ಗೌರವಾನ್ವಿತ, ನನ್ನ ಗೆಳೆಯ, ಅಧ್ಯಕ್ಷ ಇಬ್ರಾಹಿಂ ಸೋಲಿಹ್
ನಮ್ಮ ಆದರಣೀಯ ಮಾಲ್ಡವಿಯಾ ಗೆಳೆಯರೇ,
ಸಹೋದ್ಯೋಗಿಗಳೇ,
ನಮಸ್ಕಾರ
ಅಧ್ಯಕ್ಷ ಸೋಲಿಹ್ ಅವರ ಜೊತೆ ಸಂಪರ್ಕದಲ್ಲಿರುವುದು ನನಗೆ ಸದಾ ಹೆಮ್ಮೆ ಎನಿಸುತ್ತದೆ. ನೀವು ಮತ್ತು ಮಾಲ್ಡವಿಯ ಜನರು ಸದಾ ನಮ್ಮ ಹೃದಯ ಮತ್ತು ಮನದಲ್ಲಿ ಇದ್ದೀರಿ.
ಮೊದಲ ವಾರ್ಷಿಕೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಕೆಲ ದಿನಗಳ ಹಿಂದೆಯಷ್ಟೇ ನೀವು ವಾರ್ಷಿಕೋತ್ಸವ ಆಚರಣೆ ಮಾಡಿದ್ದೀರಿ, ಇದು ಮಾಲ್ಡವಿಯಾದ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ನಿಟ್ಟಿನಲ್ಲಿ ಮಹತ್ವದ ವರ್ಷವಾಗಿದೆ. ಅಲ್ಲದೆ ಭಾರತ ಮತ್ತು ಮಾಲ್ಡವಿಯ ಸಂಬಂಧದ ದೃಷ್ಟಿಯಿಂದಲೂ ಇದು ಮಹತ್ವದ ವರ್ಷವಾಗಿದೆ.
ನಮ್ಮ ಸರ್ಕಾರದ “ನೆರೆಹೊರೆ ಮೊದಲು” ಮತ್ತು ನಿಮ್ಮ ಸರ್ಕಾರದ “ಭಾರತ ಮೊದಲು” ನೀತಿಗಳಿಂದಾಗಿ ಎಲ್ಲ ವಲಯಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರ ಸಂಬಂಧ ಸಾಕಷ್ಟು ಬಲವರ್ಧನೆಗೊಂಡಿದೆ. ನಮ್ಮ ನಿರ್ಧಾರಗಳ ಅನುಷ್ಠಾನದಿಂದಾಗಿ ಮಾಲ್ಡವಿಯಾದಲ್ಲಿ ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಸಾಮರ್ಥ್ಯವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆತಿದೆ.
ಮಾಲ್ಡವಿಯಾದ ಆದ್ಯತೆಗಳು ಮತ್ತು ಅಗತ್ಯತೆಗಳಿರುವ ಎಲ್ಲ ವಲಯಗಳಲ್ಲಿ ಸಾಧನೆಯನ್ನು ಮಾಡಿರುವುದು ಗಮನಾರ್ಹವಾಗಿದೆ.
ಇಂದು “ಮೇಡ್ ಇನ್ ಇಂಡಿಯಾ”ಅಡಿಯಲ್ಲಿ ಉತ್ಪಾದಿಸಲಾದ ಮೊದಲ ವೇಗದ ಫಾಸ್ಟ್ ಇಂಟರ್ ಸೆಪ್ಟರ್ ಕ್ರಾಫ್ಟ್ಅನ್ನು ಅಧಿಕೃತವಾಗಿ ಕರಾವಳಿ ಪಡೆಗೆ ಹಸ್ತಾಂತರಿಸಲಾಯಿತು. ಈ ಅತ್ಯಾಧುನಿಕ ಹಡಗನ್ನು ಎಲ್ ಅಂಡ್ ಟಿ ನನ್ನ ತವರು ರಾಜ್ಯ ಗುಜರಾತ್ ನಲ್ಲಿ ನಿರ್ಮಾಣ ಮಾಡಿದೆ. ಇದರಿಂದ ಮಾಲ್ಡವೀಸ್ ನಲ್ಲಿ ಸಾಗರ ಭದ್ರತೆ ಹೆಚ್ಚಳಕ್ಕೆ ಸಹಕಾರಿಯಾಗುವುದಲ್ಲದೆ, ನೀಲಿ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಉತ್ತೇಜನಕ್ಕೂ ನೆರವಾಗಲಿದೆ. ಈ ಪಹರೆ ಹಡಗಿಗೆ “ಕಾಮ್ಯಾಬ್” ಎಂದು ಹೆಸರಿಡಲಾಗಿದ್ದು, ಹಿಂದಿ ಮತ್ತು ಧಿವೇಹಿಯಲ್ಲಿ ಅದರರ್ಥ “ಯಶಸ್ಸು” ಎಂದು ಎನ್ನುತ್ತೇವೆ.
ಗೌರವಾನ್ವಿತರೆ,
ನಿಮ್ಮ ಸರ್ಕಾರ, ಅಡ್ಡು ನಗರದ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದನ್ನು ನಾನು ಸ್ಮರಿಸುತ್ತೇನೆ. ದ್ವೀಪದಲ್ಲಿರುವ ಸಮುದಾಯಗಳ ಜೀವನೋಪಾಯ ಬೆಂಬಲಿಸುವ ಸಮುದಾಯ ಅಭಿವೃದ್ಧಿ ಯೋಜನೆಗಳಲ್ಲಿ ಪಾಲುದಾರಿಕೆ ಹೊಂದುತ್ತಿರುವುದು ಭಾರತಕ್ಕೆ ಸಂತಸದ ವಿಷಯ.
ಗೆಳೆಯರೇ,
ನಮ್ಮ ಎರಡು ದೇಶಗಳ ನಡುವಿನ ಸಂಬಂಧ ಹತ್ತಿರವಾಗಲು ಪ್ರಮುಖ ಅಂಶ ಎಂದರೆ ಜನರು ಮತ್ತು ಜನರ ನಡುವಿನ ಸಂಪರ್ಕ. ಮಾಲ್ಡವೀಸ್ ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ಭಾರತ 5ನೇ ಕ್ರಮಾಂಕದಿಂದ 2ನೇ ಕ್ರಮಾಂಕಕ್ಕೆ ಏರಿಕೆಯಾಗಿದೆ. ಈ ವಾರ ದೆಹಲಿ, ಮುಂಬೈ ಮತ್ತು ಬೆಂಗಳೂರಿನಿಂದ ಮಾಲ್ಡವೀಸ್ ಗೆ ಮೂರು ನೇರ ವಿಮಾನಯಾನ ಸೇವೆ ಆರಂಭವಾಗಿದೆ.
ರುಪೆ ಪಾವತಿ ವ್ಯವಸ್ಥೆ, ಭಾರತೀಯರು ಮಾಲ್ಡವೀಸ್ ಗೆ ಪ್ರಯಾಣ ಬೆಳೆಸುವುದನ್ನು ಇನ್ನಷ್ಟು ಸುಲಭವಾಗಿಸಿದೆ. ರುಪೆ ಕಾರ್ಡ್ ಅನ್ನು ಬ್ಯಾಂಕ್ ಆಫ್ ಮಾಲ್ಡವೀಸ್ ಮೂಲಕ ಆರಂಭಿಸಲಾಗಿದೆ ಎಂಬುದು ನನಗೆ ಹರ್ಷ ತಂದಿದೆ.
ಗೌರವಾನ್ವಿತರೇ,
ಮಾಲೆಯ ಜನರಿಗಾಗಿ ನಾವು ಎಲ್ಇಡಿ ಬೀದಿ ದೀಪದ ವ್ಯವಸ್ಥೆಯನ್ನು ಇಂದು ಸಮರ್ಪಿಸಿದ್ದೇವೆ, ಈ ಪರಿಸರಸ್ನೇಹಿ ದೀಪಗಳ ಪ್ರಯೋಜನಗಳನ್ನು ಒದಗಿಸುತ್ತಿರುವುದು ಭಾರತಕ್ಕೆ ತೀವ್ರ ಸಂತೋಷದ ವಿಷಯವಾಗಿದೆ. ಅಲ್ಲದೆ ಅವರಿಗೆ ಶೇಕಡ 80ರಷ್ಟು ವೆಚ್ಚ ಉಳಿತಾಯವಾಗುತ್ತದೆ.
ಗೌರವಾನ್ವಿತರೇ,
ಹುಲ್ ಹುಲ್ ಮಾಲೆಯಲ್ಲಿ ಕ್ರಿಕೆಟ್ ಕ್ರೀಡಾಂಗಣ ಮತ್ತು ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ.
34 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ಯೋಜನೆಗಳ ಕಾರ್ಯವನ್ನು ಮತ್ತು ಅಡ್ಡುವಿನಲ್ಲಿ ರಸ್ತೆ ಮತ್ತು ಪುನರ್ ನಿರ್ಮಾಣ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ ಎಂಬ ಮಾಹಿತಿ ನನಗೆ ಬಂದಿದೆ. ಮುಂದಿನ ದಿನಗಳಲ್ಲಿ ಭಾರತದ ನೆರವಿನಿಂದ ನಡೆಯುತ್ತಿರುವ ಯೋಜನೆಗಳಿಂದ ಮಾಲ್ಡವೀಸ್ ಜನರಿಗೆ ಇನ್ನೂ ಹೆಚ್ಚಿನ ಅನುಕೂಲಗಳಾಗಲಿವೆ. ಭಾರತದ ಅತ್ಯಂತ ನಿಕಟ ಸ್ನೇಹಿ ಮತ್ತು ಸಾಗರ ಸಂಬಂಧ ಹೊಂದಿರುವ ನೆರೆ ರಾಷ್ಟ್ರ ಮಾಲ್ಡವಿಯಾದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮತ್ತು ಅಭಿವೃದ್ಧಿಗೆ ನಿರಂತರ ಪಾಲುದಾರಿಕೆ ಹೊಂದಲು ಭಾರತ ಬದ್ಧವಿದೆ. ಹಿಂದೂ ಮಹಾಸಾಗರದಲ್ಲಿ ಪರಸ್ಪರ ಭದ್ರತೆ ಮತ್ತು ಶಾಂತಿ ಸ್ಥಾಪನೆಗೆ ನಮ್ಮ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲಾಗುವುದು.
ಗೌರವಾನ್ವಿತರೆ,
ನಾನು ದೆಹಲಿಯಲ್ಲಿ ನಿಮ್ಮನ್ನು ಭೇಟಿ ಮಾಡಲು ಎದುರು ನೋಡುತ್ತೇನೆ, ಶಾಂತಿ ಮತ್ತು ಸ್ಥಿರತೆಗಾಗಿ ನಾನು ಮಾಲ್ಡವಿಯಾದ ಸ್ನೇಹಜೀವಿಗಳನ್ನು ಹೃದಯ ಪೂರ್ವಕವಾಗಿ ಅಭಿನಂದಿಸಲು ಬಯಸುತ್ತೇನೆ.
ಧನ್ಯವಾದ
ತುಂಬಾ ಧನ್ಯವಾದ