ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯ ನೇತೃತ್ವದಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ಆಗಸ್ಟ್ 22-24, 2023 ರವರೆಗೆ ನಡೆಯುವ 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಘನತೆವೆತ್ತ ಶ್ರೀ ಸಿರಿಲ್ ರಾಮಫೋಸಾ ಅವರು ನೀಡಿದ ಆಹ್ವಾನದ ಮೇರೆಗೆ ನಾನು ದಕ್ಷಿಣ ಆಫ್ರಿಕಾ ಗಣತಂತ್ರಕ್ಕೆ ಭೇಟಿ ನೀಡುತ್ತಿದ್ದೇನೆ.
ಬ್ರಿಕ್ಸ್ ವಿವಿಧ ವಲಯಗಳಲ್ಲಿ ಬಲವಾದ ಸಹಕಾರ ಕಾರ್ಯಸೂಚಿಯನ್ನು ಅನುಸರಿಸುತ್ತಿದೆ. ಅಭಿವೃದ್ಧಿಯ ಅಗತ್ಯತೆಗಳು ಮತ್ತು ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ ಸೇರಿದಂತೆ ಇಡೀ ಜಾಗತಿಕ ದಕ್ಷಿಣ ಭಾಗದ ಭೂಗೋಳಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಮತ್ತು ಸಂಧಾನ ಮಾಡಲು ಬ್ರಿಕ್ಸ್ ವೇದಿಕೆಯಾಗಿದೆ ಎಂದು ನಾವು ಹೆಮ್ಮೆ ಪೂರ್ವಕ ಗೌರವಿಸುತ್ತೇವೆ. ಈ ಶೃಂಗಸಭೆಯು ಬ್ರಿಕ್ಸ್ ಗೆ ಭವಿಷ್ಯದ ಸಹಕಾರ ಕ್ಷೇತ್ರಗಳನ್ನು ಗುರುತಿಸಲು ಮತ್ತು ಸಾಂಸ್ಥಿಕ ಅಭಿವೃದ್ಧಿಯನ್ನು ಪರಿಶೀಲಿಸಲು ಉಪಯುಕ್ತ ಅವಕಾಶವನ್ನು ಒದಗಿಸುತ್ತದೆ.
ನಾನು ಜೋಹಾನ್ಸ್ ಬರ್ಗ್ ನಲ್ಲಿರುವಾಗ, ಬ್ರಿಕ್ಸ್ ಶೃಂಗಸಭೆಯ ಚಟುವಟಿಕೆಗಳ ಭಾಗವಾಗಿ ನಡೆಯಲಿರುವ ಬ್ರಿಕ್ಸ್-ಆಫ್ರಿಕಾ ಔಟ್ ರೀಚ್ ಮತ್ತು ಬ್ರಿಕ್ಸ್ ಪ್ಲಸ್ ಡೈಲಾಗ್ ಕಾರ್ಯಕ್ರಮಗಳಲ್ಲಿ ಸಹ ಭಾಗವಹಿಸುತ್ತೇನೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಿಸಲಾದ ಹಲವಾರು ಅತಿಥಿ ದೇಶಗಳೊಂದಿಗೆ ಸಂವಹನ ನಡೆಸಲು ನಾನು ಉತ್ಸುಕನಾಗಿದ್ದೇನೆ
ಜೋಹಾನ್ಸ್ ಬರ್ಗ್ ನಲ್ಲಿರುವ ಕೆಲವು ರಾಷ್ಟ್ರ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲು ನಾನು ಸಮಯಾವಕಾಶಗಳನ್ನು ಎದುರು ನೋಡುತ್ತಿದ್ದೇನೆ.
ದಕ್ಷಿಣ ಆಫ್ರಿಕಾದಿಂದ, ಗ್ರೀಸ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಕಿರಿಯಾಕೋಸ್ ಮಿತ್ಸೋಟಾಕಿಸ್ ಅವರ ಆಹ್ವಾನದ ಮೇರೆಗೆ ನಾನು 25 ಆಗಸ್ಟ್ 2023 ರಂದು ಗ್ರೀಸ್ ನ ಅಥೆನ್ಸ್‌ಗೆ ಪ್ರಯಾಣಿಸುತ್ತೇನೆ. ಈ ಪ್ರಾಚೀನ ಭೂಮಿಗೆ, ಇದು ನನ್ನ ಮೊದಲ ಭೇಟಿಯಾಗಿದೆ. 40 ವರ್ಷಗಳ ನಂತರ ಗ್ರೀಸ್ ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ನಾನು ಪಾತ್ರನಾಗಿದ್ದೇನೆ, ಎಂಬ ಖುಷಿ ಕೂಡಾ ಜೊತೆಗಿದೆ.
ನಮ್ಮ ಎರಡು ರಾಷ್ರಗಳ ನಾಗರೀಕತೆಗಳ ನಡುವಿನ ಸಂಪರ್ಕವು ಎರಡು ಸಹಸ್ರಮಾನಗಳ ಹಿಂದಿನದು. ಆಧುನಿಕ ಕಾಲದಲ್ಲಿ, ಪ್ರಜಾಪ್ರಭುತ್ವ, ಕಾನೂನಿನ ನಿಯಮ, ಸಮಾನತೆ, ಮತ್ತು ಬಹುತ್ವದ ಹಂಚಿಕೆಯ ಮೌಲ್ಯಗಳಿಂದ ನಮ್ಮ ಸಂಬಂಧಗಳನ್ನು ಬಲಪಡಿಸಲಾಗಿದೆ. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ, ಮತ್ತು ಸಾಂಸ್ಕೃತಿಕ ಮತ್ತು ಜನರ ಸಂಪರ್ಕಗಳಂತಹ ವೈವಿಧ್ಯಮಯ ವಲಯಗಳಲ್ಲಿನ ಸಹಕಾರವು ನಮ್ಮ ಎರಡು ದೇಶಗಳನ್ನು ಇನ್ನೂ ಹತ್ತಿರ ತರುತ್ತಿವೆ.
ಗ್ರೀಸ್ ಗೆ ನನ್ನ ಈ ಭೇಟಿಯನ್ನು , ನಮ್ಮ ಬಹುಮುಖಿ ಸಂಬಂಧಗಳ ಗಾಢವಾದ ಇತಿಹಾಸದಲ್ಲಿ, ಹೊಸ ಅಧ್ಯಾಯವನ್ನು ತೆರೆಯುವ ನಿಟ್ಟಿನಲ್ಲಿ ಪ್ರಯತ್ನಿಸಿ ಅಪ್ಯಾಯಮಾನವಾಗಿ ದಾಖಲಿಸಲು ನಾನು ಹತ್ತುಹಲವು ಅವಕಾಶಗಳನ್ನು ಎದುರು ನೋಡುತ್ತಿದ್ದೇನೆ.