ಆಫ್ಘಾನಿಸ್ತಾನದಲ್ಲಿ ಲಲಂದರ್ (ಶಟೂಟ್) ಅಣೆಕಟ್ಟು ನಿರ್ಮಾಣದ ತಿಳಿವಳಿಕೆ ಪತ್ರಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಮತ್ತು ಆಫ್ಘಾನಿಸ್ತಾನ ವಿದೇಶಾಂಗ ಸಚಿವ ಹನೀಫ್ ಆತ್ಮರ್ ಸಹಿ ಹಾಕಿದರು. ವೀಡಿಯೊ ಟೆಲಿಕಾನ್ಫರೆನ್ಸಿಂಗ್ ಮೂಲಕ ಫೆಬ್ರವರಿ 9ರಂದು ನಡೆದ ಸಹಿ ಹಾಕುವ ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಫ್ಘಾನಿಸ್ತಾನ ಅಧ್ಯಕ್ಷ ಡಾ. ಮೊಹಮ್ಮದ್ ಆಶ್ರಫ್ ಘನಿ ಸಮ್ಮುಖದಲ್ಲಿ ಉಭಯ ನಾಯಕರು ಸಹಿ ಹಾಕಿದರು.
ಭಾರತ ಮತ್ತು ಆಫ್ಘಾನಿಸ್ತಾನ ನಡುವೆ ಏರ್ಪಟ್ಟಿರುವ ಹೊಸ ಅಭಿವೃದ್ಧಿ ಪಾಲುದಾರಿಕೆಯ ಭಾಗವಾಗಿ ಈ ಯೋಜನೆ ಕಾರ್ಯಗತವಾಗಲಿದೆ. ಲಲಂದರ್ (ಶಟೂಟ್) ಅಣೆಕಟ್ಟು ಯೋಜನೆಯು ಕಾಬೂಲ್ ನಗರಕ್ಕೆ ಸುರಕ್ಷಿತ ಕುಡಿಯುವ ನೀರನ ಅಗತ್ಯಗಳನ್ನು ಪೂರೈಸಲಿದೆ. ಜತೆಗೆ, ನದಿ ಪಾತ್ರದ ಕೃಷಿ ಭೂಮಿಗಳಿಗೆ ನೀರಾವರಿ ಒಗಿಸಲಿದೆ. ಜತೆಗೆ, ಅಸ್ತಿತ್ವದಲ್ಲಿರುವ ನೀರಾವರಿ ಮತ್ತು ಒಳಚರಂಡಿ ಜಾಲವನ್ನು ಪುನರ್ವಸತಿಗೊಳಿಸುವುದು, ಈ ಪ್ರದೇಶದಲ್ಲಿ ಪ್ರವಾಹ ರಕ್ಷಣೆ ಮತ್ತು ನಿರ್ವಹಣಾ ಪ್ರಯತ್ನಗಳಿಗೆ ನೆರವು ಮತ್ತು ಈ ಭಾಗಕ್ಕೆ ವಿದ್ಯುತ್ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
ಆಫ್ಘಾನಿಸ್ತಾನದಲ್ಲಿ ಭಾರತ ನಿರ್ಮಿಸುತ್ತಿರುವ 2ನೇ ಬೃಹತ್ ಯೋಜನೆ ಇದಾಗಿದೆ. ಇದಕ್ಕೂ ಮುನ್ನ ಭಾರತ–ಆಫ್ಘಾನಿಸ್ತಾನ ಗೆಳೆತನದ ಪ್ರತೀಕವಾಗಿ ಸಲ್ಮಾ ಅಣೆಕಟ್ಟು ನಿರ್ಮಿಸಲಾಗಿದೆ. ಈ ಅಣೆಕಟ್ಟನ್ನು 2016 ಜೂನ್’ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಫ್ಘಾನಿಸ್ತಾನ ಅಧ್ಯಕ್ಷ ಾಶ್ರಫ್ ಘನಿ ಲೋಕಾರ್ಪಣೆ ಮಾಡಿದ್ದರು.
ಲಲಂದರ್(ಶಟೂಟ್) ಅಣೆಕಟ್ಟು ನಿರ್ಮಾಣದ ತಿಳಿವಳಿಕೆ ಪತ್ರಕ್ಕೆಸಹಿ ಹಾಕಿರುವುದು ಆಫ್ಘಾನಿಸ್ತಾನದ ಸಾಮಾಜಿಕ–ಆರ್ಥಿಕ ಅಭಿವೃದ್ಧಿಗೆ ಭಾರತ ಹೊಂದಿರುವ ಬಲಿಷ್ಠ ಮತ್ತು ದೀರ್ಘಕಾಲೀನ ಬದ್ಧತೆ ಮತ್ತು ಉಭಯ ರಾಷ್ಟ್ರಗಳ ನಡುವಿನ ನಿರಂತರ ಪಾಲುದಾರಿಕೆಯನ್ನು ಪ್ರತಿಫಲಿಸುತ್ತಿದೆ. ಆಫ್ಘಾನಿಸ್ತಾನ ಜತೆಗಿನ ನಮ್ಮ ಅಭಿವೃದ್ಧಿ ಸಹಕಾರದ ಭಾಗವಾಗಿ, ಭಾರತವು ಆಫ್ಘಾನಿಸ್ತಾನದ ಎಲ್ಲಾ 34 ಪ್ರಾಂತ್ಯಗಳಲ್ಲಿ 400ಕ್ಕಿಂತ ಹೆಚ್ಚಿನ ಯೋಜನೆಗಳನ್ನು ಪೂರ್ಣಗೊಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ನಾಗರಿಕ ಸಂಬಂಧ ಏರ್ಪಟ್ಟಿದೆ. ಶಾಂತಿಯುತ, ಸಂಘಟಿತ, ಸ್ಥಿರ, ಸಮೃದ್ಧ ಮತ್ತು ಎಲ್ಲರನ್ನು ಒಳಗೊಂಡ ಆಫ್ಘಾನಿಸ್ತಾನ ಅಭಿವೃದ್ಧಿಗೆ ಭಾರತ ಸ್ಥಿರ ಬೆಂಬಲವನ್ನು ಮುಂದುವರಿಸಲಿದೆ ಎಂದು ಭರವಸೆ ನೀಡಿದರು.