2019 ರ ಲೋಕಸಭಾ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಕೋಟ್ಯಾಂತರ ರೈತರಿಗೆ ಲಾಭವಾಗುವ ಮತ್ತು ಪಶುಗಳ ಆರೋಗ್ಯ ಸುಧಾರಿಸುವ ನವೀನ ಉಪಕ್ರಮಗಳಿಗೆ ಅನುಮೋದನೆ ನೀಡಲಾಯಿತು.
ಕಾಲು ಮತ್ತು ಬಾಯಿ ರೋಗ (ಎಫ್.ಎಂ.ಡಿ.) ಮತ್ತು ಬ್ರುಸೆಲ್ಲೋಸಿಸ್ ರೋಗಗಳನ್ನು ನಿಯಂತ್ರಿಸುವ ಮೂಲಕ, ಪಶುಸಂಗೋಪನೆಯಲ್ಲಿ ತೊಡಗಿರುವ ರೈತರನ್ನು ಈ ಉಪಕ್ರಮ ಬೆಂಬಲಿಸಲಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಪಶುಸಂಗೋಪನೆಯಲ್ಲಿ ಬಾಧಿಸುವ ಈ ರೋಗಗಳನ್ನು ಪೂರ್ಣವಾಗಿ ನಿಯಂತ್ರಿಸಲು ಮತ್ತು ಕಾಲಾನುಕ್ರಮದಲ್ಲಿ ತೊಡೆದುಹಾಕಲು ಒಟ್ಟು 13,343 ಕೋ.ರೂ. ಗಾತ್ರದ ಯೋಜನೆಗೆ ಸಂಪುಟವು ಅನುಮೋದನೆ ನೀಡಿತು.
ಈ ಭೂಗ್ರಹದ ಮೌಲ್ಯಯುತ ಭಾಗವಾಗಿರುವ ಆದರೆ ಮಾತು ಬಾರದ ಮೂಕ ಪ್ರಾಣಿಗಳ ವಿಷಯದಲ್ಲಿ ಅನುಭೂತಿಯುತ ಸ್ಪೂರ್ತಿಯನ್ನು ಈ ನಿರ್ಧಾರ ಒಳಗೊಂಡಿದೆ.
ಕಾಲು ಮತ್ತು ಬಾಯಿ ರೋಗ (ಎಫ್.ಎಂ.ಡಿ. ) ಮತ್ತು ಬ್ರುಸೆಲ್ಲೋಸಿಸ್ ಅಪಾಯ:
ಈ ಖಾಯಿಲೆಗಳು ದನಗಳು, ಎತ್ತುಗಳು, ಕೋಣಗಳು, ಕುರಿ, ಆಡು, ಹಂದಿ ಇತ್ಯಾದಿ ಪಶುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
ದನಗಳು/ಎಮ್ಮೆಗಳು ಎಫ್.ಎಂ.ಡಿ. ಸೋಂಕಿಗೆ ಒಳಪಟ್ಟರೆ ಶೇಖಡಾ 100 ರಷ್ಟು ಹಾಲು ನಷ್ಟವಾಗುತ್ತದೆ ಮತ್ತು ನಾಲ್ಕರಿಂದ ಆರು ತಿಂಗಳು ಈ ಸ್ಥಿತಿ ಇರುತ್ತದೆ. ಇದಲ್ಲದೆ ಬ್ರುಸೆಲ್ಲೋಸಿಸ್ ತಗುಲಿದರೆ ಪಶುವಿನ ಜೀವನ ಚಕ್ರದಲ್ಲಿ ಹಾಲಿನ ಉತ್ಪಾದನೆ ಶೇಖಡಾ 30 ರಷ್ಟು ಕುಸಿಯುತ್ತದೆ. ಜೊತೆಗೆ ಬ್ರುಸೆಲ್ಲೋಸಿಸ್ ಪಶುಗಳಲ್ಲಿ ಬಂಜೆತನಕ್ಕೂ ಕಾರಣವಾಗುತ್ತದೆ. ಬ್ರುಸೆಲ್ಲೋಸಿಸ್ ಸೋಂಕು ಹೈನುಗಾರರಿಗೂ, ರೈತಾಪಿ ಕಾರ್ಮಿಕರಿಗೂ ಹರಡುವ ಸಾಧ್ಯತೆ ಇರುತ್ತದೆ. ಈ ಎರಡೂ ಖಾಯಿಲೆಗಳು ಹಾಲಿನ ವ್ಯವಹಾರ ಮತ್ತು ಇತರ ಪಶುಸಂಗೋಪನಾ ಉತ್ಪನ್ನಗಳ ವ್ಯಾಪಾರದ ಮೇಲೆ ನೇರ ನೇತ್ಯಾತ್ಮಕ ಪರಿಣಾಮವನ್ನು ಬೀರಬಲ್ಲವು.
ಇಂದಿನ ಸಂಪುಟದ ಈ ನಿರ್ಧಾರದಿಂದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾದ ಪ್ರಮುಖ ಭರವಸೆಯನ್ನು ಈಡೇರಿಸಿದಂತಾಗಿದೆ ಮತ್ತು ಇದು ಪಶುಸಂಗೋಪನೆಯಲ್ಲಿ ತೊಡಗಿರುವ ಕೋಟ್ಯಾಂತರ ರೈತರಿಗೆ ಹೆಚ್ಚಿನ ಪರಿಹಾರವನ್ನು ಒದಗಿಸಬಲ್ಲುದಾಗಿದೆ.
ಪಶುಗಳ ಆರೈಕೆ ಮತ್ತು ಅನುಕಂಪ
ಎಫ್.ಎಂ.ಡಿ. ರೋಗ ಬಂದ ಪಕ್ಷದಲ್ಲಿ , ಈ ಯೋಜನೆಯು 30 ಕೋಟಿ ದನಗಳು, ಎತ್ತುಗಳು ಮತ್ತು ಎಮ್ಮೆಗಳಿಗೆ ಮತ್ತು 20 ಕೋಟಿ ಕುರಿಗಳು/ ಆಡುಗಳು ಮತ್ತು 1 ಕೋಟಿ ಹಂದಿಗಳಿಗೆ ಆರು ತಿಂಗಳ ಮಧ್ಯಂತರದಲ್ಲಿ ಕರುಗಳಿಗೆ ಪ್ರಾಥಮಿಕ ಲಸಿಕೆ ಸಹಿತ ಲಸಿಕೆ ಹಾಕುವ ಕಾರ್ಯಕ್ರಮವನ್ನು ಈ ಯೋಜನೆ ಒಳಗೊಂಡಿದೆ. ಬ್ರುಸಿಲ್ಲೋಸ್ ನಿಯಂತ್ರಣ ಕಾರ್ಯಕ್ರಮ 3.6 ಕೋಟಿ ಹೆಣ್ಣು ಕರುಗಳಿಗೆ ಶೇಖಡಾ ನೂರರಷ್ಟು ಪ್ರಮಾಣದಲ್ಲಿ ಲಸಿಕೆ ನೀಡುವ ವ್ಯಾಪ್ತಿಯನ್ನು ಒಳಗೊಳ್ಳಲಿದೆ.
ಈ ಕಾರ್ಯಕ್ರಮವನ್ನು ಇದುವರೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ವೆಚ್ಚ ಹಂಚಿಕೆ ಆಧಾರದಲ್ಲಿ ಅನುಷ್ಟಾನಗೊಳಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು ಕೊನೆಗಾಣಿಸುವ ಅಪರೂಪದ ಕ್ರಮವಾಗಿ ಕೇಂದ್ರ ಸರಕಾರವು ಈಗ ಈ ರೋಗಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ನಿಟ್ಟಿನಲ್ಲಿ ಮತ್ತು ದೇಶದ ಎಲ್ಲಾ ಪಶು ಸಂಗೋಪನೆ ನಿರತ ರೈತರಿಗೆ ಉತ್ತಮ ಜೀವನಾವಕಾಶ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮದ ಪೂರ್ಣ ವೆಚ್ಚವನ್ನು ತಾನೇ ಭರಿಸುವ ನಿರ್ಧಾರಕ್ಕೆ ಬಂದಿದೆ.