ಭಾರತದ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮತ್ತು ಸಿಂಗಾಪುರದ ಪೇ ನೌ ನಡುವಿನ ಗಡಿಯಾಚೆಗಿನ ಸಂಪರ್ಕದ ಚಾಲನೆಗೆ ಫೆಬ್ರವರಿ 21, 2023 ರಂದು ಬೆಳಿಗ್ಗೆ 11 ಗಂಟೆಗೆ (ಭಾರತೀಯ ಕಾಲಮಾನ) ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸಿಂಗಾಪುರದ ಪ್ರಧಾನಮಂತ್ರಿ ಶ್ರೀ ಲೀ ಸಿಯೆನ್ ಲೂಂಗ್ ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ. ಸಾಕ್ಷಿಯಾಗಲಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ (ಎಂ ಎ ಎಸ್) ವ್ಯವಸ್ಥಾಪಕ ನಿರ್ದೇಶಕ ಶ್ರೀ ರವಿ ಮೆನನ್ ಅವರು ಈ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ.
ಫಿನ್‌ಟೆಕ್ ನಾವೀನ್ಯತೆಯಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವವು ಭಾರತದ ಅತ್ಯುತ್ತಮ ದರ್ಜೆಯ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಜಾಗತೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯುಪಿಐನ ಪ್ರಯೋಜನಗಳು ಭಾರತಕ್ಕೆ ಮಾತ್ರ ಸೀಮಿತವಾಗದೆ, ಇತರ ದೇಶಗಳು ಸಹ ಅದರಿಂದ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಪ್ರಧಾನ ಮಂತ್ರಿಯವರ ಪ್ರಮುಖ ಆದ್ಯತೆಯಾಗಿದೆ. ಈ ಎರಡು ಪಾವತಿ ವ್ಯವಸ್ಥೆಗಳ ಸಂಪರ್ಕವು ಎರಡೂ ದೇಶಗಳ ನಿವಾಸಿಗಳಿಗೆ ಗಡಿಯಾಚೆಗಿನ ಹಣ ರವಾನೆಯನ್ನು ವೇಗವಾಗಿ ಮತ್ತು ವೆಚ್ಚ-ಪರಿಣಾಮಕಾರಿಯಾಗಿಸಲು ಅನುವು ಮಾಡಿಕೊಡುತ್ತದೆ. ಇದು ಸಿಂಗಾಪುರದಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಸಿಂಗಾಪುರದಿಂದ ಭಾರತಕ್ಕೆ ಹಾಗೂ ಬಾರತದಿಂದ ಸಿಂಗಾಪುರಕ್ಕೆ ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಹಣವನ್ನು ವರ್ಗಾಯಿಸಲು ಸಹಾಯ ಮಾಡುತ್ತದೆ.