ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೌಶಲ ಘಟಿಕೋತ್ಸವವನ್ನು ಉದ್ದೇಶಿಸಿದ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.
ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕೌಶಲ್ಯ ಅಭಿವೃದ್ಧಿಯ ಈ ಉತ್ಸವವು ಸ್ವತಃ ವಿಶಿಷ್ಟವಾದದ್ದು ಮತ್ತು ಇಂದು ದೇಶಾದ್ಯಂತ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳ ಜಂಟಿ ಘಟಿಕೋತ್ಸವದ ಕಾರ್ಯಕ್ರಮವು ಅತ್ಯಂತ ಶ್ಲಾಘನೀಯ ಉಪಕ್ರಮವಾಗಿದೆ ಎಂದರು. ಕೌಶಲ ಘಟಿಕೋತ್ಸವವು ಇಂದಿನ ಭಾರತದ ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ತಂತ್ರಜ್ಞಾನದ ಮೂಲಕ ಸಾವಿರಾರು ಯುವಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಎಲ್ಲ ಯುವಕರಿಗೆ ಶುಭ ಕೋರಿದರು.
ಯಾವುದೇ ದೇಶದ ನೈಸರ್ಗಿಕ ಅಥವಾ ಖನಿಜ ಸಂಪನ್ಮೂಲಗಳು ಅಥವಾ ಅದರ ಉದ್ದನೆಯ ಕರಾವಳಿಯಂತಹ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಲ್ಲಿ ಯುವಕರ ಶಕ್ತಿಯ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ದೇಶವು ಬಲಿಷ್ಠ ಯುವ ಶಕ್ತಿಯೊಂದಿಗೆ ಹೆಚ್ಚು ಅಭಿವೃದ್ಧಿ ಹೊಂದುತ್ತದೆ ಮತ್ತು ಆ ಮೂಲಕ ರಾಷ್ಟ್ರದ ಸಂಪನ್ಮೂಲಗಳಿಗೆ ನ್ಯಾಯ ಒದಗಿಸುತ್ತದೆ ಎಂದು ಹೇಳಿದರು. ಇಂದು, ಇದೇ ರೀತಿಯ ಚಿಂತನೆಯು ಭಾರತದ ಯುವಕರನ್ನು ಸಬಲೀಕರಣಗೊಳಿಸುತ್ತಿದೆ, ಇದು ಇಡೀ ಪರಿಸರ ವ್ಯವಸ್ಥೆಯಲ್ಲಿ ಅಭೂತಪೂರ್ವ ಸುಧಾರಣೆಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಇದರಲ್ಲಿ ದೇಶದ ದೃಷ್ಟಿಕೋನವು ದ್ವಿಮುಖವಾಗಿದೆ" ಎಂದು ಪ್ರಧಾನಿ ಹೇಳಿದರು. ಕೌಶಲ್ಯ ಮತ್ತು ಶಿಕ್ಷಣದ ಮೂಲಕ ಹೊಸ ಅವಕಾಶಗಳ ಲಾಭ ಪಡೆಯಲು ಭಾರತವು ತನ್ನ ಯುವಕರನ್ನು ಸಜ್ಜಗೊಳಿಸುತ್ತಿದೆ ಎಂದು ವಿವರಿಸಿದ ಅವರು, ಸುಮಾರು 4 ದಶಕಗಳ ನಂತರ ಸ್ಥಾಪಿಸಲಾದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದರು. ಸರ್ಕಾರವು ಹೆಚ್ಚಿನ ಸಂಖ್ಯೆಯ ಹೊಸ ವೈದ್ಯಕೀಯ ಕಾಲೇಜುಗಳನ್ನು ಮತ್ತು ಐಐಟಿಗಳು, ಐಐಎಂಗಳು ಅಥವಾ ಐಟಿಐಗಳಂತಹ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಸ್ಥಾಪಿಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಿ, ʻಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆʼ ಅಡಿಯಲ್ಲಿ ತರಬೇತಿ ಪಡೆದ ಕೋಟ್ಯಂತರ ಯುವಕರ ಬಗ್ಗೆ ಪ್ರಸ್ತಾಪಿಸಿದರು. ಮತ್ತೊಂದೆಡೆ, ಉದ್ಯೋಗಗಳನ್ನು ಒದಗಿಸುವ ಸಾಂಪ್ರದಾಯಿಕ ಕ್ಷೇತ್ರಗಳನ್ನು ಸಹ ಬಲಪಡಿಸಲಾಗುತ್ತಿದೆ ಮತ್ತು ಉದ್ಯೋಗ ಹಾಘೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಹೊಸ ಕ್ಷೇತ್ರಗಳನ್ನು ಸಹ ಉತ್ತೇಜಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಸರಕುಗಳ ರಫ್ತು, ಮೊಬೈಲ್ ರಫ್ತು, ಎಲೆಕ್ಟ್ರಾನಿಕ್ ರಫ್ತು, ಸೇವೆಗಳ ರಫ್ತು, ರಕ್ಷಣಾ ರಫ್ತು ಮತ್ತು ಉತ್ಪಾದನೆಯಲ್ಲಿ ಭಾರತವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ ಮತ್ತು ಇದೇ ವೇಳೆ ಬಾಹ್ಯಾಕಾಶ, ನವೋದ್ಯಮಗಳು, ಡ್ರೋನ್‌ಗಳು, ಅನಿಮೇಷನ್, ಎಲೆಕ್ಟ್ರಿಕ್ ವಾಹನಗಳು, ಸೆಮಿ ಕಂಡಕ್ಟಟರ್‌ಗಳು ಮುಂತಾದ ಅನೇಕ ಕ್ಷೇತ್ರಗಳಲ್ಲಿ ಯುವಕರಿಗೆ ಹೆಚ್ಚಿನ ಸಂಖ್ಯೆಯ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು.
"ಇಂದು, ಈ ಶತಮಾನವು ಭಾರತದ ಶತಮಾನವಾಗಲಿದೆ ಎಂದು ಇಡೀ ಜಗತ್ತು ನಂಬಿದೆ" ಎಂದು ಪ್ರಧಾನಿ ಹೇಳಿದರು. ವಿಶ್ವದ ಅನೇಕ ದೇಶಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿರುವಾಗ, ಭಾರತವು ದಿನದಿಂದ ದಿನಕ್ಕೆ ಯೌವನದತ್ತ ಸಾಗುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಭಾರತವು ಈ ದೊಡ್ಡ ಅನುಕೂಲವನ್ನು ಹೊಂದಿದೆ" ಎಂದು ಒತ್ತಿ ಹೇಳಿದ ಅವರು, ಜಗತ್ತು ದೇಶದ ನುರಿತ ಯುವಕರಿಗಾಗಿ ಭಾರತದತ್ತ ನೋಡುತ್ತಿದೆ ಎಂದು ಹೇಳಿದರು. ಜಾಗತಿಕ ಕೌಶಲ್ಯ ನಕ್ಷೆಗೆ ಸಂಬಂಧಿಸಿದ ಭಾರತದ ಪ್ರಸ್ತಾಪವನ್ನು ಇತ್ತೀಚೆಗೆ ʻಜಿ 20 ಶೃಂಗಸಭೆʼಯಲ್ಲಿ ಅನುಮೋದಿಸಲಾಗಿದೆ, ಇದು ಮುಂಬರುವ ದಿನಗಳಲ್ಲಿ ಯುವಕರಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದರು. ಸೃಷ್ಟಿಯಾಗುತ್ತಿರುವ ಯಾವುದೇ ಅವಕಾಶವನ್ನು ವ್ಯರ್ಥ ಮಾಡಬೇಡಿ ಎಂದು ಸಲಹೆ ನೀಡಿದ ಪ್ರಧಾನಿ, ಈ ಉದ್ದೇಶವನ್ನು ಬೆಂಬಲಿಸಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು. ಹಿಂದಿನ ಸರ್ಕಾರಗಳಲ್ಲಿ ಕೌಶಲ್ಯ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ್ಯದ ಬಗ್ಗೆ ಗಮನಸೆಳೆದ ಶ್ರೀ ಮೋದಿ, "ನಮ್ಮ ಸರ್ಕಾರವು ಕೌಶಲ್ಯದ ಮಹತ್ವವನ್ನು ಅರ್ಥಮಾಡಿಕೊಂಡಿತು ಮತ್ತು ಅದಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಿತು ಹಾಘೂ ಅದಕ್ಕಾಗಿ ಪ್ರತ್ಯೇಕ ಅನುದಾನವನ್ನು ನಿಗದಿಪಡಿಸಿತು" ಎಂದು ಹೇಳಿದರು. ಭಾರತವು ಹಿಂದೆಂದಿಗಿಂತಲೂ ತನ್ನ ಯುವಕರ ಕೌಶಲ್ಯಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ ಎಂದು ಒತ್ತಿಹೇಳಿದ ಅವರು, ʻಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆʼಯ ಉದಾಹರಣೆಯನ್ನು ನೀಡಿದರು, ಇದು ತಳಮಟ್ಟದಲ್ಲಿ ಯುವಕರನ್ನು ಬಲಪಡಿಸಿದೆ. ಈ ಯೋಜನೆಯಡಿ ಈವರೆಗೆ ಸುಮಾರು 1.5 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಕೈಗಾರಿಕಾ ಕ್ಲಸ್ಟರ್‌ಗಳ ಬಳಿ ಹೊಸ ಕೌಶಲ್ಯ ಕೇಂದ್ರಗಳನ್ನು ಸಹ ಸ್ಥಾಪಿಸಲಾಗುತ್ತಿದೆ, ಇದು ಉದ್ಯಮವು ತನ್ನ ಅವಶ್ಯಕತೆಗಳನ್ನು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ, ಆ ಮೂಲಕ ಉತ್ತಮ ಉದ್ಯೋಗಾವಕಾಶಗಳಿಗಾಗಿ ಯುವಕರಲ್ಲಿ ಅಗತ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಕೌಶಲ್ಯ, ಕೌಶಲ್ಯ ಅಭಿವೃದ್ಧಿ ಮತ್ತು ಮರು ಕೌಶಲ್ಯದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ತ್ವರಿತವಾಗಿ ಬದಲಾಗುತ್ತಿರುವ ಬೇಡಿಕೆಗಳು ಮತ್ತು ಉದ್ಯೋಗಗಳ ಸ್ವರೂಪದ ಬಗ್ಗೆ ಗಮನ ಸೆಳೆದರು. ಮತ್ತು ಅದಕ್ಕೆ ಅನುಗುಣವಾಗಿ ಕೌಶಲ್ಯಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯದ ಬಗ್ಗೆ ಒತ್ತಿ ಹೇಳಿದರು. ಆದ್ದರಿಂದ, ಕೈಗಾರಿಕೆ, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು ಪ್ರಸ್ತುತ ಸಮಯಕ್ಕೆ ಅನುಗುಣವಾಗಿರುವುದು ಬಹಳ ಮುಖ್ಯ ಎಂದು ಪ್ರಧಾನಿ ಹೇಳಿದರು. ಕೌಶಲ್ಯಕ್ಕೆ ಹೆಚ್ಚು ಗಮನ ನೀಡುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಸುಮಾರು 5 ಸಾವಿರ ಹೊಸ ಐಟಿಐಗಳನ್ನು ಸ್ಥಾಪಿಸಲಾಗಿದೆ ಮತ್ತು 4 ಲಕ್ಷಕ್ಕೂ ಹೆಚ್ಚು ಹೊಸ ಐಟಿಐ ಸೀಟುಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಉತ್ತಮ ಕಾರ್ಯವಿಧಾನಗಳ ಜೊತೆಗೆ ದಕ್ಷ ಮತ್ತು ಉತ್ತಮ ಗುಣಮಟ್ಟದ ತರಬೇತಿಯನ್ನು ಒದಗಿಸುವ ಉದ್ದೇಶದಿಂದ ಈ ಸಂಸ್ಥೆಗಳನ್ನು ಮಾದರಿ ಐಟಿಐಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು.
"ಭಾರತದಲ್ಲಿ ಕೌಶಲ್ಯ ಅಭಿವೃದ್ಧಿಯ ವ್ಯಾಪ್ತಿ ನಿರಂತರವಾಗಿ ಹೆಚ್ಚುತ್ತಿದೆ. ನಾವು ಕೇವಲ ಮೆಕ್ಯಾನಿಕ್‌ಗಳು, ಎಂಜಿನಿಯರ್‌ಗಳು, ತಂತ್ರಜ್ಞಾನ ಅಥವಾ ಇನ್ನಾವುದೇ ಸೇವೆಗೆ ಸೀಮಿತವಾಗಿಲ್ಲ", ಎಂದು ಪ್ರಧಾನಿ ಹೇಳಿದರು. ಮಹಿಳಾ ಸ್ವಸಹಾಯ ಗುಂಪುಗಳನ್ನು ಡ್ರೋನ್ ತಂತ್ರಜ್ಞಾನಕ್ಕಾಗಿ ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ನಮ್ಮ ದೈನಂದಿನ ಜೀವನದಲ್ಲಿ ವಿಶ್ವಕರ್ಮರ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, ʻಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆʼಯು ವಿಶ್ವಕರ್ಮರಿಗೆ ತಮ್ಮ ಸಾಂಪ್ರದಾಯಿಕ ಕೌಶಲ್ಯಗಳನ್ನು ಆಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳೊಂದಿಗೆ ಜೋಡಿಸಲು ಅನುವು ಮಾಡಿಕೊಡುತ್ತದೆ ಎಂದರು.
ಭಾರತದ ಆರ್ಥಿಕತೆಯು ವಿಸ್ತರಿಸುತ್ತಿರುವುದರಿಂದ ಯುವಕರಿಗೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಭಾರತದಲ್ಲಿ ಉದ್ಯೋಗ ಸೃಷ್ಟಿ ಹೊಸ ಎತ್ತರವನ್ನು ತಲುಪಿದೆ ಮತ್ತು ಇತ್ತೀಚಿನ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ನಿರುದ್ಯೋಗ ದರವು 6 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ಅವರು ಹೇಳಿದರು. ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರುದ್ಯೋಗವು ವೇಗವಾಗಿ ಕಡಿಮೆಯಾಗುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಅಭಿವೃದ್ಧಿಯ ಪ್ರಯೋಜನಗಳು ಗ್ರಾಮಗಳು ಮತ್ತು ನಗರಗಳೆರಡನ್ನೂ ಸಮಾನವಾಗಿ ತಲುಪುತ್ತಿವೆ ಮತ್ತು ಇದರ ಪರಿಣಾಮವಾಗಿ, ಹಳ್ಳಿಗಳು ಮತ್ತು ನಗರಗಳಲ್ಲಿ ಹೊಸ ಅವಕಾಶಗಳು ಸಮಾನವಾಗಿ ಹೆಚ್ಚುತ್ತಿವೆ ಎಂದು ಒತ್ತಿ ಹೇಳಿದರು. ಭಾರತದ ಕಾರ್ಯಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಅಭೂತಪೂರ್ವ ಹೆಚ್ಚಾಗಿರುವ ಬಗ್ಗೆ ಅವರು ಗಮನಸೆಳೆದರು ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷಗಳಲ್ಲಿ ಭಾರತದಲ್ಲಿ ಪ್ರಾರಂಭಿಸಲಾದ ಯೋಜನೆಗಳು ಮತ್ತು ಅಭಿಯಾನಗಳ ಪರಿಣಾಮವನ್ನು ಉಲ್ಲೇಖಿಸಿದರು.
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಮುಂಬರುವ ವರ್ಷಗಳಲ್ಲಿ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿಯಲಿದೆ ಎಂದು ಮಾಹಿತಿ ನೀಡಿದರು. ಭಾರತವನ್ನು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡುವ ತಮ್ಮ ಸಂಕಲ್ಪವನ್ನು ಅವರು ಸ್ಮರಿಸಿದರು. ಮುಂದಿನ 3-4 ವರ್ಷಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಾಗುವ ವಿಶ್ವಾಸವನ್ನು ʻಐಎಂಎಫ್ʼ ಹೊಂದಿದೆ ಎಂದು ಹೇಳಿದರು. ಇದು ದೇಶದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ಸ್ಮಾರ್ಟ್ ಮತ್ತು ನುರಿತ ಮಾನವಶಕ್ತಿ ಪರಿಹಾರಗಳನ್ನು ಒದಗಿಸುವ ಸಲುವಾಗಿ ಭಾರತವನ್ನು ವಿಶ್ವದ ಅತಿ ದೊಡ್ಡ ನುರಿತ ಮಾನವಶಕ್ತಿಯ ಕೇಂದ್ರವನ್ನಾಗಿ ಮಾಡಬೇಕೆಂದು ಒತ್ತಿ ಹೇಳಿದರು. "ಕಲಿಕೆ, ಬೋಧನೆ ಮತ್ತು ಮುಂದುವರಿಯುವ ಪ್ರಕ್ರಿಯೆಗಳು ಹಾಗೆಯೇ ಮುಂದೆ ಸಾಗಬೇಕು. ಜೀವನದ ಪ್ರತಿಯೊಂದು ಹಂತದಲ್ಲೂ ನೀವು ಯಶಸ್ವಿಯಾಗಲಿ", ಎಂದು ಪ್ರಧಾನಿ ಹೇಳಿದರು.