ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅಧ್ಯಕ್ಷತೆಯಲ್ಲಿ ಚೀನಾದಲ್ಲಿ ಕೊರೊನಾ ಸೋಂಕು ಹರಡಿರುವ ಕುರಿತು ಉನ್ನತ ಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅವರಿಗೆ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳು, ಕೈಗೊಂಡಿರುವ ಸಿದ್ಧತೆಗಳು ಮತ್ತು ಅದನ್ನು ಎದುರಿಸಲು ಕೈಗೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಸಚಿವಾಲಯ, ಆಸ್ಪತ್ರೆಗಳಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಪ್ರಯೋಗಾಲಯದ ಸಿದ್ಧತೆ, ಕ್ಷಿಪ್ರ ಪ್ರತಿಸ್ಪಂದನಾ ತಂಡಗಳ ಸಾಮರ್ಥ್ಯವೃದ್ಧಿ ಕ್ರಮಗಳು ಮತ್ತು ವ್ಯಾಪಕ ನಿಗಾ ಚಟುವಟಿಕೆಗಳ ಕುರಿತು ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿಯನ್ನು ನೀಡಿತು.
ಅಲ್ಲದೆ ನಾಗರಿಕ ವಿಮಾನಯಾನ ಸಚಿವಾಲಯ ಸೇರಿ, ಇತರೆ ಸಚಿವಾಲಯಗಳು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಪ್ರಧಾನ ಕಾರ್ಯದರ್ಶಿಗಳು ಪರಾಮರ್ಶೆ ನಡೆಸಿದರು.
ಪರಿಸ್ಥಿತಿಯ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು, ಇತರೆ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸೇರಿ ಸತತ ನಿಗಾ ಇರಿಸುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿಗಳಿಗೆ ಭರವಸೆಯನ್ನು ನೀಡಿದರು.
ಈವರೆಗೆ 7 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ 115 ವಿಮಾನಗಳ 20 ಸಾವಿರಕ್ಕೂ ಅಧಿಕ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗಿದೆ. ಸೋಂಕಿನ ಬಗ್ಗೆ ಪರೀಕ್ಷೆ ನಡೆಸಲು ದೇಶಾದ್ಯಂತ ಇರುವ ರಾಷ್ಟ್ರೀಯ ರೋಗ ಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಪ್ರಯೋಗಾಲಯಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ. ಎಲ್ಲಾ ರಾಜ್ಯ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದ್ದು, ಅವರಿಗೆ ನಿರಂತರ ಮಾಹಿತಿಯನ್ನು ನೀಡಲಾಗುತ್ತಿದೆ.
ಸಂಪುಟ ಕಾರ್ಯದರ್ಶಿ ಶ್ರೀ ರಾಜೀವ್ ಗೌಬ, ಗೃಹ ವ್ಯವಹಾರಗಳ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್ ಭಲ್ಲ, ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಶ್ರೀ ವಿಜಯ್ ಗೋಖಲೆ, ರಕ್ಷಣಾ ಕಾರ್ಯದರ್ಶಿ ಶ್ರೀ ಅಜಯ್ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿಗಳಾದ ಪ್ರೀತಿ ಸುದನ್, ನಾಗರಿಕ ವಿಮಾನಯಾನ ಕಾರ್ಯದರ್ಶಿ ಶ್ರೀ ಪ್ರದೀಪ್ ಸಿಂಗ್ ಖರೋಲಾ ಮತ್ತು ಇತರೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಹಿಸಿದ್ದರು.