ಬಾಂಗ್ಲಾದೇಶ ಪ್ರಧಾನ ಮಂತ್ರಿ ಅವರ ಭದ್ರತಾ ಸಲಹೆಗಾರ ನಿವೃತ್ತ ಮೇಜರ್ ಜನರಲ್ ತಾರಿಕ್ ಅಹ್ಮದ್ ಸಿದ್ದಿಕ್ ಅವರು ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು.
2021 ಮಾರ್ಚ್ ನಲ್ಲಿ ಬಾಂಗ್ಲಾದೇಶಕ್ಕೆ ನೀಡಿದ್ದ ಭೇಟಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಬಾಂಗ್ಲಾ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರಿಗೆ ಶುಭಾಶಯಗಳನ್ನು ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ಎದುರಾದ ಸಂಕಷ್ಟ ಸಮಯದಲ್ಲಿ ಭಾರತ-ಬಾಂಗ್ಲಾದೇಶದ ಗಾಢ ಸ್ನೇಹವನ್ನು ಬಲಪಡಿಸುವ ಜತೆಗೆ, ಬಾಂಗ್ಲಾದೇಶದೊಂದಿಗೆ ಭಾರತ ದೃಢವಾಗಿ ನಿಂತಿದ್ದಕ್ಕಾಗಿ ಶ್ರೀ ಸಿದ್ದಿಕ್ ಅವರು ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು.
ಬಾಂಗ್ಲಾದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಖಾತ್ರಿಪಡಿಸುವಲ್ಲಿ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ನಾಯಕತ್ವವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ಭಾರತ-ಬಾಂಗ್ಲಾದೇಶದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಹಸೀನಾ ಜತೆ ಕೆಲಸ ಮಾಡುವ ಬದ್ಧತೆಯನ್ನು ಮೋದಿ ವ್ಯಕ್ತಪಡಿಸಿದರು.