ಅಧ್ಯಕ್ಷ ಬೈಡನ್
ಉಪಾಧ್ಯಕ್ಷ ಹ್ಯಾರಿಸ್
ಘನತೆವೆತ್ತರೇ,
ನಮಸ್ಕಾರ!
ಕೋವಿಡ್ ಸಾಂಕ್ರಾಮಿಕವು ಜೀವನವನ್ನು, ಪೂರೈಕೆ ಸರಪಳಿಗಳನ್ನು ಅಸ್ತವ್ಯಸ್ತಗೊಳಿಸುತ್ತದೆ ಮತ್ತು ಮುಕ್ತ ಸಮಾಜಗಳ ಸ್ಥಿತಿಸ್ಥಾಪಕತ್ವವನ್ನು ಪರೀಕ್ಷಿಸುತ್ತದೆ. ಭಾರತದಲ್ಲಿ, ನಾವು ಸಾಂಕ್ರಾಮಿಕ ರೋಗದ ವಿರುದ್ಧ ಜನ-ಕೇಂದ್ರಿತ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದೇವೆ. ನಮ್ಮ ವಾರ್ಷಿಕ ಆರೋಗ್ಯ ರಕ್ಷಣಾ ಬಜೆಟ್ ಗೆ ನಾವು ಅತ್ಯಧಿಕ ಹಂಚಿಕೆ ಮಾಡಿದ್ದೇವೆ.
ನಮ್ಮ ಲಸಿಕಾ ಕಾರ್ಯಕ್ರಮವು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ನಾವು ವಯಸ್ಕ ಜನಸಂಖ್ಯೆಯ ಸುಮಾರು ಶೇಕಡ 90 ರಷ್ಟು ಜನರಿಗೆ ಮತ್ತು 50 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಸಂಪೂರ್ಣವಾಗಿ ಲಸಿಕೆ ನೀಡಿದ್ದೇವೆ. ಭಾರತವು ನಾಲ್ಕು ಡಬ್ಲ್ಯುಎಚ್ಒ ಅನುಮೋದಿತ ಲಸಿಕೆಗಳನ್ನು ತಯಾರಿಸುತ್ತದೆ ಮತ್ತು ಈ ವರ್ಷ ಐದು ಶತಕೋಟಿ ಡೋಸ್ ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ನಾವು 98 ದೇಶಗಳಿಗೆ ದ್ವಿಪಕ್ಷೀಯವಾಗಿ ಮತ್ತು ಕೋವ್ಯಾಕ್ಸ್ ಮೂಲಕ 200 ದಶಲಕ್ಷ ಡೋಸ್ ಗಳನ್ನು ಪೂರೈಸಿದ್ದೇವೆ. ಭಾರತವು ಪರೀಕ್ಷೆ, ಚಿಕಿತ್ಸೆ ಮತ್ತು ದತ್ತಾಂಶ ನಿರ್ವಹಣೆಗಾಗಿ ಕಡಿಮೆ ವೆಚ್ಚದ ಕೋವಿಡ್ ತಗ್ಗಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ನಾವು ಈ ಸಾಮರ್ಥ್ಯಗಳನ್ನು ಇತರ ದೇಶಗಳಿಗೆ ನೀಡಿದ್ದೇವೆ.
ಭಾರತದ ಜೀನೋಮಿಕ್ಸ್ ಕನ್ಸೋರ್ಟಿಯಂ ವೈರಸ್ ಕುರಿತ ಜಾಗತಿಕ ಡೇಟಾಬೇಸ್ ಗೆ ಗಮನಾರ್ಹ ಕೊಡುಗೆ ನೀಡಿದೆ. ನಾವು ಈ ಜಾಲವನ್ನು ನಮ್ಮ ನೆರೆಹೊರೆಯ ದೇಶಗಳಿಗೆ ವಿಸ್ತರಿಸುತ್ತೇವೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ.
ಭಾರತದಲ್ಲಿ, ಕೋವಿಡ್ ವಿರುದ್ಧದ ನಮ್ಮ ಹೋರಾಟಕ್ಕೆ ಪೂರಕವಾಗಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಅಸಂಖ್ಯಾತ ಜೀವಗಳನ್ನು ಉಳಿಸಲು ನಾವು ನಮ್ಮ ಸಾಂಪ್ರದಾಯಿಕ ಔಷಧಿಗಳನ್ನು ವ್ಯಾಪಕವಾಗಿ ಬಳಸಿದ್ದೇವೆ.
ಕಳೆದ ತಿಂಗಳು, ನಾವು ಪ್ರಾಚೀನ ಜ್ಞಾನವನ್ನು ವಿಶ್ವಕ್ಕೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಭಾರತದಲ್ಲಿ 'ಡಬ್ಲ್ಯುಎಚ್ಒನ ಸಾಂಪ್ರದಾಯಿಕ ಔಷಧ ಕೇಂದ್ರ' ಕ್ಕೆ ಅಡಿಪಾಯ ಹಾಕಿದ್ದೇವೆ.
ಘನತೆವೆತ್ತರೇ,
ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಂಘಟಿತ ಜಾಗತಿಕ ಪ್ರತಿಕ್ರಿಯೆಯ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ. ನಾವು ಸ್ಥಿತಿಸ್ಥಾಪಕ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸಬೇಕು ಮತ್ತು ಲಸಿಕೆಗಳು ಮತ್ತು ಔಷಧಿಗಳಿಗೆ ಸಮಾನ ಪ್ರವೇಶವನ್ನು ಸಕ್ರಿಯಗೊಳಿಸಬೇಕು.
ಡಬ್ಲ್ಯುಟಿಒ ನಿಯಮಗಳು, ವಿಶೇಷವಾಗಿ ಟ್ರಿಪ್ ಗಳು ಹೆಚ್ಚು ಹೊಂದಿಕೊಳ್ಳುವ ಅಗತ್ಯವಿದೆ. ಹೆಚ್ಚು ಸ್ಥಿತಿಸ್ಥಾಪಕ ಜಾಗತಿಕ ಆರೋಗ್ಯ ಭದ್ರತಾ ವಾಸ್ತುಶಿಲ್ಪವನ್ನು ನಿರ್ಮಿಸಲು ವಿಶ್ವ ಆರೋಗ್ಯ ಸಂಸ್ಥೆಯನ್ನು ಸುಧಾರಿಸಬೇಕು ಮತ್ತು ಬಲಪಡಿಸಬೇಕು.
ಪೂರೈಕೆ ಸರಪಳಿಗಳನ್ನು ಸ್ಥಿರವಾಗಿ ಮತ್ತು ಊಹಿಸಬಹುದಾದಂತೆ ಇರಿಸಲು ಲಸಿಕೆಗಳು ಮತ್ತು ಚಿಕಿತ್ಸಕಗಳಿಗೆ ಡಬ್ಲ್ಯುಎಚ್ಒದ ಅನುಮೋದನೆ ಪ್ರಕ್ರಿಯೆಯನ್ನು ಸ್ಟ್ರೀಮ್-ಲೈನಿಂಗ್ ಮಾಡಲು ನಾವು ಕರೆ ನೀಡುತ್ತೇವೆ. ಜಾಗತಿಕ ಸಮುದಾಯದ ಜವಾಬ್ದಾರಿಯುತ ಸದಸ್ಯ ರಾಷ್ಟ್ರವಾಗಿ, ಈ ಪ್ರಯತ್ನಗಳಲ್ಲಿ ಪ್ರಮುಖ ಪಾತ್ರ ವಹಿಸಲು ಭಾರತ ಸಿದ್ಧವಾಗಿದೆ.
ಧನ್ಯವಾದಗಳು.
ತುಂಬ ಧನ್ಯವಾದಗಳು.