ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಆಂಥೋನಿ ಅಲ್ಬನೀಸ್ ಅವರು ನವೆಂಬರ್ 19ರಂದು ರಿಯೋ ಡಿ ಜನೈರೊದಲ್ಲಿ ನಡೆದ ಜಿ20 ಶೃಂಗಸಭೆಯ ನೇಪಥ್ಯದಲ್ಲಿ 2ನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಯನ್ನು ನಡೆಸಿದರು. ಪ್ರಥಮ ವಾರ್ಷಿಕ ಶೃಂಗಸಭೆಯನ್ನು 2023ರ ಮಾರ್ಚ್ 10ರಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಅಲ್ಬನೀಸ್ ಅವರ ಭಾರತದ ಭೇಟಿಯ ಸಮಯದಲ್ಲಿ ನಡೆಸಲಾಗಿತ್ತು.
ಭಾರತ-ಆಸ್ಟ್ರೇಲಿಯಾ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯನ್ನು ಬಲಪಡಿಸಲು ತಮ್ಮ ಬೆಂಬಲವನ್ನು ಉಭಯ ದೇಶದ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಶಿಕ್ಷಣ, ಕೌಶಲ್ಯ ಮತ್ತು ಚಲನಶೀಲತೆ, ನವೀಕರಿಸಬಹುದಾದ ಇಂಧನ, ಬಾಹ್ಯಾಕಾಶ, ಕ್ರೀಡೆ ಮತ್ತು ಜನರ ನಡುವಿನ ಸಂಬಂಧಗಳ ಕ್ಷೇತ್ರಗಳಲ್ಲಿನ ಸಹಕಾರದ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರು. ಈ ಸಂದರ್ಭದಲ್ಲಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಯಿತು. ನವೀಕರಿಸಬಹುದಾದ ಇಂಧನ ಪಾಲುದಾರಿಕೆಯ ಆರಂಭವನ್ನೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು.
ಎರಡೂ ಕಡೆಯವರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಅಂತಾರಾಷ್ಟ್ರೀಯ ಕಾನೂನಿಗೆ ಗೌರವದ ಆಧಾರದ ಮೇಲೆ ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.