ಪ್ರಧಾನಮಂತ್ರಿ ಅವರು ದೇಶದ ಬುಡಕಟ್ಟು ಜನರ ಕಲ್ಯಾಣ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡು ಮುಂಚೂಣಿಯಲ್ಲಿದ್ದಾರೆ ಮತ್ತು ದೇಶದ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಅವರ ಕೊಡುಗೆಗೆ ಸೂಕ್ತ ಗೌರವವನ್ನು ನೀಡುತ್ತಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೆಬ್ರವರಿ 16ರಂದು ಬೆಳಿಗ್ಗೆ 10.30ಕ್ಕೆ ಬೃಹತ್ ರಾಷ್ಟ್ರೀಯ ಬುಡಕಟ್ಟು ಉತ್ಸವ-ಆದಿ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.
ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿ ಬರುವ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ನಿಗಮ (ಟ್ರೈಫೆಡ್) ಈ ವಾರ್ಷಿಕ ಉತ್ಸವವನ್ನು ಆಯೋಜಿಸಿದ್ದು, ಆದಿ ಮಹೋತ್ಸವದಲ್ಲಿ ಆದಿವಾಸಿಗಳ ಸಂಸ್ಕೃತಿ, ಕರಕುಶಲ ಕಲೆ, ಅಹಾರ, ವಾಣಿಜ್ಯ ಮತ್ತು ಸಾಂಪ್ರದಾಯಿಕ ಕಲೆ ಪ್ರದರ್ಶನ ನಡೆಯಲಿದೆ. ಈ ವರ್ಷದ ಉತ್ಸವವನ್ನು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೆಬ್ರವರಿ 16ರಿಂದ 27ರವರೆಗೆ ಆಯೋಜಿಸಲಾಗಿದೆ.
ಸುಮಾರು 200 ಮಳಿಗೆಗಳಲ್ಲಿ ದೇಶಾದ್ಯಂತ ಇರುವ ಬುಡಕಟ್ಟು ಜನರ ಶ್ರೀಮಂತ ಮತ್ತು ವೈವಿಧ್ಯಮಯ ಪರಂಪರೆಯನ್ನು ಉತ್ಸವದಲ್ಲಿ ಬಿಂಬಿಸಲಾಗುವುದು. ಮಹೋತ್ಸವದಲ್ಲಿ ಸುಮಾರು 1000 ಬುಡಕಟ್ಟು ಕರಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಾಮೂಲಿ ಕರಕುಶಲಕಲೆ, ಕೈಮಗ್ಗ, ಮಡಿಕೆ, ಆಭರಣ ಇತ್ಯಾದಿಗಳ ಜತೆಗೆ ಆದಿವಾಸಿಗಳು ಬೆಳೆದ ಶ್ರೀ ಅನ್ನ ಪ್ರದರ್ಶನ ವಿಶೇಷ ಆಕರ್ಷಣೆಯಾಗಿರಲಿದೆ.