪಂದದ ಅಡಿಯಲ್ಲಿ ಭಾರತ – ಸ್ವೀಡನ್ ಬಾಹ್ಯಾಕಾಶ ವಿಚಾರಸಂಕಿರಣ ಮತ್ತು ಭಾರತೀಯ ನಿಯೋಗದಿಂದ ಸ್ವೀಡನ್ ಬಾಹ್ಯಾಕಾಶ ಸಂಸ್ಥೆಗಳ ಭೇಟಿ ಮೂಲಕ ಬಾಹ್ಯಾಕಾಶ ಸಂಸ್ಥೆಗಳಿಗೆ ಮತ್ತು ಇತರ ಬಾಹ್ಯಾಕಾಶ ಕಾಯಗಳಿಗೆ ಬಾಹ್ಯಾಕಾಶ ಸಹಕಾರ ವರ್ಧನೆಗೆ ಪ್ರೋತ್ಸಾಹ.
- ಸ್ವೀಡನ್ ಮತ್ತು ಭಾರತ ಪಾಲುದಾರರ ಆತಿಥ್ಯದ ಯೂರೋಪಿಯನ್ ಸ್ಪಾಲ್ಲೇಶನ್ ಸೋರ್ಸ್ (ಇ.ಎಸ್.ಎಸ್.) ನಡುವೆ ಸಹಯೋಗದ ಸಾಧ್ಯತೆ ಅನ್ವೇಷಿಸುವುದು.
ಆರೋಗ್ಯ ಮತ್ತು ಜೀವನ ವಿಜ್ಞಾನಗಳು
- ಆರೋಗ್ಯ ಆರೈಕೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಆರೋಗ್ಯ ಸಂಶೋಧನೆ, ಔಷಧ ಸಹ ಜಾಗೃತಿ ಮತ್ತು ಸೂಕ್ಷ್ಮಜೀವಿ ಪ್ರತಿರೋಧ ನಿಗ್ರಹದಂಥ ಆರೋಗ್ಯ ಕ್ಷೇತ್ರದಲ್ಲಿ ಗುರುತಿಸಲಾದ ಕ್ಷೇತ್ರಗಳಲ್ಲಿ ಆದ್ಯತೆಯ ವಿಷಯಗಳ ಮೇಲೆ ಸಹಯೋಗ ವರ್ಧನೆ.
ಅನುಸರಣೆ
- ವಿಜ್ಞಾನ ಮತ್ತು ಆರ್ಥಿಕ ವ್ಯವಹಾರಗಳ ಭಾರತ – ಸ್ವೀಡನ್ ಜಂಟಿ ಆಯೋಗ, ವಿದೇಶೀ ಕಚೇರಿ ಸಮಾಲೋಚನೆ ಮತ್ತು ಇತರ ಸೂಕ್ತ ದ್ವಿಪಕ್ಷೀಯ ವೇದಿಕೆಗಳು ಮತ್ತು ಜಂಟಿ ಕಾರ್ಯ ಗುಂಪುಗಳು ಈ ಕ್ರಿಯಾ ಯೋಜನೆಯ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳುತ್ತವೆ.