ಸೌದಿ ಅರೆಬಿಯಾದೊಂದಿಗಿನ ಕಾರ್ಯತಂತ್ರ ಪಾಲುದಾರಿಕೆ ಮಂಡಳಿ ಒಪ್ಪಂದಕ್ಕೆ ಸಹಿ ಹಾಕುತ್ತಿರುವುದು ಈಗಾಗಲೇ ಇರುವ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಇನ್ನಷ್ಟು ಬಲವರ್ಧನೆಗೊಳ್ಳಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.
ಪ್ರಧಾನಮಂತ್ರಿಗಳು ಸೌದಿ ಅರೆಬಿಯಾಕ್ಕೆ ಭೇಟಿ ನೀಡುವಾಗ ಅರಬ್ ನ್ಯೂಸ್ ನೊಂದಿಗೆ ಮಾತನಾಡಿದರು.
ಕಳೆದ ಮೂರು ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೌದಿ ಅರೆಬಿಯಾಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ.
ಎರಡೂ ರಾಷ್ಟ್ರಗಳು ಜಿ-20 ಅಡಿಯಲ್ಲಿ ಅಸಮಾನತೆ ತಗ್ಗಿಸುವುದು ಮತ್ತು ಸುಸ್ಥಿರ ಅಭಿವೃದ್ಧಿ ಉತ್ತೇಜನಕ್ಕೆ ಕಾರ್ಯೋನ್ಮುಖವಾಗಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.
ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಸ್ಥಿರ ತೈಲ ಬೆಲೆಗಳು ಅತ್ಯಂತ ಮಹತ್ವದ ಅಂಶವಾಗಿದೆ ಎಂದ ಅವರು, ಭಾರತದ ಇಂಧನ ಅಗತ್ಯತೆಗಳಿಗೆ ಸೌದಿ ಅರೆಬಿಯಾ ಅತ್ಯಂತ ಪ್ರಮುಖ ಹಾಗೂ ವಿಶ್ವಾಸಾರ್ಹ ಮೂಲವಾಗಿದೆ ಎಂದು ಅವರು ಶ್ಲಾಘಿಸಿದರು.
ತಮ್ಮ ಮತ್ತು ಸೌದಿ ಅರೆಬಿಯಾದ ದೊರೆ ಮತ್ತು ಯುವರಾಜ ಎಚ್ ಆರ್ ಎಚ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗಿನ ಅತ್ಯುತ್ತಮ ವೈಯಕ್ತಿಕ ಸಂಬಂಧಗಳ ಕುರಿತು ಪ್ರಧಾನಿಯವರು ಮಾತನಾಡುತ್ತಾ, ‘2016ರಲ್ಲಿ ನಾನು ಮೊದಲ ಬಾರಿ ಸೌದಿಗೆ ಭೇಟಿ ನೀಡಿದಂದಿನಿಂದ ನಾನು ದ್ವಿಪಕ್ಷೀಯ ಸಂಬಂಧಗಳಲ್ಲಿ ಗಮನಾರ್ಹ ಪ್ರಗತಿ ಆಗಿರುವುದಕ್ಕೆ ವೈಯಕ್ತಿಕವಾಗಿ ಸಾಕ್ಷಿಯಾಗಿದ್ದೇನೆ. ನಾನು ಗೌರವಾನ್ವಿತ ದೊರೆ(ಎಚ್ ಆರ್ ಎಚ್) ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಐದು ಬಾರಿ ಭೇಟಿ ಮಾಡಿದ್ದೇನೆ. ಅವರೊಂದಿಗಿನ ಹಿಂದಿನ ಸೌಹಾರ್ದ ಮಾತುಕತೆಯನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ ಮತ್ತು ಈ ಬಾರಿಯ ಭೇಟಿಯ ವೇಳೆ ಅವರೊಂದಿಗಿನ ಭೇಟಿಯನ್ನು ಎದುರು ನೋಡುತ್ತಿದ್ದೇನೆ. ದೊರೆ ಸಲ್ಮಾನ್ ಮತ್ತು ಎಚ್ ಆರ್ ಎಚ್ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನಾಯಕತ್ವದಲ್ಲಿ ಭಾರತ ಮತ್ತು ಸೌದಿ ಅರೆಬಿಯಾ ನಡುವಿನ ಸಂಬಂಧಗಳು ಮತ್ತಷ್ಟು ಬಲಿಷ್ಠವಾಗಿ ಬೆಳೆಯುತ್ತವೆ ಎಂಬುದು ನನ್ನ ನಂಬಿಕೆಯಾಗಿದೆ.
‘ನೆರೆಹೊರೆ ಮೊದಲು’ ಇದು ನಮ್ಮ ಸರ್ಕಾರದ ವಿದೇಶಾಂಗ ನೀತಿಯ ದೂರದೃಷ್ಟಿಯಾಗಿ ಮುಂದುವರೆಯಲಿದೆ ಎಂದ ಪ್ರಧಾನಮಂತ್ರಿಯವರು, ಸೌದಿ ಅರೆಬಿಯಾದೊಂದಿಗಿನ ಭಾರತದ ಸಂಬಂಧಗಳು ಅತ್ಯಂತ ಪ್ರಮುಖ ದ್ವಿಪಕ್ಷೀಯ ಸಂಬಂಧಗಳಾಗಿದ್ದು, ಅದು ನಮ್ಮ ನೆರೆಹೊರೆಯನ್ನು ಮತ್ತಷ್ಟು ವಿಸ್ತರಿಸಿದೆ ಎಂದರು.
ಪ್ರಧಾನಿಯವರ ಪ್ರವಾಸದ ವೇಳೆ ಸಹಿ ಮಾಡಲಿರುವ ಕಾರ್ಯತಂತ್ರ ಪಾಲುದಾರಿಕೆ ಮಂಡಳಿಯ ಕುರಿತಂತೆ ಮಾತನಾಡಿದ ಅವರು, ಹಲವು ವಲಯಗಳಲ್ಲಿ ಸಹಕಾರ ಸಂಬಂಧದ ಹೊಸ ಶೆಕೆ ಆರಂಭವಾಗಲಿದೆ. ವ್ಯಾಪಾರ, ಬಂಡವಾಳ ಹೂಡಿಕೆ, ಭದ್ರತೆ ಮತ್ತು ರಕ್ಷಣಾ ಸಹಕಾರ ಸೇರಿದಂತೆ ಹಲವು ಆಯಾಮಗಳಲ್ಲಿ ನಮ್ಮ ಸಂಬಂಧಗಳು ಅತ್ಯುತ್ತಮವಾಗಿದ್ದು, ಅವು ಆಳವಾಗಿ ಬೇರುಬಿಟ್ಟಿವೆ ಮತ್ತು ಆ ಸಂಬಂಧಗಳು ಇನ್ನಷ್ಟು ಬಲವರ್ಧನೆಗೊಳ್ಳಲಿವೆ ಎಂದರು.
ಏಷ್ಯಾದ ಶಕ್ತಿಗಳಾದ ಭಾರತ ಮತ್ತು ಸೌದಿ ಅರೆಬಿಯಾ ಎರಡೂ ಸಹ ಒಂದೇ ರೀತಿಯಾದ ನೆರೆಹೊರೆಯ ಭದ್ರತಾ ಕಾಳಜಿ ಹೊಂದಿದೆ ಎಂಬುದನ್ನು ನಾನು ನಂಬಿದ್ದೇನೆ, ಹಾಗಾಗಿ ನಮ್ಮ ಸಹಕಾರ ವಿಶೇಷವಾಗಿ ಭಯೋತ್ಪಾದನೆ ನಿಗ್ರಹ, ಭದ್ರತೆ ಮತ್ತು ಕಾರ್ಯತಂತ್ರ ವಿಷಯಗಳಲ್ಲಿ ಅತ್ಯುತ್ತಮವಾಗಿ ಮುಂದುವರಿಯುತ್ತಿರುವುದು ಸಂತಸ ತಂದಿದೆ. ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರು ಇತ್ತೀಚೆಗಷ್ಟೇ ರಿಯಾದ್ ಗೆ ಭೇಟಿ ನೀಡಿದ್ದು, ಅದು ಅತ್ಯಂತ ಉಪಯುಕ್ತ ಭೇಟಿಯಾಗಿತ್ತು ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತ ಮತ್ತು ಸೌದಿ ಅರೆಬಿಯಾ ರಕ್ಷಣಾ ಸಹಕಾರ ಕುರಿತ ಜಂಟಿ ಸಮಿತಿ ಆಗಾಗ್ಗೆ ಸಭೆಗಳನ್ನು ನಡೆಸುತ್ತಿದೆ ಮತ್ತು ಉಭಯ ದೇಶಗಳು ರಕ್ಷಣೆ ಮತ್ತು ಭದ್ರತಾ ವಲಯಗಳಲ್ಲಿ ಪರಸ್ಪರ ಹಿತಾಸಕ್ತಿ ಮತ್ತು ಸಹಕಾರ ಹೊಂದಿರುವ ಹಲವು ವಲಯಗಳನ್ನು ಗುರುತಿಸಿವೆ ಎಂದರು.
‘ನಾವು ರಕ್ಷಣಾ ಕೈಗಾರಿಕೆಗಳಲ್ಲಿ ಸಹಭಾಗಿತ್ವ ಮತ್ತು ಭದ್ರತಾ ಸಹಕಾರ ಕುರಿತಂತೆ ಒಪ್ಪಂದಗಳನ್ನು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದೇವೆ ಮತ್ತು ಉಭಯ ದೇಶಗಳ ನಡುವೆ ಸಮಗ್ರ ಭದ್ರತಾ ಮಾತುಕತೆ ಕಾರ್ಯತಂತ್ರ ರೂಪಿಸಲೂ ಸಹ ಒಪ್ಪಿದ್ದೇವೆ ಎಂದು ಹೇಳಿದರು.
ಪಶ್ಚಿಮ ಏಷ್ಯಾದ ಹಲವು ಪ್ರದೇಶಗಳ ಬಿಕ್ಕಟ್ಟಿನ ಕುರಿತ ಪ್ರಶ್ನೆಗಳಿಗೆ ಪ್ರಧಾನಮಂತ್ರಿ ಅವರು ‘ಬಿಕ್ಕಟ್ಟುಗಳನ್ನು ಬಗೆಹರಿಸಲು ಸಮತೋಲಿತ ಧೋರಣೆ ಪಾಲಿಸಬೇಕು ಮತ್ತು ಪರಸ್ಪರರ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದೆ ಸಾರ್ವಭೌಮ ತತ್ವವನ್ನು ಗೌರವಿಸಬೇಕು’ ಎಂದು ಹೇಳಿದರು.
‘ಪೂರ್ವ ಏಷ್ಯಾದ ಎಲ್ಲಾ ರಾಷ್ಟ್ರಗಳೊಂದಿಗೆ ಭಾರತ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳನ್ನು ಹಂಚಿಕೊಂಡಿದೆ ಮತ್ತು ಆ ಭಾಗದಲ್ಲಿ ಅತಿದೊಡ್ಡ ಸಂಖ್ಯೆಯ 8 ಮಿಲಿಯನ್ ಅನಿವಾಸಿ ಭಾರತೀಯರು ನೆಲೆಸಿದ್ದಾರೆ. ಆ ಪ್ರಮುಖ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸುವಂತೆ ಮಾಡುವುದು ಅತ್ಯಂತ ಅಗತ್ಯವಾಗಿದ್ದು, ಅದಕ್ಕಾಗಿ ಸಂಬಂಧಿಸಿದ ಎಲ್ಲರೂ ಮಾತುಕತೆ ಪ್ರಕ್ರಿಯೆಗೆ ಉತ್ತೇಜನ ನೀಡಬೇಕು’ ಎಂದರು.
ಪ್ರಸಕ್ತ ಜಾಗತಿಕ ಆರ್ಥಿಕತೆ ಕುರಿತಂತೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಜಾಗತಿಕ ಆರ್ಥಿಕ ಹೊರನೋಟ ಅತ್ಯಂತ ಬಲಿಷ್ಠವಾಗಿ, ಭಾರತದಂತಹ ದೊಡ್ಡ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮಾರ್ಗವನ್ನು ಅವಲಂಬಿಸಿದೆ. ನಾನು ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಉಲ್ಲೇಖಿಸಿದ್ದಂತೆ ನಾವು ಪ್ರತಿಯೊಬ್ಬರ ಹಸಿವೆಯನ್ನು ನೀಗಿಸಲು ಎಲ್ಲರ ಪ್ರಗತಿಗಾಗಿ ಸಾಮೂಹಿಕ ಪ್ರಯತ್ನಗಳನ್ನು ನಡೆಸಬೇಕು ಎಂಬುದರಲ್ಲಿ ಪ್ರಾಮಾಣಿಕ ನಂಬಿಕೆ ಹೊಂದಿದ್ದೇನೆ’.
‘ಅಸಮತೋಲಿತ ಅಥವಾ ನಿಯಂತ್ರಣವಿಲ್ಲದ ಬಹು ವಿಧದ ವ್ಯಾಪಾರ ಪದ್ಧತಿಗಳ ಅಡ್ಡಪರಿಣಾಮದಿಂದಾಗಿ ಆರ್ಥಿಕ ಅಸ್ಥಿರತೆ ಉಂಟಾಗುತ್ತದೆ. ಜಿ-20 ಚೌಕಟ್ಟಿನಡಿ ಭಾರತ ಮತ್ತು ಸೌದಿ ಅರೆಬಿಯಾ ಅಸಮಾನತೆ ತಗ್ಗಿಸುವುದು ಮತ್ತು ಸುಸ್ಥಿರ ಅಭಿವೃದ್ಧಿ ಉತ್ತೇಜನಕ್ಕೆ ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ವರ್ಷ ಜಿ-20 ಸಮಾವೇಶದ ಆತಿಥ್ಯವನ್ನು ಸೌದಿ ಅರೆಬಿಯಾ ವಹಿಸುತ್ತಿರುವುದು ನನಗೆ ಸಂತಸ ತಂದಿದೆ. ಭಾರತ ಕೂಡ ಸ್ವಾತಂತ್ರ್ಯಗಳಿಸಿ 75 ವರ್ಷಗಳಾದಾಗ ಅಂದರೆ 2022ಕ್ಕೆ ಜಿ-20 ಆತಿಥ್ಯವಹಿಸಲಿದೆ’ ಎಂದು ಹೇಳಿದರು.
ಪೂರ್ವ ರಾಷ್ಟ್ರಗಳ ಆರ್ಥಿಕತೆ ಕುರಿತ ಪ್ರಸಕ್ತ ಸಂದಿಗ್ಧ ಸಂಕೀರ್ಣದಂತಹ ಸಂದರ್ಭದಲ್ಲಿ ಭಾರತ ಮತ್ತು ಸೌದಿ ಅರೆಬಿಯಾದ ಪಾತ್ರ ಬಗ್ಗೆ ಪ್ರಧಾನಮಂತ್ರಿಗಳು ‘ವ್ಯಾಪಾರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಭಾರತ ಹಲವು ಸುಧಾರಣೆಗಳನ್ನು ಕೈಗೊಂಡಿದೆ ಮತ್ತು ಜಾಗತಿಕ ಪ್ರಗತಿ ಮತ್ತು ಸ್ಥಿರತೆಗೆ ನಾವು ಪ್ರಮುಖ ಚಾಲನಾಶಕ್ತಿ ಎಂದು ಖಾತ್ರಿಪಡಿಸಿದ್ದೇವೆ. ನಾವು ಉದ್ಯಮಸ್ನೇಹಿ ವಾತಾವರಣ ಸೃಷ್ಟಿ ಮತ್ತು ಹೂಡಿಕೆದಾರರ ಸ್ನೇಹಿ ಕ್ರಮಗಳನ್ನು ಪರಿಚಯಿಸಿದ ಪರಿಣಾಮ ವಿಶ್ವ ಬ್ಯಾಂಕ್ ನ ಉದ್ಯಮಸ್ನೇಹಿ ವಾತಾವರಣ ಸೂಚ್ಯಂಕದಲ್ಲಿ 2014ರಲ್ಲಿ 142ನೇ ಸ್ಥಾನದಲ್ಲಿದ್ದ ಭಾರತ 2019ರಲ್ಲಿ 63ನೇ ಸ್ಥಾನಕ್ಕೇರಿದೆ’ ಎಂದರು.
‘ಹಲವು ಮಹತ್ವಾಕಾಂಕ್ಷೆ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ವಚ್ಛ ಭಾರತ, ಸ್ಮಾರ್ಟ್ ಸಿಟಿ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಮತ್ತಿತರ ಯೋಜನೆಗಳು ವಿದೇಶಿ ಹೂಡಿಕೆದಾರರಿಗೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತಿವೆ. ಅದೇ ರೀತಿ ಸೌದಿ ಅರೆಬಿಯಾ ಕೂಡ ತನ್ನ ವಿಷನ್ 2030 ಭಾಗವಾಗಿ ಸುಧಾರಣಾ ಕಾರ್ಯಕ್ರಮದಡಿ ಹಲವು ಕ್ರಮಗಳನ್ನು ಕೈಗೊಂಡಿದೆ ಎಂಬುದನ್ನು ಉಲ್ಲೇಖಿಸಲು ನನಗೆ ಸಂತಸವಾಗುತ್ತಿದೆ’.
ಭಾರತಕ್ಕೆ ಅತಿ ದೊಡ್ಡ ತೈಲ ಪೂರೈಕೆ ರಾಷ್ಟ್ರವಾಗಿರುವ ಸೌದಿ ಅರೆಬಿಯಾ ಜೊತೆಗಿನ ದೀರ್ಘಕಾಲದ ಇಂಧನ ಸಂಬಂಧಗಳ ಕುರಿತಂತೆ ಪ್ರಧಾನಮಂತ್ರಿ ಅವರು, ‘ಭಾರತ ಸೌದಿ ಅರೆಬಿಯಾದಿಂದ ಸುಮಾರು ಶೇ.18ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ, ಅದು ಎರಡನೇ ಅತಿ ದೊಡ್ಡ ಕಚ್ಚಾ ತೈಲ ಮೂಲವಾಗಿದೆ. ಪಕ್ಕಾ ಖರೀದಿದಾರ – ಮಾರಾಟಗಾರ ಸಂಬಂಧದಿಂದ ನಾವು ಸೌದಿಯಲ್ಲಿ ತೈಲ ಮತ್ತು ಅನಿಲ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಡುವುದು ಸೇರಿದಂತೆ ನಿಕಟ ಕಾರ್ಯತಂತ್ರ ಪಾಲುದಾರಿಕೆ ನಿಟ್ಟಿನಲ್ಲಿ ಮುನ್ನಡೆದಿದ್ದೇವೆ’ ಎಂದರು.
ನಾವು ನಮ್ಮ ಇಂಧನ ಅಗತ್ಯತೆಗಳಿಗೆ ಪ್ರಮುಖ ಮತ್ತು ವಿಶ್ವಾಸಾರ್ಹ ಮೂಲದಲ್ಲಿ ಸೌದಿ ಅರೆಬಿಯಾ ಪ್ರಮುಖ ಪಾತ್ರವಹಿಸಲಿವೆ ಎಂಬುದನ್ನು ನಾವು ಗೌರವಿಸುತ್ತೇವೆ. ಜಾಗತಿಕ ಆರ್ಥಿಕ ಪ್ರಗತಿಗೆ ವಿಶೇಷವಾಗಿ ಅಭಿವೃದ್ಧಿ ರಾಷ್ಟ್ರಗಳಲ್ಲಿನ ಸ್ಥಿರ ತೈಲ ಬೆಲೆಗಳು ಅತ್ಯಂತ ಮಹತ್ವದ್ದಾಗಿದೆ ಎಂದು ನಾನು ನಂಬಿದ್ದೇನೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಪ್ರಮುಖ ತೈಲ ಸಂಸ್ಕರಣೆ ಮತ್ತು ಪೆಟ್ರೋ ಕೆಮಿಕಲ್ ಯೋಜನೆಯಲ್ಲಿ ಸೌದಿ ಅರ್ಮಕೊ ಕಂಪನಿ ಪಾಲ್ಗೊಳ್ಳುತ್ತಿದೆ, ನಾವು ಅರ್ಮಕೊ ಕಂಪನಿಯನ್ನು ಭಾರತದ ಕಾರ್ಯತಂತ್ರ ಪೆಟ್ರೋಲಿಯಂ ನಿಕ್ಷೇಪಗಳಲ್ಲೂ ಸಹ ಭಾಗವಹಿಸಬೇಕೆಂದು ಎದುರು ನೋಡುತ್ತಿದ್ದೇವೆ’.
ಸರ್ಕಾರ ಪ್ರಕಟಿಸಿರುವ ಬೃಹತ್ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಸೌದಿ ಅರೆಬಿಯಾದ ಪಾಲುದಾರಿಕೆಯನ್ನು ಭಾರತ ಬಯಸುತ್ತದೆಯೇ ಎಂಬ ಪ್ರಶ್ನೆಗೆ ಪ್ರಧಾನಮಂತ್ರಿಯವರು ‘ಭಾರತ ಮತ್ತು ಸೌದಿ ಅರೆಬಿಯಾ ನಡುವಿನ ಸಹಕಾರದ ಅತ್ಯಂತ ಪ್ರಮುಖ ವಲಯ ಎಂದರೆ ನಮ್ಮ ಮೂಲಸೌಕರ್ಯ ಯೋಜನೆಗಳಲ್ಲಿ ಬಂಡವಾಳ ಹೂಡುವುದು. 2019ರ ಫೆಬ್ರವರಿಯಲ್ಲಿ ಸೌದಿ ಯುವರಾಜ ಭಾರತಕ್ಕೆ ಭೇಟಿ ನೀಡಿದ್ದ ವೇಳೆ, ಹಲವು ವಲಯಗಳಲ್ಲಿ ಭಾರತದಲ್ಲಿ ನೂರು ಬಿಲಿಯನ್ ಡಾಲರ್ ಗೂ ಅಧಿಕ ಹಣ ಹೂಡಿಕೆ ಮಾಡುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದ್ದರು’.
‘ಸ್ಮಾರ್ಟ್ ಸಿಟಿ ಕಾರ್ಯಕ್ರಮ ಸೇರಿದಂತೆ ನಮ್ಮ ಮೂಲಸೌಕರ್ಯ ಯೋಜನೆಗಳಲ್ಲಿ ಸೌದಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡುವುದನ್ನು ನಾವು ಸ್ವಾಗತಿಸುತ್ತೇವೆ. ಅಲ್ಲದೆ, ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿಯಲ್ಲಿ ಹೂಡಿಕೆ ಮಾಡಲು ಸೌದಿ ಆಸಕ್ತಿ ತೋರಿಸಿರುವುದನ್ನೂ ಸಹ ಭಾರತ ಸ್ವಾಗತಿಸುತ್ತದೆ’.
ಇಂಧನ ಹೊರತುಪಡಿಸಿ ಭಾರತ ಮತ್ತು ಸೌದಿ ಅರೆಬಿಯಾ ನಡುವಿನ ಸಹಕಾರದ ಇತರೆ ವಿಷಯಗಳ ಕುರಿತು ಪ್ರಧಾನಮಂತ್ರಿ ಅವರು ‘ಈ ಬಾರಿಯ ತಮ್ಮ ಭೇಟಿ ವೇಳೆ ಭಾರತ ಮತ್ತು ಸೌದಿ ಅರೆಬಿಯಾ ರಕ್ಷಣೆ, ಭದ್ರತೆ, ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ವಿಷಯಗಳಲ್ಲಿ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಿವೆ’ ಎಂದರು.
ಸೌದಿಯಲ್ಲಿ ರುಪೆ ಕಾರ್ಡ್ ಆರಂಭಿಸುವ ಪ್ರಸ್ತಾವ ಸೇರಿದಂತೆ ಹಲವು ಪ್ರಮುಖ ಕ್ರಮಗಳಿವೆ, ಇದರಿಂದ ಅನಿವಾಸಿ ಭಾರತೀಯರು ಪಾವತಿ ಮತ್ತು ಸ್ವೀಕೃತಿಗಳನ್ನು ಪಡೆದುಕೊಳ್ಳಲು ಸಹಾಯಕವಾಗುತ್ತದೆ; ಇ-ವಲಸೆ ಮತ್ತು ಇ-ಥಾವ್ ಥೀಕ್ ಪೋರ್ಟಲ್ ಗಳನ್ನು ಒಗ್ಗೂಡಿಸುವುದು, ಇದು ಭಾರತದ ಕಾರ್ಮಿಕರು ಸೌದಿಗೆ ವಲಸೆ ಹೋಗುವ ಪ್ರಕ್ರಿಯೆಗೆ ನೆರವಾಗುತ್ತದೆ ಮತ್ತು ನಮ್ಮ ಅಕಾಡೆಮಿಗಳಲ್ಲಿ ರಾಯಭಾರಿಗಳಿಗೆ ತರಬೇತಿ ನೀಡುವ ಒಪ್ಪಂದವು ಇದೆ.
‘ಭಾರತ ವಿಶ್ವ ದರ್ಜೆಯ ಸಾಮರ್ಥ್ಯವೃದ್ಧಿ ಕೇಂದ್ರಗಳಿಗೆ ಹೆಸರಾಗಿದೆ ಮತ್ತು ನಾನಾ ವಲಯಗಳಲ್ಲಿ ಸೌದಿ ಯುವಕರಿಗೆ ತರಬೇತಿ ನೀಡಲು ಹಲವು ಕ್ರಮಗಳು ಲಭ್ಯವಿವೆ. ನಾವು ಬಾಹ್ಯಾಕಾಶ ಸಂಶೋಧನಾ ವಲಯದಲ್ಲೂ ಸಹ ಪರಸ್ಪರ ಸಹಕಾರದ ಬಗ್ಗೆ ಚರ್ಚೆ ನಡೆಸಿದ್ದೇವೆ’.
ಸೌದಿ ಅರೆಬಿಯಾದಲ್ಲಿನ ಅನಿವಾಸಿ ಭಾರತೀಯರಿಗೆ ನೀಡಿದ ಸಂದೇಶದಲ್ಲಿ ಪ್ರಧಾನಿ ಅವರು, ‘ಸುಮಾರು 2.6 ಮಿಲಿಯನ್ ಭಾರತೀಯರು ಸೌದಿ ಅರೆಬಿಯಾವನ್ನು ತಮ್ಮ ಎರಡನೇ ಮನೆಯನ್ನಾಗಿ ಮಾಡಿಕೊಂಡು ಅದರ ಪ್ರಗತಿ ಮತ್ತು ಬೆಳವಣಿಗೆಗೆ ನೆರವು ನೀಡುತ್ತಿದ್ದೀರಿ, ಹಲವು ಭಾರತೀಯರು ಪ್ರತಿ ವರ್ಷ ಸೌದಿ ಅರೆಬಿಯಾಗೆ ಹಜ್ ಮತ್ತು ಉಮ್ರಾ ಯಾತ್ರಾರ್ಥಿಗಳಾಗಿ ಮತ್ತು ವಾಣಿಜ್ಯ ಉದ್ದೇಶಕ್ಕೆ ಭೇಟಿ ನೀಡುತ್ತಿದ್ದೀರಿ’ ಎಂದರು.
“ನಮ್ಮ ನಾಗರಿಕರು ನಿಮ್ಮ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಮತ್ತು ನೀವು ಸೌದಿ ಅರೆಬಿಯಾದಲ್ಲಿ ಬೆಳೆದಿದ್ದೀರಿ, ನಿಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಗಳು ಒಟ್ಟಾರೆ ದ್ವಿಪಕ್ಷೀಯ ಸಂಬಂಧದಲ್ಲಿ ಸಾಕಷ್ಟು ಒಳ್ಳೆಯ ಅಭಿಪ್ರಾಯ ಮೂಡಿಸಿವೆ’ ಎಂದು ಹೇಳಿದ್ದಾರೆ.
ನಮ್ಮ ಮತ್ತು ಸೌದಿ ಅರೆಬಿಯಾದ ನಡುವಿನ ಸಂಬಂಧಗಳಲ್ಲಿ ನೀವು ಬಲವಾದ ಶಕ್ತಿಯಾಗಿ ಮುಂದುವರಿಯುತ್ತೀರಿ ಎಂಬ ವಿಶ್ವಾಸ ನನಗಿದೆ. ಅಲ್ಲದೆ ಹಲವು ದಶಕಗಳಿಂದಲೂ ಜನರ ಮತ್ತು ಜನರ ನಡುವಿನ ಸಂಪರ್ಕದ ಆಧಾರದ ಮೇಲೆ ರೂಪುಗೊಂಡಿರುವ ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳ ಬಲವರ್ಧನೆಗೆ ಇನ್ನಷ್ಟು ಕೊಡುಗೆ ನೀಡುತ್ತೀರಿ ಎಂಬ ವಿಶ್ವಾಸ ನನಗಿದೆ.
ಈ ಭೇಟಿಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೊರೆ ಸಲ್ಮಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಯುವರಾಜರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸುವರು. ಈ ಮಾತುಕತೆಗಳಲ್ಲದೆ ಮಧ್ಯಪ್ರಾಚ್ಯದ ಅತ್ಯಂತ ಪ್ರಮುಖ ಆರ್ಥಿಕ ವೇದಿಕೆ ಎಂದು ಕರೆಯಲ್ಪಡುತ್ತಿರುವ ಮೂರನೇ ತಲೆಮಾರಿನ ಹೂಡಿಕೆ ಉಪಕ್ರಮ(ಎಫ್ಐಐ) ವೇದಿಕೆಯನ್ನು ಉದ್ದೇಶಿಸಿ ಪ್ರಧಾನಿ ಅವರು ಭಾಷಣ ಮಾಡಲಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಈ ಭೇಟಿಯಿಂದ ರಕ್ಷಣೆ, ಇಂಧನ ಭದ್ರತೆ, ನವೀಕರಿಸಬಹುದಾದ ಇಂಧನ, ಹೂಡಿಕೆಗಳು, ವ್ಯಾಪಾರ ಮತ್ತು ವಾಣಿಜ್ಯ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು, ಕೃಷಿ, ನಾಗರಿಕ ವಿಮಾನಯಾನ, ಮೂಲಸೌಕರ್ಯ, ವಸತಿ, ಹಣಕಾಸು ಸೇವೆಗಳು, ತರಬೇತಿ ಮತ್ತು ಸಾಮರ್ಥ್ಯವೃದ್ಧಿ, ಸಂಸ್ಕೃತಿ ಮತ್ತು ಜನರ ಜನರ ನಡುವಿನ ಸಂಪರ್ಕ ಸೇರಿದಂತೆ ಕಾರ್ಯತಂತ್ರ ಸಹಕಾರ ಮತ್ತು ಭದ್ರತಾ ವಿಷಯಗಳನ್ನೊಳಗೊಂಡಂತೆ ದ್ವಿಪಕ್ಷೀಯ ಸಂಬಂಧಗಳು ವಿಸ್ತರಣೆಯಾಗುವ ಜೊತೆಗೆ ಇನ್ನಷ್ಟು ಬಲವರ್ಧನೆಗೊಳ್ಳುವ ನಿರೀಕ್ಷೆ ಇದೆ.
ಪ್ರಧಾನಿ ಅವರ ಭೇಟಿಯ ಒಂದು ಅತ್ಯಂತ ಪ್ರಮುಖ ಅಂಶವೆಂದರೆ ಎರಡು ದೇಶಗಳ ನಡುವೆ ಕಾರ್ಯತಂತ್ರ ಪಾಲುದಾರಿಕೆ ಮಂಡಳಿ (ಎಸ್ ಪಿ ಸಿ) ಸ್ಥಾಪನೆಯಾಗುತ್ತಿರುವುದು. ಸೌದಿ ಅರೆಬಿಯಾ ಜೊತೆ ಕಾರ್ಯತಂತ್ರ ಪಾಲುದಾರಿಕೆ ಮಾಡಿಕೊಳ್ಳುತ್ತಿರುವ ನಾಲ್ಕನೇ ರಾಷ್ಟ್ರ ಭಾರತವಾಗಲಿದೆ. ಸೌದಿ ಈಗಾಗಲೇ ಬ್ರಿಟನ್, ಫ್ರಾನ್ಸ್ ಮತ್ತು ಚೀನಾದೊಂದಿಗೆ ಪಾಲುದಾರಿಕೆ ಹೊಂದಿದೆ. ಎಸ್ ಪಿ ಸಿ ಯಲ್ಲಿ ಎರಡು ಪರ್ಯಾಯ ಮಾರ್ಗಗಳಿವೆ. ಒಂದರಲ್ಲಿ ರಾಜಕೀಯ, ಭದ್ರತೆ, ಸಂಸ್ಕೃತಿ ಮತ್ತು ಸಮಾಜ ವಿಷಯಗಳಿದ್ದು, ಇವುಗಳ ನೇತೃತ್ವವನ್ನು ಎರಡೂ ದೇಶಗಳ ವಿದೇಶಾಂಗ ಸಚಿವರುಗಳು ವಹಿಸಲಿದ್ದಾರೆ. ಮತ್ತೊಂದರಲ್ಲಿ ಆರ್ಥಿಕತೆ ಮತ್ತು ಬಂಡವಾಳ ಹೂಡಿಕೆ ವಿಷಯಗಳಿದ್ದು, ಅವುಗಳ ಅಧ್ಯಕ್ಷತೆಯನ್ನು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಹಾಗೂ ಸೌದಿಯ ಇಂಧನ ಸಚಿವರು ವಹಿಸಲಿದ್ದಾರೆ.
ಇಂಧನ ಭದ್ರತೆ ವಿಷಯ ಸೌದಿ ಅರೆಬಿಯಾ ಜೊತೆ ಭಾರತ ಪಾಲುದಾರಿಕೆ ಹೊಂದಿರುವ ಅತ್ಯಂತ ಪ್ರಮುಖ ಒಂದು ವಲಯವಾಗಿದೆ. ಭಾರತಕ್ಕೆ ದೀರ್ಘಕಾಲ ಇಂಧನ ಪೂರೈಸುವ ಅತ್ಯಂತ ಮಹತ್ವದ ಹಾಗೂ ವಿಶ್ವಾಸಾರ್ಹ ಮೂಲವಾಗಿರುವ ಸೌದಿ ಅರೆಬಿಯಾದ ಬಗ್ಗೆ ನವದೆಹಲಿ ಮೆಚ್ಚುಗೆ ವ್ಯಕ್ತಪಡಿಸಿದೆ. ಸೌದಿ ಅರೆಬಿಯಾ ಭಾರತದ ಶೇ.18ರಷ್ಟು ಕಚ್ಚಾ ತೈಲವನ್ನು ಪೂರೈಸುತ್ತಿದೆ ಮತ್ತು ಶೇ.30ರಷ್ಟು ದವೀಕೃತ (ಲಿಕ್ವಿಫೈಡ್ )ಪೆಟ್ರೋಲಿಯಂ ಅನಿಲ ಅಗತ್ಯತೆಯನ್ನು ಪೂರೈಸುತ್ತಿದೆ. ಎರಡೂ ದೇಶಗಳು ಈ ವಲಯದಲ್ಲಿರುವ ಖರೀದಿದಾರ – ಮಾರಾಟಗಾರ ಸಂಬಂಧವನ್ನು ಪರಸ್ಪರ ಪ್ರಶಂಶಾಪೂರ್ವಕ ಮತ್ತು ಅಂತರ ಅವಲಂಬನೆ ಆಧರಿತ ವಿಸ್ತೃತ ಕಾರ್ಯತಂತ್ರ ಸಹಭಾಗಿತ್ವ ಸಾಧಿಸಲು ಅತಿ ಉತ್ಸುಕವಾಗಿವೆ.