ಪ್ರಧಾನಮಂತ್ರಿಯವರ ಪ್ರಧಾನಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು ನವ ದೆಹಲಿಯಲ್ಲಿಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್.ಡಿ.ಎಂ.ಎ.),ದ 15ನೇ ಸಂಸ್ಥಾಪನಾ ದಿನ ಉದ್ದೇಶಿಸಿ ಭಾಷಣ ಮಾಡಿದರು.
ತಮ್ಮ ಭಾಷಣದಲ್ಲಿ ಡಾ. ಮಿಶ್ರಾ ಅವರು, ಎನ್.ಡಿ.ಎಂ.ಎ.ಯೊಂದಿಗಿನ ತಮ್ಮ ನಂಟನ್ನು ಸ್ಮರಿಸಿದರು ಮತ್ತು ವಿಪತ್ತು ನಿರ್ವಹಣೆಯ ನಿಟ್ಟಿನಲ್ಲಿ ಎನ್.ಡಿ.ಎಂ.ಎಯ ಪ್ರಯತ್ನಗಳು ಮತ್ತು ಉಪಕ್ರಮಗಳು ವ್ಯಾಪಕ ಮನ್ನಣೆ ಪಡೆದಿವೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು. ಎಲ್ಲಾ ಹಂತಗಳಲ್ಲಿ ನಮ್ಮ ಅಭಿವೃದ್ಧಿ ಚಟುವಟಿಕೆಗಳಲ್ಲಿ ವಿಪತ್ತಿನ ಅಪಾಯವನ್ನು ತಗ್ಗಿಸುವುದನ್ನು ಖಚಿತಪಡಿಸಿಕೊಳ್ಳಲು ಅನೇಕ ಪಾಲುದಾರರು ಮತ್ತು ಬಾಧ್ಯಸ್ಥರೊಂದಿಗೆ ಒಮ್ಮತವನ್ನು ರೂಪಿಸುವಲ್ಲಿ ಎನ್.ಡಿ.ಎಂ.ಎ ಪಾತ್ರವನ್ನು ಅವರು ಶ್ಲಾಘಿಸಿದರು. ಅಂಗವೈಕಲ್ಯ – ಸಮಗ್ರ ವಿಪತ್ತು ಅಪಾಯ ತಗ್ಗಿಸುವ ಕುರಿತ ಮಾರ್ಗಸೂಚಿಗಳ ಬಿಡುಗಡೆಯು ವಿಕೋಪ ತಾಳಿಕೊಳ್ಳುವ ನಮ್ಮ ಹಾದಿಯಲ್ಲಿ ಒಂದು ಮೈಲಿಗಲ್ಲಿನ ಕ್ರಮವಾಗಿದೆ ಎಂದು ಡಾ.ಪಿ.ಕೆ. ಮಿಶ್ರಾ ಬಣ್ಣಿಸಿದರು. ಈ ಉಪಕ್ರಮವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಎಲ್ಲರೊಂದಿಗೆ ಎಲ್ಲರ ವಿಕಾಸ ಮುನ್ನೋಟದ ಆಧಾರದ ಮೇಲೆ ಸೇವೆ ಒದಗಿಸುತ್ತದೆ ಮತ್ತು ನಮ್ಮ ಸಮಾಜದ ಅತ್ಯಂತ ದುರ್ಬಲ ವರ್ಗದವರ ಅಗತ್ಯವನ್ನು ನಿಭಾಯಿಸುವ ಮೂಲಕ ಅಪಾಯ ತಗ್ಗಿಸುವ ಉಪಕ್ರಮಗಳನ್ನು ಹೆಚ್ಚು ಸಮಗ್ರಗೊಳಿಸುತ್ತದೆ ಎಂದರು. ಅಪಾಯದ ಪ್ರಮಾಣ ತಗ್ಗಿಸುವುದು ನಿರಂತರ ಪ್ರಕ್ರಿಯೆ ಎಂದ ಅವರು, ಈ ಪ್ರಕ್ರಿಯೆ ಮತ್ತು ಮಧ್ಯಪ್ರವೇಶವನ್ನು ಇನ್ನಷ್ಟು ಸುಧಾರಿಸಲು ನಿರಂತರವಾಗಿ ಶ್ರಮಿಸುವಂತೆ ಎನ್.ಡಿ.ಎಂ.ಎ.ಗೆ ತಿಳಿಸಿದರು.
ಈ ವರ್ಷದ ಸಂಸ್ಥಾಪನಾ ದಿನದ ಧ್ಯೇಯವಾಕ್ಯವಾದ “ಅಗ್ನಿ ಸುರಕ್ಷತೆ” ಕುರಿತು ಮಾತನಾಡಿದ ಅವರು, ಅಮೇಜಾನ್ ಕಾಡುಗಳಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚು ಮತ್ತು ಸೂರತ್ ನಲ್ಲಿ ನಡೆದ ಅಗ್ನಿ ದುರಂತದ ಪರಿಣಾಮವಾಗಿ ಈಗ ಈ ವಿಚಾರ ಜಗತ್ತಿನ ಗಮನ ಸೆಳೆದಿದೆ ಎಂದರು. ನಗರ ಪ್ರದೇಶಗಳಲ್ಲಿ ಅಗ್ನಿ ದುರಂತದ ಅಪಾಯ ತಗ್ಗಿಸುವ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು. ಮನೆಗಳಿಗೆ, ವಾಣಿಜ್ಯ ಕಟ್ಟಡಗಳಿಗೆ, ಗ್ರಾಮೀಣ, ನಗರಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿ, ಕಾಳ್ಗಿಚ್ಚು ಮತ್ತು ಕೈಗಾರಿಕಾ ಅಗ್ನಿ ದುರಂತ ಸೇರಿದಂತೆ ವಿವಿಧ ರೀತಿಯ ಅಗ್ನಿ ಅನಾಹುತಗಳು ವಿಭಿನ್ನ ಸವಾಲು ಒಡ್ಡಿದ್ದು – ಈ ಪ್ರತಿಯೊಂದರ ವಿರುದ್ಧದ ಹೋರಾಟಕ್ಕೂ ನಿರ್ದಿಷ್ಟ ಕಾರ್ಯತಂತ್ರ ಬೇಕಾಗುತ್ತದೆ ಎಂದರು. ಅಗ್ನಿಶಾಮಕ ದಳದವರಿಗೆ ಸೂಕ್ತ ತರಬೇತಿ ಮತ್ತು ಸೂಕ್ತ ರಕ್ಷಣಾ ಕವಚದ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಆದ್ಯತೆಯ ಮೇಲೆಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಸ್ಥಾಪಿಸುವಂತೆ ತಿಳಿಸಿದ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರು, ಎಲ್ಲ ಮಹತ್ವದ ಮೂಲಸೌಕರ್ಯ, ವಾಣಿಜ್ಯ ಮಳಿಗೆಗಳು, ವಾಣಿಜ್ಯ ಸಮುಚ್ಚಯಗಳು, ಸರ್ಕಾರಿ ಕಟ್ಟಡಗಳಲ್ಲಿ ನಿಯಮಿತವಾಗಿ ಅಗ್ನಿ ಸುರಕ್ಷತೆಯ ಪರಿಶೀಲನೆ ನಡೆಯಬೇಕು ಎಂದರು.
ಪ್ರಮುಖ ನಗರಗಳಿಗೆ ಇದು ವಿಶೇಷವಾಗಿ ಸಂಬಂಧಿಸಿದ್ದಾಗಿದ್ದು, ಅಲ್ಲಿ ಪೌರ ಕಾನೂನುಗಳನ್ನು ಪಾಲಿಸುವುದರಿಂದ, ಸೂರತ್‌ನ ವಾಣಿಜ್ಯ ಸಂಕೀರ್ಣವೊಂದರಲ್ಲಿ ನಡೆಯುತ್ತಿದ್ದ ತರಬೇತಿ ಕೇಂದ್ರವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಅನೇಕ ವಿದ್ಯಾರ್ಥಿಗಳು ಸಾವನ್ನಪ್ಪಿದಂತಹ ಘಟನೆಗಳನ್ನು ತಡೆಯಬಹುದು ಎಂದರು.
ಮುಂಬೈನಲ್ಲಿ ಅಗ್ನಿ ಅನಾಹುತ ತಡೆ ಮುನ್ನರಿಕೆ, ನಿಗ್ರಹ ಮತ್ತು ಸ್ಪಂದನೆ ಕುರಿತಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳನ್ನು ಡಾ.ಪಿ.ಕೆ. ಮಿಶ್ರಾ ಶ್ಲಾಘಿಸಿದರು. ಇದರಲ್ಲಿ ಡ್ರೋನ್ ಗಳು, ಕೈಯಲ್ಲಿ ಹಿಡಿಯಬಹುದಾದ ಲೆಸರ್ ಇನ್ಫ್ರಾ ರೆಡ್ ಕ್ಯಾಮರಾಗಳು, ಶೋಧಿಸಿ ಚಿತ್ರ ತೆಗೆಯುವ ಕ್ಯಾಮರಾ ಒಳಗೊಂಡ ರಿಮೋಟ್ ನಿಯಂತ್ರಿತ ರೋಬೋಟ್ ಗಳನ್ನು ಅಗ್ನಿ ಶಾಮಕ ಕಾರ್ಯಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಇತರ ನಗರಗಳೂ ಮುಂಬೈ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಅವರು ಆಗ್ರಹಿಸಿದರು.
ಅಗ್ನಿ ಆಕಸ್ಮಿಕದ ಸಂದರ್ಭದಲ್ಲಿ ಸ್ಪಂದನೆ ಸಮಯ ಬಹಳ ನಿರ್ಣಾಯಕವಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಮುಂಬೈ, ಹೈದರಾಬಾದ್ ಮತ್ತು ಗುರಗಾಂವ್‌ಗಳಲ್ಲಿ ಅಭಿವೃದ್ಧಿಪಡಿಸಿದಂತೆ ಸಂಚಾರಿ ಅಗ್ನಿಶಾಮಕ ಕೇಂದ್ರಗಳು ಸ್ಪಂದನೆ ಸಮಯವನ್ನು ಕಡಿಮೆ ಮಾಡುವ ಒಂದು ನವೀನ ಮಾರ್ಗವಾಗಿವೆ ಎಂದು ಹೇಳಿದರು. ಸ್ಥಳೀಯ ಆಡಳಿತಗಳು ಅಗ್ನಿ ಶಾಮಕ ಸೇವೆಯೊಂದಿಗೆ ಸಹಯೋಗ ಸಾಧಿಸಿ, ಸಮರ್ಥವಾಗಿ ಇಂಥ ಸನ್ನಿವೇಶದಲ್ಲಿ ಸ್ಪಂದಿಸಲು ತಮ್ಮ ಸ್ಥಳೀಯ ಸನ್ನಿವೇಶಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ಪರಿಹಾರ ರೂಪಿಸುವಂತೆ ತಿಳಿಸಿದರು.
ಪಾಶ್ಚಿಮಾತ್ಯ ಜಗತ್ತಿನಲ್ಲಿ, ಯಾವುದೇ ಅನಾಹುತ ಅಥವಾ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಅಗ್ನಿಶಾಮಕ ಸೇವೆಗಳು ಮೊದಲ ಸಾಲಿನಲ್ಲಿ ನಿಲ್ಲುತ್ತವೆ ಎಂಬ ಅಂಶದ ಬಗ್ಗೆ ಡಾ.ಪಿ.ಕೆ. ಮಿಶ್ರಾ ಗಮನ ಸೆಳೆದರು. ಯಾವುದೇ ವಿಪತ್ತು ಅಥವಾ ತುರ್ತು ಸ್ಥಿತಿಯ ಸಂದರ್ಭದಲ್ಲಿ ಬಾಧಿತ ಸಮುದಾಯದ ತರುವಾಯ ಅಗ್ನಿ ಶಾಮಕ ಪಡೆಯನ್ನು ಪ್ರಥಮ ಸ್ಪಂದಕನಾಗಿ ಪರಿಗಣಿಸುವ ರೀತಿಯಲ್ಲಿ ನಾವು ಅಗ್ನಿ ಶಾಮಕ ಸೇವೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಅವರು ಹೇಳಿದರು. ಅಗ್ನಿ ಸುರಕ್ಷತೆಯನ್ನು ಪ್ರತಿಯೊಬ್ಬರ ಕಾರ್ಯಸೂಚಿಯನ್ನಾಗಿ ಮಾಡಲು ಸಮುದಾಯ ಮಟ್ಟದಲ್ಲಿ ಬೃಹತ್ ಜಾಗೃತಿ ಅಭಿಯಾನದ ಜೊತೆಗೆ ನಿಯಮಿತ ಅಣಕು ಪ್ರದರ್ಶನಗಳೂ ಅಗತ್ಯವಾಗಿವೆ ಎಂದು ಅವರು ಹೇಳಿದರು. 2012 ರಲ್ಲಿ ಬಿಡುಗಡೆ ಮಾಲಾಗಿರುವ ಅಗ್ನಿಶಾಮಕ ಸೇವೆಗಳ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಮರುಪರಿಶೀಲಿಸಲು ಮತ್ತು ನವೀಕರಿಸಲು ಅವರು ಎನ್‌ಡಿಎಂಎಗೆ ಕರೆ ನೀಡಿದರು.
ಕೊನೆಯದಾಗಿ ಅವರು, ಅಗ್ನಿ ಸುರಕ್ಷತೆ ಪ್ರತಿಯೊಬ್ಬರ ಕಾಳಜಿಯ ವಿಚಾರವಾಗಿದ್ದು, ನಾವು “ಸರ್ವರಿಗೂ ಅಗ್ನಿ ಸುರಕ್ಷತೆ” ಕಲ್ಪಿಸಲು ಶ್ರಮಿಸಬೇಕಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಎನ್.ಡಿ.ಎಂ.ಎ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಅಗ್ನಿ ಶಾಮಕ ಸೇವೆಯ ಪ್ರತಿನಿಧಿಗಳು ಭಾಗಿಯಾಗಿದ್ದರು.