ರಾಷ್ಟ್ರೀಯ ಹೆದ್ದಾರಿಯ ಫಲಾಕಟಾ-ಸಲ್ಸಾಲ್ ಬರಿ ಸೆಕ್ಷನ್ ಚತುಷ್ಪಥಗೊಳಿಸುವ ಕಾಮಗಾರಿಗೆ ಪ್ರಧಾನಮಂತ್ರಿ ಅವರಿಂದ ಶಿಲಾನ್ಯಾಸ ಮತ್ತು ಜಲಪೈಗುರಿಯಲ್ಲಿ ಕಲ್ಕತ್ತಾ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಉದ್ಘಾಟನೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಲಪೈಗುರಿಗೆ ಭೇಟಿ ನೀಡಿದರು. ಅವರು ರಾಷ್ಟ್ರೀಯ ಹೆದ್ದಾರಿ 31 ಡಿ ಯ ಫಲಾಕಟಾ-ಸಲ್ಸಾಲ್ ಬರಿ ಸೆಕ್ಷನ್ ಚತುಷ್ಪಥಗೊಳಿಸುವ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು ಮತ್ತು ಅಲ್ಲಿ ಹೊಸ ಹೈಕೋರ್ಟ್ ಪೀಠವನ್ನು ಉದ್ಘಾಟಿಸಿದರು.
41.7 ಕಿ.ಮೀ. ಉದ್ದದ ಫಲಾಕಟಾ-ಸಲ್ಸಾಲ್ ಬರಿ ಭಾಗವು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ದಿ ಯೋಜನೆಯ (ಎನ್.ಎಚ್.ಡಿ.ಪಿ.) ಹಂತ 2 ರಡಿಯಲ್ಲಿ ರೂಪಿತವಾದ ಪೂರ್ವ –ಪಶ್ಚಿಮ ಕಾರಿಡಾರಿನ ಭಾಗವಾಗಿದ್ದು, ಇದು ಈಶಾನ್ಯದ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ಯೋಜನೆಯು 2.5 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ವಿನ್ಯಾಸ, ನಿರ್ಮಾಣ, ಹಣಕಾಸು , ಕಾರ್ಯಾಚರಿಸು ಮತ್ತು ವರ್ಗಾಯಿಸು (ಡಿ.ಬಿ.ಎಫ್.ಒ.ಟಿ.) ಆಧಾರದಲ್ಲಿ, ನಿರ್ಮಿಸು-ಕಾರ್ಯಾಚರಿಸು-ವರ್ಗಾಯಿಸು (ಬಿ.ಒ.ಟಿ.) (ಟೋಲ್) ಮಾದರಿಯಲ್ಲಿ ಇದನ್ನು ನಿರ್ಮಿಸಲಾಗುತ್ತದೆ. ಯೋಜನೆಯಿಂದ ಸಲ್ಸಾಲ್ ಬರಿ ಮತ್ತು ಅಲಿಪುರ್ದುರ ನಡುವಿನ ದೂರ ಸುಮಾರು 50 ಕೀ.ಮೀ. ಕುಗ್ಗಲಿದೆ.
ಜಲಪೈಗುರಿಯ ಕಲ್ಕತ್ತಾ ಹೈಕೋರ್ಟಿನ ಸರ್ಕ್ಯೂಟ್ ಪೀಠವು ದಾರ್ಜಿಲಿಂಗ್, ಕಲಿಂಪಾಂಗ್, ಮತ್ತು ಉತ್ತರ ಬಂಗಾಳದ ಕೂಚ್ ಬೆಹಾರದ ಜನತೆಗೆ ತ್ವರಿತ ನ್ಯಾಯದಾನ ಒದಗಿಸಲಿದೆ. ಈ ನಾಲ್ಕು ಜಿಲ್ಲೆಗಳ ನಿವಾಸಿಗಳು ಈಗ ಪೀಠವನ್ನು ತಲುಪಲು ಕ್ರಮಿಸಬೇಕಾದ ದೂರ 100 ಕಿ.ಮೀ.ಗಿಂತಲೂ ಕಡಿಮೆ. ಈ ಮೊದಲು ಕಲ್ಕತ್ತಾ ಹೈಕೋರ್ಟ್ ಗಾದರೆ 600 ಕಿ.ಮೀ. ಪ್ರಯಾಣಿಸಬೇಕಾಗುತ್ತಿತ್ತು.