ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಇಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.
ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳು ಸೇರಿದಂತೆ ಪ್ರಾದೇಶಿಕ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಈ ನಿಟ್ಟಿನಲ್ಲಿ ಭಯೋತ್ಪಾದನೆ, ಮಾದಕ ದ್ರವ್ಯಗಳು, ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮಾನವ ಕಳ್ಳಸಾಗಾಣಿಕೆ ಬಗ್ಗೆ ಉಭಯ ನಾಯಕರೂ ಪರಸ್ಪರ ಕಳವಳ ವ್ಯಕ್ತಪಡಿಸಿದರು. ಜೊತೆಗೆ ಮಾನವ ಹಕ್ಕುಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕಾದ ಅಗತ್ಯದ ಬಗ್ಗೆ ಅವರು ಮಾತನಾಡಿದರು
ಇಂಡೋ-ಪೆಸಿಫಿಕ್ ವಲಯದಲ್ಲಿ ಹೆಚ್ಚುತ್ತಿರುವ ದ್ವಿಪಕ್ಷೀಯ ಸಹಯೋಗ ಮತ್ತು ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಉತ್ತೇಜಿಸುವಲ್ಲಿ ಭಾರತ-ಫ್ರಾನ್ಸ್ ಪಾಲುದಾರಿಕೆ ವಹಿಸುವ ಪ್ರಮುಖ ಪಾತ್ರವನ್ನು ಉಭಯ ನಾಯಕರು ಪರಿಶೀಲಿಸಿದರು.
ಉಭಯ ದೇಶಗಳು ಆಳವಾಗಿ ಆದರಿಸುವ ʻಭಾರತ-ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆʼಯ ಸ್ಫೂರ್ತಿಯೊಂದಿಗೆ ನಿಕಟ ಮತ್ತು ನಿಯಮಿತ ಸಮಾಲೋಚನೆಗಳನ್ನು ಮುಂದುವರಿಸಲು ನಾಯಕರು ಪರಸ್ಪರ ಸಮ್ಮತಿಸಿದರು.